ಬಿಜೆಪಿಯೊಂದಿಗಿನ ಮೂವತ್ತು ವರ್ಷಗಳ ಮೈತ್ರಿ ಸಂಬಂಧ ಮುರಿದುಕೊಂಡು ಹೊರ ಬಂದ ಶಿವಸೇನೆ, ಕಾಂಗ್ರೆಸ್‌ ಬೆಂಬಲದೊಂದಿಗೆ ಎನ್‌ಸಿಪಿ ಜತೆ ಸೇರಿಕೊಂಡು ಸರ್ಕಾರ ರಚಿಸುವುದಾಗಿ ಘೋಷಿಸಿತು. ಈ ಬಾರಿ ಶಿವಸೇನೆ ಪಕ್ಷಕ್ಕೆ ಸಿಎಂ ಹುದ್ದೆ ಸಿಗಬೇಕು ಎಂದು ಪಟ್ಟು ಹಿಡಿದಿದೆ. ಸಿಎಂ ಹುದ್ದೆ ಬಿಟ್ಟು ಕೊಡಲು ನಿರಾಕರಿಸಿದ ಬಿಜೆಪಿ, ಶಿವಸೇನೆ ಜತೆಗಿನ ಸಂಬಂಧ ಬೇಡವೇ ಬೇಡ ಎಂದಿತು. ಅದಾದ ಕೆಲ ಹೊತ್ತಿನಲ್ಲೇ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಹಿರಿಯ ನಾಯಕ ಬಾಳಾ ಸಾಹೇಬ್ ಠಾಕ್ರೆ, ಎಲ್‌.ಕೆ.ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಅತ್ಯಂತ ಹಳೆಯ ಫೋಟೋ ಟ್ವೀಟ್ ಮಾಡಿದ್ದು, ಶಿವಸೇನೆ ಮತ್ತು ಬಿಜೆಪಿ ಸಂಬಂಧ ಎಷ್ಟು ಹಳೆಯದ್ದು ಮತ್ತು ಗಟ್ಟಿಯಾಗಿತ್ತು ಎಂಬುದನ್ನು ತಿಳಿಸಿದ್ದಾರೆ. ಬಾಳಾ ಸಾಹೇಬ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಕ್ರಾಂತಿ ಉಂಟು ಮಾಡಿದವು. ಸಂಪ್ರದಾಯವಾದಿಗಳಿಗೆ ಹೊಸ ಭರವಸೆ ಮತ್ತು ಮನ್ನಣೆ ಸಿಗುವಂತೆ ಮಾಡಿದವರು. ಬಾಳಾ ಸಾಹೇಬ್ ಠಾಕ್ರೆ, ಎಲ್ಲರನ್ನೂ ಹೇಗೆ ಒಂದುಗೂಡಿಸಿದರು ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಹೇಳುತ್ತದೆ.

ಹಿಂದುತ್ವಕ್ಕಾಗಿ ಹೋರಾಡಿದ ಅವರ ಪಕ್ಷ ಹಿಂದುತ್ವ ವಿರೋಧಿಗಳೊಂದಿಗೆ ಹೊರಟಿದೆ. ಇದನ್ನು ಕಂಡಿದ್ದರೆ ಅವರಿಗೆಷ್ಟು ನೋವಾಗುತ್ತಿತ್ತು. ಈಗ ಶಿವಸೇನೆ, ಬಿಜೆಪಿಯನ್ನು ತೊರೆದಿದೆ. ಎರಡೂ ಪಕ್ಷಗಳು ೩೫ ವರ್ಷಗಳಲ್ಲಿ ಎರಡನೇ ಬಾರಿಗೆ ವಿಭಜನೆಯಾಗುತ್ತಿವೆ. ಆದರೆ ವೈರಿ ಪಕ್ಷ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವುದು ಇದೇ ಮೊದಲು.

ಇದನ್ನೂ ಓದಿ: ಮುಂದುವರೆದ ಮಹಾರಾಷ್ಟ್ರ ಸರ್ಕಾರ ರಚನೆ ಹಗ್ಗ-ಜಗ್ಗಾಟ: ಯಾವ ಪಕ್ಷ ಅಧಿಕಾರಕ್ಕೆ..!?

ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಬಿಜೆಪಿ ಮತ್ತು ಶಿವಸೇನೆ ಒಗ್ಗೂಡಬೇಕು. ಸಿದ್ಧಾಂತದಲ್ಲಿನ ಸಾಮ್ಯತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಏಕರೂಪದ ನಾಗರಿಕ ಸಂಹಿತೆ, ಮತ್ತು ಸಂವಿಧಾನದ 370 ನೇ ವಿಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಉಭಯ ಪಕ್ಷಗಳು ಒಂದೇ ರೀತಿಯ ಅಭಿಪ್ರಾಯ ಹಂಚಿಕೊಂಡಿವೆ ಎಂದು ಹೇಳಿದ್ದರು.

ಆದರೆ ಇಂದು ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಸ್ಪರ್ಧೆ ನಡೆಸಿವೆ. ಎರಡೂ ಹಾವು-ಮುಂಗುಸಿಯಂತೆ ಕಚ್ಚಾಟಕ್ಕಿಳಿದಿವೆ. ಚುನಾವಣಾ ಪೂರ್ವ ಮೈತ್ರಿ ವೇಳೆ ಮಾಡಿಕೊಂಡ ೫೦: ೫೦ ಸೂತ್ರದಂತೆ ಬಿಜೆಪಿ ನಡೆಯಲಿಲ್ಲ. ಎರಡೂವರೆ ವರ್ಷ ಶಿವಸೇನೆಯಿಂದ ಸಿಎಂ ಆಗಬೇಕು ಎಂಬ ಬೇಡಿಕೆಗೂ ಬಿಜೆಪಿ ಸೊಪ್ಪು ಹಾಕಲಿಲ್ಲ. ಇದರಿಂದ ಮುನಿದ ಉದ್ಧವ್‌ ಠಾಕ್ರೆ, ಬದ್ಧ ವೈರಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿತು.

ಎನ್‌ಸಿಪಿ ಕೂಡ ಶಿವಸೇನೆಯ ಮನವಿಯನ್ನು ಒಪ್ಪಿಕೊಂಡಿದೆ. ಆದರೆ ಕಾಂಗ್ರೆಸ್ ಮಾತ್ರ ಇನ್ನೂ ತನ್ನ ನಿಲುವು ತಿಳಿಸಿಲ್ಲ. ಶಿವಸೇನೆ ವಕ್ತಾರ ಸಂಜಯ್ ರಾವತ್ ಮತ್ತು ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಪಕ್ಷದ ಕೆಲವರು ಶಿವಸೇನೆಗೆ ಬೆಂಬಲ ಸೂಚಿಸುವಂತೆ ಸಲಹೆ ನೀಡಿದರೆ, ಇನ್ನು ಕೆಲವರು ಅವರ ಸಹವಾಸವೇ ಬೇಡ. ಶಿವಸೇನೆ ಮತ್ತು ಬಿಜೆಪಿ ನಾಟಕ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here