ಸಚಿವ ಸಂಪುಟ ವಿಸ್ತರಣೆಯಿಂದ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತಲೆದೋರಿತ್ತು. ಇದರೊಟ್ಟಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧವೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಗೃಹ ಮಂತ್ರಿ ಅಮಿತ್ ಶಾ ಅತೃಪ್ತರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ ಇದಾವುದಕ್ಕೂ ಬಗ್ಗದ ಅತೃಪ್ತರು ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ಮತ್ತು ಸಚಿವಾಕಾಂಕ್ಷಿ ಎಂ.ಪಿ.ರೇಣುಕಾಚಾರ್ಯ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ದೂರು ನೀಡಿದ್ದಾರೆ. ಇನ್ನು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮತ್ತು ಕೆ. ಶಿವನಗೌಡ ನಾಯಕ್ ಬೆಂಗಳೂರಿನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರಾದ ಅರವಿಂದ ಬೆಲ್ಲದ ಮತ್ತು ಬಿ.ಸಿ.ನಾಗೇಶ್ (ತಿಪಟೂರು) ಜತೆ ಮಾತುಕತೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅವರನ್ನು ಸಮಾಧಾನಪಡಿಸಿದ್ದಾರೆ.
ಅತೃಪ್ತ ಶಾಸಕರು ಒಂದೆಡೆ ಸೇರಿ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಮೂಲಕ ಶಾಸಕರನ್ನು ಸಂಪರ್ಕಿಸಿ ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ-ಸ್ಫೋಟಗೊಂಡ ಭಿನ್ನಮತ: ನಮ್ಮ ಭಿಕ್ಷೆಯಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು..!
ಪ್ರಹ್ಲಾದ್ ಜೋಶಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, “ಸಚಿವ ಸಂಪುಟ ವಿಸ್ತರಣೆ ಮತ್ತು ಆ ಬಳಿಕ ನಡೆದ ರಾಜಕೀಯ ಬೆಳವಣಿಗಳ ಬಗ್ಗೆ ಮಾತನಾಡಿದ್ದೇನೆ. ಸೋತವರನ್ನು ಮಂತ್ರಿ ಮಾಡಿದ್ದು ಸರಿಯಲ್ಲ. ನನಗಿಂತಲೂ ಹಿರಿಯರಾದ ಹಲವು ಶಾಸಕರು ಇದ್ದಾರೆ. ಅವರನ್ನು ಮಂತ್ರಿ ಮಾಡಬಹುದಿತ್ತು ಎಂದು ಹೇಳಿದ್ದೇನೆ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಿದ್ದು ಸರಿಯಲ್ಲ ಎಂಬುದನ್ನು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಹೇಳಿದ್ದೆವು. ಯೋಗೇಶ್ವರ್ ಅವರಿಂದಲೇ ಬಿಜೆಪಿ ಸರ್ಕಾರ ಬಂದಿತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ” ಎಂದರು.
“ಈಗಿರುವ ಎಲ್ಲ 32 ಸಚಿವರನ್ನೂ ಕೈಬಿಟ್ಟು, ಹೊಸದಾಗಿ ಸಂಪುಟ ರಚಿಸಬೇಕು. ಕೈಬಿಟ್ಟವರಿಗೆ ಪಕ್ಷದ ಸಂಘಟನೆ ಹೊಣೆ ಮತ್ತು ಹಿರಿತನ ಆಧರಿಸಿ ಹೊಸಬರಿಗೆ ಅವಕಾಶ ನೀಡಬೇಕು” ಎಂದು ದೇವದುರ್ಗ ಶಾಸಕ ಶಿವನಗೌಡ ನಾಯಕ್ ಒತ್ತಾಯಿಸಿದ್ದಾರೆ
ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕಾವು ಬಿಜೆಪಿ ಒಳಗೆ ಏರುತ್ತಲೇ ಇದೆ. ಒಬ್ಬರ ನಂತರ ಮತ್ತೊಬ್ಬರು ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕುತ್ತಿದ್ದಾರೆ. ಬಿಜೆಪಿಗೆ ವಲಸೆ ಬಂದವರಲ್ಲಿಯೇ ಒಡಕುಂಟಾಗಿದೆ. ಇನ್ನು ಬಿಜೆಪಿಯ ಒಳಗೆ ಹಲವು ವರ್ಷಗಳಿಂದ ದುಡಿದವರಿಗೆ ಅವಕಾಶ ನೀಡಿಲ್ಲ ಎಂದು ಮೂಲ ಬಿಜೆಪಿಗರು ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಂಪುಟ ವಿಸ್ತರಣೆಯ ಕಾವು ಭಿನ್ನಮತವಾಗಿ ಮಾರ್ಪಟ್ಟು ಈಗ ಸ್ಫೋಟಗೊಂಡಿದೆ.
ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ
ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಕ್ಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್, ಶಾಸಕ ಯತ್ನಾಳ್, ಶಾಸಕ ರೇಣುಕಾಚಾರ್ಯ ಸೇರಿದಂತೆ ಹತ್ತಾರು ನಾಯಕರು ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಲಾಬಿ ಮಾಡಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಆರೋಪಿಸಿದ್ದರು. ಸಿ.ಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮತ್ತೆ ಕೆಲವರು ಕಿಡಿ ಕಾರಿದ್ದರು.
ಇವುಗಳನ್ನು ಗಮನಿಸಿದ ಯಡಿಯೂರಪ್ಪ, ನಿಮಗೆ ಅಸಮಾಧಾನವಿದ್ದರೆ ದೆಹಲಿಗೆ ಹೋಗಿ ದೂರು ನೀಡಿ ಎಂದು ಸಚಿವಾಕಾಂಕ್ಷಿಗಳಿಗೆ ಖಡಕ್ ಆಗಿ ಹೇಳಿದ್ದರು. ಈ ಬೆನ್ನಲ್ಲೇ ಅಮಿತ್ ಶಾ ನೀಡಿರುವ ಈ ಹೇಳಿಕೆ ಸಚಿವಾಕಾಂಕ್ಷಿಗಳಿಗೆ ಆಘಾತ ನೀಡಿದಂತಾಗಿತ್ತು.
ಕರ್ನಾಟಕ ಪ್ರವಾಸದಲ್ಲಿದ್ದ ಗೃಹ ಮಂತ್ರಿ ಅಮಿತ್ ಶಾ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದರು. “ಸಾರ್ವಜನಿಕವಾಗಿ ಮಾಡುತ್ತಿರುವ ವಿವೇಚನೆಯಿಲ್ಲದ ಟೀಕೆಗಳನ್ನು ನಿಲ್ಲಿಸಬೇಕು. ನೆನಪಿಡಿ ಪಕ್ಷ ಮೊದಲು. ವಿವೇಚನೆಯಿಲ್ಲದ ಕೃತ್ಯಗಳಲ್ಲಿ ಭಾಗಿಯಾಗಬಾರದು. ಪಕ್ಷಕ್ಕಾಗಿ ದುಡಿಯಬೇಕು” ಎಂದು ಎಚ್ಚರಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಟಿಆರ್‌ಪಿ ಹಗರಣ ಸುಳ್ಳು: ಯಾವುದೇ ದೂರು ದಾಖಲಾಗಿಲ್ಲ ಎಂದ ಸಿಸಿಬಿ ಪೊಲೀಸರು