ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಕೇವಲ ಎರಡೇ ದಿನಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಭೀಕರ ದುರಂತಗಳು ಸಂಭವಿಸಿವೆ. ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಗಾಂಧೀನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ಮಾಂಜಾ ದಾರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ.
ಮಾಂಜಾ ದಾರದ ದುರಂತಕ್ಕೆ ಬಲಿಯಾದ ಯುವಕನನ್ನು ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ, ಗಾಂಧೀನಗರ ಪ್ರದೇಶದ ಬಳಿ ಏಕಾಏಕಿ ಗಾಳಿಪಟದ ಹರಿತವಾದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಮಾಂಜಾ ದಾರವು ಕುತ್ತಿಗೆಗೆ ಆಳವಾಗಿ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಧ್ರುವ ಅವರನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಸಂಭವಿಸಿದ ಗಾಂಧೀನಗರ ಪ್ರದೇಶವು ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ, ಪ್ರಸ್ತುತ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಿಷೇಧಿತ ಹಾಗೂ ಮಾರಣಾಂತಿಕ ಮಾಂಜಾ ದಾರಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


