ನರೇಂದ್ರ ಮೋದಿ ಸರ್ಕಾರದ ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಭಾರತವಷ್ಟೇ ಅಲ್ಲದೆ ವಿದೇಶಗಳ ಹಲವು ರಾಜಕೀಯ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಅಮೆರಿಕಾದ ಹಲವಾರು ರಾಜಕೀಯ ಮುಖಂಡರು ರೈತರೊಂದಿಗೆ ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರತಿಭಟನೆಗಳನ್ನು ಮೋದಿ ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿದ್ದಾರೆ.
ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡ್ “ಶಾಂತಿಯುತ ಪ್ರತಿಭಟನೆಗಳನ್ನು ಕೆನಡಾ ಬೆಂಬಲಿಸುತ್ತದೆ. ಆದರೆ ಭಾರತದ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ. ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನ ಲೇಬರ್ ಪಾರ್ಟಿ ಸಂಸದ ತನ್ಮನ್‌ಜೀತ್ ಸಿಂಗ್ ಧೇಸಿ ತಮ್ಮ ಟ್ವಿಟರ್ ಖಾತೆಯಲ್ಲಿ ದೆಹಲಿ ಚಲೋ ಪ್ರತಿಭಟನೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ’ಖಾಸಗೀಕರಣದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಪಂಜಾಬ್ ಮತ್ತು ಭಾರತದ ಇತರ ಭಾಗಗಳ ರೈತರೊಂದಿಗೆ ನಾನು, ನಮ್ಮ ಕುಟುಂಬ ಮತ್ತು ಸ್ನೇಹಿತರು ನಿಲ್ಲುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!
It takes a special kind of people to feed those ordered to beat and suppress them.
I stand with farmers of the #Punjab and other parts of #India, including our family and friends, who are peacefully protesting against the encroaching privatisation of #FarmersBill2020. pic.twitter.com/TFywBgtK9X
— Tanmanjeet Singh Dhesi MP (@TanDhesi) November 28, 2020
ಮತ್ತೊಬ್ಬ ಲೇಬರ್ ಪಾರ್ಟಿ ಸಂಸದ ಜಾನ್ ಮೆಕ್‌ಡೊನೆಲ್ ಅವರು “ನಾನು ಸಂಸದ ತನ್ಮನ್‌ಜೀತ್ ಸಿಂಗ್ ಧೇಸಿ ಅವರ ಮಾತುಗಳನ್ನು ಒಪ್ಪುತ್ತೇನೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧದ ಈ ರೀತಿಯ ದಬ್ಬಾಳಿಕೆಯ ವರ್ತನೆ ಸ್ವೀಕಾರಾರ್ಹವಲ್ಲ. ಇದು ಭಾರತದ ಖ್ಯಾತಿಗೆ ಕಳಂಕ ತರುತ್ತದೆ” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಕೆನಡಾದ ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಕ್ಷದಿಂದ ರೈತರಿಗೆ ಬೆಂಬಲ ವ್ಯಕ್ತವಾಗಿದೆ.
“ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಭಾರತೀಯ ಸರ್ಕಾರ ನಡೆಸುತ್ತಿರುವ ಹಿಂಸಾಚಾರವು ಭೀಕರವಾಗಿದೆ. ನಾನು ಪಂಜಾಬ್ ಮತ್ತು ಭಾರತದಾದ್ಯಂತದ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸುತ್ತೇನೆ. ಹಿಂಸಾಚಾರಕ್ಕಿಂತ ಶಾಂತಿಯುತ ಸಂವಾದದಲ್ಲಿ ತೊಡಗಿಸಿಕೊಳ್ಳಲು ನಾನು ಭಾರತೀಯ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ರೈತರ ಪರವಾಗಿ ನಿಲ್ಲುವುದನ್ನೇ ರಾಜಕಾರಣವೆನ್ನುವುದಾದರೆ, ಹೌದು ನಾವು ತಪ್ಪಿತಸ್ಥರೇ..!
ಒಂಟಾರಿಯೊ ಪ್ರಾಂತೀಯ ಸಂಸತ್ತಿನಲ್ಲಿ ಬ್ರಾಂಪ್ಟನ್ ಪೂರ್ವವನ್ನು ಪ್ರತಿನಿಧಿಸುವ ಗುರ್‌ರತನ್ ಸಿಂಗ್ ಅವರು ಸದನದಲ್ಲಿ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ್ದಾರೆ.
“ಭಾರತದಲ್ಲಿ ರೈತರು ಸರ್ಕಾರದಿಂದ ಆಕ್ರಮಣಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ಭಾರತ ಸರ್ಕಾರವು ಈ ಅನ್ಯಾಯದ ಕಾನೂನುಗಳ ವಿರುದ್ಧ ರೈತರೊಂದಿಗೆ ನಿಲ್ಲುವಂತೆ ನಾನು ಈ ಸದನವನ್ನು ಕೇಳುತ್ತಿದ್ದೇನೆ” ಎಂದಿದ್ದಾರೆ.
The Indian govt's use of water cannons and tear gas on farmers protesting mass privatization of the agricultural sector and unjust reform of farming laws is appalling. They deserve respect for feeding the nation instead of being subjected to state brutality. #ISTANDWITHFARMERS pic.twitter.com/XPi2uGjFrt
— Gurratan Singh (@GurratanSingh) November 27, 2020
ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಂಸದ ಗುರ್‌ರತನ್ ಸಿಂಗ್, ರೈತರ ಮೇಲೆ ಪೊಲಿಸರು ನಡೆಸಿದ ದೌರ್ಜನ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ಈ ಚಿತ್ರಗಳು ಭಯಾನಕವಾಗಿವೆ. ನಾನು ರೈತರ ಕುಟುಂಬದಿಂದ ಬಂದವನು. ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುವ ಕಾನೂನುಗಳನ್ನು ವಿರೋಧಿಸುವ ರೈತರ ನೋವು ಮತ್ತು ಹೋರಾಟವನ್ನು ನಾನು ಅನುಭವಿಸುತ್ತೇನೆ. ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರ ದಾಳಿ ನಡೆಸುತ್ತಿದೆ. ನಾನು ರೈತರ ಜೊತೆ ಇದ್ದೇನೆ ಎಂದು ಟ್ವೀಟ್‌ಗಳಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ’ರೈತರು ದೇಶದ ಜೀವನಾಡಿ, ರೈತರೊಂದಿಗೆ ಇಡೀ ದೇಶ ನಿಲ್ಲಬೇಕು’- ಪಿಣರಾಯಿ ವಿಜಯನ್
ಅಮೆರಿಕಾದಲ್ಲಿ ಇಲ್ಲಿಯವರೆಗೆ ಪ್ರತಿಭಟನೆಗೆ ಬಹಿರಂಗವಾಗಿ ತಮ್ಮ ಪ್ರತಿಕ್ರಿಯೆಯನ್ನು ಹೇಳಿದವರು ಕಡಿಮೆಯೇ. ಆದರೆ, ವಕೀಲರು ಮತ್ತು ರಿಪಬ್ಲಿಕನ್ ಪಕ್ಷದ ಅಧಿಕಾರಿ ಹರ್ಮೀತ್ ಕೆ ಧಿಲ್ಲಾನ್ ಮಾತ್ರ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹೊರಹಾಕಿದ್ದಾರೆ.
As the Punjab-born descendant of farmers, my heart breaks to see Punjabi farmers assaulted for protesting Indian gov't's pro-big-corporation farm bill that will destroy their farms, way of life, and culture. Hear them, meet with them, & compromise, P.M. Modi. #IStandWithFarmers! https://t.co/2JFYu1g3Wy
— Harmeet K. Dhillon (@pnjaban) November 30, 2020
“ಪಂಜಾಬ್ ಮೂಲದ ರೈತರ ವಂಶಸ್ಥರಾಗಿ, ಪಂಜಾಬಿ ರೈತರು ತಮ್ಮ ಹೊಲಗಳು, ಜೀವನ ವಿಧಾನ ಮತ್ತು ಸಂಸ್ಕೃತಿಯನ್ನು ನಾಶಪಡಿಸುವ ಭಾರತೀಯ ಸರ್ಕಾರದ ದೊಡ್ಡ-ಕಾರ್ಪೊರೇಷನ್ ಪರ ಕೃಷಿ ಮಸೂದೆಯನ್ನು ಪ್ರತಿಭಟಿಸಿದ್ದಕ್ಕಾಗಿ ಹಲ್ಲೆಗೊಳಗಾಗಿದ್ದನ್ನು ನೋಡಲು ನನಗೆ ನೋವಾಗುತ್ತಿದೆ. ಪ್ರಧಾನಿ ಮೋದಿಯವರೇ ರೈತರ ಸಮಸ್ಯೆಗಳನ್ನು ಆಲಿಸಿ, ಅವರನ್ನು ಭೇಟಿ ಮಾಡಿ, ಮತ್ತು ರಾಜಿ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ: ಹೋರಾಟದಲ್ಲಿ ತಮ್ಮದೆ ಛಾಪು ಮೂಡಿಸಿದ ರೈತ ಮಹಿಳೆಯರು!
ಜಗ್ಮೀತ್ ಸಿಂಗ್ ಮತ್ತು ತನ್ಮನ್‌ಜೀತ್ ಸಿಂಗ್ ಧೇಸಿ ಅವರಂತಹ ನಾಯಕರು ಈ ಹಿಂದೆಯೂ ಮೋದಿ ಸರ್ಕಾರವನ್ನು, ಕಾಶ್ಮೀರ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಹಲವು ಬಾರಿ ಟೀಕಿಸಿದ್ದಾರೆ.
ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಮತ್ತು ಪ್ರತಿಭಟನೆಯನ್ನು ಮೋದಿ ಸರ್ಕಾರ ನಿಭಾಯಿಸುತ್ತಿರುವ ಕುರಿತ ಟೀಕೆಗಳು ಕೇವಲ ಪಂಜಾಬ್ ಮೂಲದ ರಾಜಕಾರಣಿಗಳಾದ ಧೇಸಿ, ಗಿಲ್, ಜಗ್ಮೀತ್ ಸಿಂಗ್, ಗುರಾರತನ್ ಸಿಂಗ್ ಮತ್ತು ಸಾರಾ ಸಿಂಗ್ ಅವರಿಂದ ಮಾತ್ರ ಬಂದಿಲ್ಲ. ಜ್ಯಾಕ್, ಹ್ಯಾರಿಸ್, ಜಾನ್ ಮೆಕ್‌ಡೊನೆಲ್, ಕೆವಿನ್ ಯಾರ್ಡ್ ಮತ್ತು ಆಂಡ್ರಿಯಾ ಹೊರ್ವಾತ್ ಕೂಡ ತಮ್ಮ ಪ್ರತಿರೋಧ ನೀಡಿದ್ದಾರೆ.
ಭಾರತದ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿರುವ ಬಹುತೇಕ ಎಲ್ಲಾ ರಾಜಕೀಯ ನಾಯಕರು ಆಯಾ ದೇಶಗಳೊಳಗಿನ ವಿರೋಧ ಪಕ್ಷಗಳ ನಾಯಕರು. ಇದು ಮೋದಿ ಸರ್ಕಾರದ ಮೇಲೆ ಅಂತರರಾಷ್ಟ್ರೀಯ ಒತ್ತಡಕ್ಕೆ ಕಾರಣವಾಗುವ ಸಂಭವವಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದೆಹಲಿಯಲ್ಲಿ ರೈತರ ಗುಡುಗು: ಇಂದಿನ ಹೋರಾಟದ ಚಿತ್ರಗಳು
