ಆರೋಪ

ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ನೋ ಐಜಿ ಲಕ್ಷ್ಮಿ ಸಿಂಗ್, “ನಾವು ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆದಿದ್ದೇವೆ. ಅವರ ಹೇಳಿಕೆಯನ್ನು ದಾಖಲಿಸುತ್ತೇವೆ, ಅದರ ಆಧಾರದ ಮೇಲೆ ನಾವು ಸಾಕ್ಷ್ಯವನ್ನು ಸಂಗ್ರಹಿಸುತ್ತೇವೆ” ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತರ ಇಬ್ಬರನ್ನು ಸಹ ಪ್ರಶ್ನಿಸಲಾಗುತ್ತಿದೆ ಎಂದು ಲಕ್ನೋ ಐಜಿ ಲಕ್ಷ್ಮಿ ಸಿಂಗ್, ಹೇಳಿದ್ದಾರೆ. ಬುಧವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಲಖಿಂಪುರ್ ಹಿಂಸಾಚಾರ ಪ್ರಕರಣದ ಆರೋಪಿಗಳ ಕುರಿತು ಸ್ಥಿತಿ ಮತ್ತು  ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ಕೇಳಿತ್ತು.

ಇದನ್ನೂ ಓದಿ: ಲಖಿಂಪುರ್‌ ಖೇರಿ ಹತ್ಯಾಕಾಂಡ: 100 ಗಂಟೆಯಾದರೂ ಆರೋಪಿಗಳ ಬಂಧನವಿಲ್ಲ – ರೈತರ ಆಕ್ರೋಶ

“ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ..? ನೀವು ಅವರನ್ನು ಬಂಧಿಸಿದ್ದೀರೋ ಇಲ್ಲವೋ ಎಂಬುದನ್ನು ನಾವು ತಿಳಿದುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿತ್ತು.

ಅಕ್ಟೋಬರ್ 3 ರಂದು, ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗನ ಬೆಂಗಾವಲು ವಾಹನ ಪ್ರತಿಭಟನಾ ನಿರತ ರೈತರ ಮೇಲೆ ಹರಿದು ನಾಲ್ವರು ಹತ್ಯೆಗೀಡಾಗಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ಇನ್ನೂ ನಾಲ್ಕು ಜನರು ಸಾವನ್ನಪ್ಪಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಏಕಾಏಕಿ ಉದ್ದೇಶಪೂರ್ವಕವಾಗಿ ಕಾರು ನುಗ್ಗಿಸಿ 4 ರೈತರ ಹತ್ಯೆಗೆ ಕಾರಣವಾದ ಆರೋಪದ ಮೇಲೆ ಇಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಕರಣದ ಮುಖ್ಯ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಸಚಿವನ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಹರಿದ ಕಾರು ತಮ್ಮದೇ ಎಂದು ಒಪ್ಪಿಕೊಂಡಿದ್ದ. ಆದರೆ ಘಟನೆ ಸ್ಥಳದಲ್ಲಿ ತಾನಿರಲಿಲ್ಲ ಎಂಬುದು ಅವರ ವಾದವಾಗಿತ್ತು. ಆಗ ಸಚಿವ ಅಜಯ್ ಮಿಶ್ರಾ ಯಾವ ಸಂದರ್ಭದಲ್ಲಿ ಬೇಕಾದರೂ ತನ್ನ ಮಗ ವಿಚಾರಣೆಗೆ ಹಾಜರಾಗುತ್ತಾನೆ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಘಟನೆ ನಡೆದ ನಾಲ್ಕು ದಿನ ಆದರೂ ಪೊಲೀಸರಿಗೆ ಆತನ ಸುಳಿವು ಸಿಕ್ಕಿಲ್ಲ. ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ.


ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ

LEAVE A REPLY

Please enter your comment!
Please enter your name here