Homeಮುಖಪುಟಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

ಈಶ್ವರಚಂದ್ರ ವಿದ್ಯಾಸಾಗರ್ ಯಾರು? ಅವರ ಪ್ರತಿಮೆ ಧ್ವಂಸದ ಸುತ್ತಾ ತಿಳಿದಿರಬೇಕಾದ ವಿಷಯಗಳು

- Advertisement -
- Advertisement -

| ಡಾ. ಮಂಜುನಾಥ್. ಬಿ.ಆರ್ |

ಇತ್ತೀಚೆಗೆ ಕಲ್ಕತ್ತಾದಲ್ಲಿ ಪಂಡಿತ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ವರದಿಯಾಗಿದೆ.ಇದಕ್ಕೆ ಸಾರ್ವತ್ರಿಕ ಖಂಡನೆಯೂ ಬಂದಿದೆ. ಇದು ಬಂಗಾಳದಲ್ಲಿ ಊಹಿಸಿಕೊಳ್ಳಲು ಕಷ್ಟವಾದ ಸಂಗತಿ. ಏಕೆಂದರೆ ಬಂಗಾಳದ ಜನಮಾನಸದಲ್ಲಿ ಅವರು ಗಳಿಸಿಕೊಂಡಿರುವ ಸ್ಥಾನ ಅಂಥದ್ದು.

ಆದರೆ ಮುಂದಿನ ತಲೆಮಾರಿಗೆ ಮಹಾಪುರುಷರ ಧ್ಯೇಯ ಆದರ್ಶಗಳನ್ನು ನೆನಪಿಸಲೆಂದು ನಿಲ್ಲಿಸಿದ ಪ್ರತಿಮೆಗಳು ದಾಂಧಲೆಗೆ, ಗಲಭೆಗೆ,ರಾಜಕೀಯ ಮೇಲಾಟಕ್ಕೆ ತುತ್ತಾಗುತ್ತಿವೆ ಎಂಬುದು ನಮ್ಮ ಕಾಲದ ದುರಂತಗಳಲ್ಲೊಂದು.

ಇದನ್ನು ಯಾರು ಮಾಡಿರಬಹುದು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹ, ಚರ್ಚೆಗಳು ನಡೆಯುತ್ತಿವೆ.ಸಂಶಯದ ಬೊಟ್ಟು ಮಾತ್ರ ಬಿಜೆಪಿಯ ಕಡೆಗೆ ತಿರುಗಿದೆ.ಬಿಜೆಪಿಗೆ ತ್ರಿಪುರ ದಲ್ಲಿ ಲೆನಿನ್ ರವರ ಪ್ರತಿಮೆ ಉರುಳಿಸಿದ ಕುಖ್ಯಾತಿ ಇದೆ.ಅವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಯಾರನ್ನೂ ಸಹಿಸುವುದಿಲ್ಲ!

ಬಂಗಾಳದಲ್ಲಿ ವಿದ್ಯಾಸಾಗರರು ವಿವಾದಾತೀತ ಮಹಾಪುರುಷ . ಅವರ ಪ್ರತಿಮೆಯನ್ನು ಮುಟ್ಟಲು ಗೂಂಡಾಗಳೂ ಹಿಂಜರೆಯುತ್ತಾರೆ. ಹೀಗಾಗಿ ಬಿಜೆಪಿ ಹೊರ ರಾಜ್ಯದಿಂದ ಪುಂಡರನ್ನು ಕರೆ ತಂದಿದ್ದರು, ಅವರೇ ಈ ದುಷ್ಕೃತ್ಯವನ್ನು ಮಾಡಿದ್ದಾರೆ ಎಂಬ ಆಪಾದನೆಯಲ್ಲಿ ಸತ್ಯ ಇರಬಹುದು ಎನಿಸುತ್ತದೆ!ಮತ್ತೆ ಯಾವುದೇ ರಾಜ್ಯದಲ್ಲಿ ಗಲಭೆ ಆರಂಭಿಸುತ್ತಾ, ಭಾವನಾತ್ಮಕ ವಿಷಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಒಳಪ್ರವೇಶಮಾಡಲು ಹವಣಿಸುವುದು ಬಿಜೆಪಿ ಯ ಹಳೆಯ ರಣನೀತಿ. ಈ ಬಾರಿ ಅಂದುಕೊಂಡದ್ದಕ್ಕಿಂತ ಕೊಂಚ ಹೆಚ್ಚಾಗಿ ಎಡವಟ್ಟಾಗಿದೆ ಅಷ್ಟೇ!

ಸಂಘ ಪರಿವಾರಕ್ಕೆ , ಅದರಲ್ಲೂ ಬಂಗಾಳಿ ‘ಚಿಂತಕ’ರಿಗೆ ವಿದ್ಯಾಸಾಗರ್ ರ ಮೇಲೆ ವಿಶೇಷ ಸಿಟ್ಟಿರಲು ಕಾರಣಗಳಂತೂ ಇವೆ. ವಿದ್ಯಾಸಾಗರ್ ಎಲ್ಲ ಪುರಾತನ ಗೊಡ್ಡು ವಿಚಾರಗಳನ್ನು ಖಂಡಿಸಿದ್ದರು, ಪುರುಷಪ್ರಧಾನ ಮೌಲ್ಯಗಳನ್ನು ವಿರೋಧಿಸಿದ್ದರು, ಜಾತಿ ಕಟ್ಟುಪಾಡುಗಳನ್ನು ಸಡಿಲಿಸಿದ್ದರು, ಉದಾರವಾದಿ ನಿಲುವುಗಳನ್ನು ಹೊಂದಿದ್ದರು,ಬ್ರಿಟಿಷರ ವಿರುದ್ಧ ಸ್ವಾಭಿಮಾನಿಯಾಗಿ ಸೆಟೆದು ನಿಂತಿದ್ದರು. ಭೌತವಾದಿ ನಿಲುವುಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸಿದ್ದರು.

ಇದೆಲ್ಲಾ ಪರಿವಾರದವರಿಗೆ ನುಂಗಲಾರದ ತುತ್ತೇ ಸರಿ.ಅಮಿತ್ ಶಾ ರೋಡ್ ಶೋ ಗಲಭೆಯ ಸಮಯದಲ್ಲಿ ಪೂರ್ವಯೋಜಿತವೋ ಅಲ್ಲವೋ ವಿದ್ಯಾಸಾಗರ್ ರ ಪ್ರತಿಮೆಯಂತೂ ಗಲಭೆಕೋರರ ಆಕ್ರೋಶಕ್ಕೆ ಬಲಿಯಾಯಿತು.

ತೃಣಮೂಲ ಕಾಂಗ್ರೆಸ್ ನ ವಿದ್ಯಾರ್ಥಿಗಳು ಆ ಸಮಯದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ್ದಾರೆ.ಅವರು ಒಂದಿಷ್ಟು ಪ್ರಚೋದನೆಯನ್ನೂ ಮಾಡಿರಬಹುದು. ಟಿ ಎಮ್ ಸಿ ಪಕ್ಷವು ಈ ಘಟನೆಯಿಂದ ಚುನಾವಣೆಯಲ್ಲಿ ಲಾಭ ಪಡೆಯಲೂ ಯತ್ನಿಸಬಹುದು. ಆದರೆ ಈಗ ಅದನ್ನು ಟೀಕೆಗೆ ಮುಖ್ಯ ಗುರಿ ಮಾಡಿಕೊಳ್ಳಬಾರದೆಂಬ ವಿವೇಕವನ್ನು ಎಡಪಕ್ಷಗಳು ಮತ್ತು ಕಾಂಗ್ರೆಸ್ ತೋರಿಸಬೇಕು.ಏಕೆಂದರೆ ಫ್ಯಾಸಿಸ್ಟ್ ಶಕ್ತಿಗಳು ಒಮ್ಮೆ ಬಂಗಾಳದ ನೆಲದಲ್ಲಿ ಬೇರೂರಿದರೆ ಅದು ಇಡೀ ದೇಶದಲ್ಲಿ ಧರ್ಮನಿರಪೇಕ್ಷ, ಜನ ತಾಂತ್ರಿಕ ಆಂದೋಲನಕ್ಕೆ ದೊಡ್ಡ ಪೆಟ್ಟಾಗುತ್ತದೆ.

ಅದೇನೇ ಇರಲಿ ಇದು ವಿದ್ಯಾಸಾಗರ್ ರ ಇನ್ನೂರನೆಯ ಜನ್ಮವಾರ್ಷಿಕ.ಅವರನ್ನು ನೆನಪಿಸಿಕೊಳ್ಳುವುದೂ ಸಹ ಈ ವಿಧ್ವಂಸಕ ಕೃತ್ಯಕ್ಕೆ ಸೂಕ್ತ ಪ್ರತಿಕ್ರಿಯೆಯೇ. ಎಲ್ಲ ದೀನ- ದುಃಖಿಗಳ ಬಗ್ಗೆ ಕಳಕಳಿ ಹೊಂದಿದ್ದ ಅವರನ್ನು ಗುರುದೇವ ರವೀಂದ್ರನಾಥ ಟಾಗೋರ್ ರು ಕರುಣಾಸಾಗರ ಎಂದೇ ಕರೆದಿದ್ದರು.

ಕಡುಬಡತನವನ್ನು ಕಂಡ ವಿದ್ಯಾಸಾಗರರ ಮೂಲ ಹೆಸರು ಈಶ್ವರಚಂದ್ರ ಬಂದೋಪಾಧ್ಯಾಯ.ತಂದೆಯೊಂದಿಗೆ ಊರಿನಿಂದ ನಡೆಯುತ್ತಾ ಕಲ್ಕತ್ತೆಗೆ ಬಂದ ಬಾಲಕ ಮೈಲಿಗಲ್ಲು ಎಣಿಸುತ್ತಾ ರಾಜಧಾನಿ ತಲುಪುವ ವೇಳೆಗೆ ಸಂಖ್ಯೆ ಬರೆಯಲು ಕಲಿತ ಎಂಬುದು ಒಂದು ದಂತಕತೆ. ಸಂಸ್ಕೃತ ಪಂಡಿತರಾದಾಗ ಬಂದ ವಿದ್ಯಾಸಾಗರ ಎಂಬ ಬಿರುದೇ ಹೆಸರಾಯಿತು

ಅವರು ಓದಿದ್ದು ಸಂಸ್ಕೃತ ಕಾಲೇಜಿನಲ್ಲಿ. ಆದರೆ ತನ್ನ ಪ್ರಚಂಡ ಪಾಂಡಿತ್ಯ, ಕೆಲಸದಲ್ಲಿನ ಶ್ರದ್ಧೆಯಿಂದಾಗಿ ಶೈಕ್ಷಣಿಕ ಇಲಾಖೆಯಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು.ಭಾರತಕ್ಕೆ ಹೊಸ ಶಿಕ್ಷಣದ ಮಾದರಿಯನ್ನು ರೂಪಿಸುವ ಸಂದರ್ಭದಲ್ಲಿ ಈ ಜುಟ್ಟು ಬಿಟ್ಟಿದ್ದ, ಸಾಂಪ್ರದಾಯಿಕ ಉಡುಗೆಯ ಸಂಸ್ಕೃತ ಪಂಡಿತರು ‘ ನಮ್ಮ ಮಕ್ಕಳಿಗೆ ಬೇಕಾದದ್ದು ವೇದಾಂತವಲ್ಲ, ಅವರಿಗೆ ಅಗತ್ಯವಾದದ್ದು ಆಧುನಿಕ ವಿಜ್ಞಾನ, ಗಣಿತ,ಇಂಗ್ಲಿಷ್ ಭಾಷೆ. ಅವರಿಗೆ ಹಳೆಯ ತರ್ಕಶಾಸ್ತ್ರ ಕಲಿಸಬೇಡಿ, ಜೆ.ಎಸ್.ಮಿಲ್ ರ ‘ಲಾಜಿಕ್’, ನೀತಿಶಾಸ್ತ್ರ, ಉದಾರ ಮಾನವತಾವಾದವನ್ನು ಕಲಿಸೋಣ’ ಎಂದು ಹೋರಾಡಿ ಗೆದ್ದರು. ಅವರ ನಿಲುವು ಆ ಕಾಲಕ್ಕೆ ಆಶ್ಚರ್ಯಕರ!

ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಲೇ ಈ ಮನುಷ್ಯ ತನ್ನ ಆತ್ಮ ಗೌರವವನ್ನು ಕಾಪಾಡಿಕೊಂಡ ರೀತಿ ಅನನ್ಯವಾದದ್ದು. ಮೇಲಾಧಿಕಾರಿಯನ್ನು ನೋಡಲು ಹೋಗಿದ್ದಾಗ ಆತ ಇವರೆದುರಿನಲ್ಲಿ ಮೇಜಿನ ಮೇಲೆ ಕಾಲಿರಿಸಿಕೊಂಡಿದ್ದದ್ದು ಅವರಿಗೆ ಸಿಟ್ಟು ತರಿಸಿತು.ಇನ್ನೊಮ್ಮೆ ಆತ ಇವರ ಕಛೇರಿಗೆ ಬಂದಾಗ ವಿದ್ಯಾಸಾಗರ್ ಅವನ ಹಾಗೆಯೇ ಕೂತಿದ್ದರು.ಅವನು ಉರಿದುಹೋದ. ವಿದ್ಯಾಸಾಗರ್, “ಇದು ಬ್ರಿಟಿಷ್ ಸಭ್ಯತೆಯ ಅತ್ಯುತ್ತಮ ಮಾದರಿ ಎಂದುಕೊಂಡಿದ್ದೆ” ಎಂದು ತಣ್ಣಗೆ ಹೇಳಿ ಬಿಟ್ಟರು. ಅನೇಕ ಬಾರಿ ಇಂತಹ ಪ್ರತಿಭಟನೆಗಳನ್ನು ಮಾಡಿದ ಈಶ್ವರಚಂದ್ರರು ತಮ್ಮ ಪ್ರತಿಭೆ,ನೈತಿಕ ಸ್ಥೈರ್ಯಗಳಿಂದಾಗಿ ಗೆಲ್ಲುತ್ತಾಹೋದರು.

ಭಾರತದಾದ್ಯಂತ ಮಹಿಳೆಯರ ಪರಿಸ್ಥಿತಿ ಆಗ ತೀರ ಕೆಟ್ಟದಾಗಿತ್ತು. ಬಂಗಾಳದಲ್ಲಂತೂ ಬಾಲ್ಯವಿವಾಹ, ಬಹುಪತ್ನಿತ್ವ ವಿಪರೀತ. ನೂರೆಂಭತ್ತೆಂಟು ಮಡದಿಯರಿದ್ದ ಪುರುಷಪುಂಗವರು ಮೆರೆಯುತ್ತಿದ್ದ ಕಾಲ ಅದು! ವಿದ್ಯಾಸಾಗರ್ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ ಎಂದರೆ ಯಾರೂ ಒಪ್ಪಲಿಲ್ಲ.ಆದರೆ ವಿದ್ಯಾಸಾಗರ್ ಸ್ವಂತ ಖರ್ಚಿನಲ್ಲಿ ಮೂವತ್ತೆರಡು ಶಾಲೆ ತೆರೆದರು. ಈ ವಿಷಯದಲ್ಲಿ ಅವರು ಸಾವಿತ್ರಿ ಬಾಯಿ ಫುಲೆ ಅವರಂತೆಯೇ ಹರಿಕಾರರು. ಆಮೇಲೆ ಅವರು ವಿಧವಾ ವಿವಾಹಕ್ಕೆ ಕೈ ಇಟ್ಟರು. ಅದಕ್ಕಾಗಿ ಕಾನೂನು ಜಾರಿಯಾಗಬೇಕೆಂದು ಹೋರಾಡಿ ಗೆದ್ದರು. ಆಗ ಸಂಪ್ರದಾಯವಾದಿಗಳಿಂದ ದೈಹಿಕ ಹಲ್ಲೆಯನ್ಮೂ ಎದುರಿಸಿದರು.ಮುದಿ ಪಂಡಿತ ದೊಣ್ಣೆ ಹಿಡಿದು ತಲೆ ಎತ್ತಿ ಕಲ್ಕತ್ತೆಯ ಬೀದಿಗಳಲ್ಲಿ ಓಡಾಡಿದ್ದು ಅಸಾಧಾರಣ ಘಟನೆ ಆದ್ದರಿಂದಲೇ ಗುರುದೇವರು ಇವರನ್ನು “ನಮ್ಮ ಮಧ್ಯದ ಮೊದಲ ಪುರುಷ ಸಿಂಹ” ಎಂದದ್ದು.

ವಿದ್ಯಾಸಾಗರ್ ರಿಗೆ ಆದರ್ಶ ಎಂಬುದು ಪರೋಪದೇಶಕ್ಕೆ ಮಾತ್ರ ಇದ್ದದ್ದಲ್ಲ. ಅವರ ಮಗ ವಿಧವಾ ವಿವಾಹಕ್ಕೆ ಮುಂದಾದಾಗ ಅವರು ಬಂಧುಗಳಿಂದ ಬಹಿಷ್ಕೃತರಾದರೂ ಲಗ್ನ ಮಾಡಿಸಲು ಹಿಂಜರೆಯಲಿಲ್ಲ. ಇದೇ ಮಗ ಮುಂದೆ ಸೊಸೆಗೆ ಕೈ ಕೊಟ್ಟ. ಆಗ ಪಂಡಿತರು ಅವನನ್ನು ತೊರೆದು, ಉಯಿಲಿನಲ್ಲಿ ಅವನಿಗಾಗಿ ಏನೂ ಬರೆಯದೆ ಸೊಸೆಗೆ ಮಾನ್ಯತೆ ನೀಡಿದರು. ಯಾವುದೇ ಗುಡಿ ಗುಂಡಾರಗಳತ್ತ ತಲೆ ಹಾಕದ ಈ ಮಾನವತಾವಾದಿ, ಕಡೆಗಾಲದಲ್ಲೂ ಮಗಳು ಬಲವಂತ ಮಾಡಿದರೂ ಪೂಜಾಗೃಹದೊಳಗೆ ಹೋಗಲಿಲ್ಲ. “ನನಗೆ ಕರ್ಪೂರ ಊದುಬತ್ತಿಗಳಿಂದ ಉಸಿರು ಕಟ್ಟುತ್ತೆ, ನನ್ನ ಪಾಡಿಗೆ ನನ್ನ ನ್ನು ಬಿಟ್ಟು ಬಿಡಿ” ಎಂದು ತಮಾಷೆ ಮಾಡಿ ದೇವರ ಪೂಜೆಯಿಂದ ದೂರ ಉಳಿದರು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದು ಚುನಾವಣೆಗಳೋ? ಭಯೋತ್ಪಾದನೆಯೋ?

ಕೆಳ ಜಾತಿಯ ಜನರಿಗೂ ಶಿಕ್ಷಣದಲ್ಲಿ ಪ್ರವೇಶ ಸಿಗಬೇಕೆಂದು ಛಲದಿಂದ ಹೋರಾಡಿದ ಈಶ್ವರಚಂದ್ರರು ಹಿಂದೂಗಳಲ್ಲಿದ್ದ ಬಹುಪತ್ನಿತ್ವದ ವಿರುದ್ಧದ ಹೋರಾಟದಲ್ಲಿ ಗೆಲ್ಲಲಾಗದೆ ನೊಂದರು.ತಮ್ಮ ಕೊನೆಗಾಲವನ್ನು ಕಾಡಿನಲ್ಲಿ ಸಂತಾಲರು ಎಂಬ ಬುಡಕಟ್ಟು ಜನರ ಸೇವೆಯಲ್ಲಿ ಕಳೆದರು.ಆಧುನಿಕ ಬಂಗಾಲಿ ಭಾಷೆಗೆ, ಸರಳ ಗದ್ಯಕ್ಕೆ ಬುನಾದಿ ಹಾಕಿದರು.

ಕರ್ನಾಟಕದ ಅಂದಿನ ಒ್ರಗತಿಶೀಲ ಜನ ವಿಧವಾ ವಿವಾಹ ಕ್ಜೆ ಅವರಿಂದ ಪ್ರೇರಣೆ ಪಡೆದರು.ಇನ್ನೂ ಒಂದು ವಿಷಯವನ್ನು ನಾವು ಕೃತಜ್ಞತೆಯಿಂದ ನೆನಪಿದಿಕೊಳ್ಳಬೇಕು.ಅದೆಂದರೆ, ಕನ್ನಡದಲ್ಲಿ ಕಾದಂಬರಿ ಪ್ರಕಾರವನ್ನು ಪರಿಚಯಿಸಲು ಬಿ.ವೆಂಕಟಾಚಾರ್ಯರು ಬಂಗಾಳಿಯಿಂದ ಬಂಕಿಮಚಂದ್ರರ ಕಾದಂಬರಿಗಳನ್ನು ತರ್ಜುಮೆ ಮಾಡಲು ಯತ್ನಿಸಿದರು. ಆಗ ಈ ಉತ್ಸಾಹಿಯನ್ನು ಪ್ರೋತ್ಸಾಹಿಸಿ ವಿದ್ಯಾಸಾಗರ್ ರು ನಿಯತವಾಗಿ ಪೋಸ್ಟ್ ಕಾರ್ಡ್ ಮೂಲಕ ಬಂಗಾಳಿ ಯನ್ನು ಕಲಿಸಿದರು.

ವಿದ್ಯಾಸಾಗರ್ ರ ಅನೇಕ ನಿಲುವುಗಳು ಸಂಪ್ರದಾಯವಾದಿಗಳನ್ನು ಕೆರಳಿಸುತ್ತಿತ್ತು.ಒಮ್ಮೆ ಅವರು ತಮ್ಮ ಲೋಕೋಪಕಾರಿ ಕೆಲಸಕ್ಕೆ ಧನಸಂಗ್ರಹ ಮಾಡಿಟ್ಟುಕೊಂಡಿದ್ದರು. ಅದೇ ಸಮಯದಲ್ಲಿ ವಿದೇಶದಲ್ಲಿದ್ದ ಕವಿ ಮೈಖೆಲ್ ಮಧುಸೂದನ್ ದತ್ತರು( ಟೆನಿಸ್ ತಾರೆ ಲಿಯಾಂಡರ್ ಪೇಸ್ ರವರ ಮುತ್ತಾತನ ತಂದೆ) ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ದ್ದರು.ಅವರ ಸ್ಥಿತಿ ಕೇಳಿ ಕರುಣಾಸಾಗರರಾದ ನಮ್ಮ ಈಶ್ವರಚಂದ್ರರು ಎಲ್ಲ ಹಣವನ್ನು ಅವರಿಗೆ ಕಳಿಸಿಬಿಟ್ಟರು. ಸನಾತನವಾದಿಗಳು ” ವಿಧವೆಯರ ಪ್ರೇಮಿಯು ಹೆಂಡಕುಡುಕನಿಗೆ ಹಣ ಕಳಿಸಿದ ” ಎಂದು ಜರೆದರು. ವಿದ್ಯಾಸಾಗರ್ ರು ಈ ಕುಡುಕನ ಬಾಯಲ್ಲಿ ಸರಸ್ವತಿ ಕುಳಿತಿದ್ದಾಳೆ.ನೋಡುತ್ತಿರಿ ಈತ ಬಂಗಾಳಿ ಗೆ ಹೊಸ ಜನ್ಮ ಕೊಡುತ್ತಾನೆ ಎಂದರು. ರಾವಣ ಇಂದ್ರಜಿತು ಅವರನ್ನು ದೇಶಾಭಿಮಾನಿ ಹೋರಾಟಗಾರರು ಎಂದು ಬಣ್ಣಿಸಿದ ಮೈಖೇಲ್ ಮಧುಸೂದನ್ ದತ್ ರ ” ಮೇಘನಾದ ವಧಾ” ಮಹಾ ಕಾವ್ಯವು ಆಧುನಿಕ ಬಂಗಾಳಿ ಸಾಹಿತ್ಯದ ನಾಂದಿ ಹಾಡಿತು.

ಭಾರತದ ನವೋದಯದ ಇಂತಹ ಮೇರುವ್ಯಕ್ತಿತ್ವಗಳ ಪ್ರತಿಮೆ ಒಡೆದರೆ, ಭಗ್ನವಾಗುವುದು ಕಲ್ಲಿನ, ಲೋಹದ ವಿಗ್ರಹ ಅಲ್ಲ. ಅದು ಒಂದು ಆದರ್ಶ, ಒಂದು ಬದುಕಿನ ಕುರಿತಾದ ಶ್ರೇಷ್ಠ ಪರಿಕಲ್ಪನೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...