ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೆಸರನ್ನು ಉಲ್ಲೇಖಿಸುವಂತೆ ಆರೋಪಿಯ ಮೇಲೆ ಒತ್ತಡ ಹೇರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿ ಸ್ವಪ್ನಾ ಸುರೇಶ್ ಗೆ “ಸಿಎಂ ಪಿಣರಾಯಿ ವಿಜಯನ್” ಹೆಸರನ್ನು ಉಲ್ಲೇಖಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿದ್ದು, ಈ ನಡುವೆ ಚಿನ್ನ ಕಳ್ಳಸಾಗಣೆ ಪ್ರಕರಣವು ಪ್ರತಿ ಪಕ್ಷಗಳಿಗೆ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿ ಸ್ವಪ್ನಾ ಸುರೇಶ್ ಕೇರಳ ಸಿಎಂ ಪಿಣರಾಯಿ ವಿಜಯನ್ ರನ್ನು ಹೆಸರಿಸಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ತೆರಿಗೆ ಇಲಾಖೆ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ಆರೋಪಕ್ಕೆ ಪ್ರತಿಯಾಗಿ ಪಿಣರಾಯಿ ವಿಜಯನ್, ಕೇಂದ್ರ ತನಿಖಾ ಸಂಸ್ಥೆಗಳು ‘ಸ್ವಯಂಪ್ರೇರಣೆಯಿಂದ’ ಚುನಾವಣಾ ಪ್ರಚಾರವನ್ನು ಕೈಗೆತ್ತಿಕೊಂಡಿವೆ ಎಂದು ವ್ಯಂಗ್ಯವಾಡಿದ್ದರು.
ಸ್ವಪ್ನಾ ಸುರೇಶ್ ಅವರ ರಕ್ಷಣಾತ್ಮಕ ವಿವರಗಳಿಗೆ ನಿಯೋಜಿಸಲಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೆಲವು ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ವಿಚಾರಣೆಯ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಹೆಸರಿಸಲು ಸ್ವಪ್ನಾ ಸುರೇಶ್ ಅವರನ್ನು ‘ಇಡಿ’ಯು ಬಲವಂತವಾಗಿ ಒತ್ತಾಯಿಸಿತ್ತು ಎಂದು ಕೈಬರಹದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಗಂಗೂಲಿ ಕ್ಯಾಚ್ ಮಾಡಲು ಹೋಗಿ ‘ಕೋಬ್ರಾ’ ಹಿಡಿದ ಬಿಜೆಪಿ
ಅಧಿಕಾರಿಗಳ ಪ್ರಕಾರ, ಆಡಿಯೋ ಕ್ಲಿಪ್‌ನ ಮೂಲದ ಕುರಿತಾದ ತನಿಖೆಗೆ ಸಂಬಂಧಿಸಿದಂತೆ ಪೊಲೀಸ್ ಬೆಂಗಾವಲು ಅಧಿಕಾರಿಯ ಹೇಳಿಕೆಯನ್ನು ದಾಖಲಿಸಲಾಗಿದೆ. ಇದರಲ್ಲಿ ಸ್ವಪ್ನಾ ಸುರೇಶ್ ಅವರು ಪಿಣರಾಯಿ ವಿಜಯನ್ ಅವರ ಹೆಸರನ್ನು ಉಲ್ಲೇಖಿಸಲು ಒತ್ತಾಯಿಸುವ ಕುರಿತಾದಂತೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಆದರೆ, ಉದ್ದೇಶಿತ ಆಡಿಯೊ ಕ್ಲಿಪ್‌ನಲ್ಲಿ ಸ್ವಪ್ನಾ ಸುರೇಶ್ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ಆಕೆಗೆ ತಿಳಿದಿಲ್ಲ ಎಂದು ಪೊಲೀಸ್ ಬೆಂಗಾವಲು ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.
ಈ ಹಿಂದೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶದ ಮೇರೆಗೆ ಸ್ವಪ್ನಾ ಸುರೇಶ್ ಅವರ ಚಿನ್ನ ಕಳ್ಳಸಾಗಣೆ ನಡೆದಿದೆ ಎಂಬ ಆರೋಪಕ್ಕೆ, ಪ್ರಕರಣವನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(UAPA) ಅಡಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯು ಈ ಹೇಳಿಕೆಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿತ್ತು.
2020 ರ ಜುಲೈ 5 ರಂದು ಕೊಚ್ಚಿಯ ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್, ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಟರ್ಮಿನಲ್‌ನಲ್ಲಿ ಯುಎಇಯಿಂದ ಬಂದ ರಾಜತಾಂತ್ರಿಕ ಸಾಮಾನು ಸರಂಜಾಮುಗಳಿಂದ 14.82 ಕೋಟಿ ರೂ.ಗಳ 30 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಯಿತು.
ಈ ಪ್ರಕರಣದ ತನಿಖೆಗಾಗಿ ಆರಂಭದಲ್ಲಿ ಸರಿತ್ ಪಿಎಸ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಬಂಧಿಸಲಾಗಿತ್ತು. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಎನ್‌ಐಎಯು 21 ಜನರನ್ನು ಬಂಧಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಎನ್‌ಐಎ ಬಂಧಿಸಿದ್ದ ಸ್ವಪ್ನಾ ಅವರನ್ನು ದೀರ್ಘವಾಗಿ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ: ಮಹಿಳಾ ದಿನಾಚರಣೆಯ ದಿನವೇ ಪೊದೆಯಲ್ಲಿ ಪತ್ತೆಯಾದ ನವಜಾತ ಹೆಣ್ಣುಮಗು!