Homeಮುಖಪುಟಆತುರದಲ್ಲಿ ಕ್ರಿಮಿನಲ್ ಕಾನೂನು ಸುಧಾರಣೆ ಸಾಧ್ಯವಾಗದು

ಆತುರದಲ್ಲಿ ಕ್ರಿಮಿನಲ್ ಕಾನೂನು ಸುಧಾರಣೆ ಸಾಧ್ಯವಾಗದು

ಸಾಮಾಜಿಕ ಸುಧಾರಣೆಯ ಒಂದು ಸಾಧನ ಎಂದು ಬಣ್ಣಿಸಲಾದ ಕಾನೂನನ್ನು ಹದಗೆಡಸಿದರೆ ಅದು ಜನರನ್ನು ಬಡಿದು ಹಾಕುವ ಮಾರಕಾಸ್ತ್ರವಾಗಲಿದೆ.

- Advertisement -
- Advertisement -

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾನೂನು ಸುಧಾರಣೆಯ ಪ್ರಕ್ರಿಯೆಗೆ ಎರಡು ನೂರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ಧಾರ್ಮಿಕ ಮತ್ತು ಸಾಂಪ್ರದಾಯಿಕ ಕಾನೂನು ಬಳಕೆಯಲ್ಲಿದ್ದಾಗ ಕಾನೂನು ಸುಧಾರಣೆ ಈಗಿನಂತೆ ಸಾಂಸ್ಥಿಕ ಸ್ವರೂಪವನ್ನು ಹೊಂದಿರಲಿಲ್ಲ. ಹತ್ತೊಂಬತ್ತನೆಯ ಶತಮಾನದ ಮೂರನೇ ದಶಕದ ನಂತರದಲ್ಲಿ ಕಾನೂನು ಆಯೋಗವನ್ನು ಸ್ಥಾಪಿಸಿ ಶಾಸನಗಳ ಕ್ರೋಢೀಕರಣಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಈ ನಿಟ್ಟಿನಲ್ಲಿ 1834 ರಲ್ಲಿ ಸ್ಥಾಪಿಸಲಾದ ಲಾರ್ಡ್ ಮಕಾಲೆ ನೇತೃತ್ವದ ಮೊದಲ ಕಾನೂನು ಆಯೋಗವು ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆಯನ್ನು ಕ್ರೋಢೀಕರಿಸಲು ಶಿಫಾರಸ್ಸು ಮಾಡಿತು. ನಂತರದಲ್ಲಿ 1853 ರಿಂದ 1879 ರ ಅವಧಿಯಲ್ಲಿನ ಎರಡು, ಮೂರು ಮತ್ತು ನಾಲ್ಕನೇ ಆಯೋಗಗಳು ಬ್ರಿಟನ್ ಮಾದರಿಯ ಶಾಸನಗಳು ಭಾರತದ ಸ್ಥಿತಿಗತಿಗಳಿಗೆ ಹೊಂದಿಸಲು ಶ್ರಮಿಸಿದವು. ಸಿವಿಲ್ ಪ್ರೆಸ್ಯೂಜರ್ ಕೋಡ್, ಕಾಂಟ್ರಾಕ್ಟ್ ಆಕ್ಟ್, ಸ್ವತ್ತು ಹಸ್ತಾಂತರ ಅಧಿನಿಯಮದಂತಹ ಮಹತ್ವದ ಕಾಯ್ದೆಗಳು ಜಾರಿಗೆ ಬರುವಲ್ಲಿ ಈ ಅವಧಿಯಲ್ಲಿನ ಕಾನೂನು ಆಯೋಗಗಳು ನಿರ್ಣಾಯಕ ಪಾತ್ರ ವಹಿಸಿದ್ದವು.

ಇದನ್ನೂ ಓದಿ: ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನವು ಕಾನೂನು ಸುಧಾರಣೆ ಸಾಗುತ್ತಿದ್ದ ದಿಕ್ಕನ್ನು ಮತ್ತಷ್ಟು ಸಾರ್ವತ್ರಿಕಗೊಳಿಸಿ ಭಾರತದ ಬಹುತ್ವದ ಪರಿಕಲ್ಪನೆಯನ್ನು ಎತ್ತಿಹಿಡಿಯಿತು.

ಸ್ವಾತಂತ್ರ್ಯ ಪೂರ್ವದಲ್ಲಿನ ಕಾನೂನುಗಳ ಮುಂದುವರಿಕೆಗೆ ಸಂವಿಧಾನದ 372 ನೆಯ ವಿಧಿಯಲ್ಲಿ ಅವಕಾಶವಿದೆ. ಆದರೂ ದೇಶದ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಕಾಯ್ದೆಗಳನ್ನು ಉಳಿಸಿಕೊಳ್ಳಲು ಮತ್ತು ರಚಿಸಲು ಸೂಕ್ತ ಶಿಫಾರಸ್ಸುಗಳನ್ನು ಮಾಡಲು 1955 ರಲ್ಲಿ ಮೊದಲ ಕಾನೂನು ಆಯೋಗವನ್ನು ರಚಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಇಪ್ಪತ್ತೆರಡು ಕಾನೂನು ಆಯೋಗಗಳು ನಿರ್ದಿಷ್ಟವಾದ ಕಾರ್ಯಸೂಚಿಯ ಅಡಿಯಲ್ಲಿ ಶಿಫಾರಸ್ಸುಗಳನ್ನು ಮಾಡಿವೆ. ವಿಭಿನ್ನ ಸನ್ನಿವೇಶಗಳಲ್ಲಿ ಜಸ್ಟೀಸ್ ಮಳಿಮಠ್ ಮತ್ತು ಜಸ್ಟೀಸ್ ವರ್ಮಾ ಕಮಿಟಿಯನ್ನು ನೇಮಿಸಿ ಕ್ರಿಮಿನಲ್ ಕಾನೂನು ಸುಧಾರಣೆಗೆ ಅಗತ್ಯವಾದ ಶಿಫಾರಸ್ಸುಗಳನ್ನು ಪಡೆದ ಉದಾಹರಣೆಯಿದೆ.

PC:Legal Conclave

ಇಡೀ ದೇಶವು ಲಾಕ್ಡೌನ್ ನಿರ್ಬಂಧಕ್ಕೆ ಒಳಗಾದಾಗಲೇ ಕೇಂದ್ರ ಗೃಹ ಸಚಿವಾಲಯ ಅಪರಾಧ ಕಾನೂನು ಸುಧಾರಣೆಗೆಂದು ಐವರು ಸದಸ್ಯರ ಕಮಿಟಿಯನ್ನು ನೇಮಿಸಿ ಅಪರಾಧ ಕಾನೂನು ಸುಧಾರಣೆ ಕುರಿತು ವರದಿಯನ್ನು ಸಲ್ಲಿಸಲು ಸೂಚಿಸಿದೆ.  ಬ್ರಿಟಿಷರ ಕಾಲದ ಅಪರಾಧ ಸಂಹಿತೆಗಳು ಸದ್ಯದ ಸನ್ನಿವೇಶಗಳಿಗೆ ಸರಿ ಹೊಂದದು ಎಂಬ ನೆಪವೊಡ್ಡಿ ಪ್ರಚಲಿತದಲ್ಲಿರುವ ಐಪಿಸಿ, ಸಿಆರ್ಪಿಸಿ, ಸಾಕ್ಷ್ಯ ಅಧಿನಿಯಮವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಕ್ರಮ ಇದಾಗಿದೆ. ಆರು ತಿಂಗಳೊಳಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಸಲ್ಲಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.

ಸಲಹೆ ಮತ್ತು ತಕರಾರುಗಳನ್ನು ಮಂಡಿಸಲು ಅಂತರ್ಜಾಲ ತಾಣವನ್ನು ಹೊರತು ಪಡಿಸಿದರೆ ಬೇರೆ ಮಾರ್ಗವಿಲ್ಲ. ಅಲ್ಲದೇ ಸಮಿತಿಯ ಅಧಿಕೃತ ಜಾಲತಾಣದಲ್ಲಿ ಮಾಹಿತಿ ಇಂಗ್ಲೀಷಿನಲ್ಲಿ ಮಾತ್ರ ಲಭ್ಯವಿದ್ದು, ಇತರೆ ಭಾಷೆಗಳಲ್ಲಿ ಮಾಹಿತಿ ದೊರಕದೇ ಇರುವುದರಿಂದ ಈ ಅಭಿಪ್ರಾಯ ಸಂಗ್ರಹಣೆಯ ಪ್ರಕ್ರಿಯೆಯಿಂದ ಬಹುಪ್ರಮಾಣದಲ್ಲಿ ಜನರು ಹೊರಗೆ ಉಳಿದಿದ್ದಾರೆ. ಈ ಹಿಂದೆ ಕಾನೂನು ಆಯೋಗ ಮತ್ತು ವಿಶೇಷ ಕಮಿಟಿಗಳ ನೇಮಕಾತಿಯ ಹಿಂದಿನ ನಿರ್ದಿಷ್ಟ ಕಾರಣ, ಕಾರ್ಯಸೂಚಿ, ಉದ್ದೇಶ ಮತ್ತು ಗುರಿಗಳನ್ನು ಗೊತ್ತುಪಡಿಸಲಾಗಿತ್ತು. ಸದ್ಯ ಚಾಲನೆಯಲ್ಲಿರುವ ಕಮಿಟಿಯ ಮುಂದೆ ಅಂತಹ ಯಾವುದೇ ಇತಿಮಿತಿಗಳ ಚೌಕಟ್ಟು ಕಂಡುಬರುತ್ತಿಲ್ಲ.

ಸಮಿತಿಯು ಪ್ರಕಟಿಸಿರುವ ಪ್ರಶ್ನಾವಳಿಯಲ್ಲಿ ಸಾರ್ವತ್ರಿಕವಾಗಿ ಚರ್ಚೆಗೆ ಒಳಗಾಗಬೇಕಾದ ನೂರಾರು ಸಂಗತಿಗಳಿವೆ. ಅವುಗಳಲ್ಲಿ ಗಂಭೀರವಾದ ಕೆಲವು ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಇದನ್ನೂ ಓದಿ: ಮತದಾರರ ವಿವರಗಳನ್ನು ಕಾನೂನುಬಾಹಿರವಾಗಿ ಹಂಚಿಕೊಂಡ ಚುನಾವಣಾ ಆಯೋಗ?

ಬ್ರಿಟಿಷ್ ಆಳ್ಮೆಗಾರರ ಹಿತಾಸಕ್ತಿ ಕಾಪಾಡಲೆಂದೇ ದಂಡ ಸಂಹಿತೆಯೊಳಗೆ ಸೇರಿಕೊಂಡ ರಾಜದ್ರೋಹದ ಅಪರಾಧವು ಸ್ವಾತಂತ್ರ್ಯ ನಂತರದಲ್ಲೂ ಮತ್ತೊಷ್ಟು ಬಲಿತು ಜನತಂತ್ರಕ್ಕೆ ಸವಾಲಾಗಿ ಕಾಡಿದೆ. ಚುನಾಯಿತ ಸರ್ಕಾರದ ನೀತಿ ನಿಲುವುಗಳ ವಿರುದ್ಧ ಸೆಟೆದು ನಿಂತವರ ಮೇಲೆ ರಾಜದ್ರೋಹದ ಪ್ರಕರಣಗಳು ದಾಖಲಾಗಿದೆ. ದುರುಪಯೋಗದ ಪ್ರಕರಣಗಳು ಹೇರಳವಾಗಿ ಕಣ್ಣ ಮುಂದೆ ಇದ್ದರೂ ಕೂಡ ಕಾನೂನು ಸುಧಾರಣಾ ಕಮಿಟಿ ಒಂದು ಹೆಜ್ಜೆ ಮುಂದೆ ಸಾಗಿ ರಾಜದ್ರೋಹ ಅಪರಾಧದ ಪರಿಭಾಷೆಯ ವ್ಯಾಪ್ತಿಯೊಳಗೆ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರು, ಚುನಾವಣಾ ಆಯುಕ್ತರು, ಮಾಹಿತಿ ಆಯುಕ್ತರು, ಅಟಾರ್ನಿ ಜನರಲ್ ಇವರನ್ನು ತರುವ ನಿಟ್ಟಿನಲ್ಲಿ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ಇದು ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸುವವರ ಸಾರ್ವಜನಿಕ ನಡೆನುಡಿಗಳನ್ನು ಪ್ರಶ್ನಿಸಲಾಗದಂತಹ ಸನ್ನಿವೇಶವನ್ನು ಉಂಟುಮಾಡಬಲ್ಲದು!

ತಮಿಳುನಾಡು ಲಾಕಪ್ ಡೆತ್: ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ

ಪೋಲಿಸ್ ವ್ಯವಸ್ಥೆಯನ್ನು ಈ ದೇಶದ ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗದ ಹೊರತು ಆರೋಪಿತನನ್ನು ಮುಗ್ಧ ಎಂದು ಭಾವಿಸುವ ಮತ್ತು ಆರೋಪಿತನಿಗೆ ತನಿಖಾ ಕಾಲದಲ್ಲಿ ಪೋಲೀಸರಿಂದ ಉಂಟಾಗಬಹುದಾದ ದೈಹಿಕ, ಮಾನಸಿಕ ಕಿರುಕುಳದಿಂದ ಸಾಂವಿಧಾನಿಕ ರಕ್ಷಣೆಯನ್ನು ಒದಗಿಸಲಾಗಿದೆ. ಆರೋಪಿಯೊಬ್ಬನು ಪೋಲೀಸರ ಬಂಧನದಲ್ಲಿರುವ ಕಾಲಕ್ಕೆ ನೀಡಿದಂತ ಹೇಳಿಕೆಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಅಲ್ಲದೆ ತನಿಖೆಯ ಕಾಲಕ್ಕೆ ದಾಖಲಿಸಲಾದ ಸಾಕ್ಷಿಗಳ ಹೇಳಿಕೆಗೂ ಮೌಲ್ಯವಿಲ್ಲ. ಆದಾಗ್ಯೂ ಪೋಲೀಸರ ಮುಂದೆ ಆರೋಪಿಯು ಮತ್ತು ಸಾಕ್ಷಿಗಳು ನೀಡುವ ಹೇಳಿಕೆಗೆ ಕಾನೂನಿನ ಮಾನ್ಯತೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಭಿಪ್ರಾಯವನ್ನು ಕೇಳಲಾಗಿದೆ.

ಆರೋಪವನ್ನು ಸಾಬೀತು ಪಡಿಸುವ ಅಂಶಗಳಿರುವ ದಾಖಲೆಗಳನ್ನು ಪಡೆಯುವ ಹಕ್ಕುಗಳನ್ನು ಸಿ.ಆರ್.ಪಿ.ಸಿ ಕಲಂ 207 & 173(8) ಅಡಿಯಲ್ಲಿ ನೀಡಲಾಗಿದೆ.  ಆಶ್ಚರ್ಯವೆಂದರೆ  ‘ಮುಚ್ಚಿದ ಲಕೋಟೆಯೊಳಗಿನ ಸಾಕ್ಷ್ಯ’ವನ್ನು ಸ್ವೀಕಾರಾರ್ಹವಗೊಳಿಸಲು ಅವಶ್ಯಕವೆನಿಸಿದ ಮಾರ್ಗಸೂಚಿಗಳ ಕುರಿತು ಸಲಹೆಗಳನ್ನು ಕೋರಲಾಗಿದೆ! ಅಂದರೆ ಆಪಾದನೆಗೆ ಗುರಿಯಾದ ವ್ಯಕ್ತಿಯೊರ್ವನಿಗೆ ಆತನ ವಿರುದ್ಧದ ಸಾಕ್ಷ್ಯವನ್ನು ತೋರದೆ ಕೇವಲ ನ್ಯಾಯಪೀಠಕ್ಕೆ ತೋರಿ ವಿಚಾರಣೆಗೆ ಒಳಪಡಿಸುವ ವಿಧಾನವೇ! ಇದು ಸೂಕ್ತ ಅವಕಾಶವನ್ನು ಒದಗಿಸದೇ ಮತ್ತು ಆಲಿಸದೇ ಯಾರನ್ನೂ ಶಿಕ್ಷೆಗೆ ಗುರಿ ಮಾಡಬಾರದು ಎಂಬ ನ್ಯಾಯಶಾಸ್ತ್ರದ ಮೂಲ ತಳಹದಿಯನ್ನೇ ಬುಡಮೇಲು ಮಾಡಲು ಹೊರಟಂತಿದೆ.

ಪ್ಲಾನಿಂಗ್, ಪ್ರಿಪರೇಶನ್, ಅಟೆಮ್ಟ್  ಮತ್ತು ಕಮಿಷನ್ ಎಂಬ ನಾಲ್ಕು ಹಂತಗಳನ್ನು ಅಪರಾಧದಲ್ಲಿ ಕಾಣಬಹುದು. ಕೆಲವು ಕ್ರಿಮಿನಲ್ ಪ್ರಕರಣಗಳಲ್ಲಿ ಮಾತ್ರ ಈ ಮೇಲಿನ ನಾಲ್ಕು ಹಂತಗಳಲ್ಲಿ ಯಾವುದೇ ಒಂದು ಕಂಡು ಬಂದರು ಶಿಕ್ಷೆಗೆ ಗುರಿಪಡಿಸಬಹುದು. ಮೇಲಿನ ನಾಲ್ಕು ಹಂತಗಳ ಕುರಿತು ದಂಡ ಸಂಹಿತೆಯಲ್ಲಿ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಕಮಿಟಿಯು ‘ಪ್ರಿಪರೇಶನ್’ ಎಂಬ ಪದವನ್ನು ಸ್ಪಷ್ಟವಾಗಿ ಐ.ಪಿ.ಸಿ ಯಲ್ಲಿ ವ್ಯಾಖ್ಯಾನಿಸ ಬೇಕೆ ಎಂದು ಕೇಳಿದೆ. ಅದರ ಮುಂದಿನ ಭಾಗದಲ್ಲಿ ‘ದೊಂಬಿ ನೆಡಸಲು ಸಿದ್ಧತೆ’ ಎಂಬ ಅರ್ಥವನ್ನು ಸೂಚಿಸುವ ಪ್ರಶ್ನೆ ಕೇಳಿದ್ದು ಇದನ್ನು ಪ್ರತ್ಯೇಕವಾಗಿ ಶಿಕ್ಷಾರ್ಹಗೊಳಿಸ ಬೇಕೆ ಎನ್ನಲಾಗಿದೆ.

ಇದನ್ನೂ ಓದಿ: ವಿಶ್ವದೆಲ್ಲೆಡೆ ಬಹುತೇಕ ರದ್ದುಗೊಂಡಿರುವ ವಸಾಹತುಶಾಹಿ ಪಳೆಯುಳಿಕೆ ಕಾನೂನು ‘ನ್ಯಾಯಾಂಗ ನಿಂದನೆ’

ತಮಿಳುನಾಡು ಲಾಕಪ್‌ಡೆತ್‌: ಎರಡು ಪ್ರಕರಣಗಳನ್ನು ದಾಖಲಿಸಿದ ಸಿಬಿಐ

ಕಳುವು ಮಾಡಲು ತಯಾರಿ, ದರೋಡೆ ಮಾಡಲು ತಯಾರಿಯಂತಹ ಕೆಲವೇ ಆಯ್ದ ಅಪರಾಧಗಳಲ್ಲಿ ‘ಸಿದ್ಧತೆ’ಯನ್ನು ಸಾಂದರ್ಭಿಕವಾಗಿ ವ್ಯಾಖ್ಯಾನಿಸಿ ಶಿಕ್ಷಾರ್ಹಗೊಳಿಸಲಾಗಿದೆ. ದೊಂಬಿಯನ್ನು ನೆಡಸುವುದಕ್ಕೂ ಮತ್ತು ದೊಂಬಿ ನೆಡಸಲು ಸಿದ್ಧತೆ ನಡುವೆ ಅಗಾಧವಾದ ವ್ಯತ್ಯಾಸವಿದೆ.

ಇಂತಹ ಅಂಶಗಳ ದುರುಪಯೋಗದ ಕುರಿತು ಅರಿಯಲು ಸಿಟಿಜನ್ ಶಿಪ್ ತಿದ್ದುಪಡಿ ಕಾಯ್ದೆಯ ವಿರುದ್ಧ ಹಮ್ಮಿಕೊಂಡಿದ್ದ ಹೋರಾಟಗಳನ್ನು ಹತ್ತಿಕ್ಕಲು ಬೆಂಗಳೂರು ನಗರದಲ್ಲಿ ಪೋಲೀಸರು ಹೇರಿದ್ದ ಪ್ರತಿಬಂಧಕಾಜ್ಞೆಯ ಆದೇಶವನ್ನು ಒಮ್ಮೆ ಸೂಕ್ಷ್ಮವಾಗಿ ಸೀಳಿ ನೋಡಿದರೆ ದೊಂಬಿಯ ಸಿದ್ಧತೆಯಲ್ಲಿ ತೊಡಗುವುದು ಎಂಬ ಅಂಶವನ್ನು ಶಿಕ್ಷಾರ್ಹಗೊಳಿಸಿದರೆ ಅದರ ದುರುಪಯೋಗ ಯಾವ ಪ್ರಮಾಣದಲ್ಲಿ ಆದೀತೂ ಎಂಬುದನ ಅರಿಯಲು ಯಾವ ವಿಶೇಷ ನೈಪುಣ್ಯತೆಯೂ ಬೇಕಾಗದು.

ಇದು ಪೋಲೀಸರ ಕೈಯಲ್ಲಿನ ಪ್ರತಿಬಂಧಕದಂತೆಯೂ ಮತ್ತು ಮೂಲಭೂತ ಹಕ್ಕುಗಳಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆಗಳನ್ನು ಆಯೋಜಿಸುವ ಮತ್ತು ಚಲಿಸುವ ಸ್ವಾತಂತ್ರ್ಯದ ಹಕ್ಕುಗಳ ಮೇಲೆ ವ್ಯವಸ್ಥಿತವಾಗಿ ಪೆಟ್ಟು ನೀಡುವ ಉದ್ದೇಶದಿಂದಲೇ  ಹೆಣೆಯಲಾಗಿದೆ ಎಂಬ ಸಂಶಯವನ್ನು ಉಂಟು ಮಾಡುತ್ತದೆ. ಕಾಲಕ್ರಮೇಣ ಇದು ಜನರನ್ನು ಬಡಿದು ಹಾಕುವ ಪೋಲೀಸರ ಶಸ್ತ್ರಾಗಾರದಲ್ಲಿನ ಉಕ್ಕಿನ ಸಲಾಕೆಯಾಗಬಲ್ಲದು.

ನೊಂದವರು ಮತ್ತು ಭಾದಿತರಿಗೆ ಪರಿಣಾಮಕಾರಿಯಾಗಿ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕೇಳಲಾದ ಪ್ರಶ್ನೆಗಳು ಮಹತ್ವದ್ದಾಗಿವೆ. ಆರೋಪಿತನ ಮತ್ತು ಭಾದಿತರ ನಡುವಿನ ಪ್ರಕರಣವನ್ನು ವಯಕ್ತಿಕ ಮಟ್ಟದಲ್ಲಿ ನೆಲೆಗೊಳಿಸದೇ ಅದನ್ನು ಸಾಮಾಜಿಕ ಕೆಡಕು ಎಂದು ಗುರುತಿಸಿ ಸರ್ಕಾರವೇ ಮುಂದೆ ನಿಂತು ಆರೋಪಿಯನ್ನು ಅಭಿಯೋಜನೆಗೆ ಗುರಿ ಮಾಡುತ್ತದೆ. ವ್ಯಕ್ತಿಗತವಾದ ವಿವಾದಗಳು ಅಪರಾಧವಾಗಿ ಮಾರ್ಪಾಟು ಹೊಂದಿದೊಡನೆ ಸರ್ಕಾರದ ಸಂಸ್ಥೆಗಳು ತನಿಖೆ ಮತ್ತು ಅಭಿಯೋಜನೆಯಲ್ಲಿ ತೊಡಗುತ್ತವೆ.

ಇದನ್ನೂ ಓದಿ: ಕಾನೂನುಬಾಹಿರವಾಗಿ ಸಿಂಹ ಘರ್ಜನೆ ಮಾಡುವ ಕೆಂಪೇಗೌಡ ಬೇಕಿಲ್ಲ – ಮಾನವೀಯ ಸ್ಪಂದನೆಯ ಪೊಲೀಸ್ ಪಾತ್ರಗಳು ಮೂಡಲಿ

ಭಾದಿತರಿಗೆ ಖಾಸಗಿಯಾಗಿ ವಕೀಲರನ್ನು ಆಯ್ದುಕೊಂಡು ಆರೋಪಿಯನ್ನು ಅಭಿಯೋಜನೆಗೆ ಒಳಪಡಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯವನ್ನು ನೀಡುವುದು ವ್ಯವಸ್ಥೆಯ ಮಟ್ಟಿಗೆ ಅಪಾಯಕಾರಿ. ಸರ್ಕಾರೀ ಅಭಿಯೋಜಕರ ಮೇಲೆ ಇರುವ ಸಾಂಸ್ಥಿಕ ಮೇಲ್ವಿಚಾರಣೆ ಮತ್ತು ಉತ್ತರದಾಯಿತ್ವ ಖಾಸಗಿ ಅಭಿಯೋಜಕರಿಗೆ ಇರುವುದಿಲ್ಲ. ಇದು ಬಲಾಡ್ಯ ಆರೋಪಿಯು ಸಕಲ ಪ್ರಭಾವವನ್ನು ಬೀರಿ ಖಾಸಗಿ ಅಭಿಯೋಜಕರನ್ನು ಸುಲಭವಾಗಿ ಸೆಳೆದು ಪ್ರಕರಣವನ್ನು ಒಳಗಿನಿಂದಲೇ ದುರ್ಬಲಗೊಳಿಸುವ ಸಾಧ್ಯತೆಗಳಿಗೆ ಪೂರಕವಾಗಿದೆ.

PC: Nluj Law Review

ಅಭಿಯೋಜನೆಯ ವೆಚ್ಚಗಳು ದುಭಾರಿಯಾಗಿ ಅನಪೇಕ್ಷಿತ ಪೈಪೋಟಿಯೂ ಹೆಚ್ಚುತ್ತದೆ. ಇದು ವ್ಯಾಪಕ ಭ್ರಷ್ಟಾಚಾರಕ್ಕೂ ಎಡೆಮಾಡಿಕೊಡುತ್ತದೆ. ವಕೀಲರೇ ಅಭಿಯೋಜಕರಾದ ಎಷ್ಟು ಪ್ರಕರಣಗಳಲ್ಲಿ ಭಾದಿತರಿಗೆ ನ್ಯಾಯ ದೊರೆತಿದೆ ಎಂಬ ವಿಷಯದ ಕುರಿತು ಸರ್ಕಾರವು ಯಾವುದೇ ಅಧ್ಯಯನದ ಮೂಲಕ ಫಲಿತಾಂಶವನ್ನು ಕಂಡುಕೊಂಡಿಲ್ಲ. ಪ್ರಯೋಗಕ್ಕೆ ಒಳಪಡದ ಸಂಗತಿಗಳನ್ನು ಹಠಾತ್ತನೆ ಚಾಲನೆಗೆ ನೀಡುವುದು ನ್ಯಾಯ ವಿತರಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲದು!.

ತನಿಖೆ ಮತ್ತು ಪ್ರಕರಣಗಳ ಶೀಘ್ರ ವಿಲೇವಾರಿಗೆ ಕಾಲಮಿತಿಯನ್ನು ಗೊತ್ತು ಪಡಿಸುವ ನಿಟ್ಟಿನಲ್ಲಿ ಕೇಳಿರುವ ಅಭಿಪ್ರಾಯವು ಆಸಕ್ತಿದಾಯಕವಾಗಿದೆ. ಶಾಸನಾತ್ಮಕವಾಗಿ ಕಾಲಮಿತಿಯನ್ನು ನಿಗದಿಪಡಿಸಿದ ಪೋಕ್ಸೋ ಕಾಯ್ದೆ, ಚೆಕ್‌ಬೌನ್ಸ್ ಪ್ರಕರಣಗಳ ವಿಲೇವಾರಿಯಲ್ಲಿ ವಿಪರೀತ ತಡವಾಗುತ್ತಿರುವುದರ ಕುರಿತು ಗಮನಿಸಿದರೆ ದಿಟವಾದ ಸಮಸ್ಯೆಯ ಅರಿವು ಸಮಿತಿಗೆ ಮೂಡಬಹುದು. ಸದ್ಯ ದೇಶದಲ್ಲಿ ಒಟ್ಟು 18239 ವಿಚಾರಣಾ ನ್ಯಾಯಾಲಯಗಳಲ್ಲಿದ್ದು ಸುಮಾರು 2 ಕೋಟಿಗೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ. ಅಗತ್ಯ ಮೂಲಸೌಕರ್ಯಗಳನ್ನು ಮಾಡಿಕೊಳ್ಳದೆ ಕಾಯ್ದೆಗಳ ಸ್ವರೂಪವನ್ನು ಬದಲಾಯಿಸುವುದರಿಂದ ಪ್ರಕರಣಗಳ ವಿಲೇವಾರಿಯಲ್ಲಿ ತ್ವರಿತಗತಿಯನ್ನು ಹೆಚ್ಚಿಸಲಾಗದು.

ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಹೆಚ್ಚು ಗಂಭೀರವಾದದ್ದು ‘ಸಾರ್ವಜನಿಕ ನೌಕರನ’ ಸಾರ್ವಜನಿಕ ನಡೆನುಡಿ ಕುರಿತಾದ ಚರ್ಚೆಯನ್ನು ಐ.ಪಿ.ಸಿ. ಕಲಂ 499 ರಲ್ಲಿ ಉಲ್ಲೇಖಿಸಿದ ’ಮಾನಹಾನಿ’ಯ ವ್ಯಾಖ್ಯಾನದಡಿಯಲ್ಲಿ ತರಲು ಬಯಸಿರುವುದು. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಹಕ್ಕುಗಳನ್ನು ಮೊಟಕುಗೊಳಿಸಲು ಹಾಕಿದ ನೀಲಿನಕ್ಷೆಯಂತೆ ಕಾಣುತ್ತದೆ. ಇದು ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಪೂಜನೀಯರನ್ನಾಗಿಸಿ ಪ್ರಶ್ನಿಸುವವರನ್ನೇ ಶಿಕ್ಷೆಗೆ ಗುರಿ ಮಾಡುವ ಕಪಟ ಉದ್ದೇಶವನ್ನು ಒಳಗೊಂಡಿದೆ. ಇದು ಸಂವಿಧಾನವು ಬಯಸುವ ವಿಚಾರಣಾ ಮನೋಭಾವದ ಆಶಯಗಳನ್ನು ಮೂಲೆಗುಂಪು ಮಾಡುತ್ತದೆ.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ಪೋಲಿಸ್ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ  ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಇಲ್ಲಿ ಉಲ್ಲೇಖನೀಯ. ಪೋಲಿಸ್ ವ್ಯವಸ್ಥೆಯಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಪತ್ತೆ ವಿಭಾಗವನ್ನು ಪ್ರತ್ಯೇಕಿಸದ ಹೊರತು ಅಪರಾಧ ನ್ಯಾಯ ವಿತರಣಾ ಪದ್ಧತಿಯಲ್ಲಿ ಕೈಗೊಳ್ಳುವ ಎಲ್ಲಾ ಸುಧಾರಣೆಗಳು ಸೋಲುವುದು ನಿಶ್ಚಿತ. ಅಪರಾಧ ಪ್ರಕರಣಗಳಲ್ಲಿನ ತನಿಖೆಯನ್ನು ಬದ್ಧತೆಯಿಂದ ನೆಡಸದೇ ಪ್ರಕರಣವು ಶಿಕ್ಷೆಯಲ್ಲಿ ಕೊನೆಯಾಗ ಬೇಕೆಂದು ಬಯಸುವುದು ಸರಿಯಾದ ಕ್ರಮವಲ್ಲ. ಅಲ್ಲದೇ ಸಮಿತಿಯು ಬಯಸಿದಂತೆ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದರ ಮೂಲಕ ಅಪರಾಧಗಳನ್ನು ತೊಡೆದುಹಾಕಲಾಗದು. ಶಿಕ್ಷೆಯ ಸ್ವರೂಪ ಉಗ್ರವಾದಷ್ಟೂ ಆರೋಪಿಯು ತನ್ನ ಸಕಲ ಶಕ್ತಿಯನ್ನು ಬಳಸಿ ಭಾದಿತರನ್ನು ಹೊಸಕಿ ಹಾಕುವ ಮತ್ತು ಸಾಕ್ಷ್ಯವನ್ನು ನಾಶ ಮಾಡುವ ಸನ್ನಿವೇಶವೇ ಹೆಚ್ಚಾಗಿರುತ್ತದೆ.

PC: Huffington Post

ಧೀರ್ಘ ಕಾಲದಿಂದ ಬಳಕೆಯಲ್ಲಿರುವ ಐಪಿಸಿ, ಸಿಆರ್ಪಿಸಿ,ಸಾಕ್ಷ್ಯ ಅಧಿನಿಯಮದ ಬಹುಪಾಲು ಅಂಶಗಳು ಸ್ವಾತ್ಯಂತ್ರ ನಂತರದಲ್ಲಿ ಸಾಂವಿಧಾನಿಕ ಸಿಂಧುತ್ವದ ಅಗ್ನಿ ಪರೀಕ್ಷೆಯನ್ನು ಗೆದ್ದು ಬೀಗಿವೆ. ಈ ಕಾಯ್ದೆಗಳು ಸುಮಾರು 150 ವರ್ಷಗಳ ಕಾಲ ನಿರಂತರವಾಗಿ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಶಿಸ್ತನ್ನು ಮೂಡಿಸಿದೆ. ವ್ಯಾಪಕವಾಗಿ ಸಾರ್ವಜನಿಕರು ಚರ್ಚೆಯಲ್ಲಿ ಪಾಲ್ಗೊಳ್ಳಲಾಗದ ಸನ್ನಿವೇಶದಲ್ಲಿ ಆತುರಾತುರವಾಗಿ ಕೈಗೊಳ್ಳುವ ನಿರ್ಧಾರಗಳು ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ನಾಣ್ಣುಡಿಯನ್ನು ಸಾಕ್ಷಾತ್ಕರಿಸಿದಂತೆ.  ಸಾಮಾಜಿಕ ಸುಧಾರಣೆಯ ಒಂದು ಸಾಧನ ಎಂದು ಬಣ್ಣಿಸಲಾದ ಕಾನೂನನ್ನು ಹದಗೆಡಸಿದರೆ ಅದು ಜನರನ್ನು ಬಡಿದು ಹಾಕುವ ಮಾರಕಾಸ್ತ್ರವಾಗಲಿದೆ.

(ಲೇಖಕರು ವಕೀಲರು)

ಇದನ್ನೂಓದಿ: ಕಟ್ಟೆಪುರಾಣ: ಮೋದಿಗೆ ಬುದ್ದಿಲ್ಲ, ಶಾಗೆ ತಲಿಲ್ಲ. ಅದ್ಕೆ ಇಂತ ಕಾನೂನು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತ್ತೆ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

ಮತ್ತೇ ಹೋರಾಟ: ಪಂಜಾಬ್‌ ರಾಜಧಾನಿ ಗಡಿಯಲ್ಲಿ ಬೀಡು ಬಿಟ್ಟ ಅನ್ನದಾತರು!

0
ಜೂನ್ 10 ರಿಂದ ಗೋಧಿಗೆ ಬೋನಸ್ ಮತ್ತು ಭತ್ತ ಬಿತ್ತನೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿರುವ ಪಂಜಾಬ್‌ನ ರೈತರು ಮೇ 17 ರ ಮಂಗಳವಾರದಂದು ಚಂಡೀಗಢ...