Homeಕರ್ನಾಟಕಚುನಾವಣೆಯ ಹೊತ್ತಿನಲ್ಲಿ ಹೆಚ್ಚಿದ ಮಹಿಳಾ ಕಾಳಜಿ; ನಿಜವೆಷ್ಟು? ಪೊಳ್ಳೆಷ್ಟು?

ಚುನಾವಣೆಯ ಹೊತ್ತಿನಲ್ಲಿ ಹೆಚ್ಚಿದ ಮಹಿಳಾ ಕಾಳಜಿ; ನಿಜವೆಷ್ಟು? ಪೊಳ್ಳೆಷ್ಟು?

- Advertisement -
- Advertisement -

ಕರ್ನಾಟಕ ರಾಜ್ಯ ಮತ್ತೊಂದು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಆಡಳಿತ ಮತ್ತು ವಿರೋಧ ಪಕ್ಷಗಳು ಅಧಿಕಾರ ಹಿಡಿಯುವ ಕಸರತ್ತುಗಳಲ್ಲಿ ಸಕ್ರಿಯವಾಗಿವೆ. ವಿರೋಧ ಪಕ್ಷವಾದ ಕಾಂಗ್ರೆಸ್ ಭರವಸೆಯಾಗಿ ಘೋಷಿಸಿರುವ ಎರಡು ಕಾರ್ಯಕ್ರಮಗಳು ಈಗ ಚರ್ಚೆಯಲ್ಲಿವೆ. “ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ, ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು -2,000ರಂತೆ ವರ್ಷಕ್ಕೆ -24 ಸಾವಿರ ಆರ್ಥಿಕ ನೆರವನ್ನು ನೀಡುತ್ತೇವೆ” ಎಂದು ಕಾಂಗ್ರೆಸ್ಸಿಗರು ಘೋಷಿಸಿದ್ದಾರೆ. ಸದ್ಯಕ್ಕೆ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಅಸ್ತ್ರಗಳನ್ನು ಬಿಟ್ಟಿದೆ ಎಂದು ಇದನ್ನು ಬಣ್ಣಿಸಲಾಗುತ್ತಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ (ಜ.16) ನಡೆದ ಕಾಂಗ್ರೆಸ್‌ನ ’ನಾ ನಾಯಕಿ’ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡು ಮಾತನಾಡಿದರು. “ಈ ನಾ ನಾಯಕಿ ಕಾರ್ಯಕ್ರಮದ ಮೂಲಕ ನೀವು ಲೀಡರ್ ಆಗಿರಿ. ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ” ಎಂದಿದ್ದಾರೆ ಪ್ರಿಯಾಂಕಾ.

ಸಿದ್ದರಾಮಯ್ಯ

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯನವರು, “ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರು ’ಈ ದೇಶದ ಅಭಿವೃದ್ಧಿ ಆಗಬೇಕಾದರೆ ದೇಶದ ಅರ್ಧದಷ್ಟಿರುವ ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕು’ ಎಂದು ಹೇಳಿದ್ದರು. ನೆಹರೂ ಅವರ ಆಡಳಿತದಲ್ಲಿ ಬಾಲ್ಯ ವಿವಾಹ, ಸತಿ ಪದ್ಧತಿಗಳಂಥ ಅನಿಷ್ಟಗಳನ್ನು ತೊಡೆದುಹಾಕಲು ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. ಹಿಂದೂ ಉತ್ತರಾಧಿಕಾರಿ ಕಾಯ್ದೆ, 1950ರಲ್ಲಿ ದತ್ತು ಸ್ವೀಕರಿಸುವ ಕಾಯ್ದೆ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೊಳಿಸಲಾಯಿತು. ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. 1951ರ ಜನಗಣತಿ ಪ್ರಕಾರ ದೇಶದ ಮಹಿಳಾ ಸಾಕ್ಷರತೆ ಪ್ರಮಾಣ 8.86% ಇದ್ದದ್ದು 2011ರ ಜನಗಣತಿಯ ಪ್ರಕಾರ 65.45%ಗೆ ಹೆಚ್ಚಳವಾಗಲು ಕಾಂಗ್ರೆಸ್ ಸರ್ಕಾರ ಕಾರಣ. ನಾವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗೆ ಉದ್ಯೋಗದಲ್ಲಿ ಸಿಗುತ್ತಿದ್ದ 30% ಮೀಸಲಾತಿ ಪ್ರಮಾಣವನ್ನು 33%ಗೆ ಹೆಚ್ಚಿಸಿದ್ದೇವೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದುಪಡಿ ಮಾಡಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದ್ದರು ಮತ್ತು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೀಸಲಾತಿ ಸಿಗಬೇಕು. ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮೀಸಲಾತಿ ನೀಡಬೇಕು ಎಂಬ ಬಿಲ್‌ಅನ್ನು 1995ರಲ್ಲಿ ಲೋಕಸಭೆ ಮುಂದೆ ತರಲಾಗಿದೆ. ಈ ಬಿಲ್ ಇನ್ನು ಹಾಗೆ ಇದೆ. ಒಂದು ವೇಳೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮೀಸಲಾತಿ ನೀಡುವ ಈ ಬಿಲ್‌ಅನ್ನು ಪಾಸ್ ಮಾಡಿ ಜಾರಿ ಮಾಡುವ ಕೆಲಸ ಮಾಡಬೇಕು ಎಂಬ ನಿರ್ಣಯವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಬೇಕು. ಇದು ನನ್ನ ಒತ್ತಾಯ” ಎಂದಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ನಂತೆಯೇ ’ಗೃಹಿಣಿ ಶಕ್ತಿ’ ಯೋಜನೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಹಿಂದೆ ಪ್ರಕಟಿಸಿದ್ದರು. 1,000ದಿಂದ 2,000ದವರೆಗೆ ಪಾವತಿಸುವ ಯೋಜನೆ ಇರುವುದಾಗಿ ತಿಳಿಸಿದ್ದರು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಇಂತಹ ಭರವಸೆಗಳನ್ನು ನೀಡುತ್ತಿವೆ. ಆದರೆ ನಿಜಕ್ಕೂ ಇದು ಮಹಿಳಾ ಸಬಲೀಕರಣಕ್ಕೆ ಕಾರಣವಾಗಬಲ್ಲದೇ? ಅಧಿಕಾರಕ್ಕೆ ಬಂದವರು ಮಾಡಬೇಕಾದ ನಿಜ ಕೆಲಸಗಳು ಬೇರೆ ಏನಾದರೂ ಇವೆಯೇ? ಎಂದು ಕೇಳಿಕೊಳ್ಳಬೇಕಿದೆ.

“33% ಮಹಿಳಾ ಮೀಸಲಾತಿ ಜಾರಿಯಾಗಬೇಕೆಂಬುದು ದಶಕಗಳ ಕೂಗು. ಅದು ಆಗಲೇಬೇಕು. ವಾಸ್ತವದಲ್ಲಿ ಮಹಿಳೆಯ ಸಂಖ್ಯೆ ಶೇ.50ರಷ್ಟಿದೆ. ಈ ಕುರಿತು ಸಿದ್ದರಾಮಯ್ಯನವರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ ಲೇಖಕಿ ಶಾರದಾ ಗೋಪಾಲ್, “ಗೃಹಣಿಯರಿಗೆ 2,000 ರೂ. ಮಾಸಿಕವಾಗಿ ನೀಡುತ್ತೇವೆ ಎಂಬುದು ರಾಜಕೀಯ ಪಕ್ಷಗಳು ಮಾಡುತ್ತಿರುವ ಮಹಿಳಾ ಓಲೈಕೆಯ ರಾಜಕಾರಣ” ಎಂದು ಅಭಿಪ್ರಾಯಪಟ್ಟರು.

’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿದ ಅವರು, “ಮದ್ಯ ನಿಷೇಧ ಮಾಡಬೇಕು ಎಂಬುದು ಈ ನಾಡಿನ ಮಹಿಳೆಯರ ಬಹುಕಾಲದ ಬೇಡಿಕೆ. ಇದನ್ನು ಒಪ್ಪುತ್ತಾರೆಯೇ? ಉದ್ಯೋಗಖಾತ್ರಿಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಸಮಾನ ಕೂಲಿ ಇದೆ, ಆದರೆ ಅದು ಕನಿಷ್ಠ ಕೂಲಿಯಾಗಿ ಮಾರ್ಪಾಡಾಗಿಲ್ಲ. ಮಹಿಳಾ ಅಭ್ಯರ್ಥಿಗಳಿಗೆ ಈ ಚುನಾವಣೆಯಲ್ಲೇ ಹೆಚ್ಚಿನ ಟಿಕೆಟ್ ನೀಡಿ, ಶಾಸಕಿಯರ ಸಂಖ್ಯೆ ದ್ವಿಗುಣವಾಗಬೇಕು” ಎಂದು ಒತ್ತಾಯಿಸಿದರು.

“ಪ್ರತಿ ವರ್ಷವೂ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಗ್ರಾಮಸಭೆ ಮಾಡಬೇಕೆಂದು ಆದೇಶವಿದೆ. ದುರಾದೃಷ್ಟವಶಾತ್ ಎಲ್ಲಿಯೂ ಮಹಿಳಾ ಗ್ರಾಮಸಭೆಗಳು ನಡೆಯುತ್ತಲೇ ಇಲ್ಲ. ಅವುಗಳು ನಿಯಮಿತವಾಗಿ ನಡೆದರೆ ಮಹಿಳೆಯರ ಆಗ್ರಹಗಳೇನು ಎಂಬುದು ಪ್ರಸ್ತಾಪವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಎಂದು ಆಯೋಜಿಸುತ್ತಿದ್ದಾರೆ. ಅಲ್ಲಿ ಮಹಿಳೆಯರೂ ಇರುವುದಿಲ್ಲ, ಮಕ್ಕಳೂ ಇರುವುದಿಲ್ಲ. ಪ್ರತ್ಯೇಕವಾಗಿಯೇ ಮಹಿಳಾ ಗ್ರಾಮಸಭೆಗಳನ್ನು ಹಮ್ಮಿಕೊಳ್ಳಬೇಕು. ಅದಕ್ಕೂ ಮುಂಚಿತವಾಗಿಯೇ ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲ ಹೆಣ್ಣುಮಕ್ಕಳನ್ನು ಕರೆದು, ಪೂರ್ವ ತಯ್ಯಾರಿ ನಡೆಸಬೇಕು” ಎಂದು ಆಶಿಸಿದರು.

“ಮಹಿಳೆಯರನ್ನು ಕೇಂದ್ರೀಕರಿಸಿ ನಡೆಯುವ ರಾಜಕೀಯವನ್ನು ವಿಮರ್ಶಿಸಿ ಸ್ವೀಕರಿಸುವಷ್ಟು ಜಾಗೃತಿ ಮಹಿಳೆಯರಲ್ಲಿ ಇದೆಯೇ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇತ್ತೀಚೆಗೆ ಹಳ್ಳಿಯೊಂದಕ್ಕೆ ಹೋಗಿದ್ದೆವು. ಎಲ್ಲ ಮಹಿಳೆಯರು ಒಂದೇ ರೀತಿಯ ಟಿಫನ್ ಡಬ್ಬಿ ಹಿಡಿದುಕೊಂಡು ನಡೆಯುತ್ತಿದ್ದರು. ವಾಸ್ತವವೇನೆಂದರೆ ಟಿಕೆಟ್ ಆಕಾಂಕ್ಷಿಗಳು ಟಿಫನ್ ಡಬ್ಬಿಗಳನ್ನು ಹಂಚುತ್ತಿದ್ದರು. ಮಹಿಳಾ ಮತದಾರರನ್ನು ಹೇಗೆ ನೋಡುತ್ತಾರೆಂಬುದಕ್ಕೆ ಇದು ಉದಾಹರಣೆ. ಮತ್ತೊಂದೆಡೆ ಮಹಿಳಾ ಸಬಲೀಕರಣದ ಮಾತುಗಾರಿಕೆಯೂ ನಡೆಯುತ್ತಿದೆ. ಜಾಗೃತಿ ಹೊಂದಿರುವ ಹೆಣ್ಣುಮಕ್ಕಳಿದ್ದಾರೆ. ಅವರೊಂದಿಗೆ ಚರ್ಚೆಗಳನ್ನು ನಡೆಸಬೇಕು” ಎಂದು ತಿಳಿಸಿದರು.

“ತುತ್ತು ಕೂಳಿಗಾಗಿ ಪರದಾಡುವ ಪರಿಸ್ಥಿತಿಯಲ್ಲಿರುವ ಹೆಣ್ಣುಮಗಳಿಗೆ ಎಲ್ಲಿಯ ರಾಜಕಾರಣ? ಎಲ್ಲಿಯ ಶಾಸಕ ಸ್ಥಾನ? ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರದಲ್ಲೂ ಈ ಸ್ಥಿತಿಯಲ್ಲಿರುವುದು ವಿಷಾದನೀಯ ಸಂಗತಿ” ಎಂದರು.

ಶಿವಸುಂದರ್

ಕಾಂಗ್ರೆಸ್ ಪ್ರಸ್ತಾಪಿಸಿರುವ ವಿಚಾರಗಳ ಕುರಿತು ಚಿಂತಕರಾದ ಶಿವಸುಂದರ್ ಅವರು ಪ್ರತಿಕ್ರಿಯಿಸಿ, “ಮಹಿಳಾ ಸಬಲೀಕರಣವನ್ನು ಬುಡಮಟ್ಟದಿಂದ ಹೇಗೆ ಮಾಡಬೇಕು, ಪುರುಷಪ್ರಧಾನ ವ್ಯವಸ್ಥೆಯ ಬಂಧನಗಳನ್ನು ಹೇಗೆ ಬಿಡಿಸಬೇಕೆಂಬುದು ಕಾಂಗ್ರೆಸ್, ಬಿಜೆಪಿಯ ಗುರಿಯಲ್ಲ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ಶೋಭಾ ಕರಂದ್ಲಾಜೆಯವರಿಗೆ ಇಂಧನ ಖಾತೆ ಸಿಕ್ಕಿತ್ತು. ಕಾಂಗ್ರೆಸ್‌ನ ಮಂತ್ರಿಮಂಡಲದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮಹಿಳೆಯರಿಗೆ ನೀಡುತ್ತಾರೆ. ನೆಪಮಾತ್ರಕ್ಕೆ ಒಬ್ಬರನ್ನು ಸಚಿವರನ್ನಾಗಿ ತೋರಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿದ್ದಿದೆ. ಎಂಎಲ್‌ಎ ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವಾಗ ಪರಿಗಣಿಸುವ ಮಾನದಂಡಗಳು ಬೇರೆಯಾಗಿರುತ್ತವೆ. ಪ್ರಭಾವಿ ರಾಜಕಾರಣಿಯ ಹೆಂಡತಿಗೋ, ಸೊಸೆಗೋ, ಮಗಳಿಗೋ ಟಿಕೆಟ್ ನೀಡುತ್ತಾರೆ. ಸ್ವತಂತ್ರವಾಗಿ ಟಿಕೆಟ್ ಸಿಗುವುದು ದುರ್ಲಭ. ದೇವರಾಜ ಅರಸು, ರಾಮಮನೋಹರ ಲೋಹಿಯಾ ಅವರ ಕಾಲದಲ್ಲಿ ಪ್ರಗತಿಪರ ಹೆಜ್ಜೆಗಳನ್ನಿಟ್ಟಿದ್ದನ್ನು ಗಮನಿಸಬಹುದಷ್ಟೇ. ಮಹಿಳಾ ಸಮುದಾಯದಲ್ಲೇ ತುಳಿತಕ್ಕೊಳಗಾದ ವರ್ಗವಿದೆ ಎಂಬುದನ್ನೂ ಗಮನಿಸಬೇಕು” ಎಂದು ಹೇಳಿದರು.

ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ: ನಿರ್ಭಯ ವಾತಾವರಣಕ್ಕೆ ನರೇಂದ್ರ ಮೋದಿ ಕಾರಣ ಎಂದ ಬಿಬಿಸಿ ಸಾಕ್ಷ್ಯಚಿತ್ರ

“ಇಂದಿರಾ ಗಾಂಧಿಯವರ ಕಾಲದಲ್ಲಿದ್ದ ಮಾತು. ಕಾಂಗ್ರೆಸ್‌ನಲ್ಲಿರುವ ಏಕೈಕ ಗಂಡಸೆಂದರೆ ಇಂದಿರಾ ಗಾಂಧಿ ಮಾತ್ರ ಎಂದು ಬಣ್ಣಿಸಲಾಗುತ್ತಿತ್ತು. ಹಿಂದುತ್ವ ಎನ್ನುವ ಮಹಿಳೆಯರಿಗೆ ಬಿಜೆಪಿಯವರು ಪ್ರಾತಿನಿಧ್ಯವನ್ನು ಕೊಡುತ್ತಾರೆ. ಆದರೆ ಪುರುಷ ಪ್ರಧಾನ ವ್ಯವಸ್ಥೆಯನ್ನು ಬಲಪಡಿಸಲು ಈ ಮಹಿಳೆಯರನ್ನೇ ಬಳಸಿಕೊಳ್ಳುತ್ತಾರೆ. ಕುಟುಂಬದೊಳಗೆ ಹೆಣ್ಣು ಅಧಿಕಾರವನ್ನು ಪಡೆದುಕೊಳ್ಳದಿದ್ದರೆ, ಸರ್ಕಾರ ಕೊಡುವ ಹಣವೂ ಪುರುಷರ ಕೈಗೆ ಹೋಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದರೂ ಗಂಡಸರೇ ಅಧಿಕಾರ ನಡೆಸುತ್ತಿರುತ್ತಾರಲ್ಲವೇ?” ಎಂದು ಪ್ರಶ್ನಿಸಿದರು.

“ಉತ್ತರಪ್ರದೇಶದ ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗೆ ಶೇ. 40ರಷ್ಟು ಸೀಟುಗಳನ್ನು ಕೊಡುವುದಾಗಿ ಕಾಂಗ್ರೆಸ್ ಹೇಳಿತು. ಸೋಲುವುದು ಗ್ಯಾರಂಟಿ ಎಂದು ಗೊತ್ತಾದಾಗ ಮಾತ್ರ ಟಿಕೆಟ್ ಕೊಡುತ್ತಾರೆ. ಕರ್ನಾಟಕದಲ್ಲಿ ಜೆಡಿಎಸ್ ಗೆಲ್ಲುವ ಕ್ಷೇತ್ರಗಳಲ್ಲೆಲ್ಲ ದೇವೇಗೌಡರ ಕುಟುಂಬಕ್ಕೆ ಟಿಕೆಟ್ ಖಾತ್ರಿಯಾಗುತ್ತದೆ. ಉಳಿದ 200 ಸೀಟ್‌ಗಳನ್ನು ಇನ್ಯಾರಾದರೂ ದುಡ್ಡು ಕೊಟ್ಟು ಪಡೆಯಬಹುದಲ್ಲವೇ? ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮಾಡಿದ್ದು ಇದನ್ನೇ” ಎಂದು ಟೀಕಿಸಿದರು.

“ಹಿಂದೂ ಕೋಡ್ ಬಿಲ್ ಜಾರಿಗೆ ಬಂದಿದ್ದು 1955ರಲ್ಲಿ. ಅದಕ್ಕೆ ಅಧಿಕಾರ ಸಿಕ್ಕಿದ್ದು 2006ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ. ಕಾಂಗ್ರೆಸ್ ಸರ್ಕಾರವಿದ್ದಾಗಲೂ ಏಕೆ ಹಿಂದೂ ಕೋಡ್ ಬಿಲ್ ಜಾರಿಗೆ ಬರಲಿಲ್ಲ? ಇಂತಹ ನೂರಾರು ಉದಾಹರಣೆಗಳನ್ನು ಹೇಳಬಹುದು. ಇದರರ್ಥ ಬಿಜೆಪಿ ಒಳ್ಳೆಯದನ್ನು ಮಾಡಿದೆ ಎಂದಲ್ಲ. ಬಿಜೆಪಿ ಇವರಿಗಿಂತ ಹೆಚ್ಚಿನ ಪುರುಷಾಧಿಪತ್ಯವನ್ನು ಜಾರಿಗೆ ತರುತ್ತದೆ. ಅದನ್ನು ಮರೆಮಾಚಲು ಪ್ರಾತಿನಿಧ್ಯವನ್ನು ಬಳಸಿಕೊಳ್ಳುತ್ತದೆ ಅಷ್ಟೇ” ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯನವರ ಅವಧಿಯಲ್ಲಿ ಮಹಿಳಾಪರ ಕೆಲಸಗಳಾಗಿವೆ: ಉಮಾಶ್ರೀ

’ನ್ಯಾಯಪಥ’ದೊಂದಿಗೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, “ಸಿದ್ದರಾಮಯ್ಯನವರ ಅವಧಿಯಲ್ಲಿ ಮಹಿಳಾಪರವಾದ ಕೆಲಸಗಳಾಗಿವೆ. ಇಂದಿನ ಬಿಜೆಪಿ ಸರ್ಕಾರ ನಮ್ಮ ಕಾರ್ಯಕ್ರಮಗಳನ್ನು ಸಶಕ್ತವಾಗಿ ಮುಂದುವರಿಸುತ್ತಿಲ್ಲ” ಎಂದು ಆರೋಪಿಸಿದರು.

“ದಮನಿತ ಮಹಿಳೆಯರ ಕುರಿತಾಗಿ ಅಧ್ಯಯನ ಮಾಡಿಸಿ ವರದಿ ಸಲ್ಲಿಸಲಾಯಿತು. ಮಹಿಳೆಯರು, ಮಕ್ಕಳು, ಬಾಲಕಿಯರಿಗಾಗಿ ನೀತಿಗಳನ್ನು ರೂಪಿಸಲಾಯಿತು. ಟ್ರಾನ್ಸ್‌ಜೆಂಡರ್ ಸಮುದಾಯಕ್ಕಾಗಿ ಪಾಲಿಸಿಗಳನ್ನು ಮಾಡಕೊಡಲಾಯಿತು. ಅದ್ಯಾವುದನ್ನೂ ಇಂದಿನ ಬಿಜೆಪಿ ಸರ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಅಂಗವಿಕಲರಿಗೆ ವಾಹನಗಳನ್ನು ನೀಡಿದೆವು. ಗರ್ಭಿಣಿಯರು ಅಪೌಷ್ಟಿಕತೆಯಿಂದ ನರಳಬಾರದೆಂದು ಅಂಗನವಾಡಿಯಿಂದ ಊಟವನ್ನು ವಿತರಿಸುವ ಕಾರ್ಯಕ್ರಮ ತಂದೆವು. ಹಾಲು, ಅನ್ನ, ಕಾಳು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ವಿತರಿಸಿದೆವು. ಗರ್ಭಿಣಿಯರ ರಕ್ತಹೀನತೆಯನ್ನು ಹೋಗಲಾಡಿಸಲು ಕ್ರಮವಹಿಸಿದೆವು. ಸಮಸ್ಯೆಯ ಮೂಲವಿಡಿದು ಕೆಲಸಗಳನ್ನು ಮಾಡಿದೆವು. ದೇವದಾಸಿಯರ, ಹಿರಿಯ ನಾಗರಿಕರ ಪಿಂಚಣಿ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿದೆವು. ಇಂದು ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳನ್ನು ಪೊರೆಯುವುದಕ್ಕಾಗಿ ಮಾಸಿಕವಾಗಿ 2,000 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದ್ದೇವೆ. ಮಧ್ಯಮ ಹಾಗೂ ಕೆಳವರ್ಗದ ಮಹಿಳೆಯರಿಗೆ ಇದು ಅನುಕೂಲವಾಗುತ್ತದೆ” ಎನ್ನುತ್ತಾರೆ ಉಮಾಶ್ರೀ.

ಉಮಾಶ್ರೀ

“2,000 ರೂಪಾಯಿ ಮಾಸಿಕವಾಗಿ ಕೊಡುತ್ತೇವೆ ಎನ್ನುವಂತಹ ಕಾರ್ಯಕ್ರಮಗಳು ಶ್ರೀಮಂತ ವರ್ಗಕ್ಕೆ ಇಷ್ಟವಾಗುವುದಿಲ್ಲ. ಆದರೆ ಶ್ರಮಿಕ ವರ್ಗಕ್ಕೆ ಅದು ಆಧಾರವಾಗಲಿದೆ. ಶ್ರೀಮಂತ ವರ್ಗಕ್ಕೂ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತೇವೆ” ಎಂದು ವಿವರಿಸಿದರು.

“ಮದ್ಯ ಮಾರಾಟ ನಿಷೇಧಿಸಬೇಕೆಂಬ ಮಹಿಳೆಯರ ಆಗ್ರಹಗಳಿಗೆ ನಿಮ್ಮ ನಿಲುವೇನು?” ಎಂದು ಪ್ರಶ್ನಿಸಿದಾಗ, “ಈ ಪ್ರಶ್ನೆ ಎದುರಾದಾಗ- ಸರ್ಕಾರಗಳು ನಡೆಯುತ್ತಿರುವುದೇ ಮದ್ಯ ಮಾರಾಟದಿಂದ ಎಂಬ ಉತ್ತರಗಳು ಬರುತ್ತವೆ. ಪರ್ಯಾಯ ಆದಾಯ ಮೂಲಗಳನ್ನು ವೃದ್ಧಿಸಿಕೊಂಡು ಆನಂತರದಲ್ಲಿ ಮದ್ಯವನ್ನು ನಿಷೇಧಿಸಿದರೆ ತೊಂದರೆಯಿಲ್ಲ.  ಆಗ ಮತ್ತಷ್ಟು ಮಾನವ ಸಂಪನ್ಮೂಲ ಉಳಿಯುತ್ತದೆ. ಏಕಾಏಕಿ ಮುಚ್ಚಿದರೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದು ತಿಳಿಸಿದರು.

’ನಾ ನಾಯಕಿ’ ಸಂಯೋಜಕಿ ಅಕ್ಕಯ್ ಮನದ ಮಾತು

’ನಾ ನಾಯಕಿ’ ಕಾರ್ಯಕ್ರಮದ ರಾಜ್ಯ ಸಂಯೋಜಕಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಿಟ್ಟ ದನಿಯೂ ಆಗಿರುವ ಅಕ್ಕಯ್ ಪದ್ಮಶಾಲಿಯವರು ಮಾತನಾಡಿ, “ಪೌರತ್ವ ತಿದ್ದುಪಡಿ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ, ನೋಟು ಅಮಾನ್ಯೀಕರಣ, ಬೆಲೆ ಏರಿಕೆ ಮೊದಲಾದ ಸಮಸ್ಯೆಗಳಿಂದ ಹೆಣ್ಣುಮಕ್ಕಳ ಬದುಕು ಆತಂಕಕ್ಕೆ ದೂಡಲ್ಪಟ್ಟಿದೆ. ಹೆಣ್ಣುಮಕ್ಕಳ ಕೈಯಲ್ಲಿ ದುಡ್ಡಿಲ್ಲದಿದ್ದರೆ ಸಂಸಾರವೇ ನಡೆಯುವುದಿಲ್ಲ. ಹೀಗಾಗಿ ಕಾಂಗ್ರೆಸ್ ಘೋಷಿಸಿರುವ ಕಾರ್ಯಕ್ರಮ ಮಹತ್ವದ್ದಾಗಿದೆ” ಎಂದರು. “ಶಾಸನ ಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿ ಎಂದು ಕಾಂಗ್ರೆಸ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕೆ ಗಮನ ಹರಿಸುತ್ತಿಲ್ಲ?” ಎಂದು ಪ್ರಶ್ನಿಸಿದರು.

“ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಈ ಚುನಾವಣೆಯಲ್ಲಿ ಮಹಿಳೆಯರಿಗೆ ಎಷ್ಟು ಟಿಕೆಟ್ ನೀಡಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಸಾವಿರಕ್ಕೂ ಹೆಚ್ಚು ಅಪ್ಲಿಕೇಷನ್‌ಗಳು ಬಂದಿದ್ದು, ಮಹಿಳೆಯರ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.

ಅಕ್ಕಯ್ ಪದ್ಮಶಾಲಿ

ಲೈಂಗಿಕ ಅಲ್ಪಸಂಖ್ಯಾತರ ಬದುಕಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂಬ ಪ್ರಸ್ತಾವನೆಗಳನ್ನು ಇಟ್ಟಿರುವ ಬಗ್ಗೆ ಅಕ್ಕಯ್ ವಿವರಿಸಿದರು. “ಸುಪ್ರೀಂ ಕೋರ್ಟ್ ಭಾರತೀಯ ದಂಡಸಂಹಿತೆಯ 377 ಸೆಕ್ಷನ್‌ಗೆ ಸಂಬಂಧಿಸಿದಂತೆ ಮಹತ್ತರವಾದ ತೀರ್ಪು ನೀಡಿದೆ. ಹೀಗಾಗಿ ಈ ಸೆಕ್ಷನ್‌ಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ವಿಧೇಯಕವನ್ನು ತರಬೇಕೆಂದು ಪ್ರಸ್ತಾಪಿಸಿದ್ದೇವೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಕಲ್ಯಾಣ ಮಂಡಳಿಯನ್ನು ರಚನೆ ಮಾಡಬೇಕೆಂಬುದು ಎರಡನೇ ವಿಷಯವಾಗಿದೆ. ಇದರ ಜೊತೆಗೆ ಈ ಸಮುದಾಯದ ಜನಕ್ಕೆ ಮನೆ, ಮೂಲಭೂತ ಸೌಕರ್ಯವನ್ನು ಸಮರ್ಪಕವಾಗಿ ಒದಗಿಸುವ ಗುರಿಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೊಂದಬೇಕೆಂದು ಚರ್ಚೆಗಳು ನಡೆಯುತ್ತಿವೆ” ಎಂದು ತಿಳಿಸಿದರು.

ಮಹಿಳೆಯರು ವೋಟ್ ಬ್ಯಾಂಕ್ ಆಗುತ್ತಾರೆಯೇ?

“ರಾಜಕೀಯ ಪಕ್ಷಗಳು ಚುನಾವಣೆ ಹೊಸ್ತಿಲಲ್ಲಿ ನೀಡುವ ಇಂತಹ ಭರವಸೆಗಳಿಂದಾಗಿ ಮಹಿಳೆಯರು ವೋಟ್‌ಬ್ಯಾಂಕ್ ಆಗುತ್ತಾರೆಯೇ?” ಎಂಬ ಪ್ರಶ್ನೆ ಸಹಜ. ರಾಜಕೀಯ ವಿಶ್ಲೇಷಕರ ಪ್ರಕಾರ, “ಒಂದು ಪಕ್ಷವನ್ನು ದೃಢವಾಗಿ ಬೆಂಬಲಿಸುವ ಮತದಾರರು, ಅತ್ತಿತ್ತ ಚದುರಬಲ್ಲ ಮತದಾರರು ಸಾಮಾನ್ಯವಾಗಿ ಇರುತ್ತಾರೆ. ಈಗಾಗಲೇ ಕಾಂಗ್ರೆಸ್ ಮೇಲೆ ಭರವಸೆ ಇಟ್ಟುಕೊಂಡಿರುವ ಮಹಿಳಾ ಮತದಾರರು ಮತ್ತಷ್ಟು ಗಟ್ಟಿಯಾಗಿ ಕಾಂಗ್ರೆಸ್ ಜೊತೆ ನಿಲ್ಲಬಹುದು, ಆದರೆ ಬಿಜೆಪಿ ಜೊತೆಯಲ್ಲಿ ಸಾಂಪ್ರದಾಯಿಕವಾಗಿ ಗುರುತಿಸಿಕೊಂಡವರು ಈ ಆಶ್ವಾಸನೆಗಳ ಕಾರಣಕ್ಕಾಗಿ ಬದಲಾಗುತ್ತಾರೆಂದು ಹೇಳಲಾಗದು. ಶ್ರಮಿಕ ವರ್ಗವನ್ನು ಗೃಹಲಕ್ಷ್ಮಿ ಯೋಜನೆ ಪ್ರಭಾವಿಸುವ ಸಾಧ್ಯತೆ ಇದೆ.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...