Homeರಾಜಕೀಯಕಳೆದ ಏಳು ವರ್ಷಗಳಿಂದ ಅಂಬೇಂಡ್ಕರ್‌ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ನೀಡದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ!

ಕಳೆದ ಏಳು ವರ್ಷಗಳಿಂದ ಅಂಬೇಂಡ್ಕರ್‌ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ನೀಡದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ!

- Advertisement -
- Advertisement -

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಸರ್ಕಾರ ಕಳೆದ ಏಳು ವರ್ಷಗಳ ಅಧಿಕಾರವಧಿಯಲ್ಲಿ ಒಮ್ಮೆಯೂ ನೀಡಿಲ್ಲ. ಡಾ. ಅಂಬೇಡ್ಕರ್‌ ದಿನಾಚರಣೆ ಅಂಗವಾಗಿ ವಿತರಿಸಲಾಗುತ್ತಿದ್ದ ʼಅಂಬೇಡ್ಕರ್‌ ರಾಷ್ಟ್ರೀಯ ಪ್ರಶಸ್ತಿʼಯನ್ನು ನೀಡದೆ ಕಡೆಗಣಿಸುವ ನೀತಿಯನ್ನು ಮೋದಿ ಸರ್ಕಾರ ಅಳವಡಿಸಿಕೊಂಡಿದೆ.

ತಮಾಷೆಯ ಸಂಗತಿಯೆಂದರೆ ಅಂಬೇಡ್ಕರ್‌ ಹೆಸರಿನ ಯಾವುದೇ ಪ್ರಶಸ್ತಿಯನ್ನು ಕೊಡದಿದ್ದರೂ ಕೂಡ ಪ್ರತಿ ವರ್ಷ ಈ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸುವ ಜಾಹೀರಾತುಗಳು ಮಾತ್ರ ವಾಡಿಕೆಯಂತೆ ಎಲ್ಲೆಡೆ ರಾರಾಜಿಸುತ್ತವೆ. ಇದಕ್ಕಾಗಿ ಪ್ರತಿವರ್ಷ ಸುಮಾರು 50 ಲಕ್ಷ ರೂಪಾಯಿಗಳ ಬೊಕ್ಕಸದ ಹಣವೂ ವೆಚ್ಚವಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಯ ನಿರ್ದೇಶಕ ವಿಕಾಸ್‌ ತ್ರಿವೇದಿಯವರನ್ನು ‘ದ ವೈರ್‌’ನ ವರದಿಗಾರರು ಸಂಪರ್ಕಿಸಿದಾಗ, ಈ ವರ್ಷ ಕೂಡ ಪ್ರಶಸ್ತಿಗಳನ್ನು ಕೊಡಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅದಕ್ಕೆ ‘ಆಡಳಿತಾತ್ಮಕ’ ತೊಡಕುಗಳು ಕಾರಣವಂತೆ! ಕಳೆದ ಏಳು ವರ್ಷಗಳಿಂದಲೂ ಇದೇ ‘ಆಡಳಿತಾತ್ಮಕ’ ತೊಡಕುಗಳ ಕಾರಣ ಒಡ್ಡಿ ಪ್ರಶಸ್ತಿಯನ್ನು ಮೂಲೆಗುಂಪು ಮಾಡಲಾಗಿದೆ. ಈ ಫೌಂಡೇಷನ್‌ನ ಆಂತರಿಕ ಮಾಹಿತಿಯ ಪ್ರಕಾರ ಈ ಪ್ರಶಸ್ತಿಗಳನ್ನೇ ಮರುಪರಿಶೀಲಿಸಲಾಗುತ್ತಿದೆ!

ಇದನ್ನೂ ಓದಿ: ಅಗತ್ಯವಿದ್ದರಷ್ಟೆ ಈಶ್ವರಪ್ಪರನ್ನು ಪೊಲೀಸರು ಬಂಧಿಸಲಿದ್ದಾರೆ: ಸಿಎಂ ಬೊಮ್ಮಾಯಿ

ವಿಪರ್ಯಾಸವೆಂದರೆ, ಅರ್ಜಿ ಆಹ್ವಾನಿಸಿ ಜಾಹೀರಾತು ಕೊಟ್ಟಿರುವ ಫೌಂಡೇಷನ್‌ನಿಂದ ಪ್ರಶಸ್ತಿ ಕೊಡದಿರುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಅಥವಾ ಅವರ ಜಾಲತಾಣದಲ್ಲಿ ಜಾಲಾಡಿದರೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ‘ದ ವೈರ್‌’ನಲ್ಲಿ ವರದಿಯಾಗಿರುವಂತೆ, ಜಾಹೀರಾತು ಪ್ರಕಟಿಸಿದ ನಂತರ ಪ್ರಧಾನ ಮಂತ್ರಿಯ ಕಚೇರಿಯು ಪ್ರಶಸ್ತಿಗಳಿಗೆ ಸಂಬಂಧಿಸಿ ಹೆಚ್ಚುವರಿ ಮಾಹಿತಿ ಕೋರಿದೆ.

1992ರಲ್ಲಿ ‘ಡಾ.ಅಂಬೇಡ್ಕರ್‌ ರಾಷ್ಟ್ರೀಯ ಪ್ರಶಸ್ತಿ’ಯನ್ನು ಹಾಗೂ 1995ರಲ್ಲಿ ‘ಡಾ.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಸ್ಥಾಪಿಸಲಾಗಿತ್ತು. ಅಂಬೇಡ್ಕರ್‌ ಅವರ ಆಶಯಗಳ ಈಡೇರಿಕೆಗಾಗಿ ಕೆಲಸ ಮಾಡುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ಈ ರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಗಮನಾರ್ಹ ಕೆಲಸ ಮಾಡಿದವರಿಗೆ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ರಾಷ್ಟ್ರೀಯ ಪ್ರಶಸ್ತಿಯು ₹10 ಲಕ್ಷ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಒಳಗೊಂಡಿವೆ.

ಕಳೆದ ಏಳು ವರ್ಷಗಳಿಂದ ಅಂಬೇಂಡ್ಕರ್‌ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ನೀಡದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ!
ಡಾ. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, 2015 ರ ಪೋಸ್ಟರ್.

ಒಕ್ಕೂಟ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಅಂಬೇಡ್ಕರ್‌ ಫೌಂಡೇಷನ್‌ ಈ ಪ್ರಶಸ್ತಿ ಪ್ರಧಾನ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದೆ. ಇಲಾಖೆಯ ಸಚಿವರು ಈ ಸಂಸ್ಥೆಯ ಚೇರ್ಮನ್‌ ಆಗಿದ್ದು, ಕೆಲವು ಉನ್ನತ ಅಧಿಕಾರಿಗಳು ಹಾಗೂ ಕೆಲವು ನಾಮಾಂಕಿತ ಸದಸ್ಯರು ಕೂಡ ಈ ಸಂಸ್ಥೆಯ ಸದಸ್ಯರಾಗಿರುತ್ತಾರೆ.

ಇದನ್ನೂ ಓದಿ: ಅಂಬೇಡ್ಕರ್‌ ಈಗ ಇದ್ದಿದ್ದರೆ ಬಿಜೆಪಿಗರು ಅವರನ್ನು ಪಾಕ್ ಪರ ಎನ್ನುತ್ತಿದ್ದರು: ಮೆಹಬೂಬಾ ಮುಫ್ತಿ

ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್‌ ಅವರ ಹೆಸರನ್ನು ಬಳಸಿಕೊಳ್ಳುವಲ್ಲಿ ನರೇಂದ್ರ ಮೋದಿಯವರು ಹಿಂದೆ ಬಿದ್ದಿಲ್ಲ. ಸಂದರ್ಭ ಒದಗಿದಾಗೆಲ್ಲಾ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕಿ ಫೋಟೋ ತೆಗೆಸಿಕೊಳ್ಳುವುದು, ಬಣ್ಣದ ಮಾತುಗಳಲ್ಲಿ ಹೊಗಳುವುದನ್ನು ಒಂದು ಸಂಪ್ರದಾಯದಂತೆ ಪಾಲಿಸುತ್ತಾ ಬಂದಿದ್ದಾರೆ. ಈ ನಡೆಗಳು ಅಂಬೇಡ್ಕರ್‌ರನ್ನು ದೈವೀಕರಿಸಿ, ಕೇವಲ ಮೂರ್ತಿ ಪೂಜೆಗೆ ಸೀಮಿತಗೊಳಿಸುವ ಹುನ್ನಾರದ ಭಾಗ ಎನ್ನಬಹುದು.

ವಾಸ್ತವದಲ್ಲಿ ಅವರು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷ ಹಾಗೂ ಅದರ ಹಿಂದಿನ ಆರೆಸ್ಸೆಸ್‌ ಕೂಟ ಅಂಬೇಡ್ಕರ್‌ ಅವರ ವಿಚಾರಗಳಿಗೆ ಕಳಂಕ ಹಚ್ಚಲು, ಅವರ ನೆನಪನ್ನು ಮರೆಮಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಯಾಕೆಂದರೆ ಅಂಬೇಡ್ಕರ್‌ ಅವರು ಪ್ರತಿಪಾದಿಸುವ ಸ್ವಾತಂತ್ರ್ಯ, ಸಮಾನತೆಯ ವಿಚಾರಗಳು ಆರೆಸ್ಸೆಸ್‌ ಪ್ರತಿಪಾದಿಸುವ ಮನುವಾದಿ ವಿಚಾರಗಳಿಗೆ ತದ್ವಿರುದ್ಧವಾಗಿವೆ. ಹೀಗಾಗಿ ಅಂಬೇಡ್ಕರ್‌ ಅವರ ವಿಚಾರವನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ.

ಉದಾಹರಣೆಗೆ ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ಬೆನ್ನಹಿಂದೆಯೇ ಅಂದರೆ 1949ರ ನವಂಬರ್‌ 30ರಂದು ಆರೆಸ್ಸೆಸ್‌ ತನ್ನ ಮುಖವಾಣಿ ‘ಆರ್ಗನೈಸರ್‌’ನಲ್ಲಿ ಹೀಗೆಂದು ಬರೆದಿತ್ತು: “ಭಾರತದ ಸಂವಿಧಾನದ ಹೀನಾಯ ಸಂಗತಿಯೆಂದರೆ ಇದರಲ್ಲಿ ಭಾರತೀಯ ಎಂಬುದು ಏನೂ ಇಲ್ಲ…ಇದರಲ್ಲಿ ಪ್ರಾಚೀನ ಭಾರತೀಯ ಸಾಂವಿಧಾನಿಕ ಕಾನೂನುಗಳು ಎಲ್ಲಿಯೂ ಕಾಣಿಸುವುದಿಲ್ಲ…ಮನುವಿನ ಕಾನೂನುಗಳು ಬಹಳ ಹಿಂದೆಯೇ ರಚಿತವಾಗಿವೆ. ಮನುಸ್ಮೃತಿಯಲ್ಲಿ ಹೇಳಲಾಗಿರುವ ಈ ಕಾನೂನುಗಳು ಇಂದಿಗೂ ಮಾನ್ಯವಾಗಿವೆ…ಆದರೆ ನಮ್ಮ ಸಂವಿಧಾನದ ಪಂಡಿತರು ಈ ಅಂಶಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ”

ಇದನ್ನೂ ಓದಿ: ‘ಬಿಫೆಸ್‌’ನಲ್ಲಿ ಸಾವರ್ಕರ್‌ ಪ್ರತ್ಯಕ್ಷ; ಮಾದರಿ ವ್ಯಕ್ತಿಗಳ ಪೈಕಿ ‘ಅಂಬೇಡ್ಕರ್‌’ ನಾಪತ್ತೆ!

ಈ ಶಕ್ತಿಗಳು ಅಂಬೇಡ್ಕರ್‌ ಹಾಗೂ ಸಂವಿಧಾನದ ಮೇಲೆ ಅಂದಿನಿಂದಲೂ ದಾಳಿ ಮಾಡುತ್ತಿದ್ದವು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಬಾಬಾ ಸಾಹೇಬರು ನಮ್ಮ ಸಂವಿಧಾನವನ್ನು ರಚಿಸುವ ಎಷ್ಟೋ ವರ್ಷಗಳ ಮುಂಚೆಯೇ ಮನುಸ್ಮೃತಿಯನ್ನು ಬಹಿರಂಗವಾಗಿಯೇ ಸುಟ್ಟುಹಾಕಿ ಪ್ರತಿಭಟಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಬಿಜೆಪಿ ಮತ್ತು ಆರೆಸ್ಸೆಸ್‌ ಕೂಟ ಅಂಬೇಡ್ಕರ್‌ ಅವರ ನೆನಪನ್ನು ಮರೆಮಾಡಲು ಅಥವಾ ಅವರನ್ನು ಕಡೆಗಣಿಸಲು ಅನಾದಿಯಿಂದಲೂ ನಾನಾ ತಂತ್ರಗಳನ್ನು ಹೆಣೆಯುತ್ತಾ ಬಂದಿದೆ. ಅಂಬೇಡ್ಕರ್‌ ಅವರು ನಮ್ಮನ್ನಗಲಿದ ಡಿಸೆಂಬರ್‌ 6ನೇ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಅಂದು ಲಕ್ಷಾಂತರ ಅಂಬೇಡ್ಕರ್‌ ಅಭಿಮಾನಿಗಳು ಅವರ ಸಮಾಧಿ ಸ್ಥಳವಿರುವ ಚೈತ್ಯಭೂಮಿಗೆ ಭೇಟಿ ನೀಡುತ್ತಾರೆ. ಅಂಬೇಡ್ಕರ್‌ ಅವರ ಬದುಕು ಮತ್ತು ಹೋರಾಟವನ್ನು ನೆನೆಯುತ್ತಾರೆ. ಅವರ ವಿಚಾರಗಳಿಂದ ಸ್ಫೂರ್ತಿ ಪಡೆಯುತ್ತಾರೆ.

1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಆರೆಸ್ಸೆಸ್‌ ಕೂಟ ಆರಿಸಿಕೊಂಡಿದ್ದು ಇದೇ ಡಿಸೆಂಬರ್ ಆರನೇ ದಿನವನ್ನು. ತದನಂತರದಲ್ಲಿ ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಮುಂತಾದ ಕೇಸರಿ ಕೂಟದ ಸಂಘಟನೆಗಳು ಡಿಸೆಂಬರ್‌ ಆರರಂದು ‘ಶೌರ್ಯ ದಿವಸ್‌’ ಅಥವಾ ‘ವಿಜಯ್‌ ದಿವಸ್‌’ ಆಗಿ ಆಚರಿಸುತ್ತಾ ಬಂದಿದ್ದಾರೆ. ಇದು ಕಾಕತಾಳೀಯವೇನಲ್ಲ; ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ನಿಪುಣ ತಂತ್ರ.

ಇದನ್ನೂ ಓದಿ: ‘ಅಂಬೇಡ್ಕರ್‌ರಿಗೆ ಅವಮಾನವಾದರೆ ಶೋಷಿತ ಸಮುದಾಯ ಸುಮ್ಮನಿರುವುದಿಲ್ಲ’

ಅಂಬೇಡ್ಕರ್‌ ಅವರ ನೆನಪುಗಳನ್ನು ಮಸುಕುಗೊಳಿಸಿ, ಅವರನ್ನು ನೇಪಥ್ಯಕ್ಕೆ ಸರಿಸುವ ಉದ್ದೇಶ ಒಂದು ಕಾರ್ಯಸೂಚಿಯಾದರೆ, ಅಂಬೇಡ್ಕರ್‌ ಅವರ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಪ್ರಜಾತಂತ್ರದ ವಿಚಾರಗಳನ್ನು ಬದಿಗೆ ಸರಿಸಿ ಒಡೆದು ಆಳುವ ದ್ವೇಷರಾಜಕಾರಣವನ್ನು ಜನಮಾನಸದಲ್ಲಿ ಬಿತ್ತುವುದು ಮತ್ತೊಂದು ಕಾರ್ಯಸೂಚಿ. ಹಾಗೆಯೇ ನಾವು ಸಂವಿಧಾನ ಅಳವಡಿಸಿಕೊಂಡ ನವಂಬರ್‌ 26 ರ ಸುತ್ತಮುತ್ತ ಹಿಂಸೆಗೆ ಪ್ರಚೋದನೆ ನೀಡುವ, ದ್ವೇಷ ಭಾಷಣಗಳಿಗೆ ಕುಖ್ಯಾತವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವುಗಳನ್ನು ‘ಧರ್ಮ ಸಂಸತ್‌’ ಎಂದು ಕರೆಯಲಾಗುತ್ತದೆ. ಈ ಸಂಸತ್‌ ಎಂಬ ಪದವನ್ನೂ ಕೂಡ ಬಹಳ ತಂತ್ರಗಾರಿಕೆಯಿಂದ ಧರ್ಮದ ಜೊತೆ ಜೋಡಿಸಲಾಗಿದೆ. ದೇಶದ ಪ್ರಜಾತಂತ್ರ ಪ್ರೇಮಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೆ? ಇನ್‌ಪುಟ್‌‌: ದಿ ವೈರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...