Homeಮುಖಪುಟಪಂಜಾಬಿನಲ್ಲಿ ಕಾಂಗ್ರೆಸ್‌ನ ಅನಿರೀಕ್ಷಿತ ಆಯ್ಕೆಯ ಹಿಂದಿನ ಕಾರಣಗಳೇನು?

ಪಂಜಾಬಿನಲ್ಲಿ ಕಾಂಗ್ರೆಸ್‌ನ ಅನಿರೀಕ್ಷಿತ ಆಯ್ಕೆಯ ಹಿಂದಿನ ಕಾರಣಗಳೇನು?

- Advertisement -
- Advertisement -

ಕಳೆದ ಶನಿವಾರ ಮತ್ತು ಭಾನುವಾರದೊಳಗೆ, ಸುಮಾರು 24 ಗಂಟೆಯೊಳಗೆ ಪಂಜಾಬಿನ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯಲ್ಲಿ ಒಂದು ಬೃಹತ್ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕಾರಣವಾಗಿದೆ. ಅದು ಕೇವಲ ರಾಜಮನೆತನದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ರಾಜೀನಾಮೆ ನೀಡಲು ಒತ್ತಾಯ ಮಾಡಿದ್ದಷ್ಟೇ ಅಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಅನಿರೀಕ್ಷಿತ ಸಾಮಾನ್ಯ ವ್ಯಕ್ತಿ, ಒಬ್ಬ ದಲಿತ ಸಿಖ್ ಅನ್ನು ತಂದಿದೆ.

ಪಂಜಾಬಿನ ಬಗ್ಗೆ ಒಂದು ಪ್ರಶ್ನೆಯನ್ನು ಪದೇಪದೇ ಕೇಳಲಾಗುತ್ತದೆ; 56% ಸಿಖ್ಖರನ್ನು ಹೊಂದಿದ ರಾಜ್ಯ, ಕಾಂಗ್ರೆಸ್ ಆಳ್ವಿಕೆಯಲ್ಲಿ ಆಪರೇಷನ್ ಬ್ಲೂಸ್ಟಾರ್ ಮತ್ತು ಸಿಖ್ ವಿರೋಧಿ ಮಾರಣಹೋಮವನ್ನು ನೋಡಿದ ನಂತರವೂ ಕಾಂಗ್ರೆಸ್‌ನಲ್ಲಿ ಹೇಗೆ ನಂಬಿಕೆಯನ್ನು ಪುನರ್‌ಸ್ಥಾಪಿಸಿತು? ಮೂರು ಉದಾಹರಣೆಗಳ ಮೂಲಕ ನೋಡುವ. ಮೊದಲನೆಯದು, ಕ್ಯಾಪ್ಟನ್ ಅಮರಿಂದರ್ ಆಪರೇಷನ್ ಬ್ಲೂ ಸ್ಟಾರ್ ನಂತರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಎರಡನೆಯದು, ತನ್ನ ಕಳೆದ ಅವಧಿಯಲ್ಲಿ ಮಾಡಿದ ದೊಡ್ಡ ಸಾಧನೆ ಪಂಜಾಬ್ ಟರ್ಮಿನೇಷನ್ ಆಫ್ ಅಗ್ರಿಮೆಂಟ್ ಆಕ್ಟ್, 2004, ಅದರಿಂದ ಹರಿಯಾಣ ಮತ್ತು ರಾಜಸ್ಥಾನದೊಂದಿಗೆ ನದಿನೀರನ್ನು ಹಂಚಿಕೊಳ್ಳುವುದನ್ನು ರದ್ದುಗೊಳಿಸಲಾಯಿತು. ಕಾಂಗ್ರೆಸ್‌ನ ಹೈಕಮಾಂಡ್ ಮತ್ತು ಆಗಿನ ಪ್ರಧಾನಿಗೆ ಈ ನಡೆ ಸಮ್ಮತಿ ಇರಲಿಲ್ಲ.

ಆದರೆ ಕ್ಯಾಪ್ಟನ್ ಅದನ್ನು ಸಾಧಿಸಿ ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಹುಟ್ಟುಹಾಕಿದ್ದರು. ಮೂರನೆಯದ್ದು, ಈ ಅವಧಿಗೆ ಮುನ್ನ, ಅವರ ಅಧಿಕೃತ ಜೀವನಚರಿತ್ರೆ ಹೇಳುವುದೇನೆಂದರೆ, ಅವರನ್ನು ರಾಜ್ಯದ ಮುಖ್ಯಸ್ಥನನ್ನಾಗಿಸದಿದ್ದರೆ, ಅವರು ಕಾಂಗ್ರೆಸ್‌ಅನ್ನು ತ್ಯಜಿಸಿ ತಮ್ಮದೇ ಪಕ್ಷವನ್ನು ಸ್ಥಾಪಿಸಿ ಚುನಾವಣೆಯನ್ನು ಎದುರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು. ಈ ಉದಾಹರಣೆಗಳು ಹೇಳುವುದೇನೆಂದರೆ, ಪಂಜಾಬ್ ಕಾಂಗ್ರೆಸ್‌ನ ಒಳಗಿದ್ದ ಒಬ್ಬ ರೆಬೆಲ್ ನಾಯಕನನ್ನು ಒಪ್ಪಿಕೊಂಡಿತೇ ಹೊರತು ಕಾಂಗ್ರೆಸ್ಸನ್ನಲ್ಲ ಎಂದು. ಕ್ಯಾಪ್ಟನ್‌ನ ಮುಖ್ಯ ಹೆಗ್ಗಳಿಕೆಯೇನೆಂದರೆ ಅವರು ದೆಹಲಿಯ ಹೈಕಮಾಂಡ್ ವಿರುದ್ಧ ನಿಂತರು, ಹಾಗಾಗಿ ಪಂಜಾಬಿನ ಹಿತಾಸಕ್ತಿಗಳನ್ನು ಕಾಪಾಡುವರು ಎಂಬ ನಂಬಿಕೆ ಬಿತ್ತಿದರು. ಇದು 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅರುಣ್ ಜೇಟ್ಲಿ ಅವರ ವಿರುದ್ಧದ ಭಾರಿ ಅಂತರದ ಗೆಲವಿನಲ್ಲಿ ಕಾಣಿಸಿತು.

PC : Swarajya (ಕ್ಯಾಪ್ಟನ್ ಅಮರಿಂದರ್ ಸಿಂಗ್)

ಕ್ಯಾಪ್ಟನ್‌ನ ನಾಯಕತ್ವದಲ್ಲಿ 2017ರಲ್ಲಿ ಅಧಿಕಾರಕ್ಕಾಗಿ ಬರಲು ಪ್ರಯತ್ನಿಸುತ್ತಿದ್ದಾಗ, ಪಂಜಾಬಿನಲ್ಲಿ ಎರಡು ವಿಷಯಗಳು ಪ್ರಾಮುಖ್ಯತೆ ಪಡೆದಿದ್ದವು: ಮೊದಲನೆಯದು, ಪವಿತ್ರ ಪುಸ್ತಕಗಳನ್ನು ಅಪವಿತ್ರಗೊಳಿಸಿದ್ದು, ಗ್ರಂಥ್ ಸಾಹಿಬ್‌ನ 200ಕ್ಕೂ ಹೆಚ್ಚು ಪ್ರತಿಗಳು, ಗುಟಕಾ ಸಾಹಿಬ್, ಹೋಲಿ ಕುರಾನ್, ರಾಮಾಯಣ, ಗುರುದ್ವಾರಗಳನ್ನು ಅಪವಿತ್ರಗೊಳಿಸಲಾಗಿತ್ತು. ಎರಡನೆಯದು ಡ್ರಗ್ಸ್; ಇಡೀ ಪಂಜಾಬ್ ಮಾದಕವಸ್ತುಗಳ ಕಳ್ಳಸಾಗಾಣಿಕೆಯ ಹಿಡಿತದಲ್ಲಿ ಸಿಲುಕಿಕೊಂಡಿದೆ ಎಂಬ ಪರಿಕಲ್ಪನೆ, ಇದು ರಾಹುಲ್ ಗಾಂಧಿಯ ತಪ್ಪಾದ ಅಂಕಿಅಂಶಗಳು (10ರಲ್ಲಿ 7 ಯುವಜನರು ಮಾದಕವ್ಯಸನಿಗಳಾಗಿದ್ದಾರೆ ಎಂದಿದ್ದರು) ಮತ್ತು ಉಡ್ತಾ ಪಂಜಾಬ್‌ನಂತಹ ಸಿನೆಮಾಗಳ ಮೇಲೆ ಆಧರಿಸಿ ಈ ರೀತಿಯ ಅಭಿಪ್ರಾಯ ಸೃಷ್ಟಿಸಲಾಗಿತ್ತು. ಆಮ್ ಆದ್ಮಿ ಪಾರ್ಟಿಯ ಪ್ರಯತ್ನಗಳನ್ನು ವಿಫಲಗೊಳಿಸಲು, 2015ರ ಡಿಸೆಂಬರ್ 15ರಂದು ಕ್ಯಾಪ್ಟನ್ ಸಿಖ್ಖರ ಪವಿತ್ರ ಗ್ರಂಥ ಗುಟ್ಕಾ ಸಾಹಿಬ್ ಮೇಲೆ ಕೈಇಟ್ಟು ಆಣೆ ಮಾಡಿದರು, ಚುನಾಯಿತರಾದ ನಾಲ್ಕು ವಾರಗಳಲ್ಲಿ ’ಮಾದಕವಸ್ತುಗಳ ಪಿಡುಗಿನ ಬೆನ್ನು ಮುರಿಯಲಾಗುವುದೆಂದು’, ಸಾರ್ವಜನಿಕ ಕಛೇರಿಗಳಲ್ಲಿ ಭ್ರಷ್ಟಾಚಾರ ಕೊನೆಗಾಣಿಸುವುದಾಗಿ ಹಾಗೂ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಪ್ರಮಾಣ ಮಾಡಿದರು.

ಈ ಭರವಸೆಗಳನ್ನು ಈಡೇರಿಸುವುದು ಕಷ್ಟವಾಗಿತ್ತು. ಎಷ್ಟು ಕಷ್ಟ ಎಂದರೆ, ವಾಸ್ತವದಲ್ಲಿ ಅದು ಅಸಾಧ್ಯವಾಗಿತ್ತು. ಆದರೂ ಕ್ಯಾಪ್ಟನ್ ಅದನ್ನು ಹೇಳಿದ್ದರಿಂದ, ಪವಿತ್ರ ಗ್ರಂಥದ ಮೇಲೆ ಆಣೆ ಮಾಡಿದ್ದರಿಂದ, ಜನರು ಅದನ್ನು ನಂಬಿದರು. ಚುನಾವಣಾ ಪ್ರಚಾರದಲ್ಲಿ ಎಲ್ಲರಿಗೂ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿದರು, ಮರಳು, ಲಿಕರ್ ಮತ್ತು ಸಾರಿಗೆ ಮಾಫಿಯಾದ ವಿರುದ್ಧ ಮಾತನಾಡಿದರು ಹಾಗೂ ತನ್ನ ಕೊನೆಯ ಅವಧಿಯ ಹೆಸರಿನಲ್ಲಿ ಮತಯಾಚಿಸಿದರು. ಪಂಜಾಬ್‌ಅನ್ನು ಮತ್ತೆ ಪ್ರಗತಿಯ ಪಥದಲ್ಲಿ ಕೊಂಡೊಯ್ಯುವ ಒಂದು ಭಾರಿ ಪರಂಪರೆಯನ್ನು ಸೃಷ್ಟಿಸಲು ತಮ್ಮನ್ನು ಅಧಿಕಾರಕ್ಕೆ ತರಬೇಕು ಎಂದು ಮತಯಾಚಿಸಿದರು.

ಹಾಗಾಗಿ, ಅಧಿಕಾರಕ್ಕೆ ಬಂದ ಮೇಲೆ ತನ್ನ ಆಶ್ವಾಸನೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಜನರು ಅಪೇಕ್ಷಿಸಿದರು. ಆದರೆ ಅವರು ಅದನ್ನು ಮಾಡಲಿಲ್ಲ. ಸಾಮಾನ್ಯ ಜನರ ವಿಷಯಗಳಲ್ಲಿ ರಾಜರಿಗೆ ಅನಾಸಕ್ತಿ ಇದ್ದರೆ ಹೇಗಿರುತ್ತೋ, ಅದನ್ನು ಕ್ಯಾಪ್ಟನ್ ತಮ್ಮ ಆಳ್ವಿಕೆಯಲ್ಲಿ ತೋರಿಸಿದರು. ಕ್ಯಾಪ್ಟನ್‌ನ ವಿಫಲತೆಗಳ ಮೊದಲ ಸಂಕೇತ ಕಾಣಿಸಿಕೊಂಡಿದ್ದು ಕೃಷಿ ಸಾಲ ಮನ್ನಾದ ವಿಷಯದಲ್ಲಿ. ವಿಶ್ವವಿದ್ಯಾಲಯಗಳು
ಅಂದಾಜಿಸಿದ 73,000 ಕೋಟಿ ರೂಪಾಯಿಗಳ ಸಾಲ ಮನ್ನಾವನ್ನು ಮಾಡದೆ, ಕೋಆಪರೇಟಿವ್ ಸೊಸೈಟಿಗಳಿಂದ ಪಡೆದ ಸಾಲಗಳಿಗೆ ಮಾತ್ರ ಸೀಮಿತಗೊಳಿಸಿ, 2.5 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದದೇ ಇರುವವರಿಗಾಗಿ ಎಂದು ಹಾಗೂ 2 ಲಕ್ಷದವರಗೆ ಸಾಲದ ಮೊತ್ತ ಇರುವವರಿಗೆ ಸೀಮಿತಗೊಳಿಸಲಾಯಿತು.

ಸಾಲ ಮನ್ನಾದ ಮೊತ್ತ ಇಂದಿನ ತನಕ 4,624 ಕೋಟಿ ರೂಪಾಯಿ ಕೂಡ ದಾಟಿಲ್ಲ. ಜುಲೈ 2018ರಲ್ಲಿ ರಾಜ್ಯದ ಜನರು ಡ್ರಗ್ಸ್ ಪಿಡುಗಿನಿಂದ ಬೇಸತ್ತು, ಡ್ರಗ್ಸ್ ವಿರುದ್ಧ ಕಪ್ಪು ದಿನ ಆಚರಿಸಿದರು – ’ಮಡಿ ಅಥವಾ ಪ್ರತಿಭಟಿಸಿ’ ಎಂದು. ಮಾದಕವಸ್ತುಗಳ ಬೆನ್ನು ಮುರಿಯುವ ಭರವಸೆಯು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಒಳಜಗಳಕ್ಕೆ ಕಾರಣವಾಯಿತು, ಅದು ಈ ಕಾನೂನುಬಾಹಿರ ದಂಧೆಯಲ್ಲಿ ಅವರೂ ಶಾಮೀಲಾಗಿದ್ದಾರೆ ಎಂಬುದನ್ನು ತೋರಿಸಿತು. ಆ ಮಾಫಿಯಾಗಳು ಮುಂದುವರೆದವು, ನಿರುದ್ಯೋಗ ಹೆಚ್ಚಿತು, ಸಾರ್ವಜನಿಕ ಕಚೇರಿಗಳಲ್ಲಿ ಭ್ರಷ್ಟಾಚಾರ ಕೊನೆಗೊಳ್ಳಲಿಲ್ಲ, ಮುಖ್ಯಮಂತ್ರಿಯ ಕಚೇರಿಯು ಕ್ಯಾಪ್ಟನ್‌ನ ಮನೆಯಿಂದಲೇ ಕಾರ್ಯನಿರ್ವಹಿಸಿತು, ನಿರುದ್ಯೋಗಿ, ಅರೆ ಉದ್ಯೋಗಿ ಶಿಕ್ಷಕರು ಮತ್ತು ರೈತರು ಬೃಹತ್ ಪ್ರತಿಭಟನೆ ಮಾಡಿದರು. ಆಗಸ್ಟ್ 2019ರಲ್ಲಿ ಕಾಂಗ್ರೆಸ್ ಶಾಸಕರು ಕ್ಯಾಪ್ಟನ್ ಅವರ ಕಾರ್ಯವೈಖರಿ ಮತ್ತು ಪ್ರದರ್ಶನದ ಬಗ್ಗೆ ಪ್ರಶ್ನೆ ಮಾಡಿದರು. ಯಾವುದೇ ಉತ್ತರಗಳು ಬರಲಿಲ್ಲ. ಇಡೀ ರಾಜ್ಯದ ಆಡಳಿತವನ್ನು ಕ್ಯಾಪ್ಟನ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದರು.

ಈ ಸಮಯದಲ್ಲಿಯೇ, ಬಹುಮುಖ್ಯವಾದ ಅಧಿಕಾರ ದುರುಪಯೋಗ ಪ್ರಕರಣಗಳು, ಬೆಹಬಲ್ ಕಲಾನ್ ಮತ್ತು ಕೊಟಕಪುರದಲ್ಲಿ ನಡೆದ ಅಪ್ರಚೋದಿತ ಗುಂಡಿನ ದಾಳಿ, ಇದರ ಸಲುವಾಗಿಯೇ ಕ್ಯಾಪ್ಟನ್ ವಿಶೇಷ ಅಸೆಂಬ್ಲಿ ಸೆಷನ್‌ಅನ್ನೂ ಕರೆದಿದ್ದರು ಹಾಗೂ ಈ ಪ್ರಕರಣಗಳಲ್ಲಿ ಸಿಬಿಐ ತನಿಖೆಯ ಅನುಮತಿಯನ್ನು ಹಿಂಪಡೆದಿದ್ದರು; ಏನೂ ಆಗಲಿಲ್ಲ. ಇದೇ ಏಪ್ರಿಲ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೊಟಕಪುರ ಗುಂಡಿನ ದಾಳಿಯ ತನಿಖೆಯನ್ನು ರದ್ದುಗೊಳಿಸಿದವು. ದುರುಪಯೋಗ ಪ್ರಕರಣಗಳು ಮತ್ತು ಗುಂಡು ಹಾರಿಸಿದ್ದರ ಅನೌಪಚಾರಿಕ ಕಥನವು ಬಾದಲ್‌ಗಳ ಕಡೆಗೆ ಬೊಟ್ಟು ಮಾಡುತ್ತದೆ. ಆದರೆ ಅವರು ಮತ್ತೊಮ್ಮೆ ಅದರಿಂದ ತಪ್ಪಿಸಿಕೊಂಡಿದ್ದರು. ಇದು 2017ರಲ್ಲಿ ಕ್ಯಾಪ್ಟನ್ ಹೆಚ್ಚುವರಿ ಕ್ಷೇತ್ರ ಲಂಬಿಯಿಂದ ಸ್ಪರ್ಧಿಸಿದ್ದು ಇದಕ್ಕೆ ಹೋಲುತ್ತದೆ, ಆಗ ಮಾಜಿ ಮುಖ್ಯಮಂತ್ರಿ ಮತ್ತು ಅಕಾಲಿ ನಾಯಕ ಪ್ರಕಾಶ್ ಸಿಂಗ್ ಬಾದಲ್ ಗೆಲ್ಲಲು ಅನುಕೂಲ ಮಾಡಿಕೊಟ್ಟಿದ್ದರು. ಈ ವಿಷಯವನ್ನು ಬಗೆಹರಿಸಲು ಕಾಂಗ್ರೆಸ್ ಅಂದು ತನಿಖಾ ಪ್ಯಾನೆಲ್ ಅನ್ನು ಸೃಷ್ಟಿಸಲು ಇದು ಕಾರಣವಾಯಿತು. ಅಂತಿಮವಾಗಿ ಕ್ಯಾಪ್ಟನ್‌ನ ತಪ್ಪು ಏನಾಗಿತ್ತೆಂದರೆ: ತನ್ನ ಉತ್ತರಾಧಿಕಾರಿಯನ್ನು ಸಿದ್ಧಮಾಡುವ ಬದಲಿಗೆ, ಕ್ಯಾಪ್ಟನ್ ಜನರಿಗೆ ತಾವು ನೀಡಿದ್ದ ಭರವಸೆಗಳಿಗೆ ದ್ರೋಹ ಎಸಗಿದರು ಹಾಗೂ ಮುಖ್ಯಮಂತ್ರಿಯಾಗಿ ಇನ್ನೊಂದು ಅವಧಿಗೆ ಆಳಲು ಕಣವನ್ನು ಪ್ರವೇಶಿಸಿದರು.

PC : Varthabharathi (ನವಜೋತ್ ಸಿಧು)

ಜುಲೈ ತಿಂಗಳಲ್ಲಿ ನವಜೋತ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್‌ನ ಮುಖ್ಯಸ್ಥನಾದಾಗ, ಕ್ಯಾಪ್ಟನ್‌ನೊಂದಿಗೆ ನೇರಾನೇರ ಕಾಳಗಕ್ಕಿಳಿದರು. ಕಳೆದ ಕೆಲವು ದಿನಗಳ ಬೆಳವಣಿಗೆಗಳು ತೋರಿಸುವುದೇನೆಂದರೆ, ಕಾಂಗ್ರೆಸ್ ಪಕ್ಷದ ನಾಯಕರು ಸಾಮಾನ್ಯವಾಗಿ ಪಡೆಯುವುದಕ್ಕೆ ಮುನ್ನವೇ ಕ್ಯಾಪ್ಟನ್‌ಗೆ ತನ್ನ ಪಾಪಫಲ ಪಡೆದಿದ್ದರು; ಮಿಕ್ಕವರಿಗೆ ಚುನಾವಣೆಯಲ್ಲಿ ಸಿಗುತ್ತೆ, ಅದಕ್ಕಿನ್ನೂ ಐದು ತಿಂಗಳಿವೆ. ಕ್ಯಾಪ್ಟನ್‌ನ ರಾಜಿನಾಮೆಯಿಂದ ಹೊರಹೊಮ್ಮಿದ ಆಕ್ರೋಶವು ಎರಡು ಆಯಾಮಗಳನ್ನು ಸೂಚಿಸುತ್ತದೆ; ಒಂದು, ತಾನು ಭಾರಿ ಬಹುಮತದಿಂದ ಗೆದ್ದ ರಾಜ್ಯದ ಆಡಳಿತವನ್ನು ಕಾಂಗ್ರೆಸ್ ಹೇಗೆ ಹದಗೆಡಿಸಬಹುದು ಎಂಬುದರ ಬಗ್ಗೆ ಬಿಜೆಪಿಯನ್ನು ವಿರೋಧಿಸುವ ಜನರು ಆಶ್ಚರ್ಯಗೊಂಡಿದ್ದಾರೆ; ಎರಡು, ಪಂಜಾಬಿನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾಧ್ಯಮದ ಹೆಚ್ಚಿನವರಿಗೆ ಏನೂ ಗೊತ್ತೇ ಇಲ್ಲ ಎಂಬುದು. ಹಲವಾರು ವರ್ಷಗಳಿಂದ ಕ್ಯಾಪ್ಟನ್ ತಾನೊಬ್ಬ ರಾಷ್ಟ್ರೀಯವಾದಿ ಎಂಬುದನ್ನು ಗಟ್ಟಿಯಾಗಿ ತೋರಿಸುತ್ತ ಬಂದಿದ್ದಾರೆ – ಪಾಕಿಸ್ತಾನದ ವಿರುದ್ಧ ಮಾತನಾಡುವುದು, ಕರ್ತಾರಪುರ್ ಕಾರಿಡಾರ್ ಮೇಲೆ ಹೆಮ್ಮೆ ಕೊಚ್ಚಿಕೊಳ್ಳುವುದು, ಒಬ್ಬ ನಾಗರಿಕನನ್ನು ತನ್ನ ಜೀಪ್ ಎದುರಿಗೆ ಕಟ್ಟಿ ಎಳೆದಿದ್ದ ಆರ್ಮಿ ಮೇಜರ್‌ಗೆ ಬೆಂಬಲ ಸೂಚಿಸುವುದು, ಇತ್ಯಾದಿ. ಒಂದು ಗಡಿರಾಜ್ಯದ ಮುಖ್ಯಮಂತ್ರಿಯಾಗಿ ಈ ನಿಲುವುಗಳು ತನ್ನನ್ನು ಆರಿಸಿದ ಪಂಜಾಬ್‌ನ ಹಿತಾಸಕ್ತಿಗಳಿಗೆ ಅನುಗುಣವಾಗಿವೆಯೆ ಎಂದು ಯಾರೂ ಪ್ರಶ್ನಿಸಲಿಲ್ಲ. ಅಥವಾ ತನ್ನ ಕಡು ವಿರೋಧಿ ಬಿಜೆಪಿಯ ಅಜೆಂಡಾವನ್ನೇ ಮುಂದುವರೆಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಯಾರೂ ಕೇಳಲಿಲ್ಲ.

ಮುಖ್ಯಮಂತ್ರಿಯ ಬದಲಾವಣೆಯ ಮುಖಾಂತರ, ಅಕಾಲಿಗಳು ಮತ್ತು ಆಮ್ ಆದ್ಮಿ ಪಾರ್ಟಿ ಇನ್ನೂ ಅಸ್ತವ್ಯಸ್ತವಾಗಿರುವ, ಪಂಜಾಬಿನ ಅಸಮಾನ ಚುನಾವಣಾ ಅಖಾಡ ಗಮನದಲ್ಲಿಟ್ಟುಕೊಂಡು ನೋಡಿದರೆ, ಫೆಬ್ರುವರಿ 2022 ಚುನಾವಣೆಗಳಲ್ಲಿ ಸೋಲನ್ನು ತಪ್ಪಿಸುವುದಕ್ಕೆ ಕಾಂಗ್ರೆಸ್ ಹೀಗೆ ನಡೆದುಕೊಂಡಿದೆ. ಈ ಬದಲಾವಣೆ ಸಣ್ಣ ಬದಲಾವಣೆಯಲ್ಲ; ಹಲವಾರು ದಶಕಗಳಲ್ಲೇ ಮೊದಲ ಬಾರಿಗೆ ಪಂಜಾಬಿನಲ್ಲಿ ಆಳುವ ಕುಟುಂಬಗಳ ಹೊರಗಿನ ಒಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣಾ ರಾಜಕೀಯದ ಸಿಂಬಾಲಿಕ್ ಚಹರೆಗಳ ಮೌಲ್ಯವನ್ನು ನೋಡಿದರೆ, ಇದೊಂದು ಒಳ್ಳೆಯ ನಡೆ ಎನಿಸುತ್ತದೆ. ದಲಿತರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯದಲ್ಲಿ, (ಪಂಜಾಬಿನಲ್ಲಿ 31.9% ದಲಿತರಿದ್ದಾರೆ), ನಿರ್ಲಕ್ಷ್ಯಕ್ಕೊಳಗಾದ ಪುವಾಡ್ ಪ್ರದೇಶದಿಂದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿರುವುದು, ಅಕಾಲಿ- ಬಹುಜನ ಮೈತ್ರಿಯ, ಬಿಜೆಪಿ ದಲಿತರ ಓಲೈಕೆಯ, ಒಬ್ಬ ಉಪಮುಖ್ಯಮಂತ್ರಿ ಅಭ್ಯರ್ಥಿಯ ಆಮ್ ಆದ್ಮಿ ಪಾರ್ಟಿಯ ಮುನ್ನಂದಾಜು, ಇವೆಲ್ಲವುಗಳನ್ನು ಈ ನಡೆ ಮೀರಿಸಿದೆ ಹಾಗೂ ತನ್ನ ಹಳೆಯ ಮತದ ಬೇಸ್‌ಅನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಒಬ್ಬ ಹಿರಿಯ ಪತ್ರಕರ್ತ ಹೇಳಿದಂತೆ, ದಲಿತರು ಏಕರೂಪವಾಗಿ, ಒಂದು ವೋಟ್‌ಬ್ಯಾಂಕ್ ಆಗಿ ಮತ ಚಲಾಯಿಸುವುದಿಲ್ಲ. ಹಾಗಾಗಿ, ’ಒಂದು ಪಿಸುಗುಟ್ಟುವ ಪ್ರಚಾರ ಶಕ್ತಿಯನ್ನು ಅಳೆಯುವುದಕ್ಕೆ ಇನ್ನು ಸಮಯ ಬಾಕಿ ಇದೆ. ಏನಾಗುತ್ತೆ ಎಂದು ಯಾರಿಗೆ ಗೊತ್ತು?’

ಚನ್ನಿ ಅವರದ್ದು ಒಂದು ಕುತೂಹಲಕಾರಿಯಾದ ಆಯ್ಕೆಯಾಗಿದ್ದರೂ, ಕಾಂಗ್ರೆಸ್ ಕೆಲಸಮಯದವರೆಗೆ ಹೇಗೆ ಅಂಬಿಕಾ ಸೋನಿ ಅವರನ್ನು ಪರಿಗಣಿಸಿತ್ತು ಎಂಬುದನ್ನು ನೋಡಿದರೆ, ಪಂಜಾಬಿನ ತಳಮಟ್ಟದ ವಾಸ್ತವ ಇನ್ನೂ ಅವರಿಗೆ ಗೊತ್ತಿಲ್ಲ ಎಂಬುದು ತಿಳಿಯುತ್ತದೆ. ಈ ಸಮಯದಲ್ಲಿ, ಚನ್ನಿಯವರಿಗಿರುವ ಅಲ್ಪ ಸಮಯವನ್ನು ಪರಿಗಣಿಸಿದರೆ, ಕ್ಯಾಪ್ಟನ್‌ನ ತೋರಿಕೆಯಂತಲ್ಲದೇ, ಅವರು ವಿನಯದಿಂದ ಇದ್ದುಕೊಂಡು, ಹಾಗೂ ತಳಮಟ್ಟದಲ್ಲಿದ್ದುಕೊಂಡು ಎಷ್ಟಾಗುತ್ತೋ ಅಷ್ಟು ಕೆಲಸ ಮಾಡಿದರೆ ಒಳ್ಳೆಯದು. ಕಾಂಗ್ರೆಸ್ ಒಂದನ್ನು ನೆನಪಿಡಬೇಕು: ಒಂದು ವೇಳೆ ಚುನಾವಣೆಯಲ್ಲಿ ಗೆಲವು ಸಾಧಿಸಿದರೆ, ಚನ್ನಿಯನ್ನೇ ಮುಂದಿನ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಪಂಜಾಬ್‌ಅನ್ನು, ಪುವಾಡ್‌ಅನ್ನು ಮತ್ತು ದಲಿತರನ್ನು ಅನೇಕ ವರ್ಷಗಳಿಂದ ನಿರ್ಲಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ತನ್ನ ಉದ್ದೇಶಗಳು ಪ್ರಾಮಾಣಿಕವಾಗಿವೆ ಮತ್ತು ಗೌರವಾರ್ಹವಾಗಿವೆ ಎಂಬುದನ್ನು ಕಾಂಗ್ರೆಸ್ ಪ್ರದರ್ಶಿಸಬೇಕಿದೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅಮನ್‌ದೀಪ್ ಸಂಧು

ಅಮನ್‌ದೀಪ್ ಸಂಧು
ಅಮನ್‌ದೀಪ್ ಲೇಖಕರು. ’ಪಂಜಾಬ್- ಜರ್ನಿ ಥ್ರೂ ಫಾಲ್ಟ್ ಲೈನ್ಸ್’ ಎಂಬ ಪುಸ್ತಕವನ್ನು ರಚಿಸಿದ್ದಾರೆ.


ಇದನ್ನೂ ಓದಿ: ಪಂಜಾಬ್‌‌ನಲ್ಲಿ ದಲಿತ ಮುಖ್ಯಮಂತ್ರಿ: ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...