ಕೇರಳ: ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಮೂರು ಆಸ್ಪತ್ರೆಗಳು, ಮಗು ಸಾವು
ಸಾಂದರ್ಭಿಕ ಚಿತ್ರ

ಕೇರಳದಲ್ಲಿ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಮೂರು ಆಸ್ಪತ್ರೆಗಳು ನಿರಾಕರಿಸಿದ್ದು, ಗರ್ಭದಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ಕೇರಳದ ಮಾನವ ಹಕ್ಕುಗಳ ಸಮಿತಿಯು ರಾಜ್ಯದ ಮೂರು ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಶುಕ್ರವಾರ ಕೊಲ್ಲಂ ಜಿಲ್ಲೆಯ ಪರಿಪ್ಪಳ್ಳಿಯ ಗರ್ಭಿಣಿ ಮಹಿಳೆಯ ಕುಟುಂಬವು ಚಿಕಿತ್ಸೆಗಾಗಿ ಕೊಲ್ಲಂನಲ್ಲಿ ಎರಡು ಆಸ್ಪತ್ರೆಗಳು ಮತ್ತು ತಿರುವನಂತಪುರಂನಲ್ಲಿನ ಒಂದು ಆಸ್ಪತ್ರೆಗೆ ತೆರಳಿದೆ. ಮೂರು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಮಗು ಗರ್ಭದಲ್ಲಿಯೇ ಸಾವನ್ನಪ್ಪಿದೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ಮಾಧ್ಯಮಗಳಲ್ಲಿ ವರದಿಯಾದ ನಂತರ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿ ಘಟನೆಯ ತನಿಖೆಯನ್ನು ಆರಂಭಿಸಿದ್ದಾರೆ. ಮಾಧ್ಯಮಗಳ ವರದಿ ಆಧರಿಸಿ, ಕೇರಳದ ಮಾನವ ಹಕ್ಕುಗಳ ಸಮಿತಿಯು ರಾಜ್ಯದ ಮೂರು ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಪರಿಶೀಲನೆಗೆ ಕರಡು ಮಸೂದೆ ಸಲ್ಲಿಸಿದ ಕೇರಳ ಮಹಿಳಾ ಆಯೋಗ

ಎಂಟು ತಿಂಗಳ ಗರ್ಭಿಣಿಯಾಗಿದ್ದ ಮೀರಾ ಅವರಿಗೆ ಗರ್ಭಾವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೂ, ಪರವೂರಿನ ನೆಡುಂಗೋಲಂನಲ್ಲಿರುವ ರಾಮರಾವ್ ಸ್ಮಾರಕ ತಾಲೂಕು ಆಸ್ಪತ್ರೆ, ಕೊಲ್ಲಂನ ಸರ್ಕಾರಿ ವಿಕ್ಟೋರಿಯಾ ಮಹಿಳಾ ಆಸ್ಪತ್ರೆ ಮತ್ತು ತಿರುವನಂತಪುರಂನ ಎಸ್‌ಎಟಿ ಆಸ್ಪತ್ರೆ ಚಿಕಿತ್ಸೆಯನ್ನು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ.

ಒಂದು ವಾರದ ಹಿಂದೆ ಗರ್ಭಿಣಿ ಮೀರಾ ಪರವೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದರು ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.

“ಮೊದಲು ಆಕೆ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿನ ವೈದ್ಯರು ಮತ್ತು ನರ್ಸ್‌‌ಗಳು ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಎಸ್‌ಎಟಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಒಂದೆರಡು ದಿನಗಳ ನಂತರ ಅವರು ತಿರುವನಂತಪುರಂನ ಎಸ್‌ಎಟಿ ಆಸ್ಪತ್ರೆಗೆ ಹೋದಾಗ, ಅಲ್ಲಿ ಕೊಲ್ಲಂನ ಆಸ್ಪತ್ರೆಗಳಿಗೆ ವಾಪಸ್ ಹೋಗುವಂತೆ ಹೇಳಿದರು” ಎಂದು ಸಂಬಂಧಿ ಆರೋಪಿಸಿದ್ದಾರೆ.

ಕೊನೆಗೆ ನೋವಿನಿಂದ ಬಳಲುತ್ತಿದ್ದ ಅವರನ್ನು ಸೆಪ್ಟಂಬರ್‌ 15 ರಂದು ಕೊಲ್ಲಂ ಸರ್ಕಾರಿ ಎಂಸಿಎಚ್‌ಗೆ ಸೇರಿಸಲಾಯಿತು. ಹೆರಿಗೆ ಮಾಡಿಸಲಾಗಿದ್ದು, ಐದು ದಿನಗಳ ಹಿಂದೆ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಈ ಬಗ್ಗೆ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿ ಆರ್. ಶ್ರೀಲತಾ, ಆಸ್ಪತ್ರೆಗಳಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: 13,500 ಕುಟುಂಬಗಳಿಗೆ ಭೂಮಿ, ವಸತಿ ನೀಡಲು ಕೇರಳ ಸರ್ಕಾರ ನಿರ್ಧಾರ

LEAVE A REPLY

Please enter your comment!
Please enter your name here