Homeಮುಖಪುಟಜೆಡಿಎಸ್ ಒಳಗೆ ಶುರುವಾಗಿರುವ ಬಂಡಾಯದ ರೋಗಕ್ಕೆ ಫೀನಿಕ್ಸ್ ಗೌಡರ ಬಳಿ ಮದ್ದಿದೆಯೇ?

ಜೆಡಿಎಸ್ ಒಳಗೆ ಶುರುವಾಗಿರುವ ಬಂಡಾಯದ ರೋಗಕ್ಕೆ ಫೀನಿಕ್ಸ್ ಗೌಡರ ಬಳಿ ಮದ್ದಿದೆಯೇ?

- Advertisement -
- Advertisement -

ರಾಜಕೀಯದಲ್ಲಿ ಯಾವುದು ಶಾಶ್ವತವೂ ಅಲ್ಲ, ನಿರ್ದಿಷ್ಟವೂ ಅಲ್ಲ. ಆದರೆ, ಜೆಡಿಎಸ್‍ನಲ್ಲಿ ತಲ್ಲಣ ಆರಂಭವಾಗಿರುವುದಂತೂ ಸತ್ಯ. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಸಾಕ್ಷಾತ್ ದೇವೇಗೌಡ ಮತ್ತು ಕುಮಾರಸ್ವಾಮಿಯಂತವರನ್ನೂ ಸಹ ಹಣ್ಣುಗಾಯಿ ನೀರುಗಾಯಿ ಮಾಡಿದೆ.ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ, ರಾಜಕೀಯ ಫೀನಿಕ್ಸ್ ಖ್ಯಾತಿಯ ದೇವೇಗೌಡರ ನಡೆ ಏನು?

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷ ಅತಿಹೆಚ್ಚು ಸ್ಥಾನಗಳಿಸಿದರೂ ಜೆಡಿಎಸ್ ಕಿಂಗ್ ಮೇಕರ್ ಎಂಬ ಹಣೆಪಟ್ಟಿ ಕಳೆದ ಎರಡು ದಶಕಗಳಿಂದ ಗಟ್ಟಿಯಾಗಿತ್ತು. ಕರ್ನಾಟಕದ ಪಾಲಿನ ಪ್ರಬಲ ಪ್ರಾದೇಶಿಕ ಪಕ್ಷ ಎಂಬ ಶ್ರೇಯ ಒಂದು ಕಾಲದಲ್ಲಿ ಜೆಡಿಎಸ್‍ಗೆ ಇದ್ದದ್ದು ನಿಜ. ಆದರೆ, ಜೆಡಿಎಸ್ ಕೋಟೆ ಈಗ ಮುಂಚಿನಂತೆ ಭದ್ರವಾಗಿಲ್ಲ. ಕೆ.ಆರ್. ಪೇಟೆ ಸೋಲಿನ ನಂತರ ಸ್ವತಃ ಮಂಡ್ಯದಲ್ಲೇ ಜೆಡಿಎಸ್ ಬುನಾದಿ ಮೆಲ್ಲನೆ ಅಲುಗಾಡುತ್ತಿರುವುದು ತಿಳಿಯದ ವಿಚಾರವೇನಲ್ಲ.

ಜೆಡಿಎಸ್‍ನಲ್ಲಿ ಪರಿಸ್ಥಿತಿ ಇದೀಗ ಹೇಗಾಗಿದೆ ಎಂದರೆ ಪಕ್ಷದ ವರಿಷ್ಠ ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗಿರಲಿ, ಸ್ವತಃ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೂ ಶಾಸಕರು ಕ್ಯಾರೇ ಎನ್ನುತ್ತಿಲ್ಲ. ಜಿ.ಟಿ. ದೇವೇಗೌಡರಂತಹ ಹಿರಿಯ ನಾಯಕರು ಬಹಿರಂಗವಾಗಿಯೇ ಬಿಜೆಪಿಯನ್ನು ಸಮರ್ಥಿಸಿಕೊಂಡು ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದಾರೆ.

ಅಲ್ಲದೆ, ಯಾವುದೇ ಸಮಯದಲ್ಲಿ ಮತ್ತಷ್ಟು ಶಾಸಕರು ಬಿಜೆಪಿ ಪಾಲಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಕನಿಷ್ಟ 13ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆದರೂ ಅಚ್ಚರಿ ಇಲ್ಲ ಎನ್ನುತ್ತಿವೆ ರಾಜ್ಯ ರಾಜಕೀಯ ವಠಾರ. ಇದಕ್ಕೆ ಕಾರಣಗಳು ಇಲ್ಲದೇ ಏನಿಲ್ಲ.
ಹಾಗೆ ನೋಡಿದರೆ ಕಿಂಗ್ ಮೇಕರ್ ಎಂಬ ಜೆಡಿಎಸ್ ಕೋಟೆಯನ್ನು ಕೆಡವಿ ಈ ಕೋಟೆಯ ಶವ ಪೆಟ್ಟಿಗೆಗೆ ಮೊದಲ ಮೊಳೆ ಹೊಡೆದದ್ದೇ ಶಾಸಕ ಜಮೀರ್ ಅಹಮದ್ ಅಂಡ್ ಟೀಮ್.

2017ರಲ್ಲಿ ಶಾಸಕ ಜಮೀರ್ ಅಹಮದ್, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಒಟ್ಟು 9 ಶಾಸಕರು ಹೋಲ್‍ಸೇಲ್ ಆಗಿ ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಕಾಂಗ್ರೆಸ್ ಸೇರುವ ಮೂಲಕ ಜೆಡಿಎಸ್ ಪಕ್ಷಕ್ಕೆ ಮೊದಲ ಆಘಾತ ನೀಡಿದ್ದರು. ಜೆಡಿಎಸ್ ಈ ಶಾಕ್‍ನಿಂದ ಹೊರಬರುವುದು ಅಷ್ಟು ಸುಲಭದ ಮಾತಲ್ಲ ಎನ್ನಲಾಗಿತ್ತು. ಆದರೂ, 2018ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಜ್ಯಾದ್ಯಂತ ಮಿಂಚಿನಂತೆ ಪ್ರಚಾರ ಕಾರ್ಯ ನಡೆಸಿದ್ದರು. ಪರಿಣಾಮ ಜೆಡಿಎಸ್ 37 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.

ತದನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧಿಸಿ ಒಂದು ವರ್ಷ ಅಧಿಕಾರ ನಡೆಸಿದ್ದು, ಕುಮಾರಸ್ವಾಮಿ ಎರಡನೇ ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ತರುವಾಯ ಈ ಸರ್ಕಾರವನ್ನೂ ಬೀಳಿಸಿ ಆಪರೇಷನ್ ಕಮಲದ ಸಹಾಯದಿಂದ ಬಿಜೆಪಿ ಸರ್ಕಾರ ರಚಿಸಿದ್ದು ಯಡಿಯೂರಪ್ಪ ಸಿಎಂ ಆಗಿದ್ದು ಇಂದು ಇತಿಹಾಸ.

ಆದರೆ, ಬಹುನಿರೀಕ್ಷಿತ ಉಪ ಚುನಾವಣೆಗೂ ಮುನ್ನ ಜೆಡಿಎಸ್ ಶಾಸಕರ ಸಭೆಯಲ್ಲಿ ಶಾಸಕರು ಬಹಿರಂಗವಾಗಿಯೇ ಕುಮಾರಸ್ವಾಮಿಗೆ ಬೆದರಿಕೆ ಹಾಕಿದ್ದರು. ಬಿಜೆಪಿಗೆ ಬಾಹ್ಯ ಬೆಂಬಲ ನೀಡದಿದ್ದರೆ ಪಕ್ಷ ತೊರೆಯುವ ಬೆದರಿಕೆ ಬ್ಲ್ಯಾಕ್‍ಮೇಲ್ ಮಾಡಿದ್ದರು. ಜೆಡಿಎಸ್‍ನೊಳಗಿನ ಈ ಅಂತಃಕಲಹವೂ ಮಾಜಿ ಅನರ್ಹರು ಮೈತ್ರಿಗೆ ಗುಡ್‍ಬೈ ಹೇಳಿ ಬಿಜೆಪಿ ಸೇರುವಲ್ಲಿ ಒಂದು ಪ್ರೇರಣೆಯ ಅಂಶ.

ಜೆಡಿಎಸ್‍ನಲ್ಲಿ ವರಿಷ್ಠರ ವಿರುದ್ಧವೇ ಬ್ಲ್ಯಾಕ್‍ಮೇಲ್ ತಂತ್ರ!

ಹಾಗೆ ನೋಡಿದರೆ ಮೈತ್ರಿ ಸರ್ಕಾರವನ್ನು ಬೀಳಿಸಿದ್ದೆ ಬಿಜೆಪಿ ಮತ್ತು ಬಿ.ಎಸ್. ಯಡಿಯೂರಪ್ಪ ಎಂಬ ವಿಚಾರ ಇದೀಗ ಗುಟ್ಟಾಗೇನು ಉಳಿದಿಲ್ಲ. ಹೀಗಾಗಿ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ಜೆಡಿಎಸ್ ನಾಯಕರು ಮತ್ತೆ ಕಾಂಗ್ರೆಸ್ ಜೊತೆಗೂಡಿ ಮೈತ್ರಿಯಾಗಿಯೇ ಸೆಣಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಉಭಯ ಪಕ್ಷದ ಪ್ರಮುಖ ನಾಯಕರು ಕೊನೆವರೆಗೂ ಉಪಚುನಾವಣೆಯನ್ನೂ ಮೈತ್ರಿಯಾಗಿಯೇ ಎದುರಿಸಲಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಮೈತ್ರಿ ಮುರಿದು ಬಿದ್ದಿತ್ತು. ಪರಿಣಾಮ ಚುನಾವಣೆ ಎದುರಿಸಿದ್ದ 14 ಅನರ್ಹ ಶಾಸಕರ ಪೈಕಿ 12 ಜನ ಗೆಲುವು ಸಾಧಿಸಿದ್ದರು ಮತ್ತು ಈ ಗೆಲುವಿನ ಹಿಂದೆ ಇದ್ದದ್ದು ಸ್ವತಃ ಜೆಡಿಎಸ್ ಶಾಸಕರೇ ಎನ್ನಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿ ಸಾಧಿಸುವ ಮೂಲಕ ಅನರ್ಹರಿಗೆ ತಕ್ಕ ಪಾಠ ಕಲಿಸಬೇಕು ಎಂಬುದೇ ಜೆಡಿಎಸ್ ವರಿಷ್ಠರ ಆಶಯವೂ ಆಗಿತ್ತು.

ಆದರೆ, ಚುನಾವಣೆಗೂ ಮುಂಚಿತವಾಗಿ ನಡೆದ ಪಕ್ಷದ ಸಭೆಯಲ್ಲಿ ಜೆಡಿಎಸ್ ಶಾಸಕರು ವರಿಷ್ಠರ ವಿರುದ್ಧವೇ ತಿರುಗಿ ಬಿದ್ದಿದ್ದರು. “ತಾವು ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧರಿಲ್ಲ, ಹೀಗಾಗಿ ಬಿಜೆಪಿ ಸರ್ಕಾರವನ್ನು ಬೀಳಿಸಬಾರದು. ಅಕಸ್ಮಾತ್ ಚುನಾವಣೆ ನಂತರ ಸಂಖ್ಯೆ ಕೊರತೆ ಆದರೂ ಸಹ ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು. ಇಲ್ಲದಿದ್ದರೆ ಪಕ್ಷದ 13 ಜನ ಶಾಸಕರು ಈಗಿಂದೀಗಲೆ ಬಿಜೆಪಿಗೆ ಪಕ್ಷಾಂತರ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಇದಕ್ಕೆ ಪೂರಕವಾಗಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಯ್ಯ ತಾವು ಜೆಡಿಎಸ್ ತೊರೆಯುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಕೊನೆಗೆ ಪಕ್ಷದಿಂದಲೇ ಉಚ್ಚಾಟಿತರಾಗಿದ್ದರು. ಇನ್ನು ಹಿರಿಯ ನಾಯಕ ಬಸವರಾಜ ಹೊರಟ್ಟಿ ಪಕ್ಷದಲ್ಲಿ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ನೇರಾನೇರ ಆರೋಪ ಮಾಡಿದ್ದರೆ, ಶಾಸಕ ಜಿ.ಟಿ. ದೇವೇಗೌಡ ಅದಾಗಲೇ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಾಗಿತ್ತು. ಅಲ್ಲದೆ, ಉಪ ಚುನಾವಣೆ ನಂತರ ಮತ್ತಷ್ಟು ಜೆಡಿಎಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಜೆಡಿಎಸ್ ವರಿಷ್ಠರಲ್ಲಿ ಆತಂಕ ಹುಟ್ಟುಹಾಕಿದ್ದು ಸುಳ್ಳಲ್ಲ.

ಇದೇ ಕಾರಣಕ್ಕೆ ಚುನಾವಣೆ ಸಂದರ್ಭದಲ್ಲಿ ಸ್ವತಃ ಕುಮಾರಸ್ವಾಮಿ ಮತ್ತು ದೇವೇಗೌಡ ಬಹಿರಂಗವಾಗಿಯೇ ತಾವು ಬಿಜೆಪಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ ಎಂಬಂತಹ ಹೇಳಿಕೆಗಳನ್ನು ನೀಡಲು ಮುಂದಾದದ್ದು. ಕೊನೆಗೂ ಅಂದುಕೊಂಡಂತೆ ಬಿಜೆಪಿ ಏನೋ ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಜೆಡಿಎಸ್ ಒಳಗಿನ ಆಂತರಿಕ ಕ್ಷೋಭೆ ಮಾತ್ರ ಈವರೆಗೆ ಶಮನವಾಗಿಲ್ಲ.

ಪರಿಷತ್ ಚುನಾವಣೆಯಿಂದ ದಳ ಹಿಂದೆ ಸರಿಯಲು ಕಾರಣವೇನು?

ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ದಾಖಲಿಸಬೇಕಾದಂತಹ ಅನಿವಾರ್ಯತೆಗೆ ಸಿಲುಕಿದ್ದರು. ಹೀಗಾಗಿ ಸವದಿಗೆ ಸೋಲುಣಿಸುವ ಸಲುವಾಗಿಯೇ ಕಾಂಗ್ರೆಸ್-ಜೆಡಿಎಸ್ ಒಂದಾಗಿತ್ತು. ಪರಿಣಾಮ ಅನಿಲ್ ಕುಮಾರ್ ಎಂಬುವವರು ಕೊನೆ ಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಆದರೆ, ಈ ಸಂದರ್ಭದಲ್ಲೂ ಸಹ ಜೆಡಿಎಸ್ ಶಾಸಕರು ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಅಕಸ್ಮಾತ್ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸೋಲನುಭವಿಸಿದರೆ ತಾವು ಪಕ್ಷ ಬಿಡುವುದಾಗಿ ಮತ್ತು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಅಂದು ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಭಾಗವಹಿಸಿದ್ದರೆ 15ಕ್ಕಿಂತ ಹೆಚ್ಚು ಶಾಸಕರು ಅಡ್ಡ ಮತದಾನ ಮಾಡಲು ಸಿದ್ಧರಿದ್ದರು. ಆಗ ಜೆಡಿಎಸ್‍ನೊಳಗಿನ ಭಿನ್ನಮತ ಅಧಿಕೃತವಾಗಿಯೇ ಬೀದಿಗೆ ಬರುತ್ತಿತ್ತು.

ಇದರ ವಾಸನೆ ಅರಿತಿದ್ದ ಕಾರಣಕ್ಕೆ ಕುಮಾರಸ್ವಾಮಿ ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹೊರ ನಡೆದಿದ್ದರು. ಅಲ್ಲದೆ, ಮೈತ್ರಿ ಅಭ್ಯರ್ಥಿಗೆ ತಮ್ಮ ಬೆಂಬಲ ಇಲ್ಲ ಎಂದು ಘೋಷಿಸುವ ಮೂಲಕ ಪ್ರತ್ಯಕ್ಷವಾಗಿಯೇ ಸವದಿ ಗೆಲುವಿಗೆ ಕಾರಣರಾಗಿದ್ದರೂ. ಅಲ್ಲದೇ ತಮ್ಮ ಶಾಸಕರು ಚುನಾವಣೆಯಿಂದ ದೂರ ಉಳಿಯುವಂತೆ ಆದೇಶಿಸಿದ್ದರು. ಆದರೆ, ಹಿರಿಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರು ದಿಗ್ಗಜರ ಈ ಆದೇಶವನ್ನೂ ಮೀರಿ ಮತದಾನ ಮಾಡಿದ್ದಾರೆ. ಅವರು ಯಾರಿಗೆ ಮತ ಹಾಕಿದ್ದಾರೆ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಜೆಡಿಎಸ್ ಶವಪೆಟ್ಟಿಗೆಯ ಕೊನೆಯ ಮೊಳೆ ಜಿಟಿಡಿ ಕೈಲಿದೆ

ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ನಾಯಕ ಜಿ.ಟಿ. ದೇವೇಗೌಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸೋಲಿಸುವಷ್ಟು ತಾಕತ್ ಇರುವ ಜೆಡಿಎಸ್‍ನ ಏಕೈಕ ನಾಯಕ ಅವರು.

ಆದರೆ, ಕಳೆದ ದಿನಗಳಿಂದ ‘ಜಿಟಿಡಿ ನಡೆ ಬಿಜೆಪಿ ಕಡೆ’ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್ ವರಿಷ್ಠರ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿರುವ ಜಿ.ಟಿ. ದೇವೇಗೌಡರು, ಇತ್ತೀಚೆಗೆ ಹೆಚ್ಚಾಗಿ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ವರಿಷ್ಠರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.

ಈ ನಡುವೆ ಪಕ್ಷದಲ್ಲಿರುವ ಮತ್ತೊಂದು ಅಸಮಾಧಾನಿತರ ಗುಂಪನ್ನು ಮುನ್ನಡೆಸುತ್ತಿರುವುದೇ ಜಿ.ಟಿ. ದೇವೇಗೌಡ ಎನ್ನಲಾಗುತ್ತಿದೆ. ಮುಂದಿನ ಚುನಾವಣೆ ವೇಳೆಗೆ ಎ.ಟಿ. ರಾಮಸ್ವಾಮಿ ಸೇರಿದಂತೆ 12 ರಿಂದ 13 ಶಾಸಕರು ಬಿಜೆಪಿ ಪಾಲಾಗಲಿದ್ದಾರೆ. ಈ ಮೂಲಕ ಜಿ.ಟಿ. ದೇವೇಗೌಡರು ಜೆಡಿಎಸ್ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದು ವಿಶ್ಲೇಷಿಸುತ್ತಿದೆ ರಾಜಕೀಯ ಪಡಸಾಲೆ.

ಆದರೆ, ರಾಜಕೀಯದಲ್ಲಿ ಯಾವುದೂ ಶಾಶ್ವತವೂ ಅಲ್ಲ, ನಿರ್ದಿಷ್ಟವೂ ಅಲ್ಲ. ಆದರೆ, ಜೆಡಿಎಸ್‍ನಲ್ಲಿ ತಲ್ಲಣ ಆರಂಭವಾಗಿರುವುದಂತೂ ಸತ್ಯ. ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಸಾಕ್ಷಾತ್ ದೇವೇಗೌಡ ಮತ್ತು ಕುಮಾರಸ್ವಾಮಿಯಂತವರನ್ನೂ ಸಹ ಹಣ್ಣುಗಾಯಿ ನೀರುಗಾಯಿ ಮಾಡಿರುವುದು ನಿಜ. ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ, ರಾಜಕೀಯ ಫೀನಿಕ್ಸ್ ಖ್ಯಾತಿಯ ದೇವೇಗೌಡರ ನಡೆ ಏನು? ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

“ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ”: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...