ನೀಲಿ ಸಮುದ್ರದ ಜೈಭೀಮ್ ಘೋಷಣೆಗೆ ಬೆದರಿದ ಕೇಂದ್ರ; ದೆಹಲಿಯ ರವಿದಾಸ್ ದೇವಸ್ಥಾನ ನಿರ್ಮಾಣಕ್ಕೆ ಅದೇ ಜಾಗ ನೀಡಲು ಒಪ್ಪಿಗೆ, ದಲಿತರ ಹೋರಾಟಕ್ಕೆ ಸಂದ ಜಯ..

ದಲಿತರಿಗೆ ಸೇರಿದ ದೆಹಲಿಯ ರವಿದಾಸ ದೇವಾಲಯವನ್ನು ಆಗಸ್ಟ್ 10 ರಂದು ನೆಲಸಮಗೊಳಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಎರಡು ತಿಂಗಳ ನಂತರ ರವಿದಾಸ ಭಕ್ತರಿಗೆ ಅದೇ ಸ್ಥಳವನ್ನು ನೀಡಲು ಕೇಂದ್ರವು ಅಕ್ಟೋಬರ್ 18 ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಈ ಸಂಬಂಧ ಸುಪ್ರೀಂ ಕೋರ್ಟ್ ಅಕ್ಟೋಬರ್ 23 ರಂದು ಆದೇಶ ಹೊರಡಿಸಲಿದೆ.

ಈ ವಿಷಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಖಚಿತಪಡಿಸಿಕೊಳ್ಳಲು ಶಿಫಾರಸು ಮಾಡಲಾಗುತ್ತಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದ್ದಾರೆ.

ಅಕ್ಟೋಬರ್ 4 ರಂದು ನಡೆದ ಹಿಂದಿನ ವಿಚಾರಣೆಯಲ್ಲಿ, ಗುರು ರವಿದಾಸ್ ದೇವಸ್ಥಾನವನ್ನು ನವದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನೆಲಸಮಗೊಳಿಸಿದ ನಂತರ ಉತ್ತಮ ಸ್ಥಳದಲ್ಲಿ ಪುನರ್ನಿರ್ಮಾಣ ಮಾಡಲು “ಸೌಹಾರ್ದಯುತ ಪರಿಹಾರ” ವನ್ನು ಸುಪ್ರೀಂ ಕೋರ್ಟ್ ಶಿಫಾರಸು ಮಾಡಿತ್ತು, ಇದು ಎಲ್ಲರ “ಭಾವನೆಗಳನ್ನು” ಗೌರವಿಸುತ್ತಾದರೂ ಕಾನೂನನ್ನು ಎಲ್ಲರೂ ಅನುಸರಿಸಬೇಕಾಗಿದೆ ಎಂದು ಹೇಳಿತ್ತು.

ಉನ್ನತ ನ್ಯಾಯಾಲಯದ ನಿರ್ದೇಶನವನ್ನು ಉಲ್ಲೇಖಿಸಿ ಈ ದೇವಾಲಯವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ನೆಲಸಮ ಮಾಡಿದೆ. ಇದು ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಸರಣಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ದಲಿತರ ಪ್ರತಿಭಟನೆ: ನೀಲಿ ಸಮುದ್ರದ ಅಲೆಯಲ್ಲಿ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ…

ಆಗಸ್ಟ್ 27 ರಂದು, ಅರ್ಜಿದಾರರು ದೇವಾಲಯವನ್ನು ಪುನರ್ನಿರ್ಮಿಸಲು ಅನುಮತಿಗಾಗಿ ಉನ್ನತ ನ್ಯಾಯಾಲಯವನ್ನು ಕೋರಿದ್ದರು. ತಾವು ಗುರು ರವಿದಾಸ್ ಅವರ ಧರ್ಮನಿಷ್ಠ ಅನುಯಾಯಿಗಳಾಗಿದ್ದು, ಇದು ನಮಗೆ ಪುಣ್ಯ ಸ್ಥಳವಾಗಿದೆ, ಕಳೆದ 500-600 ವರ್ಷಗಳಿಂದ ನಿಯಮಿತವಾಗಿ ಪ್ರಾರ್ಥನೆಗಳನ್ನು ಅಲ್ಲಿ ನಡೆಸಲಾಗುತ್ತಿದೆ ಎಂದು ವಾದಿಸಿದ್ದರು.

ದೇವಾಲಯ ಉರುಳಿಸುವುದನ್ನು ವಿರೋಧಿಸಿ ಆಗಸ್ಟ್ 21ರಂದು ನವದೆಹಲಿಯಲ್ಲಿ ಬೃಹತ್ ಹೋರಾಟ ನಡೆಸಲಾಗಿತ್ತು. ಅವರು ದೇವಾಲಯವನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಿಸುತ್ತೀವೆ ಎನ್ನುತ್ತಿದ್ದಾರೆ. ಆದರೆ ಅವರು ರಾಮ ಮಂದಿರವನ್ನೇಕೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಿಲ್ಲ? ಎಲ್ಲವೂ ಕಣ್ಣು ಮಿಟುಕಿಸುವುದರಲ್ಲಿ ಸಂಭವಿಸಿದೆ. ನಾವು ಭಾರತದ ಪ್ರಜೆಗಳಲ್ಲವೇ?” ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಅಂಬೇಡ್ಕರ್ ರವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿರುವ ಈ ಚಮ್ಮಾರರ ಮಂದಿರದ ಕುರಿತು

ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಸಾವಿರ ಸಾವಿರ ನೀಲಿ ಟೋಪಿಗಳು ಮತ್ತು ನೀಲಿ ಬಾವುಟಗಳು ಹಾರಾಡುವ ಮೂಲಕ ನೀಲಿ ಸಮುದ್ರದ ಅಲೆಯನ್ನು ಸೃಷ್ಠಿಸಿದ್ದವು. ಜೈಭೀಮ್ ಘೋಷಣೆ ಮುಗಿಲು ಮುಟ್ಟಿತ್ತು. ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್‌ ರಾವಣ್, ದೆಹಲಿಯ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಆ ಪ್ರತಿಭಟನೆಯು ಕೊನೆಗೆ ಹಿಂಸಾಚಾರಕ್ಕೆ ತಿರುಗಿ ಕೆಲವರ ಬಂಧನ ಸಹ ಆಗಿತ್ತು. ಆದರೆ ಪಟ್ಟು ಬಿಡದ ದಲಿತರ ಹೋರಾಟ ಮುಂದುವರೆಸಿದ್ದರು. ಈಗ ಕೊನೆಗೆ ದಲಿತರ ಭಾವನೆಗಳ ವಿಚಾರದಲ್ಲಿ ಚೆಲ್ಲಾಟವಾಡಬಾರದು ಎಂಬ ತೀರ್ಮಾನಕ್ಕೆ ಬಂದಿದೆ. ಹಾಗಾಗಿ ಅದೇ ಜಾಗದಲ್ಲಿ ದೇವಾಲಯ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಇದು ದಲಿತರಿಗೆ ಸಿಕ್ಕ ಜಯ ಎಂದೇ ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಒಪ್ಪಿಗೆಯ ಹಿಂದೆ ಸದ್ಯದಲ್ಲೇ ನಡೆಯಲಿರುವ ಹರಿಯಾಣ ಚುನಾವಣೆ ಮತ್ತು ಇನ್ನು ಕೆಲವೇ ತಿಂಗಳುಗಳಲ್ಲಿ ಬರಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಭಯ ಕಾರಣವೆಂಬ ಆರೋಪ ಕೇಳಿಬಂದಿದೆ.

http://naanugauri.com/chandrashekhar-azad-ravan-interview-with-naanugauri-com-%e0%b2%a8%e0%b2%be%e0%b2%b5%e0%b3%81-%e0%b2%95%e0%b3%87%e0%b2%b5%e0%b2%b2-%e0%b2%b5%e0%b3%80%e0%b2%95%e0%b3%8d%e0%b2%b7%e0%b2%95%e0%b2%b0/

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here