ಮೋದಿ ಮಾಮನ ಸುಳ್ಳು ಫಲಕದ ವಿದ್ಯುದಾ‍ಘಾತ..!

  • ಶುದ್ಧೋದನ

ಹಸಿ ಹಸಿ ಸುಳ್ಳುಗಳನ್ನು ಅದ್ಭುತವಾಗಿ ಮಾರ್ಕೆಟಿಂಗ್ ಮಾಡಿ, ಪಾಲಿಟಿಕಲ್ ಬಿಸಿನೆಸ್‌ನ್ನು ಲಾಭದಾಯಕವಾಗಿ ನಡೆಸುವ ಕಲೆ ಕರಗತ ಮಾಡಿಕೊಂಡಿರುವ ಮೋದಿ ಮಾಮನ ಕೇಸರಿ ಸರ್ಕಾರದ ಪ್ರಚಾರದ ತೆವಲಿಗೆ ದೇಶದ ಬೊಕ್ಕಸವೇ ಬರಿದಾಗುತ್ತಿದೆ. ವಿರೋಧಾಭಾಸ, ದ್ವಂದ್ವ ವ್ಯಕ್ತಿತ್ವ. ಮೋದಿ ಹೇಳೋದೇ ಒಂದು; ಮಾಡೋದು ಮತ್ತೊಂದು. ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡ್ತೇನೆಂದು ಹೇಳಿದ್ದ ಈ ಅಭಿನವ ರಾಷ್ಟ್ರಪಿತ, ನಿರುದ್ಯೋಗಿಗಳಿಗೆ ಬಜ್ಜಿ ಮಾರಾಟ ಮಾಡಿ ಎಂದು ಮುಲಾಜಿಲ್ಲದೆ ಛೇಡಿಸುತ್ತಾರೆ. “ಆಧಾರ” ಟೀಕಿಸಿದ್ದ ಮೋದಿಗೀಗ ಅದೇ ಆಧಾರ.! ಪ್ರಚಾರ ಘಲಕ, ಜಾಹೀರಾತುಗಳಲ್ಲಷ್ಟೇ ಬದುಕಿರುವ ಮೋದಿ ಸರ್ಕಾರ, ದಿಕ್ಕು ದಿವಾಳಿಯಾಗುತ್ತಿರುವ ದೇಶದ ಪ್ರತಿ ಹಳ್ಳಿ, ಪ್ರತಿ ಮನೆಗೆ ವಿದ್ಯುತ್‍ ಒದಗಿಸಿ ಬೆಳಗುತ್ತೇನೆಂದು ಹೇಳುವುದೇ ವಿಪರ್ಯಾಸ..!

ವಿದ್ಯುತ್ ಕಾಣದ ಹಳ್ಳಿ ಇಲ್ಲವೇ, ಕತ್ತಲೆಯ ಮನೆಗೆ ಕೇಂದ್ರ ಸರ್ಕಾರದ ಅನುದಾನದಿಂದ ಕರೆಂಟ್‍ ಸೌಲಭ್ಯ ನೀಡಲು ಒದಗಿಸುವ ಯೋಜನೆಗೆ ಪ್ರಧಾನಮಂತ್ರಿ ಸಹಜ ಬಿಜಲಿ ಹರ್ ಘರ್ ಯೋಜನಾ (ಸೌಭಾಗ್ಯ ಯೋಜನೆ) ಎಂದು ನಾಮಕರಣ ಮಾಡಲಾಗಿದೆ. ರಾಜ್ಯದಾದ್ಯಂತ ಈ ಕಾಮಗಾರಿ ನಡೆಯುತ್ತಿದೆ. ಆದರೆ ನಿರೀಕ್ಷಿಸಿದಂತೆ ಕೆಲಸ ಹಾಗೂ ಉದ್ದೇಶ ಈಡೇರುತ್ತಿಲ್ಲ. ಮೋದಿಯನ್ನು ಸುದ್ದಿಯಲ್ಲಿಡುವ ಹಿಡನ್ ಅಜೆಂಡಾದ ಈ ಸೌಭಾಗ್ಯ ಹಿಕಮತ್ತೀಗ ಜಗಜ್ಜಾಹೀರಾಗಿ ಹೋಗಿದೆ. ಸಾರಾಸಗಾಟಾಗಿ ಹಳ್ಳಿ-ಹಳ್ಳಿಗಳ ಅಗಸೆ ಬಾಗಿಲಿನಲ್ಲಿ ಮೋದಿ ಚಿತ್ರವಿರುವ “ಸೌಭಾಗ್ಯ ಫಲಕ” ನಿಲ್ಲಿಸಲಾಗುತ್ತಿದೆ. ಫಲಕದ ಸಂದೇಶವೆಂದರೆ, ಕತ್ತಲಿಲ್ಲದ್ದ ಈ ಹಳ್ಳಿಯ ಪ್ರತಿ ಮನೆಯೂ ಮೋದಿ ದಯೆಯಿಂದ ವಿದ್ಯುತ್ ಬೆಳಕು ಕಂಡಿದೆ ಎಂಬುದು.

ಇವುಗಳಲ್ಲಿ ಬಹುತೇಕ ಮೋಸ-ವಂಚನೆಯ ಘಾತುಕ ಫಲಕಗಳು. ವಿದ್ಯುತ್‍ ಕಂಡು ಹಲವು ವರ್ಷ ಅಥವಾ ಎರಡ್ಮೂರು ದಶಕವಾಗಿರುವ ಗ್ರಾಮಗಳಲ್ಲಿ ಸೌಭಾಗ್ಯ ಫಲಕ ಹಾಕಲಾಗಿದೆ.! ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಹೊನ್ನಾವರದಂಥ ತಾಲೂಕುಗಳ ದುರ್ಗಮ ಹಳ್ಳಿಗಳಲ್ಲಿನ್ನೂ ಕರೆಂಟ್‍ ಸುಳಿವೇ ಇಲ್ಲ. ಇಂಥ ಹಳ್ಳಿಗಳನ್ನು ಬೇಕಂತಲೇ ಕಡೆಗಣಿಸಿ, ಬೆಳಕಿರುವಲ್ಲಿ ಬೋಗಸ್ ಬೋರ್ಡ್‌ ಹಾಕಿ, ಮೋದಿಯನ್ನು ಬೆಳಕಿನ ಭಾಗ್ಯವಿದಾತ ಎಂದು ಬಿಂಬಿಸಲು ಕೋಟ್ಯಾಂತರ ರೂಪಾಯಿಯನ್ನು ಶಕ್ತಿ ಮಂತ್ರಾಲಯ ಪೋಲು ಮಾಡುತ್ತಿದೆ. ಇದೊಂದು ಸಾವಿರಾರು ಕೋಟಿ ರೂ.ಗಳ ಕರ್ಮಕಾಂಡ. ಮೋದಿಯ ಪ್ರಚಾರದ ದೌರ್ಬಲ್ಯ ಅರ್ಥ ಮಾಡಿಕೊಂಡಿರುವ ವಿದ್ಯುತ್ ಇಲಾಖೆಯ ಪ್ರಬೃತಿಗಳು, ಗುತ್ತಿಗೆದಾರರು ಹಗಲು ದರೋಡೆಗೆ ಇಳಿದಿದ್ದಾರೆ.

ತಮಾಷೆ ನೋಡಿ; ಹಳ್ಳಿಗಳಲ್ಲಿ ತಿಂಗಳಲ್ಲಿ ಹೆಚ್ಚಿನ ದಿನ ಕರೆಂಟೇ ಇರುವುದಿಲ್ಲ. ಮಳೆಗಾಲದಲ್ಲಿ ಸಣ್ಣ ಗಾಳಿ-ಮಳೆ ಬಂದರೂ ಸಾಕು, ಸೀಮೆ ಎಣ್ಣೆಯ ಬುಡ್ಡಿ ದೀಪದಂತೆ ಕರೆಂಟ್ ಹೋಯ್ದಾಡುತ್ತಾ ಕಡೆಗೆ ಹೋದ ವಿದ್ಯುತ್‍ ವಾರವಾದರೂ ಬರುವುದೇ ಇಲ್ಲ.! ಆಗಲೋ, ಈಗಲೋ ಹರಿದು ಬೀಳುವಂಥ ಜೀರ್ಣಗೊಂಡ ತಂತಿಗಳು, ಮುರಿದು ಬೀಳಲು ಸಿದ್ಧವಾಗಿರುವ ಕಂಬಗಳು, ಕಳಪೆ ಟ್ರಾನ್ಸ್‌ಫಾರ್ಮರ್‌ ಮತ್ತಿತರ ಉಪಕರಣಗಳಿಂದ ವಿದ್ಯುತ್‍ ಸಂಪರ್ಕ ಇರುವಲ್ಲೇ ಸಮಾಧಾನಕರ ವಿದ್ಯುತ್ ಪೂರೈಕೆ ಇಲ್ಲ. ಇಂಥದ್ದರಲ್ಲಿ ಮೋದಿಜಿ ಮನೆ-ಮನೆಗೆ ವಿದ್ಯುತ್‍ ಕೊಟ್ಟಿದ್ದೇನೆಂದು ಸ್ಥಾವರವಾಗುವ ತರಾತುರಿಯಲ್ಲಿರುವುದು ಹಾಸ್ಯಾಸ್ಪದವೇ ಸರಿ.

ಬೆಳಗ್ಗೆ ಒಂದು ದೇಶ; ರಾತ್ರಿ ಒಂದು ದೇಶ ಸುತ್ತುವ ಮೋದಿಜಿ ಭಾರತದ ಎಲ್ಲ ಹಳ್ಳಿಗಳು, ವಿದ್ಯುತ್‍ ದೀಪದಿಂದ ಝಗಮಗಿಸುತ್ತಿವೆ ಎಂದು ಒಣ ಪೋಸು ಕೊಡುವ ಉದ್ದೇಶದಿಂದ “ಆಟ” ಆಡುತ್ತಿದ್ದಾರೆಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ದೇಶ ಕತ್ತಲು ಮುಕ್ತವಾಗಿದೆ ಎಂದು ವಿಶ್ವಸಂಸ್ಥೆಗೆ ತೋರಿಸಿಕೊಳ್ಳುವ ಐಡಿಯಾ ಮೋದಿಯದು. ಸುಳ್ಳು ಫಲಕ ಹಾಕಲಾಗಿರುವ ಹಳ್ಳಿಗಳ ಚಿತ್ರ, ಉಪಗ್ರಹದ ಮೂಲಕ ತೆಗೆದು ವಿಶ್ವ ಸಮುದಾಯದ ಮುಂದೆ ಮಿಂಚುವ “ಸೌಭಾಗ್ಯ”ಕ್ಕಾಗಿ ಮೋದಿ ಪಠಾಲಮ್ ಕಾತರಿಸುತ್ತಿದೆಯಷ್ಟೇ.

ಇದೆಂಥ ಬೋಗಸ್ ಯೋಜನೆ ಮತ್ತು ಕೋಟಿ-ಕೋಟಿ ಲೂಟಿ ಪ್ರಾಜೆಕ್ಟ್ ಎಂಬುದಕ್ಕೆ ಸಣ್ಣದೊಂದು ಸ್ಯಾಂಪಲ್ ಇಲ್ಲಿದೆ. ಉತ್ತರ ಕನ್ನಡದ ಶಿರಸಿ ಉಪ ವಿಭಾಗದ 638 ಗ್ರಾಮಗಳಲ್ಲಿ ಬಹುತೇಕ ಹಳ್ಳಿಗಳು ಹಲವು ವರ್ಷದ ಹಿಂದೆಯೇ ವಿದ್ಯುತ್‍ ಸಂಪರ್ಕ ಹೊಂದಿವೆ. ಸೌಭಾಗ್ಯ ಯೋಜನೆಯಲ್ಲಿ ಕೇವಲ 8-10 ಮನೆಗಳಿಗಷ್ಟೇ ಕರೆಂಟ್‌ ಸಿಕ್ಕಿದೆ. ಆದರೆ ಎಲ್ಲ 638 ಹಳ್ಳಿಗಳಲ್ಲೂ “ಪ್ರಧಾನಿ ಸೌಭಾಗ್ಯ ಹಳ್ಳಿ” ಫೇಕ್ ಫಲಕವನ್ನು ವಿದ್ಯುತ್ ಇಲಾಖೆ ಹಾಕುತ್ತಿದೆ. ಈಗಾಗಲೇ ಸುಮಾರು ಐದುನೂರು ಹಳ್ಳಿಗಳಲ್ಲಿ ಸುಳ್ಳು ಬೋರ್ಡ್ ರಾರಾಜಿಸುತ್ತಿವೆ. ಒಂದು ಬೋರ್ಡಿಗೆ ಸರ್ಕಾರದ ಲೆಕ್ಕದಲ್ಲಿ 17,693 ರೂ. ವೆಚ್ಚ ತಗುಲಿದೆ. ಅಂದರೆ ಶಿರಸಿ ಉಪ ವಿಭಾದಲ್ಲೇ ನೂರಾರು ಕೋಟಿ ರೂ. ಟೆಂಡರ್ ಸ್ಕ್ಯಾಂಡಲ್ ಆಗುತ್ತಿದೆಯಾದರೆ, ಕರ್ನಾಟಕದಲ್ಲಿ ಎಷ್ಟು ಕೋಟಿ ಆಗಿರಬಹುದು..? ಇಡೀ ಭಾರತದಲ್ಲಾಗುತ್ತಿರುವ ಲೂಟಿಯ ಮೊತ್ತ ಎಷ್ಟು ಆಗಬಹುದು ಎಂಬುದನ್ನು ನೀವೇ ಊಹಿಸಿ..! ಈಗ ಮೋದಿಯ ಗಿಮಿಕ್‍ಗೆ ಏನೆನ್ನುತ್ತೀರಿ..!?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here