ಸತತ ಎರಡು ಸಲ ಟಿ-20 ಚಾಂಪಿಯನ್ ಪಟ್ಟ ಗಿಟ್ಟಿಸಿರುವ ಕರ್ನಾಟಕ ತಂಡ ಈಗ ನಾಕ್ ಔಟ್ ಹಂತ ಪ್ರವೇಶಿಸುತ್ತಿದೆ.
ಇವತ್ತು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಉತ್ತರಪ್ರದೇಶ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕ್‌ಔಟ್ (ಎಂಟರ ಘಟ್ಟ) ಹಂತ ತಲುಪುವತ್ತ ಮುನ್ನಡೆದಿದೆ.
2019-20 ಮತ್ತು 2020-21 ರ ಸಾಲಿನಲ್ಲಿ ಸತತವಾಗಿ ಚಾಂಪಿಯನ್ ಪಟ್ಟ ಧರಿಸಿದ್ದ ಕರ್ನಾಟಕ ಈಗ ಮೂರನೇ ಟ್ರೋಫಿ ಎತ್ತಿಹಿಡಿಯುವತ್ತ ಸಾಗಿದೆ.
ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿಯನ್ನೂ (ಒನ್‌ಡೇ ಚಾಂಪಿಯನ್‌ಶಿಪ್) ರಾಜ್ಯ ತಂಡ ಗೆಲ್ಲುವ ಮೂಲಕ ಒಂದೇ ಸೀಸನ್ನಿನಲ್ಲಿ ಎರಡೂ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಯುಪಿ ತಂಡದ ಸುರೇಶ್ ರೈನಾ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕರ್ನಾಟಕ ಯುವಪಡೆ 5 ವಿಕೆಟ್‌ಗಳ ಜಯ ಸಾಧಿಸಿದೆ. ಸದ್ಯ 16 ಅಂಕ ಗಳಿಸುವ ಮೂಲಕ ಎಲೈಟ್ ಎ ಗ್ರೂಪ್‌ನಲ್ಲಿ 2ನೇ ಸ್ಥಾನದಲ್ಲಿದೆ. ಮೊದಲ ಹಂತದ ಎಲ್ಲ ಐದೂ ಪಂದ್ಯ ಆಡಿರುವ ರಾಜ್ಯ ತಂಡ ನಾಲ್ಕರಲ್ಲಿ ಗೆದ್ದು 16 ಅಂಕ ಗಳಿಸಿದೆ.
ಇದನ್ನೂ ಓದಿ: À la lanterne 2.0? ಚೈನಾದ ಇತ್ತೀಚಿನ ವಿದ್ಯಮಾನದ ಕುರಿತು ರಾಜಾರಾಂ ತಲ್ಲೂರು
ಹಿಂದಿನ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ 10 ಓವರ್‌ಗಳಲ್ಲಿ 75 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ತಂಡಕ್ಕೆ, ಗದುಗಿನ ಅನಿರುದ್ಧ ಜೋಶಿಯ ಬಿರುಸಿನ ಆಟ (40 ಎಸೆತ, ಅಜೇಯ 64 ರನ್) ಗೆಲವು ತಂದಿತ್ತು.
ಕೆ.ಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಮಯಾಂಕ್ ಅಗರ್‌ವಾಲ್ ಅನುಪಸ್ಥಿತಿಯಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ನೀಡುತ್ತಿದೆಯಾದರೂ, ನಾಯಕ ಕರುಣ್ ನಾಯರ್, ಉಪನಾಯಕ ಪವನ್ ದೇಶಪಾಂಡೆ ಇಲ್ಲಿವರೆಗೆ ಬ್ಯಾಟಿಂಗ್ ಲಯ ಕಂಡುಕೊಂಡಿಲ್ಲ. ದೇವದತ್ತ ಪಡಿಕ್ಕಲ್ ಮಾತ್ರ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಅಭಿಮನ್ಯು, ಮಿಥುನ್, ಶ್ರೇಯಸ್ ಗೋಪಾಲ್, ರೋಹನ್ ಕದಂ, ಪ್ರವೀಣ ದುಬೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಪಿನ್ನರ್ ಕೆ.ಗೌತಮ್ ಅವರಿಂದ ತಂಡ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಕರ್ನಾಟಕ ಹ್ಯಾಟ್ರಿಕ್ ಸಾಧನೆ ಮಾಡಲಿದೆಯೇ ಎಂಬುದು ಈಗ ಕುತೂಹಲ ಹೆಚ್ಚಲು ಕಾರಣವಾಗಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿ ನಮ್ಮ ಸಾಂವಿಧಾನಿಕ ಹಕ್ಕು: ಸುಪ್ರೀಂಗೆ ಪರೋಕ್ಷ ಸಂದೇಶ ರವಾನಿಸಿದ ರೈತರು
