ಆರ್ಥಿಕ ಪರಿಸ್ಥಿತಿ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗರ ಹೇಳಿಕೆಯ ಕನ್ನಡ ಅನುವಾದ & ವಿಡಿಯೋಇಲ್ಲಿದೆ

ಸರಿಯಾದ ಪಂಚ್ ಕೊಟ್ಟ ಮನಮೋಹನ್ ಸಿಂಗ್

0

ಭಾರತದ ಆರ್ಥಿಕ ವ್ಯವಸ್ಥೆ ಇಂದು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯ ದರ 5% ಇದ್ದು, ಆರ್ಥಿಕತೆ ದೀರ್ಘಕಾಲೀನ ನಿಧಾನಗತಿಯಲ್ಲಿ ಸಿಲುಕಿಕೊಂಡಿದ್ದು ತಿಳಿಯುತ್ತದೆ. ಭಾರತದ ಅರ್ಥವ್ಯವಸ್ಥೆಯು ಶರವೇಗವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಆದರೆ ಮೋದಿ ಸರ್ಕಾರದ ಎಲ್ಲಾ ವಿಧದ ಪ್ರಮಾದಗಳು ಈ ನಿಧಾನಗತಿಗೆ ಕಾರಣವಾಗಿದೆ.

ಪ್ರಮುಖವಾಗಿ ಉತ್ಪಾದನಾ ವಲಯದ ಬೆಳವಣಿಗೆ 0.6% ರಷ್ಟಿದ್ದು ಇಂದು ಕುಂಟುವ ಸ್ಥಿತಿಯಲ್ಲಿದೆ.  ಮೋದಿ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ  ಜಿ.ಎಸ್.ಟಿ ಪ್ರಮಾದದಿಂದ ಆರ್ಥಿಕ ವ್ಯವಸ್ಥೆ ಇನ್ನು ಸುಧಾರಿಸಿಕೊಂಡಿಲ್ಲ ಎಂಬುದನ್ನು ಇದು ನಿಚ್ಚಳವಾಗಿ ತೋರಿಸುತ್ತಿದೆ.

ದೇಶದಲ್ಲಿ ಬೇಡಿಕೆ ಕುಸಿದಿದೆ ಮತ್ತು ಅನುಭೋಗಿ (ಬಳಕೆ) ದರ 18 ತಿಂಗಳಲ್ಲಿ ಅತಿ ಕನಿಷ್ಠ ಮಟ್ಟದಲ್ಲಿದೆ. ನಾಮಿನಲ್ ಜಿಡಿಪಿ ಬೆಳವಣಿಗೆ 15 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಹಾಗೆ ತೆರಿಗೆ ಆದಾಯದಲ್ಲಿ ದೊಡ್ಡ ಅಂತರ ಏರ್ಪಟ್ಟಿದೆ. ತೆರಿಗೆ ಅನಿರ್ದಿಷ್ಟತೆಯಿಂದಾಗಿ ಉದ್ಯಮಿಗಳು ಸ್ಥಿರ ಸ್ಥಿತಿಗೆ ಬರಲಾಗುತ್ತಿಲ್ಲ. ಇದರಿಂದ  ಸಣ್ಣ ಮತ್ತು ದೊಡ್ಡ ಉದ್ಯಮಿಗಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ತೆರಿಗೆ ಭಯೋತ್ಪಾದನೆಯು ಅಡೆತಡೆಯಿಲ್ಲದೆ ಮುಂದುವರೆಯುತ್ತಿದ್ದು ಹೂಡಿಕೆದಾರರ ಸ್ಥಿತಿ ಡೋಲಾಯಮಾನವಾಗಿದೆ. ಆರ್ಥಿಕ ಚೇತರಿಕೆಯ ಯಾವ ಲಕ್ಷಣಗಳು ಕಂಡುಬರುತ್ತಿಲ್ಲ .

ಮೋದಿ ಸರ್ಕಾರದ ನೀತಿಗಳು ಉದ್ಯೋಗ ಕಡಿತಕ್ಕೆ ಕಾರಣವಾಗಿದ್ದು, ಆಟೋಮೊಬೈಲ್ ಕ್ಷೇತ್ರವೊಂದರಲ್ಲೆ 3.5 ಲಕ್ಷಕ್ಕೂ ಜಾಸ್ತಿ ಉದ್ಯೋಗಗಳು ನಷ್ಟವಾಗಿವೆ. ಅನೌಪಚಾರಿಕ ವಲಯದಲ್ಲು ದೊಡ್ಡ ಪ್ರಮಾಣದ ಉದ್ಯೋಗ ಕಡಿತವಾಗಿದ್ದು ದುರ್ಬಲ ಕಾರ್ಮಿಕ ವರ್ಗವನ್ನು ಇದು ದುಸ್ಥಿತಿಗೆ ತಳ್ಳುತ್ತಿದೆ.

ಗ್ರಾಮೀಣ ಭಾರತದ ಜನರ ಸ್ಥಿತಿ ದುರ್ಬರವಾಗಿದೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಮತ್ತು ಗ್ರಾಮೀಣ ಜನರ ಆದಾಯ ಕಡಿಮೆಯಾಗಿದೆ. ಮೋದಿ ಸರ್ಕಾರವು ತೋರಿಸುತ್ತಿರುವ ಕಡಿಮೆ ಹಣದುಬ್ಬರವು ರೈತರ ವೆಚ್ಚ ಮತ್ತು ಆದಾಯದ ನಷ್ಟ ಹಾಗೂ ದೇಶದ 50% ಜನರ ಚಿಂತಾಜನಕ ಸ್ಥಿತಿಗೆ ಸಾಕ್ಷಿಯಾಗಿದೆ.

ಸ್ವತಂತ್ರ ಸಂಸ್ಥೆಗಳನ್ನು ಕಪಿಮುಷ್ಠಿಗೆ ತೆಗೆದುಕೊಂಡು ಅವುಗಳ ಸ್ವಾಯತ್ತತೆಗೆ ಧಕ್ಕೆ ತರಲಾಗಿದೆ. ಸರ್ಕಾರಕ್ಕೆ 1.76 ಲಕ್ಷ ಕೋಟಿ ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್ ನ ನೀತಿ ಪರೀಕ್ಷಾರ್ಹ. ಯಾಕೆಂದರೆ ಆರ್.ಬಿ.ಐ ನಿಂದ  ಬಿಡುಗಡೆಯಾದ ದೊಡ್ಡ ಮೊತ್ತದ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಾನು ಇನ್ನೂ ಯೋಚಿಸಿಲ್ಲ ಎಂದು ಸರ್ಕಾರ ಹೇಳಿದ್ದು ಇದು ಆರ್.ಬಿ.ಐ ನ ಸ್ವಾಯತ್ತತೆ ಮತ್ತು ಸರ್ಕಾರದ ಬೇಜವಾಬ್ದಾರಿಯ ಪ್ರಶ್ನೆಯಾಗಿದೆ.

ಅದಕ್ಕಿಂತ ಜಾಸ್ತಿಯಾಗಿ, ಮೋದಿ ಸರ್ಕಾರದ ಅಡಿಯಲ್ಲಿ ಡೇಟಾದ ವಿಶ್ವಾಸಾರ್ಹತೆ ಪ್ರಶ್ನಾರ್ಥಕವಾಗಿದೆ. ಬಜೆಟ್ ಹೇಳಿಕೆಗಳು ಮತ್ತು ರೋಲ್ ಬ್ಯಾಕ್ ಗಳು ಅಂತರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸವನ್ನು ಅಲುಗಾಡಿಸಿವೆ. ಭೌಗೋಳಿಕ ರಾಜಕೀಯ ಮರು ಜೋಡಣೆಗಳಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಇರುವ ಅವಕಾಶಗಳ ಲಾಭವನ್ನು ಪಡೆದು ಭಾರತ ತನ್ನ ರಫ್ತನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೋದಿ ಸರ್ಕಾರ ಇಂದು ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿದೆ.

ನಮ್ಮ ಯುವಕರು, ರೈತರು, ಕೃಷಿ ಕಾರ್ಮಿಕರು, ಉದ್ಯಮಿಗಳು ಮತ್ತು ಅಂಚಿನ ವಲಯದ ದುಡಿಮೆಯ ವರ್ಗದ ಸ್ಥಿತಿ ಸುಧಾರಿಸಬೇಕು. ಭಾರತವನ್ನು ಈಗಿರುವ ಹಾದಿಯಲ್ಲಿ ಮುನ್ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಹಗೆತನದ ರಾಜಕೀಯವನ್ನು ಬದಿಗಿಟ್ಟು, ವಿವೇಕದ ಮಾತುಗಳನ್ನು ಆಲಿಸಿಕೊಂಡು ಮತ್ತು ವಿಚಾರಶಕ್ತಿಯುಳ್ಳವರನ್ನು ಬಳಸಿಕೊಂಡು ಈ ಮಾನವ ನಿರ್ಮಿತ ಪ್ರಮಾದದಿಂದ ಭಾರತದ ಆರ್ಥಿಕತೆಯನ್ನು ಹೊರತರಬೇಕೆಂದು ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here