ಜಾನುವಾರುಗಳನ್ನು ಸಾಗಿಸುವಾಗ ಸೂಕ್ತ ದಾಖಲೆಗಳು ಇಲ್ಲ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 32 ಎತ್ತುಗಳನ್ನು ವಧೆಗಾಗಿ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಮೇಲೆ ‘ಛತ್ತೀಸ್‌ಗಢ ಕೃಷಿ ಜಾನುವಾರು ಸಂರಕ್ಷಣಾ ಕಾಯ್ದೆ-2004’ ರ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಆದೇಶಿಸುವಾಗ ಸುಪ್ರೀಂ ಕೋರ್ಟ್ ಈ ಮಾತುಗಳನ್ನು ಹೇಳಿದೆ.
ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದೆ. “ದಾಖಲೆಗಳಿಲ್ಲದೆ ಜಾನುವಾರುಗಳನ್ನು ಸಾಗಿಸಿದ ಮಾತ್ರಕ್ಕೆ, ಅವುಗಳನ್ನು ಕೇವಲ ವಧೆಯ ಉದ್ದೇಶಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂದು ಭಾವಿಸಲು ಬರುವುದಿಲ್ಲ. ಸೂಕ್ತ ದಾಖಲೆಗಳ ಕೊರತೆಯು ವಧೆಯ ಉದ್ದೇಶವನ್ನು ಸಾಬೀತುಪಡಿಸುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಛತ್ತೀಸ್‌ಗಢದ ಕೆಡುವಾದಿಂದ ಒಡಿಶಾದ ಕಡೆಗೆ ಟ್ರಕ್‌ನಲ್ಲಿ 32 ಹೋರಿಗಳನ್ನು ಸಾಗಿಸಲಾಗುತ್ತಿತ್ತು. ಮಾಹಿತಿ ಪಡೆದ ಪೊಲೀಸರು ಟ್ರಕ್ ತಡೆದು ಜಾನುವಾರುಗಳನ್ನು ವಶಕ್ಕೆ ಪಡೆದು, ಚಾಲಕ ಹಾಗೂ ಕ್ಲೀನರ್ ಅನ್ನು ಬಂಧಿಸಿದ್ದರು. ಜೊತೆಗೆ ಟ್ರಕ್‌ಗೆ ಬೆಂಗಾವಲಾಗಿ ತೆರಳುತ್ತಿದ್ದ ಬೊಲೆರೊ ಕಾರಿನಲ್ಲಿದ್ದ ನಾಲ್ವರನ್ನು ಬಂಧಿಸಲಾಗಿತ್ತು. ಇವರಲ್ಲಿ ಅರ್ಜಿದಾರರೂ ಒಬ್ಬರಾಗಿದ್ದು, ವಿಚಾರಣಾ ನ್ಯಾಯಾಲಯವು ಕಾಯ್ದೆಯ ಸೆಕ್ಷನ್ 6 ಉಲ್ಲಂಘನೆ ಮತ್ತು ಸೆಕ್ಷನ್ 10 ರ ಅಡಿಯಲ್ಲಿ ಅವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 1,000 ರೂಪಾಯಿ ದಂಡ ವಿಧಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಅರ್ಜಿದಾರರಿಗೆ ದೊಡ್ಡ ರಿಲೀಫ್ ನೀಡಿದೆ.


