Homeಕಥೆಭಾನುವಾರದ ಓದು; ಅಮರೇಂದ್ರ ಹೊಲ್ಲಂಬಳ್ಳಿ ಅವರ ಕಥೆ 'ಖಾಲಿ ಹಾಳೆ'

ಭಾನುವಾರದ ಓದು; ಅಮರೇಂದ್ರ ಹೊಲ್ಲಂಬಳ್ಳಿ ಅವರ ಕಥೆ ‘ಖಾಲಿ ಹಾಳೆ’

- Advertisement -
- Advertisement -

ಇತ್ತೀಚೆಗೆ ಏನು ಬರವಣಿಗೆ ಎಂದು ಕೇಳಿದವರಿಗೆ ಅವನು ತಕ್ಷಣಕ್ಕೆ ಯಾವುದೋ ಒಂದನ್ನು ಊಹಿಸಿಕೊಂಡು ಹೇಳಿಬಿಡುತ್ತಿದ್ದ. ಅವರು ಏನೋ ಅರ್ಥವಾದಂತೆ ತಲೆದೂಗಿ ಅವನ ಬೆನ್ನು ತಟ್ಟಿಯೋ ಕೈ ಕುಲುಕಿಯೋ ಹೊರಡುತ್ತಿದ್ದರು. ಅವನೊಂದಿಗೆ ಮಾತನ್ನು ಆರಂಭಿಸುವ ಕಾರಣಕ್ಕಾಗಿ ಮಾತ್ರ ಇಂತಹ ಪ್ರಶ್ನೆ ಕೇಳುತ್ತಿದ್ದ ಕುತೂಹಲಿಗಳಿಂದ ಅವನಿಗೇನೂ ಸಮಸ್ಯೆಯಿರಲಿಲ್ಲ. ಏಕೆಂದರೆ ಅವರು ಇನ್ನೊಮ್ಮೆ ಸಿಕ್ಕಿದಾಗ ಅದೇ ಪ್ರಶ್ನೆಯನ್ನು ಕೇಳಿದರೆ ಹಿಂದಿನ ಸಲ ಹೇಳಿದ್ದನ್ನೇ ಹೇಳಿದರೆ ಸಾಕಾಗುತ್ತಿತ್ತು. ಅಥವಾ ತಾನು ಹೇಳಿದ ಹಳೆಯದು ನೆನಪಾಗದಿದ್ದರೆ ಒಂದಿಷ್ಟು ಕಲಸುಮೇಲೋಗರ ಮಾಡಿ ಹೇಳಿದರೂ ಅಥವಾ ಹೊಸದನ್ನೇ ಹೇಳಿದರೂ ಆಗಲೂ ಎಂದಿನಂತೆ ಬೆನ್ನು ತಟ್ಟಿಯೋ ಕೈ ಕುಲುಕಿಯೋ ಮುಗುಳ್ನಗುತ್ತ ಮುಂದಕ್ಕೆ ಹೋಗುವ ನಿರುಪದ್ರವಿಗಳು ಅವರು.

ಆದರೆ ಎಲ್ಲರೂ ಹಾಗಲ್ಲವಲ್ಲ. ಕೆಲವರು ಗೂಢಚಾರಿಕೆ ಧ್ವನಿಯಲ್ಲೋ ಕುಹಕದ ಧ್ವನಿಯಲ್ಲೋ ಪ್ರಶ್ನೆ ಕೇಳುತ್ತಿದ್ದುದುಂಟು. ಇತ್ತೀಚಿಗೆ ಬರೆಯುವವರ ಬಗ್ಗೆ ತಿರಸ್ಕಾರ ಮತ್ತು ಅಸಹನೆಗಳು ಸಾಮಾಜಿಕ ವಾತಾವರಣದಲ್ಲಿ ಹೆಚ್ಚಾಗಿರುವುದರಿಂದ ಅವನೂ ಜಾಗರೂಕವಾಗಿ ಇರಲೆತ್ನಿಸುತ್ತಿದ್ದ. ಹಾಗೆ ಕ್ಯಾತೆ ತೆಗೆಯುವವರೊಂದಿಗೆ ಹೆಚ್ಚು ಮಾತು ಬೆಳೆಸಲು ಹೋಗದೆ ಯಾವುದೋ ಒಂದು ಸುರಕ್ಷಿತವಾದ ಮಾತನ್ನು ಹೇಳಿ ಅಲ್ಲಿಂದ ಜಾರಿಕೊಳ್ಳುತ್ತಿದ್ದ.

ಇನ್ನೂ ಕೆಲವರು ತಮ್ಮ ಉನ್ನತ ಅಭಿರುಚಿ ಮತ್ತು ಓದಿನ ವಿಸ್ತಾರದಿಂದ ಅವನಲ್ಲಿ ವಿಚಿತ್ರ ಭಯ ಮೂಡಿಸುತ್ತಿದ್ದರು. ಹಾಗಾಗಿ ಅವರನ್ನು ದೂರದಲ್ಲಿ ಕಂಡಾಗಲೇ ಬೇರೊಂದು ದಾರಿ ಹಿಡಿಯಲು ಯೋಚಿಸುತ್ತಿದ್ದ. ಹಲವು ಸಲ ಅದರಲ್ಲಿ ಸಫಲನೂ ಆಗುತ್ತಿದ್ದ. ಆದರೆ ದುರಾದೃಷ್ಟ ಬೆನ್ನತ್ತಿದ ಕಾಲಗಳಲ್ಲಿ ಅವರ ಕೈಗೆ ಸಿಕ್ಕಿ ಬೀಳುತ್ತಿದ್ದ. ಅವರೊಂದಿಗೆ ಮಾತನಾಡುತ್ತ ಅವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತ ತುಂಬ ದಣಿದುಬಿಡುತ್ತಿದ್ದ. ಅವರೇನೂ ಆತಂಕಕಾರಿಗಳಾಗಿರುತ್ತಿರಲಿಲ್ಲ. ಅವರೊಂದಿಗೆ ಮಾತನಾಡಿದ ನಂತರ ತಾನು ಒಳ್ಳೊಳ್ಳೆಯ ಪುಸ್ತಕಗಳನ್ನೂ ಓದಬೇಕೆಂದೂ, ತನ್ನ ಪ್ರಪಂಚಜ್ಞಾನವನ್ನು ಇನ್ನೂ ಉತ್ತಮಪಡಿಸಿಕೊಳ್ಳಬೇಕೆಂದೂ, ಯುಕ್ತಾಯುಕ್ತ ವಿವೇಚನೆಯು ತೆರೆದ ಮನಸ್ಸಿದ್ದಾಗ ಮಾತ್ರ ಬರುತ್ತದೆಂದೂ, ತನ್ನ ಭಾಷೆಯು ಇನ್ನೂ ಹದಗೊಂಡು ಮನಸ್ಸುಗಳನ್ನು ನೇವರಿಸಿ ಬರಬೇಕೆಂದೂ ಅರ್ಥ ಮಾಡಿಕೊಂಡು ವಿನಮ್ರನಾಗುತ್ತಿದ್ದ. ಅವರು ಕೆಲವು ಸಲ ಅವನ ಈ ಮುಂಚಿನ ಬರವಣಿಗೆಯ ಕುರಿತು ಮಾತನಾಡಿ ಮೆಚ್ಚುಗೆ ತೋರಿದ್ದು ಕೂಡ ಅವನಿಗೆ ನೆನಪಿದೆ.

ಆದರೆ ಮೊದಲೇ ಹೇಳಿದಂತೆ ಪರಿಸ್ಥಿತಿ ಮುಂಚಿನಂತೆ ಇರಲಿಲ್ಲ. ಏನು ಬರೆಯಲು ಹೊರಟರೂ ಯಾರು ಮೇಲೆ ಬೀಳುತ್ತಾರೋ ಎನ್ನುವ ಭಯ. ಯಾವುದರ ಕುರಿತು ಬರೆದರೆ ಯಾರಿಗೆ ಪ್ರಿಯವಾಗುತ್ತದೆ ಯಾರಿಗೆ ಅಪ್ರಿಯವಾಗುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ವಾಟ್ಸಾಪ್ ಮತ್ತು ಫೇಸ್‌ಬುಕ್ ಕಾಲದಲ್ಲಿ ಎಲ್ಲರೂ ಬರೆಯುವವರೇ ಆಗಿರುವುದರಿಂದ ಯಾರಿಗಾಗಿ ಬರೆಯಬೇಕು ಎನ್ನುವುದೇ ಸಮಸ್ಯೆ. ತಮಗಿಂತ ಮುಂಚಿನವರನ್ನು ಓದದೆ, ಕನಿಷ್ಟ ತಮ್ಮ ಕಾಲದವರನ್ನೂ ಓದದೆ ಚಿಟಿಕೆ ಹೊಡೆದಷ್ಟು ಸಲೀಸಾಗಿ ಎಲ್ಲ ಬರಹಗಾರರನ್ನೂ ತೂಕ ಮಾಡಿ ಬಿಸಾಡಿಬಿಡುವ ಈ ಕಾಲದ ಕೆಲವರ ಆತ್ಮವಿಶ್ವಾಸ ಕಂಡರೆ ದಿಗ್ಭ್ರಮೆಯಾಗುತ್ತದೆ. ಮೊದಲೆಲ್ಲ ಒಂದು ದೇಶದ ಬರಹಗಾರನಿಗೆ ಅಲ್ಲಿ ಬರವಣಿಗೆ ಕಷ್ಟವೆನಿಸಿದರೆ ಬೇರೆ ದೇಶಕ್ಕೆ ಪಲಾಯನ ಮಾಡಿ ಅಲ್ಲಿಂದ ತನ್ನ ದೇಶದ ಕಷ್ಟಗಳ ಬಗ್ಗೆ ಬರೆದ ಉದಾಹರಣೆಗಳನ್ನು ಅವನು ಕೇಳಿದ್ದ. ಆದರೆ ಈಗ ಯಾವ ದೇಶಕ್ಕೆ ಹೋದರೂ ನಮಗೆ ಕಷ್ಟ ತಪ್ಪಿದ್ದಲ್ಲ. ಎಲ್ಲ ದೇಶಗಳೂ ಇಂತಹುದೇ ಬಿಕ್ಕಟ್ಟಿನಲ್ಲಿವೆ ಎಂದು ಯಾವುದೋ ಕಥೆ ಬರೆದು ಅಪಾರ ಪಡಿಪಾಟಲು ಪಟ್ಟಿದ್ದ ಇನ್ನೊಬ್ಬ ಕಥೆಗಾರ ಹೇಳಿದ್ದ. ಆ ಕತೆಗಾರನ ಕಥೆಯನ್ನು ಸೋಷಿಯಲ್ ಮೀಡಿಯಾಗಳ ಅರಚುವ ಜನ ತಿರುಚಿ ಪ್ರಚಾರ ಮಾಡಿದ್ದರಿಂದ, ಟೀವಿಯವರೂ ಇನ್ನಷ್ಟು ವಿಕಾರವಾಗಿ ಹೇಳಿದ್ದರಿಂದ, ಪತ್ರಿಕೆಗಳೂ ಕಳ್ಳಾಟ ಆಡಿದ್ದರಿಂದ ವೈಚಾರಿಕವಾಗಿ ಗಂಭೀರ ಚರ್ಚೆಯಾಗಬೇಕಾಗಿದ್ದ ಕತೆಯೊಳಗಿನ ಸಂಗತಿಯೊಂದು ರಾಡಿಯಲ್ಲಿ ಹೂತುಹೋಗಿತ್ತು.

ಇಂತಹ ವಾತಾವರಣದಲ್ಲಿ ’ಈಗೇನು ಬರವಣಿಗೆ’ ಎಂದು ಅವನನ್ನು ಯಾರಾದರೂ ಕೇಳಿದರೆ ಕಸಿವಿಸಿಗೊಳ್ಳುತ್ತಿದ್ದ. ಸಂಕಟಗಳಿಗೆ ಧ್ವನಿಯಾಗುವ ಬರಹಗಾರನಿಗೆ ಯಾಕಿಂಥ ದುಸ್ಥಿತಿ ಎಂದು ಸಂಕಟವಾಗಿ ಊಟ ಮಾಡಲಾಗದೆ ನಿದ್ದೆಯನ್ನೂ ಮಾಡಲಾಗದೆ ವಿಹ್ವಲಗೊಳ್ಳುತ್ತಿದ್ದ. ವಿಪರೀತವಾಗಿ ನ್ಯೂಸ್ ಚಾನೆಲ್ಲುಗಳನ್ನು ನೋಡುತ್ತಿದ್ದ ಹಾಗೂ ಪತ್ರಿಕೆಗಳನ್ನು ಓದುತ್ತಿದ್ದ. ಅದರಿಂದ ತಲೆಯಲ್ಲಿ ಮತ್ತಷ್ಟು ರೇಜಿಗೆಯೆದ್ದು ಮನಸ್ಸಿನ ತಂತುಗಳೆಲ್ಲ ಕಳಚಿ ಬಿದ್ದಿವೆ ಅನ್ನಿಸುತ್ತಿತ್ತು. ಸೋಷಿಯಲ್ ಮೀಡಿಯಾಗಳು, ನ್ಯೂಸ್ ಚಾನೆಲ್ಲುಗಳು ಮತ್ತು ಅದೇ ಶೈಲಿಯ ಸುದ್ದಿಗಳನ್ನು ಕೊಡುತ್ತಿದ್ದ ಪತ್ರಿಕೆಗಳನ್ನು ಮುಟ್ಟಲೇಬಾರದೆಂದು ಶಪಥ ಮಾಡುತ್ತಿದ್ದ.

ಅದಾದ ಎಷ್ಟೋ ದಿನಗಳ ನಂತರ ಆ ಒಳ್ಳೆಯ ಓದುಗ ಜನರನ್ನು ನೆನಪಿಸಿಕೊಳ್ಳುತ್ತಿದ್ದ. ತಾನು ದೀರ್ಘಕತೆಯೊಂದನ್ನು ಬರೆಯುತ್ತಿದ್ದೇನೆಂದೂ ಅದು ನಾಲ್ಕು ಶತಮಾನಗಳ ಹಿಂದಿನ ರಾಜ ಮನೆತನದಲ್ಲಿ ಘಟಿಸಿದ ಒಂದು ಘಟನೆಯನ್ನು ಆಧರಿಸಿದ್ದೆಂದೂ, ಆ ಘಟನೆ ಅಲ್ಲಿಗೆ ನಿಂತುಹೋಗದೆ ವರ್ತಮಾನದವರೆಗೆ ಅದರ ಬೇರು ಹಬ್ಬಿ ಎರಡು ಹಳ್ಳಿಗಳ ಉಗಮದ ಚರಿತ್ರೆಯೊಂದಿಗೆ ಅದು ತಳುಕು ಹಾಕಿಕೊಂಡಿರುವ ಸಂಗತಿಯೆಂದೂ ಅದೇನೂ ಅಂತಿಂತಹ ಸಂಗತಿಯಾಗಿರದೆ ಹೆಚ್ಚೆಚ್ಚು ಓದಿಕೊಂಡಿರುವವರು, ಏನೇನೂ ಓದಿಕೊಳ್ಳದವರು, ಓದಿಕೊಂಡಿದ್ದರೂ ನಿಜಲೋಕಕ್ಕೆ ತೆರೆದುಕೊಳ್ಳದವರು, ಓದಿಕೊಳ್ಳದೆಯೂ ಕಾಲಾನುಕಾಲಗಳ ಅರಿವನ್ನು ಹೊಕ್ಕು ನೋಡಬಲ್ಲವರು, ಓದಿಯೂ ಓದದೆಯೂ ಲೌಕಿಕದ ಜಾಣ್ಮೆಯುಳ್ಳವರು, ಎಳೆಯರು, ಹಿರಿಯರು, ಹೆಂಗಸರು, ಗಂಡಸರು, ಶರೀರದಲ್ಲಿ ಮತ್ತು ಮನಸ್ಸಿನಲ್ಲಿ ಸಮಸ್ಯೆಯುಳ್ಳವರು ಎಲ್ಲರೂ ಅಬ್ಬಬ್ಬ ಇದೆಂಥ ಬೆರಗು ಎಂದು ಬಿಟ್ಟ ಕಣ್ಣು ಬಿಟ್ಟಂತೆ ಬಿಟ್ಟ ಬಾಯಿ ಬಿಟ್ಟಂತೆ ಇದ್ದಲ್ಲಿ ಇದ್ದಂತೆಯೇ ಇದ್ದು ತನ್ನ ಮುಂದುಮುಂದಿನ ಕತೆಗಾಗಿ ಹಾತೊರೆದು ಕಾಯುತ್ತಾರೆಂದೂ ಹೇಳುತ್ತಿದ್ದ.

ತಾನು ಬರೆಯಲು ಹೊರಟಿರುವ ಕತೆಯಲ್ಲಿನ ಶತಶೃಂಗ ಪರ್ವತಗಳ ಕಗ್ಗಂಟಾದ ಹೆಣಿಗೆಯನ್ನೂ ಅದರ ನಡುವೆ ಹೇಗೆ ಹೇಗೋ ಮೈದಳೆದಿರುವ ಗುಟ್ಟಿನ ದಾರಿಗಳನ್ನೂ ಕುರಿತು ಹೇಳಲೆತ್ನಿಸಿದ. ತಾನು ಹೇಳಿದ್ದು ಒಗಟಿನಂತಾದಾಗ ತಕ್ಷಣಕ್ಕೆ ಪಾರಾಗಲು ಅದು ಚೈನಾದ ಐತಿಹಾಸಿಕ ಗೋಡೆಯಂತಿದೆಯೆಂದು ಹೇಳಿದ. ಅದನ್ನು ಈಗಲೂ ನೋಡಬಹುದೇ ಎನ್ನುವ ಪ್ರಶ್ನೆಗೆ ಅಲ್ಲಾವುದ್ದೀನ್ ಖಿಲ್ಜಿಯ ಸೇನಾಧಿಪತಿಯಾಗಿದ್ದ ಮಲ್ಲಿಕಾಫರನು ಗಂಗರ ರಾಜಧಾನಿಯಾಗಿದ್ದ ಇದನ್ನು ಆಕ್ರಮಿಸಿ ದೋಚಿಕೊಂಡು ಹಿಂದಿರುಗುವಾಗ ರಾಜಧಾನಿಯನ್ನೂ ಅಲ್ಲಿಗೆ ತಲುಪಲು ಸಹಾಯವಾಗಿದ್ದ ಶತಶೃಂಗ ಪರ್ವತ ಸಾಲಿನ ಗುಟ್ಟಿನ ದಾರಿಗಳನ್ನೂ ನಾಶಮಾಡಿ ಅದರ ಗುರುತೇ ಉಳಿಯದಂತೆ ಮಾಡಿ ಹೋದನೆಂದು ಹೇಳುತ್ತಿದ್ದ.

ಯಾರಾದರೂ ಚರಿತ್ರೆಯ ಪುಸ್ತಕವನ್ನು ಓದಿಕೊಂಡವರು ಮಲ್ಲಿಕಾಫರನು ಇದ್ದಿದ್ದು ಏಳುನೂರು ವರ್ಷಗಳ ಹಿಂದೆ ಅಲ್ಲವೇ ಎಂದರೆ ’ವರ್ಷಗಳು ಹಿಂದೆ ಮುಂದೆ ಆದರೆ ಏನಂತೆ. ಚರಿತ್ರೇನ ಹೀಗೇನೇ ಹೇಳ್ಬೇಕೂಂತ ನಿಯಮ ಏನೂ ಇಲ್ವಲ್ಲ ಈಗ. ಆಯ್ತು ಇರ್ಲಿ ಬಿಡಿ. ನಾವೇನು ಮಾಡಿದ್ರೂ ಚರಿತ್ರೆ ಬದಲಾಗಲ್ಲ’ ಎನ್ನುತ್ತಿದ್ದ. ಅವನು ಹೇಳಿದ್ದು ಏನೆಂದು ಅರ್ಥವಾಗದೆ ಅವನೊಂದಿಗೆ ಮಾತನ್ನು ಮುಂದುವರಿಸಲೂ ಮನಸ್ಸಾಗದೆ ಜನ ಸುಮ್ಮನಾಗುತ್ತಿದ್ದರು.

ಮತ್ತೆ ಇನ್ನಾರಾದರೂ ಆ ಗುಟ್ಟಿನ ದಾರಿಯ ಗುರುತೇ ಇಲ್ಲದಂತಾಯಿತು ಎಂದೆಯಲ್ಲ, ಹಾಗಿದ್ದರೆ ಈಗ ನಿನ್ನ ಕತೆಯೊಳಗೆ ಅದು ಹೇಗೆ ಬಂತು ಎಂದರೆ, ನಾನು ಹೇಳುವ ಕತೆಗಿಂತ ಮುಂಚೆಯೇ ಗುಟ್ಟಿನ ದಾರಿಯನ್ನು ಮಲ್ಲಿಕಾಫರನು ನಾಶ ಮಾಡಿದ್ದು ಹೌದೆಂದೂ ಆ ಬೆಟ್ಟ ಸಾಲಿನ ತಪ್ಪಲಲ್ಲಿ ವಾಸವಾಗಿದ್ದ ಹಳ್ಳಿಗಳ ಜನರೂ, ಹಾಡಿಗಳ ಜನರೂ, ಆ ದಾರಿಯನ್ನು ಬಳಸಿದ್ದ ರಾಜವಂಶದವರೂ, ವ್ಯಾಪಾರಿಗಳ ವಂಶದವರೂ, ಸೈನಿಕರ ವಂಶದದವರೂ, ಸೇವಕ ಪರಿವಾರದವರೂ ಯಾವ್ಯಾವುದೋ ಕಾಲದಲ್ಲಿ ಯಾರ್‍ಯಾರೊಂದಿಗೋ ಹೇಳಿದ್ದು ಹಾಡಿದ್ದು ಅತ್ತಿದ್ದು ಕನವರಿಸಿದ್ದು ಎಲ್ಲವೂ ಕಾಲಮಾನಗಳ ಕಾಲು ಹಿಡಿದು ಹಾಡಾಗಿ ಕತೆಯಾಗಿ ಒಗಟಾಗಿ ಏನೇನೋ ರೂಪದಲ್ಲಿ ಇಲ್ಲಿಯವರೆಗೆ ತಲುಪಿದೆಯೆಂದೂ ಹೇಳುತ್ತಿದ್ದ.

’ಎರಡು ಹಳ್ಳಿಗಳ ಚರಿತ್ರೆ ಎಂದೆಯಲ್ಲ. ನೀನು ಹೇಳಿದ ಆ ಎರಡು ಹಳ್ಳಿಗಳು ಯಾವುವು?’ ಎಂದು ಕೇಳಿದರೆ ಶತಶೃಂಗ ಬೆಟ್ಟ ಸಾಲಿನ ಸನಿಹದ ಯಾವುದೋ ಊರುಗಳ ಹೆಸರು ಹೇಳುತ್ತಿದ್ದ. ಅವನು ಹೇಳುತ್ತಿದ್ದ ನೂರಾರು ವರ್ಷಗಳ ನಿಬ್ಬೆರಗಿನ ಕತೆಗೂ ಈಗ ಅವನು ತೋರುತ್ತಿದ್ದ ರೋಗಿಷ್ಟ ಹಳ್ಳಿಗಳಿಗೂ ಕೊಂಚವೂ ಹೋಲಿಕೆ ಮಾಡಲು ಸಾಧ್ಯವಾಗದೆ ಜನ ಕೋಪಗೊಂಡು ಅವನನ್ನು ಹಿಡಿದು ಚಚ್ಚಿ ಬಿಡುತ್ತೇವೆ ಎನ್ನುವಂತೆ ನೋಡುತ್ತಿದ್ದರು. ನಿಜ ಹೇಳಿದರೂ ಕಷ್ಟ. ಕಲ್ಪಿಸಿ ಹೇಳಿದರೂ ಕಷ್ಟ, ಏನೂ ಹೇಳದಿದ್ದರೂ ಕಷ್ಟ ಎನ್ನುವ ಸ್ಥಿತಿ ಬಂದಿತ್ತು. ಎಲ್ಲರಿಗೂ ಇದೇ ಸ್ಥಿತಿ ಬಂದಿತ್ತು. ಇಂತಹ ಒತ್ತಡ ತಾಳಿಕೊಳ್ಳಲಾಗದೆ ಅವನ ಜೊತೆಗಾರರು ಬರೆಯುವುದನ್ನು ಬಿಟ್ಟು ಪಾರ್ಕುಗಳಲ್ಲಿ ವಯಸ್ಸಾದವರ ಜೊತೆ ನಗೆ ಥೆರಪಿಗೆ ಸೇರಿಕೊಂಡು ಸುಮ್ಮಸುಮ್ಮನೆ ಹ್ಹೊಹ್ಹೊಹ್ಹೊ ಎಂದು ನಗಲಾರಂಭಿಸಿದ್ದರು.

ಇಂತಹದ್ದೆಲ್ಲವನ್ನೂ ಕಂಡು ರೋಸಿಹೋದ ಅವನು ತನ್ನ ಕತೆಯನ್ನು ಎಲ್ಲೆಂದರಲ್ಲಿ ಬಿಚ್ಚುವುದನ್ನು ನಿಲ್ಲಿಸಿದ. ಕತೆಯ ಎಳೆ ಬಿಚ್ಚುವುದು ನಿಂತ ಮೇಲೆ ಅವನೊಳಗೆ ಯಾವ ಸದ್ದೂ ಹುಟ್ಟಲಿಲ್ಲ. ಕ್ರಮೇಣ ಅವನು ಅಸಹಜ ಮೌನಿಯಾದ. ಅವನು ಏನೇನೋ ಬರೆಯುತ್ತಾನೆಂದು ಕುಹಕವಾಡುತ್ತಿದ್ದವರು ಅವನ ಮೌನವನ್ನೂ ಸಹಿಸದೆ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾದರು. ಇವನು ಏನೋ ಬರೆಯುತ್ತಾನೆ ಎನ್ನುವುದರ ಬಗ್ಗೆ ಏನೇನೂ ಗೊತ್ತಿಲ್ಲದ ಜನರಿಗೆ ಅವನ ಮೌನ ವಿಚಿತ್ರವೆನಿಸಿ ’ಕಂಡಕಂಡೋರಿಗೆಲ್ಲ ಗಂಟೆಗಟ್ಟಲೆ ಕೊರೀತಾ ಇರ್‍ತಾನಲ್ಲ. ಯಾಕೆ ಇದ್ದಕ್ಕಿದ್ದಂಗೆ ಸುಮ್ಮನಾಗಿಬಿಟ್ಟಿದ್ದಾನೆ?’ ಎನ್ನುವ ತರ್ಕಬದ್ದ ಪ್ರಶ್ನೆ ಹಾಕಿಕೊಂಡು ’ತಲೆ ಪೂರ್ತಿ ಕೆಡೋದಕ್ಕೆ ಮುಂಚೆ ಹಿಂಗೇನೆ ಅಂತೆ’ ಎಂದುಕೊಳ್ಳುತ್ತ ಹೋಗುತ್ತಿದ್ದರು.

ಸ್ವಲ್ಪ ದಿನಗಳ ನಂತರ ಅವನೊಳಗೆ ಸದ್ದು ಮಿಸುಕಾಡಿ ಅವನು ಮೌನದಿಂದ ಹೊರ ಬಂದ. ಆ ದಿನಗಳಲ್ಲಿ ಮತ್ತೊಂದು ಕತೆಯ ವಸ್ತು ಅವನಿಗೆ ಸಿಕ್ಕಿತು. ಹಾಗೆ ಸಿಕ್ಕಿದ್ದನ್ನು ಧ್ಯಾನಿಸುತ್ತ ಅವನು ಒಂದೆರಡು ದಿನ ಸುಮ್ಮನಿದ್ದರೆ ಅದು ಸರಿಯಾಗಿ ಬೆಳೆಯುತ್ತಿತ್ತೇನೋ. ಆದರೆ ಅವನು ಸುಮ್ಮನಿರಬೇಕಲ್ಲ. ಪ್ರತಿ ದಿನವೂ ಮನಸ್ಸಿನಲ್ಲೇ ಅದರ ರೂಪವನ್ನು ತಿದ್ದುತ್ತಿದ್ದ. ಮರುದಿನಕ್ಕೆ ಅದೂ ಮಸುಕಾಗಿಬಿಡುತ್ತಿತ್ತು ಅಥವಾ ಹೊಸತೇನಾದರೂ ಅದಕ್ಕೆ ಸೇರ್ಪಡೆಯಾಗಿರುತ್ತಿತ್ತು. ಹೀಗೆ ದಿನದಿನವೂ ಏನಾದರೂ ಕಳಚಿಕೊಳ್ಳುವ, ಹೊಸತೇನಾದರೂ ಅಂಟಿಸಿಕೊಳ್ಳುವ ಕತೆಯ ವರ್ತನೆ ಅವನನ್ನು ಕಷ್ಟಕ್ಕೆ ದೂಡತೊಡಗಿತು. ಅದರಿಂದ ಪಾರಾಗಲು ತಾನೊಂದು ಹೊಸ ಕತೆ ಬರೆಯುತ್ತಿದ್ದೇನೆಂದೂ ಅದು ಮುಂಚಿನ ಕತೆಗಿಂತ ಬಹಳ ಉತ್ತಮ ರೂಪದ್ದೆಂದೂ ಎಲ್ಲರಿಗೆ ಹೇಳಲಾರಂಭಿಸಿದ. ಒಬ್ಬೊಬ್ಬರ ಬಳಿ ಹೇಳುವಾಗಲೂ ಕತೆಯ ಕಲ್ಪನೆ ಬೇರೆ ಬೇರೆ ರೀತಿಯಲ್ಲಿ ಅರಳಿಕೊಳ್ಳುತ್ತಿದ್ದುದರಿಂದ ಎಂದಿನಂತೆ ಅದು ಹತ್ತಾರು ಅಸ್ಪಷ್ಟ ರೂಪಗಳನ್ನು ತಳೆದು ಅವನು ಒಳ್ಳೆಯ ಓದುಗರನ್ನು ಎದುರಾಗುವಷ್ಟರಲ್ಲಿ ಅದರ ಮೂಲ ರೂಪ ಯಾವುದೆನ್ನುವುದೇ ಅವನಿಗೆ ತಿಳಿಯದಂತಾಯಿತು. ಅನೇಕ ದಿನಗಳ ತನಕ ಅದರಲ್ಲೇ ಮುಳುಗೆದ್ದ ಅವನು ಅದರಿಂದ ಬೇಸತ್ತು ಏನಾದರೂ ಮಾಡಿ ಇದಕ್ಕೊಂದು ಕೊನೆ ತೋರಿಸಲೇಬೇಕು. ಇಲ್ಲದಿದ್ದರೆ ಇದು ನನ್ನನ್ನೇ ಆಪೋಶನ ತೆಗೆದುಕೊಂಡುಬಿಡುತ್ತದೆ ಎಂದು ಯೋಚಿಸಿದ.

ಅಂತಹ ಚಡಪಡಿಕೆಯ ದಿನಗಳಲ್ಲಿಯೇ ಅವನು ಇಸ್ಮಾಯಿಲನಿಗೆ ಒಂದು ಸಾವಿನ ವೃತ್ತಾಂತ ತನ್ನ ಕತೆಯ ವಸ್ತುವಾಗಿ ಬೆಳೆಯುತ್ತಿರುವುದನ್ನು ಹೇಳಿದ್ದು. ಆರಂಭದಲ್ಲಿ ಪ್ರಸ್ತಾಪಿಸಿರುವ ಒಳ್ಳೆಯ ಓದುಗರಲ್ಲಿಯೇ ಒಳ್ಳೆಯ ಓದುಗ ಈ ಇಸ್ಮಾಯಿಲ್. ಹೇಳಿದ್ದನ್ನೆಲ್ಲ ಸುಮ್ಮನೆ ಕೇಳಿ ಕೈ ಕುಲುಕಿ ಬೆನ್ನು ತಟ್ಟಿ ವಾವ್ ವಾವ್ ಎಂದು ಉದ್ಗರಿಸಿ ಬೆರಗಿನ ಮೂಟೆಯಂತಾಡುವ ಪೈಕಿಯಂತೂ ಅಲ್ಲ ಈ ಇಸ್ಮಾಯಿಲ್.

’ಆ ಸಾವು ಸಾವಲ್ಲ ಇಸ್ಮಾಯಿಲ್, ಅದೊಂದು ಕೊಲೆ’ ಎಂದಾಗ

’ಏನ್ ಗುರೂ ಇದು ಟ್ವಿಸ್ಟು. ಆದರೂ ನೀನು ಹೇಳ್ತಿರೋದು ಸರಿ. ಮನುಷ್ಯ ಸಂಬಂಧಗಳು ತೀರಾ ಕೆಟ್ಟೋಗಿದೆ. ಈಗ ಯಾವ ಸಾವೂ ಮಾಮೂಲಿ ಸಾವಿನ ತರ ಕಾಣೋದಿಲ್ಲ. ಕೊಲೆ ಮಾಡೋದಕ್ಕೆ ಈಗ ಆಯುಧಗಳೇನೂ ಬೇಕಾಗಿಲ್ಲವಲ್ಲ. ಆಯ್ತು ಅದೇನ್ ಹೇಳು ಗುರೂ ಕೇಳೋಣ’ ಎಂದ ಇಸ್ಮಾಯಿಲ್.

’ಇಸ್ಮಾಯಿಲ್ ಈ ಕತೇಲಿ ಹತ್ತಾರು ಜನ ಹತ್ತಾರು ರೀತಿಯಲ್ಲಿ ಆ ಸಾವಿನ ಬಗ್ಗೆ ಮಾತಾಡ್ತಾರೆ. ಅವರಲ್ಲಿ ಯಾರೂ ಪರಸ್ಪರ ಪರಿಚಯದೋರಲ್ಲ. ಆದರೆ ಎಲ್ಲರಿಗೂ ಸಾವಿನ ಜೊತೆ ಏನೋ ಒಂದು ಸಂಬಂಧ ಇದ್ದೇ ಇರುತ್ತೆ’ ಎಂದ. ಇಸ್ಮಾಯಿಲ್‌ನ ಪ್ರತಿಕ್ರಿಯೆ ಹೇಗಿರುತ್ತದೋ ಎನ್ನುವ ಆತಂಕದಲ್ಲಿ.

’ಹೌದಾ ಈ ತರದ್ದೆಲ್ಲೋ ಕೇಳಿದ್ದೀನಿ ಗುರೂ. ಹೋಗಲಿ ಅವರಿಗೆ ಸತ್ತವನ ಪರಿಚಯಾನಾದ್ರೂ ಇರುತ್ತ?’ ಎಂದ ಇಸ್ಮಾಯಿಲ್.

’ಇಲ್ಲ ಇಸ್ಮಾಯಿಲ್ ಅದೂ ಇಲ್ಲ. ಸತ್ತವನ ಪರಿಚಯ ಕೂಡ ಅವನ ಸಾವಿನ ಬಗ್ಗೆ ಮಾತಾಡೋರಿಗೆ ಇಲ್ಲ’ ಎಂದ ತಣ್ಣಗೆ ಅವನು.

ಕೊಂಚ ಹೊತ್ತು ಏನೋ ಯೋಚಿಸಿದ ಇಸ್ಮಾಯಿಲ್ ’ನನಗನ್ನಿಸೋ ಪ್ರಕಾರ ಯಾವ ಸಾವೂ ಆಗಿಲ್ಲ. ಕೊಲೆಯಂತೂ ಅಲ್ಲವೇ ಅಲ್ಲ. ನೀನೊಂದು ಭ್ರಾಮಕ ಜಗತ್ತನ್ನ ಕಟ್ಟತಾ ಇದ್ದೀಯ ಅಲ್ಲವಾ?’ ಎಂದ ಗಂಭೀರವಾಗಿ.

ಇಸ್ಮಾಯಿಲನ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಯಿತವನಿಗೆ.

’ಹೇಳಪ್ಪ ರೈಟರ್ರೂ ಏನು ಹೇಳಬೇಕೂಂತಿದ್ದೀಯ?’ ಎಂದು ಕಿಚಾಯಿಸಿದ ಇಸ್ಮಾಯಿಲ್. ಅವನ ಪ್ರಶ್ನೆಗೆ ಏನು ಉತ್ತರ ಕೊಡಬೇಕೆನ್ನುವ ಸ್ಪಷ್ಟತೆ ಇರಲಿಲ್ಲ. ಆದರೆ ಸುಮ್ಮನೆ ಇರುವುದೂ ಸುಲಭವಲ್ಲ.

’ಸಾವು ಹೇಗೆ ಭ್ರಾಮಕ ಜಗತ್ತಿನಲ್ಲಿ ನಡೆಯುತ್ತೆ ಇಸ್ಮಾಯಿಲ್? ನಡೆಯುತ್ತೆ ಅಂತಾನೂ ಇಟ್ಕೋ. ಆದರೂ ಇದು ಹಾಗಲ್ಲ ಇಸ್ಮಾಯಿಲ್. ಇದು ನಿಜವಾಗಲೂ ಆಗಿರುವಂತದ್ದು. ನನ್ನ ಮನಸ್ಸು ಹೇಳ್ತಿದೆ’ ಅಷ್ಟೊತ್ತಿಗೆ ಅವನ ಮಾತಿನಲ್ಲಿ ನೋವಿನ ಎಳೆಯೊಂದು ಸೇರಿಕೊಂಡಿದ್ದು ಇಸ್ಮಾಯಿಲನಿಗೆ ಅರ್ಥವಾಯಿತು.

’ಆಯ್ತು ಗುರೂ ಅಷ್ಟು ಎಮೋಶನಲ್ ಆಗಬೇಡ. ನೀನು ಬರೀತಾ ಇರೋದರ ಬಗ್ಗೆ ನೀನೇ ಅಷ್ಟೊಂದು ಅಟ್ಯಾಚ್‌ಮೆಂಟ್ ಬೆಳೆಸ್ಕೊಂಡುಬಿಟ್ಟರೆ ಹೇಗೆ? ಆಯ್ತು ಬಿಡು.

ಆದರೂ ಆ ಸಾವಿನ ಬಗ್ಗೆ ಹತ್ತಾರು ಜನ ಹತ್ತಾರು ರೀತಿ ಮಾತಾಡ್ತಾರೇಂತ ಹೇಳ್ತಿದ್ದೀಯ ನೀನು. ಆದರೆ ಕತೆ ಒಳಗೆ ಅಷ್ಟೊಂದೆಲ್ಲ ಆಯಾಮಗಳನ್ನ ಹೇಗೆ ನಿಭಾಯಿಸ್ತೀಯ ಗುರೂ? ಕಾಂಪ್ಲಿಕೇಟ್ ಆಗಲ್ವಾ? ಸಾವಿನ ಪ್ರಸಂಗಕ್ಕೆ ನೇರವಾಗಿ ರಿಲೇಟ್ ಆಗುವಂತದ್ದರ ಕಡೆಗೆ ಹೆಚ್ಚು ಗಮನ ಕೊಡಬಹುದು. ಹಾಗೇನೆ ನಿನ್ನ ಎಮೋಶನ್‌ಗೆ ಯಾವುದಾದ್ರೂ ತುಂಬ ರಿಲೇಟ್ ಆಗುತ್ತೆ ಅನ್ನೋದಾದ್ರೆ ಅಂತಾದ್ದರ ಕಡೆಗೂ ಒತ್ತು ಕೊಡು’ ಎಂದ.

ಇಸ್ಮಾಯಿಲನ ಜೊತೆಗಿನ ಮಾತುಕತೆಯ ನಂತರವೂ ಅವನು ಇನ್ನೂ ಹೊಸ ಪಾತ್ರಗಳು ಮತ್ತು ಕಥೆಗಳನ್ನು ಹೆಗಲಿಗೆ ಏರಿಸಿಕೊಳ್ಳುತ್ತಲೇ ಇದ್ದ. ಜೊತೆಗೆ ಅನೇಕಾನೇಕ ಕಲ್ಪನೆಗಳ ನಡುವೆ ಸಿಲುಕಿಕೊಳ್ಳುತ್ತಲೇ ಸಾಗಿದ. ಹಾಗಾಗಿ ಇಸ್ಮಾಯಿಲನಿಗೆ ಹೇಳಿದ ಸಂಗತಿ ಕೂಡ ಅವನು ನಂತರ ತನ್ನ ತಲೆಗೆ ತುಂಬಿಕೊಳ್ಳುತ್ತಿದ್ದ ಅಸಂಖ್ಯ ಕಥೆಗಳ ಜಟಿಲ ಜಾಲದಲ್ಲಿ ಸಿಲುಕಿ ನಾಪತ್ತೆಯಾಗಿರಬಹುದು ಅಥವಾ ಹೇಗೆ ಹೇಗೋ ರೂಪ ಮರೆಸಿಕೊಂಡು ಎಲ್ಲಾದರೂ ಉಳಿದಿರಬಹುದು. ಖಚಿತವಾಗಿ ಹೇಳಲಂತೂ ಸಾಧ್ಯವಿಲ್ಲ. ತಲೆಯ ತುಂಬ ಬರೆಯುವ ಗೀಳು ಹತ್ತಿಸಿಕೊಂಡು ತಿರುಗುವ ಅವನಿಗೆ ಇಂತಹ ಗೋಜಲುಗಳು ಸಾಕಷ್ಟಿವೆ. ಉದಾಹರಣೆಗೆ, ಮೈಕೆಲನು ಮೊಬೈಲ್ ಟವರಿನಿಂದ ಇಳಿದವನು ಎಲ್ಲಿಗೆ ಹೋದ ಎನ್ನುವ ಕುರಿತು ಹತ್ತಕ್ಕೂ ಹೆಚ್ಚು ತರಹದ ಕಥೆಗಳನ್ನು ಬೇರೆ ಬೇರೆಯವರಿಗೆ ಬೇರೆ ಬೇರೆ ಸಂದರ್ಭದಲ್ಲಿ ಹೇಳಿದ್ದ.

ಹೀಗೆ ಹೇಳಿದವುಗಳಲ್ಲಿ ಯಾವುದನ್ನು ಅಂತಿಮವಾಗಿ ಉಳಿಸಿಕೊಳ್ಳಬೇಕು? ಹಾಗೆ ಯಾವುದೋ ಒಂದನ್ನು ಉಳಿಸಿಕೊಂಡರೆ ಮಿಕ್ಕವುಗಳನ್ನು ವಿಲೇವಾರಿ ಮಾಡುವುದು ಹೇಗೆ? ಅವುಗಳನ್ನು ಕೇಳಿರುವ ಒಬ್ಬೊಬ್ಬರ ಮನಸ್ಸಿನಿಂದಲೂ ಅದನ್ನು ಇಲ್ಲವಾಗಿಸುವುದು ಸಾಧ್ಯವೇ? ಒಂದು ವೇಳೆ ಸಾಧ್ಯವಾದರೂ ತನ್ನಿಂದಲೇ ಸೃಷ್ಟಿಯಾಗಿ ತನ್ನಲ್ಲೇ ಆಳವಾಗಿ ಹೊಕ್ಕು ಕುಳಿತಿರುವ ಅನೇಕಾನೇಕ ಆವೃತ್ತಿಗಳ ಕಥೆಗಳಿಂದ ಹಾಗೂ ಆ ಕಥೆಗಳೇ ತನ್ನನ್ನು ಕೇಳುವ ತರಹೇವಾರಿ ಪ್ರಶ್ನೆಗಳಿಂದ ಬಚಾವಾಗುವುದಾದರೂ ಹೇಗೆ? ಹೀಗೆ ಇಂತಹ ಲೆಕ್ಕವಿಲ್ಲದಷ್ಟು ಗೊಂದಲಗಳಲ್ಲಿ ಅವನು ಮುಳುಗೇಳುತ್ತಿದ್ದ. ಮೈಕೆಲನು ಮೊಬೈಲ್ ಟವರಿನಿಂದ ಇಳಿದವನು ಎಲ್ಲಿಗೆ ಹೋದ ಎನ್ನುವ ಒಂದು ಸಂಗತಿಗೇ ಇಷ್ಟೆಲ್ಲ ರೂಪಗಳಿರುವಾಗ ಈಗಾಗಲೇ ತನ್ನಲ್ಲಿ ಹಾದುಹೋಗಿರುವ ಅಸಂಖ್ಯ ಪಾತ್ರಗಳು ಮತ್ತು ಸಂಗತಿಗಳಿಗೆ ಇನ್ನು ಎಷ್ಟೆಲ್ಲ ರೂಪಗಳಿರಬೇಕು ಎನ್ನುವ ಯೋಚನೆ ಅವನನ್ನು ಹೆದರಿಸುತ್ತಿತ್ತು.

ವಾಸ್ತವವಾಗಿ ಪಾತ್ರಗಳಿಗೆ ಒಂದು ನಿರ್ದಿಷ್ಟ ರೂಪ ಸಿಕ್ಕದಿರುವ ಹಂತದಲ್ಲಿ ಅಥವಾ ಅವುಗಳಿಗೆ ಇರಬಹುದಾದ ಸಾಧ್ಯತೆಗಳು ಅಸ್ಪಷ್ಟವಾಗಿಯೇ ಇದ್ದ ಹಂತದಲ್ಲಿ ಮೂಡಿದ ಚಿತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳುವಾಗ ಬೇರೆ ಬೇರೆ ರೂಪಗಳನ್ನು ಪಡೆದಿದ್ದವೇ ಹೊರತು ಅವು ಸುಳ್ಳುಗಳೇನಾಗಿರಲಿಲ್ಲ. ಆದರೆ ಪಾತ್ರಗಳ ಕುರಿತ ಅವನ ಚಿಂತನೆಗಳು ಗೋಜಲುಗೊಂಡಂತೆಲ್ಲ ಅವನು ಕಟ್ಟಲೆತ್ನಿಸುತ್ತಿರುವ ಪಾತ್ರಗಳು ತಮ್ಮ ಪ್ರಾಚೀನ ಮೂಲ ಚಹರೆಯಿಂದ ದೂರವಾಗುತ್ತ ಬೇರೆಯದೇ ಆಕಾರ ಪಡೆದುಕೊಳ್ಳುತ್ತ ಆ ಆಕಾರವೂ ಅವನಿಗೆ ಅಪರಿಚಿತವೆನಿಸುತ್ತ ಸಾಗಿ ಆ ಪಾತ್ರಗಳೇ ಭ್ರಮೆ ಹಾಗೂ ತಾನು ಅವುಗಳ ಬಗೆಗೆ ಹೊಸ ಹೊಸದಾಗಿ ಹೆಣೆಯುತ್ತಿರುವ ಕಥನಗಳೂ ಭ್ರಮೆ ಎನ್ನುವ ಭಾವನೆ ಬಲವಾಗತೊಡಗಿತು. ಆ ಕಥನಗಳ ಬಲೆಯಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟ ಎಂದು ಯೋಚಿಸಿ ಅದನ್ನು ಕಳಚಿಡಲು ನಿರ್ಧರಿಸಿದ.

*****

ಅವತ್ತೊಂದು ಮಧ್ಯಾಹ್ನದ ಬಿಸಿಲಿನಲ್ಲಿ ಮೊಬೈಲ್ ಟವರಿನ ಮೇಲೆ ಹತ್ತಿ ಯಾವುದೋ ರಿಪೇರಿ ಕೆಲಸವನ್ನು ಮಾಡುತ್ತಿದ್ದ ಮೈಕೆಲ್ ಫರ್ನಾಂಡಿಸನಿಗೆ ತನ್ನನ್ನು ಇಲ್ಲಿಗೆ ಕಳಿಸಿದ ಕಂಪೆನಿಯ ಇಂಜಿನಿಯರನ ಮೇಲೆ ಅಸಾಧ್ಯವಾದ ಕೋಪ ಬಂದಿತ್ತು.

’ಅಂಥ ಎತ್ತರದ ಜಾಗಕ್ಕೆಲ್ಲ ನಾನ್ ಹತ್ತಲ್ಲ ಸರ್. ತಲೆ ಸುತ್ತು ಬರುತ್ತೆ. ಅಲ್ಲಿಂದ ಬಿದ್ಬಿಟ್ರೆ ಏನ್ ಗತಿ? ಆಮೇಲೆ ಯಾರೂ ನಮ್ ಕಷ್ಟಕ್ಕಾಗಲ್ಲ’ ಎಂದು ವರಾತ ತೆಗೆದ ಮೈಕೆಲನಿಗೆ ಇಂಜಿನಿಯರನು ’ಇದೊಂದು ಸಲ ಹೋಗು ಮೈಕೆಲ್, ನಿನ್ನ ಸಮಸ್ಯೆ ನನಗರ್ಥ ಆಗುತ್ತೆ. ಮುಂದಿನ ಸಲಕ್ಕೆ ಬೇರೆ ಯಾರನ್ನಾದರೂ ವ್ಯವಸ್ಥೆ ಮಾಡ್ತೀನಿ’ ಎಂದು ನಯವಾಗಿ ಹೇಳಿ ಕಳಿಸಿದ್ದ. ಇಂಥದ್ದು ಹೆಗಲಿಗೇರಿದ ಪ್ರತಿ ಸಲವೂ ತಾನಿಷ್ಟು ಓದಿ ಈ ದರಿದ್ರ ಕೆಲಸಕ್ಕೆ ಯಾಕೆ ಬಂದೆನೋ ಎಂದು ಮೈಕೆಲ್ ಪರಿತಪಿಸುತ್ತಿದ್ದ. ಆದರೆ ಬೇರೆ ಯಾವ ಕೆಲಸವೂ ಸಿಗದೆ, ಸಿಕ್ಕರೂ ಇದಕ್ಕಿಂತ ಕಳಪೆಯೇ ಆಗಿರುತ್ತಿದ್ದುದರಿಂದ ಅನಿವಾರ್ಯವಾಗಿ ಅಲ್ಲೇ ಮುಂದುವರೆದಿದ್ದ.

ಹೀಗೆ ನಾಲ್ಕು ಅಂತಸ್ತಿನ ಕಮರ್ಷಿಯಲ್ ಕಾಂಪ್ಲೆಕ್ಸಿನ ಮೇಲೆ ಆಕಾಶಕ್ಕೆ ಮುಖ ಮಾಡಿದ್ದ ಮೊಬೈಲ್ ಟವರಿನಲ್ಲಿ ಕುಳಿತಿದ್ದ ಮೈಕೆಲನಿಗೆ ಬೀದಿಯ ತುತ್ತ ತುದಿಯ ಮನೆಗಳ ಬಳಿ ಮಾಮೂಲಿಗಿಂತ ಹೆಚ್ಚು ಜನ ಓಡಾಟವಿದೆ ಹಾಗೂ ವಿಶೇಷವಾಗಿ ಏನೋ ಆಗುತ್ತಿದೆ ಎನಿಸಿತು. ಮೊದಲಾಗಿದ್ದರೆ ಅಲ್ಲಿ ದಟ್ಟವಾಗಿ ಹಬ್ಬಿಕೊಂಡಿದ್ದ ರಸ್ತೆ ಬದಿಯ ಮರಗಳಿದ್ದವು. ಈಗ ಅವುಗಳ ಕಾಂಡಗಳಷ್ಟೇ ಉಳಿದಿದ್ದವು. ಫ್ಲೈ ಓವರ್ ನಿರ್ಮಾಣಕ್ಕೆ ಅಡ್ಡಲಾಗಿವೆ ಎನ್ನುವ ಕಾರಣದಿಂದ ದೊಡ್ಡ ಗಾತ್ರದ ಮಳೆ ಮರ, ಹೂ ಕುಚ್ಚಿನ ಮರ, ನೀರು ಕಾಯಿ ಮರಗಳನ್ನು ತಿಂಗಳ ಹಿಂದೆಯೇ ನೆಲಕ್ಕುರುಳಿಸಲಾಗಿತ್ತು. ಪುಟ್ಟ ಗಾತ್ರದ ಆಕಾಶ ಮಲ್ಲಿಗೆ, ನಾಗಲಿಂಗ, ನೇರಳೆ ಹಾಗೂ ಹೊಂಗೆ ಮುಂತಾದ ಗಿಡಗಳು ಕೂಡ ಅಭಿವೃದ್ದಿ ರಾಕ್ಷಸನ ಹಸಿವಿಗೆ ಬಲಿಯಾಗಿದ್ದವು. ಸದಾ ಕಲರವ ಮಾಡುತ್ತಿದ್ದ ನೂರಾರು ಹಕ್ಕಿಗಳು ಅದೆಲ್ಲಿ ಹೋದವೋ ಮತ್ತೆಂದೂ ಕಾಣಲಿಲ್ಲ. ಜೀವಕ್ಕೆ ಆಹ್ಲಾದ ನೀಡುತ್ತಿದ್ದ ಜಾಗವೀಗ ಬಿಕೋ ಎನ್ನುತ್ತಿತ್ತು. ಆದರೂ ಅಷ್ಟು ದೂರದಿಂದ ಅಲ್ಲೇನು ನಡೆಯುತ್ತಿದೆ ಎನ್ನುವುದು ಸರಿಯಾಗಿ ಕಾಣುತ್ತಿರಲಿಲ್ಲ. ಸದಾ ಸತ್ಯವನ್ನು ಬೆನ್ನತ್ತುವ ತನ್ನ ಬರಹಗಾರ ಗೆಳೆಯನೂ ಅದೇ ಪ್ರದೇಶದಲ್ಲಿ ವಾಸವಿದ್ದುದರಿಂದ ಮೈಕೆಲನು ತಕ್ಷಣ ಅಲ್ಲಿಗೆ ಹೋಗಲು ತೀರ್ಮಾನಿಸಿದ.

ಮೊಬೈಲ್ ಟವರಿನಿಂದ ಇಳಿಯುವಾಗ ಮೈಕೆಲ್ ಯಾವಾಗಲೂ ನಿಧಾನವಾಗಿ ಜಾಗರೂಕತೆಯಿಂದ ಇಳಿಯುತ್ತಿದ್ದ. ಪದೇ ಪದೇ ಕೆಳಗೆ ನೋಡುತ್ತಿರಲಿಲ್ಲ. ಹಾಗೆ ಮಾಡಿದರೆ ತಲೆ ತಿರುಗಿದಂತಾಗುವುದೋ ವಾಂತಿ ಬಂದಂತಾಗುವುದೋ ಏನೋ ಒಂದು ಆಗಿ ಕೈಯ ಹಿಡಿತ ತಪ್ಪಿ ಕೆಳಗೆ ಬೀಳುವ ಅಪಾಯವಿರುವುದರಿಂದ ತುಂಬ ಜಾಗ್ರತೆ ವಹಿಸುತ್ತಿದ್ದ. ಆದರೆ ಈಗ ಮಾತ್ರ ಮನಸ್ಸಿಗೆ ಇಳಿದ ಅವ್ಯಕ್ತ ಸಂಶಯದಿಂದ ತಳಮಳಗೊಂಡು ತನಗೇ ಗಾಬರಿಯಾಗುವಷ್ಟು ವೇಗದಲ್ಲಿ ಇಳಿದು ರಸ್ತೆ ತಲುಪಿದ್ದ. ತಾನು ರಸ್ತೆಯ ಅಂಚಿನಲ್ಲಿ ಬೈಕನ್ನು ನಿಲ್ಲಿಸಿರುವುದನ್ನೂ, ಬ್ಯಾಗಿನಲ್ಲಿರುವ ಸಲಕರಣೆಗಳ ಭಾರ ಬೆನ್ನನ್ನು ಜಗ್ಗುತ್ತಿರುವುದನ್ನೂ, ಬೇಕರಿಯ ಬಳಿಯಿದ್ದ ಪರಿಚಯದ ವ್ಯಕ್ತಿಯೊಬ್ಬ ಗೊಗ್ಗರು ದನಿಯಲ್ಲಿ ಕೂಗಿದ್ದನ್ನೂ, ಯಾವುದೋ ಟೆಲಿಕಾಂ ಕಂಪೆನಿಯವರು ಫೈಬರ್ ಆಪ್ಟಿಕಲ್ಸ್ ಅಳವಡಿಸಲು ರಸ್ತೆಯನ್ನು ಅಗೆದು ಅಲ್ಲಿಯೇ ಎಸೆದುಹೋಗಿದ್ದ ತಂತಿಗಳ ಗುಪ್ಪೆಗೆ ಎಡವಿಬಿದ್ದು ಅಂಗೈ ತರಚಿ ಹೋದುದನ್ನೂ, ತೀರಾ ದಿಗ್ಮೂಢನಂತೆ ಸಾಗುತ್ತಿದ್ದ ತನ್ನನ್ನು ಜನ ವಿಚಿತ್ರವಾಗಿ ನೋಡುತ್ತಿರುವುದನ್ನೂ, ಅವರಲ್ಲಿ ಒಂದಿಬ್ಬರು ಕುಹಕದ ಕಣ್ಣಿನಿಂದ ನೋಡುತ್ತ ಸ್ವಲ್ಪ ದೂರ ಹಿಂಬಾಲಿಸಿ ಬಂದಿದ್ದನ್ನೂ- ಹೀಗೆ ಯಾವುದನ್ನೂ ಲೆಕ್ಕಿಸದವನಂತೆ ಜನರ ಗುಂಪಿದ್ದ ಕಡೆಗೆ ಸರಸರನೆ ನಡೆದ. ಮಹಾನ್ ಕಳವಳದ ಮನಸ್ಥಿತಿಯಲ್ಲಿ ನಡೆಯುತ್ತಿದ್ದ ಮೈಕೆಲನ ಹೆಜ್ಜೆ ಒಮ್ಮೆಲೇ ತಡೆಯಿತು.

’ಅಂವಾ ಎಂತಕ್ಕೆ ಹಗ್ಗ ತಗೊಂಡಿದ್ದು ಪಾಪದವ’
’ಅದೇನೋ ಬರೀತಾನೆ ಅಂತಿದ್ರಪ್ಪ’
’ನೇಣಲ್ವಂತೆ’
’ಮರ್ಡರಂತೆ’
’ಹೊಡೆದಿದ್ದಾರಂತೆ’
’ಏನು ಎಡಾನಾ ಬಲಾನಾ?’
’ಹಂಗೇನಿಲ್ಲ, ಸೆಂಟರಿಗೂ ಹೊಡೆದವ್ರಂತೆ’
’ನೇಣೇ ಅಂತೆ’
’ಹೊಡೆದಿದ್ದರೂ ನೇಣೇ ಅಂತೆ’

ಎನ್ನುವ ಮಾತುಗಳು ಒಂದರ ಹಿಂದೊಂದು ಅವನಿಗೆ ತೀರಾ ತಾಕಿಕೊಂಡೇ ಹೋದವು. ಬೆಚ್ಚಿ ಅತ್ತಿತ್ತ ನೋಡಿದರೆ ಯಾರ್‍ಯಾರೋ ಮೊಬೈಲ್ ಫೋನುಗಳಲ್ಲಿ ಜೋರುಜೋರಾಗಿ ಮಾತಾಡುತ್ತ ನಡೆದುಹೋಗುತ್ತಿದ್ದುದು ಕಂಡಿತು. ಆದರೆ ಯಾರು ಯಾವ ಮಾತನ್ನು ಆಡಿದರು ಎನ್ನುವುದು ಗೊತ್ತಾಗಲಿಲ್ಲ. ಈಗಷ್ಟೇ ಕೆಲವೇ ಕ್ಷಣಗಳ ಮುಂಚೆ ಕಿವಿಗೆ ತಲುಪಿದ ಮಾತುಗಳು ಮನಸ್ಸಿಗಿಳಿದು ಒರೆಗೆ ಹಚ್ಚುವ ಮೊದಲೇ ಆ ಮಾತು ಯಾರದ್ದೂ ಅಲ್ಲವೇ ಅಲ್ಲ ಮೊದಲೆಂದೂ ಇಲ್ಲಿ ಹುಟ್ಟಿಯೇ ಇಲ್ಲ ಎನ್ನುವಂತೆ ಕರಗಿ ಕಾಣೆಯಾಗಿಬಿಟ್ಟಿತೆ ಎಂದು ತಬ್ಬಿಬ್ಬಾಗಿಬಿಟ್ಟ. ಹಾಗಿದ್ದರೆ ಯಾವ ಸಾವೂ ಘಟಿಸದಿರಲಿ ಎಂದು ಪದೇ ಪದೇ ಹಾರೈಸಿಕೊಂಡ. ಆದರೆ ಅದಾದ ಮರುಕ್ಷಣವೇ ಸಾವಿನ ಕಮಟು ವಾಸನೆ ಮೂಗಿಗೆ ತಾಕಿದಂತಾಗಿ ರೋದನವೊಂದು ಕಿವಿಯನ್ನು ಹೊಕ್ಕಂತಾಗಿ ಗಾಬರಿಗಣ್ಣಿಂದ ಸುತ್ತಮುತ್ತಲೂ ನೋಡಿದ. ಏನೂ ಕಾಣಲಿಲ್ಲ. ಯಾವುದೋ ಸಂಕಟವೊಂದು ಆಳ ಲೋಕದಿಂದ ಮೇಲೆದ್ದು ಬರುತ್ತ ಗತದ ಗಾಯಗಳನ್ನು ಸವರಿಕೊಳ್ಳುತ್ತ ತನ್ನ ಮೇಲೆ ಎರಗಲು ಹವಣಿಸುತ್ತಿದೆ ಬೆನ್ನಿಗೆ ಕವುಚಿಕೊಂಡಂತೆನಿಸುತ್ತಿದೆ ಯಾವುದದು ಎಂದು ಅದನ್ನು ಹಿಡಿಯಲು ತಡವಲು ದೂರ ತಳ್ಳಲು ಯತ್ನಿಸಿದ. ಆದರೆ ಯಾವುದೂ ಕೈಗೆ ಸಿಗಲಿಲ್ಲ, ದೂರವೂ ಹೋಗಲಿಲ್ಲ. ಬದಲಾಗಿ ಭಯದ ರೂಪ ತಾಳಿ ಅವನಲ್ಲಿ ಹೊಕ್ಕು ಬೇರು ಬಿಡತೊಡಗಿತು.

ಅದರಿಂದೆಲ್ಲ ಪಾರಾಗುವ ಹವಣಿಕೆಯಲ್ಲಿ ತಲೆ ಕೊಡವುತ್ತ ಅಂಗೈಯನ್ನು ಚಿವುಟಿಕೊಳ್ಳುತ್ತ ತಡಬಡಾಯಿಸಿ ನಡೆಯುತ್ತ ಕೋಳಿ ಮಾಂಸದ ಅಂಗಡಿಯೊಂದರ ಮುಂದಿನಿಂದ ಹಾದು ಹೊರಟ. ಅಲ್ಲಿ ಪುಕ್ಕ ತರಿದ ಕೋಳಿಯನ್ನು ಸುಡುವಾಗಿನ ವಾಸನೆ ಪ್ರಿಯವಾದುದೇ ಆದರೂ ಈಗ ಒಲ್ಲೆನೆನ್ನುವಂತೆ ಫಣಿಕ್ಕರನ ಚಾದಂಗಡಿಯನ್ನು ತಲುಪಿ ಒಳಗೆ ಸೇರಿ ಚಹಾ ಚೆಲ್ಲಾಡಿ ಅಂಟಂಟಾಗಿದ್ದ ಬೆಂಚನ್ನು ಅಭ್ಯಾಸ ಬಲದಿಂದೆಂಬಂತೆ ಒಮ್ಮೆ ಕೈಯಲ್ಲಿ ಒರೆಸಿ ಕುಸಿದು ಕುಳಿತ. ಸೋಸಕದಲ್ಲಿ ತುಂಬಿದ್ದ ಚಹಾದ ಗಸಿಯನ್ನು ಪ್ಲಾಸ್ಟಿಕ್ ಡಬ್ಬಿಯೊಂದಕ್ಕೆ ಹಾಕುತ್ತಿದ್ದ ಚಹಾದಂಗಡಿಯ ಪಣಿಕ್ಕರ್ ವಾರೆಗಣ್ಣಿನಲ್ಲಿಯೇ ಮೈಕೆಲನನ್ನು ನೋಡಿದ. ಬಹಳ ದಿನಗಳ ನಂತರ ಚಾದಂಗಡಿಗೆ ಬಂದ ಮೈಕೆಲನು ಎಂದಿನಂತಿರದೆ ಲೋಕದ ಅನಾಹುತಗಳೆಲ್ಲವನ್ನೂ ಹೆಗಲಿಗೆ ಏರಿಸಿಕೊಂಡವನಂತೆ ಕುಳಿತಿದ್ದ. ಅವನ ವಿಹ್ವಲತೆಯನ್ನು ಕಂಡರೂ ಪಣಿಕ್ಕರ್ ಮಾತಿನಲ್ಲಿ ಅದನ್ನು ಕಾಣಿಸದೆ ಯಾವತ್ತಿನ ಹಗುರ ಲಹರಿಯಲ್ಲಿಯೇ ’ಮೈಕೆಲ್ ಏನು ಈ ಮಧ್ಯೆ ಇತ್ಲಾ ಕಡೆ ಬರ್‍ಲೇ ಇಲ್ಲ? ಹೌದಪ್ಪ ನಮ್ಮಂತ ಬಡವರು ನಿಂಗ್ಯಾಕೆ ಬೇಕೇಳು? ಹೋಗ್ಲಿ ಬಿಡೂ, ಬಿಸಿ ಶುಂಠಿ ಚಾಯ್ ಕೊಡ್ಲಾ? ಈಗಷ್ಟೇ ಮಾಡಿದ್ದು’ ಎಂದು ವಿಚಾರಿಸಿಕೊಂಡ. ಅವನು ಕೇಳಿದ್ದು ತನಗಲ್ಲ ಎನ್ನುವಂತೆ ಕುಳಿತಿದ್ದ ಮೈಕೆಲ್. ಚಹಾದವನು ಕೂಡ ತಾನೇನೂ ಮೈಕೆಲನಿಂದ ಉತ್ತರವನ್ನು ನಿರೀಕ್ಷಿಸಿರಲಿಲ್ಲ ಎನ್ನುವಂತೆ ತನ್ನ ಕೆಲಸಕ್ಕೆ ಹೊರಳಿಕೊಂಡ.

ಸಾಲಾಗಿ ಜೋಡಿಸಿದ ಗಾಜಿನ ಲೋಟಗಳಿಗೆ ಒಂದು ತೊಟ್ಟೂ ಚೆಲ್ಲದಂತೆ ಪಣಿಕ್ಕರನು ಕೆಟಲಿನಿಂದ ಚಾ ಸುರಿಯುವುದನ್ನು ತದೇಕ ಚಿತ್ತನಾಗಿ ನೋಡುತ್ತಿದ್ದ ಮೈಕೆಲ್ ಒಮ್ಮೆಲೇ ಎಚ್ಚೆತ್ತವನಂತೆ ’ಯಾರಂತೆ ಸತ್ತೋಗಿದ್ದು?’ ಎಂದು ಕೇಳಿದ. ಅದೇ ಹೊತ್ತಿಗೆ ಯಾವುದೋ ಸ್ಕೂಲ್ ಬಸ್ಸಿನವನು ಕಿವಿ ಕಿತ್ತುಹೋಗುವಂತೆ ಮಾಡಿದ ಹಾರನ್ ಸದ್ದು ಅವನ ಪ್ರಶ್ನೆಯನ್ನು ಅದು ಗುರಿ ತಲುಪುವ ಮೊದಲೇ ಗಬಕ್ಕನೆ ತನ್ನ ಗಂಟಲಿಗೆ ಇಳಿಸಿ ಅದೃಶ್ಯ ಮಾಡಿತ್ತು. ಹಾಗಾಗಿ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಸ್ವಲ್ಪ ಗಟ್ಟಿಯಾಗಿ ಕೇಳಿದ. ಆದರೆ ಈ ಸಲವೂ ಅಂತಹುದೇ ಕರ್ಕಶ ಸದ್ದಿನಿಂದ ಅದು ಚಾದಂಗಡಿಯವನಿಗೆ ತಲುಪಲಿಲ್ಲ. ಅಷ್ಟೇ ಅಲ್ಲ, ಅಲ್ಲಿದ್ದ ಯಾರಿಗೂ ತಲುಪಲಿಲ್ಲ. ಅವನು ಕೇಳಿದ ಪ್ರಶ್ನೆಯಿಂದ ಅಲ್ಲಿನ ವಾತಾವರಣದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಚಾದಂಗಡಿಯವನು ಚಹಾ ಬೆರೆಸುವ ತನ್ನ ಚಳಕಕ್ಕೆ ತಾನೇ ಮನಸೋತವನಂತೆ ಮತ್ತೆ ಮತ್ತೆ ಅದನ್ನೇ ಮಾಡುತ್ತಿದ್ದ. ಗಿರಾಕಿಗಳೂ ಅವನು ನೀಡಿದ ಬಿಸಿ ಚಹಾದ ಗಾಜಿನ ಲೋಟಗಳನ್ನು ಹಿಡಿದು ಅಂಗೈಯ ಚರ್ಮಕ್ಕೆ ಇಳಿಯುತ್ತಿದ್ದ ಕಾವಿನಿಂದ ರೋಮಾಂಚನಗೊಳ್ಳುತ್ತಿದ್ದರು. ಅವರ ಮುಖದಲ್ಲಿ ಸುಳಿಯುತ್ತಿದ್ದ ಪುಳಕವನ್ನು ತನ್ನ ಮಂಕುಹಿಡಿದ ಕಣ್ಣುಗಳಿಂದ ನೋಡುತ್ತಿದ್ದ ಮೈಕೆಲನು ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಲು ಸಂಕೋಚಪಡುತ್ತ ಸುಮ್ಮನಾದ. ಒಂದೆರಡು ನಿಮಿಷಗಳ ಕಾಲ ಚಡಪಡಿಸುತ್ತ ಕುಳಿತಿದ್ದು ನಂತರ ಅಲ್ಲಿಂದೆದ್ದು ಸಾವಿನ ಮನೆಯ ಕಡೆಗೆ ಹೊರಟ. ಅಲ್ಲಿ ಒಂದಿಬ್ಬರು ಪೊಲೀಸರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಜನ ಆಗಾಗ ಎಲ್ಲೆಲ್ಲಿಂದಲೋ ಇಣುಕಿ ನೋಡುತ್ತ ಮರೆಯಾಗುತ್ತಿದ್ದರು. ಆಗಷ್ಟೇ ಬಂದಿದ್ದ ಟೀವಿ ಚಾನೆಲ್ಲಿನ ವರದಿಗಾರನೊಬ್ಬ ಅಲ್ಲಿನ ಪೊಲೀಸರನ್ನು ಕಾಡಿಬೇಡಿ ಅವರು ಅರೆ ಮನಸ್ಸಿನಿಂದ ಗೊಣಗುತ್ತ ಕೊಟ್ಟ ತುಣುಕು ಸುದ್ದಿಗಳನ್ನು ಕ್ಯಾಮೆರಾದ ಮುಂದೆ ಎಳೆದೂ ಎಳೆದೂ ಹೇಳುತ್ತಿದ್ದ.

ಮೈಕೆಲನಿಗೆ ಮುಂಬಾಗಿಲಿನ ಬಳಿಯಿಂದಲೇ ಮನೆಯೊಳಗಿದ್ದ ಶವ ಕಾಣಿಸಿತು. ಸತ್ತಿದ್ದು ಯಾರೆಂದು ತಿಳಿದು ಮೈಕೆಲನ ಎದೆಯಲ್ಲಿ ಅಪಾರ ಸಂಕಟವೆದ್ದಿತು. ಬರಹಗಾರನ ದೇಹ ಫ್ಯಾನಿಗೆ ನೇತು ಬಿದ್ದಿರುವುದನ್ನು ಮೊದಲು ಕಂಡವರು ಯಾರೆನ್ನುವುದು ತಿಳಿಯಲಿಲ್ಲ. ಸಾವಿನ ಸುದ್ದಿ ಪೊಲೀಸರಿಗೆ ತಲುಪಿ ಅವರು ಸರ್ವ ಸಿದ್ಧತೆಗಳನ್ನೂ ಮಾಡಿಕೊಂಡು ಅಲ್ಲಿಗೆ ಬರುವಷ್ಟರಲ್ಲಿ ಬರಹಗಾರನ ನಿರ್ಜೀವ ದೇಹ ಕೋಣೆಯ ನೆಲದ ಮೇಲೆ ಅಂಗಾತವಾಗಿ ಮಲಗಿತ್ತು. ಅದನ್ನು ಫ್ಯಾನಿನ ಹಗ್ಗದಿಂದ ಬಿಡಿಸಿದವರು ಯಾರು? ನೆಲದಲ್ಲಿ ಮಲಗಿಸಿದವರು ಯಾರು? ಯಾವುದೋ ಮಾಸಿದ ರಗ್ಗನ್ನು ಹೊದೆಸಿದವರು ಯಾರು? ಸಾಯುವ ಹೊತ್ತಿಗೆ ಕೃಶಗೊಂಡಂತಿದ್ದರೂ ನಿಜಾರ್ಥದಲ್ಲಿ ತೀರಾ ಬಡಕಲೇನೂ ಅಲ್ಲದ ದೇಹವನ್ನು, ಅಂತಿಮ ಕ್ಷಣಗಳಲ್ಲಿನ ವಿಸರ್ಜನೆಗಳಿಂದ ಕೊಂಚ ದುರ್ವಾಸನೆಯೂ ಇದ್ದಿರಬಹುದಾದ ದೇಹವನ್ನು ಇಳಿಸಿದವರು ಯಾರು? ಯಾಕೆ ಇಳಿಸಿರಬಹುದು? ಅದೃಷ್ಟವೇನಾದರೂ ಇದ್ದರೆ ಒಳಗೆಲ್ಲೋ ಅಡಗಿರುವ ಜೀವತಂತು ಹೊರಚಿಮ್ಮಿ ಉಸಿರ ರೂಪವನ್ನು ತಾಳಿ ಅವನು ಕಣ್ಣು ತೆಗೆದುಬಿಡಲಿ ಎನ್ನುವ ಔದಾರ್‍ಯದಿಂದ ಇಳಿಸಿದರೇ? ಅಥವಾ ಜೀವ ಎಲ್ಲೋ ಹಾರಿ ಹೋಗಿರುವಾಗ ವಿನಾಕಾರಣ ಈ ದೇಹಕ್ಕೇಕೆ ಹೀಗೆ ನೋಯುವ ದುಸ್ಥಿತಿ ಎನ್ನುವ ತಕ್ಷಣದ ತತ್ವ ಪ್ರೇರಣೆಯಿಂದ ಇಳಿಸಿದರೇ? ಅಥವಾ…ತಾವೇ ಏರಿಸಿ ತಾವೇ ಇಳಿಸಿ.. ಹೌದಾ..ಹೀಗೆಲ್ಲ ಆಗುತ್ತಾ…? ಇಂತಹ ಪ್ರಶ್ನೆಗಳು ಮತ್ತು ಉದ್ಗಾರಗಳಿಗೆ ಉತ್ತರ ಕೊಡುವವರಾದರೂ ಯಾರು?

ಸತ್ತವನ ಕೋಣೆಯಲ್ಲಿ ಪುರಾವೆಗಳಿಗಾಗಿ ಹುಡುಕುತ್ತಿದ್ದ ಪೊಲೀಸರಿಗೆ ಎಲ್ಲೆಲ್ಲೂ ಖಾಲಿ ಕಾಗದದ ಹಾಳೆಗಳೂ ಮತ್ತು ಹಾಳೆಯ ಚೂರುಗಳೂ ಕಾಣುತ್ತಿದ್ದವು. ಅವು ಇದ್ದುದು ಒಂದೆಡೆಯಲ್ಲ. ಎಲ್ಲೆಲ್ಲಿಯೂ ಇದ್ದವು. ಸತ್ತವನ ಶರ್ಟ್ ಜೇಬಿನಲ್ಲಿ, ಪ್ಯಾಂಟಿನ ಜೇಬುಗಳಲ್ಲಿ, ಪರ್ಸಿನಲ್ಲಿ, ಸೂಟ್‌ಕೇಸಿನಲ್ಲಿ, ನಾಗಂದಿಗೆಯ ಗೂಡಿನಲ್ಲಿ, ಅಷ್ಟೇಕೆ ಕೋಣೆಯ ಮೂಲೆಯಲ್ಲಿ ಮುದುಡಿ ಎಸೆದ ಸ್ಥಿತಿಯಲ್ಲಿ- ಹೀಗೆ ಎಲ್ಲೆಲ್ಲೂ ಬಿಳಿಯ ಹಾಳೆಗಳು ಮತ್ತು ಹರಿದ ತುಣುಕುಗಳೂ ಕಾಣುತ್ತಿದ್ದವು. ಗೋಡೆಯ ಮೇಲೆ ತೂಗುತ್ತಿದ್ದ ಒಂದು ಪಟವನ್ನು ನೋಡಿದ ಪೇದೆ ಹತ್ತಿರಕ್ಕೆ ಹೋಗಿ ದಿಟ್ಟಿಸಿದರೆ ಅದರಲ್ಲಿ ಯಾವ ಚಿತ್ರವೂ ಇರಲಿಲ್ಲ. ಕುತೂಹಲದಿಂದ ಪಟವನ್ನು ಇಳಿಸಿ ಅದರ ಹಿಂಭಾಗದ ರಟ್ಟನ್ನು ಕಳಚಿದರೆ ಅಲ್ಲಿಯೂ ಇದ್ದಿದ್ದು ಮತ್ತದೇ ಬಿಳಿಯ ಹಾಳೆಗಳು ಮಾತ್ರ. ಒಂದು ಹಾಳೆಯಲ್ಲಿ ಏನೋ ಬರೆದಂತಿದೆ ನೋಡು ಎಂದು ಮೇಲಧಿಕಾರಿ ಹೇಳಿದ್ದರಿಂದ ಪೇದೆ ಆ ಬರಹವನ್ನು ಓದಲೆತ್ನಿಸಿದ. ಅದು ಅವನಿಗೆ ಸರಿಯಾಗಿ ಅರ್ಥವಾಗಲಿಲ್ಲ. ಹಾಗಾಗಿ ಕೊಂಚ ಅಸಡ್ಡೆಯ ದನಿಯಲ್ಲಿ ’ಏನೂ ಇಲ್ಲ ಸಾರ್, ಏನೋ ಸೊಟ್ಟಂಪಟ್ಟ ಗೆರೆಗಳು. ಈಗಿನ ಜನ ಏನೇನೋ ಬರೀತಾರೆ. ಯಾವೋನಿಗೆ ಅರ್ಥ ಆಗ್ಬೇಕ್ ಅವೆಲ್ಲ, ಬಿಡಿ ಸಾರ್ ಅತ್ಲಾಗೆ’ ಎಂದು ಹೇಳಿದ. ಅವನ ಮಾತಿಗೆ ಅಧಿಕಾರಿ ’ಲೇ ದಡ್ಡ ಹಂಗೆಲ್ಲ ಉಡಾಫೆ ಮಾಡಿದ್ರೇನೆ ಕೇಸು ಕೈ ಜಾರಿ ಹೋಗೋದು’ ಎನ್ನುತ್ತ ’ಆಯ್ತು ಬಾ ಇಲ್ಲಿ ಮಂಚದ ಕೆಳಗೇನಾದ್ರೂ ಇದೆಯಾ ನೋಡು. ಮಂಚಾನ ಕದಲಿಸೋಕೇ ಆಗ್ತಿಲ್ಲ’ ಎಂದು ಕರೆದ. ನಂತರ ಮಂಚದಡಿಗೆ ತನ್ನ ಮೊಬೈಲಿನ ಬ್ಯಾಟರಿಯಿಂದ ಬೆಳಕು ಹಾಯಿಸುತ್ತ ’ಆ ಮೂಲೇಲಿ ಏನೋ ಇದ್ದಂಗಿದೆ ನೋಡು’ ಎಂದು ಪೇದೆಗೆ ತೋರಿಸಿದ.

ಪೇದೆ ಮಂಚದಡಿಗೆ ಹೋಗಿ ಬಂದು ’ಇಷ್ಟೇ ಸಾರ್ ಇದ್ದಿದ್ದು’ ಎನ್ನುತ್ತ ಒಂದು ಮುರಿದ ಪೆನ್ನನ್ನು ತೋರಿಸಿದ. ಅಧಿಕಾರಿ ಒಂದು ಉಂಡೆಗಟ್ಟಿದ್ದ ಹಾಳೆಯನ್ನು ತೆರೆದು ಪೆನ್ನಿನಿಂದ ಅಡ್ಡಾದಿಡ್ಡಿ ಗೀಚಿದ.

ಅಮರೇಂದ್ರ ಹೊಲ್ಲಂಬಳ್ಳಿ
ಕೋಲಾರದ ಹೊಲ್ಲಂಬಳ್ಳಿಯವರಾದ ಅಮರೇಂದ್ರ ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಸಂಕಲನ), ಕಾಯ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಕಟನೆಗೆ ಸಿದ್ಧವಾಗಿರುವ ’ಬಣ್ಣದ ನೆರಳು’ ಕಥಾಸಂಕಲನದಿಂದ ಈ ಕಥೆಯನ್ನು ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ಕಥೆ-ಕಾದಂಬರಿಗಳ ಗಟ್ಟಿ ಸ್ತ್ರೀಪಾತ್ರಗಳು ಮತ್ತು ಸ್ತ್ರೀಚಾತುರ್ಯದ ಕಥನಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...