Homeಮುಖಪುಟಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ ನಿಧನ

ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಫಾತಿಮಾ ಬೀವಿ ನಿಧನ

- Advertisement -
- Advertisement -

ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಮತ್ತು ಮಾಜಿ ರಾಜ್ಯಪಾಲೆ ಜಸ್ಟಿಸ್ ಎಂ.ಫಾತಿಮಾ ಬೀವಿ ನಿಧನರಾಗಿದ್ದಾರೆ.

96 ವರ್ಷದ ಎಂ.ಫಾತಿಮಾ ಬೀವಿ ಅವರ ನಿಧನವನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ದೃಢಪಡಿಸಿದ್ದಾರೆ. ಎಂ.ಫಾತಿಮಾ ಬೀವಿ ಉನ್ನತ ನ್ಯಾಯಾಂಗಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳಾ ನ್ಯಾಯಾಧೀಶರು ಕೂಡ ಆಗಿದ್ದಾರೆ.

ಎಂ.ಫಾತಿಮಾ ಬೀವಿ ಅವರು 1927ರ ಏ.30ರಂದು ಕೇರಳದಲ್ಲಿ ಜನಿಸಿದ್ದರು. ಅವರ ತಂದೆ ಕಾನೂನು ಕಲಿಯಲು ಫಾತಿಮಾ ಅವರಿಗೆ ಪ್ರೋತ್ಸಾಹಿಸಿದ್ದರು. 1950ರಲ್ಲಿ ಅವರು ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದು, ಬಾರ್ ಕೌನ್ಸಿಲ್‌ನಿಂದ ಚಿನ್ನದ ಪದಕ ಪಡೆದ ಮೊದಲ ಮಹಿಳೆಯಾಗಿದ್ದಾರೆ.

ಅವರು ಕೇರಳದಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 1974ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು. 1980ರಲ್ಲಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಮತ್ತು 1983ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

1989ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ನ್ಯಾಯಾದೀಶೆಯಾಗುವ  ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು. 1992ರ ಏ.29ರವರೆಗೂ ಅವರು ಜಡ್ಜ್‌ ಆಗಿ ಕಾರ್ಯನಿರ್ವಹಿಸಿದ್ದರು.

ಅವರ ನಿವೃತ್ತಿಯ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದರು. ತಮಿಳುನಾಡಿನ ರಾಜ್ಯಪಾಲರಾಗಿ ಕೂಡ ಸೇವೆ ಸಲ್ಲಿಸಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಲ್ವರು ಖೈದಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರು ತಮಿಳುನಾಡು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಎಂ.ಫಾತಿಮಾ ಬೀವಿ ನಿಧನಕ್ಕೆ ಸಂತಾಪ ಸೂಚಿಸಿದ ಕೇರಳದ ಸಚಿವೆ ವೀಣಾ ಜಾರ್ಜ್, ನ್ಯಾಯಮೂರ್ತಿ ಬೀವಿ ಅವರು ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಮತ್ತು ತಮಿಳುನಾಡು ರಾಜ್ಯಪಾಲರಾಗಿ ಛಾಪು ಮೂಡಿಸಿದ್ದಾರೆ. ಅವರು ತನ್ನ ಹೆಸರಿಗೆ ಅನೇಕ ದಾಖಲೆಗಳನ್ನು ಹೊಂದಿದ್ದ ಧೈರ್ಯಶಾಲಿ ಮಹಿಳೆ. ಇಚ್ಛಾಶಕ್ತಿಯೊಂದಿದ್ದರೆ ಎಲ್ಲವನ್ನು ಜಯಿಸಬಹುದು ಎಂದು ತನ್ನ ಸ್ವಂತ ಜೀವನದ ಮೂಲಕ ತೋರಿಸಿದ ವ್ಯಕ್ತಿತ್ವ ಎಂದು ಹೇಳಿದ್ದಾರೆ.

ಇದನ್ನು ಓದಿ: ಭಾರತದ ವಿರುದ್ಧ ಅಮೆರಿಕದಲ್ಲಿ ಸಿಖ್‌ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಸಂಚು ಆರೋಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read