Homeಮುಖಪುಟವಿದ್ಯಾರ್ಥಿನಿಯ ಸಾವು ಬಳಸಿಕೊಂಡು ದ್ವೇಷ ರಾಜಕೀಯದ ಆರೋಪ: ಅಣ್ಣಾಮಲೈ ಬಂಧನಕ್ಕೆ ಆಗ್ರಹ

ವಿದ್ಯಾರ್ಥಿನಿಯ ಸಾವು ಬಳಸಿಕೊಂಡು ದ್ವೇಷ ರಾಜಕೀಯದ ಆರೋಪ: ಅಣ್ಣಾಮಲೈ ಬಂಧನಕ್ಕೆ ಆಗ್ರಹ

ತಮಿಳುನಾಡಿನಲ್ಲಿ ಇತ್ತೀಚೆಗೆ ಮೃತಪಟ್ಟ ಲಾವಣ್ಯ ಎಂಬ ವಿದ್ಯಾರ್ಥಿನಿಯ ಸಾವನ್ನು ಬಿಜೆಪಿಯು ತನ್ನ ದ್ವೇಷ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಅಣ್ಣಾ ಮಲೈ ಬಂಧನಕ್ಕೆ ಟ್ವಿಟರ್ ಟ್ರೆಂಡ್ ಮಾಡಲಾಗಿದೆ.

- Advertisement -
- Advertisement -

ತಮಿಳುನಾಡಿನ ತಂಜಾವೂರಿನ ಸೇಕ್ರೆಡ್ ಹಾರ್ಟ್ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಕಲಿಯುತ್ತಿದ್ದ ಲಾವಣ್ಯ ಎಂಬ 17 ವರ್ಷದ ವಿದ್ಯಾರ್ಥಿನಿ, ಜನವರಿ 9 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದರ ನಂತರ ಆಸ್ಪತ್ರೆ ಸೇರಿದ್ದ ಬಾಲಕಿಯು ಜನವರಿ 19 ರಂದು ಮೃತಪಟ್ಟಿದ್ದರು. ವಿದ್ಯಾರ್ಥಿನಿಯ ಈ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ‘ಮತಾಂತರದ ಒತ್ತಡದಿಂದ ಸಾವು’ ಎಂದು ಕೋಮುದ್ವೇಷ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಾಗಿ ಅಣ್ಣಾಮಲೈ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು “ಅರೆಸ್ಟ್ ಅಣ್ಣಾಮಲೈ” ಎಂಬ ಹ್ಯಾಸ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಮೃತಪಟ್ಟ ವಿದ್ಯಾರ್ಥಿನಿಯ ಹೊಸ ವಿಡಿಯೊವೊಂದು ಇದೀಗ ವೈರಲ್‌ ಆಗಿದೆ. ಅದರಲ್ಲಿ ವಿದ್ಯಾರ್ಥಿನಿಯು, “ಹಾಸ್ಟೆಲ್ ವಾರ್ಡನ್‌‌ ಸಗಾಯ್ ಮೇರಿ ಎಂಬವವರು ನನಗೆ ಹಾಸ್ಟೆಲ್‌ನ ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇದು ನನಗೆ ಓದಿನಲ್ಲಿ ಹಿಂದೆ ಬೀಳುವಂತೆ ಮಾಡುತ್ತದೆ, ಹಾಗಾಗಿ ನಾನು ಜೀವ ಕಳೆದುಕೊಳ್ಳುವ ತೀರ್ಮಾನಕ್ಕೆ ಬಂದೆ” ಎಂದು ವಿವರಿಸುತ್ತಾರೆ.

ಇದನ್ನೂ ಓದಿ:ಹರಿದ್ವಾರ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

ಲಾವಣ್ಯ ತಂಜಾವೂರಿನ ಮೈಕಲ್‌ಪಟ್ಟಿಯಲ್ಲಿರುವ ಸೇಕ್ರೆಡ್ ಹಾರ್ಟ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಎಂಬ ಬೋರ್ಡಿಂಗ್‌ ಶಾಲೆಯಲ್ಲಿ ಓದುತ್ತಿದ್ದರು. ಹೊಸದಾಗಿ ಸೋರಿಕೆಯಾದ ವೀಡಿಯೊವನ್ನು ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಹೆಚ್‌‌ಪಿಯ ಅರಿಯಲೂರು ಜಿಲ್ಲಾ ಕಾರ್ಯದರ್ಶಿ ಮುತ್ತುವೇಲ್ ಎಂಬ ವ್ಯಕ್ತಿ ರೆಕಾರ್ಡ್‌ ಮಾಡಿದ್ದಾರೆ ಎಂದು ವರದಿಯಾಗಿದೆ.

ಲಾವಣ್ಯ ಅವರ ಸಾವು ತಮಿಳುನಾಡಿನಲ್ಲಿ ತೀವ್ರ ವಿವಾದವನ್ನು ಹುಟ್ಟುಹಾಕಿದೆ. ಅವರು ಸಾವಿಗೀಡಾದ ಒಂದು ದಿನದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌‌ ಮಾಡಿದ್ದರು. ಈ ಟ್ವೀಟ್‌ನಲ್ಲಿ ಅವರು ವಿದ್ಯಾರ್ಥಿನಿಗೆ ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳವಂತೆ ಒತ್ತಡ ಹೇರಲಾಗಿತ್ತು, ಇದರಿಂದಾಗಿ ಅವರು ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

44 ಸೆಕೆಂಡಿನ ಈ ವಿಡಿಯೊದಲ್ಲಿ, “ಎರಡು ವರ್ಷಗಳ ಹಿಂದೆ ರಾಖಿಲ್‌‌ ಎಂಬವರು, ನಿಮ್ಮ ಮಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲೇ, ಅವಳನ್ನು ನಾವೇ ಓದಿಸುತ್ತೇವೆ ಎಂದು ನನ್ನ ಪೋಷಕರೊಂದಿಗೆ ಕೇಳಿದ್ದರು” ಎಂದು ವಿದ್ಯಾರ್ಥಿನಿಯು ಹೇಳುತ್ತಾರೆ. ಈ ವೇಳೆ ವಿಡಿಯೊ ರೆಕಾರ್ಡ್ ಮಾಡುವ ವ್ಯಕ್ತಿ “ಹಾಗಾಗಿ ನೀನು ಮತಾಂತರ ಆಗದ ಕಾರಣಕ್ಕೆ ನಿನಗೆ ತೊಂದರೆ ನೀಡುತ್ತಿದ್ದಾರೆಯೆ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವಿದ್ಯಾರ್ಥಿನಿಯೂ, “ಇರಬಹುದು” ಎಂದಷ್ಟೇ ಹೇಳುತ್ತಾರೆ. ಇಷ್ಟಕ್ಕೆ ಈ ವಿಡಿಯೊ ಮುಗಿಯುತ್ತದೆ. ಈ ವಿಡಿಯೊವನ್ನು ವಿದ್ಯಾರ್ಥಿನಿಯು ಮೃತಪಟ್ಟ ಮರುದಿನ ಅಣ್ಣಾಮಲೈ ಅವರು ಮೊಟ್ಟ ಮೊದಲಿಗೆ ಟ್ವೀಟ್ ಮಾಡುತ್ತಾರೆ.

ಇದನ್ನೂ ಓದಿ: ಪ್ರವಾಹಕ್ಕೆ ಗುರಿಯಾದ ಜಕಾರ್ತಾ: ನುಸಂತಾರಾ ಇಂಡೋನೇಷ್ಯಾದ ಹೊಸ ರಾಜಧಾನಿ

ಆದಾಗ್ಯೂ, ಇದೀಗ ಹೊಸದಾಗಿ ವೈರಲ್‌ ಆಗಿರುವ ವೀಡಿಯೊದಲ್ಲಿ, ಲಾವಣ್ಯ ಮತಾಂತರದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿರುವುದಿಲ್ಲ. ಆ ವೀಡಿಯೊದಲ್ಲಿ ವಿದ್ಯಾರ್ಥಿನಿ ಹೇಳಿದ್ದು ಇಷ್ಟು: “ಹಾಸ್ಟೆಲ್‌ನಲ್ಲಿರುವ ವಾರ್ಡನ್ ಸಗಾಯ್‌ ಮೇರಿ ಎಂಬವರು ಹಾಸ್ಟೆಲ್‌ನ ಲೆಕ್ಕ ಬರೆಯುವ ಕೆಲಸ ಮಾಡುವಂತೆ ಹೇಳಿದ್ದಾರೆ. ಆದರೆ ಈ ಲೆಕ್ಕಗಳನ್ನು ಮಾಡುತ್ತಾ ಕೂತರೆ ನನ್ನ ಓದಿಗೆ ಸಮಯ ಸಿಗುವುದಿಲ್ಲ. ಅದಲ್ಲದೆ, ಹಾಸ್ಟೆಲ್‌ನ ಈ ಲೆಕ್ಕಾಚಾರ ನನಗೆ ಅರ್ಥವೂ ಆಗುವುದಿಲ್ಲ. ಇದು ನನಗೆ ಓದಿನಲ್ಲಿ ಹಿಂದೆ ಬೀಳುವಂತೆ ಮಾಡಿತು. ನನಗೆ ಅಕೌಂಟ್ಸ್ ಕೆಲಸ ಸಂಪೂರ್ಣವಾಗಿ ಅರ್ಥವಾಗದಿದ್ದರೂ, ವಾರ್ಡನ್ ಕೇಳಲಿಲ್ಲ, ಅವರು ಈ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ” ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

“ಅವರು ಯಾವಾಗಲೂ ಲೆಕ್ಕಗಳನ್ನು ಮಾಡಲು ನನ್ನನ್ನು ಕೇಳುತ್ತಿದ್ದರು. ‘ಇಲ್ಲ ನಾನು ಲೇಟಾಗಿ ಬಂದೆ, ಇದು ನನಗೆ ಏನೂ ಅರ್ಥ ಆಗ್ತಿಲ್ಲ, ಆಮೇಲೆ ಮಾಡ್ತೀನಿ’ ಅಂತ ಹೇಳಿದರೂ ಕೇಳುತ್ತಿರಲಿಲ್ಲ. ‘ಪರವಾಗಿಲ್ಲ ನೀನು ಮೊದಲು ಅಕೌಂಟ್ಸ್ ಮಾಡಿ ಕೊಡು ಆಮೇಲೆ ನಿನ್ನ ಕೆಲಸ ಮಾಡು’ ಎನ್ನುತ್ತಿದ್ದರು. ಅವರು ನನ್ನನ್ನು ಲೆಕ್ಕಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ. ನಾನು ಲೆಕ್ಕ ಮಾಡಿದರೂ ಇದು ತಪ್ಪಾಗಿದೆ ಎಂದು ಹೇಳುತ್ತಲೇ, ಒಂದು ಗಂಟೆಯವರೆಗೂ, ಅಲ್ಲಿಯೆ ಕೂರಿಸುತ್ತಾರೆ. ನನಗೆ ನನ್ನ ಓದಿನ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗಲಿಲ್ಲ. ನಾನು ಕಡಿಮೆ ಅಂಕಗಳನ್ನು ಪಡೆಯುತ್ತಿದ್ದೆ. ಇದೇ ರೀತಿ ಮುಂದುವರಿದರೆ ನನಗೆ ಓದಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸಿ ನಾನು ವಿಷ ಸೇವಿಸಿದೆ” ಎಂದು ಲಾವಣ್ಯ ವಿಡಿಯೋದಲ್ಲಿ ಹೇಳಿದ್ದಾರೆ.

“ಎಲ್ಲರೂ ಎದ್ದೇಳುವ ಸಮಯಕ್ಕೆ, ನಾನು ಗೇಟ್ ತೆರೆಯಬೇಕು, ನೀರಿನ ಮೋಟಾರು ಆನ್ ಮಾಡಬೇಕು, ಎಲ್ಲರೂ ಊಟ ಮಾಡಿದ ನಂತರ, ಮೋಟಾರ್ ಸರಿಯಾಗಿ ಚಾಲನೆಯಲ್ಲಿದೆಯೇ ಎಂದು ಪರೀಕ್ಷಿಸಬೇಕು, ವಾರ್ಡನ್ ನನಗೊಬ್ಬರಿಗೆ ಎಲ್ಲಾ ಕೆಲಸವನ್ನು ನೀಡುತ್ತಾರೆ….ಕೇಳಿದರೆ, ನೀನು ಜವಾಬ್ದಾರಿಯಿಂದ ಇರುತ್ತಿ ಎಂದು ಹೇಳುತ್ತಾರೆ” ಎಂದು ಲಾವಣ್ಯ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕೊರಗಜ್ಜನಿಗೆ ಅವಮಾನ ಎಂಬ ಘಟನೆಯ ಸುತ್ತ ನಡೆದಿದ್ದೇನು? ಕೋಮು ಆಯಾಮ ಪಡೆದಿದ್ದೇಕೆ?

ಜೊತೆಗೆ ಈ ಹೊಸ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ, “ಹಾಸ್ಟೆಲ್‌ನಲ್ಲಿ ಬಿಂದಿ ಅಥವಾ ಬೊಟ್ಟು ಧರಿಸಬೇಡಿ ಎಂದು ಹೇಳಿದ್ದಾರಾ” ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಲಾವಣ್ಯ, ‘‘ಹಾಗೇನೂ ಇಲ್ಲ” ಎಂದು ಉತ್ತರಿಸುತ್ತಾರೆ.

ಲಾವಣ್ಯ ತನ್ನ ನೋವು ತೋಡಿಕೊಂಡಿರುವ ಪೂರ್ತಿ ವಿಡಿಯೋವನ್ನು ಡಿಎಂಕೆ ನಾಯಕರಾದ ಇಸೈ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಕೆಳಗೆ ವಿಡಿಯೋ ನೋಡಬಹುದು.

ಹೀಗೆ ಕೆಲಸ ಮಾಡಿಸುತ್ತಿದ್ದ ಸಗಾಯ್ ಮೇರಿ ಅವರೇ ಲಾವಣ್ಯ ಅವರನ್ನು ಓದಿಸುತ್ತಿದ್ದರು ಎಂದು ವರದಿಯಾಗಿದ್ದು, ಶಾಲೆಯ ಫೀಸ್‌ ಅನ್ನು ಅವರೇ ಕಟ್ಟಿದ್ದರು ಎನ್ನಲಾಗಿದೆ.

ಒಟ್ಟು ಆ ವಿದ್ಯಾರ್ಥಿನಿಯ ನಾಲ್ಕು ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದ್ದು, ಕೇವಲ ಒಂದರಲ್ಲಿ ಮಾತ್ರ ಎರಡು ವರ್ಷಗಳ ಹಿಂದಿನ ಮತಾಂತರದ ಪ್ರಸ್ತಾಪದ ಬಗ್ಗೆ ವಿದ್ಯಾರ್ಥಿನಿ ಮಾತನಾಡುತ್ತಾರೆ. ಆ ಒಂದು ವಿಡಿಯೋವನ್ನು ಬಿಜೆಪಿ ಮುಖಂಡರು ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ

ಜನವರಿ 17 ರಂದು ವಿಎಚ್‌ಪಿ ನಾಯಕ ಮುತ್ತುವೆಲ್ ಅವರು ಆಸ್ಪತ್ರೆಗೆ ತೆರಳಿ ತಮ್ಮ ಫೋನ್‌ನಲ್ಲಿ ನಾಲ್ಕು ವಿಡಿಯೊವನ್ನು ರೆಕಾರ್ಡ್ ಮಾಡಿದ್ದರು ಎಂದು ಟಿಎನ್‌ಎಂ ವರದಿ ಮಾಡಿದೆ. ಅದರಲ್ಲಿ ಎರಡು ವಿಡಿಯೊ ಈಗಾಗಲೆ ಲೀಕ್ ಆಗಿವೆ. ಮುತ್ತುವೆಲ್ ಅವರು ರೆಕಾರ್ಡ್ ಮಾಡಿದ್ದ ಲಾವಣ್ಯ ಅವರ ಎರಡನೇ ವೀಡಿಯೊವನ್ನು ಡಿಲೀಟ್ ಮಾಡಿದ್ದಾರೆ ಎಂದು ನಂಬಲಾಗಿದೆ. ಅವರಲ್ಲಿ ಲಾವಣ್ಯ ತನ್ನ ಅಂಕಗಳು ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ ಎಂದು TNM ವರದಿ ಹೇಳಿದೆ. ಅದಾಗ್ಯೂ, ತನಿಖಾ ಸಂಸ್ಥೆಗಳು ಮುತ್ತವೇಲ್‌ ಫೋನ್‌ನಿಂದ ಡಿಲೀಟ್ ಮಾಡಿರುವ ವೀಡಿಯೊವನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುತ್ತುವೇಲ್‌ ರೆಕಾರ್ಡ್ ಮಾಡಲಾಗಿರುವ ನಾಲ್ಕು ವೀಡಿಯೊಗಳಲ್ಲಿ ಕೇವಲ ಒಂದು ವೀಡಿಯೊದಲ್ಲಿ ಮಾತ್ರ ಮತಾಂತರದ ಬಗ್ಗೆಗಿನ ಪ್ರಶ್ನೆಗೆ ವಿದ್ಯಾರ್ಥಿನಿ ‘ಆಗಿರಬಹುದು’ ಉತ್ತರಿಸುತ್ತಾರೆ. ಉಳಿದದರಲ್ಲಿ ಮತಾಂತರದ ಬಗ್ಗೆ ಯಾವುದೆ ಉಲ್ಲೇಖವಿಲ್ಲ ಎಂದು TNM ಹೇಳಿದೆ.

ಮುತ್ತುವೇಲ್ ರೆಕಾರ್ಡ್ ಮಾಡಿರುವ ಮೊದಲ ವೀಡಿಯೊ ವಿದ್ಯಾರ್ಥಿನಿಯ ವೈಯಕ್ತಿಕ ವಿವರಗಳ ಬಗ್ಗೆ ಹೇಳುತ್ತದೆ. ಎರಡನೇ ವಿಡಿಯೋ ಹೊಸದಾಗಿ ಲೀಕ್ ಆಗಿರುವುದಾಗಿದೆ. ಮೂರನೇ ವಿಡಿಯೋ ಈಗಾಗಲೇ ವೈರಲ್ ಆಗಿರುವುದಾಗಿದ್ದು, ಅವರಲ್ಲಿ ಲಾವಣ್ಯ ಎರಡು ವರ್ಷಗಳ ಹಿಂದೆ ಮತಾಂತರ ಪ್ರಸ್ತಾಪದ ಘಟನೆ ಬಗ್ಗೆ ವಿವರಿಸುತ್ತಾರೆ. ನಾಲ್ಕನೇ ವೀಡಿಯೋ ಆಕೆಯ ಮಲತಾಯಿಯದ್ದಾಗಿದೆ.

ಇದನ್ನೂ ಓದಿ: ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್‌

ಲಾವಣ್ಯ ಅವರ ಹೆತ್ತತಾಯಿ ಸುಮಾರು ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರ ನಂತರ ಅವರ ತಂದೆ ಮತ್ತೊಂದು ಮದುವೆ ಆಗಿದ್ದರು. ವಿದ್ಯಾರ್ಥಿನಿಗೆ ತೊನ್ನುರೋಗ ಇತ್ತು ಎನ್ನಲಾಗಿದೆ. ಇದು ಅಂಟುರೋಗ ಅಲ್ಲದಿದ್ದರೂ, ಇದು ಅಂಟುರೋಗ ಎಂದು ನಂಬಿರುವ ಅವರ ಮಲತಾಯಿ ವಿದ್ಯಾರ್ಥಿನಿಗೆ ಮಾನಸಿಕೆ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ವಿದ್ಯಾರ್ಥಿನಿಗೆ ಬೇರೆಯೆ ಊಟದ ತಟ್ಟೆ, ಚಾಪೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿನಿ ಮನಗೆ ಹೋಗಲು ಒಪ್ಪದೆ ಬೋರ್ಡಿಂಗ್ ಶಾಲೆಯಲ್ಲಿಯೇ ಉಳಿದಿದ್ದಳು ಎನ್ನಲಾಗಿದೆ. ಅಲ್ಲದೆ, ವಿದ್ಯಾರ್ಥಿನಿಯು ಎರಡು ವರ್ಷಗಳ ಹಿಂದ ಚೈಲ್ಡ್‌ ಲೈನ್‌ಗೆ ಕರೆ ಮಾಡಿ ಮನೆಯಲ್ಲಿನ ಕಿರುಕುಳಗಳ ಬಗ್ಗೆ ದೂರು ನೀಡಿದ್ದರು ಎಂದು ಕೂಡಾ ಹೇಳಲಾಗಿದೆ. ಇಡೀ ಘಟನೆಯ ಕುರಿತು ರೆಡ್‌ ಫಿಕ್ಸ್ ಎಂಬು ಯೂಟ್ಯೂಬ್ ಚಾನೆಲ್ ಗ್ರೌಂಡ್ ರಿಪೋರ್ಟ್ ಮಾಡಿದೆ. ಅದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

ಜನವರಿ 15 ರಂದು ವಿದ್ಯಾರ್ಥಿನಿಯ ಪೋಷಕರು “ವಾರ್ಡನ್ ಲಾವಣ್ಯ ಅವರನ್ನು ಮನೆಗೆಲಸ ಮಾಡಲು ಮತ್ತು ಖಾತೆ ಪುಸ್ತಕಗಳನ್ನು ನಿರ್ವಹಿಸುವಂತೆ ಮಾಡುತ್ತಿದ್ದರು” ಎಂದು ಮೊದಲು ದೂರು ದಾಖಲಿಸಿದ್ದರು. ಜನವರಿ 16 ರಂದು ಸಂಜೆ 4.10 ಕ್ಕೆ ಲಾವಣ್ಯ ಅವರ ಕೊನೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌‌ ವೀಡಿಯೊ ದಾಖಲೆ ಮಾಡಿದ್ದಾರೆ.

ಲಾವಣ್ಯ ಮೃತಪಟ್ಟ ಒಂದು ದಿನದ ನಂತರ, ಮಗುವನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂದು ಆರೋಪಿಸಿ ಆಕೆಯ ಪೋಷಕರು 44 ಸೆಕೆಂಡುಗಳ ವಿಡಿಯೋ ಕ್ಲಿಪ್‌ನೊಂದಿಗೆ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಸುಳ್ಳು ಹರಡಿ, ನಂತರ ಪೋಸ್ಟ್ ಡಿಲೀಟ್ ಮಾಡಿದ ಪೋಸ್ಟ್ ಕಾರ್ಡ್!

ಎರಡು ದಿನಗಳ ಹಿಂದೆ, ಲಾವಣ್ಯ ಅವರ ತಂದೆಯ ಮನವಿಯನ್ನು ಆಲಿಸಿದ ಮದ್ರಾಸ್ ಹೈಕೋರ್ಟ್, ಆಕೆಯ ಸಾವಿನ ನಂತರ ಮೊದಲು ವೈರಲ್ ಆದ ವೀಡಿಯೊದ ತನಿಖೆಗಾಗಿ ತನ್ನ ಫೋನ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ಮುತ್ತುವೆಲ್‌ಗೆ ಕೇಳಿಕೊಂಡಿತ್ತು.

ಇಲ್ಲಿಯವರೆಗೆ, ಲಾವಣ್ಯ ಅವರ ಸಾವಿಗೆ ಸಂಬಂಧಿಸಿದಂತೆ 62 ವರ್ಷದ ಹಾಸ್ಟೆಲ್ ವಾರ್ಡನ್ ಸಗಾಯ್ ಮೇರಿಯನ್ನು ಜನವರಿ 21 ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತನ್ನ ಮಗಳ ಸಾವಿನ ಬಗ್ಗೆ ಸಿಬಿಐ-ಸಿಐಡಿ ತನಿಖೆಗೆ ಕೋರಿ ಲಾವಣ್ಯ ಅವರ ತಂದೆಯ ಮನವಿಯ ವಿಚಾರಣೆ ನಡೆಸುತ್ತಿದೆ. ಬಾಲಕಿಯ ಪೋಷಕರಿಗೆ ತಂಜಾವೂರು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಲು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲು ಸೂಚಿಸಲಾಗಿದ್ದು, ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ನ್ಯಾಯಾಲಯವು ಮುತ್ತುವೇಲ್ ಅವರ ಫೋನ್ ಅನ್ನು ಪೊಲೀಸರಿಗೆ ಹಸ್ತಾಂತರಿಸುವಂತೆ ಕೇಳಿದೆ ಆದರೆ ವೀಡಿಯೊ ರೆಕಾರ್ಡ್ ಮಾಡಿರುವ ಬಗ್ಗೆ ಆತನಿಗೆ ಕಿರುಕುಳ ನೀಡದಂತೆ ಪೊಲೀಸರಿಗೆ ಸೂಚಿಸಿದೆ. “ಪೊಲೀಸ್ ಅಧಿಕಾರಿಗಳ ಗಮನವು ಮಗುವಿನ ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳ ಮೇಲೆ ಇರಬೇಕು. ವೀಡಿಯೊ ತೆಗೆದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ

ಶುಕ್ರವಾರ, ಜನವರಿ 28 ರಂದು ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.

ಈ ನಡುವೆ ಜನವರಿ 20 ರಂದು, “ವಿದ್ಯಾರ್ಥಿನಿಯನ್ನು ಬಲವಂತವಾಗಿ ಮತಾಂತರ ಮಾಡಿದ ಬಗ್ಗೆ ಮಾಹಿತಿ ಇಲ್ಲ” ಎಂದು ತಂಜಾವೂರು ಎಸ್‌ಪಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ತಂಜಾವೂರ್‌ ಜಿಲ್ಲಾ ಬಿಜೆಪಿ ನಾಯಕ ಕೂಡಾ ತನ್ನ ಪಕ್ಷದ ಪ್ರತಿಪಾದನೆಯನ್ನು ಅಲ್ಲಗೆಳೆದಿದ್ದು, ಪ್ರಕರಣವು ಬಲವಂತದ ಮತಾಂತರದ ಕಿರುಕುಳ ಅಲ್ಲ, ಪಕ್ಷದ ಆರೋಪ ಸುಳ್ಳು ಎಂದು ಹೇಳಿದ್ದಾರೆ.

“ಇದು 100 ವರ್ಷ ಹಳೆಯ ಶಾಲೆಯಾಗಿದ್ದು, ಇಲ್ಲಿ ಕಲಿಯುತ್ತಿರುವ 65% ವಿದ್ಯಾರ್ಥಿಗಳು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಶಾಲೆಯ ನೂರು ವರ್ಷಗಳ ಇತಿಹಾಸದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಮತಾಂತರವಾದ ದಾಖಲೆ ತೋರಿಸಲಿ. ನೂರು ವರ್ಷಗಳಲ್ಲಿ ಒಬ್ಬನನ್ನಾದರೂ ಮತಾಂತರ ಮಾಡಬಹುದಿತ್ತಲ್ಲವೇ? ಈ ಒಬ್ಬ ವಿದ್ಯಾರ್ಥಿಯ ಮತಾಂತರದಿಂದ ಧಾರ್ಮಿಕ ಸಭೆಗಾಗುವ ಲಾಭಗಳಾದರೂ ಏನು?” ಎಂದು ಪ್ರಶ್ನಿಸಿದ್ದಾರೆ.

“ಬಿಜೆಪಿ ಪಕ್ಷ ಮಾಡುತ್ತಿರುವ ಆರೋಪಗಳು ಸುಳ್ಳಾಗಿದ್ದು, ವಿದ್ಯಾರ್ಥಿನಿಗೆ ಮನೆಯಲ್ಲಿ ಮಲತಾಯಿ ಚಿತ್ರಹಿಂಸೆ ನೀಡುತ್ತಿದ್ದರಿಂದ ಮನೆಗೆ ಹೋಗಲು ಹೆದರುತ್ತಿದ್ದರು. ಈ ಬಗ್ಗೆ ನಾವು ಸಂತ್ರಸ್ತೆ ಬಾಲಕಿಯ ಮನೆಗೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದೇವೆ” ಎಂದು mirrornow ವರದಿ ಉಲ್ಲೇಖಿಸಿದೆ.

ರಾಜ್ಯ ಬಿಜೆಪಿಯು ಬಲವಂತದ ಮತಾಂತರದಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಯನ್ನು ಆಯೋಜಿಸಿದೆ. ಅಲ್ಲದೆ, ವಿದ್ಯಾರ್ಥಿನಿಯ ವಿಡಿಯೊವನ್ನು ಜನವರಿ 17 ರಂದು ರೆಕಾರ್ಡ್ ಮಾಡಿದ್ದರೂ, ಅದನ್ನು ಪೊಲೀಸರಿಗೆ ಯಾಕೆ ಹಸ್ತಾಂತರಿಸಿಲ್ಲ ಎಂಬ ಬಗ್ಗೆ ಕೂಡಾ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಹೀನಕೃತ್ಯ: ಅತ್ಯಾಚಾರ ಸಂತ್ರಸ್ತೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ನೆರೆಹೊರೆಯವರು

SSLC ಪರೀಕ್ಷೆಯಲ್ಲಿ ನಾನು ಫಸ್ಟ್ ರ್ಯಾಂಕ್ ಪಡೆದಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಆದರೆ ಹಾಸ್ಟೆಲ್ ವಾರ್ಡನ್ ಕಿರುಕುಳಕ್ಕೆ ಬೇಸತ್ತು, ಓದಿಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ಜನವರಿ 09ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜನವರಿ 16 ರಂದು ಸಂಜೆ 4.10 ಕ್ಕೆ ವಿದ್ಯಾರ್ಥಿನಿಯ ಕೊನೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌‌ ವೀಡಿಯೊ ದಾಖಲೆ ಮಾಡಿದ್ದಾರೆ. ಜನವರಿ 17 ರಂದು ತಂಜಾವೂರಿನ ವಿಎಚ್‌ಪಿ ನಾಯಕ  ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿ, ಮತಾಂತರವಾಗದಿದ್ದುದ್ದಕ್ಕೆ ಕಿರುಕುಳ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಇರಬಹುದು ಎಂದಷ್ಟೇ ಉತ್ತರಿಸಿದ್ದಾರೆ. ಈ ವಿಡಿಯೋವನ್ನು ಹಾಗೆಯೇ ಇಟ್ಟುಕೊಂಡಿದ್ದ ಅವರು ವಿದ್ಯಾರ್ಥಿನಿಯು ಜನವರಿ 19 ಮೃತಪಟ್ಟ ಬಳಿಕವಷ್ಟೇ ಒಂದು ದಿನದ ನಂತರ ಜನವರಿ 20 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿಯೂ ಸಹ 44 ಸೆಕೆಂಡ್ ಮಾತ್ರ ಕಟ್ ಮಾಡಿ ಅಣ್ಣಾಮಲೈ ಬಲವಂತದ ಮತಾಂತರ ಎಂದು ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಗಾಗಿ ಅಣ್ಣಾಮಲೈ ಮತ್ತು ಬಿಜೆಪಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು, ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಣ್ಣಾಮಲೈರವರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ.

ಈ ಮಧ್ಯೆ ಕೊಯಮತ್ತೂರಿನ ರಾಮನಾಥಪುರಂನಲ್ಲಿರುವ ಟ್ರಿನಿಟಿ ಚರ್ಚ್ ಅನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದೆ. ಬಲಪಂಥೀಯ ಗುಂಪುಗಳು ತಮಿಳುನಾಡಿನಲ್ಲಿ ಬಲವಂತದ ಮತಾಂತರಗಳು ನಡೆಯುತ್ತಿದೆ ಎಂದು ಪ್ರತಿಪಾದಿಸಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ.


ಇದನ್ನೂ ಓದಿ: ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...