ದೇಶಾದ್ಯಂತ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ವಿರೋಧಿಸಿ ‘ಇಂಡಿಯಾ’ (INDIA) ಒಕ್ಕೂಟವು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರಿಗೆ ಭಾರಿ ಹಿನ್ನಡೆಯಾಗುವಂತಹ ರಾಜಕೀಯ ತಲ್ಲಣವೊಂದು ಕೇರಳದಲ್ಲಿ ಸಂಭವಿಸಿದೆ.
ಪ್ರಸ್ತುತ ಸಿಇಸಿ ಆಗಿರುವ ಗ್ಯಾನೇಶ್ ಕುಮಾರ್ ಅವರು 2006ರಲ್ಲಿ ಕೇರಳ ಸರ್ಕಾರದ ಲೋಕೋಪಯೋಗಿ ಇಲಾಖೆಯ (PWD) ಕಾರ್ಯದರ್ಶಿಯಾಗಿದ್ದಾಗ ಅವರ ವಿರುದ್ಧ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ್ದ ಪ್ರಾಥಮಿಕ ತನಿಖೆಯ ಹಳೆಯ ರಹಸ್ಯ ಕಡತಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಕೇರಳ ಗೃಹ ಇಲಾಖೆಯು ತರಿಸಿಕೊಂಡಿದೆ ಎಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಸುಮಾರು ಎರಡು ದಶಕಗಳ ಹಿಂದೆ, ಬಹುಕೋಟಿ ರೂಪಾಯಿ ವೆಚ್ಚದ ಕೇರಳ ರಾಜ್ಯ ಸಾರಿಗೆ ಯೋಜನೆಯಡಿ (KSTP) ಎಂ.ಸಿ. ರಸ್ತೆಯ ಮೇಲ್ದರ್ಜೆಗೇರಿಸುವ ಪ್ರಮುಖ ಕಾಮಗಾರಿಯ ಹೊಣೆ ಹೊತ್ತಿದ್ದ ಇಂಡೋ-ಮಲೇಷ್ಯನ್ ಜಂಟಿ ಸಂಸ್ಥೆಯ ‘ಪಿಎಟಿಐ-ಬಿಇಎಲ್’ (PATI-BEL) ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಲೀ ಸೀ ಬೀನ್ ಎಂಬ ಮಲೇಷ್ಯನ್ ಸಿವಿಲ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸರ್ಕಾರಿ ಅಧಿಕಾರಿಗಳು ಕಾಮಗಾರಿಯ ಕೋಟ್ಯಂತರ ರೂಪಾಯಿ ಬಾಕಿ ಬಿಲ್‌ಗಳನ್ನು ಮಂಜೂರು ಮಾಡದೆ, ಭ್ರಷ್ಟಾಚಾರಕ್ಕಾಗಿ ಅಸಹಕಾರ ತೋರಿ ಕಿರುಕುಳ ನೀಡಿದ್ದರಿಂದ ಬೇಸತ್ತ ಬೀನ್, ಸ್ವದೇಶಕ್ಕೆ ಮರಳಿದ ಬಳಿಕ ಕೌಲಾಲಂಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. 1988ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಜ್ಞಾನೇಶ್ ಕುಮಾರ್ ಹೆಸರು ಈ ಮಲೇಷ್ಯನ್ ಎಂಜಿನಿಯರ್ ಬರೆದಿಟ್ಟಿದ್ದ ಭೀಕರ ‘ಡೆತ್‌ನೋಟ್’ನಲ್ಲಿ ನೇರವಾಗಿ ಉಲ್ಲೇಖವಾಗಿತ್ತು.
ಆ ಸಮಯದಲ್ಲಿ ಯೋಜನೆ ಅನುಷ್ಠಾನದಲ್ಲಿದ್ದ ಭ್ರಷ್ಟಾಚಾರದ ಜಾಲ ಮತ್ತು ಕಮಿಷನ್ ದಂಧೆಯನ್ನು ಲೀ ಅವರ ಆತ್ಮಹತ್ಯಾ ಪತ್ರವು ಬೆತ್ತಲೆಗೊಳಿಸಿತ್ತು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದ ಸೃಷ್ಟಿಸಿದ ಬಳಿಕ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ಪ್ರಭಾವಿ ಅಧಿಕಾರಿಗಳ ಕೈವಾಡದಿಂದಾಗಿ ಈ ತನಿಖೆಯು ನನೆಗುದಿಗೆ ಬಿದ್ದು ಸ್ಥಗಿತಗೊಂಡಿತ್ತು. ಪ್ರಮುಖ ದಾಖಲೆಗಳು ಮತ್ತು ಕಡತಗಳು ಪತ್ತೆಯಾಗದಂತೆ ಮುಚ್ಚಿಹಾಕಲಾಗಿತ್ತು. ಆದರೆ, ಇದೀಗ ದೇಶಾದ್ಯಂತ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಮತದಾರರ ಪಟ್ಟಿ ಅಕ್ರಮದ ಜನಾಕ್ರೋಶ ಮುಗಿಲುಮುಟ್ಟಿರುವ ಬೆನ್ನಲ್ಲೇ, ಸತೀಶನ್ ನೇತೃತ್ವದ ಕೇರಳದ ಯುಡಿಎಫ್ ಸರ್ಕಾರವು ಈ ಹಳೆಯ ಭ್ರಷ್ಟಾಚಾರ ಮತ್ತು ಆತ್ಮಹತ್ಯೆ ಪ್ರಕರಣದ ಫೈಲ್‌ಗಳನ್ನು ಮತ್ತೆ ತರಿಸಿಕೊಂಡು ಮರುಪರಿಶೀಲನೆಗೆ ಮುಂದಾಗಿರುವುದು ಕೇಂದ್ರಕ್ಕೆ ಮತ್ತು ಆಯೋಗಕ್ಕೆ ಭಾರಿ ಬಿಸಿ ಮುಟ್ಟಿಸಿದೆ.


