Homeಮುಖಪುಟಜೋಶಿಮಠದಲ್ಲಿನ ಭೂಕುಸಿತದ ಬಗ್ಗೆ ಸರ್ಕಾರಿ ಸಂಸ್ಥೆಗಳು ಅಂಕಿ-ಅಂಶ ಹಂಚಿಕೊಳ್ಳಬಾರದು: ವಿಪತ್ತು ಪ್ರಾಧಿಕಾರ ಸೂಚನೆ

ಜೋಶಿಮಠದಲ್ಲಿನ ಭೂಕುಸಿತದ ಬಗ್ಗೆ ಸರ್ಕಾರಿ ಸಂಸ್ಥೆಗಳು ಅಂಕಿ-ಅಂಶ ಹಂಚಿಕೊಳ್ಳಬಾರದು: ವಿಪತ್ತು ಪ್ರಾಧಿಕಾರ ಸೂಚನೆ

- Advertisement -
- Advertisement -

ಉತ್ತರಾಖಂಡ್‌ನ ಜೋಶಿಮಠ ಪಟ್ಟಣದಲ್ಲಿ ಉಂಟಾಗುತ್ತಿರುವ ಭೂ ಕುಸಿತದ ಬಗ್ಗೆ ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಅಥವಾ ಆನ್‌ಲೈನ್‌ ವೇದಿಕೆಗಳಲ್ಲಿ ಅಂಕಿ-ಅಂಶಗಳನ್ನು ಹಂಚಿಕೊಳ್ಳಬಾರದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಇಲ್ಲಿನ ನಿವಾಸಿಗಳಲ್ಲಿ ಭೀತಿ ಉಂಟಾಗದಿರಲೆಂದು ಈ ಕ್ರಮ ಜರುಗಿಸಲಾಗಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಡಿಸೆಂಬರ್ 27 ಮತ್ತು ಜನವರಿ 8ರ ನಡುವೆ ಜೋಶಿಮಠ ಪಟ್ಟಣವು 5.4 ಸೆಂಟಿಮೀಟರ್‌ಗಳಷ್ಟು ಕುಸಿದಿದೆ ಎಂದು ಇಸ್ರೋ ಬಿಡುಗಡೆ ಮಾಡಿದ ಚಿತ್ರಗಳು ತೋರಿಸಿದ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.

ವಿವಿಧ ಸರ್ಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಈ ವಿಷಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಬಿಡುಗಡೆ ಮಾಡುತ್ತಿವೆ. ಪರಿಸ್ಥಿತಿಯ ಕುರಿತು ತಮ್ಮದೇ ಆದ ವ್ಯಾಖ್ಯಾನಗಳ ಜೊತೆಯಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಲಾಗುತ್ತಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಸರ್ಕಾರಿ ಇಲಾಖೆಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಇದು ಸಂತ್ರಸ್ತ ನಿವಾಸಿಗಳಲ್ಲಿ ಮಾತ್ರವಲ್ಲದೆ ದೇಶದ ನಾಗರಿಕರಲ್ಲಿಯೂ ಗೊಂದಲವನ್ನು ಸೃಷ್ಟಿಸುತ್ತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಗುರುವಾರ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಜೋಶಿಮಠದ ಬೆಳವಣಿಗೆಗಳ ಕುರಿತು ಬೆಳಕು ಚೆಲ್ಲಿದ್ದವು. ಡಿಸೆಂಬರ್ 27 ರಿಂದ ಜನವರಿ 8ರವರೆಗಿನ 12 ದಿನಗಳಲ್ಲಿ ದಾಖಲಾಗಿರುವ ಭೂ ಕುಸಿತವು, ಏಪ್ರಿಲ್ ಮತ್ತು ನವೆಂಬರ್ ನಡುವೆ ಘಟಿಸಿದ ಒಂಬತ್ತು ಸೆಂಟಿಮೀಟರ್‌ಗಳ ಕುಸಿತಕ್ಕಿಂತ ಹೆಚ್ಚು ವೇಗವಾಗಿದೆ ಎಂದು ವಿವರಿಸಿತ್ತು.

ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವರದಿಯು ಸೆಂಟ್ರಲ್‌ ಜೋಶಿಮಠದಲ್ಲಿರುವ ಭಾರತೀಯ ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಾಲಯ ಇರುವ ವಲಯವನ್ನು ಗುರುತಿಸಿತ್ತು.

ಗುರುವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿ, “ದುರಂತದ ಬಗ್ಗೆ ವದಂತಿಗಳು ಹಬ್ಬುತ್ತಿವೆ. ಜೋಶಿಮಠ ಪಟ್ಟಣದ ಬಗ್ಗೆ ತಪ್ಪು ಗ್ರಹಿಕೆ ಮೂಡಿಸಲಾಗುತ್ತಿದೆ. ಇದು ಇಲ್ಲಿನ ನಿವಾಸಿಗಳು ಮತ್ತು ಜೋಶಿಮಠದ ಆರ್ಥಿಕತೆಗೆ ಹಾನಿಯನ್ನು ಉಂಟು ಮಾಡುತ್ತಿದೆ” ಎಂದಿದ್ದಾರೆ.

“ಚಾರ್‌ ಧಾಮ್‌ ಯಾತ್ರೆಯ ಮೂಲಕ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿದ್ದೇವೆ. ಜೋಶಿಮಠವು ಸಂಪೂರ್ಣ ಹಾನಿಗೊಳಗಾಗಿದೆ, ಅಸುರಕ್ಷಿತವಾಗಿದೆ ಎಂದು ಆತಂಕ ಸೃಷ್ಟಿಸಬೇಡಿ” ಎಂದು ಮನವಿ ಮಾಡಿದ್ದಾರೆ.

ಜೋಶಿಮಠ ಮುಳುಗುತ್ತಿರುವುದೇಕೆ?

ಪ್ರಕೃತಿ ವಿಕೋಪಗಳಿಂದ ನಲುಗಿರುವ ಉತ್ತರಖಾಂಡ ರಾಜ್ಯ ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ಇಲ್ಲಿನ ಜೋಶಿಮಠ ಪಟ್ಟಣದಲ್ಲಿನ ಮನೆಗಳ ಗೋಡೆಗಳಲ್ಲಿ, ಹೊಲೆಗಳಲ್ಲಿ, ರಸ್ತೆಗಳಲ್ಲಿ ಬಿರುಕುಗಳು ದೊಡ್ಡದಾಗಿ ಕಾಣಿಸಲಾರಂಭಿಸಿವೆ. ಬೆಟ್ಟದ ಪಟ್ಟಣವೆಂದೇ ಖ್ಯಾತವಾದ ಜೋಶಿಮಠದ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ. ಅವರ ಊರು ಮುಳುಗುತ್ತಿದೆ.

ಈ ಪ್ರದೇಶವನ್ನು ಭೂಕುಸಿತ ಮತ್ತು ಭೂ ಕುಸಿತ ಪೀಡಿತ ಪ್ರದೇಶ ಎಂದು ಜನವರಿ 8 ರಂದು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಜನವರಿ 9ರ ಹೊತ್ತಿಗೆ, 678 ಕಟ್ಟಡಗಳು (ಮನೆಗಳು ಸೇರಿದಂತೆ) ಬಿರುಕುಬಿಟ್ಟಿವೆ. ಅಧಿಕಾರಿಗಳು 80 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿದ್ದಾರೆ. ಸಮೀಪದ ಪಟ್ಟಣಗಳಾದ ರೈನಿ ಮತ್ತು ಕರ್ಣಪ್ರಯಾಗದಲ್ಲಿನ ಮನೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ.

ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆ ಭಾಗವಾಗಿ ಕೈಗೊಂಡ ಕಾಮಗಾರಿಯು ತಮ್ಮ ಪಟ್ಟಣ ಮುಳುಗಲು ಒಂದು ಕಾರಣ ಎಂದು ಜೋಶಿಮಠದ ನಿವಾಸಿಗಳು ಆರೋಪಿಸುತ್ತಾರೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೈಗೊಂಡ ಚಾರ್ ಧಾಮ್ ಯೋಜನೆ (900  ಕಿಮೀ ಉದ್ದದ ರಸ್ತೆ ನಿರ್ಮಾಣ) ಪ್ರಾಕೃತಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಬೊಟ್ಟು ಮಾಡುತ್ತಾರೆ.

ಈ ಭೂಭಾಗದ ಕುರಿತು 40 ವರ್ಷಗಳ ಹಿಂದೆಯೇ ಮಹತ್ವದ ವರದಿಗಳು ಬಂದಿವೆ. ಅದರ ಹೊರತಾಗಿಯೂ ಸರ್ಕಾರಗಳು ಇಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಪ್ರದೇಶದಲ್ಲಿ ಭಾರೀ ನಿರ್ಮಾಣ ಕಾಮಗಾರಿಗಳನ್ನು ನಿರ್ಬಂಧಿಸಬೇಕು ಎಂದು ಎಚ್ಚರಿಸಿವೆ. ಹವಾಮಾನ ಬದಲಾವಣೆ ಉಲ್ಬಣದ ಜೊತೆಗೆ, ಸದ್ಯದ ಪರಿಸ್ಥಿತಿಯು ಈ ಪ್ರದೇಶಕ್ಕೆ ಒಳ್ಳೆಯದಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜೋಶಿಮಠ ಭೂಕುಸಿತ ಪೀಡಿತ ಪ್ರದೇಶವಾಗಿದೆ. ಜೋಶಿಮಠ-ಬದರಿನಾಥ್ ರಸ್ತೆ ಕಾರಿಡಾರ್‌ನಲ್ಲಿ ಭೂಕುಸಿತದ ಅಪಾಯದ ಪ್ರದೇಶಗಳನ್ನು ಪರೀಕ್ಷೆ ಮಾಡಿದ 2007ರ ಅಧ್ಯಯನವು ಜೋಶಿಮಠ ಪಟ್ಟಣವು ಪ್ರದೇಶದ ಅತ್ಯಂತ ಅಪಾಯಕಾರಿ ಭೂಕುಸಿತ ಪೀಡಿತ ಸ್ಥಳಗಳಲ್ಲಿ ಒಂದಾಗಿದೆ ಎಂದು ಎಚ್ಚರಿಸಿತ್ತು. ವಾಸ್ತವವಾಗಿ 70ರ ದಶಕದಲ್ಲಿಯೇ ಜೋಶಿಮಠದಲ್ಲಿ ಆರಂಭವಾಗಿದ್ದ ಭೂಕುಸಿತಗಳು ಅಲ್ಲಿನ ನಿವಾಸಿಗಳನ್ನು ಚಿಂತೆಗೀಡುಮಾಡಿದ್ದವು. 1976ರಲ್ಲಿ ಅಂದಿನ ಸರ್ಕಾರವು ಎಂ.ಸಿ. ಮಿಶ್ರಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಜರುಗಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಪರ್ವತ ತಪ್ಪಲಿನಲ್ಲಿ ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ನಡೆಸಬಾರದು ಎಂದಿತ್ತು. ಜೊತೆಗೆ ಇಲ್ಲಿನ ಪ್ರಾಕೃತಿಕ ಗುಣದ ಬಗ್ಗೆ ಬೆಳಕು ಚೆಲ್ಲಿತ್ತು.

ಇದನ್ನೂ ಓದಿರಿ: ಬೆಂಗಳೂರು ಮೆಟ್ರೋ ಪಿಲ್ಲರ್‌ ದುರಂತ: ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್

ಜೋಶಿಮಠದ ಪಟ್ಟಣವು ಭೂಕುಸಿತಕ್ಕೆ ಹೆಸರುವಾಸಿ. ಇಲ್ಲಿನ ಪ್ರದೇಶ ಮರಳು ಮತ್ತು ಕಲ್ಲಿನ ಮಿಶ್ರಣವಾಗಿದೆ. ಮಳೆ ಅಥವಾ ಹಿಮ ಕರಗುವಿಕೆಯಿಂದ ಉಂಟಾಗುವ ಮೇಲ್ಮೈ ನೀರು ಮಣ್ಣನ್ನು ಸಡಿಲಗೊಳಿಸಬಹುದು.  ಭೂಮಿಯನ್ನು ಅಸ್ಥಿರಗೊಳಿಸಬಹುದು, ಇದು ಭೂಕುಸಿತಗಳಿಗೆ ಕಾರಣವಾಗುತ್ತದೆ ಎಂ.ಸಿ.ಮಿಶ್ರಾ ವರದಿ ಗಮನ ಸೆಳೆದಿದೆ.

ಅಂತರ್ಜಲವನ್ನು ಹೊರತೆಗೆಯುವುದು ಸಹ ಕುಸಿತಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಬ್ಲಾಸ್ಟ್‌ ಮಾಡುವುದು, ಸುರಂಗಗಳನ್ನು ನಿರ್ಮಿಸುವುದು (ನಿವಾಸಿಗಳ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆ) ಕೂಡ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...