Homeಕರ್ನಾಟಕಇದುವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಜಾತಿ ಪ್ರಾತಿನಿಧ್ಯ

ಇದುವರೆಗಿನ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಜಾತಿ ಪ್ರಾತಿನಿಧ್ಯ

- Advertisement -
- Advertisement -

ಪ್ರತಿ ಚುನಾವಣೆಗಳಂತೆ ಈ ಚುನಾವಣೆಯಲ್ಲಿಯೂ ಮುಂದಿನ ಸರ್ಕಾರದ ಬದಲಾವಣೆ ಮತ್ತು ಯಾವ ಸಮುದಾಯದವರು ಮುಂದಿನ ಮುಖ್ಯಮಂತ್ರಿ ಆಗಬೇಕೆನ್ನುವ ಅಂಶ ಪ್ರಮುಖ ಪಾತ್ರವಹಿಸಿತ್ತು. ದೇಶದೆಲ್ಲೆಡೆ ಆಗುವಂತೆಯೇ ಕರ್ನಾಟಕದಲ್ಲಿಯೂ ಚುನಾವಣೆಗಳಲ್ಲಿ ಜಾತಿ ಪ್ರಬಲವಾಗಿ ಕೆಲಸ ಮಾಡುತ್ತದೆ. ಜಾತಿ ಆಧಾರದಲ್ಲಿಯೇ ಕೆಲ ಪಕ್ಷಗಳು ತಮ್ಮ ನೆಲೆ ಹೊಂದಿವೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಯಾವ ಸಮುದಾಯದವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು ಮತ್ತು ಮುಂದಿನ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ ಎಂಬುದರ ಇಣುಕುನೋಟ ಇಲ್ಲಿದೆ.

ಮೈಸೂರು ಸಂಸ್ಥಾನದಲ್ಲಿ ಒಕ್ಕಲಿಗರ ಆರಂಭಿಕ ಪ್ರಾಬಲ್ಯ

1947ರಲ್ಲಿ ಸ್ವಾತಂತ್ರ್ಯ ಲಭಿಸಿದಾಗ ಮೈಸೂರು ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಕೋಲಾರ ಜಿಲ್ಲೆಯವರಾದ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ, ಒಕ್ಕಲಿಗ ಸಮುದಾಯದ ಕೆ.ಸಿ ರೆಡ್ಡಿಯವರು ಮೊದಲ ಮುಖ್ಯಮಂತ್ರಿಯಾದರು. ಆನಂತರ 1952ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತು. ಆಗ ರಾಮನಗರ ಜಿಲ್ಲೆಯ ಒಕ್ಕಲಿಗ

ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳು ಮಂಜಪ್ಪ

ಸಮುದಾಯದ ಕೆಂಗಲ್ ಹನುಮಂತಯ್ಯನವರು ಎರಡನೇ ಮುಖ್ಯಮಂತ್ರಿಯಾದರು. ಆನಂತರ ಅಲ್ಪ ಅವಧಿಗೆ (1956ರ ಆಗಸ್ಟ್‌ನಿಂದ 1956ರ ಅಕ್ಟೋಬರ್‌ವರೆಗೆ) ಶಿವಮೊಗ್ಗ ಜಿಲ್ಲೆಯ ಒಕ್ಕಲಿಗ ಸಮುದಾಯದ ಕಡಿದಾಳ್ ಮಂಜಪ್ಪನವರು ಮೂರನೇ ಮುಖ್ಯಮಂತ್ರಿಯಾದರು.

ಲಿಂಗಾಯಿತ ಮುಖ್ಯಮಂತ್ರಿಗಳ ಪರ್ವ

1956ರಲ್ಲಿ ಕರ್ನಾಟಕ ಏಕೀಕರಣ ಚಳವಳಿಯಿಂದಾಗಿ ಕನ್ನಡ ಭಾಷೆ ಮಾತನಾಡುವ ನಾಲ್ಕು ಪ್ರಾಂತ್ಯಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಲಾಯಿತು. ಆಗ 1956 ನವೆಂಬರ್ 1ರಂದು ಕಾಂಗ್ರೆಸ್ ಪಕ್ಷವು ಮತ್ತೆ ಮುಖ್ಯಮಂತ್ರಿ ಬದಲಾವಣೆ ಮಾಡಿ ಬಳ್ಳಾರಿ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್. ನಿಜಲಿಂಗಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಿತು. 1958ರಲ್ಲಿ ಬಾಗಲಕೋಟೆ ಜಿಲ್ಲೆಯ ಲಿಂಗಾಯಿತ ಸಮುದಾಯದ ಬಿ.ಡಿ ಜತ್ತಿಯವರು ಐದನೇ ಮುಖ್ಯಮಂತ್ರಿಗಳಾಗಿ 1962ರವರೆಗೂ ಕಾರ್ಯನಿರ್ವಹಿಸಿದರು. ಆನಂತರ ಮೂರು ತಿಂಗಳ ಅವಧಿಗೆ ಆರನೇ ಮುಖ್ಯಮಂತ್ರಿಯಾಗಿ ಬಾಗಲಕೋಟೆ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್.ಆರ್ ಕಂಠಿಯವರು ಆಯ್ಕೆಯಾಗುತ್ತಾರೆ.

ಎಸ್. ನಿಜಲಿಂಗಪ್ಪ, ಬಿ.ಡಿ ಜತ್ತಿ, ಎಸ್.ಆರ್ ಕಂಠಿ

1962ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಎಸ್.ನಿಜಲಿಂಗಪ್ಪನವರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯುತ್ತದೆ. 1968ರಲ್ಲಿ ಕಲಬುರಗಿ ಜಿಲ್ಲೆಯ ಲಿಂಗಾಯಿತ ಸಮುದಾಯದ ವಿರೇಂದ್ರ ಪಾಟೀಲ್ ರಾಜ್ಯದ 8ನೇ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಕಾಂಗ್ರೆಸ್‌ನ ವಿ.ವಿ ಗಿರಿ ಮತ್ತು ಸಂಜೀವರೆಡ್ಡಿಯವರ ನಡುವಿನ ಪೈಪೋಟಿಯಲ್ಲಿ ಇಂದಿರಾಗಾಂಧಿ ವಿ.ವಿ ಗಿರಿಯವರನ್ನ ಬೆಂಬಲಿಸಿದ ಕಾರಣವಾಗಿ ಕಾಂಗ್ರೆಸ್ ಇಬ್ಭಾಗವಾಯ್ತು. 1971ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿ ರಾಜ್ಯ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗುತ್ತದೆ.

ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ

ಅಂದಿನ ಪ್ರಮುಖ ಕಾಂಗ್ರೆಸ್ ರಾಜಕಾರಣಿ ಮೈಸೂರು ಜಿಲ್ಲೆಯ ಹುಣಸೂರಿನ ದೇವರಾಜ ಅರಸುರವರು ಸಂಸ್ಥಾ ಕಾಂಗ್ರೆಸ್‌ಗೆ ಬದಲಾಗಿ ಇಂದಿರಾ ಗಾಂಧಿಯವರ ಕಾಂಗ್ರೆಸ್ (ಆರ್) ಅನ್ನು ಬೆಂಬಲಿಸಿದರು. ಅವರ ನೇತೃತ್ವದಲ್ಲಿ 1972ರ ಚುನಾವಣೆಯಲ್ಲಿ ಕಾಂಗ್ರೆಸ್ (ಆರ್) ಪಕ್ಷ ಜಯಗಳಿಸಿದಾಗ ಹಿಂದುಳಿದ ಅರಸು ಸಮುದಾಯದ ದೇವರಾಜ ಅರಸ್‌ರವರು ಮುಖ್ಯಮಂತ್ರಿಯಾಗುತ್ತಾರೆ. ನೂರಕ್ಕೂ ಅಧಿಕ ಹಿಂದುಳಿದ ಸಮುದಾಯದ ಮಂದಿಗೆ ಟಿಕೆಟ್ ನೀಡಿ ಬಹುತೇಕರನ್ನು ಗೆಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯಲಾಗುತ್ತದೆ. ಅಲ್ಲದೇ ಅವರು 1972ರ ಮಾರ್ಚ್ ತಿಂಗಳಿನಿಂದ 1977ರ ಡಿಸೆಂಬರ್‌ವರೆಗೂ ಮುಖ್ಯಮಂತ್ರಿಯಾಗಿದ್ದು ದೀರ್ಘಾವಧಿ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಒಳಗಾಗುತ್ತಾರೆ. ಆಗ ತುರ್ತುಪರಿಸ್ಥಿತಿಯ ಕಾರಣಕ್ಕೆ ಎರಡು ತಿಂಗಳ ಅವಧಿಗೆ ಕರ್ನಾಟಕ ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗುತ್ತದೆ.

ದೇವರಾಜ್ ಅರಸು, ಆರ್ ಗುಂಡೂರಾವ್‌

1978ರ ಚುನಾವಣೆಯಲ್ಲಿ ತುರ್ತುಪರಿಸ್ಥಿತಿ ಹೇರಿದ್ದ ಕಾರಣಕ್ಕೆ ಇಂದಿರಾ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಧೂಳಿಪಟವಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ ಮತ್ತೆ ಭರ್ಜರಿ ಬಹುಮತ ಸಾಧಿಸಿ ಅಧಿಕಾರ ಹಿಡಿದಿರುತ್ತದೆ. ದೇವರಾಜ್ ಅರಸುರವರು ಎರಡನೇ ಅವಧಿಗೆ ರಾಜ್ಯದ 10ನೇ ಮುಖ್ಯಮಂತ್ರಿಯಾಗುತ್ತಾರೆ. ಆದರೆ 1980ರಲ್ಲಿ ಅವರನ್ನು ಕೆಳಗಿಳಿಸಿ ಕೊಡಗು ಜಿಲ್ಲೆಯ ಬ್ರಾಹ್ಮಣ ಸಮುದಾಯದ ಆರ್ ಗುಂಡೂರಾವ್‌ರವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ.

1983ರ ಚುನಾವಣೆಯಲ್ಲಿ ಜನತಾ ಪಕ್ಷ 95 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಬಿಜೆಪಿಯ ಬೆಂಬಲದೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ 12ನೇ ಮುಖ್ಯಮಂತ್ರಿಯಾಗುತ್ತಾರೆ. 1985ರಲ್ಲಿ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿದ ಅವರು 139 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಆದರೆ ಅವರು 1988ರಲ್ಲಿ ಜನತಾ ಪಕ್ಷ ತೊರೆದು ಜನತಾದಳ ಸೇರಿದ್ದರಿಂದ ಆ ಒಂದು ವರ್ಷದ ಅವಧಿಗೆ ಹಾವೇರಿ ಜಿಲ್ಲೆಯ ಲಿಂಗಾಯಿತ ಸಮುದಾಯದ ಎಸ್.ಆರ್ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.

ರಾಮಕೃಷ್ಣ ಹೆಗಡೆ, ಎಸ್.ಆರ್ ಬೊಮ್ಮಾಯಿ, ವಿರೇಂದ್ರ ಪಾಟೀಲ್‌, ವೀರಪ್ಪ ಮೊಯ್ಲಿ

1989ರ ಚುನಾವಣೆಯಲ್ಲಿ ಜನತಾ ಪಕ್ಷ ಸೋತು, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಲಿಂಗಾಯಿತ ಸಮುದಾಯದ ವಿರೇಂದ್ರ ಪಾಟೀಲ್‌ರವರು (18 ವರ್ಷದ ನಂತರ) ಮುಖ್ಯಮಂತ್ರಿಯಾಗುತ್ತಾರೆ. ಆದರೆ ಒಂದು ವರ್ಷದಲ್ಲಿ ಅವರನ್ನು ಕೆಳಗಿಳಿಸಲಾಗುತ್ತದೆ. ಶಿವಮೊಗ್ಗದ ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ ಸಮುದಾಯದ ಎಸ್. ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಅವರೂ ಅವಧಿಯನ್ನು ಪೂರೈಸದೆ, 1992ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗುತ್ತಾರೆ.

ಮತ್ತೆ ಒಕ್ಕಲಿಗ ಮುಖ್ಯಮಂತ್ರಿ

1994ರ ಚುನಾವಣೆಯಲ್ಲಿ ಜನತಾದಳ ಪಕ್ಷ ಸರಳ ಬಹುಮತ (115) ಸಾಧಿಸುತ್ತದೆ. ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್‌ರಿಗೆ ಕಾಂಗ್ರೆಸ್ ಅವಮಾನ ಮಾಡಿತು ಎಂಬುದು ಒಂದಾದರೆ ಬಂಗಾರಪ್ಪನವರು ಸಹ ಕಾಂಗ್ರೆಸ್‌ನಿಂದ ಬಂಡೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಕಟ್ಟಿ ಸ್ಪರ್ಧಿಸಿರುತ್ತಾರೆ. ಇದು ಕಾಂಗ್ರೆಸ್‌ನ ಹೀನಾಯ ಸೋಲಿಗೆ ಕಾರಣವಾಗುತ್ತದೆ. ಆಗ ಹಾಸನ ಜಿಲ್ಲೆಯ ಒಕ್ಕಲಿಗ ಸಮುದಾಯದ ಎಚ್.ಡಿ ದೇವೇಗೌಡರು ರಾಜ್ಯದ 17ನೇ ಮುಖ್ಯಮಂತ್ರಿ ಯಾಗುತ್ತಾರೆ. ಆದರೆ 1996ರಲ್ಲಿ ಅವರು ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಅವರಿಂದ ತೆರವಾದ ಸಿಎಂ ಸ್ಥಾನಕ್ಕೆ ದಾವಣಗೆರೆ ಜಿಲ್ಲೆಯ ಲಿಂಗಾಯತ ಸಮುದಾಯದ ಜೆ.ಎಚ್ ಪಟೇಲ್ ಬಂದು ಕೂರುತ್ತಾರೆ.

ಇದನ್ನೂ ಓದಿ: ಸರ್ವಾಧಿಕಾರ ಧೋರಣೆಯ ಪುರುಷಹಂಕಾರ ಸಾಮಾನ್ಯರಿಗೂ ಸೋಂಕಿದಾಗ..

1999ರ ಚುನಾವಣೆಯಲ್ಲಿ 132 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ಮೂಲಕ ಗಮನ ಸೆಳೆದ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಯಾಗುತ್ತಾರೆ. 2004ರಲ್ಲಿ ಇನ್ನೂ ಆರು ತಿಂಗಳು ಅಧಿಕಾರಾವಧಿ ಇರುವಾಗಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುತ್ತಾರೆ. ಆಗ ಅತಂತ್ರ ಫಲಿತಾಂಶ ಬರುತ್ತದೆ. ಬಿಜೆಪಿ 79 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗುತ್ತದೆ. 65 ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು 58 ಸ್ಥಾನ ಗೆದ್ದ ಜೆಡಿಎಸ್ ಒಟ್ಟುಗೂಡಿ ಮೈತ್ರಿ ಸರ್ಕಾರ ರಚನೆಯಾಗುತ್ತದೆ. ರಜಪೂತ ಸಮುದಾಯದ ಕಲಬುರಗಿ ಜಿಲ್ಲೆಯ ಧರ್ಮಸಿಂಗ್‌ರವರು ಸಿಎಂ ಆಗುತ್ತಾರೆ. 2006ರಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ನೇತೃತ್ವದ ಬಣ ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತದೆ. ಹಾಸನ ಜಿಲ್ಲೆಯ ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗುತ್ತಾರೆ. ಆದರೆ ಒಪ್ಪಂದದಂತೆ ಇಪ್ಪತ್ತು ತಿಂಗಳ ನಂತರ 2007ರಲ್ಲಿ ಅವರು ಬಿ.ಎಸ್ ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪದ ಕಾರಣ ಸರ್ಕಾರ ಬಿದ್ದುಹೋಗುತ್ತದೆ. ಆದರೂ 2007ರ ನವೆಂಬರ್ 12 ರಿಂದ 17ರವರೆಗೆ 5 ದಿನಗಳ ಕಾಲ ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿ ನಂತರ ಕೆಳಗಿಳಿಯುತ್ತಾರೆ. ರಾಷ್ಟ್ರಪತಿ ಆಡಳಿತ ಘೋಷಣೆಯಾಗುತ್ತದೆ.

ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಡಿ.ವಿ ಸದಾನಂದಾಗೌಡ, ಜಗದೀಶ್ ಶೆಟ್ಟರ್

2008ರ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಸಿಎಂ ಸ್ಥಾನ ಸಿಗದ ಅನುಕಂಪದ ಅಲೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆಲ್ಲುತ್ತದೆ. ಆಪರೇಷನ್ ಕಮಲದ ಮೂಲಕ ಒಂದಷ್ಟು ಸ್ಥಾನಗಳನ್ನು ಕೊಂಡುಕೊಂಡು ಸರ್ಕಾರ ರಚಿಸಿದ ಮಂಡ್ಯ ಜಿಲ್ಲೆಯ, ಆದರೆ ಶಿಕಾರಿಪುರದಿಂದ ಗೆಲುವು ಕಂಡಿದ್ದ ಲಿಂಗಾಯಿತ ಸಮುದಾಯದ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಸಿಎಂ ಆಗುತ್ತಾರೆ.

ಆದರೆ ಅವರ ಮೇಲೆ ಅಕ್ರಮ ಭೂ ಪರಭಾರೆ, ಡಿನೋಟಿಫೀಕೇಷನ್ ಆರೋಪಗಳು ಬಂದು ಅವರನ್ನು 2011ರಲ್ಲಿ ಬಂಧಿಸಲಾಗುತ್ತದೆ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಸಮುದಾಯದ ಡಿ.ವಿ ಸದಾನಂದಾಗೌಡರು ಮುಖ್ಯಮಂತ್ರಿಯಾಗುತ್ತಾರೆ. 2012ರಲ್ಲಿ ಅವರನ್ನು ಕೆಳಗಿಳಿಸಿ ಹುಬ್ಬಳ್ಳಿಯ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಾರೆ.

ಮತ್ತೆ ಹಿಂದುಳಿದ ವರ್ಗದ ಸಿಎಂ

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಸಾಧಿಸುತ್ತದೆ. ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿದ್ದ ಮೈಸೂರು ಜಿಲ್ಲೆಯ ಕುರುಬ ಸಮುದಾಯದ ಸಿದ್ದರಾಮಯ್ಯನವರು ರಾಜ್ಯದ 26ನೇ ಮುಖ್ಯಮಂತ್ರಿಯಾಗುತ್ತಾರೆ. ಅವರು ಮೇ 13, 2013ರಿಂದ ಮೇ 15, 2018ರವರೆಗೆ ಅಧಿಕಾರದಲ್ಲಿದ್ದು ಅರಸು ನಂತರ ಪೂರ್ಣಾವಧಿಗೆ ಸಿಎಂ ಆದವರು ಎಂಬ ಖ್ಯಾತಿ ಪಡೆಯುತ್ತಾರೆ.

ಸಿದ್ದರಾಮಯ್ಯ

2018ರ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ ಬರುತ್ತದೆ. 104 ಸ್ಥಾನ ಗೆದ್ದ ಬಿಜೆಪಿ ದೊಡ್ಡ ಪಕ್ಷವಾದ ಕಾರಣಕ್ಕೆ ಸರ್ಕಾರ ರಚಿಸಲು ಮುಂದಾಗುತ್ತದೆ. 17 ಮೇ 2018ರಿಂದ 22 ಮೇ 2018ರವರೆಗೆ 5 ದಿನಗಳ ಅವಧಿಗೆ ಯಡಿಯೂರಪ್ಪ ಮೂರನೇ ಬಾರಿಗೆ ಸಿಎಂ ಆದರು. ಆದರೆ ಬಹುಮತ ಇಲ್ಲದ ಕಾರಣ ಕೆಳಗಿಳಿದರು. 80 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಮತ್ತು 37 ಸ್ಥಾನ ಗೆದ್ದಿದ್ದ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿಯವರು ಮತ್ತೆ ಸಿಎಂ ಆದರು. ಆದರೆ 2019ರಲ್ಲಿ ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರನ್ನು ರಾಜೀನಾಮೆ ಕೊಡಿಸಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಸಿಎಂ ಆದರು. ಆದರೆ ಎರಡು ವರ್ಷದ ನಂತರ ಕೆಳಗಿಳಿಯಬೇಕಾಯಿತು. ಆಗ 2021ರಲ್ಲಿ ಬಹುತೇಕರು ಊಹಿಸಿರದ ಹಾವೇರಿ ಜಿಲ್ಲೆಯ ಬಸವರಾಜ ಬೊಮ್ಮಾಯಿಯವರು ರಾಜ್ಯದ 30ನೇ ಸಿಎಂ ಆದರು. ಲಿಂಗಾಯಿತ ಸಿಎಂ ಇಳಿಸಿದ್ದಕ್ಕೆ ಉಂಟಾಗುವ ಆಕ್ರೋಶ ತಡೆಯಲು ಮತ್ತೆ ಲಿಂಗಾಯಿತ ವ್ಯಕ್ತಿಯನ್ನೇ ಸಿಎಂ ಸ್ಥಾನದಲ್ಲಿ ಕೂರಿಸಲಾಯಿತು. ಆನಂತರ ಹಲವಾರು ಬಾರಿ ಸಿಎಂ ಬದಲಾವಣೆ ಚರ್ಚೆ ಬಂದರೂ ಸಹ ಬಿಜೆಪಿ ಆ ಪ್ರಯೋಗ ಮಾಡಲು ಹಿಂದೇಟು ಹಾಕಿತು. ಇಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಎಸ್.ಆರ್ ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ (ಸಾದರ ಲಿಂಗಾಯಿತರು) ಅವರುಗಳನ್ನು ಹೊರತುಪಡಿಸಿ ಲಿಂಗಾಯಿತ ಸಮುದಾಯದಲ್ಲಿ ಮುಖ್ಯಮಂತ್ರಿಯಾಗಿದ್ದವರೆಲ್ಲ ಬಣಜಿಗ ಲಿಂಗಾಯಿತರು ಎಂಬುದು.

ಬಸವರಾಜ ಬೊಮ್ಮಾಯಿ

2023ರ ಈ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಬಿಜೆಪಿ ಪ್ರಯೋಗ ಮಾಡಲು ಮುಂದಾಗಿದೆ. ಯಾವುದೇ ರಾಜ್ಯದಲ್ಲಿ ಮಾಸ್ ಲೀಡರ್ ಆಗಿರುವವರು ಸಿಎಂ ಆಗುವುದು ಬಿಜೆಪಿಗೆ ಬೇಕಾಗಿಲ್ಲ. ಬದಲಿಗೆ ಹೈಕಮಾಂಡ್ ಹೇಳಿದಂತೆ ಕೇಳುವವರು ಬೇಕು. ಇದನ್ನು ಯಡಿಯೂರಪ್ಪನವರನ್ನು ಇಳಿಸಿದ ಪ್ರಕರಣ ಸೇರಿದಂತೆ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಸರ್ಕಾರ ರಚನೆಯಲ್ಲಿಯೂ ಕಾಣಬಹುದು. ಹೈಕಮಾಂಡ್ ಹಂಗಿನಲ್ಲಿರುವವರು ಸಿಎಂ ಇರಬೇಕೆಂದು ಮೋದಿ, ಶಾ ಬಯಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ವರ್ಚಸ್ಸು ಮತ್ತು ಹಿಂದುತ್ವದ ಮೂಲಕ ಚುನಾವಣೆಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸಿ ಸೋತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದನ್ನು ಸಾಧಿಸಲಾಗಿದ್ದು, ಕರ್ನಾಟಕದಲ್ಲಿಯೂ ಲಿಂಗಾಯತ ಸಮುದಾಯವೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಹಿಂದುತ್ವದ ಮೂಲಕ ಅಧಿಕಾರಕ್ಕೇರಲು ಹೋಗಿ ಮುಖಭಂಗ ಅನುಭವಿಸಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ಹಿರಿಯ ಬಿಜೆಪಿ ನಾಯಕರಿಗೆ ಟಿಕೆಟ್ ತಪ್ಪಿಸಿ, ಅವರು ಕಾಂಗ್ರೆಸ್ ಸೇರಿದರೂ ಬಿಜೆಪಿ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ವಿ.ಸೋಮಣ್ಣನವರಿಗೆ ಸ್ವಕ್ಷೇತ್ರ ಗೋವಿಂದರಾಜ ನಗರದಲ್ಲಿ ಟಿಕೆಟ್ ತಪ್ಪಿಸಿ, ಕಠಿಣವಾದ ವರುಣ, ಚಾಮರಾಜನಗರದಿಂದ ಕಣಕ್ಕಿಳಿಸಿ ಸೋಲಿಸಲಾಯಿತು.

ಬಹುಮತ ಪಡೆದ ಕಾಂಗ್ರೆಸ್: ಸಿಎಂ ಯಾರು?

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ದಲಿತ ಸಿಎಂ ಕೂಗು ಕೇಳಿಬರುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಏಕೆಂದರೆ ಇದುವರೆಗಿನ ಚುನಾವಣೆಗಳಲ್ಲಿ ಬಹುತೇಕ ದಲಿತರು ಕಾಂಗ್ರೆಸ್ ಪಕ್ಷ ಜೊತೆಗೆ ನಿಂತು ಮತ ನೀಡಿದ್ದಾರೆ. ಅಲ್ಲದೆ ಹಿಂದುಳಿದ ಸಮುದಾಯಗಳಿಗೆ ಅತಿ ಹೆಚ್ಚು ಬಾರಿ ಸಿಎಂ ಆಗುವ ಅವಕಾಶ ನೀಡಿದ್ದು ಕಾಂಗ್ರೆಸ್ ಪಕ್ಷವೇ ಆಗಿದೆ. ಇದುವರೆಗೂ ಕಾಂಗ್ರೆಸ್‌ನಿಂದ 14 ಮಂದಿ 17 ಬಾರಿ ಸಿಎಂ ಆಗಿದ್ದಾರೆ. ಆ 14 ಮಂದಿಯಲ್ಲಿ 4 ಜನ ಒಕ್ಕಲಿಗ ಸಮುದಾಯದವರು, (ಕೆ.ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಎಸ್.ಎಂ ಕೃಷ್ಣ) 4 ಜನ ಲಿಂಗಾಯಿತ ಸಮುದಾಯದವರು, (ನಿಜಲಿಂಗಪ್ಪ, ಬಿ.ಡಿ ಜತ್ತಿ, ಎಸ್.ಆರ್ ಕಂಠಿ ಮತ್ತು ವೀರೇಂದ್ರ ಪಾಟೀಲ್), 4 ಜನ ಹಿಂದುಳಿದ ಒಬಿಸಿ ಸಮುದಾಯದವರು (ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ) ಮತ್ತು ಒಬ್ಬ ಬ್ರಾಹ್ಮಣ (ಆರ್ ಗುಂಡೂರಾವ್) ಮತ್ತು ಒಬ್ಬರು ರಜಪೂತ (ಎನ್ ಧರ್ಮಸಿಂಗ್) ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ

ಈ ಬಾರಿ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಸಿದ್ದರಾಮಯ್ಯ. ಅವರನ್ನು ಬಿಟ್ಟರೆ ಒಕ್ಕಲಿಗ ಸಮುದಾಯದ ಡಿ.ಕೆ ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ.

ಜನತಾ ಪರಿವಾರ ಮತ್ತು ಜೆಡಿಎಸ್

ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಎರಡು ಬಾರಿ ಮತ್ತು ಲಿಂಗಾಯಿತ ಎಸ್.ಆರ್ ಬೊಮ್ಮಾಯಿ ಸಿಎಂ ಆಗಿದ್ದರು. ಜನತಾ ದಳದಲ್ಲಿ ಒಕ್ಕಲಿಗ ಸಮುದಾಯದ ಎಚ್.ಡಿ ದೇವೇಗೌಡ ಮತ್ತು ಲಿಂಗಾಯಿತ ಸಮುದಾಯದ ಜೆ.ಎಚ್ ಪಟೇಲ್ ಸಿಎಂ ಆಗಿದ್ದರು. ಜೆಡಿಎಸ್ ಆದ ನಂತರ ಎರಡು ಬಾರಿ ಒಕ್ಕಲಿಗ ಸಮುದಾಯದ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.

ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ತೀರಾ ಹಿಂದುಳಿದ ಸಮುದಾಯಗಳಿಗೆ ದಕ್ಕದ ಸಿಎಂ ಸ್ಥಾನ

ಕರ್ನಾಟಕ ಇದುವರೆಗೂ 30 ಬಾರಿ ಸಿಎಂಗಳನ್ನು ಕಂಡಿದೆ. ಲಿಂಗಾಯಿತ ಸಮುದಾಯದವರು 14 ಬಾರಿ, ಒಕ್ಕಲಿಗ ಸಮುದಾಯದವರು 8 ಬಾರಿ, ಒಬಿಸಿ ಸಮುದಾಯದವರು 5 ಬಾರಿ, ಬ್ರಾಹ್ಮಣ ಸಮುದಾಯದವರು 2 ಬಾರಿ ಮತ್ತು ರಜಪೂತ ಸಮುದಾಯದವರು ಒಂದು ಬಾರಿ ಸಿಎಂ ಆಗಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮಹಿಳೆಯರಿಲ್ಲ. ಇನ್ನು ರಾಜ್ಯದಲ್ಲಿ ಅರ್ಧದಷ್ಟು ಮತದಾರರಿದ್ದರೂ ಮಹಿಳಾ ಶಾಸಕರ ಸಂಖ್ಯೆ ಶೇ.10ರಷ್ಟು ದಾಟದಿರುವುದು ದುರಂತದ ಸಂಗತಿ. ಇತ್ತೀಚಿನ ಕರ್ನಾಟಕದ ಸೋರಿಕೆಯ ಜಾತಿಗಣತಿಯ ಪ್ರಕಾರ ಹೆಚ್ಚಿನ ಜನಸಂಖ್ಯೆಯಿದ್ದರೂ ದಲಿತರು, ಅಲ್ಪಸಂಖ್ಯಾತರು ಸಹ ಸಿಎಂ ಆಗಲು ಸಾಧ್ಯವಾಗಿಲ್ಲ. ಇನ್ನು ನೂರಾರು ಸಣ್ಣಸಣ್ಣ ಸಂಖ್ಯೆಯಲ್ಲಿರುವ ಹಿಂದುಳಿದ ಸಮುದಾಯಗಳ ಜನರು ಶಾಸಕರಾಗಲೂ ಸಾಧ್ಯವಾಗಿಲ್ಲ. ಈ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವುದು ಸವಾಲಿನ ಕೆಲಸವಾದರೂ ಪ್ರಜಾಪ್ರಭುತ್ವದಲ್ಲಿ ತುರ್ತು ಮಾಡಲೇಬೇಕಾದ ಕೆಲಸವಂತೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...