Homeಕರ್ನಾಟಕಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

ಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

- Advertisement -
- Advertisement -

ಬಹಳ ಕಾಲದಿಂದ ಕರ್ನಾಟಕದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾ ಬಂದಿರುವ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಇತ್ತೀಚಿಗೆ ಹೀಗೆ ಹೇಳಿದರು: ’ಇಷ್ಟು ಕಾಲ ಕರ್ನಾಟಕದಲ್ಲಿದ್ದ ನಮಗೆಲ್ಲಾ ಈ ರಾಜ್ಯ ಎಲ್ಲಿ ಉತ್ತರ ಪ್ರದೇಶ ಆಗಿಬಿಡುವುದೋ ಎನ್ನುವ ಆತಂಕವಿತ್ತು. ಈಗ ಆ ಆತಂಕಕ್ಕೆ ಅವಕಾಶ ಇಲ್ಲ. ಈಗ ಉತ್ತರ ಪ್ರದೇಶದ ಜನರಿಗೆ ಅವರ ರಾಜ್ಯ ಎಲ್ಲಿ ಕರ್ನಾಟಕದಂತೆ ಆಗಿಬಿಡುತ್ತದೋ ಎನ್ನುವ ಆತಂಕ ಕಾಡಬೇಕು’!

ಕರ್ನಾಟಕದ ಪ್ರಸ್ತುತ ಸ್ಥಿತಿಯ ಬಗ್ಗೆ ಎಲ್ಲವನ್ನೂ ಹಿಡಿದಿಡುವ ಹೇಳಿಕೆ ಇದು. ಕರ್ನಾಟಕದಲ್ಲಿ ಆಗಬಾರದೆಲ್ಲಾ ಆಗುತ್ತಿದೆ. ಕರ್ನಾಟಕದಲ್ಲಿ ಎಂದೂ ಹೀಗಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕ ಎಲ್ಲವನ್ನೂ ಕಂಡಿದೆ. ಒಳ್ಳೆಯದನ್ನು ಕಂಡಿದೆ, ಕೆಟ್ಟದನ್ನೂ ಕಂಡಿದೆ. ಕೆಲವು ವಿಚಾರಗಳಲ್ಲಿ ಕರ್ನಾಟಕ ಧನಾತ್ಮಕ ಕಾರಣಗಳಿಗೆ ರಾಷ್ಟ್ರದ ಗಮನ ಸೆಳೆದಿದ್ದರೆ ಇನ್ನು ಕೆಲವು ವಿಚಾರಗಳಲ್ಲಿ ಕೆಟ್ಟ ಕಾರಣಗಳಿಂದ ದೇಶದ ಗಮನ ಸೆಳೆದದ್ದೂ ಇದೆ. ಆರ್ಥಿಕವಾಗಿ ಒಂದು ಕಾಲದಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳ ಆಡುಂಬೊಲವಾಗಿ ಗಮನ ಸೆಳೆದಿದ್ದ ಕರ್ನಾಟಕ ಈಗ ಆಧುನಿಕ ಉದ್ಯಮಗಳಾದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಇತ್ಯಾದಿಗಳ ಕೇಂದ್ರವಾಗಿ ಗಮನ ಸೆಳೆದಿದೆ. ರಾಜಕೀಯದ ವಿಚಾರಕ್ಕೆ ಬರುವುದಾದರೆ ದೇವರಾಜ ಅರಸು ಅವರು ರಾಜಕೀಯ ಅಧಿಕಾರವನ್ನು, ಚಾರಿತ್ರಿಕವಾಗಿ ರಾಜಕೀಯ ಅಧಿಕಾರದ ಅಂಚಿನಲ್ಲೇ ಉಳಿದಿದ್ದ ಹಿಂದುಳಿದ ವರ್ಗಗಳತ್ತ ಹರಿಯುವ ಹಾಗೆ ಮಾಡಿದ ಕ್ರಾಂತಿ, ನಜೀರ್ ಸಾಬ್-ರಾಮ ಕೃಷ್ಣ ಹೆಗಡೆ ರಾಜಕೀಯ ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ಒಯ್ದು ಮಾಡಿದ ಕ್ರಾಂತಿ ಇತ್ಯಾದಿಗಳೆಲ್ಲವೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅದೇ ವೇಳೆ ಆರ್ಥಿಕವಾಗಿ ರಾಜ್ಯದ ಅರ್ಧಭಾಗಕ್ಕೂ ಹೆಚ್ಚು ಭೂಪ್ರದೇಶ ಅಭಿವೃದ್ಧಿಯ ದೃಷ್ಟಿಯಿಂದ ಆರಕ್ಕೆ ಏಳದೆ, ಮೂರಕ್ಕೆ ಇಳಿಯದೆ ಕರ್ನಾಟಕ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಒಣಭೂಮಿಯನ್ನು ಹೊಂದಿದ ರಾಜ್ಯವಾಗಿ ಉಳಿದದ್ದೂ ಸತ್ಯ. ಹಾಗೆಯೇ, ರಾಜಕೀಯವಾಗಿ ಒಂದು ಕಾಲದಲ್ಲಿ ಆಯಾ ರಾಮ್-ಗಯಾ ರಾಮ್ ಸಂಸ್ಕೃತಿ, ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕುವ ಸಂಸ್ಕೃತಿ ಇತ್ಯಾದಿಗಳ ಆವಿಷ್ಕಾರ ಇಲ್ಲಿ ನಡೆದರೆ, ಇತ್ತೀಚೆಗಿನ ವರ್ಷಗಳಲ್ಲಿ ’ಆಪರೇಷನ್ ಕಮಲ’ ಎಂಬ ಶಾಸಕರ ಖರೀದಿಯ ಉದ್ಯಮಕ್ಕೆ ಕೂಡಾ ಕರ್ನಾಟಕವೇ ಮೇಲ್ಪಂಕ್ತಿ ಹಾಕಿದ್ದು ಎನ್ನುವ ಸತ್ಯವೂ ನಮ್ಮ ಮುಂದಿದೆ.

ಒಂದು ರಾಜ್ಯದ ಸುದೀರ್ಘ ಚರಿತ್ರೆಯಲ್ಲಿ ಇಂತಹದ್ದೆಲ್ಲಾ ಸಂಭವಿಸುತ್ತವೆ. ತಪ್ಪುಗಳಾಗುತ್ತವೆ, ಅವುಗಳನ್ನು ಸರಿಪಡಿಸುವ ಪ್ರಯತ್ನವೂ ನಡೆಯುತ್ತವೆ. ತಪ್ಪುಗಳು, ಕೆಟ್ಟ ನಡವಳಿಕೆಗಳು ಇತ್ಯಾದಿಗಳನ್ನು ಕೆಟ್ಟ ನಡವಳಿಕೆ ಅಂತಲೇ ಗುರುತಿಸಿ, ಏನೋ ವಿಷಘಳಿಗೆಯಲ್ಲಿ ಆಗಿಹೋಯಿತು ಅಂತ ಭಾವಿಸಿ ಮುನ್ನಡೆಯುವುದು, ನಡೆದುಹೋದದ್ದರ ಬಗ್ಗೆ ಪಶ್ಚಾತ್ತಾಪ, ನಾಚಿಕೆ ಇತ್ಯಾದಿ ಅನುಭವಿಸುವುದು, ಮುಂದೆ ಹೀಗಾಗದಿರಲಿ ಎನ್ನುವ ಭಾರ ಹೊತ್ತುಕೊಂಡಿರುವಾಗಲೇ ಮತ್ತೆ ಅಂತಹದ್ದೇ ಕೆಲವು ಕೆಟ್ಟ ಬೆಳವಣಿಗೆಗಳು ಸಂಭವಿಸುವುದು – ಹೀಗೆ ನಡೆಯುತ್ತಲೇ ಇರುತ್ತವೆ.

ಆದರೆ, ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ಈ ರೀತಿಯವಲ್ಲ. ಅವುಗಳ ಚಹರೆಯೇ ಬೇರೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಈಗ ಕೆಟ್ಟದ್ದನ್ನು ಕೆಟ್ಟದ್ದು ಅಂತ ಕಾಣುವ ಮನೋಭಾವನೆಯನ್ನೇ ನಾಶಮಾಡಲಾಗುತ್ತಿದೆ. ಕೆಟ್ಟದ್ದನ್ನು ಹೆಚ್ಚು ಮಾಡುವುದೇ ಸರಿಯಾದ ಮಾರ್ಗ ಅಂತ ಎಲ್ಲ ಬಗೆಯ ಜೀವ ವಿರೋಧಿ, ಮನುಷ್ಯ ವಿರೋಧಿ ಕೃತ್ಯಗಳನ್ನು ಜನರು ಒಂದು ರೀತಿಯ ಗೌರವ ಭಾವನೆಯಿಂದ ಸ್ವೀಕರಿಸುವಂತಹ ಸಾಮಾಜಿಕ ಪರಿಸರವೊಂದು ನಿರ್ಮಾಣವಾಗುತ್ತಿರುವ ಹಾಗಿದೆ. ಯಾರ್‍ಯರು ಇದನ್ನು ವಿರೋಧಿಸಬೇಕಿತ್ತೋ ಅವರೆಲ್ಲಾ ಒಂದೋ ಇದನ್ನು ಬೆಂಬಲಿಸುತ್ತಿದ್ದಾರೆ, ಇಲ್ಲವೇ ಸುಮ್ಮನಿದ್ದಾರೆ. ಬಹುತೇಕ ಸ್ವಾಮೀಜಿಗಳು, ಬಹುತೇಕ ಸಾಹಿತಿಗಳು, ಬಹುತೇಕ ಬರಹಗಾರರು, ಬಹುತೇಕ ಕಲಾವಿದರು, ಹೀಗೆ ಒಂದು ಸಮಾಜದ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಬೇಕಾದವೆರೆಲ್ಲಾ ಮೌನಕ್ಕೆ ಶರಣಾಗಿರುವುದು ಅಥವಾ ಕಾಲದ ಅನಿಷ್ಟಗಳ ಜತೆ ಹೆಜ್ಜೆ ಹಾಕುತ್ತಿರುವುದು ಘೋರ ವಿಪರ್ಯಾಸದಂತೆ ಕಾಣಿಸುತ್ತಿದೆ. ಎಲ್ಲಾ ಸಂವಿಧಾನ ವಿರೋಧಿ ಹೇಳಿಕೆಗಳಿಗೆ, ಎಲ್ಲಾ ರೀತಿಯ ಪ್ರಜಾತಂತ್ರ ವಿರೋಧಿ ನಡವಳಿಕೆಗಳಿಗೆ ಒಂದು ರೀತಿಯ ಮಾನ್ಯತೆ, ಒಂದು ರೀತಿಯ ಸ್ವೀಕಾರಾರ್ಹತೆ ತಂದುಕೊಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಕೆಟ್ಟದ್ದು ಎಲ್ಲಾ ಸಮಾಜಗಳಲ್ಲೂ ನಡೆಯುತ್ತವೆ.

ಆದರೆ ಕೆಟ್ಟದ್ದು ನಡೆದಾಗ ಹೀಗಾಗಿದ್ದು ಸರಿ ಎಂಬುದಾಗಿಯೂ, ಮುಂದೆಯೂ ಹೀಗೆಯೇ ನಡೆಯಬೇಕೆಂಬುದಾಗಿಯೂ ಜನ ಯೋಚಿಸಲಾರಂಭಿಸಿದರೆ ಅದು ಅಂತಿಂತಹ ಪತನವಲ್ಲ. ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಇಂತಹ ಅಧಃಪತನ. ಇಲ್ಲಿ ದಾಳಿಗಳು, ವಿದ್ವೇಷಕಾರೀ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ ನೀಡುವ ಕರೆಗಳು, ಸಾಮಾಜಿಕ ಬಹಿಷ್ಕಾರ ಇತ್ಯಾದಿಗಳೆಲ್ಲವನ್ನು ಒಂದು ವರ್ಗ ಪವಿತ್ರ ಕೆಲಸ ಎನ್ನುವಂತೆ ಮಾಡುತ್ತಿದೆ ಮತ್ತು ಹಾಗೆಯೇ ಜನರನ್ನು ನಂಬಿಸುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಸರಕಾರ ಕೂಡಾ ಇದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸುತ್ತಿದೆ. ಮುಖ್ಯಮಂತ್ರಿ ಹಿಂಸಾತ್ಮಕ ದಾಳಿಗಳನ್ನು ’ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಅಂತ ಸಮರ್ಥಿಸುತ್ತಾರೆ, ಪ್ರಭಾವಿ ಹಿರಿಯ ಸಚಿವರು ಒಂದು ದಿನ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಲಿದೆ ಎಂದು ಸಂವಿಧಾನವನ್ನೇ ಅಲ್ಲಗಳೆಯುತ್ತಾರೆ. ಇನ್ನೊಂದೆಡೆ ಪಕ್ಷಾತೀತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿರುವ ವಿಧಾನಸಭೆಯ ಸಭಾಪತಿಗಳು ಮಾತೆತ್ತಿದರೆ ’ನಮ್ಮ ಆರ್.ಎಸ್.ಎಸ್’, ’ನಮ್ಮ ಆರ್.ಎಸ್.ಎಸ್’ ಎನ್ನುತ್ತಿದ್ದಾರೆ.

ಒಂದು ರಾಜ್ಯ-ಹಲವು ಜಗತ್ತುಗಳು!

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಹೊರಗಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಾಗ ರಾಜ್ಯದ ಬಗ್ಗೆ ನೀಡುವ ಒಕ್ಕಣೆ ಇದು. ಈಗ ಹಲವು ಜಗತ್ತುಗಳೆಲ್ಲಾ ನಾಶವಾಗುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರಯೋಗವಾಗಿರುವ ದ್ವೇಷ-ಕೇಂದ್ರಿತ ಚುನಾವಣಾ ರಾಜಕೀಯದ ಮಾದರಿಗೆ ದಕ್ಷಿಣದಲ್ಲೊಂದು ವಸಾಹತು ಎಂಬಂತೆ ಕರ್ನಾಟಕದ ಮಣ್ಣು ಹದಗೊಳ್ಳುತ್ತಿದೆ. ಈ ರಾಜ್ಯದಲ್ಲಿ ಹಿಂದೆಯೂ ಚುನಾವಣೆಗಳು ಆಗಿವೆ, ಹೋಗಿವೆ. ಪಕ್ಷಗಳು, ಗೆದ್ದಿವೆ, ಸೋತಿವೆ. ಆದರೆ ಹಿಂದೆ ಯಾವತ್ತೂ ಸಾಮಾಜಿಕ ಸಾಮರಸ್ಯವನ್ನು ಈ ಪರಿ ಕೆಡಿಸಿ ರಾಜಕೀಯ ಲಾಭದ ಬೀಜ ಬಿತ್ತುವ ಕೆಲಸ ನಡೆದಿರಲಿಲ್ಲ. ನೇರವಾಗಿ ಹೇಳಬೇಕು ಎಂದಾದರೆ ಬಹುಸಂಖ್ಯಾತ ಹಿಂದುಗಳಲ್ಲಿ ಮುಸ್ಲಿಂ ದ್ವೇಷವನ್ನು ಈ ಮಟ್ಟಿಗೆ ಬೆಳೆಸಿ ಚುನಾವಣೆಗೆ ನೆಲ ಹಸನುಗೊಳಿಸುವ ಅಪಾಯಕಾರಿ ತಂತ್ರ ಈ ಪ್ರಮಾಣದಲ್ಲಿ ಬಳಕೆಯಾದದ್ದಿಲ್ಲ. ಈಗ ಇದು ಭಯಾನಕವಾದ ರೀತಿಗಳಲ್ಲಿ ಆಗುತ್ತಿದೆ.

ದ್ವೇಷವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತಿದೆ. ಹೀಗೆಲ್ಲಾ ಆಗುವುದು ಅನಿವಾರ್ಯ ಎನ್ನುವ ಮತ್ತು ಎಲ್ಲವೂ ’ಪ್ರತಿಕ್ರಿಯೆಯಾಗಿ’ ನಡೆಯುತ್ತಿವೆ ಎನ್ನುವ ಮಿಥ್ಯೆಯನ್ನು ಸೃಷ್ಟಿಸಿ ಜನರನ್ನು ವ್ಯವಸ್ಥಿತವಾಗಿ ನಂಬಿಸುವ ಕೆಲಸ ನಡೆಯುತ್ತಿದೆ. ಈ ಸಂಚುಗಳನ್ನೆಲ್ಲಾ ಯಾವುದೋ ಕಲ್ಪಿತ ಸಮಸ್ಯೆಗೊಂದು ’ಅಂತಿಮ ಪರಿಹಾರ’ ನಿರೂಪಿಸುವ ಸಲುವಾಗಿಯೇ ಮಾಡಲಾಗುತ್ತಿದೆ ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ, ಎಲ್ಲವೂ ಹೀಗೆಯೇ ಮುಂದುವರಿದರೆ ಜನಾಂಗ ಹತ್ಯೆಯಂತಹ ಬಹುದೊಡ್ಡ ದುರಂತವೊಂದು ಘಟಿಸಬಹುದು ಎನ್ನುವ ಆತಂಕ ಅದು. ಇದನ್ನು ಕೇಳಿದ ಯಾರಿಗೇ ಆದರೂ ಆಘಾತ ಆಗಬೇಕು. ಇಲ್ಲ, ಯಾರಿಗೂ ಯಾವುದೂ ಯಾವುದೇ ಆಘಾತವನ್ನು ತರುವಂತೆ ಕಾಣಿಸುತ್ತಿಲ್ಲ. ಒಂದು ಪ್ರಶ್ನೆ ಕಾಡುತ್ತದೆ. ಹಿಂದೆಲ್ಲಾ ಹೀಗೆ ಮನುಷ್ಯರ ತಲೆಕೆಡಿಸಿ ದ್ವೇಷದ ಬೀಜ ಬಿತ್ತಲು ರಾಜಕೀಯ ಪ್ರಯತ್ನಗಳು ನಡೆದ ಸಂದರ್ಭಗಳಲ್ಲಿ ಸಾಮಾನ್ಯ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಒಂದು ಸೂಕ್ಷ್ಮ ವಿವೇಚನೆ ಅದನ್ನು ತಡೆಯುತಿತ್ತು. ಈ ಹೊತ್ತಿಗೆ ಆ ಜಾನಪದೀಯ ಕನ್ನಡ ಪ್ರಜ್ಞೆ ಎಷ್ಟರಮಟ್ಟಿಗೆ ಉಳಿದುಕೊಂಡಿದೆ ಎಂದು ಪರಿಶೀಲಿಸಬೇಕಾದ ಕಾಲ ಬಂದಿದೆ.

ಹೀಗೆಲ್ಲಾ ಆಗುವ ಮುನ್ಸೂಚನೆಗಳು ಎಂದೋ ಸಿಗುತ್ತಿದ್ದವು. ಆದರೂ ಎಲ್ಲರೂ ಅವುಗಳನ್ನು ಕಡೆಗಣಿಸಿದರು. ಯಾವುದೋ ಕೆಲವು ಅಂಚಿನ ಸಂಘಟನೆಗಳು ಇವನ್ನೆಲ್ಲಾ ಮಾಡುತ್ತಿವೆ. ಕರ್ನಾಟಕಕ್ಕೊಂದು ಉದಾತ್ತ ಪರಂಪರೆ ಇದೆ. ಇಲ್ಲಿ ಶರಣ ಚಳವಳಿ ನಡೆದು ಹೋಗಿದೆ. ಇಲ್ಲಿ ಸಾಮಾಜಿಕ ಸಾಮರಸ್ಯದ ಬೇರುಗಳು ಗಟ್ಟಿಯಾಗಿವೆ. ಹೀಗೆ ಏನೇನೋ ಭರವಸೆಗಳನ್ನಿಟ್ಟುಕೊಂಡು ಆ ಎಲ್ಲಾ ಆರಂಭಿಕ ಸೂಚನೆಗಳನ್ನು ಕಡೆಗಣಿಸಿದ ಕಾರಣ ಈ ಹೊತ್ತು ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ. ಈಗಲೂ ಅಷ್ಟೇ. ಇಷ್ಟೆಲ್ಲಾ ಆದ ನಂತರವೂ ನಾಗರಿಕ ಸಮಾಜದಿಂದ ಎಷ್ಟು ದೊಡ್ಡ ಪ್ರತಿರೋಧ ಬರಬೇಕೋ ಅಷ್ಟು ಪ್ರತಿರೋಧ ಬಂದಂತೆ ಕಾಣಿಸುತ್ತಿಲ್ಲ. ನಿಜ, ಕೆಲವು ಕಡೆ ಮುಸ್ಲಿಮರಿಗೆ ಹೇರಿದ ಆರ್ಥಿಕ ಬಹಿಷ್ಕಾರಕ್ಕೆ ಸ್ಥಳೀಯವಾಗಿ ವಿರೋಧ ಕಂಡುಬಂದಿದೆ. ಇಷ್ಟು ಸಾಲದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಜನ ಬೆಂಬಲ ಇಲ್ಲ ಎನ್ನುವ ಸಂದೇಶ ಸ್ಪಷ್ಟಾಗಿಯೂ ಮತ್ತದು ಅಹಿಂಸಾತ್ಮಕವಾಗಿಯೂ ಎಲ್ಲ ಕಡೆಯೂ ರವಾನೆಯಾಗಬೇಕಿದೆ. ಅದು ಆಗುತ್ತಿಲ್ಲ ಎನ್ನುವುದು ಈಗ ನಡೆಯುತ್ತಿರುವ ಅನಿಷ್ಟ ವಿದ್ಯಮಾನಗಳಿಗಿಂತ ಹೆಚ್ಚು ಅನಾಹುತಕಾರಿ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...