Homeಮುಖಪುಟಬ್ಯಾಂಕುಗಳು ಕೈಬಿಟ್ಟ ಸಾಲಗಳು ಮದುವೆಗೋ, ಮಸಣಕೋ?

ಬ್ಯಾಂಕುಗಳು ಕೈಬಿಟ್ಟ ಸಾಲಗಳು ಮದುವೆಗೋ, ಮಸಣಕೋ?

- Advertisement -
- Advertisement -

ಅತೀ ಹೆಚ್ಚಿನ ಸಂಖ್ಯೆಯ ದುಃಸ್ಥಿತಿಯ ರೈತರಿಗೆ ನೀಡಿದ ಕಡಿಮೆ ಮೊತ್ತದ ಪರಿಹಾರದ ಎದುರು, ಬೆರಳೆಣಿಕೆಯ ಸಂಖ್ಯೆಯ ಬೃಹತ್ ಉದ್ದಿಮೆದಾರರಿಗೆ ಕೊಡುವ ಬೃಹತ್ ಮೊತ್ತದ ರೈಟ್ ಆಫ್ ಕೊಡುಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹನೆ ಸೃಷ್ಟಿಸದಿರುವುದು ಹೇಗೆ ಸಾಧ್ಯ?

ಕೋವಿಡ್-19ರ ಮಹಾ ರೋಗದಿಂದಾಗಿ ಇಡೀ ಜಗತ್ತು ತಲ್ಲಣಿಸಿದೆ. ಹಿಂದೆಂದೂ ಕಂಡರಿಯದ ಈ ಮಹಾ ರೋಗಕ್ಕೆ ಔಷದಿ ಇಲ್ಲದೆ ಲಾಕ್ ಡೌನ್ ಬಿಟ್ಟು ಅನ್ಯ ಮಾರ್ಗವೇ ಇಲ್ಲವಾಗಿದೆ. ಇಡೀ ಆರ್ಥಿಕ ಬದುಕನ್ನು ಒಂದೇ ಏಟಿಗೆ ಹಿಡಿದು ನಿಲ್ಲಿಸಿರುವ ಇದು, ಸರ್ಕಾರಗಳ ನಿದ್ದೆ ಕೆಡಿಸುವುದರ ಜೊತೆಗೆ, ಕೋಟ್ಯಾಂತರ ದಿನಗೂಲಿ ಕಾರ್ಮಿಕರ ಬದುಕನ್ನು ಬೀದಿಗೆಳೆದಿದೆ. ಅಭಿವೃದ್ದಿ ಬಂಡಿಯ ಗಾಲಿಗಳು ನಿಂತಲ್ಲೇ ಕುಸಿಯುತ್ತಿವೆ. ಏನೊಂದೂ ತೋಚದಾಗ ನಿಂತಲ್ಲೇ ನಿಲ್ಲುವುದು ಲೇಸು ಎನ್ನುವಂತೆ, ಲಾಕ್ ಡೌನ್‍ನನ್ನು ಎಲ್ಲರೂ ಒಪ್ಪಿ ಅನುಸರಿಸುತ್ತಿದ್ದಾರೆ.

ಹೀಗಿರುವಾಗ, ಗಾಯದ ಮೇಲೆ ಉಪ್ಪು ಸವರಿದಂತೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಕಂಪನಿಗಳ ದೊಡ್ಡ ಸಾಲವನ್ನು ‘ರೈಟ್ ಆಫ್’, ಮಾಡಲಾಗಿದೆ. ಸಾರ್ವಜನಿಕರಿಂದ ಠೇವಣಿಗಳನ್ನು ಪಡೆದು, ಅಭಿವೃದ್ದಿ ಹೂಡಿಕೆ ಮತ್ತು ದೈನಿಕ ವ್ಯವಹಾರಗಳಿಗಾಗಿ ಗ್ರಾಹಕರಿಗೆ ಸಾಲ ನೀಡುವುದು ವಾಣಿಜ್ಯ ಬ್ಯಾಂಕುಗಳ ಕೆಲಸ. ಆ ಸಾಲಗಳ ಮೇಲೆ ಪಡೆಯುವ ಬಡ್ಡಿಯಲ್ಲಿ ಠೇವಣಿದಾರರಿಗೆ ನಿಡಿದ ಬಡ್ಡಿ ಮತ್ತು ತನ್ನ ಆಡಳಿತ ವೆಚ್ಚಗಳನ್ನು ಕಳೆದುಳಿಯುವ ಮೊತ್ತವೇ ಅವುಗಳಿಗೆ ದಕ್ಕುವ ಲಾಭ. ಕೊಟ್ಟ ಸಾಲಗಳು ಸಮಯಾನುಸಾರ ಮರುಪಾವತಿ ಆಗದಿದ್ದರೆ, ಬ್ಯಾಕುಗಳಿಗೆ ಬಡ್ಡಿಯೂ ಇಲ್ಲ, ಅಸಲೂ ಇಲ್ಲ. ಠೇವಣಿದಾರರು ಅವರ ಹಣಕ್ಕಾಗಿ ಬೇಡಿಕೆ ಇಟ್ಟಾಗ ಬ್ಯಾಂಕುಗಳು ಅದನ್ನು ಪೂರೈಸಲಿಲ್ಲ ಎಂದರೆ, ಅದು ಅವುಗಳ ಅಸ್ಥಿತ್ವಕ್ಕೆ ತೋಡಿಕೊಂಡ ಸಮಾಧಿ. ಈಗಿನ ಸ್ಥಿತಿಯಲ್ಲಿ ಬ್ಯಾಂಕೊಂದು ದಿವಾಳಿಯಾದರೆ ಠೇವಣದಾರರಿಗಿರುವ ವಿಮಾ ಭದ್ರತೆ ಇರುವುದು ಕೇವಲ 5 ಲಕ್ಷ ರೂ. ಗಳವರೆಗೆ ಮಾತ್ರ. ಅದೂ, ಈ ಹಿಂದೆ ಇದ್ದ ಒಂದು ಲಕ್ಷ ರೂ. ಗಳನ್ನು ಈ ವರ್ಷದ ಮುಂಗಡ ಪತ್ರದಲ್ಲಿ ರೂ. 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇಡೀ ಬ್ಯಾಂಕಿಂಗ್ ವ್ಯವಸ್ಥೆ ನಿಂತಿರುವದೇ ಬ್ಯಾಂಕುಗಳ ಮತ್ತು ಗ್ರಾಹಕರ ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳ ಮೇಲೆ ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳುವುದು ಆ ಬ್ಯಾಂಕುಗಳ ಜವಾಬ್ದಾರಿ.

ಇಂಥ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಬ್ಯಾಂಕುಗಳು, ವಸೂಲಾಗದ ತಮ್ಮ ಸಾಲಗಳನ್ನು ರೈಟ್ ಆಫ್ ಮಾಡಿ ಕೈ ತೊಳೆದುಕೊಳ್ಳುವುದು ಗ್ರಾಹಕರು, ಸರ್ಕಾರ ಮತ್ತು ಯಾರ ದೃಷ್ಟಿಯಿಂದಲೂ ಸರಿಯಲ್ಲ. ಸ್ವತಃ ಬ್ಯಾಂಕುಗಳ ಏಳಿಗೆಗೂ ಪೂರಕವಲ್ಲ. ಕಳೆದ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕುಗಳು, ಪರಸ್ಪರ ಒಪ್ಪಿಗೆಯ ಮೇರೆಗೆ ವಾಣಿಜ್ಯ ಬ್ಯಾಂಕುಗಳ ವಸೂಲಾಗದ ಸಾಲಗಳನ್ನು ರೈಟ್ ಆಫ್ ಮಾಡಿರುವ ಕ್ರಮ, ವಿವಾದ ಮತ್ತು ಆತಂಕಗಳನ್ನು ಸೃಷ್ಟಿಸಿದೆ. ಸಾಲ ಪಡೆದ ಉದ್ಯಮಿಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿರುವ ಕಾರಣಗಳನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಲ್ಲ.

ಬದಲಾಗಿ, ‘ರೈಟ್ ಆಫ್’ ಎಂದರೇನು? ‘ರೈಟ್ ಆಫ್’ ಮತ್ತು ಸಾಲ ಮನ್ನಾ(ವೈವ್ ಆಫ್) ಗಳ ನಡುವಿನ ವ್ಯತ್ಯಾಸಗಳೇನು? ರೈಟ ಆಫ್ ಆದದ್ದು ಯಾರ ಸಾಲ? ಎಷ್ಟು ಮೊತ್ತದ ಸಾಲ? ಮಾಡಿದ ಉದ್ದೇಶಗಳೇನಿರಬಹುದು? ಅದರ ಅಂತಿಮ ಪರಿಣಾಮಗಳೇನು ಮತು ಇದರ ಫಲಾನುಭವಿಗಳು ಯಾರಾಗಬಹುದು ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ನೀಡಿ ವಿಶ್ಲೇಷಿಸುವುದಾಗಿದೆ.

‘ರೈಟ್ ಆಫ್’, ಎಂದರೆ, ಲೆಕ್ಕ ಶಾಸ್ತ್ರ ಪರಿಭಾಷೆಯಲ್ಲಿ, ‘ವಾಯಿದೆ ಮೀರಿಯೂ ವಾಪಾಸು ಬಾರದ ಕೆಟ್ಟ ಸಾಲವನ್ನು ಬ್ಯಾಂಕಿನ ವಾರ್ಷಿಕ ಲೆಕ್ಕ ತಃಖ್ತೆಗಳಾದ ಲಾಭ ನಷ್ಟದ ಖಾತೆ ಮತ್ತು ಆಸ್ಥಿ ಮತ್ತು ಹೊಣೆಗಾರಿಕೆ ಪಟ್ಟಿ, ಅಂದರೆ, ಬ್ಯಾಲನ್ಸ್ ಶೀಟ್‍ನಿಂದ ಕೈಬಿಡುವುದು’, ಎಂದರ್ಥ. ಹೀಗೆ ಕೈಬಿಡುವುದೆಂದರೆ, ರೈಟ್ ಆಫ್ ಮಾಡಲು ನಿರ್ಧರಿಸಿದ ಒಟ್ಟು ಮೊತ್ತವನ್ನು ‘ಖರ್ಚು’ ಎಂದು ಪರಿಗಣಿಸಿ ವಾರ್ಷಿಕ ಲಾಭ ಮತ್ತು ನಷ್ಟದ ಖಾತೆಗೆ ವರ್ಗಾಯಿಸುವುದರ ಜೊತೆಗೆ, ಬ್ಯಾಲನ್ಸ್ ಶೀಟ್‍ನಿಂದಲೂ ತೆಗೆದು ಹಾಕುವುದು. ಇದರಿಂದ ಸಂಬಂಧಿಸಿದ ಬ್ಯಾಂಕು ಆ ಸಾಲವನ್ನು ವಸೂಲು ಮಾಡುವ ಹಕ್ಕನ್ನಾಗಲೀ ಅಥವಾ ಆ ಸಾಲದ ಮೇಲೆ ಅಡಮಾನು ಮಾಡಿದ ಆಸ್ಥಿಗಳ ಮೇಲಿನ ಹಕ್ಕನ್ನಾಗಲೀ ಕಳೆದುಕೊಳ್ಳುವುದಿಲ್ಲ. ಮುಂದೆ ಈ ಸಾಲಗಳ ವಸೂಲಾತಿಗಾಗಿ ಜರುಗಿಸಬಹುದಾದ ಕಾನೂನು ಕ್ರಮಗಳ ಪ್ರಕ್ರಿಯೆಗಳಲಿ,್ಲ ಅವು ವಸೂಲಿ ಆಗಬಹುದು ಅಥವಾ ಆಗದಿರಬಹುದು. ಇದುವರೆವಿಗಿನ ಅನುಭವಗಳ ಆಧಾರದ ಮೇಲೆ ಹೇಳುವುದಾದರೆ, ವಸೂಲಿಯಾಗದಿರುವ ಸಾಧ್ಯತೆಗಳೇ ಹೆಚ್ಚು. ಒಂದುವೇಳೆ ಆದರೂ ಅದು ಪೂರ್ಣ ಪ್ರಮಾಣದ್ದಾಗಿರದೆ ಅಷ್ಟೋ ಇಷ್ಟೋ ಮಾತ್ರ ಆಗಬಹುದು. ಆದ್ದರಿಂದಲೇ ಆತಂಕ ಮತ್ತು ಖಂಡನೆ. ಸಾಲಗಳ ‘ಮನ್ನಾ’, ಎಂದರೆ, ಬ್ಯಾಂಕುಗಳು ಆ ಸಾಲಗಳನ್ನು ಲೆಕ್ಕ ಖಾತೆಗಳಿಂದ ಕೈಬಿಡುವುದರ ಜೊತೆಗೆ ಅಡಮಾನು ಮಾಡಿಕೊಂಡಿರವ ಆಸ್ಥಿಗಳ ಮೇಲಿನ ಹಕ್ಕುಗಳನ್ನೂ ಕಳೆದುಕೊಳ್ಳುತ್ತವೆ. ಯಾವ ಪ್ರಾಧಿಕಾರ ಹೀಗೆ ವiನ್ನಾ ಮಾಡಲು ಆದೇಶಿಸುತ್ತದೆಯೋ, ಅದು ಈ ನಷ್ಟವನ್ನು ಬ್ಯಾಂಕಿಗೆ ಕಟ್ಟಿಕೊಡಬೇಕಾಗುತ್ತದೆ. ಉದಾಹರಣೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹಿಂದೆ ರೈತರ ಸಾಲ ಮನ್ನಾ ಮಾಡಿದಾಗ, ಅಷ್ಟು ಮೊತ್ತವನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಕಟ್ಟಿಕೊಟ್ಟಿವೆ. ಹಾಗಾಗಿ, ಇದರಿಂದಾಗುವ ನಷ್ಟದ ಹೊಣೆ ಸಂಬಂಧಿಸಿದ ಸರ್ಕಾರದ್ದಾಗುತ್ತದೆಯೇ ಹೊರತು, ಬ್ಯಾಂಕುಗಳಿಗಲ್ಲ. ಒಟ್ಟಿನಲ್ಲಿ ನಷ್ಟ ಯಾರಿಗಾದರೂ ಅದು ನಷ್ಟವೇ ಹೌದು. “ವಸೂಲಾಗದ ಸಾಲಗಳ ರೈಟ್ ಆಫ್ ಮತ್ತು ಮನ್ನಾಗಳ ನಡುವಿನ ವ್ಯತ್ಯಾಸಗಳನ್ನು ಅರ್ಥಮಡಿಕೊಳ್ಳಲು ಡಾ. ಮನಮೋಹನ ಸಿಂಗ್ ಅವರಿಂದ ಸಲಹೆ ಪಡೆಯಿರಿ”, ಎಂದು 68,600 ಕೋಟಿ ರೂಪಾಯಿಗಳ ಇತ್ತೀಚಿನ ರೈಟ್ ಆಫ್‍ಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ತೀವ್ರ ಖಂಡನೆಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಸಿರುವುದರಿಂದ, ಈ ಸ್ಪಷ್ಟನೆಯನ್ನು ಕೊಡಬೇಕಾಗಿದೆ.

ಇನ್ನು ರೈಟ್ ಆಫ್ ಆಗಿರುವ ಸಾಲಗಳು ಯಾರವು ಎಂದರೆ, ಬಹುಮುಖ್ಯವಾಗಿ ಈ ದೇಶದ ಬೃಹತ್ ಉದ್ಯಮಿಗಳ ಸಾಲಿನಲ್ಲಿ ಬರುವ ಮೊದಲ ಹನ್ನೆರಡರಿಂದ ಐವತ್ತು ಕಂಪನಿಗಳವುಗಳು. ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ, ಮುಂತಾದ ಕೆಲವೇ ಕೆಲವರನ್ನು ಹೊರತುಪಡಿಸಿದರೆ ಉಳಿದವರ ಹೆಸರುಗಳು ಬಹಿರಂಗಗೊಂಡಿಲ್ಲ. ಈ ಹೆಸರುಗಳನ್ನು ಬಹಿರಂಗಪಡಿಸುವಂತೆ ಗಣ್ಯರ ಒತ್ತಾಯವಿದ್ದಾಗ್ಯೂ, ಕಾನೂನು ಪ್ರಕಾರ ಗ್ರಾಹಕರ ಗೌಪ್ಯತೆಯನ್ನು ಕಾಪಾಡಬೇಕಾದ ಬ್ಯಾಂಕುಗಳ ಹೊಣೆಗಾರಿಕೆ ಎನ್ನುವ ಕಾರಣಕ್ಕೆ ಈ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ ಎನ್ನಲಾಗಿದೆ. ಆದರೆ ಇದು ಬಹಳ ಕಾಲ ಮುಂದುವರಿಯದೆ ಸಾಲವಸೂಲಾತಿಗಾಗಿ ಸೆಕ್ಯುರಿಟೈಸೇಷನ್ ಕಾಯಿದೆ(ಸರ್‍ಫೇಸಿಯ) ಅಡಿಯಲ್ಲಿ ಕ್ರಮ ಜರುಗಿಸುವಾಗ ಕಡ್ಡಾಯವಾಗಿ ಬಹಿರಂಗವಾಗುತ್ತದೆ. 2014 ರಿಂದ ಇಲ್ಲಿಯವರೆಗೆ ಪ್ರಸ್ತುತ ಸರ್ಕಾರ ರೈಟ್ ಆಫ್ ಮಾಡಿರುವ ಒಟ್ಟು ಸಾಲ, ಭಾರತೀಯ ರಿಸರ್ವ್ ಬ್ಯಾಂಕಿನ ವರದಿಗಳ ಪ್ರಕಾರ, ರೂ. 8,44, 400 ಕೋಟಿ. ಕಳೆದ ಫೆಬ್ರವರಿ ತಿಂಗಳಲ್ಲಿ ರೂ. 7,77,800 ಕೋಟಿ ಮತ್ತು ಏಪ್ರಿಲ್ ತಿಂಗಳ ಕೊನೆ ವಾರದಲ್ಲಿನ ರೂ. 68,600 ಕೋಟಿ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಮಾರ್ಚ್ 31, 20018ರ ಅಂತ್ಯಕ್ಕೆ, ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳು ನೀಡಿರುವ ಒಟ್ಟು ಸಾಲ ಸುಮಾರು ರೂ. 77 ಲಕ್ಷ ಕೋಟಿ. ಅದರಲ್ಲಿ ಕೃಷಿ ವಲಯಕ್ಕೆ ನೀಡಿರುವ ಸಾಲ ಒಟ್ಟು ಸಾಲದ ಶೇ.10ರಷ್ಟು. ಅಂದರೆ, ಸುಮಾರು 7.7 ಲಕ್ಷ ಕೋಟಿ. ಕೈಗಾರಿಕಾ ವಲಯಕ್ಕೆ ನೀಡಿರುವ ಮೊತ್ತ, ಒಟ್ಟು ಸಾಲದ ಸುಮಾರು ಶೇ.35ರಷ್ಟು. ಅಂದರೆ, ಸುಮಾರು 27 ಲಕ್ಷ ಕೋಟಿ. ಈಗ ವಸೂಲಿಯಾಗದ ಕಾರಣಕ್ಕೆ ರೈಟ್ ಆಫ್ ಅಗಿರುವ ಮೊತ್ತ ಸುಮಾರು ರೂ 8.44 ಲಕ್ಷ ಕೋಟಿ. ಅಂದರೆ, ಅದು ಇಡೀ ದೇಶದ ಕೃಷಿ ವಲಯಕ್ಕೆ ನೀಡಿರುವ ಒಟ್ಟು ಸಾಲದ ಮೇಲೆ ಸುಮಾರು 70 ಸಾವಿರ ಕೋಟಿ! ಕೃಷಿ ಪ್ರಧಾನ ದೇಶ ಭಾರತದಲ್ಲಿ ಕೃಷಿ ಅಭಿವೃದ್ಧಿಗೆ ಕೊಟ್ಟಿರುವ ಪ್ರಾಧಾನ್ಯತೆ ಮತ್ತು ಕೈಗಾರಿಕಾವಲಯದ ಕೆಲವೇ ಕೆಲವು ಕಂಪನಿಗಳ ಬಗೆಗೆ ತೋರಿರುವ ಪಕ್ಷಪಾತಗಳ ವೈರುದ್ಯವನ್ನು ಇದು ಸ್ಪಷ್ಟವಾಗಿ ಬಿಚ್ಚಿಡುತ್ತದೆ.

ಇನ್ನು ರೈಟ್ ಆಫ್ ಮಾಡುವ ಉದ್ದೇಶ ಎಂದರೆ, ಮೊದಲನೆಯದಾಗಿ, ಸಾಲ ಕೊಟ್ಟರುವ ಬ್ಯಾಂಕುಗಳ ಬ್ಯಾಲನ್ಸ್ ಶೀಟುಗಳಲ್ಲಿ ವಸೂಲಿಯಾಗದ ಮತ್ತು ವಸೂಲಿಯಾಗುವುದು ಅನುಮಾನವಿರುವ ಸಾಲ ಮೊತ್ತಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿರುವುದರಿಂದ, ಅದು ಸಾರ್ವಜನಿಕ ವಲಯದಲ್ಲಿ ಆ ಬ್ಯಾಂಕುಗಳ ಗೌರವ-ಘನತೆಗಳಗೆ ಧಕ್ಕೆ ತರುತ್ತದೆ, ಅವುಗಳ ಆತ್ಮ ವಿಶ್ವಾಸ ತಗ್ಗಿಸುತ್ತದೆ, ಗ್ರಾಹಕರ ವಿಶ್ವಾಸ ಕುಂದಿಸುತ್ತದೆ ಎನ್ನುವ ಕಾರಣಗಳು. ರೈಟ್ ಆಫ್ ಮಾಡುವುದರಿಂದ ಹೇಗೂ ಸಾಲದ ಎದುರು ಅಡಮಾನವಾಗಿ ಪಡೆದಿರುವ ಸ್ಥಿರ-ಚರ ಆಸ್ಥಿಗಳ ಮೇಲಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲವಾದ್ದರಿಂದ, ಮತ್ತು ಮುಂದಿನ ದಿನಗಳಲ್ಲಿ ಆ ಆಸ್ಥಿಗಳನ್ನು ವಿಲೇವಾರಿ ಮಾಡಿ ಸಾಲತೀರಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ಮುಖ ಉಳಿಸಿಕೊಳ್ಳಬಹುದಾದ ಪರಿಹಾರ. ಇದರ ಹೊರತಾಗಿ ನಾವು ಉಹಿಸಬಹುದಾದ ಒಂದೆರಡು ಕಾರಣಗಳಿವೆ. ಒಂದು, ಬ್ಯಾಂಕಿಂಗ್ ನಿಯಾಮವಳಿ ಪ್ರಕಾರ ಸಾಲಗಳು ಮುಂಜೂರಾಗಿ ಮತ್ತು ಬಿಡುಗಡೆಯಾದ ನಂತರ, ಸಾಲ ಮರುಪಾವತಿಯಾಗದ ನಷ್ಟ ಸಾಧ್ಯತೆಯನ್ನು ಊಹಿಸಿ, ಅದರ ಅನಾನುಕೂಲವನ್ನು ಪರಿಹರಿಸಿಕೊಳ್ಳುವ ಕಾರಣಕ್ಕೆ ಕಾಯ್ದಿರಿಸಿದ ನಿಧಿಯನ್ನು ಸ್ಥಾಪಿಸಿಕೊಳ್ಳಲು ಕಾನೂನು ಚೌಕಟ್ಟಿನಲ್ಲಿಯೇ ಬ್ಯಾಂಕುಗಳಿಗೆ ಅವಕಾಶವಿದೆ. ಈಗಿರುವ ನಿಯಮಗಳ ಪ್ರಕಾರ, ಅಂಥ ಮಿಸಲಿಟ್ಟ ನಿಧಿಯನ್ನು ಸಾಲದ ಒಟ್ಟು ಮೊತ್ತದ ಮೇಲೆ ಶೇ.5 ರಿಂದ ಶೇ.20ರಷ್ಟರವರೆಗೆ ಸೃಷ್ಟಿಸಿಕೊಳ್ಳಬಹುದು. ವಸೂಲಾಗದ ಸಾಲ ಮೊತ್ತವನ್ನು ರೈಟ್ ಆಫ್ ಮಾಡಿದಾಗ, ಆ ನಿಧಿಯಿಂದ ಪ್ರಮಾಣಾತ್ಮಕವಾಗಿ ಅಷ್ಟು ಮೊತ್ತವನ್ನು ಅದಾಯವೆಂದು ಪರಗಣಿಸಲ್ಪಟ್ಟು ವಾಪಾಸು ಪಡೆಯಬಹುದು. ಅದು ಮತ್ತೆ ಆ ಬ್ಯಾಂಕುಗಳ ಸಾಲ ನೀಡಿಕೆಗೆ ಲಭ್ಯವಾಗುತ್ತದೆ, ಆರ್ಥ ವ್ಯವಸ್ಥೆಯಲ್ಲಿ ಹಣದ ಚಲಾವಣೆಯೂ ಹೆಚ್ಚುತ್ತದೆ. ಸದ್ಯಕ್ಕೆ ಹಣದ ಕೊರತೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಪದ್ಧನವಾಗಿ ಈ ಮೊತ್ತವನ್ನು ಪಡೆಯುವ ಉದ್ದೇಶವಿದ್ದಿರಬಹುದು.

ಎರಡನೆಯದಾಗಿ, ಬೃಹತ್ ಉದ್ಯಮಿಗಳ ದೊಡ್ಡ ಮೊತ್ತದ ಸಾಲವನ್ನು ಒಂದೇ ಬಾರಿಗೆ ಮನ್ನಾ ಮಾಡಿದರೆ, ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರ ವಿರೋಧವನ್ನು ಎದುರಿಸಬೇಕಾಗುವ ಸಾಧ್ಯತೆ. ಆದ್ದರಿಂದ, ಹಂತ ಹಂತವಾಗಿ ಮಂದಗತಿಯಲ್ಲಿ ಮಾಡುವುದರಿಂದ ತತ್ ಕ್ಷಣದ ವಿರೋಧಗಳನ್ನು ಇಲ್ಲವಾಗಿಸಿಕೊಳ್ಳಬಹುದೆಂಬ ನಂಬಿಕೆ. ಮತ್ತೆ ಕೊನೆಯದಾಗಿ, ಇವತ್ತಿನ ಜಾಗತೀಕರಣದ ಕ್ರಮಗಳ ಪರಿಣಾಮವಾಗಿ ಭಾರತದಲ್ಲಿ ಬ್ಯಾಕುಗಳ ಪರಸ್ಪರ ವಿಲಿನೀಕರಣ ನಡೆಯುತ್ತಿದ್ದು, ದುಡಿಯದ ಆಸ್ತಿ ಮತ್ತು ನಷ್ಟಗಳು ಹೆಚ್ಚಾಗಿರುವ ಬ್ಯಾಕುಗಳ ಜೊತೆಗೆ ಲಾಭದಲ್ಲಿರುವ ಬ್ಯಾಂಕುಗಳನ್ನು ವಿಲಿನೀಕರಣಗೊಳಿಸುವಾಗ, ಲಾಭದಲ್ಲಿರುವ ಬ್ಯಾಂಕುಗಳ ನೌಕರರು ಅದನ್ನು ವಿರೋಧಿಸುವ ಸಾಧ್ಯತೆಯನ್ನು ದೂರ ಮಾಡಿಕೊಳ್ಳುವುದಿರಬಹುದು.

ವಸೂಲಾಗದ ಸಾಲಗಳ ರೈಟ್ ಆಫ್ ಮತ್ತು ವೈವ್ ಆಫ್‍ಗಳ ನಡುವಿನ ವ್ಯತ್ಯಾಸಗಳನ್ನು ಸಾಂದರ್ಭಿಕವಾಗಿ ಮೇಲಿನಂತೆ ತಿಳಿಸಿದ್ದು, ಒಂದು ಸ್ಪಷ್ಟನೆ ಎಂದರೆ, ರೈಟ್ ಆಫ್ ಎನ್ನುವುದು ಸಾಲ ನೀಡಿದ ಬ್ಯಾಂಕಿನ ಆಂತರಿಕ ವಿಷಯವಾಗಿದ್ದು ಸಾಲಗಾರನಿಗೂ ಅದಕ್ಕೂ ಏನೂ ಸಂಬಂಧವಿರುವುದಿಲ್ಲ. ಅವನ ಸಾಲ ಪಾವತಿಸಬೇಕಾದ ಹೊಣೆಗಾರಿಕೆ ಕೂಡ ಯಥಾ ಸ್ಥಿತಿ ಮುಮದುವರಿಯುತ್ತದೆ. ಯಾವುದೇ ಸಾಲಗಾರ ಬಡ್ಡಿ ಮತ್ತು ಅಸಲಿನ ಕಂತನ್ನು ಕಟ್ಟುವ ವಾಯಿದೆ ಮುಗಿದ ದಿನದಿಂದ 90 ದಿನಗಳು ಮೀರಿದರೆ, ಅಂಥ ಸಾಲ ಖಾತೆಯನ್ನು ವರ್ಗೀಕರಿಸಿ ಸೆಕ್ಯುರಿಟೈಸೇಷನ್ ಕಾಯದೆ(ಸರಫೇಸಿಯ) ಪ್ರಕಾರ ಅದನ್ನು ದುಡಿಯದ ಆಸ್ಥಿ (ಎನ್.ಪಿ.ಎ) ಎಂದು ಪರಿಗಣಿಸಿ, ಮುಂದಿನ ಮೂರು ತಿಂಗಳೊಳಗೆ ಸಾಧ್ಯವಾದಷ್ಟು ಮಟ್ಟಿಗೆ ಸಾಲಗಾರನಿಗೆ ಅನುಕೂಲವಾಗುವಂತೆ ಪುನಾರಚಿಸಿಕೊಡಲು ಅವಕಾಶವಿದೆ. ಇದರ ನಂತರವೂ ಸಾಲಗಾರನ ವ್ಯವಹಾರದ ಸ್ಥಿತಿ ಸುಧಾರಿಸದಿದ್ದರೆ, ಸಾಲಕ್ಕೆ ಆಧಾರವಾಗಿರುವ ಸ್ಥಿರ-ಚರ ಆಸ್ತಿಗಳನ್ನು ವಶಕ್ಕೆ ಪಡೆದು, ವಿಲೇವಾರಿಗಾಗಿ ಹರಾಜು ಪ್ರಕ್ರಿಯೆ ಆರಂಭಿಸಬೇಕು. ಹರಾಜಿನಲ್ಲಿ ಬಂದ ಮೊತ್ತವನ್ನು ಒಟ್ಟು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡು, ಉಳಿದದ್ದನ್ನು ಸಾಲಗಾರನಿಗೆ ಹಿಂದಿರುಗಿಸಬೇಕು. ಕಡಿಮೆಯಾದಲ್ಲಿ, ಆ ಸಾಲಗಾರ ದಿವಾಳಿ ಎಂದು ಘೋಷಿಸಲ್ಪಡುವವರೆಗೆ ಸಾಲದ ಖಾತೆ ಮುಂದುವರೆಯುತ್ತಲೇ ಇರುತ್ತದೆ. ಕೆಲವೊಂದು ಸಂದರ್ಭಗಳು ಹೇಗಿರುತ್ತವೆಯೆಂದರೆ, ದಿನ ಪತ್ರಿಕೆಗಳಲ್ಲಿ ಹರಾಜು ಟೆಂಡರುಗಳನ್ನು ಕರೆದರೂ, ಕೊಳ್ಳುವ ಪ್ರಸ್ತಾಪದ ಯಾವೊಂದು ಅರ್ಜಿಯೂ ಬರದೆ ಇರುವುದುಂಟು. ಅಂಥ ಸಂದರ್ಭಗಳು ಸಾಲಕೊಟ್ಟ ಬ್ಯಾಂಕಿನ ಸಂಕಟವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಬ್ಯಾಂಕಿನ ಖಾತೆಗಳಲ್ಲಿ ಒಂದು ವೇಳೆ ಈ ಸಾಲಗಳನ್ನು ರೈಟ್ ಆಫ್ ಮಾಡದಿದ್ದಲ್ಲಿ, ಅವು ಕೆಟ್ಟ ಸಾಲಗಳಾಗಿ ಹಾಗೆಯೇ ಉಳಿಯತ್ತವೆ. ಇದು ಆ ಬ್ಯಾಂಕಿನ ಹೆಸರಿಗೆ ಕಳಂಕವಾಗುತ್ತದೆ, ಆತ್ಮ ವಿಶ್ವಾಸ ತಗ್ಗಿಸುತ್ತದೆ ಮತ್ತು ಠೇವಣಿದಾರರು ನಂಬಿಕೆ ಕಳೆದುಕೊಂಡು ಬ್ಯಾಂಕಿನ ಅಸ್ಥಿತ್ವಕ್ಕೆ ಧಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ, ಪರಿಹಾರ ಮಾರ್ಗವಾಗಿ ಈ ರೈಟ್ ಆಫ್ ಕ್ರಮವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಅನುಸರಿಸಲಾಗುತ್ತದೆ. ಬ್ಯಾಂಕುಗಳ ಇತಿಹಾಸದಲ್ಲಿ ಇದೇನೂ ಹೊಸದಲ್ಲ.

ವಿತ್ತ ಸಚಿವರು ಹೇಳಿರವಂತೆ, ಹಿಂದಿನ ಯು.ಪಿ.ಎ ಸರ್ಕಾರ ಕೂಡ 2009 ರಿಂದ 2014ರ ಅವಧಿಯಲ್ಲಿ ರೂ.1,45,226 ಕೋಟಿ ಮೊತ್ತದ ಸಾಲವನ್ನು ರೈಟ್ ಆಫ್ ಮಾಡಿರುವುದು ನಿಜ. ಇಲ್ಲಿ ಖಂಡನೆಗೆ ಕಾರಣವಾಗಿರುವದು, ರೈಟ್ ಆಫ್‍ಗೆ ಸಂಬಂಧಿಸಿದ ವಿಧಿ-ವಿಧಾನಗಳಿಗಿಂತ, ಯಾರ ಸಾಲಗಳನ್ನು ರೈಟ್ ಆಫ್ ಮಾಡಲಾಗಿದೆಯೋ ಅವರುಗಳ ಬಗೆಗಿನ ಅಸಹನೆ. ಅಸಹನೆ ಏಕೆಂದರೆ, ಸುಸ್ತಿದಾರ ಉದ್ದಿಮೆದಾರರು ಸಾಲವನ್ನು ಪಡೆದುಕೊಂಡ ರೀತಿ, ಆರ್ಥಿಕ ನೀತಿ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸಿರುವ ವಿಧಾನ, ಐಷಾರಾಮ ಜೀವನದ ಮೋಜು-ಮಸ್ತಿಗಳು, ವ್ಯಾಪಾರ ಮತ್ತು ವಾಣಿಜ್ಯಗಳ ಬಗೆಗಿನ ಅಪ್ರಬುದ್ಧತೆಗಳು, ಕಾನೂನು ಮತ್ತು ಸರ್ಕಾರಿ ಯಂತ್ರಗಳ ದುರ್ಬಳಕೆ, ರಾಜಕೀಯ ಆಡಳಿತ ನಡೆಸುವವರೊಂದಿಗಿನ ಸಖ್ಯ, ಅಧಿಕಾರಿಗಳೊಂದಿಗಿನ ಒಡನಾಟ, ಮುಂತಾದ ಅವರ ನಡವಳಿಕೆಗಳಿಂದ. ಅಭಿವೃದ್ಧಿಯ ವೇಗ ಹೆಚ್ಚಿಸಲು ಬೃಹತ್ ಉದ್ದಿಮೆದಾರರಿಗೆ ಸಾಲ ನಿಡುವ ಮಾರ್ಗಗಳನ್ನು ಸರ್ಕಾರ ಉದಾರಗೊಳಿಸಿದ ಕಾರಣ ಸಾಲ ನೀಡಿಕೆಯ ವೇಗ ಅದೆಷ್ಟು ಹೆಚ್ಚಾಯಿತೆಂದರೆ, 2006 ಮತ್ತು 2008ನೇ ಸಾಲುಗಳಲ್ಲಿ ಕೇವಲ 59 ನಿಮಿಷಗಳಲ್ಲಿ ದರವಾಣಿ ಮತ್ತು ವಿದ್ಯುನ್ಮಾನ ಮಾರ್ಗಗಳಲ್ಲಿ ಸಾಲದ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಇದೂ ಕೂಡ ಈ ಸಾಲಗಳನ್ನು ಪಡೆದಿರುವವರ ಮೇಲಿನ ಆರೋಪಗಳಲ್ಲೊಂದು. (ಅಂದಿನ ಆರ್.ಬಿ.ಐ ಗೌವರ್ನರ್ ರಘುರಾಂ ರಾಜನ್‍ರವರು ಇದನ್ನು ಸ್ಪಷ್ಟವಾಗಿ ಆಕ್ಷೇಪಿಸಿದ್ದಾರೆ.) ವ್ಯವಹಾರಗಳಲ್ಲಿನ ಸಹಜ ನಷ್ಟ ಸಾಧ್ಯತೆಯ ಕಾರಣಕ್ಕೆ ಈ ಉದ್ಯಮಿಗಳು ದಿವಾಳಿಯ ಅಂಚಿಗೆ ಬಂದು ನಿಂತಿದ್ದಿದ್ದರೆ ಉದ್ಯೋಗಿಗಳಾಗಲೀ, ಜನರಾಗಲೀ ನಿಜಕ್ಕೂ ಮರುಕಪಡುತ್ತಿದ್ದರು. ಈಗ ಇವರ ಮೇಲೆ ಕಠಿಣ ಕ್ರಮ ಜರುಗಿಸಿದಷ್ಟೂ ಜನ ಸಂತೋಷಪಡುವ ಸ್ಥಿತಿ ಇರವುದರಿಂದಲೇ ಸದರಿ ಸಾಲಗಳ ರೈಟ್ ಅಫ್ ಬಗ್ಗೆ ವಿವಾದ ಮತ್ತು ಖಂಡನೆ. ಹಾಗಾಗಿ ಈ ಕ್ರಮದ ಫಲಾನುಭವಿಗಳೆಂದರೆ ಇವರು ಮತ್ತು ಇವರಿಗೆ ನೆರವಾದ ಸ್ಥಾಪಿತ ಹಿತಾಸಕ್ತಿಗಳೇ ಹೊರತು, ಬ್ಯಾಂಕುಗಳೂ ಅಲ್ಲ, ಬ್ಯಾಕಿನ ಗ್ರಾಹಕರೂ ಅಲ್ಲ. ಸರ್ಕಾರವೂ ಅಲ್ಲ. ಇಂಥ ಪ್ರಕರಣಗಳ ವಿಪರ್ಯಾಸ ಎಂದರೆ, ಬ್ಯಾಂಕುಗಳು ತಾವೇ ನೀಡಿದ ಸಾಲವನ್ನು ಪರೋಕ್ಷವಾಗಿ, ಬಡ್ಡಿ ಸಮೇತ ತಾವೇ ತೀರಿಸುವಂತಹುದು.

ಹಾಗಾದರೆ, ಸಾಲಗಾರರು ಸುಸ್ತಿದಾರರಾಗದೆ ಪಡೆದ ಸಾಲಗಳನ್ನು ನಿಯಮಿತವಾಗಿ ಮರುಪಾವತಿ ಮಾಡುವಂತಾಗಲು ಬ್ಯಾಂಕುಗಳು ವಹಿಸಬೇಕಾದ ಎಚ್ಚರಿಕೆಯ ಕ್ರಮಗಳೇನು? ಇದರ ಅರ್ಥ ಈಗ ಬ್ಯಾಂಕುಗಳು ಯಾವುದೇ ಎಚ್ಚರಿಕೆ ವಹಿಸುತ್ತಿಲ್ಲ ಎಂದಲ್ಲ. ಈ ಕ್ರಮಗಳನ್ನು ಇನ್ನಷ್ಟು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕಾರ್ಯಗತಗೊಳಿಸಬೇಕಿದೆ. ಸಾಲ ನೀಡಿಕೆಯ ಸಂದರ್ಭದಲ್ಲಿ ಸಾಲ ಪ್ರಸ್ತಾವನೆ ಯೋಜನೆಗಳ ಪರಿಶೀಲನೆಗೆ ಅವುಗಳ ಆರ್ಥಿಕ ಸದೃಢತೆಗಳು ಆಧಾರವಾಗಬೇಕೇ ಹೊರತು ವಸೂಲಿಬಾಜಿಗಳಲ್ಲ. ಸಾಲ ನೀಡಿಕೆಯ ವೇಗವನ್ನು ಹೆಚ್ಚಿಸುವುದು ನಿಜಕ್ಕೂ ಒಳ್ಳೆಯದು. ಆದರೆ ಅಲ್ಲಿ ಆರ್ಥಿಕ ತತ್ವಗಳ ಬಗೆಗೆ ಕಾಳಜಿ ಮತ್ತು ನಿಖರತೆಗಳಿರಬೇಕು. ಯಾವ ಯಾವ ಕಾರಣಗಳಿಂದ ಸಾಲಗಳು ಸುಸ್ತಿಯಾಗುವ ಸಾಧ್ಯತೆಗಳಿವೆಯೋ, ಆ ಕಾರಣಗಳ ಬಗ್ಗೆ ಸಾಲ ನೀಡುವಾಗಲೇ ಜಾಗ್ರೃತಿ ಬೇಕು. ಉತ್ತರದಾಯಿತ್ವವನ್ನು ಇನ್ನಷ್ಟು ಸ್ಪಷ್ಟ ಮತ್ತು ಕಾನೂನುಬದ್ದಗೊಳಿಸಬೇಕು. ಬ್ಯಾಂಕುಗಳ ಆಂತರಿಕ ವ್ಯವಹಾರಗಳಲ್ಲಿ ರಾಜಕೀಯ ಹಸ್ತಕ್ಷೇಪಗಳನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಬೇಕು. ಸಾಲ ಖಾತೆಯೊಂದನ್ನು ಎನ್‍ಪಿಎ ಎಂದು ವರ್ಗೀಕರಿಸಿದಾಗಿನಿಂದ ಹಾಕುವ ಹೆಚ್ಚಿನ ದಂಡ ಬಡ್ಡಿಗಳನ್ನು, ಸೇವಾ ಶುಲ್ಕಗಳನ್ನು ಕಡಿಮೆ ಮಾಡಬೇಕು. ಈಗಿರುವ ಸ್ಥಿತಿಯಲ್ಲಿ ಮರುಪಾವತಿಯಾಗದೆ ಸುಸ್ತಿಯಾದ ಖಾತೆಗಳ ಮೇಲೆ ಹಾಕುವ ದಂಡ ಮತ್ತು ಬಡ್ಡಿಗಳು ಎಲ್ಲಾ ಸೇರಿ, ಹತ್ತಿರ ಹತ್ತಿರ ಶೇ.23ಕ್ಕೂ ಹೆಚ್ಚಿನ ದರವಾಗುತ್ತದೆ. ಮೊದಲೇ ರೋಗಗ್ರಸ್ತವಾಗಿ ನರಳುವ ಘಟಕಗಳಿಗೆ ಇದು ಚೇತರಿಕೆಯ ಕ್ರಮವಾಗುವುದರ ಬದಲು ಮತ್ತೆ ಮೇಲೇಳಲು ಸಾಧ್ಯವೇ ಅಗದ ಸ್ಥಿತಿ ತಂದೊಡ್ಡುತ್ತದೆ. ಎನ್‍ಪಿಎ ಆದ ಖಾತೆಗಳಿಗೆ ಸಂಬಂಧಿಸಿದ ಆಸ್ಥಿಗಳನ್ನು ಕ್ರಮಬದ್ದವಾಗಿ ವಿಲೇವಾರಿ ಮಾಡುವದು ಬ್ಯಾಕುಗಳಿಗೊಂದು ಬಹುದೊಡ್ಡ ಸವಾಲೇ ಆಗಿರುವುದರಿಂದ ಎಲ್ಲಾ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ಪ್ರಾಧಿಕಾರವಿರುವುದು ಅತ್ಯಂತ ಜರೂರಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ, ವಸೂಲಾಗದ ಸಾಲಗಳ ರೈಟ್ ಆಫ್ ಆಗಲಿ ಮನ್ನಾವೇ ಆಗಲಿ, ಭಾರತದಲ್ಲಿ ಬ್ಯಾಂಕುಗಳಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡಲಾರವು. ಏಕೆಂದರೆ, ಸದ್ಯದ ಸ್ಥಿತಿಯಲ್ಲಿ ಈ ಎರಡೂ ಕ್ರಮಗಳ ಹಿಂದೆ ದೇಶದ ಸಮಗ್ರ ಆರ್ಥಿಕ ಅಭಿವೃದ್ದಿಯ ಕಾಳಜಿಗಿಂತ ಅಧಿಕಾರ ರಾಜಕಾರಣದ ಉದ್ದೇಶಗಳೇ ಕಂಡು ಬರುತ್ತಿವೆ. ಇದುವರೆವಿಗೂ ರೈಟ್ ಆಫ್ ಆಗಿರುವ ಬೃಹತ್ ಉದ್ಯಮಿಗಳ ಸಾಲ ಪ್ರಕರಣಗಳ ಹಿಂದೆ ಕಾಣದ ಶಕ್ತಿಗಳ ಕೈವಾಡ ಇಲ್ಲವೆಂದು ಹೇಳಲಾಗದು. ನಮ್ಮ ಹಳ್ಳಿಗಾಡಿನಲ್ಲಿ ಪ್ರಚಲಿತವಿರುವ, “ಕೊಟ್ಟವನು ಕೋಡಂಗಿ, ಇಸ್ಗಂಡವನು ಈರಭದ್ರ” ಎನ್ನುವ ಮಾತು ಇಡೀ ದೇಶಕ್ಕೆ ಅನ್ವಯಿಸುವುದಾದರೆ, ಬ್ಯಾಂಕುಗಳ ಸ್ಥಿತಿ ತೀರಾ ಗಂಭೀರವಾಗುತ್ತದೆ. ದೇಶದ ಆರ್ಥಿಕತೆಯ ಬಂಡಿಯನ್ನು ವಿವೇಚನೆಯ ಕೈಯಲ್ಲಿ ಕೊಡದೆ, ಡಿ.ವಿ.ಜಿ.ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವ ವಿಧಿಯ ಕೈಯಲ್ಲಿ ಕೊಟ್ಟರೆ, ಮದುವೆಗೆ ಹೊರಟು ಮಸಣಕ್ಕೆ ಹೋಗುವುದು ಖಂಡಿತ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...