ಅಸ್ಸಾಂ ಸರ್ಕಾರ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ವಿರುದ್ಧ ಕೈಗೊಂಡ ಕ್ರಮದ ಭಾಗವಾಗಿ, ಮಾಜಿ ಸರ್ಕಾರಿ ಶಾಲಾ ಶಿಕ್ಷಕ ಖೈರುಲ್ ಇಸ್ಲಾಂ ಅವರನ್ನು ಮೇ 23ರಂದು ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ಸಿಬ್ಬಂದಿ ಕುರಿಗ್ರಾಮ್‌ನ ಬಾಂಗ್ಲಾದೇಶ ಗಡಿಯಲ್ಲಿ ಭಾರತದ ಪ್ರದೇಶದಿಂದ ಹೊರಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಂಗ್ಲಾದೇಶದ ಭದ್ರತಾ ಪಡೆಗಳು ಖೈರುಲ್ ಅವರನ್ನು ತಮ್ಮ ಗಡಿಯ ಬಳಿ ಪತ್ತೆ ಮಾಡಿ, ಮತ್ತೆ ಭಾರತಕ್ಕೆ ಗಡಿ ದಾಟುವಂತೆ ಒತ್ತಾಯಿಸಿದ್ದಾರೆ. ಅವರು ಈಗ ರಾಜ್ಯದ ಮೋರಿಗಾಂವ್ ಜಿಲ್ಲೆಯ ತಮ್ಮ ಮನೆಗೆ ಮರಳಿದ್ದಾರೆ. ಜೂನ್ 7ರಂದು ಬಕ್ರಿದ್ ಗೆ ಎರಡು ದಿನಗಳ ಮೊದಲು ಅವರು ಸುರಕ್ಷಿತವಾಗಿ ಮನೆಗೆ ತಲುಪಿರುವ ಕುರಿತು ಅವರ ಕುಟುಂಬ ದೃಢಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದಿಂದ ಬಂದ “ಅಕ್ರಮ ವಲಸಿಗರ” ಮೇಲಿನ ದಾಳಿ ಭಾರತದಲ್ಲಿ ಹೊಸದಲ್ಲ. ಎರಡು ದೇಶಗಳು 4,096 ಕಿಮೀ (2,545 ಮೈಲುಗಳು) ಉದ್ದದ ಗಡಿಯಿಂದ ವಿಭಜಿಸಲ್ಪಟ್ಟಿವೆ. ಈ ಗಡಿಯನ್ನು ದಾಟಲು ಎರಡು ದೇಶದ ಪ್ರಜೆಗಳಿಗೆ ತುಲನಾತ್ಮಕವಾಗಿ ಸುಲಭಗೊಳಿಸುತ್ತದೆ. ಆದರೂ ಅನೇಕ ಸೂಕ್ಷ್ಮ ಪ್ರದೇಶಗಳನ್ನು ಹೆಚ್ಚು ಕಾವಲು ಮಾಡಲಾಗಿದೆ.
ಜನರನ್ನು ಅವರ ಮನೆಗಳಿಂದ ಹಠಾತ್ತನೆ ಕರೆದೊಯ್ದು ಸರಿಯಾದ ಪ್ರಕ್ರಿಯೆ ಇಲ್ಲದೆ ಬೇರೆ ದೇಶಕ್ಕೆ ಬಲವಂತವಾಗಿ ಕರೆದೊಯ್ಯುವುದು ನಿರಂತರವಾಗಿ ನಡೆಯುತ್ತಿದೆ. ಭಾರತದಲ್ಲಿ ಕಳೆದ ಕೆಲವು ವಾರಗಳಲ್ಲಿ ಈ ಪ್ರಯತ್ನಗಳು ತೀವ್ರಗೊಂಡಿವೆ ಎಂದು ಈ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿರುವ ವಕೀಲರು ಹೇಳುತ್ತಾರೆ.
ಮೇ 27ರಂದು ಕುರಿಗ್ರಾಮ್ ಗಡಿಯ ಬಳಿಯ ಹೊಲದಲ್ಲಿ ನಿಂತಿದ್ದ ಬಾಂಗ್ಲಾದೇಶದ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಈ ಮಾಜಿ ಶಿಕ್ಷಕ ಖೈರುಲ್ ಕಾಣಿಸಿಕೊಂಡಿದ್ದಾರೆ. ಭಾರತೀಯ ಪೊಲೀಸರು ತಮ್ಮ ಕೈಗಳನ್ನು ಕಟ್ಟಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿದರು ಎಂದು ಅವರು ಹೇಳಿದರು.
ನಾನು ಒಬ್ಬ ಶಿಕ್ಷಕ ಮತ್ತು ಅವರು ನನ್ನನ್ನು ಗೌರವಿಸಬೇಕು ಎಂದು ನಾನು ಅಸ್ಸಾಂ ಪೊಲೀಸರಿಗೆ ಹೇಳಿದೆ ಎಂದು ಖೈರುಲ್ ವೀಡಿಯೊದಲ್ಲಿ ಪತ್ರಕರ್ತನಿಗೆ ಹೇಳಿದರು. “ಆದರೆ ಅಸ್ಸಾಂ ಪೊಲೀಸರು ನನ್ನನ್ನು ಕಳ್ಳನಂತೆ ನಡೆಸಿಕೊಂಡರು ಮತ್ತು ನನ್ನನ್ನು ಬಸ್ಸಿನಲ್ಲಿ ಕೂರಿಸಿದರು” ಎಂದು ಕೂಡ ಅವರು ಆರೋಪಿಸಿದರು.
ಖೈರುಲ್ ಡಿಸೆಂಬರ್ ವರೆಗೆ ಸರ್ಕಾರಿ ಶಾಲಾ ಶಿಕ್ಷಕನಾಗಿ ಕೆಲಸ ಮಾಡಿದರು. ಆದಾಗ್ಯೂ 2016ರಲ್ಲಿ ಅಸ್ಸಾಂನ ನ್ಯಾಯಮಂಡಳಿಯು ಅವರನ್ನು ವಿದೇಶಿ ಎಂದು ಘೋಷಿಸಿತು. ಆ ನಿರ್ಧಾರವನ್ನು ನಂತರ 2018ರಲ್ಲಿ ಗುವಾಹಟಿ ಹೈಕೋರ್ಟ್ ಎತ್ತಿಹಿಡಿಯಿತು. ಅವರನ್ನು ಎರಡು ವರ್ಷಗಳ ಕಾಲ ಅಸ್ಸಾಂನ ಮಾಟಿಯಾ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ನಂತರ 2020ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವರ ಪ್ರಕರಣವು ಈಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗಾಗಿ ಕಾಯುತ್ತಿದೆ.
ಮನೆಗೆ ಹಿಂದಿರುಗಿದ ನಂತರ ಸುದ್ದಿವಾಹಿನಿ ಸ್ಕ್ರೋಲ್.ಇನ್ ಜೊತೆ ಮಾತನಾಡಿದ ಖೈರುಲ್, ಮೊದಲು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ಯಲಾಯಿತು, ನಂತರ ಬಂಧನ ಶಿಬಿರಕ್ಕೆ ಕಳುಹಿಸಲಾಯಿತು ಎಂದು ಹೇಳಿದರು. ಕೆಲವು ದಿನಗಳ ನಂತರ, ಅವರನ್ನು ಬಿಎಸ್‌ಎಫ್ ಕರೆದೊಯ್ದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಯಾರೂ ಇಲ್ಲದ ಸ್ಥಳದಲ್ಲಿ ಬಿಡಲಾಯಿತು ಎಂದು ಅವರು ಹೇಳಿದ್ದಾರೆ.
ನಾನು ಅಲ್ಲಿ ಎರಡು ದಿನಗಳನ್ನು ಕಳೆದೆ. ನಮಗೆ ನಿದ್ರೆ ಬರಲಿಲ್ಲ. ಹಗಲೋ ರಾತ್ರಿಯೋ ಎಂದು ನಮಗೆ ತಿಳಿಯಲಿಲ್ಲ ಎಂದು ಅವರು ಹೇಳಿದರು. “ನಂತರ ಬಾಂಗ್ಲಾದೇಶ ಗಡಿ ಕಾವಲು ಪಡೆ (ಬಿಜಿಬಿ) ನಮ್ಮನ್ನು ಅವರ ಶಿಬಿರಕ್ಕೆ ಕರೆತಂದಿತು. ಕೆಲವು ದಿನಗಳ ನಂತರ, ಬಿಜಿಬಿ ನಾವು ಏಳು ಜನರನ್ನು ಗಡಿಗೆ ಕರೆದೊಯ್ದು ಭಾರತೀಯ ಪೊಲೀಸರಿಗೆ ಒಪ್ಪಿಸಿತು” ಎಂದು ಅವರು ತಿಳಿಸಿದರು.
ಗಡಿಗೆ ಕರೆದೊಯ್ಯುವ ಬಸ್ ಹತ್ತಲು ನಿರಾಕರಿಸಿದಾಗ ಮಾಟಿಯಾ ಶಿಬಿರದೊಳಗೆ ಅವರನ್ನು ಥಳಿಸಲಾಯಿತು ಎಂದು ಖೈರುಲ್ ಹೇಳಿಕೊಂಡಿದ್ದಾರೆ. ನಾನು ಬಾಂಗ್ಲಾದೇಶಕ್ಕೆ ಏಕೆ ಹೋಗಬೇಕು ಎಂದು ನಾನು ಕೇಳಿದೆ? ನಾನು ಭಾರತೀಯ ಪ್ರಜೆಯಲ್ಲವೇ ಎಂದು ನಾನು ಬಿಎಸ್ ಎಪ್ ಅನ್ನು ಪ್ರಶ್ನಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಿಎಸ್‌ಎಫ್ ಅವರನ್ನು ಕರೆದೊಯ್ದ ನಂತರ, ಖೈರುಲ್ ಅವರ ಕುಟುಂಬವು ಅವರ ಭಾರತೀಯ ರಾಷ್ಟ್ರೀಯತೆಯ ಪುರಾವೆಗಳನ್ನು ತೋರಿಸುವ ದಾಖಲೆಗಳನ್ನು ಅಸ್ಸಾಂನಲ್ಲಿ ಪೊಲೀಸರಿಗೆ ಸಲ್ಲಿಸಿತು. ಅವರ ಪತ್ನಿ ರೀಟಾ ಖಾನಮ್, ತಮ್ಮ ಪತಿ ಕೆಲವೇ ದಿನಗಳಲ್ಲಿ ಹಿಂತಿರುಗುತ್ತಾರೆ ಎಂದು ತಮಗೆ ತಿಳಿಸಲಾಗಿದೆ ಎಂದು ಹೇಳಿದರು.
ಈಗ ಸ್ವದೇಶಕ್ಕೆ ಹಿಂತಿರುಗಿರುವ ಖೈರುಲ್, ಬೇರೆ ಯಾವುದೇ ಭಾರತೀಯ ನಾಗರಿಕನಿಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ಆಶಿಸುತ್ತೇನೆ ಎಂದು ಹೇಳಿದರು. “ನಾವು ಬಾಂಗ್ಲಾದೇಶಿಗಳಲ್ಲ, ನಾವು ಭಾರತೀಯರು” ಎಂದು ಅವರು ಹೇಳಿದರು. “ನಮ್ಮಲ್ಲಿ ಎಲ್ಲಾ ದಾಖಲೆಗಳಿವೆ. ಇದು ಅನ್ಯಾಯ. ಒಂದು ದಿನ ನಮಗೆ ನ್ಯಾಯ ಸಿಗುತ್ತದೆ” ಎಂದು ಅವರು ಹೇಳಿದರು.
“ಸರ್ವಶಕ್ತನು ನೋಡುತ್ತಿದ್ದಾನೆ. ಅವನು ನ್ಯಾಯ ಕೊಡುತ್ತಾನೆ” ಎಂದು ಅವರು ಭಾವುಕರಾಗಿ ಹೇಳಿದರು.
ಮಹಾರಾಷ್ಟ್ರ| ಕಿಕ್ಕಿರಿದ ರೈಲಿನಿಂದ ಬಿದ್ದು 6 ಪ್ರಯಾಣಿಕರು ಸಾವು, ಹಲವರಿಗೆ ಗಾಯ