Homeಮುಖಪುಟಕರ್ನಾಟಕ ಬಜೆಟ್ 2020-21 ಮತ್ತು ಕನ್ನಡ ಮಾಧ್ಯಮಗಳ ಪಕ್ಷಪಾತ

ಕರ್ನಾಟಕ ಬಜೆಟ್ 2020-21 ಮತ್ತು ಕನ್ನಡ ಮಾಧ್ಯಮಗಳ ಪಕ್ಷಪಾತ

- Advertisement -
- Advertisement -

ಹೋದವಾರ ಕರ್ನಾಟಕ ರಾಜ್ಯ ಬಜೆಟ್ 2020-21 ಮಂಡನೆಯಾಯ್ತು. ಮರುದಿನ ಅದನ್ನು ಕನ್ನಡ ಪತ್ರಿಕೆಗಳು ಒಂದು ರೀತಿಯಲ್ಲಿ ವರದಿ ಮಾಡಿದರೆ, ಇಂಗ್ಲಿಷ್ ಪತ್ರಿಕೆಗಳು ಬರೆದ ವರದಿಗಳು ಇನ್ನೊಂದು ರೀತಿಯಲ್ಲಿದ್ದವು. ಕನ್ನಡ ಪತ್ರಿಕೆಗಳ ಮುಖ್ಯ ಶೀರ್ಷಿಕೆಗಳು ಬಜೆಟ್ ಸರ್ವರ ಹಿತ ಸಾಧಿಸಿದೆ ಎಂದು ಸಾರಿದರೆ, ಇಂಗ್ಲಿಷ್ ಪತ್ರಿಕೆಗಳು ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಈ ಬಜೆಟ್ ಜನಜೀವನದ ಮೇಲೆ ಬರೆ ಎಳೆದಿದೆ ಮತ್ತು ಹೊರೆ ಹೇರಿದೆ ಎನ್ನುವ ಅರ್ಥದಲ್ಲಿ ಬರೆದವು. ಕನ್ನಡದ ಅತೀ ಹೆಚ್ಚು ಪ್ರಸಾರವುಳ್ಳ ಮೂರು ಪತ್ರಿಕೆಗಳ ಪೈಕಿ ಒಂದು ಪತ್ರಿಕೆ ಬಜೆಟ್‍ನಲ್ಲಿ ‘ಸರ್ವೋದಯ’ವನ್ನು ಕಂಡಿತು, ಇನ್ನೊಂದು ಪತ್ರಿಕೆ ಅದರಲ್ಲಿ “ಸರ್ವಸ್ಪರ್ಶ” ವನ್ನು ಶೋಧಿಸಿ ತೆಗೆಯಿತು. ಇನ್ನೊಂದು ಪತ್ರಿಕೆ ಬಜೆಟ್ “ಸರ್ವರಿಗೂ ಫಲ” ನೀಡಿದೆ ಎಂದು ಸಾರಿತು. ಇನ್ನೊಂದು ಕನ್ನಡ ಪತ್ರಿಕೆ ತನ್ನ ಮಾಮೂಲು ವರಸೆ ಬದಲಿಸಿ ಬಜೆಟ್ ನಲ್ಲಿ ‘ಕಲ್ಯಾಣ ಕರ್ನಾಟಕ” ಇದೆ ಎಂದಿತು.. ಹೀಗೆ ಕನ್ನಡ ಪತ್ರಿಕೆಗಳು ಈ ಬಜೆಟ್‍ನಲ್ಲಿ ಸರ್ವರ ಏಳಿಗೆಯನ್ನು ಕಂಡರೆ, ಪ್ರಮುಖ ಮೂರು ಇಂಗ್ಲಿಷ್ ಪತ್ರಿಕೆಗಳು ತಮ್ಮತಮ್ಮ ಮುಖಪುಟದಲ್ಲಿ ಪ್ರಕಟಿಸಿದ ಬಜೆಟ್ ಕುರಿತ ಪ್ರಧಾನ ಶೀರ್ಷಿಕೆಗಳನ್ನು ಈ ರೀತಿಯಾಗಿ ಅನುವಾದಿಸಬಹುದು. ಒಂದು ಪತ್ರಿಕೆ “ಜನತೆಯ ಕಷ್ಟಗಳಿಗೆ ಶಮನ ನೀಡದೆ ಅಗತ್ಯ ವಸ್ತುಗಳ ಬೆಲೆ ಏರಿಸಿದ” ಬಜೆಟ್ ಅಂತ ಬರೆಯಿತು. ಇನ್ನೊಂದು ಪತ್ರಿಕೆಯ ಪ್ರಕಾರ ಅದು “ಇಂಧನದ ಬೆಲೆ ಏರಿಸಿ ಕೃಷಿ, ನೀರಾವರಿಗೆ ಹಣ ಹಂಚಿದ” ಬಜೆಟ್ ಆಗಿತ್ತು. “ಜನತೆ ಮೇಲೆ ತೆರಿಗೆಯ ಭಾರ, ಕೇಂದ್ರದ ಮೇಲೆ ನೆರವಿಗೊದಗದ ಆರೋಪ” ಅಂತ ಮತ್ತೊಂದು ಇಂಗ್ಲಿಷ್ ಪತ್ರಿಕೆ ಬಜೆಟ್‍ನ ಸಾರವನ್ನು ಹಿಡಿದಿಟ್ಟಿತು.

ಈ ಸಾಲಿನ ಬಜೆಟ್ ಹಲವು ಕಾರಣಗಳಿಗೆ ವಿಶೇಷ ಅಂತ ಅನ್ನಿಸುತ್ತದೆ. ಬಜೆಟ್ ಕುರಿತು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಹೀಗೆ ತದ್ವಿರುದ್ಧ ಅರ್ಥದ ವರದಿಗಳು ಬಂದದ್ದು ಕೂಡಾ ಒಂದು ವಿಶೇಷವೇ. ಕನ್ನಡ ಪತ್ರಿಕೆಗಳು ಹೀಗೆ ಪರಸ್ಪರ ತಮ್ಮೊಳಗೆ ಪರಸ್ಪರ ಚರ್ಚಿಸಿ ನಿರ್ಧಾರಕ್ಕೆ ಬಂದಂತೆ ಒಂದೇ ರೀತಿಯ ಅರ್ಥ ಬರುವ, ಹೆಚ್ಚುಕಡಿಮೆ ಒಂದೇ ರೀತಿಯ ಪದಪುಂಜಗಳ ಶೀರ್ಷಿಕೆ ನೀಡಿದ್ದು ವಿಶೇಷ ಮಾತ್ರವಲ್ಲ, ಒಂದು ರೀತಿಯಲ್ಲಿ ಸಂಶಯ ಮೂಡಿಸುವ ವಿದ್ಯಮಾನವೂ ಆಗಿದೆ. ಆ ಸಂಶಯದ ಎಳೆ ಹಾಗೆಯೇ ಇರಲಿ. ಅದನ್ನು ಹಿಡಿದು ಇಲ್ಲಿ ತನಿಖೆ ನಡೆಸುವ ಉದ್ದೇಶ ಇಲ್ಲ. ಆದರೆ ಈ ರೀತಿಯ ಬಜೆಟ್ ವರದಿಗಾರಿಕೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳಬೇಕಿದೆ.

ಮುಖ್ಯವಾಗಿ ಈ ಸಾಲಿನ ಬಜೆಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯ ಸರಕಾರ ತೆರಿಗೆ ಹೇರಿದೆ. ರಾಜ್ಯ ಸರಕಾರ ಹೀಗೆ ಇಂಧನದ ಮೇಲೆ ತೆರಿಗೆ ಹೇರಿಸದೆ ಅದೆಷ್ಟೋ ಕಾಲವಾಗಿತ್ತು. ಯಾಕೆಂದರೆ, ಕರ್ನಾಟಕ ರಾಜ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅತೀಹೆಚ್ಚು ತೆರಿಗೆ ವಿಧಿಸುತ್ತಿರುವ ರಾಜ್ಯಗಳಲ್ಲಿ ಒಂದು. ಇದನ್ನು ಕಡಿಮೆ ಮಾಡಬೇಕು ಎಂದು ವರ್ಷಗಳಿಂದ ಬೇಡಿಕೆ ಬೇರೆ ಇತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದರೆ ಅದರ ಹೊರೆ ಸರ್ವರ ಮೇಲೆ ಬೀಳುತ್ತದೆ, ಪ್ರಯಾಣದ, ಸರಕು ಸಾಗಾಟದ ದರ ಹೆಚ್ಚುತ್ತದೆ ಎನ್ನುವುದನ್ನು ತಿಳಿಯಲು ಅತ್ತ ಅರ್ಥಶಾಸ್ತ್ರವನ್ನೂ ಓದಿಕೊಂಡಿರಬೇಕಿಲ್ಲ, ಇತ್ತ ಪತ್ರಿಕೋದ್ಯಮವನ್ನೂ ಅಧ್ಯಯನಮಾಡುವ ಅಗತ್ಯವೇನಿಲ್ಲ. ಕೊರೊನಾ ಸೋಂಕಿನಿಂದ ಸದ್ಯ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದೆ ಮತ್ತು ಆ ಕಾರಣಕ್ಕೆ ಭಾರತದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ತುಸು ಇಳಿಮುಖವಾಗಿದೆ. ಈ ಇಳಿಕೆ ಮುಂದುವರಿಯದೆ ಇದ್ದಲ್ಲಿ, ಏಪ್ರಿಲ್ ಒಂದರಿಂದ ರಾಜ್ಯ ಸರಕಾರ ಪೆಟ್ರೋಲ್-ಡೀಸೆಲ್ ಬೆಲೆಗಳ ಮೇಲೆ ವಿಧಿಸಿದ ತೆರಿಗೆ ಬಿಸಿಯೂ ಜನಸಾಮಾನ್ಯರನ್ನು ಬಾಧಿಸಲಿದೆ.

ಅಷ್ಟು ಮಾತ್ರವಲ್ಲ. ಸಾಮಾನ್ಯವಾಗಿ ಸರಕಾರಗಳು ಮಾಡದ ಮತ್ತು ಮಾಡಲೇಬಾರದ ಇನ್ನೊಂದು ಕ್ರಮವನ್ನೂ ಕರ್ನಾಟಕ ಸರಕಾರ ಈ ಬಾರಿಯ ಬಜೆಟ್‍ನಲ್ಲಿ ಕೈಗೊಂಡಿದೆ. ಅದು ಆಹಾರದ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿದ್ದು. ಹೇಳಿಕೇಳಿ ಎಲ್ಲರೂ ಎಲ್ಲೆಡೆ ಉದ್ಯೋಗ ಕಳೆದುಕೊಳ್ಳುತ್ತಿರುವ, ಸಂಬಳ ಸಾರಿಗೆಗಳು ವಿಶೇಷವಾಗಿ ಏರಿಕೆ ಕಾಣದ ಈ ದಿನಗಳಲ್ಲಿ ಮೂಲಭೂತ ಅಗತ್ಯಗಳಲ್ಲಿ ಮೂಲಭೂತ ಅಗತ್ಯವಾಗಿರುವ ಆಹಾರಕ್ಕೆ ನೀಡುವ ನೆರವನ್ನು ಸರಕಾರ ಹಿಂತೆಗೆದುಕೊಳ್ಳುವುದು ಒಂದು ರೀತಿಯ ಆರ್ಥಿಕ ಕ್ರೌರ್ಯ. ಅದೂ ಈ ಇಳಿಕೆ ಸಣ್ಣ ಪ್ರಮಾಣದ್ದೇನಲ್ಲ. ಸುಮಾರು 3700 ಕೋಟಿಗಳಷ್ಟಿದ್ದ ಆಹಾರ ಸಬ್ಸಿಡಿಯನ್ನು 2546 ಕೋಟಿಗಳಿಗೆ ಇಳಿಸಲಾಗಿದೆ. ಇದು ಬರೋಬ್ಬರಿ ಶೇಕಡಾ 32 ರಷ್ಟಾಗುತ್ತದೆ. ಪೆಟ್ರೋಲ್ ಬೆಲೆಏರಿಕೆಯ ಪರಿಣಾಮವಾಗಿಯೂ ಆಹಾರ ಉತ್ಪನ್ನಗಳ ಬೆಲೆ ಏರಲಿದೆ. ಆ ಮಟ್ಟಿಗೆ ಬಡವರ ಅನ್ನದ ಮೇಲೆ ಬಜೆಟ್ ಎಳೆದದ್ದು ದೊಡ್ಡಮಟ್ಟದ ಬರೆ. ಅಷ್ಟು ಮಾತ್ರವಲ್ಲ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡುವ ನೆರವೂ ಸೇರಿದಂತೆ ಸಮಾಜ ಕಲ್ಯಾಣ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳು ಮುಂತಾದ ಚಟುವಟಿಕೆಗಳಿಗೆ (ಬಜೆಟ್ ಭಾಷೆಯಲ್ಲಿ ಎಕನಾಮಿಕ್ ಸರ್ವಿಸಸ್) ನೀಡಲಾಗುವ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಹೋದವರ್ಷ ಈ ಬಾಬತ್ತು ರೂ. 68,296 ಕೋಟಿ ಮೀಸಲಿರಿಸಿದ್ದರೆ, ಈ ಸಾಲಿಗೆ ಅದನ್ನು ರೂ. 65,046 ಕೋಟಿಗೆ ಇಳಿಸಲಾಗಿದೆ. ಅಂದರೆ ಸುಮಾರು ರೂ. 3250 ಕೋಟಿಗಳಷ್ಟು ಇಳಿಕೆ. ಇದೆರೀತಿ ವಸತಿ ಯೋಜನೆಗಳಿಗೆ ನೀಡಲಾಗುವ ಹಣ ಕಡಿತವಾಗಿದೆ, ಮಹಿಳಾ ಯೋಜನೆಗಳಿಗೆ ನೀಡುವ ಹಣವನ್ನು ಇಳಿಸಲಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ವರ್ಗ ಪಡೆಯುತ್ತಿರುವ ಎಲ್ಲಾ ರೀತಿಯ ನೆರವುಗಳಿಗೆ ಕುತ್ತು ತರುವ ರೀತಿಯಲ್ಲಿ ಈ ಬಜೆಟ್ ರೂಪುಗೊಂಡಿದೆ.

ಹೀಗೆಲ್ಲಾ ಮಾಡುವುದಕ್ಕೆ ಕೇಂದ್ರ ಸರಕಾರ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾಗಿರುವ ತೆರಿಗೆಯ ಪಾಲನ್ನು ನೀಡದಿರುವುದೇ ಕಾರಣ ಎನ್ನುವುದು ಗಮನಿಸಬೇಕಾದ ವಿಚಾರ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಬಜೆಟ್ ಮಂಡಿಸುವ ವೇಳೆ ಅಧಿಕೃತವಾಗಿ ಹೇಳಿಬಿಟ್ಟಿದ್ದಾರೆ. ಹೀಗೆ ತನ್ನದೇ ಪಕ್ಷದ ಕೇಂದ್ರ ಸರ್ಕಾರದ ಮೇಲೆ ಬಜೆಟ್ ಮಂಡಿಸುವ ವೇಳೆ ಸರಿಯಾಗಿ ಪಾಲು ನೀಡದ ಆರೋಪವನ್ನು ಹೊರಿಸಿದ ವಿದ್ಯಮಾನವೂ ಈ ಬಾರಿಯ ಬಜೆಟ್‍ನ ವಿಲಕ್ಷಣವಾದ ವಿಶೇಷತೆ. ಅದೇನೇ ಇರಲಿ. ಜನಸಾಮಾನ್ಯರಿಗೆ ಹೊರೆಯಾಗುವ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸರಕಾರಕ್ಕೆ ಇದ್ದಿರಬಹುದಾದ ಆರ್ಥಿಕ ಅನಿವಾರ್ಯತೆಗಳು ಮತ್ತು ರಾಜಕೀಯ ಅಸಹಾಯಕತೆಗಳು ಇಲ್ಲಿ ಮುಖ್ಯವಲ್ಲ. ಮುಖ್ಯ ಪ್ರಶ್ನೆ ಏನೆಂದರೆ ಸರ್ವತ್ರ ಜನಜೀವನವನ್ನು ಬಾಧಿಸಲಿರುವ ಒಂದು ಆಯವ್ಯಯ ಪತ್ರ ಕನ್ನಡ ಮಾಧ್ಯಮಗಳ ಕಣ್ಣಿಗೆ ಮಾತ್ರ “ಸರ್ವಜನ ಹಿತಾಯ, ಸರ್ವಜನ ಸುಖಾಯ” ತತ್ವದ ಜೀವಂತ ಪ್ರಕಟಣೆಯಾಗಿ ಕಂಡದ್ದು ಹೇಗೆ ಎನ್ನುವುದು. ಒಂದು ಪತ್ರಿಕೆ ಮಾತ್ರ ” ಸರ್ವರಿಗೂ ಫಲ” ಎನ್ನುವುದರ ಜತೆ “ಪೆಟ್ರೋಲ್ ಶೂಲ” ಅಂತಲೂ ಹೇಳಿಕೊಂಡಿದೆ. ಸಮತೋಲನ ಕಾಯ್ದುಕೊಂಡಿದೆ. ಉಳಿದ ಕನ್ನಡ ಪತ್ರಿಕೆಗಳೂ ವರದಿಯ ಒಳಗಡೆ ಬಜೆಟ್‍ನ ಮಿತಿಗಳನ್ನು ಹೇಳಿ ತಿಪ್ಪೆ ಸಾರಿಸಿಕೊಂಡಿವೆ. ಸಣ್ಣ ಪ್ರಿಂಟ್‍ನಲ್ಲಿ ಸತ್ಯ ಹೇಳುವುದು, ದೊಡ್ಡ ಅಕ್ಷರಗಳಲ್ಲಿ ಅರ್ಧ ಸತ್ಯ ಹೇಳಿ ದಾರಿ ತಪ್ಪಿಸುವುದು ಆಧುನಿಕ ಮಾಧ್ಯಮ ಧರ್ಮ (ವಿಶೇಷವಾಗಿ ಕನ್ನಡ ಮಾಧ್ಯಮ ಧರ್ಮ). ರಾಜ್ಯ ಬಜೆಟ್‍ನ ವರದಿಗಾರಿಕೆಯಲ್ಲಿ ಇದು ಈ ಪರಿ ಕಾಣಿಸಿಕೊಂಡದ್ದು ಇದೇ ಮೊದಲಿರಬೇಕು.

ಬಜೆಟ್‍ನ ಮೂಲಕ ಏನೇನೋ ಸಾಧಿಸಿಬಿಡುತ್ತೇವೆ ಎನ್ನುವ ನಾಯಕರ ಮಾತುಗಳ ಮತ್ತು ಬಜೆಟ್‍ನ ಮೂಲಕ ಎಲ್ಲರ ಸಮಸ್ಯೆಯೂ ಪರಿಹಾರವಾಗಿಬಿಡಬೇಕು ಎನ್ನುವ ರೀತಿಯಲ್ಲಿ ಮಾಧ್ಯಮಗಳು ಸೃಷ್ಟಿಸುವ ಸಾರ್ವಜನಿಕ ನಿರೀಕ್ಷೆಗಳ ಸತ್ಯಾಸತ್ಯತೆ ತಿಳಿಯಬೇಕಾದರೆ ಬಜೆಟ್ ಎಂದರೆ ಏನು ಅಂತ ತಿಳಿದುಕೊಳ್ಳಬೇಕು. ಬಜೆಟ್ ಎಂದರೆ ಆಯವ್ಯಯದ ತಖ್ತೆ. ಸರಕಾರಕ್ಕೆ ಹಣ ಬರುವುದು ತೆರಿಗೆಗಳ ಮೂಲಕ. ಹಾಗೆಂದು ತೆರಿಗೆ ವಿಧಿಸಿ ಬೇಕಾದ ಹಾಗೆ ಸರಕಾರದ ಆದಾಯ ಹೆಚ್ಚಿಸುವ ಹಾಗಿಲ್ಲ. ತೆರಿಗೆ ಹೆಚ್ಚಿದಾಕ್ಷಣ ತೆರಿಗೆ ನೀಡದೆ ತಪ್ಪಿಸಿಕೊಳ್ಳುವುದು ಹೆಚ್ಚುತ್ತದೆ ಎನ್ನುವುದು ಅರ್ಥಶಾಸ್ತ್ರದ ಸಿದ್ದಾಂತ. ಅದಕ್ಕಿಂತಲೂ ಮುಖ್ಯವಾಗಿ ತೆರಿಗೆ ಹೆಚ್ಚಿಸಿದರೆ ಬೆಲೆ ಹೆಚ್ಚುತ್ತದೆ. ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಕೊಳ್ಳುವವರಿಲ್ಲದಾಗ ಉತ್ಪಾದನೆ ಕಡಿಮೆಯಾಗುತ್ತದೆ. ಒಟ್ಟು ಅರ್ಥವ್ಯವಹಾರವೇ ಕುಗ್ಗಿ ಸರಕಾರ ತೆರಿಗೆ ಹೆಚ್ಚಿಸುವ ಮೂಲಕ ಪಡೆಯಲು ಉದ್ದೇಶಿಸಿದ ಹೆಚ್ಚಿನ ಆದಾಯ ಬಾರದೇ, ಅದು ಕಡಿಮೆಯಾಗುವ ಸಾಧ್ಯತೆ ಇದೆ. ಒಂದುವೇಳೆ ನಿರೀಕ್ಷಿತ ಆದಾಯ ಬಂದರೂ ತೆರಿಗೆ ಹೆಚ್ಚಳ ಸರಕಾರದ ಜನಪ್ರಿಯತೆಯನ್ನು ಕುಗ್ಗಿಸುತ್ತದೆ. ಇದು ಆಯದ ವಿಚಾರವಾಯಿತು.

ವ್ಯಯದ ವಿಚಾರಕ್ಕೆ ಬಂದರೆ ಮನೆ ನಡೆಸುವ ಯಜಮಾನ ತನ್ನ ವರಮಾನದಲ್ಲಿ ಹಾಲಿನವನಿಗೆ ಇಷ್ಟು, ಪೇಪರಿನವನಿಗೆ ಇಷ್ಟು, ದಿನಸಿ ಸಾಮಗ್ರಿಗಳಿಗೆ ಇಷ್ಟು ಅಂತ ಹಣ ತೆಗೆದಿಡುವಂತೆ, ಸರಕಾರ ಕೂಡಾ ಸಂಬಳ ನೀಡಲು ಇಷ್ಟು, ಶಾಲೆ ಆಸ್ಪತ್ರೆ ನಡೆಸಲು ಇಷ್ಟು ಅಂತ ನೀಡಲೇಬೇಕು. ಇದನ್ನು ಬಿಜೆಪಿ ಸರಕಾರವಿದ್ದರೂ ಮಾಡಬೇಕು, ಕಾಂಗ್ರೆಸ್ ಸರಕಾರವಿದ್ದರೂ ಮಾಡಬೇಕು. ಇನ್ನು ಬಜೆಟ್‍ನ ಮೂಲಕ ಅಭಿವೃದ್ಧಿ ಎಂದರೆ ಸಂಬಳ ನೀಡಿ ಉಳಿದ ಹಣವನ್ನು ಬಳಸುವಲ್ಲಿ ಯಾವಯಾವ ಕ್ಷೇತ್ರಗಳಿಗೆ ಎಷ್ಟು ಆದ್ಯತೆ ನೀಡಲಾಗಿದೆ ಎನ್ನುವ ವಿಚಾರ. ಈ ಆದ್ಯತೆಗಳು ಸಾಮಾನ್ಯವಾಗಿ ಸರಕಾರದಿಂದ ಸರಕಾರಕ್ಕೆ ಬದಲಾಗುವುದಿಲ್ಲ. ಬದಲಾಯಿಸುವ ಅಗತ್ಯವೂ ಇರುವುದಿಲ್ಲ. ಹೆಚ್ಚೆಂದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಆದಾಯದ ಆಧಾರದ ಮೇಲೆ ಕೆಲ ಕ್ಷೇತ್ರಗಳ ಅನುದಾನದಲ್ಲಿ ಹೆಚ್ಚಳ ಮಾಡಬಹುದು. ಉದಾಹರಣೆಗೆ ಕರ್ನಾಟಕದಲ್ಲಿ ಕೃಷಿ, ನೀರಾವರಿ ಇತ್ಯಾದಿ ಎಷ್ಟೋ ದಶಕಗಳಿಂದ ಆದ್ಯತೆಯ ವಲಯಗಳು. ಅವು ಹಾಗೆಯೇ ಮುಂದುವರಿಯುತ್ತವೆ, ಈ ಬಾರಿಯೂ ಅದೇ ಆಗಿದೆ. ಆದುದರಿಂದ ಬಜೆಟ್‍ನ ಮೂಲಕ ಕ್ರಾಂತಿಕಾರಿ ಎನ್ನುವ ಅಭಿವೃದ್ಧಿಯನ್ನು ಸಾಧಿಸಲು ಬರುವುದಿಲ್ಲ. ಇದು ಸರಕಾರ ನಡೆಸುವವರಿಗೆ ಗೊತ್ತು. ಆದುದರಿಂದ ಬಜೆಟನ್ನು ಆಕರ್ಷಕವಾಗಿಯೂ, ಜನಪರವಾಗಿಯೂ ಪ್ಯಾಕೇಜ್ ಮಾಡಲು ಪ್ರತೀವರ್ಷ ಒಂದಷ್ಟು ಹೊಸ ಯೋಜನೆಗಳನ್ನು, ಹೊಸ ಹೊಸ ಹೆಸರಿನಲ್ಲಿ ಘೋಷಿಸಲಾಗುತ್ತದೆ. ಮುಂದಿನ ಬಜೆಟ್ ಹೊತ್ತಿಗೆ ಮರೆತೇಹೋಗುವ ಈ ಆಕರ್ಷಕ ಹೆಸರುಗಳ ಸಣ್ಣ ಪುಟ್ಟ ಯೋಜನೆಗಳ ಆಧಾರದಲ್ಲೇ ಮಾಧ್ಯಮಗಳು ಬಜೆಟ್‍ನ ಗುಣಾವಗುಣಗಳನ್ನು ನಿರ್ಧರಿಸಿಬಿಡುವ ಜಾಯಮಾನದಿಂದಾಗಿ ಜನರು ಬಜೆಟ್ ವಾಸ್ತವಾಂಶಗಳನ್ನೇ ತಿಳಿದುಕೊಳ್ಳಲಾಗದ ಸ್ಥಿತಿ ಇದೆ. ಮುಖ್ಯವಾಗಿ ರಾಜ್ಯ ಬಜೆಟ್‍ಗಳ ವಿಷಯದಲ್ಲಿ ಹೀಗಾಗುತ್ತಿದೆ.

ಆದರೆ, ಸಾಮಾನ್ಯ ಜನ ತಮ್ಮ ಅರ್ಥ ಬದುಕಿನಲ್ಲಿ ಅನುಭವಿಸುವ ಒತ್ತಡವನ್ನು ಕಡಿಮೆ ಮಾಡಲು ಕಾಲಕಾಲಕ್ಕೆ ಸರಕಾರಗಳು ಹಾಕಿಕೊಂಡ ಆದ್ಯತಾ ಯೋಜನೆಗಳಿಗೆ ನೀಡಲಾದ ಅನುದಾನವನ್ನು ಭಾರೀ ಕಡಿತಗೊಳಿಸಿದ ಬಜೆಟ್ ಒಂದನ್ನು ಸರ್ವರ ಹಿತ ಕಾಯುವ ಬಜೆಟ್ ಅಂತ ಬಣ್ಣಿಸುವಷ್ಟು ಕನ್ನಡ ಮಾಧ್ಯಮಗಳು ಪಕ್ಷಪಾತಿಗಳಾಗಬಾರದಿತ್ತು ಅಥವಾ ವಿವೇಚನಾ ಶೂನ್ಯರಾಗಬಾರದಿತ್ತು. ಹೀಗೆ ಬಣ್ಣಿಸುವುದಕ್ಕೆ ಕೆಲ ಪತ್ರಿಕೆಗಳು ನೀಡಿದ ಕಾರಣ ಎಂದರೆ, ಬಜೆಟ್‍ನಲ್ಲಿ ಹಲವಾರು ಜಾತಿ ಪಂಗಡಗಳನ್ನು ಗುರುತಿಸಿ ಹಣ ನೀಡಲಾಗಿದೆ ಎನ್ನುವುದು. ಒಂದು ಪತ್ರಿಕೆಯ ಒಕ್ಕಣೆ ಹೀಗಿದೆ: ‘ಹಾಗಿದ್ದರೂ…ಉಪ್ಪಾರ, ಅಂಬಿಗ, ವಿಶ್ವಕರ್ಮ, ಗೊಲ್ಲರಂತಹ ತಳ ಸಮುದಾಯಗಳ ಅಭಿವೃದ್ಧಿಗೆ ಅನ್ನದಾನ ಕೊಟ್ಟಿದ್ದಾರೆ. ಬಸವಣ್ಣ, ಕೆಂಪೇಗೌಡರಂತಹ ಇತಿಹಾಸ ಪುರುಷರ ಪ್ರತಿಮೆಗಳ ಸ್ಥಾಪನೆಗೂ ಧನಸಹಾಯ ನೀಡಲಾಗಿದೆ.. ‘ ಆ ಜಾತಿಗೆ ಅಷ್ಟು, ಈ ಜಾತಿಗೆ ಇಷ್ಟು ಎಂದು ಹಂಚುವುದು ಬಜೆಟ್‍ನ ಭಾಗವೂ ಅಲ್ಲ, ಆರ್ಥಿಕ ನಿರ್ವಹಣೆಯ ಕ್ರಮವೂ ಅಲ್ಲ. ವಾಸ್ತವದಲ್ಲಿ ಮಾಧ್ಯಮಗಳು ಇಂತಹ ಕ್ರಮಗಳನ್ನು ಪ್ರಶ್ನಿಸಬೇಕು, ಟೀಕಿಸಬೇಕು. ನೂರಾರು-ಸಾವಿರಾರು ಜಾತಿಗಳಿರುವ ಈ ರಾಜ್ಯದಲ್ಲಿ, ಚುನಾವಣೆಯ ದೃಷ್ಟಿಯಿಂದ ಮುಖ್ಯವಾಗುವ ಒಂದಷ್ಟು ಜಾತಿಗಳನ್ನು ಗುರುತಿಸಿ ಬಜೆಟ್‍ನಲ್ಲಿ ಸ್ವಲ್ಪ ಹಣ ನೀಡಿದಾಕ್ಷಣ ಮಾಧ್ಯಮಗಳ ಕಣ್ಣಿಗೆ ಅದೊಂದು ಸರ್ವೋದಯ ಮಾದರಿಯಾಗಿ ಕಾಣಿಸಿದರೆ ಅದೊಂದು ದುರಂತ. ಬಜೆಟ್ ಒಂದು ಸಾಂವಿಧಾನಿಕ ಅಗತ್ಯ. ಅದು ಸಾರ್ವಜನಿಕರಿಂದ ಹಣ ಸಂಗ್ರಹಿಸುವುದಕ್ಕೆ ಮತ್ತು ಹಾಗೆ ಸಂಗ್ರಹಿಸಿದ ಹಣವನ್ನು ಯಾವ ರೀತಿಯಲ್ಲಿ ವೆಚ್ಚ ಮಾಡಬೇಕು ಎನ್ನುವುದಕ್ಕೆ ಜನರ ಅನುಮತಿಯನ್ನು ಜನಪ್ರತಿನಿಧಿಗಳ (ಶಾಸಕಾಂಗದ) ಮೂಲಕ ಪಡೆಯುವ ಪವಿತ್ರ ಪ್ರಕ್ರಿಯೆ. ಇಲ್ಲಿ ಮಾಧ್ಯಮಗಳ ಕಣ್ಣು ನೆಟ್ಟಿರಬೇಕಾಗಿರುವುದು ಸರಕಾರ ಹಣ ಸಂಗ್ರಹಿಸುವಾಗ ಯಾರ ಮೇಲೆ ಯಾವ ರೀತಿಯ ಹೊರೆ ಏರಿತು ಎನ್ನುವುದರ ಮೇಲೆ. ಇಲ್ಲಿ ಮಾಧ್ಯಮಗಳು ಕಣ್ಣಿಗೆ ಎಣ್ಣೆ ಹಾಕಿ ಕಾಯಬೇಕಾಗಿರುವುದು ಹಣ ಹಂಚಿಕೆಯಲ್ಲಿ, ಆದ್ಯತೆಗಳನ್ನು ಗುರುತಿಸುವಲ್ಲಿ ಆರ್ಥಿಕಾಭಿವೃದ್ಧಿಯ ಅಗತ್ಯ ಮತ್ತು ಸಾಮಾಜಿಕ ನ್ಯಾಯದ ಅನಿವಾರ್ಯತೆಗಳ ನಡುವೆ ಯಾವ ರೀತಿಯ ಹೊಂದಾಣಿಕೆಯಾಗಿದೆ ಎನ್ನುವ ಅಂಶವನ್ನು. ಈ ಮೂಲ ಸೂತ್ರಗಳಿಗೆ ತದ್ವಿರುದ್ಧವಾಗಿ ಬಜೆಟ್‍ನಲ್ಲಿ ಆಳುವ ಸರಕಾರಗಳು ಕೈಗೊಳ್ಳುವ ಕ್ರಮಗಳನ್ನೇ ಎತ್ತಿ ಹಿಡಿದು ಇದುವೇ ಸರ್ವೋದಯ ಸೂತ್ರ ಅಂತ ಘೋಷಿಸುತ್ತಿರುವುದನ್ನು ನೋಡಿದರೆ ಈ ಬಜೆಟ್ ಮತ್ತು ಅದರ ವರದಿಗಾರಿಕೆ ಎಲ್ಲವೂ ಒಂದು ಅಸಂಗತ ನಾಟಕದ ಅರ್ಥಹೀನ ಅಂಕಗಳಂತೆ ಕಾಣಿಸುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...