ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ  ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲಿ ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. 11 ಗಂಟೆಗೆ ರಾಜ್ಯಪಾಲರು ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ನೋಡಿ:

‘ಬೆಂಗಳೂರು ಚಲೋ’ ಮೂಲಕ ಹುಬ್ಬಳ್ಳಿಯಿಂದ ರಾಜಧಾನಿಗೆ ಆಗಮಿಸಿರುವ ರೈತರು ಮಹದಾಯಿಗಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ರಾಜ್ಯಪಾಲರು, ರೈತರ ಮನವಿ ಸ್ವೀಕರಿಸುತ್ತಿಲ್ಲ ಹೀಗಾಗಿ ಪಟ್ಟು ಬಿಡದ ಹೋರಾಟಗಾರರು ರಾತ್ರಿಯಿಡೀ ಮಳೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಧಾರಾಕಾರ ಮಳೆಯಲ್ಲೇ ಕುಳಿತ ಪರಿಣಾಮ ಮಹಿಳೆಯರು ಪರದಾಡಿದ್ರು. ಇನ್ನು ಕೆಲವರಿಗೆ ಚಳಿ, ಜ್ವರ ಬಂದಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವರನ್ನು ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊದಿಕೆಯಿಲ್ಲದೇ ರಾತ್ರಿಯಿಡೀ ಚಳಿಯಲ್ಲೇ ಪ್ರತಿಭಟನಾಕಾರರು ಮಲಗುವಂತಾಯಿತು. ಮಳೆಯಲ್ಲಿ ಟರ್ಪಲ್ ಹಿಡಿದು ಧರಣಿ ನಡೆಸಿದರು.

ಇದನ್ನೂ ಓದಿ: ಚುನಾವಣೆಗಾಗಿ ರಾಜ್ಯದ ಹಿತ ಬಲಿಕೊಟ್ಟ ಸಿಎಂ ಯಡಿಯೂರಪ್ಪ: ಬೆಂಬಲಕ್ಕೆ ನಿಂತ ಬೊಮ್ಮಾಯಿ..

ಇನ್ನು ಬೆಳಗ್ಗೆ 11 ಗಂಟೆಯೊಳಗೆ ಮನವಿ ಸ್ವೀಕರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ. ನಮಗೆ ರಾಜ್ಯಪಾಲರ ಮೇಲೆ ಮಾತ್ರ ನಂಬಿಕೆಯಿದೆ. ಡಿಸಿಎಂ ಗೋವಿಂದ ಕಾರಜೋಳ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಹೋರಾಟ ಕೈಬಿಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ನಮ್ಮನ್ನು ಮೊದಲು ರಾಜ್ಯಪಾಲರ ಬಳಿ ಕರೆದುಕೊಂಡು ಹೋಗಿ, ಅವರು ನಮ್ಮ ಮನವಿಯನ್ನು ಸ್ವೀಕರಿಸಲಿ, ರಾಜ್ಯಪಾಲರ ಮೇಲೆ ಮಾತ್ರ ನಮಗೆ ನಂಬಿಕೆಯಿದೆ. ಸರ್ಕಾರ ಹಾಗೂ ಯಾವುದೇ ಪಕ್ಷಗಳ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿ ಅವರ ತತ್ವವನ್ನು ಪಾಲಿಸುವ ಮೂಲಕ ನಿರಶನ ಕೈಗೊಳ್ಳಲಿದ್ದೇವೆ. ನಮಗೆ ಏನಾದರೂ ತೊಂದರೆ ಆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ರಾಜ್ಯಪಾಲರು ಮಧ್ಯಪ್ರವೇಶಿಸಿ, ಮಹದಾಯಿ ವಿಚಾರದಲ್ಲಿ ನ್ಯಾಯ ಒದಗಿಸಿಕೊಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ, ರಾಜ್ಯದ ರೈತರ ಸಂಕಷ್ಟ ನಿವಾರಿಸಬೇಕು. ಸುದೀರ್ಘ ವರ್ಷಗಳ ಹೋರಾಟದಿಂದ ಮಹದಾಯಿ ಉತ್ತರಕರ್ನಾಟಕ ಭಾಗದ ರೈತರಿಗೆ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here