ಭಾರತದ ಡಿಜಿಟಲ್ ಉತ್ತೇಜನಕ್ಕೆ ಗೂಗಲ್‌ನಿಂದ 75,000 ಕೋಟಿ ರೂ. ನಿಧಿ

ಮುಂದಿನ ಐದು ರಿಂದ ಏಳು ವರ್ಷಗಳಲ್ಲಿ ಭಾರತದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಡಿಜಿಟಲ್ ಆವಿಷ್ಕಾರಕ್ಕೆ ಉತ್ತೇಜನ ನೀಡಲು ಕಂಪನಿಯು ಸುಮಾರು 10 ಬಿಲಿಯನ್ ಡಾಲರ್‌ (ಅಂದಾಜು 75 ಸಾವಿರ ಕೋಟಿ) ಹೂಡಿಕೆ ಮಾಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಪ್ರಕಟಿಸಿದ್ದಾರೆ.

ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ನಡೆಸಿದ ಗೂಗಲ್ ಫಾರ್ ಇಂಡಿಯಾದ ಆರನೇ ಆವೃತ್ತಿಯಲ್ಲಿ ಪಿಚೈ ಮಾತನಾಡುತ್ತಿದ್ದರು.

ಪಿಚೈ ಈ ಘೋಷಣೆಗಳನ್ನು ಮಾಡುವ ಮೊದಲು, ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ಗೂಗಲ್‌ನ ವಿಚಾರಗಳನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೀಡಿಯೊ-ಕಾನ್ಫರೆನ್ಸ್ ನಡೆಸಿದರು.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, “ಈ ಬೆಳಿಗ್ಗೆ, ಸುಂದರ್‌ ಪಿಚೈ ಅವರೊಂದಿಗೆ ಅತ್ಯಂತ ಫಲಪ್ರದವಾದ ಸಂವಾದವನ್ನು ನಡೆಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

“ನಾವು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಮಾತನಾಡಿದ್ದೇವೆ, ವಿಶೇಷವಾಗಿ ಭಾರತದ ರೈತರು, ಯುವಕರು ಮತ್ತು ಉದ್ಯಮಿಗಳ ಜೀವನವನ್ನು ಪರಿವರ್ತಿಸಲು ತಂತ್ರಜ್ಞಾನದ ಶಕ್ತಿಯನ್ನು ಹೆಚ್ಚಿಸುತ್ತೇವೆ.” ಎಂದು ಅವರು ಹೇಳಿದ್ದಾರೆ.

“ಜಾಗತಿಕ ಸಾಂಕ್ರಾಮಿಕವು ಕ್ರೀಡೆಯಂತಹ ಕ್ಷೇತ್ರಗಳಿಗೆ ತಂದಿರುವ ಸವಾಲುಗಳನ್ನು ನಾವು ಚರ್ಚಿಸಿದ್ದೇವೆ. ಡೇಟಾ ಸುರಕ್ಷತೆ ಮತ್ತು ಸೈಬರ್ ಸುರಕ್ಷತೆಯ ಮಹತ್ವದ ಬಗ್ಗೆಯೂ ನಾವು ಮಾತನಾಡಿದ್ದೇವೆ” ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

“ಹಲವಾರು ಕ್ಷೇತ್ರಗಳಲ್ಲಿ ಗೂಗಲ್‌ನ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನಗೆ ಸಂತೋಷವಾಯಿತು” ಎಂದು ಪ್ರಧಾನಿ ಹೇಳಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ “ಭಾರತದ ಡಿಜಿಟಲೀಕರಣದ ಈ ಹೂಡಿಕೆ ಮುಖ್ಯವಾಗಿ ನಾಲ್ಕು ಕ್ಷೇತ್ರಗಳತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಮೊದಲನೆಯದಾಗಿ ಪ್ರತಿಯೊಬ್ಬ ಭಾರತೀಯನಿಗೆ ಅವರದ್ದೇ ಆದ ಭಾಷೆಯಲ್ಲಿ, ಅದು ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ಯಾವುದೋ ಭಾಷೆಯಾಗಿರಬಹುದು, ಆ ಭಾಷೆಯಲ್ಲಿ ಮಾಹಿತಿ ಒದಗಿಸುವುದು, ಎರಡನೆಯದಾಗಿ ಭಾರತದ ವಿಶಿಷ್ಟ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಉತ್ಪನ್ನಗಳು ಹಾಗೂ ಸೇವೆಗಳನ್ನು ಅಭಿವೃದ್ಧಿಪಡಿಸುವುದು, ಮೂರನೆಯದಾಗಿ ಉದ್ಯಮಗಳು ಡಿಜಿಟಲೀಕರಣಕ್ಕೆ ಪರಿವರ್ತನೆಯಾಗುವಾಗ ಅವುಗಳ ಸಬಲೀಕರಣಕ್ಕೆ ಆದ್ಯತೆ ಹಾಗೂ ನಾಲ್ಕನೆಯದಾಗಿ  ಸಾಮಾಜಿಕ  ಹಿತದೃಷ್ಟಿಯಿಂದ ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಮತೋಲನ ಸಾಧಿಸುವುದು” ಎಂದು ಹೇಳಿದ್ದಾರೆ.

“ಇದು ಭಾರತದ ಭವಿಷ್ಯ ಮತ್ತು ಅದರ ಡಿಜಿಟಲ್ ಆರ್ಥಿಕತೆಯ ಬಗ್ಗೆ ನಮ್ಮ ವಿಶ್ವಾಸದ ಪ್ರತಿಬಿಂಬವಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ತಮ್ಮದೇ ಭಾಷೆಯಲ್ಲಿ ಕೈಗೆಟುಕುವ ಇಂಟರ್ನೆಟ್ ಪ್ರವೇಶವನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ” ಎಂದು ಪಿಚೈ ಹೇಳಿದ್ದಾರೆ.

“ನಾವು ಪ್ರಧಾನಿ ಮೋದಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಮತ್ತು ಮುಂದಿನ ತರಂಗ ನಾವೀನ್ಯತೆಗೆ ಭಾರತ ಮುನ್ನಡೆಸಲಿದೆ ಎಂದು ಭಾವಿಸುತ್ತೇವೆ” ಎಂದು ಪಿಚೈ ಹೇಳಿದ್ದಾರೆ.


ಓದಿ: ವೀಸಾಗಳ ಸ್ಥಗಿತ; ಟ್ರಂಪ್ ನಿರಾಶೆಯನ್ನುಂಟು ಮಾಡಿದ್ದಾರೆಂದ ಸುಂದರ್‌ ಪಿಚೈ


 

LEAVE A REPLY

Please enter your comment!
Please enter your name here