ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ಜಿಲ್ಲಾ ಶಾಖೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಜನಸಂಖ್ಯಾ ದಿನಾಚರಣೆ’ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಶೈಕ್ಷಣಿಕ ವೇದಿಕೆಯಲ್ಲಿ ವಿದ್ಯಾರ್ಥಿನಿಯರ ಮುಂದೆ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿ, ಎಡಪಂಥೀಯ ವಿಚಾರಧಾರೆಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ವೇದಿಕೆಯಲ್ಲಿ ಸ್ವಾಮೀಜಿ ಆಡಿದ ಮಾತುಗಳೇನು?:
ವಿಶ್ವ ಜನಸಂಖ್ಯಾ ದಿನಾಚರಣೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, “ಲೆಪ್ಟಿಸ್ಟ್‌ಗಳು (ಎಡಪಂಥೀಯರು) ಮೋಸ್ಟ್ ಡೇಂಜರಸ್” ಎಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಆಪ್ತ ವಲಯದಲ್ಲೇ ಏಳೆಂಟು ಮಂದಿ ಎಡಪಂಥೀಯರಿದ್ದಾರೆ ಹಾಗೂ ಅವರನ್ನು ತೀರ ಹತ್ತಿರದಿಂದ ನೋಡಿದ್ದೇನೆ ಎಂದಿರುವ ಸ್ವಾಮೀಜಿ, “ಎಲ್ಲರೂ ಕಳ್ಳರೇ, ಬಕೆಟ್ ಹಿಡಿಯುತ್ತಾರೆ, ಸ್ವಾರ್ಥಿಗಳು” ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಡಪಂಥೀಯರು ದೇಶದಲ್ಲಿ ಬೆಂಕಿ ಹಚ್ಚುವ, ದೇಶಕ್ಕೆ ಅವಮಾನ ಮಾಡುವ ಹಾಗೂ ದೇಶವನ್ನು ಅಧೋಗತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂಬ ಪದ ಬಳಕೆ ಮಾಡಿದ್ದಾರೆ.

ಯಾರು ಈ ನಿಶ್ಚಲಾನಂದನಾಥ ಸ್ವಾಮೀಜಿ?:
ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿರುವ ನಿಶ್ಚಲಾನಂದನಾಥ ಸ್ವಾಮೀಜಿಯ ಪೂರ್ವಾಶ್ರಮದ ಹೆಸರು ಡಾ. ಎಚ್.ಎಲ್. ನಾಗರಾಜ್. ಈತ ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಹಾಸನ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ (AC) ಹಾಗೂ ಅಪರ ಜಿಲ್ಲಾಧಿಕಾರಿಯಾಗಿ (ADC) ಸೇವೆ ಸಲ್ಲಿಸಿದ್ದರು.
ನಾಗಮಂಗಲ ತಾಲೂಕಿನಲ್ಲಿ ತಹಸೀಲ್ದಾರ್ ಆಗಿದ್ದಾಗ 2011ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಆದಿಚುಂಚನಗಿರಿ ಮಠ ಸೇರಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.ನಂತರ 2024ರ ಡಿಸೆಂಬರ್‌ನಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿ ಪಟ್ಟಾಧಿಕಾರ ಸ್ವೀಕರಿಸಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯಾದರು.
ಸಿಪಿಐಎಂ ತೀವ್ರ ಖಂಡನೆ:
ನಿಶ್ಚಲಾನಂದನಾಥ ಸ್ವಾಮೀಜಿಯ ಈ ಹೇಳಿಕೆಯನ್ನು ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಖಂಡಿಸಿದ್ದು, ಎಡಪಂಥ ಎಂದರೆ ಅದರಲ್ಲಿ ಪ್ರಗತಿಪರರು, ಜಾತ್ಯಾತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು, ಸಂವಿಧಾನ ಪರ ಹೋರಾಟಗಾರರು, ದಲಿತ-ರೈತ-ಕಾರ್ಮಿಕ-ಮಹಿಳಾ ಮತ್ತು ಮಾನವ ಹಕ್ಕುಗಳ ಪರ ಹೋರಾಟಗಾರರು, ಪತ್ರಕರ್ತರು, ಸಮಾಜವಾದಿಗಳು ಹಾಗೂ ಕಮ್ಯೂನಿಸ್ಟರು ಸೇರುತ್ತಾರೆ. ಎಡಪಂಥೀಯರು ಎಂದರೆ ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳನ್ನು ವಿರೋಧಿಸುವ ವಿಶಾಲ ಮನೋಭಾವದವರು ಎಂದಿದ್ದಾರೆ.
ಎಡಪಂಥೀಯರು ತಮ್ಮ ಸ್ವಾರ್ಥಕ್ಕಾಗಿ ಜನರ ಹಿತವನ್ನು ಬಲಿಕೊಡುವವರಲ್ಲ. ಬದಲಿಗೆ ಕೋಟ್ಯಾಂತರ ದುಡಿಯುವ ವರ್ಗದ ನ್ಯಾಯಕ್ಕಾಗಿ, ಅಸ್ಪೃಶ್ಯತೆ, ಜಾತಿವಾದ, ಕೋಮುವಾದ ಮತ್ತು ಶೋಷಣೆಯ ವಿರುದ್ಧ ತಮ್ಮ ಬದುಕನ್ನೇ ತ್ಯಾಗ ಮಾಡಿದವರು ಎಂದಿದ್ದಾರೆ.
ಜಾತಿಗ್ರಸ್ಥ ಸಮಾಜದಲ್ಲಿ ಶೂದ್ರ ಸಮುದಾಯಕ್ಕೆ ಸೇರಿದ ಮಠದ ಸ್ವಾಮಿಯಾಗಿ, ನಿಶ್ಚಲಾನಂದ ಸ್ವಾಮೀಜಿಯವರು ಎಂದಾದರೂ ಬಡವರು, ರೈತರು ಮತ್ತು ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮಾತನಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. “ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ದುಡಿಯುವ ವರ್ಗದ ವಿರುದ್ಧ ತಂದ ನೀತಿಗಳನ್ನು ಎಂದೂ ವಿರೋಧಿಸದ ನೀವು, ಎಡಪಂಥೀಯರನ್ನು ‘ಡೇಂಜರಸ್’ ಎನ್ನುವ ಮೂಲಕ ಶೋಷಕ ಆಳುವ ವರ್ಗ, ಜಾತಿವಾದಿ ಮತ್ತು ಕೋಮುವಾದಿ ಬಲಪಂಥೀಯರ ಪರವಾಗಿ ನಿಂತಿದ್ದೀರಿ. ಈ ಮೂಲಕ ಸಂವಿಧಾನದ ಮೂಲ ಆಶಯಗಳಾದ ಸಮಾಜವಾದಿ, ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ವಿರುದ್ಧವಾಗಿದ್ದೀರಿ. ನಿಮ್ಮಂತಹ ಬಲಪಂಥೀಯರಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲಎಂದಿದ್ದಾರೆ.
ಜನರಿಗೆ ಸೇವೆ ಮಾಡುವ ಸರ್ಕಾರಿ ಅಧಿಕಾರಿಯ ಅವಕಾಶವನ್ನು ಬಿಟ್ಟು ಧರ್ಮಾಂಧತೆ ಬೋಧಿಸಲು ಹೊರಟಿರುವ ಸ್ವಾಮೀಜಿಯ ನಡೆ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ. ಕಾಲೇಜು ಮಕ್ಕಳ ಮುಂದೆ ನೀಡಿರುವ ಇಂತಹ ಆಧಾರರಹಿತ ಬೀಸು ಹೇಳಿಕೆಯನ್ನು ಸ್ವಾಮೀಜಿ ಕೂಡಲೇ ವಾಪಸ್ ಪಡೆಯಬೇಕು. ಅಲ್ಲದೆ, ಕಾರ್ಯಕ್ರಮದ ಆಯೋಜಕರು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿ ಸ್ವಾಮೀಜಿಯ ವೈಯಕ್ತಿಕ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳಬೇಕು. ಒಂದುವೇಳೆ ಸ್ವಾಮೀಜಿಯ ಹೇಳಿಕೆಯಂತೆ ಅವರ ಬಳಿ ದಾಖಲೆಗಳಿದ್ದರೆ ಅದನ್ನು ನಿರ್ಧಿಷ್ಟವಾಗಿ ಬಹಿರಂಗಪಡಿಸಬೇಕು ಎಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ವೇದಿಕೆಯಲ್ಲಿದ್ದ ವಿಚಾರವಂತರ ಮೌನ
ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಾನ್ವಿತ ಉದ್ಘಾಟಿಸಿದ್ದು, ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಹೆಮ್ಮಿಗೆ ಮೋಹನ್ ಸೇರಿದಂತೆ ಹಲವು ಶಿಕ್ಷಣ ತಜ್ಞರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಇಷ್ಟೊಂದು ವಿಚಾರವಂತರು ವೇದಿಕೆಯಲ್ಲಿದ್ದರೂ ಸ್ವಾಮೀಜಿಗಳ ವಿವಾದಾತ್ಮಕ ಹೇಳಿಕೆಗೆ ಯಾರೊಬ್ಬರೂ ಪ್ರತಿರೋಧ ಒಡ್ಡದಿರುವುದು ಕಸಿವಿಸಿಗೆ ಕಾರಣವಾಗಿದೆ.
ಜನಸಂಖ್ಯಾ ದಿನಾಚರಣೆಯಂತಹ ಶೈಕ್ಷಣಿಕ ಕಾರ್ಯಕ್ರಮಕ್ಕೂ ಎಡಪಂಥ-ಬಲಪಂಥೀಯ ವಿಚಾರಗಳಿಗೂ ಏನು ಸಂಬಂಧ? ಧಾರ್ಮಿಕ ಮುಖಂಡರು ಸಮಾಜವನ್ನು ಒಗ್ಗೂಡಿಸುವ ಸಂದೇಶ ನೀಡಬೇಕೇ ಹೊರತು ವಿಚಾರಧಾರೆಯ ಹೆಸರಿನಲ್ಲಿ ದ್ವೇಷ ಹಾಗೂ ವಿಭಜನೆ ಹುಟ್ಟುಹಾಕುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


