ಗಾಂಧಿ ವಿಚಾರಗಳನ್ನು ಮುನ್ನಡೆಸುವ ಕೆಲಸ ಮುದುಕರಿಗೆ ಬಿಡಬೇಡಿ, ಯುವಜನರು ಕೈಗೆತ್ತಿಕೊಳ್ಳಿ: ಹೆಗ್ಗೋಡು ಪ್ರಸನ್ನ

0

(ಮಂಡ್ಯದ ಗಾಂಧಿಭವನದಲ್ಲಿ ನಡೆದ ‘ಗಾಂಧಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ “ಇಂದಿಗೆ ಅನಿವಾರ್ಯವಾಗಿರುವ ಗಾಂಧಿ ಮತ್ತು ಅವರ ಆರ್ಥಿಕ ಚಿಂತನೆ’ ವಿಷಯದ ಕುರಿತು ಹೆಗ್ಗೋಡು ಪ್ರಸನ್ನರವರು ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.)

ಮಹಾತ್ಮ ಗಾಂಧಿಯವರನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಈ ಪಾದಯಾತ್ರೆಯ ಉದ್ದೇಶ ಎಂದು ಸ್ಪಷ್ಟವಾಗಿ ಹೇಳಿದ್ದೀರಿ. ಕೆಲವರು ಪುಸ್ತಕ ಓದುವುದರ ಮತ್ತು ಬೌದ್ಧಿಕ ಚರ್ಚೆಯ ಮೂಲಕ ಗಾಂಧಿಯವರನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಿದ್ದಾರೆ. ಆದರೆ ಅದು ತಪ್ಪು ಕಲ್ಪನೆಯಾಗಿದೆ.

ಜನರ ಬಳಿಗೆ ಹೋಗುವ ಪಾದಯಾತ್ರೆಯೇ ಉತ್ತಮ ಮಾರ್ಗ. ಅದೇ ಅರಿವು. ಅಲ್ಲಿ ನಿಧಾನವಾಗಿ ನಡೆಯುತ್ತೇವೆ. ಅಲ್ಲಿನ ಗ್ರಾಮ, ಮನುಷ್ಯರು, ಇಡೀ ಹಳ್ಳಿಯ ಪರಿಸರ ಅನುಭವಕ್ಕೆ ಬರುತ್ತದೆ‌. ಆದರೆ ಇಂದು ಅನುಭವವೇ ಕಾಣೆಯಾಗಿದೆ. ಎಲ್ಲವೂ ನಮಗೆ ಕೇವಲ ಮಾಹಿತಿಯಾಗಿ ದೊರೆಯುತ್ತದೆ. ಕೇವಲ ಮಾಹಿತಿ ಅಥವಾ ಜ್ಞಾನದಿಂದ ಚಳವಳಿ, ಸಮಾಜ ಕಟ್ಟಲು ಆಗುವುದಿಲ್ಲ ಎಂದು ಗಾಂಧಿಜಿಯವರು ಹೇಳಿದ್ದರು..

ಬಸವಣ್ಣ, ಕಬೀರ, ಅಲ್ಲಮನ ರೀತಿಯಲ್ಲಿಯೇ ಗಾಂಧಿಯನ್ನು ಸಹ ಒಬ್ಬ ಸಂತನಾಗಿ ಇಲ್ಲವೇ ರಾಜಕಾರಣಿಯಾಗಿ ನೋಡುವ ಪ್ರವೃತ್ತಿ ನಮ್ಮಲ್ಲಿ ಬೆಳೆದುಬಂದಿದೆ. ಅದರೆ ಅವರ ಕೆಲಸದ ಬುನಾದಿ ಅವರ ಆರ್ಥಿಕ ಕಾರ್ಯಕ್ರಮವಾಗಿದೆ. ಅದನ್ನು ಗ್ರಾಮ ಸ್ವರಾಜ್ಯ ಎಂದು ಕರದಿದ್ದರು. ಆದರೆ ಅದನ್ನು ಸಮಗ್ರವಾಗಿ ಮಾಡಲು ರಾಜಕೀಯ ಚಳವಳಿಯ ಕಾರಣಗಳಿಗಾಗಿ ಗಾಂಧಿಯವರಿಗೆ ಸಮಯ ಸಿಗಲಿಲ್ಲ.

ನಾಳೆ ಯಾರಿಗೆ ಬರಬೇಕು ಸ್ವತಂತ್ರ? ಎಂದು ಗಾಂಧಿ ಕೇಳಿದ್ದರು‌. ಸಾಮಾನ್ಯ ಜನರಿಗೆ, ಬಡಜನರಿಗೆ ಸ್ವಾತಂತ್ರ್ಯ ಸಿಗಬೇಕು. ಆದರೆ ಅವರಿಗೆ ಅದರ ಕಲ್ಪನೆ ಸಹ ಇಲ್ಲ. ಅವರ ಹಕ್ಕುಗಳ ಪರಿಚಯವಿಲ್ಲ. ಅವರಿಗೆ ಜಾತಿವಿನಾಶದ, ಲಿಂಗತಾರತಮ್ಯ, ಆರೋಗ್ಯ ಶಿಕ್ಷಣದ ಅರಿವಿಲ್ಲ‌. ನಾವು ಇದರ ಪರಿಚಯ ಮಾಡಿಕೊಡಬೇಕು..

ಎಲ್ಲಾ ರಚನಾತ್ಮಕ ಕೆಲಸಗಳನ್ನು ಬದಿಗೊತ್ತಿ ನಾವು ಕೇವಲ ಕಾನೂನಾತ್ಮಕ ಕೆಲಸಗಳನ್ನು ಮಾತ್ರ ಮಾಡಿದ್ದೇವೆ. ನಾವು ಮಾಡಿರುವ ಕಾನೂನುಗಳಲ್ಲಿ ಕಾಲುಭಾಗ ಜಾರಿಗ ಬಂದಿದ್ದರೂ ಸಹ ಭಾರತ ಸಮಾಜವಾದಿ ರಾಷ್ಟ್ರವಾಗುತ್ತಿತ್ತು. ಆದರೆ ಇಂದು ಭ್ರಷ್ಟಾಚಾರದ ದೇಶವಾಗುತ್ತಿದೆ.

ಇಂತಹ ಸಂಕಟದ ಸಮಯದಲ್ಲಿ ರಚನಾತ್ಮಕ ಚಳವಳಿ ಕಡೆಗೆ ಹೋಗಬೇಕಿದೆ. ನಮ್ಮ ಹಳ್ಳಿ ಜನರಿಗೆ ಮಳೆ ಬೆಳೆ ಸರಿಯಾಗಿ ಆಗುತ್ತಿಲ್ಲ, ಶೆಕೆಯಾಗುತ್ತಿದೆ, ಉದ್ಯೋಗವಿಲ್ಲ.. ಎನ್ನುವುದು ಮಾತ್ರ ಗೊತ್ತಿದೆ. ಆದರೆ ಕರಾಳ ದಿನಗಳ ಕಲ್ಪನೆ ಅವರಿಗಿಲ್ಲ.

ಒಬ್ಬ ವಿಜ್ಞಾನಿಗಳು ಹೇಳುತ್ತಾರೆ ಇನ್ನ 14 ವರ್ಷದಲ್ಲಿ ನಮ್ಮ ಈ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸಬೇಕು. ಅದಕ್ಕಾಗಿ ಹೋರಾಟ ನಡೆಯುತ್ತಿದೆ. ಅದರ ನಾಯಕತ್ವ ವಹಿಸುತ್ತಿರುವುದು ಯುವಜನತೆ.. ಅದರ ನಾಯಕಿ 16 ವರ್ಷದ ಗ್ರೇಟಾ ಥನ್ಬೆರ್ಗ್ ಕರೆಗೆ ಇಡೀ ವಿಶ್ವದ ಯುವಜನತೆ ಸಕರಾತ್ಮಕವಾಗಿ ಸ್ಪಂದಿಸಿದೆ. ಅಹಿಂಸಾತ್ಮಕವಾಗಿ ಗಾಂಧಿ ಮಾದರಿಯಲ್ಲಿ ನಡೆಯುತ್ತಿದ್ದು ನನ್ನ ಭವಿಷ್ಯವನ್ನು ನೀವೇಕೆ ಹಾಳು ಮಡುತ್ತಿದ್ದೀರಿ ಎಂದು ಆ ಹುಡುಗಿ ಪ್ರಶ್ನಿಸುತ್ತಿದ್ದಾಳೆ. ನಮ್ಮ ಮೂರು ಪ್ರಶ್ನೆಗಳಿವೆ.

ಮೊದಲ ಪ್ರಶ್ನೆ: 

ಮೊದಲ ಪ್ರಶ್ನೆ ಉದ್ಯೋಗದ್ದಾಗಿದೆ. ಕಳೆದ ನಾಲ್ಕು ತಿಂಗಳಿಂದ ನಮ್ಮ ದೇಶದಲ್ಲಿ ದಿನಕ್ಕೆ ಮೂರು ಲಕ್ಷ ಉದ್ಯೋಗಗಳು ನಷ್ಟವಾಗುತ್ತಿವೆ. ಹಾಗಾದರೆ ಕಷ್ಟಪಟ್ಟು ಓದುತ್ತಿರುವವರು ಮಣ್ಣು ತಿನ್ನಬೇಕೆ?

ಎರಡನೇ ಪ್ರಶ್ನೆ: 

ಎರಡನೇ ಪ್ರಶ್ನೆ ಪರಿಸರ ನಾಶವಾಗಿದೆ. ತಕ್ಷಣದಲ್ಲಿ ವಿಪರೀತ ಬೆಂಕಿ ಉಳಿಸುವ ಕೆಲಸ ಮಾಡದಿದ್ದರೆ ನಮ್ಮ ಪ್ರಪಂಚ ಖಂಡಿತ ವಾಸಯೋಗ್ಯವಾಗಿ ಉಳಿಯುವುದಿಲ್ಲ. ಇಂದು ಬೆಂಕಿ ಹಚ್ಚುವುದರ ಮೂಲಕ ಮಾತ್ರವೇ ಪ್ರಗತಿಯಾಗುತ್ತಿದೆ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹೋದರೆ ಪ್ರತಿಯೊಬ್ಬ 29 ಕೆಜಿ ಕಾರ್ಬನ್ ಡೈಆಕ್ಸೈಡ್ ಅನ್ನು ಪರಿಸರಕ್ಕೆ ಬಿಡುತ್ತಿದ್ದೇವೆ ಎಂಬುದನ್ನು ಮರೆಯಬರದು.

ಮೂರನೇಯದು ಧರ್ಮದ ಪ್ರಶ್ನೆ:

ಇಂದು ರಾಜಕೀಯ ಕಾರಣಗಳಿಗಾಗಿ ಧರ್ಮ ಎನ್ನುವುದೇ ಜನರನ್ನು ಒಡೆಯುವ ಅಸ್ತ್ರ ಆಗಿದೆ. ಮೇಲ್ಜಾತಿಯವರನ್ನು ಮತ್ತಷ್ಟು ಕೊಬ್ಬಿಸಲು ಧರ್ಮ ಕಾರಣವಗುತ್ತಿದೆ. ಧರ್ಮ ಇಂದು ಒಳ್ಳೆಯ ಅಲೋಚನಗಳನ್ನು ಹಿಮ್ಮೆಟ್ಟುಸುವ ಅಸ್ತ್ರವಾಗಿದೆ. ನಿರುದ್ಯೋಗ, ಪರಿಸರ ನಾಶ, ಧರ್ಮದ ದುರ್ಬಳಕೆ ಈ ಮೂರು ವಿಷಯಗಳು ಇಂದು ನಮ್ಮನ್ನು ಬಾಧಿಸುತ್ತಿವೆ.

ಈ ದೇಶದ 60% ಕೃಷಿಭೂಮಿಯಲ್ಲಿ ಈಗಲೂ ಮಳೆಯಾಧಾರಿತ ಬೇಸಾಯ ನಡೆಯುತ್ತಿದೆ. ಮೀನುಗಾರಿಗೆ, ಹೈನೋದ್ಯಮ ಇತ್ಯಾದಿಗಳು ಇಂದಿಗೂ ಕೈ ಉತ್ಪಾದನೆಗಳಾಗಿವೆ. ಇದನ್ನು ನಡೆಸುವ ಜನ ಮತ್ತು ಕೌಶಲ್ಯ ನಮಗಿದೆ‌. ಇದನ್ನೆ ಗಾಂಧಿಯವರು ಗ್ರಾಮ ಸ್ವರಾಜ್ಯ ಎಂದಿದ್ದರು. ಅವರು ಸಮಾಜವಾದ, ಪರಿಸರ ರಕ್ಷಣೆ ಮತ್ತು ದುಡಿಯುವುದೇ ಧರ್ಮ ಎಂದು ಮಾತನಾಡಿದ್ದರು. ಈ ಮೂರನ್ನು ಒಟ್ಟಾಗಿ ಸೇರಿಸಿದರೆ ನಮಗೆ ಗಾಂಧಿ ಅರ್ಥವಾಗುತ್ತಾರೆ.

ಎಲ್ಲಾ ಧಾರೆಗಳ ಜನರು ಇಲ್ಲಿ ನೆರದಿದ್ದೀರಿ.. ಪ್ರತ್ಯೇಕತೆ ಕಳಚಿ ಹೋರಾಟ ಮಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಅದಕ್ಕೆ ಗಾಂಧಿಜಿಯವರ ವಿಚಾರಧಾರೆಗಳು ನಾಯಕತ್ವ ನೀಡುತ್ತವೆ.

ಏಸುಕ್ರಿಸ್ತ, ರಾಮ, ಬಸವಣ್ಣನವರ ಭಜನೆ ರೀತಿ ಗಾಂಧಿಯವರ ಭಜನೆ ಇಂದು ಬೇಡ. ನಾವು ಶ್ರಮದಾನ ಮಾಡಬೇಕಿದೆ. ಏಕೆಂದರೆ ಈ ದೇಶ ನಡೆಯುತ್ತಿರುವುದೇ ಕೋಟ್ಯಾಂತರ ಶ್ರಮಿಕರ ಶ್ರಮದಿಂದ‌. ಬುದ್ದಿಜೀವಿಗಳು, ವಿಚಾರವಂತರು ಶ್ರಮದಾನ ಮಾಡಿದರೆ ಅಗ ಅದಕ್ಕೆ ಅಪಾರವಾದ ಮಹತ್ವ ಬರುತ್ತದೆ. ಈ ಕೆಲಸ ಮುಂದುವರಿಸಿ, ಗಾಂಧಿಯನ್ನು ಜೀವಂತಗೊಳಿಸಿ, ರಚನಾತ್ಮಕ ಕೆಲಸ ಮುಂದುವರೆಸುವ ಕೆಲಸವನ್ನು ಮುದುಕರಿಗೆ ಬಿಡಬೇಡಿ.. ಯುವಕರೆ ಕೈಗೆತ್ತಿಕೊಳ್ಳಿ.

ಗಾಂಧಿಯನ್ನು ಕೇವಲ ಮುದುಕರಿಗೆ ಬಿಡಬೇಡಿ, ಗಾಂಧಿ ವಿಚಾರಧಾರೆಯ ವಾರಸುದಾರರು ಯುವಜನರೆ ಆಗಬೇಕು. ಜೊತೆಗೆ ಗಾಂಧಿಯನ್ನು ಬೋರ್ ಎನಿಸಬಾರದು. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿಸಬೇಡಿ..ಗಾಂಧಿ ಸರಳವಾಗಿದ್ದರು, ಇಡೀ ದೇಶ ಸುತ್ತಿದರು, ತಮಾಷೆಗಳನ್ನು ಮಾಡುವ ಚೈತನ್ಯವಾಗಿದ್ದರು ಎಂಬುದನ್ನು ಮರೆಯಬಾರದು.

ಶ್ರಮ ಸಂಸ್ಕತಿಯನ್ನು ಜೀವಂತವುಳಿಸಿ, ಮುಸ್ಲಿಂ ಹೆಣ್ಣು ಮಕ್ಕಳು ಸಹ ಹೊರಬಂದು ದೇಶಕಟ್ಟುವ ಕಲಸ ಮಾಡಬೇಕಿದೆ. ಆ ಮೂಲಕ ಸಮಾಜವನ್ನು ಮತಧರ್ಮ ನಿರಪೇಕ್ಷವನ್ನಾಗಿ ಮಾಡೋಣ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here