Homeಕರ್ನಾಟಕಗೋವು ಸಾಕಣೆಯ ಗೋಳು ಕೇಳುವವರ್‍ಯಾರು? ಇದು ಹೈನುಗಾರಿಕೆಯ ಕಥೆ-ವ್ಯಥೆ!

ಗೋವು ಸಾಕಣೆಯ ಗೋಳು ಕೇಳುವವರ್‍ಯಾರು? ಇದು ಹೈನುಗಾರಿಕೆಯ ಕಥೆ-ವ್ಯಥೆ!

- Advertisement -
- Advertisement -

(‘ಮಾಂಸಾಹಾರ’ದ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲ ‘ಗೋಮಾಂಸ’ದ ಕುರಿತು ಭಾವುಕವಾಗಿ ಮಾತನಾಡುವವರಿದ್ದಾರೆ. ಆದರೆ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರನ್ನು ಮಾತನಾಡಿಸಿದರೆ ಅವರು ಹೇಳುವುದೇ ಬೇರೆ. ಹಸು ಸಾಕಣೆಯನ್ನು ರೈತರು ನಿಲ್ಲುಸುತ್ತಿರುವುದು ಏತಕ್ಕೆ ಎಂಬ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ಲೇಖನ ಇತ್ತೀಚೆಗೆ ‘ನ್ಯಾಯಪಥ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.)

“ಒಬ್ಬ ವ್ಯಕ್ತಿಗೆ ನಾಲ್ಕು ಹಸು ತಂದುಕೊಟ್ಟರೆ ಒಂದು ವರ್ಷಕ್ಕೆ ಕಮ್ಮಿ ಎಂದರೂ ಎರಡು ಲಕ್ಷ ರೂಪಾಯಿ ಸಾಲಗಾರನಾಗುತ್ತಾನೆ” ಎನ್ನುತ್ತಾರೆ ಮದ್ದೂರಿನ ರೈತ ದಿವಾಕರ.

ಸುಮಾರು 25 ವರ್ಷಗಳಿಂದ ಹೈನುಗಾರಿಕೆಯನ್ನು ಮಾಡುತ್ತಿರುವ ದಿವಾಕರ ಅವರು ಓದಿದ್ದು 12ನೇ ತರಗತಿ. ಹೈನುಗಾರಿಕೆಯನ್ನು ಜೀವನೋಪಾಯವಾಗಿ ನೋಡಿದ ಅವರಲ್ಲಿ ಹೈನುಗಾರಿಕೆಯ ಕುರಿತು ಕೇಳಿದರೆ, “ದಯವಿಟ್ಟು ಹಸು ಮಾತ್ರ ಸಾಕಬೇಡಿ. ಯಾವ ಕೋರ್ಟ್ ಕೂಡ ನೀಡದ ಶಿಕ್ಷೆಯನ್ನು ಹೈನುಗಾರಿಕೆ ನಿಮಗೆ ನೀಡುತ್ತದೆ” ಎನ್ನುತ್ತಾರೆ.

ಹೈನುಗಾರಿಕೆಯ ಕಷ್ಟ ಸುಖವನ್ನು ದಿವಾಕರ್ ಅವರ ಮಾತುಗಳಲ್ಲೇ ಕೇಳಿ:

“25 ವರ್ಷಗಳಿಂದ ಹಸುಗಳನ್ನು ಸಾಕುತ್ತಿದ್ದೇನೆ. 2001-2002ರಲ್ಲಿ ಒಂದು ಲೀಟರ್ ಹಾಲಿಗೆ ಡೇರಿಯವರು 9 ರೂ. ಕೊಡುತ್ತಿದ್ದರು. ಪಾಕೇಟ್ ಹಾಲು 12 ರೂ.ಗೆ ಮಾರಿಕೊಳ್ಳುತ್ತಿದ್ದರು. ಅಂದು 1 ಲೀಟರ್ ಹಾಲನ್ನು ಹೋಟೆಲ್‌ಗೆ ಮಾರಿದರೆ 10 ರೂಪಾಯಿ ದೊರಕುತ್ತಿತ್ತು. 10 ರೂಪಾಯಿಗೆ ಮೂರೂವರೆ ಕೆ.ಜಿ. ಜೋಳದ ನುಚ್ಚು ಖರೀದಿಸಬಹುದಿತ್ತು. 1 ಕೆಜಿ ಹಿಂಡಿ ಬೆಲೆ 13 ರೂಪಾಯಿ ಇತ್ತು. 8 ರಿಂದ 12 ಸಾವಿರ ರೂಪಾಯಿಯೊಳಗೆ ಒಳ್ಳೆಯ ಹಸು ಸಿಗುತ್ತಿತ್ತು. ಇಂದಿನ ಪರಿಸ್ಥಿತಿ ನೋಡಿ. ಡೇರಿಯವರು 24ರಿಂದ 26 ರೂಪಾಯಿಯನ್ನು 1 ಲೀಟರ್ ಹಾಲಿಗೆ ಕೊಡುತ್ತಾರೆ. ಸಬ್ಸಿಡಿಯನ್ನು ಸರಿಯಾಗಿ ಕೊಟ್ಟರೆ 29 ರೂಪಾಯಿ ಸಿಗಬಹುದು. ಆದರೆ 1 ಲೀಟರ್ ಹಾಲು ಮಾರಿದರೆ ಒಂದು ಕೆ.ಜಿ. ಜೋಳದ ನುಚ್ಚು ಕೂಡ ಬರುವುದಿಲ್ಲ. ಗಮನಿಸಿ, ಮೊದಲು 1 ಲೀಟರ್ ಹಾಲು ಮಾರಿದರೆ ಮೂರೂವರೆ ಕೆ.ಜಿ. ಜೋಳದ ನುಚ್ಚು ಸಿಗುತ್ತಿತ್ತು. ಹಾಲು ಕೊಡಲಿ, ಕೊಡದಿರಲಿ ಒಂದು ಹಸುವಿಗೆ ಎರಡು ಕೆ.ಜಿ. ಹಿಂಡಿಯನ್ನು ಒಂದು ವೇಳೆಗೆ ಹಾಕಬೇಕು. ಒಂದು ಕೆ.ಜಿ. ಹಿಂಡಿಗೆ 30 ರೂ. ಅಂದರೂ 60 ರೂಪಾಯಿ ಆಗುತ್ತದೆ. ಎರಡು ಅವಧಿಗೆ 120 ರೂ. ನಾವೇ ಬೆಳೆದಿದ್ದ ಹುಲ್ಲಿದ್ದರೆ 50 ರೂಪಾಯಿ ಲೆಕ್ಕ ಹಾಕಿಕೊಳ್ಳಿ. ಅಂದರೆ ಒಂದು ಹಸುವಿಗೆ 170 ಖರ್ಚಾಗುತ್ತದೆ. ಆ ಹಸು ಸರಾಸರಿ 10 ಲೀಟರ್ ಹಾಲು ಕೊಡುತ್ತದೆ ಎಂದು ಲೆಕ್ಕ ಹಾಕೋಣ. ಆ ಹಾಲು ಮಾರಿದರೆ 240 ರೂಪಾಯಿ, 260 ರೂಪಾಯಿ ಡೇರಿಯವರು ಕೊಡುತ್ತಾರೆ. ಇದಕ್ಕಿಂತ ಕೂಲಿಗೆ ಹೋದರೂ ನೆಮ್ಮದಿಯಾಗಿ ಬದುಕಬಹುದು.”

“ನಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ದರೂ ಹಾಲು ಕರೆದು, ಡೇರಿಗೆ ಹಾಕಿ ನಂತರ ಅಂತ್ಯ ಸಂಸ್ಕಾರ ಮಾಡಬೇಕು. ಹಸು ಸಾಕುವ ಬದಲು ವಾರಕ್ಕೆ ಆರು ದಿನ ಗಾರೆ ಕೆಲಸಕ್ಕೆ ಹೋಗುವುದು ಉತ್ತಮ. ಒಂದು ದಿನಕ್ಕೆ 600 ರೂಪಾಯಿ ಸಿಗುತ್ತದೆ. ದಯವಿಟ್ಟು, ಯಾರೂ ಹಸು ಸಾಕಲು ಹೋಗಬೇಡಿ. ಅದರ ಬದಲು ಕುರಿ ಸಾಕಾಣಿಕೆ ಮಾಡಿ. ಇವತ್ತು ಜನ ಸತ್ತರೂ ಬಾಡು, ಹುಟ್ಟಿದರೂ ಬಾಡು ತಿಂತಾರೆ. ಮಾಂಸಕ್ಕೆ ಒಳ್ಳೆಯ ಬೇಡಿಕೆ ಇದೆ. 40,000 ರೂಪಾಯಿ ಕೊಟ್ಟು ಒಂದು ಹಸು ಖರೀದಿಸಿ, ಅದನ್ನು ಮಾರುವಾಗ ಕನಿಷ್ಠ 20,000 ರೂಪಾಯಿಯಾದರೂ ಸಾಬರಿಂದ ಸಿಗುತ್ತಿತ್ತು. ಆದರೆ ಇಂದು ಹಸು ಖರೀದಿಸಲು ಸಾಬರು ಮುಂದೆ ಬರುತ್ತಿಲ್ಲ. ಸರ್ಕಾರಕ್ಕೆ ಹೆದರುತ್ತಾರೆ. ಒಂದು ಕಾಲಕ್ಕೆ 13 ಹಸು ಸಾಕುತ್ತಿದ್ದ ನಾನು ಎಲ್ಲವನ್ನೂ ಮಾರಿ ಒಂದು ಹಸುವನ್ನು ಮಾತ್ರ ಈಗ ಉಳಿಸಿಕೊಂಡಿದ್ದೇನೆ.”

ಇದನ್ನೂ ಓದಿರಿ: ಮಾಂಸಾಹಾರ ವಿರೋಧಿಸಿ JNU ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ ABVP ದುಷ್ಕರ್ಮಿಗಳು

“ಪ್ಯೂರ್ ಕಡ್ಲೇಕಾಯಿ ಹಿಂಡಿ ಕೆ.ಜಿ.ಗೆ 55 ರೂಪಾಯಿ ಆಗಿದೆ. ಈಗ ಬರುತ್ತಿರುವ ಫೀಡ್ಸ್ ಕೂಡ ಕಲಬೆರಕೆಯಾಗಿದೆ. ತಮಿಳುನಾಡಿನಿಂದ ಮದ್ದೂರಿಗೆ ಬರುವ ಶಾಂತಿ ಫೀಡ್ಸ್‌ನಲ್ಲಿ ಮೊದಲೆಲ್ಲ ಜೋಳವನ್ನು ಕಾಣಬಹುದಿತ್ತು. ಈಗ ಹುಣಸೆ ಬೀಜವನ್ನೂ ಬಳಸಲಾಗುತ್ತಿದೆ. ಸಬ್ಸಿಡಿ ಅಂತ ಕೊಡುವ 5 ರೂಪಾಯಿಯನ್ನು ಲೆಕ್ಕ ಹಾಕಿಕೊಳ್ಳೋಣ. ಲೀಟರ್ ಹಾಲಿಗೆ 29 ರೂಪಾಯಿ ಪಡೆದು ಹಸುವನ್ನು ಸಾಕಲು ಸಾಧ್ಯವಿಲ್ಲ.”

ಇವು ದಿವಾಕರ್ ಅವರ ಮಾತುಗಳು. ಯಾವುದೇ ರೈತರನ್ನು ಮಾತನಾಡಿಸಿದರೂ ಇದೇ ಅನುಭವವನ್ನು ಹೇಳುತ್ತಾರೆ.

’ನ್ಯಾಯಪಥ’ದೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲೆಯ ಮತ್ತೊಬ್ಬ ರೈತ ಸಂತೋಷ್, “1 ಕೆ.ಜಿ. ಹಿಂಡಿ 60 ರೂಪಾಯಿ ಆಗಿದೆ. ರವೆ ಬೂಸಾ 30 ರೂ., ಕಡ್ಲೆ ಬೂಸಾ, ಗೋದಿ ಬೂಸಾ ಕೂಡ ಕೆ.ಜಿ.ಗೆ 30 ಆಗಿದೆ. ಫೀಡ್ಸ್ ಕೂಡ ಕೆ.ಜಿ.ಗೆ 30 ರೂ. ಆಗಿದೆ. ಸಬ್ಸಿಡಿ ಅಂತ ಇದೆ. ಹಾಲಿನಲ್ಲಿ ಫ್ಯಾಟ್ ಇದೆ ಎಂದು ನೆಪವೊಡ್ಡಿ ಅದನ್ನೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಹಾಲು ಖರೀದಿಸುವಾಗ ’ಡಿಗ್ರಿ’ ಮಾನದಂಡವಿತ್ತು. ಈಗ ಫ್ಯಾಟ್ ಎಂಬ ಮಾನದಂಡವನ್ನು ಯಾರು ಸೇರಿಸಿದರೋ, ಯಾಕೆ ಸೇರಿಸಿದರೋ ಗೊತ್ತಿಲ್ಲ” ಎಂದರು.

“ಹಸು ಸಾಕಿದರೆ ಕನಿಷ್ಠ ದಿನಗೂಲಿಯೂ ಹುಟ್ಟುವುದಿಲ್ಲ. ನಾವೇ ಭತ್ತ, ರಾಗಿ ಬೆಳೆದರೆ ಹುಲ್ಲಿನ ವೆಚ್ಚ ತಗ್ಗಬಹುದು. ಹಾಲು ಖರೀದಿಸಿ ಕುಡಿಯುವವರು ದಷ್ಟಪುಷ್ಟವಾಗುತ್ತಿದ್ದಾರೆ. ಆದರೆ ಹಾಲು ಉತ್ಪಾದಕರು ಸೊರಗುತ್ತಿದ್ದಾರೆ. ಸಾಂಪ್ರದಾಯಕ ವೃತ್ತಿ ಎಂದು ರೈತರು ಮುಂದುವರಿಸುತ್ತಿದ್ದಾರೆಯೇ ಹೊರತು, ಇದರಿಂದ ಯಾವುದೇ ಲಾಭವಿಲ್ಲ. ಈಗಿನ ಹಸುಗಳು ಯಾವುದೇ ಕಾಯಿಲೆಗೆ ತಡೆಯುವುದಿಲ್ಲ. ಬೇಗನೇ ಸಾಯುವುದೇ ಹೆಚ್ಚು” ಎನ್ನುತ್ತಾರೆ ಸಂತೋಷ್.

ಒಂದು ಹಸು ವರ್ಷಕ್ಕೆ ಗರಿಷ್ಠ 3,000 ಲೀಟರ್ ಹಾಲು ನೀಡಬಲ್ಲದು. ಅದರ ಮೌಲ್ಯ ಸುಮಾರು 90,000 ರೂ. ಎಂದುಕೊಳ್ಳೋಣ. ಗೊಬ್ಬರದಿಂದ ಸುಮಾರು 5,000 ರೂ. ಬರಬಹುದು. ಆದರೆ ಒಬ್ಬ ರೈತ ಮೇವು, ತನ್ನ ಕೂಲಿ, ಹಸುಗಳಿಗೆ ತಗುಲುವ ಔಷಧ, ನಿರ್ವಹಣಾ ವೆಚ್ಚ ಎಲ್ಲವನ್ನೂ ಸೇರಿಸಿದರೆ 90,000ಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಸಬ್ಸಿಡಿಯೂ ಸೇರಿ ಸಹಕಾರಿ ಸಂಘಗಳು ಪ್ರತಿ ಲೀಟರ್‌ಗೆ ಗರಿಷ್ಠ ರೂ 34 (ಕನಿಷ್ಠ ರೂ 27) ನೀಡುತ್ತಿರುವುದಾಗಿ ಹೇಳಿದರೂ ವಾಸ್ತವಗಳು ಬೇರೆಯೇ ಇದೆ ಎಂಬುದು ರೈತರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. 1 ಲೀಟರ್ ಹಾಲಿಗೆ ಕನಿಷ್ಠ 50 ರೂ.ಗಳನ್ನು ನೀಡಿದರೆ ಈಗಿನ ವೆಚ್ಚವನ್ನು ಸರಿದೂಗಿಸಬಹುದು ಎಂದು ರೈತರು ಲೆಕ್ಕ ಹಾಕುತ್ತಿದ್ದಾರೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಹಾಲಿನ ದರವನ್ನು ಹೆಚ್ಚಿಸದೆ ಇರುವುದೇ ಇದಕ್ಕೆಲ್ಲ ಮೂಲಕಾರಣ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದರ ಏರಿಕೆಯ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಕನಿಷ್ಠ 3 ರೂ.ಗಳ ಹೆಚ್ಚಳವನ್ನು ನಿರೀಕ್ಷಿಸಲಾಗಿದೆಯಾದರೂ ಅದರಿಂದ ರೈತರಿಗೆ ಅನುಕೂಲವಾಗುತ್ತದೆ ಎನ್ನುವುದು ಕಷ್ಟ. ಅವರ ಬೇಡಿಕೆಯನ್ನು ಪೂರ್ಣವಾಗಿ ಸರ್ಕಾರ ಎಂದಿಗೆ ನೆರವೇರಿಸುತ್ತದೆಯೋ ಗೊತ್ತಿಲ್ಲ.

ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರೂ ದರ ಏರಿಕೆಯ ಪ್ರಸ್ತಾಪವನ್ನು ಮಾಡಿದ್ದಾರೆ. “ದರ ಹೆಚ್ಚಿಸಬೇಕೆಂಬ ಬೇಡಿಕೆಗಳ ಬಗ್ಗೆ ನನಗೆ ತಿಳಿದಿದೆ. ಈ ಕುರಿತು ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಜತೆ ಇನ್ನೂ ಚರ್ಚಿಸಿಲ್ಲ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿಯೂ ಚರ್ಚೆ ನಡೆಸಲು ಯೋಜಿಸಿದ್ದೇವೆ” ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.

ಒಟ್ಟು ಹದಿನಾರು ಜಿಲ್ಲೆಗಳಲ್ಲಿ ಹಾಲು ಒಕ್ಕೂಟವನ್ನು ಹೊಂದಿರುವ ಕೆಎಂಎಫ್, ಹತ್ತಾರು ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಅರ್ಧ ಲೀಟರ್ ಪ್ಯಾಕೆಟ್ ನಂದಿನಿ ಹಾಲಿಗೆ 19ರಿಂದ 22ರೂವರೆಗೆ ಪಡೆಯಲಾಗುತ್ತಿದೆ. ಆದರೆ ರೈತ ಒಂದು ಲೀಟರ್ ಹಾಲಿಗೆ ಪಡೆಯುತ್ತಿರುವ ದರ ಮಾತ್ರ ತೀರಾ ಕಡಿಮೆ.

ರಾಜ್ಯದ 15 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಡಿಯಲ್ಲಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15031ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್ 25.91ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಪ್ರತಿ ಜಿಲ್ಲಾ ಹಾಲು ಒಕ್ಕೂಟಗಳೂ ಲಕ್ಷಾಂತರ ಲೀಟರ್ ಹಾಲು ಖರೀದಿಸುತ್ತಿವೆ. ಆದರೆ ಇಷ್ಟು ಪ್ರಮಾಣದ ವಹಿವಾಟು ಹೊಂದಿರುವ ಕ್ಷೇತ್ರದ ಮೂಲ ಪ್ರವರ್ತಕರು ಮಾತ್ರ ಕಷ್ಟದಲ್ಲೇ ಇದ್ದಾರೆ.

ಹೈನುಗಾರಿಕೆ ನೋವಿಗೆ ಮುಲಾಮು ಯಾವುದು?

“ಸಬ್ಸಿಡಿ ಹೆಚ್ಚಳ, ಗೋಹತ್ಯೆ ನಿಷೇಧ ಕಾಯ್ದೆಯ ರದ್ದು” ಹೈನುಗಾರಿಕೆಯ ಸಮಸ್ಯೆಗೆ ಪರಿಹಾರವಾಗಬಹುದು ಎನ್ನುತ್ತಾರೆ ರಾಜಕೀಯ ಹಾಗೂ ಆರ್ಥಿಕ ವಿಶ್ಲೇಷಕರಾದ ಶಿವಸುಂದರ್.

“ಮೊದಲಿನಂತೆ ಹುಲ್ಲುಗಾವಲುಗಳು ಇಂದು ಇಲ್ಲವಾಗಿವೆ. ಎಲ್ಲವೂ ಕೃಷಿ ಜಮೀನುಗಳಾಗಿ ಬದಲಾಗಿವೆ. ಜರ್ಸಿ ಹಸುಗಳನ್ನು ರೈತರು ಅವಲಂಬಿಸಿದ್ದಾರೆ. ಅವುಗಳು ಹೆಚ್ಚಿನ ಪ್ರಮಾಣದ ಹಾಲು ನೀಡಬೇಕೆಂದರೆ ಸರಿಯಾಗಿ ಹಿಂಡಿ, ಬೂಸಾವನ್ನು ಕೊಡಬೇಕಾಗುತ್ತದೆ. ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಹುಲ್ಲನ್ನು ಬೆಳೆದು ಮಾರುವ ದೊಡ್ಡ ಉದ್ಯಮವೇ ಆರಂಭವಾಗಿದೆ. ಉತ್ಪಾದನಾ ವೆಚ್ಚ ಹಾಗೂ ರೈತನಿಗೆ ವಾಪಸ್ ದೊರಕುವ ಹಣವನ್ನು ಹೋಲಿಕೆ ಮಾಡಿದರೆ ಒಂದು ಲೀಟರ್ ಹಾಲಿಗೆ 50 ಪೈಸೆ ಹೆಚ್ಚಿಗೆ ಸಿಗಬಹುದೇನೋ. ಇದನ್ನೇ ನಂಬಿ ಜೀವನವನ್ನು ನಡೆಸುವುದು ಕಷ್ಟ. ಯಾಕೆಂದರೆ ಇತರ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಹಾಲು ಮಾರಾಟದಿಂದಲೇ ಜೀವನ ಸಾಗಬೇಕಾದರೆ ಕನಿಷ್ಠ ಹತ್ತು ರೂಪಾಯಿಯಾದರೂ ಬೆಲೆ ಹೆಚ್ಚಳ ಅಗತ್ಯವಿದೆ. ಆದರೆ ಖರೀದಿಸುವ ಗ್ರಾಹಕ ಅಷ್ಟು ಬೆಲೆಯನ್ನು ತೆರಲು ಸಿದ್ಧನಿಲ್ಲ. ಹೀಗಾಗಿ ಸರ್ಕಾರವೇ ಹೆಚ್ಚಿನ ಸಬ್ಸಿಡಿಯನ್ನು ಕೊಡಬೇಕು. ಗ್ರಾಹಕನ ಮೇಲೆ ಭಾರವನ್ನು ಹಾಕಿದರೆ ಮಾರುಕಟ್ಟೆ ಕುಸಿತ ಕಾಣುತ್ತದೆ. ಸರ್ಕಾರದ ಮಧ್ಯಪ್ರವೇಶವೇ ಈ ಬಿಕ್ಕಟ್ಟಿಗೆ ಪರಿಹಾರ” ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

“ಹಿಂಡಿ, ಬೂಸಾದ ಬೆಲೆ ಕಡಿಮೆ ಮಾಡಬೇಕು ಅಥವಾ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಮುಖ್ಯವಾಗಿ ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ರೈತರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಗೋವನ್ನು ಮಾತೆ ಎಂದು ಭಾವಿಸಿದರೂ ಅಂತಿಮವಾಗಿ ಅವುಗಳನ್ನು ಪೋಷಣೆ ಮಾಡಲೇಬೇಕು. ಮಕ್ಕಳ ಶಾಲಾ ಶುಲ್ಕ ಕಟ್ಟಲೂ ಪರದಾಡುವ ಪೋಷಕರು, ಒಂದು ಹಸುವಿಗೆ ದಿನಕ್ಕೆ 200 ರೂ. ಖರ್ಚು ಮಾಡಿ ಸುಖಾಸುಮ್ಮನೆ ಸಾಕುವುದು ಕಷ್ಟವಾಗುತ್ತದೆ. ಈ ಹಿಂದೆಲ್ಲ ಹಾಲು ಕೊಡದ ಹಸುವನ್ನು ಅರ್ಧ ಬೆಲೆಗೆ ಮಾರಿ, ಹಾಲು ಕೊಡುವ ಹಸು ಖರೀದಿಸಿ ಜೀವನ ಸಾಗಿಸಲಾಗುತ್ತಿತ್ತು. ಹಾಲು ಕೊಡದ ಹಸುವನ್ನು ಮಾಂಸಕ್ಕಲ್ಲದೆ ಮತ್ಯಾವುದಕ್ಕೂ ಯಾರೂ ಖರೀದಿಸುವುದಿಲ್ಲ. ಈಗ ಅದರ ಮೇಲೂ ದೊಡ್ಡ ಪೆಟ್ಟು ಬಿದ್ದಿದೆ. ಸಂಸ್ಕೃತಿ ಹೆಸರಲ್ಲಿ ಅಧ್ವಾನ ಮಾಡುತ್ತಿರುವವರಿಗೆ ಈ ಸಮಸ್ಯೆ ಅರಿವಾಗುವುದಿಲ್ಲ. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೇ ರದ್ದು ಮಾಡಲೇಬೇಕಿದೆ” ಎಂದು ಆಗ್ರಹಿಸಿದರು.

ಸರ್ಕಾರ ಸಬ್ಸಿಡಿಯನ್ನು ರೈತರಿಗೆ ನೀಡುತ್ತಿಲ್ಲ: ಎಂ.ಎಸ್.ಶ್ರೀರಾಮ್

ಸಹಕಾರಿ ಕ್ಷೇತ್ರದ ಆಳ ಅಗಲ ತಿಳಿದಿರುವ ಐಐಎಂಬಿ ಪ್ರೊಫೆಸರ್ ಎಂ.ಎಸ್.ಶ್ರೀರಾಮ್ ಅವರು ’ನ್ಯಾಯಪಥ’ದೊಂದಿಗೆ ಮಾತನಾಡಿ, “ಕೆಎಂಎಫ್ ಸರ್ಕಾರದ ಹಿಡಿತದಿಂದ ಹೊರಬರಬೇಕು. ಸಬ್ಸಿಡಿ ಮಾದರಿ ಬದಲಾಗಬೇಕು” ಎಂದರು.

“ಹಾಲಿನ ದರ ಮಾರುಕಟ್ಟೆಯಲ್ಲಿ ಹೆಚ್ಚಳ ಮಾಡಿದರೆ ಮಧ್ಯಮ ವರ್ಗದ ಜನ ರೊಚ್ಚಿಗೇಳುತ್ತಾರೆ. ಹೀಗಾಗಿ ಹಾಲಿನ ದರವನ್ನು ಹೆಚ್ಚಿಸಲು ಕೆಎಂಎಫ್‌ಗೆ ಅವಕಾಶವನ್ನು ಸರ್ಕಾರ ನೀಡುತ್ತಿಲ್ಲ. ಗುಜರಾತ್‌ನಲ್ಲಿ ಅಮುಲ್ ಸರ್ಕಾರದ ಹಿಡಿತದಿಂದ ಹೊರಗಿದೆ. ರೈತರ ವೆಚ್ಚಕ್ಕೆ ಅನುಗುಣವಾಗಿ ದರವನ್ನು ಏರಿಕೆ ಮಾಡುತ್ತಿದೆ. ಅಮುಲ್‌ನಂತೆಯೇ ರೈತರ ಸಂಸ್ಥೆಯಾಗಿರುವ ಕೆಎಂಎಫ್, ಸರ್ಕಾರದ ಹಿಡಿತದಿಂದ ಹೊರಬರುವುದು ಅನಿವಾರ್ಯ” ಎಂದು ತಿಳಿಸಿದರು.

ಇದನ್ನೂ ಓದಿ: ನಂದಿನಿ ಹಾಲಿನ ದರ ಲೀಟರ್‌ಗೆ 3 ರೂ. ಹೆಚ್ಚಿಸಲು ಹಾಲು ಒಕ್ಕೂಟಗಳ ಒತ್ತಾಯ

ಸಬ್ಸಿಡಿ ಕುರಿತು ಮಾತನಾಡಿದ ಅವರು, “ರೈತರಿಗೆ ಸಹಾಯಧನ ನೀಡಲಾಗುತ್ತಿದೆ ಎಂದು ಮೇಲುನೋಟಕ್ಕೆ ಕಾಣುತ್ತಿದೆ. ಆದರೆ ಇದು ವಾಸ್ತವದಲ್ಲಿ ಗ್ರಾಹಕನಿಗೆ ನೀಡುತ್ತಿರುವ ಸಬ್ಸಿಡಿಯಾಗಿದೆ. ಸರ್ಕಾರದ ಸಹಾಯಧನದಿಂದ ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ಹಾಲು ದೊರಕುತ್ತಿದೆ ಹೊರತು ರೈತನಿಗೆ ಯಾವುದೇ ಅನುಕೂಲವಾಗಿಲ್ಲ. ಗ್ರಾಹಕ ಹೆಚ್ಚು ಬೆಲೆ ಕೊಟ್ಟು ಖರೀದಿಸಿದಾಗ ಮಾತ್ರ ರೈತನಿಗೆ ಸಬ್ಸಿಡಿಯ ಅನುಕೂಲವಾಗುತ್ತದೆ” ಎಂದು ವಿಶ್ಲೇಷಿಸಿದರು.

“ರೈತರಿಗೆ ಸಬ್ಸಿಡಿ ಕೊಡುತ್ತಿದ್ದಾರೆ ನಿಜ. ಆದರೆ ಗ್ರಾಹಕರಿಂದ ಹೆಚ್ಚಿನ ದರವನ್ನು ಪಡೆದಾಗ ಮಾತ್ರ ರೈತರಿಗೆ ನೀಡುತ್ತಿರುವ ಸಬ್ಸಿಡಿಗೆ ಬೆಲೆ ಬರುತ್ತದೆ. ಮಾರುಕಟ್ಟೆ ವೆಚ್ಚವೂ ರೈತನಿಗೆ ತಲುಪುತ್ತಿಲ್ಲ. ಉದಾಹರಣೆಗೆ ನಾವು ಲೀಟರ್ ಹಾಲಿಗೆ 50 ರೂ ನೀಡಬೇಕಿತ್ತು. ಆದರೆ ನಾವು ನೀಡುತ್ತಿರುವುದು 45 ರೂ. ಮಾತ್ರ. ಇಲ್ಲಿ ಗ್ರಾಹಕನಿಗೆ ಅನುಕೂಲವಾಯಿತೇ ಹೊರತು, ರೈತನಿಗಲ್ಲ. ರೈತಸ್ನೇಹಿ ಸರ್ಕಾರ ಎಂಬ ಹಣೆಪಟ್ಟಿಯ ನಿಜಸ್ಥಿತಿ ಇದು. ಮಧ್ಯಮ ವರ್ಗಕ್ಕೆ, ಮೇಲ್ಮಧ್ಯಮ ವರ್ಗಕ್ಕೆ ಸಬ್ಸಿಡಿ ಏಕೆ?” ಎಂದು ಪ್ರಶ್ನಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...