Homeಮುಖಪುಟದ ಲೈವ್ಸ್ ಆಫ್ ಅದರ್ಸ್; 20ನೇ ಶತಮಾನದ ಒಂದು ರಾಜಕೀಯ ಚಾರಿತ್ರಿಕ ದಾಖಲೆ

ದ ಲೈವ್ಸ್ ಆಫ್ ಅದರ್ಸ್; 20ನೇ ಶತಮಾನದ ಒಂದು ರಾಜಕೀಯ ಚಾರಿತ್ರಿಕ ದಾಖಲೆ

- Advertisement -
- Advertisement -

2006ರಲ್ಲಿ ತಯಾರಾದ ಈ ಅಪರೂಪದ ಜರ್ಮನ್ ಚಿತ್ರದ ಕುರಿತು ಮಾತನಾಡುವ ಮುನ್ನ ಮೂರು ಸಂದರ್ಭಗಳನ್ನು ಕುರಿತು ಚುಟುಕಾದ ಟಿಪ್ಪಣಿ.

1. ಅಮೆರಿಕದ ಪ್ರಜೆ ಮತ್ತು ಜಗತ್ತಿನ ಶ್ರೇಷ್ಠ ಸಮಾಜವಿಜ್ಞಾನಿ ನೋಮ್ ಚಾಮ್ಸ್ಕಿ ಅವರು ಹೇಳಿರುವಂತೆ; ಇಂದು ಜಗತ್ತಿನ ಮುಂಚೂಣಿಯ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಸಿಕೊಂಡಿರುವ ಅಮೆರಿಕದಲ್ಲಿ ಯಾವುದೇ ವಿಶ್ವವಿದ್ಯಾಲಯದ ಉಪನ್ಯಾಸಕರು ಗ್ರಂಥಾಲಯದಿಂದ ಎರವಲು ಪಡೆದ ಗ್ರಂಥಗಳ ಮಾಹಿತಿಯನ್ನು ಗೃಹ ಇಲಾಖೆ ಪಡೆಯುತ್ತದೆ!

2. ನೀವು ಲಂಡನ್‌ನಲ್ಲಿ ವಾಸವಿದ್ದಲ್ಲಿ ಬೆಡ್‌ರೂಮಿನಿಂದ ಅರ್ಧಗಂಟೆ ಕಾಲ ಹೊರಹೋಗಿ ತಿರುಗಾಡಿ ಬರುವ ವೇಳೆಗೆ ಕನಿಷ್ಟ 23 ಕಡೆ ಗುಪ್ತಚಾರ ಇಲಾಖೆಯ ಕ್ಯಾಮರಾಗಳಲ್ಲಿ ದಾಖಲಾಗಿರುತ್ತೀರಿ. ಎಲ್ಲಿ ಉಳಿಯಿತು ನಿಮ್ಮ ಖಾಸಗಿತನ? (ಒಂದು ಪತ್ರಿಕೆಯ ಕಾಲಂನ ಸಾಲುಗಳು)

3. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಕರೆಸಿಕೊಂಡ ದೇಶದಲ್ಲಿ ಬುದ್ಧಿಜೀವಿಗಳು ಸಾಮಾಜಿಕ ನ್ಯಾಯದ ಪರವಾಗಿಯೂ ಮತ್ತು ಕೋಮುವಾದಿ ರಾಜಕಾರಣದ ವಿರೋಧವಾಗಿರುವುದೇ ತಪ್ಪು ಎಂಬಂತೆ ಪೊಲೀಸ್ ಇಲಾಖೆಯು ಅವರಿಗೆ ನಕ್ಸಲೀಯರ ಬೆಂಬಲಿಗರೆಂದು ಹಣೆಪಟ್ಟಿಕಟ್ಟಿ ಅವರನ್ನು ಬಂಧಿಸಬೇಕಾದವರ ಪಟ್ಟಿಗೆ ಸೇರಿಸುತ್ತದೆ.

ದ ಲೈವ್ಸ್ ಆಫ್ ಅದರ್ಸ್ (The lives of others) ಸಿನಿಮಾದ ಸಂಪೂರ್ಣ ಚಿತ್ರಣವನ್ನು ನಮ್ಮದಾಗಿಸಿಕೊಳ್ಳಲು, ಎರಡನೇ ವಿಶ್ವ ಯುದ್ಧದ ಪ್ರಾಥಮಿಕ ತಿಳಿವಳಿಕೆ ಸಹಾಯ ಮಾಡುತ್ತದೆ. ಎರಡನೇ ಮಹಾಯುದ್ಧದಲ್ಲಿ ಸೋಲುಂಡ ಜರ್ಮನಿಯಲ್ಲಿ, ಬಿಸ್ಮಾರ್ಕ್‌ನ ಏಕೀಕರಣ ಕನಸು ಭಗ್ನಗೊಂಡು ದೇಶ ಎರಡು ಹೋಳಾಗುತ್ತದೆ. ಪೂರ್ವ ಜರ್ಮನಿಯು ಸಮತಾವಾದಿ ಮಾದರಿ ಸರ್ಕಾರವನ್ನೂ, ಪಶ್ಚಿಮ ಜರ್ಮನಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರವನ್ನು ಹೊಂದುತ್ತವೆ.

ಈ ಚಿತ್ರದ ಕತೆ ಜರುಗುವುದು ಸುಮಾರು 1980-91ರ ನಡುವೆ. ಚಿತ್ರ ಪ್ರಾರಂಭಕ್ಕೆ ಮುನ್ನ ತೋರಿಸುವಂತೆ ಪೂರ್ವ ಜರ್ಮನಿಯ ಸಮತಾವಾದಿ ಸರ್ಕಾರ ದೇಶದ ಯಾವುದೇ ಪ್ರಜೆಯ ಬದುಕಿನ ಯಾವ ಮೊಗ್ಗುಲಿನ ಖಾಸಗಿತನವನ್ನು ಅಲ್ಲಗಳೆದಿತ್ತು. ಗುಮಾನಿಗೆ ಕಾರಣರಾದ ಲೇಖಕರು, ಕಲಾವಿದರು, ಬುದ್ಧಿಜೀವಿಗಳು ಗುಪ್ತಚರ ಇಲಾಖೆಯ ಕಣ್ಗಾವಲಿನಲ್ಲಿ ಬದುಕಬೇಕಿತ್ತು. ಕೆಲವರಿಗೆ ಅದರ ಅರಿವಿದ್ದರೆ ಮತ್ತೆ ಕೆಲವರಿಗೆ ಹಾಗೆ ಕಣ್ಗಾವಲಿನಲ್ಲಿದ್ದೇವೆಂಬುದರ ಅರಿವು ಕೂಡ ಇಲ್ಲ.

ಆ ವೇಳೆಗಾಗಲೇ ಸ್ಟಾಸಿ (Stasi – ಪೂರ್ವ ಜರ್ಮನಿಯ ಗುಪ್ತಚರ ದಳ) ಕುಪ್ರಸಿದ್ಧಿ ಗಳಿಸಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬುದ್ಧಿವಂತಿಕೆಯಿಂದ ಹತ್ತಿಕ್ಕಲಾಗಿತ್ತು. ಕೆಲವು ಲೇಖಕರಿಗೆ ಕಡ್ಡಾಯವಾಗಿ ಏನನ್ನೂ ಬರೆಯದಂತೆ ಆದೇಶ ನೀಡಲಾಗಿತ್ತು. ಇಂಥ ಸ್ಟಾಸಿಯ ಒಬ್ಬ ಮುಖ್ಯ ನೌಕರ ವೀಸ್ಲರ್ ನಡೆಸುವ ತನಿಖೆಯೊಂದಿಗೆ ಚಿತ್ರ ಆರಂಭವಾಗುತ್ತದೆ.

ನಾಟಕಕಾರ ಜಾರ್ಜ್ ಡ್ರೇಮನ್‌ನ ಮೇಲೆ ಕಣ್ಣಿಡಬೇಕೆಂಬ ಹೊಸ ಆದೇಶ ವೀಸ್ಲರ್‌ಗೆ ತಲುಪುವುದು ಮತ್ತು ಡ್ರೇಮನ್‌ನ ನಾಟಕ ಪ್ರದರ್ಶನದೊಂದಿಗೆ ಕಥಾಸುರುಳಿ ಬಿಚ್ಚಿಕೊಳ್ಳುತ್ತದೆ. ಅಲ್ಲಿಯವರೆಗೆ ಸ್ಟಾಸಿಯ ಕಣ್ಗಾವಲಿನಲ್ಲಿ ಇರದ ಪೂರ್ವ ಜರ್ಮನಿಯ ಸಾಂಸ್ಕೃತಿಕ ಲೋಕದ ಕೆಲವೇ ವ್ಯಕ್ತಿಗಳಲ್ಲಿ ಡ್ರೇಮನ್ ಕೂಡ ಒಬ್ಬ. ಈ ವೇಳೆಗಾಗಲೇ ಆತನ ಬಹುತೇಕ ಸಮಕಾಲೀನರು ಸ್ಟಾಸಿಯ ಕಣ್ಗಾವಲಿನಲ್ಲಿ ಬದುಕುತ್ತಿರುವವರೇ!

ಸ್ಟಾಸಿಯ ಕುಪ್ರಸಿದ್ಧಿ ಪ್ರೇಕ್ಷಕನಿಗೆ ಮನದಟ್ಟಾಗುವುದು ಒಬ್ಬ 4-5 ವರ್ಷದ ಹುಡುಗ ಗುಪ್ತಚರ ದಳದ ಅವಿಭಾಜ್ಯ ಅಂಗವಾದ ವೀಸ್ಲರ್‌ಗೆ ನೀನು ಸ್ಟಾಸಿ ಜೊತೆಯಲ್ಲಿರುವೆಯಾ? ಅವನು ಕೆಟ್ಟವನಂತೆ.. ಹಾಗಂತ ನಮ್ಮಪ್ಪ ಹೇಳಿದರು ಎಂದಾಗಲೇ.

ಬಹಿರಂಗವಾಗಿ ಇರಲಿ, ಖಾಸಗಿಯಾಗಿ ಇರಲಿ, ಬುದ್ಧಿಜೀವಿಗಳು, ಸಾಹಿತಿಗಳು ಸರ್ಕಾರದ ಕುರಿತು ವಸ್ತುನಿಷ್ಠವಾಗಿ ಮಾತನಾಡಲಾರದ, ಬರೆಯಲಾರದಂತಹ ಉಸಿರುಕಟ್ಟಿಸುವ ವಾತಾವರಣ ಅಂದಿನ ಪೂರ್ವ ಜರ್ಮನಿಯದ್ದು. ಸೀಮಿತ ಜನಸಂಖ್ಯೆಯನ್ನು ಹೊಂದಿರುವಂತಹ ಯೂರೋಪಿಯನ್ ಮಾದರಿಯ ರಾಷ್ಟ್ರಗಳಲ್ಲಿ ಮಾತ್ರ ಈ ರೀತಿ ಪ್ರತಿ ಪ್ರಜೆಯ ಮೆಲೆ ಕಣ್ಣಿಡಲು ಸಾಧ್ಯ. ಭಾರತದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿದ್ದರೂ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಈ ರೀತಿ ಸರ್ಕಾರದ ತೀವ್ರ ಕಣ್ಗಾವಲಿನಲ್ಲಿ ಬದುಕಿದಂತೆ ಕಂಡುಬರುವುದಿಲ್ಲ.

ತರ್ಕಕ್ಕೆ ನಿಲುಕದ ಈ ಜರ್ಮನಿಯ ವಿಭಜನೆಯಲ್ಲಿ ಬರ್ಲಿನ್ ಗೋಡೆಯ ಆಚೆಬದಿಗಿದ್ದ ಪಶ್ಚಿಮ ಜರ್ಮನಿಯ ಪತ್ರಿಕೆಗಳನ್ನು ಓದುವುದು ಕೂಡ ಅಪರಾಧವಾಗಿತ್ತು. (ಎರಡೂ ಜರ್ಮನಿಗಳ ನಡುವೆ ಪ್ರಭುತ್ವ ನಿರ್ಮಿಸಿದ್ದು ಕೇವಲ ಒಂದು ಗೋಡೆ). ಸಾವಿರಾರು ವರ್ಷಗಳಿಂದ ಒಟ್ಟಿಗೆ ಬದುಕಿದ ಜನಸಮುದಾಯವನ್ನ ಒಂದು ರ್‍ಯಾಂಡಮ್ ಅಡ್ಡಗೆರೆಯೆಳೆದು ಬೇರ್ಪಡಿಸಲಾಗಿತ್ತು.

ಡ್ರೇಮನ್‌ನ ಮನೆಯ ಹೊರಗೆ ಕ್ಯಾಮರಾ ಮತ್ತು ಒಳಗೆ ಮೈಕ್ರೋಫೋನುಗಳನ್ನು ಅಳವಡಿಸಿದ ಮೇಲೆ ನಡೆಯುವ ಕೆಲವು ಮುಖ್ಯ ಘಟನಾವಳಿಗಳೆಂದರೆ;

1. ಆತನ ಮನೆಯಲ್ಲಿ ಜರುಗುವ ಒಂದು ಔತಣಕೂಟ. ಅದರಲ್ಲಿ ಸರ್ಕಾರದಿಂದ ಏನನ್ನು ಬರೆಯಬಾರದೆಂಬ ಆಜ್ಞೆಗೆ ಗುರಿಯಾದ ಒಬ್ಬ ಹಿರಿಯ ಲೇಖಕ ಅಂತರ್ಮುಖಿಯಾಗಿದ್ದಾನೆ.

2. ಡ್ರೇಮನ್ ಮತ್ತು ಆತನ ಗೆಳತಿಯ (ಆತನ ನಾಟಕಗಳಲ್ಲಿ ಅಭಿನಯಿಸುವಾಕೆ) ಏಕಾಂತದ ಸಂಭಾಷಣೆಗಳು.

3. ಇತರರ ಮನೆಗಳಲ್ಲಿ ಆಹೋರಾತ್ರಿ ಪತ್ತೇದಾರಿಕೆ ನಡೆಯುತ್ತಿರುವುದರಿಂದ ಡ್ರೇಮನ್‌ನ ಮನೆಯು ಸ್ಟಾಸಿಯ ಕೆಂಗಣ್ಣಿಗೆ ಬಿದ್ದಿಲ್ಲವೆಂಬ ಊಹೆಯೊಂದಿಗೆ ನಡೆಯುವ ಲೇಖಕರ ಸೋ ಕಾಲ್ಡ್ ಭದ್ರತಾವಿರೋಧಿ ಸಂಭಾಷಣೆಗಳು.

4. ಪಶ್ಚಿಮ ಜರ್ಮನಿಯ ಪ್ರಕಾಶಕ ಗೆಳೆಯನೊಬ್ಬ ಬೇನಾಮಿ ಹೆಸರಿನಿಂದ ಡ್ರೇಮನ್ ಮನೆಗೆ ಬಂದು ಆತನ ಲೇಖನವನ್ನ ಮುದ್ರಿಸಲು ಪಡೆದುಕೊಳ್ಳುವುದು ಮತ್ತು ಟೈಪ್‌ರೈಟರ್ ಕೊಟ್ಟು ಹೋಗುವುದು.

5. ಸಮಾನ ಮನಸ್ಕರೆಲ್ಲಾ ಕಲೆತು ಸರ್ಕಾರದ ಅಮಾನವೀಯ ಕೃತ್ಯಗಳ ಕುರಿತು ಚರ್ಚಿಸುವುದು.

6. ಸರ್ಕಾರದ ದಮನಕಾರಿ ನೀತಿಯಿಂದ ಸಾವಿರಾರು ಜನರು ಬಲವಂತದ ಆತ್ಮಹತ್ಯೆಗೆ ಶರಣಾಗುವುದನ್ನ ಸರ್ಕಾರ ಆತ್ಮಹತ್ಯೆ ಎಂದು ಕರೆಯುವ ಬದಲಿಗೆ ಸ್ವಯಂ ಕೊಂದುಕೊಂಡವರು (self murderer) ಎಂದು ಪರಿಗಣಿಸುವುದರ ಕುರಿತು ಚರ್ಚಿಸಿ ಜಂಟಿಯಾಗಿ ಆ ಕುರಿತು ನಾಟಕ ಬರೆಯುವುದು.

7. ಡ್ರೇಮನ್‌ನ ಓರಗೆಯ ಲೇಖಕ ಜೆರ್‌ಸ್ಕಾನ ಇದೇ ಮಾದರಿಯ ಆತ್ಮಹತ್ಯೆಯ ಸುದ್ದಿ ತಲುಪಿ ಆಗ ಡ್ರೇಮನ್ ಸರ್ಕಾರದ ವಿರುದ್ಧ ಅಸಮಾಧಾನಗೊಳ್ಳುವುದು…

ಹೀಗೆ ಒಂದರ ಹಿಂದೊಂದು ಘಟನೆಗಳು ಡ್ರೇಮನ್‌ನ ಮನೆಯಲ್ಲಿ ಜರುಗಿದರೂ ಆತ ಸ್ಟಾಸಿಯ ಕಾಕದೃಷ್ಟಿಯಲ್ಲೇ ಇದ್ದರೂ ಆಶ್ಚರ್ಯಕರ ರೀತಿಯಲ್ಲಿ ಸರ್ಕಾರದ ಕಪಿಮುಷ್ಟಿಯಿಂದ ಪಾರಾಗುವುದೇ ಚಿತ್ರದ ಜೀವಾಳ. ಇದಕ್ಕೆ ಕಾರಣ ವೀಸ್ಲರ್.

ವೀಸ್ಲರ್‌ನ ಮೇಲ್ವಿಚಾರಣೆಯಲ್ಲಿಯೇ ಪ್ರಾರಂಭವಾಗುವ ಡ್ರೇಮನ್‌ನ ಮೇಲಿನ ಕಣ್ಗಾವಲು ಒಟ್ಟಾರೆ ಪರಿಸ್ಥಿತಿಯ ಕಾರಣದಿಂದಲೋ, ಸಾಂದರ್ಭಿಕ ಮಾತುಕತೆಗಳ ಪ್ರಭಾವವೋ, ತನ್ನ ಮೇಲಧಿಕಾರಿಯ ಸ್ವಾರ್ಥದ ಕುರಿತು ಜಿಗುಪ್ಸೆಯೋ, ರಾಜಕೀಯ ಬದ್ಧತೆ ಇಲ್ಲದ ಲಂಪಟ ಮಂತ್ರಿಯ ಕುರಿತ ಪ್ರತಿಭಟನೆಯೋ, ಮಾನವೀಯ ಪರವಾದ ಲೇಖಕರ ಕುರಿತು ಸಹಾನುಭೂತಿಯೋ ಒಟ್ಟಾರೆಯಾಗಿ ವೀಸ್ಲರ್ ಕಾಲಕಾಲಕ್ಕೆ ಡ್ರೇಮನ್ ಮೇಲೆ ಗುಮಾನಿ ಬಾರದಂತಹ ವರದಿಗಳನ್ನೇ ಸರ್ಕಾರಕ್ಕೆ ಕಳುಹಿಸಲು ಪ್ರಾರಂಭಿಸುತ್ತಾನೆ. ಕೆಲವೊಮ್ಮೆ ಆತನ ವಿರುದ್ಧ ವರದಿ ಸಿದ್ಧಪಡಿಸಿದರೂ ಸಾಂದರ್ಭಿಕ ಸಂದಿಗ್ಧದಿಂದ ಅದನ್ನು ಕಛೇರಿಗೆ ಹಸ್ತಾಂತರಿಸುವುದಿಲ್ಲ. ಇದೇ ಸಮಯಕ್ಕೆ ಕಾರ್ಯಾಚರಣೆಯ ಸಂಪೂರ್ಣ ದಾಖಲೆ ಅಗತ್ಯವಿಲ್ಲ ಎಂಬ ತನ್ನ ಇಲಾಖೆಯ ಮೌಖಿಕ
ಆದೇಶದಿಂದಾಗಿ ಆತನಿಗೆ ಡ್ರೇಮನ್ ಮತ್ತು ಗೆಳೆಯರನ್ನು ರಕ್ಷಿಸುವುದು ಕೊಂಚ ಸುಲಭವೂ ಆಗುತ್ತದೆ.

ಸರ್ಕಾರದ ವಿರುದ್ಧ ಬರೆಯಲ್ಪಡುತ್ತಿದ್ದ ನಾಟಕವನ್ನ ಸರ್ಕಾರದ ’ಪರ’ವೆಂಬಂತೆ ಬಿಂಬಿಸುವ ವರದಿಗಳನ್ನ ದಾಖಲಿಸುತ್ತಾ ಮುಂದುವರಿಯುತ್ತಾನೆ. ಮತ್ತೊಂದು ಪಾಳಯದ ನೌಕರನ ಮೇಲೆಯೂ ಹಿಡಿತ ಸಾಧಿಸಿ ಅವರ ರಕ್ಷಣೆಯು ಅಬಾಧಿತವಾಗುವಂತೆ ನೋಡಿಕೊಳ್ಳುತ್ತಾನೆ.

ಪ್ರಾರಂಭದಲ್ಲಿ ಏನೂ ಕಾರಣಗಳಿಲ್ಲದೆ ವಿನಾಯತಿ ತೋರುವ ವೀಸ್ಲರ್ ನಂತರ ಅದಕ್ಕೇ ಪಕ್ಕಾಗಿ ತನ್ನ ಮೇಲಧಿಕಾರಿಗೆ ಅನುಮಾನ ಬಂದರೂ ಸಹ ಒಬ್ಬ ಆಪ್ತಮಿತ್ರನಂತೆ ಡ್ರೇಮನ್‌ನ ರಕ್ಷಣೆಗೆ ಮುಂದಾಗುವುದು ಮಾನವೀಯತೆಗೆ ಬರೆದ ಹೊಸ ಭಾಷ್ಯ.

ಅಂತೂ ಡ್ರೇಮನ್ ಮತ್ತು ಗೆಳೆಯರು ಬರೆಯುವ ನಾಟಕ ಸಿದ್ಧವಾಗುವ ವೇಳೆಗೆ ಪಶ್ಚಿಮ ಜರ್ಮನಿಯಲ್ಲಿ ಪ್ರಕಟವಾಗುವ ಸರ್ಕಾರದ ವಿರುದ್ಧದ ಡ್ರೇಮನ್‌ನ ಲೇಖನ (ಸ್ವಯಂ ಕೊಂಡುಕೊಳ್ಳುವವರ ಕುರಿತಾದದ್ದು) ಪೂರ್ವ ಜರ್ಮನ್ ಸರ್ಕಾರದಲ್ಲಿ ಸಂಚಲನಕ್ಕೆ ಕಾರಣವಾಗುತ್ತದೆ. ಯಾವುದೇ ಸ್ಪಷ್ಟ ದಾಖಲೆಗಳು ಸ್ಟಾಸಿಗೆ ದೊರಕದೆ ಆತನ ಮನೆಯನ್ನು ತಪಾಸಣೆಗೈದು ಬರಿಗೈಯಲ್ಲಿ ಹಿಂದಿರುಗುತ್ತದೆ. ಪ್ರಭುತ್ವದ ಭದ್ರತೆಯ ನೆಪದಲ್ಲಿ ಸ್ಟಾಸಿಯ ಜನ ಬಾಗಿಲು ತಟ್ಟಿದಾಗ ಡ್ರೇಮನ್‌ಗೆ ಅಚ್ಚರಿಯಾಗುತ್ತದೆ. ಆತನ ಗೆಳತಿಯನ್ನು ಬಂಧಿಸಿದ ಸ್ಟಾಸಿಯು ಪಿತೂರಿಯ ಕುರಿತಾದ ಆಧಾರ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಆತನಿಗೆ ಸಾಧ್ಯವಾಗುತ್ತದೆ. ಆದರೆ ವೀಸ್ಲರ್‌ನ ಒಳ್ಳೆಯತನ ಇಲ್ಲಿಯೂ ಡ್ರೇಮನ್‌ನನ್ನ ಕಾಪಾಡುತ್ತದೆ. ಆದರೆ ಅಪ್ರೂವರ್ ಆಗುವ ಅಪರಾಧಿ ಭಾವದ ಆತನ ಗೆಳತಿಯನ್ನ ಬದುಕಿಸುವುದಕ್ಕೆ ವೀಸ್ಲರ್‌ಗೆ ಸಾಧ್ಯವಾಗುವುದಿಲ್ಲ.

ಡ್ರೇಮನ್ ಮೇಲೆ ಕಣ್ಣಿಟ್ಟು ಸಾಕ್ಷ್ಯ ಹುಡುಕಲು ಪ್ರಯತ್ನಿಸುವ ಆಪರೇಶನ್ ’ಲೋಸ್ಲೋ’ ಇಲ್ಲಿಗೆ ಮುಗಿಯುತ್ತದೆ. ಸ್ಟಾಸಿಯ ಉನ್ನತಾಧಿಕಾರಿಯ ಅವಕೃಪೆಗೆ ಪಾತ್ರನಾಗುವ ವೀಸ್ಲರ್ ಮುಂದಿನ 20 ವರ್ಷಗಳ ಕಾಲ ಕೇವಲ ಅಂಚೆಪತ್ರಗಳನ್ನ ತೆರೆಯುವ ಯಾಂತ್ರಿಕ ಕೆಲಸಕ್ಕೆ ಹಿಂಬಡ್ತಿ ಪಡೆಯುತ್ತಾನೆ.

1989 ರಷ್ಯಾದಲ್ಲಿ ಉದಾರವಾದಿ ಗೋರ್ಬಚೆವ್ ಆಡಳಿತದ ಆರಂಭದೊಂದಿಗೆ ಪೂರ್ವ ಜರ್ಮನಿಯಲ್ಲಿ ಸ್ಟಾಸಿಯ ದಬ್ಬಾಳಿಕೆ ಅಂತ್ಯಗೊಂಡು ಜರ್ಮನಿಯ ಏಕೀಕರಣವಾಗುತ್ತದೆ. ಇದಾದನಂತರದ ಬೆಳೆವಣಿಗೆಯಲ್ಲಿ ಡ್ರೇಮನ್‌ಗೆ ತಾನು ಸ್ಟಾಸಿಯಿಂದ ಪಾರಾಗಿದ್ದು ಹೇಗೆಂಬುದು ತಿಳಿದಿರುವುದಿಲ್ಲ. ನಂತರದ ಒಂದು ಬೆಳವಣಿಗೆಯಲ್ಲಿ ಸ್ಟಾಸಿಯ ಹಳೆ ದಾಖಲೆಗಳಿಂದ ತಾನು ಹೇಗೆ ಪಾರಾದೆ, ಅದಕ್ಕೆ ವೀಸ್ಲರ್ ಹೇಗೆ ಕಾರಣ ಎಂಬುದರ ಕುರಿತು ಆತ ’ಸೊನಾಟಾ ಫಾರ್ ಎ ಗುಡ್ ಮ್ಯಾನ್’ ಎಂಬ ಕೃತಿಯೊಂದನ್ನು ರಚಿಸಿ ಅದನ್ನು ವೀಸ್ಲರ್ ಸ್ಟಾಸಿಯಲ್ಲಿದ್ದಾಗಿನ ಗುಪ್ತನಾಮಕ್ಕೆ ಅರ್ಪಿಸಿರುತ್ತಾನೆ. ಆ ಪುಸ್ತಕವನ್ನು ವೀಸ್ಲರ್ ತನಗಾಗಿ ಕೊಂಡೂಕೊಳ್ಳುವುದು ಚಿತ್ರದ ಕಡೆಯ ದೃಶ್ಯ.

ಪ್ರಭುತ್ವಗಳು ಎಡವೇ ಆಗಲಿ, ಬಲವೇ ಆಗಲಿ, ಎರಡರ ನಡುವಿನದಾಗಲಿ ಸಾಂಸ್ಕೃತಿಕ ಲೋಕದ ಮೇಲೆ ಯಾವುದೇ ರೀತಿಯಲ್ಲಾದರೂ ಸವಾರಿ ಮಾಡಲು ಮುಂದಾದರೆ, ಸಾಂಸ್ಕೃತಿಕ ಲೋಕ ತನ್ನ ಪ್ರತಿಭಟನೆಯನ್ನ ದಾಖಲಿಸಿಯೇ ತೀರುತ್ತದೆ. ಅದಕ್ಕೆ ಎಲ್ಲಾ ಕಾಲದಲ್ಲಿಯೂ, ಪ್ರಭುತ್ವದ ಭಾಗವಾಗಿದ್ದರೂ ಸಹ ವೀಸ್ಲರ್‌ನಂತಹ ಮಾನವೀಯ ಜೀವಗಳು ಒತ್ತಾಸೆ ನೀಡಿಯೇ ತೀರುತ್ತವೆ. ಮಾನವ ಎಂದೆಂದಿಗೂ ಅದಮ್ಯ ಆಶಾವಾದಿ.

ಈ ಸಿನೆಮಾ ಇಂದೂ ಕಾಡುವದೇಕೆ ಎಂದರೆ ಸದ್ಯದ ಭಾರತದಲ್ಲಿ ನಡೆಯುತ್ತಿರುವ ಕಳವಳಕಾರಿ ಸಂಗತಿಗಳು. ಕಳೆದ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಆಗಿರುವ ತಂತ್ರಜ್ಞಾನದ ಅದರಲ್ಲೂ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ಖಾಸಗಿತನವನ್ನು ಕಾಲಕಸ ಮಾಡಿಕೊಂಡಿದೆ. ಖಾಸಗಿತನ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಘೋಷಿಸಿದ್ದರೂ ಅಂಗೈ ಅಗಲದ ಮೊಬೈಲ್ ಎಂಬ ಸಾಧನ ಎಲ್ಲರ ಖಾಸಗಿತನಕ್ಕೆ ಅಪಾಯ ತಂದೊಡ್ಡಿದೆ. ಹಿಂದೊಂದು ಕಾಲಕ್ಕೆ ಡಿಜಿಟಲ್ ಡಿವೈಡ್ ಅತಿಹೆಚ್ಚು ಚರ್ಚಿಸಲ್ಪಟ್ಟ ಸಂಗತಿ. ಈ ಕಂದರದ ಜತೆಜತೆಗೇ ನಮ್ಮ ಮೇಲೆ ಕಣ್ಣಿಡಲು, ಕದ್ದು ಕೇಳಲು ಸಾಧ್ಯವಾಗಬಹುದಾದ ಎಲ್ಲ ಸಾಧ್ಯತೆಗಳಿರುವ ಮೊಬೈಲನ್ನು ನಾವು ಅಪ್ಪಿ ತಪ್ಪಿಯೂ ಒಂದುಕ್ಷಣ ದೂರಮಾಡಲಾಗುತ್ತಿಲ್ಲ.

ಪೆಗಸಸ್ ಎಂಬ ಕುತಂತ್ರಾಂಶವನ್ನು (ಸ್ಪೈವೇರ್) ಬಳಸಿ ಪ್ರಭುತ್ವ ತನ್ನ ರಾಜಕೀಯ ವಿರೋಧಿಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದು ಹಲವರು ದೂರಿದ್ದಾರೆ. ತಂತ್ರಜ್ಞಾನವೆಂಬ ಹುಲಿಸವಾರಿಯು
ಪ್ರಜೆಗಳ ಖಾಸಗಿತನವನ್ನು ಬಯಲಿಗಿಟ್ಟು ಬಿಕರಿಯ ವಸ್ತುವಾಗಿಸಿದೆ. ವಾಟ್ಸಪ್ಪು, ಫೇಸ್ಬುಕ್ ಮತ್ತಿತರೆ ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮ ಧಾಟಿ ಧೋರಣೆಗೆ ತಕ್ಕಂತೆ ಜಾಹಿರಾತುಗಳು ಮತ್ತು ಪೋಸ್ಟುಗಳು ಕಾಣಿಸಿಕೊಳ್ಳೋದೇ ನಾವು ಯಾರ ಅಡಿಯಾಳುಗಳು ಎಂಬುದನ್ನು ಶ್ರುತಪಡಿಸುತ್ತವೆ. ಕಾಲ ಸರಿದಂತೆ ಮಂದಿಯಾಳ್ವಿಕೆಯಲ್ಲಿ ಪ್ರಭುತ್ವಗಳು ಹೆಚ್ಚು ಸಂವೇದನಾಶೀಲವಾಗಿಯೂ, ಪ್ರಜೆಗಳು ಸ್ವತಂತ್ರರೂ ಆಗಿರಬೇಕು ಎಂದು ಬಯಸುವುದು ಸ್ವಾಭಾವಿಕ; ಆದರೆ ವಾಸ್ತವದಲ್ಲಿ ಪ್ರಜೆಗಳು ಒಂದೊ ವ್ಯಾಪಾರದ ಆಮಿಷಕ್ಕೆ ಬಲಿಬೀಳುವ ಮಿಕಗಳೋ ಇಲ್ಲವೇ ಪ್ರಭುತ್ವಗಳ ಕಣ್ಗಾವಲಿಗೆ ಈಡಾಗುವ ಇಸಮುಗಳೋ ಆಗಿದ್ದೇವೆ. ಪ್ರಭುತ್ವಗಳು ನಮ್ಮದೇ ತೆರಿಗೆ ಹಣದಲ್ಲಿ ನಮ್ಮನ್ನೇ (ಅದರಲ್ಲೂ ಸಮಾಜ ಸೇವಕರು, ಲೇಖಕರು, ಪತ್ರಕರ್ತರು, ಸಾಂಸ್ಕೃತಿಕ
ಕ್ಷೇತ್ರದಲ್ಲಿ ಕ್ರಿಯಾಶೀಲರಾದವರು) ಕಣ್ಗಾವಲಿಗೆ ಒಳಪಡಿಸುವ ಪ್ರವೃತ್ತಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ತಿಲಾಂಜಲಿ ಇಡಲು ಹೊರಟಂತೆ. ಲೈವ್ಸ್ ಆಫ್ ಅದರ್ಸ್ ಸಿನೆಮಾ ಈ ರೀತಿಯ ಕಣ್ಗಾವಲಿನ ಹಿಂದಿನ ಕ್ರೌರ್ಯವನ್ನು ತಣ್ಣಗೆ ಬಿಚ್ಚಿಡುತ್ತದೆ. ಸಿನೆಮಾದಲ್ಲಿ ಕನಿಷ್ಟ ಕಣ್ಗಾವಲಿನ ಪಡೆಯಲ್ಲಿ ಮಾನವೀಯತೆ ಜಿನುಗುವ ’ಮನುಷ್ಯ’ನಿದ್ದಾನೆ. ಅಂಥ ಎಷ್ಟು ಮನುಷ್ಯರು ಈಗ ಪ್ರಭುತ್ವ ಪ್ರಾಯೋಜಿತ ಕಣ್ಗಾವಲು ಪಡೆಯಲ್ಲಿ ಇರುವರೋ ಕಾಣೆ! ಅನುಮಾನವೆ.

ರೋಹಿತ್ ಅಗಸರಹಳ್ಳಿ

ರೋಹಿತ್ ಅಗಸರಹಳ್ಳಿ
ಸಿನೆಮಾ ಪ್ರೇಮಿ, ಅಗಸರಹಳ್ಳಿ, ಮಂಡ್ಯ ಜಿಲ್ಲೆ.


ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮ ಈ ಲೆಖನವು ಪ್ರಸ್ತುತ ಕೆಂದ್ರ ಸರ್ಕಾರದ ಪೆಗಾಸಸ ನ ಹಗರಣಕ ಹಿಡಿದ ಕನ್ನಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...