Homeಕರ್ನಾಟಕಫೋಟೋಗ್ರಾಫರ್ ಪೂಜಾರಿ ಮಂತ್ರಿಯಾದ ಮಹಿಮೆ! ಇದು ಸಂವಿಧಾನದ ಪವಾಡ!!

ಫೋಟೋಗ್ರಾಫರ್ ಪೂಜಾರಿ ಮಂತ್ರಿಯಾದ ಮಹಿಮೆ! ಇದು ಸಂವಿಧಾನದ ಪವಾಡ!!

ಇವತ್ತಿಗೂ ಸಂಘಪರಿವಾರದ ಕವಾಯತು, ಬೈಠಕ್‍ಗಳಲ್ಲಿ ಮಾನಸಿಕ ಅಸ್ಪೃಶ್ಯವಾಗಿಯೇ ಇರುವ ಉಡುಪಿಯ ಕೋಟ ಶ್ರೀನಿವಾಸ ಪೂಜಾರಿಗೆ ಒಂದಲ್ಲಾ ಎರಡು ಬಾರಿ ಮಂತ್ರಿಗಿರಿ, ಒಂದು ಬಾರಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಂಥ ಗೌರವದ ಸ್ಥಾನ-ಮಾನ ಸಿಕ್ಕಿರುವುದು ಆತ ನಿಷ್ಠನಾಗಿರುವ ಮನುವಾದಿಗಳ “ಸ್ಮೃತಿ” ಗ್ರಂಥವದಿಂದಲ್ಲ; ಅಂಬೇಡ್ಕರ್ ವಿರಚಿತ ಸಂವಿಧಾನದಿಂದ!!

- Advertisement -
- Advertisement -

ಹಿಂದೂತ್ವದ ಪ್ರಬಲ ಪಿಚ್ ಕರಾವಳಿಯಿಂದ ಮಂತ್ರಿಗಿರಿ ಆಟ ಆಡುವ ಅವಕಾಶ “ಸಂಘಸೇವಕ” ಕೋಟ ಶ್ರೀನಿವಾಸ ಪೂಜಾರಿ ಒಬ್ಬರಿಗೆ ಮಾತ್ರ ದಕ್ಕಿದೆ. ತನ್ನೂರಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರ ಬರಹಗಳನ್ನು ಓದುತ್ತಲೇ ಬೆಳೆದ ಪೂಜಾರಿ ಮೈಮೇಲೆ ಆರೆಸ್ಸೆಸ್‍ನ ಕೇಸರಿ ದೇವರು ಆವಾಹನೆಯಾಗಿ ಅದ್ಯಾವದೋ ಕಾಲವಾಗಿಹೋಗಿದೆ. ಪೂಜಾರಿಯ ತಾತ್ವಿಕ ತರಲೆ ಬದಿಗಿಟ್ಟು ಆತನ ರಾಜಕೀಯ ಉತ್ಕರ್ಷ ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ಪ್ರಜಾಪ್ರಭುತ್ವದ ಪವಾಡ ಮತ್ತು ಸಂವಿಧಾನದ ಶ್ರೇಷ್ಠತೆಯ ಮಹಿಮೆ ಒಟ್ಟೊಟ್ಟಿಗೆ ಬಿಚ್ಚಿಕೊಳ್ಳುತ್ತದೆ.

ಹಿಂದುಳಿದ ವರ್ಗದ ತೀರ ಬಡ ಕೃಷಿ ಕುಟುಂಬದ ಹುಡುಗನೊಬ್ಬ ರಾಜ್ಯದ ಪ್ರತಿಷ್ಟಿತ ಕ್ಯಾಬಿನೆಟ್ ಮಂತ್ರಿಯಾಗುತ್ತಾನೆಂದರೆ ಸುಮ್ಮನೆ ಮಾತಲ್ಲ! ಅದು ಈ ನೆಲದ ಸಮಾನತೆಯ ಸಂವಿಧಾನದಿಂದ ಮಾತ್ರ ಸಾಧ್ಯವಾಗುವಂಥದ್ದು. ಇವತ್ತಿಗೂ ಸಂಘಪರಿವಾರದ ಕವಾಯತು, ಬೈಠಕ್‍ಗಳಲ್ಲಿ ಮಾನಸಿಕ ಅಸ್ಪೃಶ್ಯವಾಗಿಯೇ ಇರುವ ಉಡುಪಿಯ ಕೋಟ ಶ್ರೀನಿವಾಸ ಪೂಜಾರಿಗೆ ಒಂದಲ್ಲಾ ಎರಡು ಬಾರಿ ಮಂತ್ರಿಗಿರಿ, ಒಂದು ಬಾರಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಂಥ ಗೌರವದ ಸ್ಥಾನ-ಮಾನ ಸಿಕ್ಕಿರುವುದು ಆತ ನಿಷ್ಠನಾಗಿರುವ ಮನುವಾದಿಗಳ “ಸ್ಮೃತಿ” ಗ್ರಂಥವದಿಂದಲ್ಲ; ಅಂಬೇಡ್ಕರ್ ವಿರಚಿತ ಸಂವಿಧಾನದಿಂದ!!

ಪೂಜಾರಿಯ ರಾಜಕೀಯ ಚರಿತ್ರೆಯ ಅರ್ಧದ ವರೆಗೆ ಸಂಘಪರಿವಾರದ ಮತೀಯ ಪ್ರಭಾವ ಹೆಚ್ಚಿಲ್ಲ. ಆರಂಭದಲ್ಲಿ ಪೂಜಾರಿಯಲ್ಲಿ ಧರ್ಮಾಂದತೆ ಇರಲಿಲ್ಲ. ಎಲ್ಲಿ ಹಿಂದುಳಿದ ವರ್ಗದ ತರುಣರಲ್ಲಿರುವ ಸಾತ್ವಿಕ ಹುಂಬತನವಿತ್ತು. ಭ್ರಷ್ಟತೆ, ಅನ್ಯಾಯ ಕಂಡಾಗ ಕೂಗಾಡುವ ಗುಣವಿತ್ತು. ಈಗ ಬಿಜೆಪಿಯಲ್ಲಿರುವ ಜಯಪ್ರಕಾಶ್ ಹೆಗ್ಡೆ ಜನತಾದಳದಿಂದ ಬ್ರಹ್ಮಾವರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾಗ ಬಿಜೆಪಿಗೊಬ್ಬ ಬಿಲ್ಲವರ ಕ್ಯಾಂಡಿಡೇಟ್ ಬೇಕಿತ್ತು. ಸಿಡಿಮಿಡಿ ಸ್ವಭಾವದ ಹುಡುಗ ಕೋಟ ಶ್ರೀನಿವಾಸ ಪೂಜಾರಿ ಇಂದಲ್ಲ ನಾಳೆಯಾದರೂ ತಮ್ಮ ಕೇಸರಿ ತತ್ವಕ್ಕೆ ತಕ್ಕಂತೆ ಬೆಳೆಯಬಹುದೆಂಬ ಎಣಿಕೆಯಿಂದ ವಿ.ಎಸ್.ಆಚಾರ್ಯರ ಚೆಡ್ಡಿ ಪಠಾಲಂ ಆತನ ಸೆಳೆದುಕೊಂಡಿತ್ತು. ಎರಡು ಮೂರು ಬಾರಿ ಜೆಪಿ ಎದುರು ನಿಂತು ಸೋತಿದ್ದ ಪೂಜಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ಗೆ ಗೆಲ್ಲುತ್ತಲೇ ಇದ್ದರು. ಆತ ಗ್ರಾಪಂ ಸದಸ್ಯನಾಗುತ್ತಿದ್ದುದು ಜನತಾಪಕ್ಷದಿಂದಾಗಿತ್ತು.

ಸಾಮಾಜಿಕ-ರಾಜಕೀಯ ತುಡಿತದ ಪೂಜಾರಿ ಹೊಟ್ಟೆಪಾಡಿಗೆ ಕೋಟದಲ್ಲಿ ಒಂದು ಫೋಟೋ ಸ್ಟೂಡಿಯೋ ಹಾಕಿಕೊಂಡಿದ್ದರು. ಅಲ್ಲಿ ಕುಳಿತು ಬಡವರಿಗೆ ರೇಷನ್ ಕಾರ್ಡ್ ಮಾಡಿಸಿಕೊಡುವುದು, ಅಮಾಯಕ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಸರ್ಟಿಫಿಕೇಟ್ ಮಾಡಿಸಿಕೊಡುವುದು, ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗೊಯ್ಯುವುದು ಪೂಜಾರಿ ಮಾಡುತ್ತಿದ್ದರು. ಜಿಪಂನ ವಿರೋಧ ಪಕ್ಷದ ನಾಯಕನಾಗಿ ಸದ್ದು-ಸುದ್ದಿ ಮಾಡುತ್ತಿದ್ದ ಪೂಜಾರಿ ಭಾಗ್ಯ ಖುಲಾಯಿಸಿದ್ದು ಹಠಾತ್ ವಿಧಾನ ಪರಿಷತ್ ಸದಸ್ಯನಾದ ನಂತರವೇ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಚುನಾವಣೆ ಎದುರಾದಾಗ ಕಲ್ಲಡ್ಕ ಭಟ್, ವಿ.ಎಸ್.ಆಚಾರ್ಯ, ಎ.ಜಿ.ಕೊಡ್ಗಿಗಳ ಸ್ಥಳೀಯ ಬಿಜೆಪಿ ಬಾಸ್‍ಗಳ ಗ್ಯಾಂಗಿಗೆ “ಬಿಲ್ಲವ” ಕೋಟ ತುಂಬಬೇಕಾದ ಜರೂರತ್ತು ಎದುರಾಗಿತ್ತು. ಆಗ ಈ ಬ್ರಾಹ್ಮಣ ತಂಡ ತಮಗೆ ನಿಷ್ಠನಾಗಿರುವ ಶ್ರೀನಿವಾಸ ಪೂಜಾರಿಗೆ ಆ ಛಾನ್ಸ್ ಕೊಟ್ಟಿತ್ತು.

ಎರಡು ಬಾರಿ ಎಮ್ಮೆಲ್ಸಿ ಆದಾಗಲೂ ಪೂಜಾರಿ ಹಿಂದೂತ್ವ ಸಂಸ್ಕೃತಿ ಪೂರ್ತಿಯಾಗಿ ಮೈಗೂಡಿಸಿಕೊಂಡಿರಲಿಲ್ಲ. ಒಂಥರಾ ಪ್ರವಾದಿಯಂತೆ ಮಾತಾಡುತ್ತ ಧರ್ಮ ಸಹಿಷ್ಣುತೆ ಪಾಲಿಸುತ್ತಿದ್ದರು. ಇದಕ್ಕೆ ಆತನ ಸಾಹಿತ್ಯಿಕ ಓದು, ಲಂಕೇಶ್ ಪತ್ರಿಕೆ, ಪ್ರತಿವಾರ ಕೊಂಡುಕೊಳ್ಳುತ್ತಿದ್ದುದೇ ಪ್ರಮುಖ ಕಾರಣವಾಗಿತ್ತು. ಆದರೆ ಯಾವಾಗ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಮಂತ್ರಿಯಾದರೋ ಆಗ ಶುರುವಾಯ್ತು ಪೂಜಾರಿಯ ಹಿಂದೂತ್ವದ ಪ್ರವರ!! ರಾಜಕೀಯ ಅಸ್ತಿತ್ವದ ಪ್ರಶ್ನೆ ಮತ್ತು ಮಂತ್ರಿ ಮಾಡಿದ್ದ ಕಲ್ಲಡ್ಕ ಭಟ್ಕರ ಋಣ ಪೂಜಾರಿಯಲ್ಲಿ ಪೂರ್ಣಪ್ರಮಾಣದ ಮಾನಸಿಕ ಪರಿವರ್ತನೆ ತಂದಿತ್ತು.

ಆಗ ಮಂತ್ರಿಯಾಗಬೇಕಾಗಿದ್ದು ಕುಂದಾಪುರದ ಅಖಂಡ ಬ್ರಹ್ಮಚಾರಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಹಾಲಾಡಿಗೆ ಬೆಂಗಳೂರಿಗೆ ಬಂದು ಪ್ರಮಾಣ ವಚನ ಸ್ವೀಕರ ಮಾಡುವಂತೆ ಆಹ್ವಾನವೂ ಬಂದಿತ್ತಂತೆ. ಆದರೆ ರಾತ್ರೆ ಬೆಳಗಾಗುವುದರಲ್ಲಿ ಆ ಅವಕಾಶ ಪುಜಾರಿ ಪಾಲಾಗಿತ್ತು. ಸಂಘಕ್ಕೆಂದೂ ನಿಷ್ಠನಲ್ಲದ, ಕೌಬಾಯ್ ಗ್ಯಾಂಗಿನ ಬಗ್ಗೆ, ಅನೈತಿಕ ಪೋಲಿಸ್‍ಗಿರಿ ಬಗ್ಗೆ ಗೇಲಿಯೂ ಮಾಡುತ್ತಿದ್ದ ಹಾಲಾಡಿ ಸ್ಥಳೀಯ ಬಿಜೆಪಿಯ ಪ್ರಶ್ನಾತೀತ ದೊರೆ ಕಲ್ಲಡ್ಕ ಭಟ್ಟರ ಕೆಂಗಣ್ಣಿಗೆ ತುತ್ತಾಗಿದ್ದರು. ಬಂಟ ಸಮುದಾಯದ ಹಾಲಾಡಿಗೆ ಮಂತ್ರಿಗಿರಿ ತಪ್ಪಿಸಿದ್ದಷ್ಟೇ ಅಲ್ಲ, ಆತನಿಗಿಂತ ಜೂನಿಯರ್ ಆದ ಬಿಲ್ಲವ ಸಮುದಾಯದ ಪೂಜಾರಿಗೆ ಮಂತ್ರಿ ಮಾಡುವ ಮೂಲಕ ಆತನ ಹೊಟ್ಟೆಯುರಿ ಹೆಚ್ಚು-ಮಾಡುವ ಹಿಕಮತ್ತು ಕಲ್ಲಡ್ಕ ಭಟ್ ಮಾಡಿದ್ದರು. ಇದರಿಂದ ಕೆರಳಿದ್ದ ಹಾಲಾಡಿ ಮತ್ತವನ ಬಂಟರ ಪಡೆ ಪಾಪದ ಮಂತ್ರಿ ಪೂಜಾರಿ ಮೇಲೆ ಮುರಕೊಂಡು ಬಿದ್ದಿತ್ತು.

ಆ ಸಂದಿಗ್ಧ ಸಂದರ್ಭದಲ್ಲಿ ಬಚಾವಾಗಲು ಪೂಜಾರಿಗೆ ಆರೆಸ್ಸೆಸ್, ಹಿಂದೂತ್ವ, ಸಾಬರ ಸತಾಯಿಸುವಿಕೆ ಭೂತ ಆವಾಹನೆ ಅನಿವಾರ್ಯ ಆಗಿಹೋಯಿತು! ಜತೆಗೆ ಮಂತ್ರಿ ಭಾಗ್ಯ ಕರುಣಿಸಿದ್ದ ಕಲ್ಲಡ್ಕ ಭಟ್ಟರಿಗೆ ಸಂಪ್ರೀತಗೊಳಿಸಬೇಕಿತ್ತು. ಹೀಗಾಗಿ ಆತ ಅಲ್ಲಿಂದಾಚೆ ಕಟ್ಟರ್ ಚೆಡ್ಡಿಯಾಗಿ ರೂಪಾಂತರ ಆಗಿಹೋದರು. ನಳಿನ್, ಶೋಭಕ್ಕರ ಸರಿಸಮಕ್ಕೆ ಬೆಂಕಾಭಾಷಣ ಉಗುಳುವ ಕಲೆಕರಗತ ಮಾಡಿಕೊಂಡರು. ಕಳೆದ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ಕರಾವಳಿಯ ಬಿಲ್ಲವ-ದೀವರು ಸಮುದಾಯ ಕಡೆಗಣಿಸಿದೆ ಎಂಬ ಅಸಮಧಾನ ಎದ್ದಿತ್ತು. ಆಗ ಕಲ್ಲಡ್ಕ ಭಟ್ ಬಳಸಿದ್ದು ಇದೇ ಪೂಜಾರಿ ಅಸ್ತ್ರ. ಬಿಲ್ಲವರ ಸಮಾಧಾನ ಮಾಡಲು ಕೋಟ ಶ್ರೀನಿವಾಸ ಪೂಜಾರಿಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಮಾಡಲಾಯಿತು. ಈಗ ಮತ್ತೆ ಪೂಜಾರಿ ಮಂತ್ರಿಯಾಗಿರುವುದು ಬಿಲ್ಲವ(ಈಡಿಗ) ಕೋಟಾ ಮತ್ತು ಸಂಘ ಸರದಾರರ ಚೇಲಾಗಿರಿ ನಿಷ್ಠೆಯಿಂದ ಮಾಡುತ್ತಾರೆಂಬ ಕ್ಯಾಲಿಬರ್‍ನಿಂದಲೇ. ಈ ಬಾರಿಯೂ ಪೂಜಾರಿಯ ಛೂ ಮಂತ್ರಗಾಳಿಯಲ್ಲಿ ಕಲ್ಲಡ್ಕ ಭಟ್ಟರ ಕರಾಮತ್ತು ನಡೆದಿದೆ.

ಭಟ್ಟರು ಮೊದಲಿನಷ್ಟು ಆರೆಸ್ಸೆಸ್‍ನಲ್ಲಿ ಈಗ ಪ್ರಭಾವಿಯಲ್ಲ. ಆದರೂ ಆತನಿಗೆ ಯಡ್ಡಿಯ ಜತೆ ಮತ್ತು ಪೇಜಾವರ ಸ್ವಾಮಿ ಸಂಗಡ ಗಾಢವಾದ ನಂಟು ಉಳಿಸಿಕೊಂಡಿದ್ದಾರೆ. ಹಾಲಾಡಿ ಮಂತ್ರಿಗಿರಿಗಾಗಿ ಸ್ವಜಾತಿ ಬಂಟರ ಉದ್ಯಮಿಗಳ ಲಾಬಿ ಮೂಲಕ ಪ್ರಬಲ ಪ್ರಯತ್ನ ನಡೆಸಿದ್ದರು. ಏನೇ ಆಗಲಿ ಹಾಲಾಡಿಗೆ ಮಂತ್ರಿಯಾಗಲು ಬಿಡಬಾರದೆಂಬ ಹಠ ಭಟ್ಟರದಾಗಿತ್ತು. ಈಗಿತ್ತಲಾಗಿ ಹಿಂದೂತ್ವ ಮೈಗೂಡಿಸಿಕೊಂಡಿದ್ದ ಹಾಲಾಡಿಗೆ ಅದು ಮಂತ್ರಿ ಆಗಲು ನೆರವಾಗುತ್ತದೆಂಬ ಭಾವನೆಯಿತ್ತು. ಆದರೆ ಕೋಟ ಶ್ರೀನಿವಾಸ ಪೂಜಾರಿಗೆ ಹೋಲಿಸಿದರೆ ಹಾಲಾಡಿ ಹಿಂದೂತ್ವಕ್ಕೆ ಖದಿರಿಲ್ಲ. ಬಿಜೆಪಿಯಲ್ಲಿ ಸೀನಿಯಾರಿಟಿಯೂ ಇಲ್ಲ. ಮಂತ್ರಿ ಮಾಡಿಲ್ಲ ಎಂದು ಕಲ್ಲಡ್ಕ ಭಟ್ಟನ ಬೈಯುತ್ತ ಬಿಜೆಪಿ ಬಿಟ್ಟು ಪಕ್ಚೇತರನಾಗಿ ಶಾಸಕನಾಗಿದ್ದ ಹಾಲಾಡಿ ಕಳೆದ ಬಾರಿ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲ ಸಂಸದೆ ಶೋಭಕ್ಕನ ಸೆರಗಿಡಿದು ಮತ್ತೆ ಬಿಜೆಪಿ ಸೇರಿದ್ದರು. ಶೋಭಕ್ಕನೂ ಹಾಲಾಡಿಗೆ ಮಂತ್ರಿ ಪದವಿ ಕೊಡಿಸಲು ಕಸರತ್ತು ಮಾಡಿದ್ದರು. ಬಂಟರ ಉದ್ಯಮಿಗಳ ತಂಡವೊಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರರಾವ್ ಬಳಿಗೂ ಹೋಗಿತ್ತು. ಆದರೆ ಅಲ್ಲೇ ಅಪಶಕುನವಾಗಿತ್ತು.

ಒಟ್ಟಿನಲ್ಲಿ ಜಾತಿ ಕೋಟಾ, ರಾಜಕೀಯ ಒಳಸುಳಿಗಳಿಂದ ಭಾಷಣಕೋರ ಮಂತ್ರಿಯಾಗಿದ್ದಾರೆ. ಕರಾವಳಿಯ ತ್ರಿವಳಿ ಜಿಲ್ಲೆಗೆ ಪೂಜಾರಿಯೇ ಈಗ ಸರದಾರ. ಕರಾವಳಿ ಸಮಸ್ಯೆ-ಸಂಕಷ್ಟಗಳ ಸಂಕ್ರಮಣ ಕಾಲದಲ್ಲಿದೆ! ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನದ ಹೊಣೆಗಾರಿಕೆ ಪೂಜಾರಿ ನಿಭಾಯಿಸಬೇಕಿದೆ. ಆತನ ಸ್ವಜಾತಿ ಬಿಲ್ಲವ, ದೀವರು, ನಾಮಧಾರಿಗಳು ಹಿಂದೂತ್ವ ಸೆಳೆತದಲ್ಲಿ ದಿಕ್ಕು ತಪ್ಪಿದ್ದಾರೆ. ಈ ಸಮುದಾಯ ಹುಡುಗರೇ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಯುದ್ಧದ ಬಲಿ ಪಶುಗಳಾಗುತ್ತಿದ್ದಾರೆ. ಇದೆಲ್ಲ ಕೋಟ ಪೂಜಾರಿಯ ಮಂತ್ರಿಗಿರಿಗೆ ಅರ್ಥವಾದೀತಾ? ಮನುವಾದಿ ಬಾಸ್‍ಗಳ ಖುಷಿ ಪಡಿಸುವ ಭರದಲ್ಲಿ ಕುಲಕ್ಕೆ ಮೃತ್ಯು ಕೊಡಲಿ ಕಾವು ಆಗುವರಾ? ಹಿಂದೆಲ್ಲ ಪೂಜಾರಿ ಮಂತ್ರಿಯಾದಾಗ, ವಿರೋಧ ಪಕ್ಷದ ನಾಯಕನಾದಾಗ ಉಡುಪಿ ಜಿಲ್ಲೆಗಾಗಲಿ, ಬಿಲ್ಲವರಿಗಾಗಲಿ ಆದ ಅನುಕೂಲ ಅಷ್ಟಕ್ಕೆಷ್ಟೇ.
ಒಂದಂತೂ ಖರೆ, ಮಂತ್ರಿ ಪೂಜಾರಿ ಸಾಹೇಬರ ಧರ್ಮಕಾರಣಕ್ಕೆ ತೋರಿಸುತ್ತಿರುವ ಬದ್ಧತೆ, ಕೆಚ್ಚುಗಳಲ್ಲಿ ಅರ್ಧದಷ್ಟು ಅಭಿವೃದ್ಧಿ, ಮಾನವೀಯತೆ, ಬಿಲ್ಲವ ತರುಣರ ಟ್ರ್ಯಾಕಿಗೆ ತರುವುದಕ್ಕೆ ತೋರಿಸಿದರೆ ಸಾಕು; ಕರಾವಳಿಯ ಪರ್ವ ಎಂದೆಂದೂ ಮರೆಯದ ಕಾಲಘಟ್ಟವಾಗಿ ದಾಖಲಾಗುತ್ತದೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...