Homeಮುಖಪುಟಒಳಮೀಸಲಾತಿ: ಬೆಂಕಿಯಾಗಲೊಲ್ಲದ ಬೆಳಕು - ಡಾ.ರವಿಕುಮಾರ್ ನೀಹ

ಒಳಮೀಸಲಾತಿ: ಬೆಂಕಿಯಾಗಲೊಲ್ಲದ ಬೆಳಕು – ಡಾ.ರವಿಕುಮಾರ್ ನೀಹ

ಸ್ಪಷ್ಟ ದಾರಿಯಲ್ಲಿ ಸಾಗಬೇಕಾದ ಚರ್ಚೆಯನ್ನು ಯಾವ ಯಾವುದೋ ವಿಚಾರದ ಮೂಲಕ ಒಳಮೀಸಲಾತಿಯನ್ನು ಅಪ್ರಸ್ತುತ, ಅವೈಜ್ಞಾನಿಕ, ಅಸಂವಿಧಾನಾತ್ಮಕ ಎಂಬಿತ್ಯಾದಿ ಮೂಲಕ ದೂರವಿಡುವ ಹುನ್ನಾರ ನಡೆಯುತ್ತಿದೆ.

- Advertisement -
- Advertisement -

ಮೂರು ದಶಕಗಳ ಹೋರಾಟದ ಒಳ ಮೀಸಲಾತಿ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ನ್ಯಾಯದ ಪ್ರಶ್ನೆಗಳು ಈಗ ಮತ್ತೊಮ್ಮೆ ನಿಕಷಕ್ಕೆ ಒಡ್ಡುತ್ತಿವೆ. ಮೀಸಲಾತಿ ಮತ್ತು ಒಳಮೀಸಲಾತಿ ಅಂಶಗಳು ಈ ನೆಲದ ಸಾಮಾಜಿಕ ಸಮಾನತೆಯನ್ನು ತರುವ ಹಂಬಲ ಧರಿಸಿರುವವು. ಯಾವ ಸಮುದಾಯಗಳು ಸಾಮಾಜಿಕ ಅಸಮಾನತೆಗೆ, ಅವಮಾನಕ್ಕೆ ಒಳಗಾಗಿವೆಯೋ ಅವುಗಳಿಗೆ ಸಾಮಾಜಿಕ ಘನತೆಯನ್ನು ತರುವ ಉದ್ದೇಶ ಈ ಮೀಸಲಾತಿ ಮತ್ತು ಒಳಮೀಸಲಾತಿಗಳ ಹಿಂದೆ ಕೆಲಸ ಮಾಡಿದೆ. ಈಗಿನ ಒಳಮೀಸಲಾತಿಯೂ ಅನೇಕ ಚರ್ಚೆಗಳನ್ನು, ಕೂಡಲಾಗದ ಸಂವಾದಗಳನ್ನೂ ಹುಟ್ಟುಹಾಕಿದೆ.

೧.ಇದು ದಲಿತರ ಒಗ್ಗಟ್ಟನ್ನು ಒಡೆಯುತ್ತದೆ.
೨.ಜೇನುಗೂಡಿಗೆ ಕಲ್ಲು ಹೊಡೆದಂತೆ
೩.ಅಂಕಿ ಅಂಶಗಳು ಪೂರ್ಣವಾಗಿ ನಂಬಲಾಗುವುದಿಲ್ಲ.
೪.ಒಂದು ನಿರ್ದಿಷ್ಟ ಜಾತಿಗೆ ಸೀಮಿತವಾಗಿ ಈ ಆಯೋಗ ವರದಿ ಸಲ್ಲಿಸಿದೆ.
೫.ಮಾದಿಗ ಜಾತಿಯವರು ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಫಲಾನುಭವಿಗಳು ಅವರು ಮಾತ್ರ.
೬.ಇದು ಸಂವಿಧಾನ ವಿರೋಧಿಯಾದುದು. ಸಂವಿಧಾನದ ಉಲ್ಲಂಘನೆ.
೭.ಅಸ್ಪೃಶ್ಯ ಮತ್ತು ಸ್ಪೃಶ್ಯ ಎಂದು ವಿಭಾಗಿಸಿ ಸ್ಪೃಶ್ಯರನ್ನು ಮೀಸಲಾತಿಯಿಂದ ಹೊರಗಿಡುತ್ತದೆ.
೮.ಇದು ಕೆನೆಪದರದ ಅಂಶಗಳನ್ನು ಒಳಗೊಂಡಿದೆ.
೯.ಮುಂದುವರಿದು ಇದು ಮೀಸಲಾತಿಯನ್ನೇ ತೆಗೆದುಹಾಕುವ ಗುಪ್ತ ಅಜೆಂಡವನ್ನು ಒಳಗೊಂಡಿದೆ.
೧೦.ಈ ದಿನಗಳಲ್ಲಿ ಮೀಸಲಾತಿಯೇ ಅಪ್ರಸ್ತುತಗೊಳ್ಳುತ್ತಿದೆ ಅಂಥ ಹೊತ್ತಿನಲ್ಲಿ ಒಳಮೀಸಲಾತಿ ಕೇಳುವುದು ಹಾಸ್ಯಾಸ್ಪದ.
೧೧.ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಲು ಮೊದಲು ಹೋರಾಟ ಮಾಡಬೇಕು.
೧೨.ಒಳಮೀಸಲಾತಿಗಿಂತ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಮೊದಲು ಹೋರಾಟಬೇಕು..

ಇನ್ನು ಮುಂತಾದ ವಿಷಯಗಳು ಇಂದು ಚರ್ಚೆಯಾಗುತ್ತಿವೆ. ಇವು ಒಳಮೀಸಲಾತಿಯ ಹೋರಾಟವನ್ನು ವ್ಯಂಗ್ಯಮಾಡುವುದೋ, ಹೋರಾಟದ ದಾರಿಯನ್ನು ದಿಕ್ಕು ತಪ್ಪಿಸುವ ತಂತ್ರವೊ ಅರಿವಾಗುತ್ತಿಲ್ಲ. ಸ್ಪಷ್ಟ ದಾರಿಯಲ್ಲಿ ಸಾಗಬೇಕಾದ ಚರ್ಚೆಯನ್ನು ಯಾವ ಯಾವುದೋ ವಿಚಾರದ ಮೂಲಕ ಒಳಮೀಸಲಾತಿಯನ್ನು ಅಪ್ರಸ್ತುತ, ಅವೈಜ್ಞಾನಿಕ, ಅಸಂವಿಧಾನಾತ್ಮಕ ಎಂಬಿತ್ಯಾದಿ ಮೂಲಕ ದೂರವಿಡುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಪಡೆಯೇ ನಿರ್ಮಾಣವಾಗಿದೆ. ಈ ಒಳಮೀಸಲಾತಿಯಿಂದ ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಅನುಕೂಲಕರ ಎಂಬಂತೆ ಪ್ರಚಾರ ಮಾಡಿ ಒಳಮೀಸಲಾತಿಯ ಉದ್ದೇಶವನ್ನೇ ಮೂಲೆಗುಂಪಾಗಿಸುವ ಕುತಂತ್ರಗಳು ನಡೆಯುತ್ತಿವೆ.

ಈ ಒಳಮೀಸಲಾತಿಯನ್ನು ಅಪ್ರಸ್ತುತ/ಅಸಂವಿಧಾನಿಕ ಎಂದು ಹೇಳಲು ಉಲ್ಲೇಖಿಸುವುದು ೨೦೦೪ರ ಸುಪ್ರೀಂಕೋರ್ಟು ತೀರ್ಪುನ್ನು. ೨೦೦೦ರಲ್ಲಿ ಆಂಧ್ರಪ್ರದೇಶ ಸರ್ಕಾರ ರೂಪಿಸಿದ ಆಂಧ್ರಪ್ರದೇಶ ಪರಿಶಿಷ್ಟಜಾತಿ ೨೦೦೦ರ ಕಾಯ್ದೆಯನ್ನು ಆಂಧ್ರಪ್ರದೇಶದ ೦೫ ಸದಸ್ಯರ ಹೈಕೋರ್ಟ್ ಪೀಠವು ಊರ್ಜಿತಗೊಳಿಸಿತು. ಈ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಸುಪ್ರೀಂಕೋರ್ಟಿನ ಮೂರು ಜನ ನ್ಯಾಯಮೂರ್ತಿಗಳಾದ ಡಾ.ಸಂತೋಷ ಹೆಗ್ಡೆ, ಸಿನ್ಹಾ, ಸೀಮಾರವರು ೨೦೦೪ರಲ್ಲಿ ಏಕಾಭಿಪ್ರಾಯವುಳ್ಳ ತೀರ್ಪನ್ನು ನೀಡಿದರು. ಅದು ವ್ಯಾಪಕ ಚರ್ಚೆಯೂ ಆಯಿತು. ಈ ತೀರ್ಪು ಸುಪ್ರೀಂಕೋರ್ಟು ಮುಂದೆ ದಲಿತರ ಒಳ ವರ್ಗೀಕರಣದ ಮೀಸಲಾತಿಗೆ ಸಂಬಂಧಿಸಿದಂತೆ ಮತ್ತಷ್ಟು ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಂಕೀರ್ಣತೆಯನು ಸೃಷ್ಟಿಸಿತು. ಈ ತೀರ್ಪು ಮೂರು ಮುಖ್ಯ ಪ್ರಶ್ನೆಗಳ ಆಧಾರದ ಮೇಲೆ ’ಆಂಧ್ರಪ್ರದೇಶ ಪರಿಶಿಷ್ಟಜಾತಿಗಳ-೨೦೦೦ ಕಾಯ್ದೆ’ಯನ್ನು ಅಸಂವಿಧಾನವೆಂದು ಹೇಳಿತು. ಅವು

೧.ಆಂಧ್ರಪ್ರದೇಶ ಪರಿಶಿಷ್ಟ ಜಾತಿ-೨೦೦೦ರ ಕಾಯ್ದೆಯು ಸಂವಿಧಾನದ ವಿಧಿ ೩೪೧(೨)ನ್ನು ವಿರೂಪಗೊಳಿಸಬಹುದು.
೨.ಈ ಆಕ್ಷೇಪಣಾರ್ಹ ಕಾಯ್ದೆಯು ಯಾವುದೇ ಕಾನೂನಿನಾತ್ಮಕ ಸಮರ್ಥನೆಗಳಿಲ್ಲದೆ ದುರ್ಬಲವಾಗಿದೆ.
೩.ಈ ಆಕ್ಷೇಪಣಾರ್ಹ ಕಾಯ್ದೆಯು ಪರಿಶಿಷ್ಟಜಾತಿಗಳ ಉಪ-ವರ್ಗೀಕರಣ ಅಥವಾ ಸೂಕ್ಷ್ಮ ವರ್ಗೀಕರಣವನ್ನು ಸೃಷ್ಟಿಸಿ ಭಾರತದ ಸಂವಿಧಾನದ ೧೪ನೇ ವಿಧಿಯನ್ನು ಉಲ್ಲಂಘಿಸಬಹುದು.ಎಂಬ ಅಂಶಗಳನ್ನು ಇಟ್ಟುಕೊಂಡು ಒಳಮೀಸಲಾತಿ ವಿರುದ್ಧವಾದ ತೀರ್ಪು ನೀಡಿತು. ಇದು ೩೪೧ ವಿಧಿಯ ಉಲ್ಲಂಘನೆ ಎಂಬುದು ತಪ್ಪಾದ ಆಲೋಚನೆ ಎಂಬುದನ್ನು ಇತ್ತೀಚೆಗೆ ಬಂದ ತೀರ್ಪು ಹೇಳಿದೆ.

೨೦೨೦ ಆಗಸ್ಟ್ ೨೭ರಂದು ಅರುಣ್‌ಕುಮಾರ್ ಮಿಶ್ರಾ ಅವರ ನೇತೃತ್ವದ ಐವರು ನ್ಯಾಯಾದೀಶರ ಪೀಠವು the state of panjab and ors vs davinder singh and ors (civil appeal no 2317 of 2011) ಪ್ರಕರಣದಲ್ಲಿ ೭೮ ಪುಟಗಳ ತೀರ್ಪನ್ನು ನೀಡಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯ ಒಳ ವರ್ಗೀಕರಣ ಮತ್ತು ಈವರೆಗೆ ಮೀಸಲಾತಿಯಿಂದ ಹೆಚ್ಚಿನ ಲಾಭ ಪಡೆಯದ ಪರಿಶಿಷ್ಟ ಜಾತಿಗಳಿಗೆ ಆಧ್ಯತೆಯನ್ನು ಒದಗಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದರ ಜೊತಗೆ ಮತ್ತಷ್ಟು ಗೊಂದಲಗಳನ್ನು ಹುಟ್ಟಿಹಾಕಿದೆ. ಮೊದಲನೆಯದು ಇಲ್ಲಿಯವರೆಗೂ ಒಳಮೀಸಲಾತಿ ಹೋರಾಟಗಳನ್ನು ಮಾಡಿಕೊಂಡು ಬಂದ ರಾಜ್ಯಗಳು ಪ್ರಧಾನವಾಗಿ ಜನಸಂಖ್ಯೆಯನ್ನು ಮುಂದಿಟ್ಟುಕೊಂಡು ನಮ್ಮ ಪಾಲು ನಮಗೆ ಕೊಡಿ ಎಂದಿದ್ದವು. ಆದರೆ ಈ ತೀರ್ಪು ಜನಸಂಖ್ಯೆಯ ಬಗೆಗೆ ಚಕಾರ ಎತ್ತಿಲ್ಲ. ಎರಡನೆಯದಾಗಿ ಅನಗತ್ಯವಾಗಿ ಕೆನೆಪದರದ ಚರ್ಚೆಯನ್ನು ಹುಟ್ಟುಹಾಕಿರುವುದು. ಮೂರನೆಯದು ಪ್ರಸ್ತುತದಲ್ಲಿ ಮೀಸಲಾತಿ ಅಗತ್ಯವೇ ಎಂಬಂತೆ ಮಾತನಾಡಿರುವುದು. ಈ ಮೂರು ಅಂಶಗಳು ಒಳಮೀಸಲಾತಿ ಚರ್ಚೆಯನ್ನೇ ದಿಕ್ಕು ತಪ್ಪಿಸುತ್ತಿವೆ.

ಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

೨೦೦೪ರಿಂದ ಇಲ್ಲಿಯವರೆಗೆ ಬೇರೆ ಬೇರೆ ರಾಜ್ಯಗಳ ಒಳಮೀಸಲಾತಿ ವಿಚಾರದಲ್ಲಿ ಅಫೀಲ್‌ಗಳಿದ್ದರೂ ಈ ೨೦೨೦ ಆಗಸ್ಟ್ ೨೭ರ ತೀರ್ಪು ಮಹತ್ವದ್ದು. ಮತ್ತು ಅಷ್ಟೇ ಅಸ್ಪಷ್ಟತೆಯಿಂದ ಕೂಡಿದೆ. ಹಂಚುಣ್ಣುವ ವಿಚಾರದಲ್ಲಿ ೫ ಜನರೂ ಏಕಾಭಿಪ್ರಾಯದಿಂದ ತೀರ್ಪು ನೀಡಿದ್ದರೂ, ಸಾಮಾಜಿಕ ನ್ಯಾಯದ ನಿಲುವನ್ನು ಪ್ರಕಟಿಸಿದ್ದರೂ ಅದನ್ನು ಆದೇಶವಾಗಿ ಪ್ರಕಟಿಸದೆ ಮುಂದಿನ ಏಳು ಜನರ ಪೀಠಕ್ಕೆ ವರ್ಗಾಯಿಸಿದ್ದು ಅನುಮಾನಸ್ಪದವಾಗಿದೆ. ಈ ಸಮಸ್ಯೆಯನ್ನು ಮತ್ತೆ ಜೀವಂತಗೊಳಿಸಿ ಮತ್ತಷ್ಟು ವರ್ಷಗಳ ಕಾಲ ಮುಂದೂಡುವ ’ನಿಧಾನ ಗತಿ’ಯ ನಡೆಯನ್ನು ಆಂತರ್ಯದಲ್ಲಿ ಒಳಗೊಂಡಿರುವುದು ಎದ್ದು ಕಾಣುತ್ತಿದೆ. ಮತ್ತೆ ಇನ್ನೆಷ್ಟು ಕಾನೂನಾತ್ಮಕವಾಗಿ ಕಾಯಬೇಕೋ. ಆದರೆ ಮುಳುಗುತ್ತಿರುವವನಿಗೆ ಒಂದು ಹುಲ್ಲುಗರಿ ಸಿಕ್ಕಂತೆ ಆಗಿದೆ ಈ ತೀರ್ಪು. ಹಾಗಾಗಿ ಈ ತೀರ್ಪು ಒಳಮೀಸಲಾತಿ ವಿಚಾರದಲ್ಲಿ ಚಾರಿತ್ರಿಕವಾದುದು.

ನಡೆದ ದಾರಿ

ಈ ಹೋರಾಟಕ್ಕೆ ದೀರ್ಘ ಇತಿಹಾಸವಿದೆ. ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯಿದೆ. ಪರಿಶಿಷ್ಟ ಜಾತಿಯೊಳಗಿನ ಬಲಿಷ್ಠರು ಎಲ್ಲ ಸವಲತ್ತುಗಳನ್ನು ಕಬಳಿಸತೊಡಗಿದಾಗ ಈ ಹೋರಾಟ ತೀವ್ರಗೊಳ್ಳತೊಡಗಿತು. ಈಗ ಬಳಕೆಯಲ್ಲಿರುವ ಪರಿಶಿಷ್ಟ ಜಾತಿಗಳ ಮೀಸಲಾತಿಯು ಅತೃಪ್ತಿ ಮತ್ತು ಅಸಮಾಧಾನದಿಂದ ಕೂಡಿದ್ದು. ಬಲಿಷ್ಟರೇ ಅದರ ಫವನ್ನು ಉಣ್ಣುತ್ತಿದ್ದಾರೆ, ಪರಿಶಿಷ್ಟ ಜಾತಿಗಳನ್ನು ಒಂದೇ ಗುಂಪಿನಲ್ಲಿ ಗುರುತಿಸಿರುವುದರಿಂದ ಅದರೊಳಗಿನ ಇತರ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹಾಗಾಗಿ ಮೀಸಲಾತಿ ಎಲ್ಲರಿಗೂ ದಕ್ಕಬೇಕು ಎಂಬ ಆಶಯದೊಂದಿಗೆ ಒಳಮೀಸಲಾತಿ ಹೋರಾಟ ಶುರುವಾಯಿತು. ಈ ಹೋರಾಟ ರೂಪುಗೊಳ್ಳಲು ಪ್ರಧಾನ ಕಾರಣ ಪರಿಶಿಷ್ಟ ಜಾತಿ ಗುಂಪಿನಲ್ಲಿರುವ ೧೦೧ ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ ಎಂಬುದಾಗಿತ್ತು. ಈ ಕೂಗು ಕೇವಲ ಕರ್ನಾಟಕವಲ್ಲದೇ ಭಾರತದ ಇತರೇ ರಾಜ್ಯಗಳಲ್ಲೂ ಎದ್ದಿತು. ಮಹಾರಾಷ್ಟ್ರದಲ್ಲಿ ಮಹರ್ ಮತ್ತು ಮಾತಂಗರ ನಡುವೆ, ಆಂಧ್ರಪ್ರದೇಶದಲ್ಲಿ ಮಾಲಾಸ್ ಮತ್ತು ಮಾದಿಗರ ನಡುವೆ, ಪಂಜಾಬಿನಲ್ಲಿ ಚಮ್ಮಾರ ಮತ್ತು ಭಂಗಿಗಳ ನಡುವೆ, ಬಿಹಾರದಲ್ಲಿ ದಲಿತ ಮತ್ತು ಮಹಾದಲಿತರ ನಡುವಿನ ಮುಂತಾದ ಸಂಘರ್ಷಗಳು ಇದರ ಹಿನ್ನೆಲೆಯಲ್ಲಿವೆ.

ಕರ್ನಾಟಕದಲ್ಲಿ ಅಸ್ಪೃಶ್ಯಜಾತಿಯಾದ ಮಾದಿಗ ಸಮುದಾಯವು ತಡವಾಗಿ ಎಚ್ಚೆತ್ತುಕೊಂಡು ಒಳಮೀಸಲಾತಿ ಹೋರಾಟಕ್ಕೆ ಇಳಿಯಿತು. ೧೯೯೯ರಿಂದ ಹೋರಾಟಕ್ಕೆ ಕಾವು ತುಂಬತೊಡಗಿತು. ಇದರ ಪರಿಣಾಮವಾಗಿ ೨೦೦೫ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ರವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ಸಂವಿಧಾನದ ೧೫ ಮತ್ತು ೧೬ನೇ ಅನುಚ್ಚೇದಗಳ ಅನುಸಾರ ನೀಡಲಾಗುವ ಮೀಸಲಾತಿ ಸವಲತ್ತುಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಯಾವ ಅಂಶಗಳಲ್ಲಿ ತಾರತಮ್ಯವಾಗಿದೆಯೋ ಅದನ್ನು ಪರಿಶೀಲಿಸುವಂತೆ ಆಯೋಗಕ್ಕೆ ನಿರ್ದೇಶಿಸಿತು. ಈ ಆಯೋಗ ಸರಿಸುಮಾರು ಆರೂವರೆ ವರ್ಷಗಳ ಕಾಲ ವಿಚಾರಣೆ, ಸಮೀಕ್ಷೆಗಳನ್ನು ನಡೆಸಿ ಅಂಕಿಅಂಶಗಳ ಮೂಲಕ ಜೂನ್ ೨೦೧೨ರಲ್ಲಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ವರದಿ ಸಲ್ಲಿಕೆಯಾಗಿ ಎಂಟೂವರೆ ವರ್ಷವಾದರೂ ಇನ್ನು ಅದನ್ನು ಸದನದಲ್ಲಿ ಚರ್ಚಿಸಿಲ್ಲ, ಬಹಿರಂಗ ಚರ್ಚೆಗೆ ಬಿಟ್ಟಿಲ್ಲ. ಹಾಗೇ ನೋಡಿದರೆ ಚರ್ಚೆಯ ಅಗತ್ಯವಿಲ್ಲ. ಇತರೆ ಆಯೋಗಗಳ ವರದಿಯನ್ನು ಯಾವುದೇ ಚರ್ಚೆಯಿಲ್ಲದೇ ಒಪ್ಪಿಕೊಳ್ಳಬಹುದು. ಮೇಲ್ಜಾತಿಗಳ ೧೦% ಮೀಸಲಾತಿಯನ್ನು ಯಾವುದೇ ತಕರಾರಿಲ್ಲದೇ ಒಪ್ಪಿಕೊಳ್ಳಬಹುದು. ಶತಮಾನಗಳಿಂದ ಶೋಷಿತರಾದವರ ಹಕ್ಕುಗಳನ್ನು ನೀಡಲು ಚರ್ಚೆಯಾಗಬೇಕು ಎಂದು ಮಂಡಿಸುವುದು ಅಮಾನವೀಯವಲ್ಲದೇ ಮತ್ತೇನೂ ಅಲ್ಲ. ಜಾರಿ ಮಾಡಿ ಆ ಮೂಲಕ ತಳ ಸಮುದಾಯಗಳ ಬದುಕನ್ನು ಹಸನುಗೊಳಿಸಬೇಕಾಗಿದೆ. ಅವರ ಮೇಲೆ ನಡೆಯುವ ಶೋಷಣೆಯನ್ನು ಕೊನೆಗಾಣಿಸಬೇಕಾಗಿದೆ.

ಕರ್ನಾಟಕದಲ್ಲಿನ ಒಳಮೀಸಲಾತಿ ಸಂಕೀರ್ಣತೆ

ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮಾತ್ರ ಈ ಒಳಮೀಸಲಾತಿ ವಿವರಣೆ ಬೇರೆಯಾಗಿದೆ. ಒಳ ಮೀಸಲಾತಿಯ ಪ್ರಶ್ನೆ ಬೇರೆ ರಾಜ್ಯಗಳಂತೆ ಏಕರೂಪಿಯಾಗಿಲ್ಲ. ಬೇರೆ ರಾಜ್ಯಗಳಲ್ಲಿ ಎರಡು ಸಮುದಾಯಗಳು ಮಾತ್ರ ಎದುರು-ಬದುರು ನಿಲ್ಲುತ್ತವೆ. ಅದು ಮಾಲಾ-ಮಾದಿಗ, ಮಹರ್-ಮಾತಂಗ ಹೀಗೆ ಸಾಗಿದೆ. ಇವೆರಡರ ನಡುವೆ ಹಂಚಿದರೆ ಒಳಮೀಸಲಾತಿ ಆಯಾ ರಾಜ್ಯಗಳಲ್ಲಿ ಬಗೆಹರಿದಂತೆ. ಜನಸಂಖ್ಯೆ ಆಧಾರಿತವಾಗಿ ಅವರ ಪಾಲನ್ನು ಹಂಚಿಕೆ ಮಾಡಿದರೆ ಮುಗಿಯುತ್ತದೆ. ಆದರೆ ಕರ್ನಾಟಕದಲ್ಲಿ ಇಷ್ಟು ಸುಲಭವಾಗಿಲ್ಲ.

ಕರ್ನಾಟಕದಲ್ಲಿ ಒಳಮೀಸಲಾತಿ ಮೂರು ರೀತಿಯಲ್ಲಿ ಒಡೆದುಕೊಂಡಿದೆ. ಮೊದಲನೆಯದು ಹೊಲೆಯ-ಮಾದಿಗರ ಹಂಚಿಕೆಯ ಸಮಸ್ಯೆ. ಈ ಎಡ-ಬಲದ ಸಮಸ್ಯೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮಸ್ಯೆಯಾಗಿ ನಮ್ಮ ಮುಂದೆ ಭೂತಾಕಾರವಾಗಿ ನಿಂತಿದೆ. ಎಡ-ಬಲಗಳು ಒಂದಾಗದೆ ಈ ಹೋರಾಟ ಕೊನೆಗೊಳ್ಳಲು ಸಾಧ್ಯವಿಲ್ಲ. ಇದರಿಂದ ದಲಿತರ ಒಗ್ಗಟ್ಟು ಒಡೆಯುತ್ತದೆ ಎಂದು ಭಾವಿಸಿದರೆ ಹೊಲೆಯ-ಮಾದಿಗ ನಡುವೆ ಮತ್ತಷ್ಟು ಅನುಮಾನಗಳು ಕಂದಕಗಳು ಉಲ್ಬಣಗೊಳ್ಳಬಹುದು.

ಎರಡನೆಯದು ಈ ಎಡ-ಬಲಗಳೆರಡೂ ಒಂದೇ ಜಾತಿಯ ಹೆಸರಲ್ಲಿ ಗುರುತಿಸಿಕೊಂಡಿರುವುದು. ಉದಾಹರಣೆ: A.K ಮತ್ತು A.D ಎಂದು ಪ್ರದೇಶವಾರು ಬದಲಾಗಿರುವುದು. ಮೂಲ ಜಾತಿಗಳನ್ನು ಗುರುತಿಸುವಲ್ಲಿ ಪ್ರದೇಶವಾರು ಅರಿವಿದ್ದರೂ ಅಂಕಿಅಂಶಗಳಲ್ಲಿ ಖಚಿತತೆ ಇಲ್ಲವೆಂದು ವಾದಿಸಬಹುದು. ಇದನ್ನು ಬಗೆಹರಿಸದೇ ಹಂಚಿಕೆ ಕಷ್ಟ. ಇದಕ್ಕಾಗಿ ಅನೇಕ ಹೋರಾಟ ಚಳುವಳಿಗಳು ರೂಪಗೊಂಡಿದ್ದರೂ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಸರಳವಾಗಿ ನೀಗಬಹುದಾಗಿದ್ದ ಸಮಸ್ಯೆ ಬೃಹದಾಕಾರವಾಗಿ ಬೆಳೆದುನಿಂತಿದೆ. ಈಗಲೂ ಹೊಲೆಯ-ಮಾದಿಗ ಎಂದು ಜನಬಳಕೆಯಿದ್ದರೂ ಜಾತಿ ಪ್ರಮಾಣ ಪತ್ರಗಳನ್ನು A.K, A.D ಎಂದೇ ನೀಡಲಾಗುತ್ತಿದೆ.

ಮೂರನೆಯದು ತುಂಬಾ ಮುಖ್ಯವಾದುದು ಎಡ-ಬಲಗಳು ಹೇಗೋ ಹೊಂದಿಕೆಗೆ ಬಂದರೂ ಪರಿಶಿಷ್ಟಜಾತಿಗಳಲ್ಲಿ ಸೇರಿಕೊಂಡಿರುವ ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳ ನಡುವಿನ ಸಮಸ್ಯೆ. ಮೇಲ್ನೋಟಕ್ಕೆ ಕೇವಲ ಎಡ-ಬಲ ಸಂಘರ್ಷ ಎಂಬಂತೆ ಕಂಡರೂ ಇಲ್ಲಿ ಕಾಣುವುದು ಪರಿಶಿಷ್ಟ ಜಾತಿ ಗುಂಪಿನಲ್ಲಿರುವ ಅಸ್ಪೃಶ್ಯ ಮತ್ತು ಸ್ಪೃಶ್ಯ ಗುಂಪುಗಳ ನಡುವೆ. ಕರ್ನಾಟಕದಲ್ಲಿ ಅಸ್ಪೃಶ್ಯ ಜಾತಿಗಳಾದ ಮಾದಿಗ ಸಂಬಂಧಿತ ೫೩ ಜಾತಿಗಳು, ಹೊಲೆಯ ಸಂಬಂಧಿತ ೨೮ ಜಾತಿಗಳು, ಅಲೆಮಾರಿ ಅಸ್ಪೃಶ್ಯ ಜಾತಿಗಳು ಹಾಗೂ ಇತರೆ ೧೬ ಜಾತಿಗಳು ಮೂಲ ಅಸ್ಪೃಶ್ಯ ಜಾತಿಗಳಾಗಿವೆ. ಈ ಅಸ್ಪೃಶ್ಯ ಜಾತಿಗಳನ್ನೊಳಗೊಂಡ ಪರಿಶಿಷ್ಟ ಜಾತಿಗಳ ಗುಂಪಿಗೆ ಸ್ಪೃಶ್ಯ ಜಾತಿಗಳಾದ ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳು ಸೇರ್ಪಡೆಗೊಂಡಿವೆ. ಅಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿರುವ ಹೊಲೆಯರು ಈ ಮೊದಲು ಮೀಸಲಾತಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದರು. ಸ್ಪೃಶ್ಯರು ಸೇರ್ಪಡೆಯಾದ ನಂತರ ಹೊಲೆಯರನ್ನು ಓಲೈಸುತ್ತಿದ್ದ ಮೇಲ್ಜಾತಿ ನಾಯಕರು ತಮ್ಮ ಸಾಮಾಜಿಕ ಮತ್ತು ರಾಜಕೀಯ ಕಾರಣಕ್ಕಾಗಿ ಸ್ಪೃಶ್ಯ ಜಾತಿಗಳ ಕಡೆ ಹೊರಳಿಕೊಂಡರು. ಇದು ಲಾಭ-ನಷ್ಟದ ವಿಚಾರಕ್ಕಿಂತ ಕರ್ನಾಟಕದ ಮಟ್ಟಿಗೆ ದೊಡ್ಡ ಹಿಮ್ಮುಖ ಸ್ಥಿತ್ಯಂತರ. ಸಾಮಾಜಿಕ ನ್ಯಾಯದ ಅಧಃಪತನ. ಮೀಸಲಾತಿಯ ಮೂಲಭೂತ ಅಂಶವೇ ಬುಡಮೇಲು ಆದಂಥ ವಾತಾವರಣ.

ಬಹುಶಃ ಈ ಕಾರಣದಿಂದ ಒಳಮೀಸಲಾತಿ ಚಳುವಳಿ, ಹೋರಾಟಗಳು ತೀವ್ರಗೊಂಡರೂ ಯಾವುದೇ ರಾಜಕೀಯ ನಾಯಕರು ಅದರ ಬಗೆಗೆ ಸೊಲ್ಲೆತ್ತುತಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಈ ಹೋರಾಟ ಮುನ್ನೆಲೆಗೆ ಬರುತ್ತಲೇ ಇದೆ. ಕಳೆದ ಆಗಸ್ಟ್ ರಂದು ಕಾನೂನಾತ್ಮಕ ಬಲ ಬಂದದ್ದು ಮೂರು ದಶಕದ ಹೋರಾಟಕ್ಕೆ ಸಾರ್ಥಕ ಕ್ಷಣ. ಈಗ ಇದರ ಬಗೆಗೆ ಮಾತನಾಡಲೇ ಬೇಕು, ಜಾರಿಗೊಳಿಸಬೇಕು ಎಂಬ ಒತ್ತಡ ನಿರ್ಮಾಣವಾಗುತ್ತಿದೆ. ಈಗಲಾದರೂ ’ನಿಧಾನದ್ರೋಹ’ ಮಾಡಿರುವ ಸಾಂಪ್ರದಾಯಿಕ ಮನಸುಗಳು ಮಾನವೀಯ ಪರವಾಗಿ ಯೋಚಿಸಬೇಕಾಗಿದೆ.

ಮುಂದೆ….?

ಚನ್ನಯ್ಯ v/s ಆಂಧ್ರಪ್ರದೇಶ ಈ ತೀರ್ಪು ನಮ್ಮ ಕಣ್ಣು ಮುಂದಿರುವಾಗ ಬೇರೆಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಂಕೀರ್ಣವಾದ ಭಾವವನ್ನು ತಂದೊಡ್ಡಿದೆ. ಮುಖ್ಯವಾಗಿ ಬಲ ಸಮುದಾಯ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಡುವುದಿಲ್ಲ ಎಂಬ ವಾದ ಈ ಹೋರಾಟಕ್ಕೆ ಆತಂಕಕಾರಿಯಾಗಿತ್ತು. ಪರಸ್ಪರ ಅನುಮಾನಿತ ಈ ಎಡಬಲಗಳು ಒಳಮೀಸಲಾತಿಯ ವಿಚಾರದಲ್ಲಾದರೂ ಒಂದಾಗಬೇಕಾಗಿದೆ. ಕೈ ಜೋಡಿಸದ ಹೊರತು ಎರಡಕ್ಕೂ ಸಾಮಾಜಿಕ ನ್ಯಾಯದ ಅಂಶಗಳು ಗಗನ ಕುಸುಮವಾಗಲಿವೆ.

ಇದರ ಜತೆಗೆ ಈಗ ಜನಸಂಖ್ಯೆಯನ್ನು ಪ್ರಧಾನವಾಗಿ ಮಂಡಿಸಲಾಗುತ್ತಿದೆ. ಆದರೆ ಜನಸಂಖ್ಯೆ ಮೀಸಲಾತಿಯ ಮಾನದಂಡವಲ್ಲ. ಜನಸಂಖ್ಯೆಯ ಜತೆ ಸಾಮಾಜಿಕ ಸಂಕಟವನ್ನು ಒಳಮೀಸಲಾತಿ ಹಂಚಿಕೆಯಲ್ಲಿ ಗಮನಿಸಬೇಕು. ’ಒಳಮೀಸಲಾತಿ’ ಅಂಬೇಡ್ಕರ್ ಅವರನ್ನು ಪ್ರಸ್ತುತಗೊಳಿಸುವ ಕ್ರಮವೂ ಹೌದು. ಅವರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಆಧುನಿಕಗೊಳಿಸುವ ಕ್ರಮ ಈ ಒಳಮೀಸಲಾತಿ. ಕಟ್ಟಕಡೆಯ ಶೋಷಿತ ಸಮುದಾಯಕ್ಕೂ ಮೀಸಲಾತಿಯನ್ನು ತಲುಪಿಸುವ ದಾರಿಯೆಂದರೆ ಅದು ಒಳಮೀಸಲಾತಿ. ಈಗಾಗಿ ಒಳಮೀಸಲಾತಿಯನ್ನು ಜಾರಿಗೊಳಿಸುವುದು ಎಂದರೆ ಸಂವಿಧಾನವನ್ನು ಆಧುನಿಕ ಕಾಲಕ್ಕೆ ವಿಸ್ತರಿಸಿಕೊಳ್ಳುವುದು ಎಂದೇ ಅರ್ಥ.

ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಏ ಜೆ ಸದಾಶಿವ ಆಯೋಗ ಜಾರಿಯಾಗುತ್ತದೆ ಎಂಬ ನಂಬಿಕೆ ಕೊನೆವರೆಗೂ ಇತ್ತು. ಆದರೆ ಕ್ಷುಲ್ಲಕ ಕಾರಣಗಳನ್ನು ಒಡ್ಡಿ ಆ ಸರ್ಕಾರ ಕೈ ಚಲ್ಲಿತ್ತು. ಈಗ ಕೇಂದ್ರ ಮತ್ತು ರಾಜ್ಯಗಳೆಡರಲ್ಲೂ ಭಾಜಪವೇ ಅಧಿಕಾರದಲ್ಲಿರುವುದರಿಂದ ಕಾದು ನೋಡಬೇಕಾಗಿದೆ. ಈ ಹೋರಾಟವನ್ನು ತನ್ನ ರಾಜಕೀಯ ಒತ್ತಾಸೆಗಳಿಗಾಗಿ ಮಾತ್ರ ಬಳಸಿಕೊಳ್ಳುತ್ತದೆಯೋ ಅಥವಾ ನಿಜಕಾಳಜಿಯನ್ನು ತೋರಿಸುತ್ತದೆಯೋ ಎಂದು. ಬಳಸಿಕೊಂಡರೆ ಮೂರು ದಶಕದ ಹೋರಾಟ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗಾಗುತ್ತದೆ. ಭಾಜಪ ತನ್ನ ನಿರಂತರ ಅಧಿಕಾರಕ್ಕಾಗಿ ಅತಿ ಹೆಚ್ಚು ಜನಸಂಖ್ಯೆ ಇರುವ ಪರಿಶಿಷ್ಟರನ್ನು ಒಡೆಯುತ್ತಿದೆಯೋ? ಸಮಸ್ಯೆಯನ್ನು ಜೀವಂತವಾಗಿರಿಸಿ ಪರಿಶಿಷ್ಟರಲ್ಲಿ ಒಬ್ಬೊಬ್ಬರ ನಡುವೆ ಅನುಮಾನವನ್ನು ಹುಟ್ಟಿಸಿ ಅದರ ಲಾಭ ಪಡೆಯಲ್ಲಷ್ಟೇ ಯೋಚಿಸುತ್ತಿದೆಯೋ? ಎಂಬ ಅನುಮಾನಗಳು ಮೂಡುತ್ತಿವೆ. ಇತ್ತೀಚೆಗೆ ಆರೆಸೆಸ್ ರಂಗ ಪ್ರವೇಶ ಮಾಡಿದೆ. ಇದು ಏನನ್ನೂ ಸೂಚಿಸುತ್ತದೆಯೋ? ಮೀಸಲಾತಿಯನ್ನೇ ವಿರೋಧಿಸುವ ಆರೆಸ್ಸೆಸ್ ಇದನ್ನು ಹೇಗೆ ನಿಭಾಯಿಸುತ್ತದೆ? ಹೇಗೆ ತನ್ನೊಳಗೆ ಸ್ವೀಕರಿಸುತ್ತದೆ? ಎಂಬಿತ್ಯಾದಿ ಅನುಮಾನಗಳು ಮೂಡುತ್ತವೆ. ಬೆಂಕಿ ಮೇಲೆ ಕೂತ ಸಮುದಾಯಗಳಿಗೆ ಆದಷ್ಟು ಬೇಗ ಭಾಜಪ ಮತ್ತು ಆರೆಸ್ಸೆಸ್ ನಿಜವಾದ ಕಾಳಜಿಯನ್ನೂ, ನಿಲುವನ್ನು ಪ್ರಕಟಿಸಬೇಕಾಗಿದೆ.

ಜಗತ್ತಿನ ಎಲ್ಲ ಸಮಸ್ಯೆಗಳ ಬಗೆಗೆ ಮಾತನಾಡುವ ನಾಡಿನ ಸಾಕ್ಷಿಪ್ರಜ್ಞೆಗಳೆಲ್ಲ ಮೌನಮುದ್ರೆಯಿಂದ ಹೊರಬಂದು ಮಾತಾಡಬೇಕಾಗಿದೆ. ಈಗ ಆರೆಸೆಸ್‌ನ ರಂಗಪ್ರವೇಶಕ್ಕಿಂತ ಕೆಳಜಾತಿಗಳ ಸಾಮಾಜಿಕ ಸಂಕಟಗಳು ಮುನ್ನೆಲೆಗೆ ಬರಬೇಕಾಗಿವೆ. ಕಾಂಗ್ರೆಸ್ ಪರಿಶಿಷ್ಟ ಜಾತಿಗಳನ್ನು ತಮ್ಮ ಖಾಯಂ ವೋಟ್‌ಬ್ಯಾಂಕ್ ಆಗಿ ಮಾಡಿಕೊಂಡು ಇಲ್ಲಿಯವರೆಗೆ ಅನುಭವಿಸಿತ್ತೋ ಈಗ ವಿರೋಧ ಪಕ್ಷವಾಗಿ ತನ್ನ ನಿಲುವನ್ನು ಪ್ರಕಟಪಡಿಸಬೇಕಾಗಿದೆ. ಅದು ರಾಜಕಾರಣದ ರೂಪವಾಗಿರದೇ ತನ್ನ ನಿಜ ಕಾಳಜಿಯಾಗಬೇಕಾಗಿದೆ. ಆತಂಕದ ವಿಚಾರವೆಂದರೆ ಕಾಂಗ್ರೇಸ್‌ನ ಪೂರ್ವ ತಂತ್ರವನ್ನೇ ಭಾಜಪ ಈ ಒಳಮೀಸಲಾತಿ ವಿಚಾರದಲ್ಲಿ ಬಳಸಿಕೊಂಡು ತನ್ನ ಖಾಯಂ ವೋಟ್‌ಬ್ಯಾಂಕ್ ಆಗಿ ಮಾಡಿಕೊಳ್ಳುತ್ತದೆಯೋ? ಅಥವಾ ಪರಿಶಿಷ್ಟರಿಗೆ ಅನೇಕ ಕಾರಣಗಳನ್ನು ಒಡ್ಡಿ ಒಂದಷ್ಟು ಕಾಲ ಮೂಗಿನ ಮೇಲೆ ತುಪ್ಪ ಸವರುತ್ತದೆಯೋ? ಪರಿಶಿಷ್ಟರು ’ಅಲ್ಲೇ ಕುಂತವರು’ ಆಗಿಯೇ ಮುಂದುವರೆಯುತ್ತಾರೋ, ಬಿಡುಗಡೆಗೊಳ್ಳುತ್ತಾರೋ? ಕಾದು ನೋಡಬೇಕು. ಆದರೂ ಈ ಎರಡರ ನಡುವೆಯಲ್ಲಿ ಸಿಕ್ಕಿಕೊಂಡ ತಳ ಸಮುದಾಯಗಳು ಆಸೆಗಣ್ಣಿನಿಂದ ನೋಡುತ್ತ, ಉಸಿರು ಬಿಗಿ ಹಿಡಿದು ಕಾಯುತ್ತಿವೆ.

  • ಡಾ.ರವಿಕುಮಾರ್ ನೀಹ, (ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯ ರವಿಕುಮಾರ್, ಕನ್ನಡ ವಿಮರ್ಶಾ ಲೋಕದಲ್ಲಿ ‘ಹೊಸ ತಲೆಮಾರಿನ ಭರವಸೆಯ ಬರಹಗಾರ. ಡಾ ರಹಮತ್ ತರೀಕೆರೆ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.)

ಇದನ್ನೂ ಓದಿ: ಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ – ಎನ್. ರವಿಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...