Homeಮುಖಪುಟನಿರ್ಲಕ್ಷತೆಯೇ ಅಥವಾ ಪಿತೂರಿಯೇ? ಫುಲ್ವಾಮಾದ ಸಂಪೂರ್ಣ ಸತ್ಯವೇನೆಂದು ಕೇಳುತ್ತಿದೆ ದೇಶ!

ನಿರ್ಲಕ್ಷತೆಯೇ ಅಥವಾ ಪಿತೂರಿಯೇ? ಫುಲ್ವಾಮಾದ ಸಂಪೂರ್ಣ ಸತ್ಯವೇನೆಂದು ಕೇಳುತ್ತಿದೆ ದೇಶ!

- Advertisement -
- Advertisement -

ಯಾವಾಗ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಅತ್ಯಂತ ಆಘಾತಕಾರಿಯಾದ ಸಂದರ್ಶನ ಬಿತ್ತರವಾಯಿತೋ, ಆಗಿನಿಂದ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳು ಗರಬಡಿದಂತೆ ಸುಮ್ಮನಾಗಿವೆ. ಗುಲಾಂ ನಬಿ ಆಜಾದ್‌ರ ಸಣ್ಣಪುಟ್ಟ ಆರೋಪಗಳ ಮೇಲೆಯೇ ಗಂಟೆಗಟ್ಟಲೆ ಕಾರ್ಯಕ್ರಮ ನಡೆಸುವ ಚಾನೆಲ್‌ಗಳ ಬಳಿ ಈಗ ಬಹಿರಂಗಪಡಿಸಲಾಗಿರುವ ಅತ್ಯಂತ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಒಂದು ನಿಮಿಷವೂ ಇಲ್ಲ. 15ನೇ ಏಪ್ರಿಲ್‌ನ ಬಹುತೇಕ ಮುಖ್ಯ ವಾಹಿನಿ ಪತ್ರಿಕೆಗಳಲ್ಲಿ ಎಲ್ಲಿಯೂ ಈ ಸುದ್ದಿಯ ಸಣ್ಣ ಉಲ್ಲೇಖವೂ ಕಾಣಿಸಿಕೊಂಡಿಲ್ಲ.

ಒಂದು ವಿಷಯ ಇಲ್ಲಿ ಹೇಳಬೇಕಿದೆ. 2019ರ 14ನೇ ಫೆಬ್ರುವರಿಯಂದು ಫುಲ್ವಾಮಾದಲ್ಲಿ ಆದ ಭೀಕರ ಘಟನೆಯ ಕಾಲದಲ್ಲಿ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಇತ್ತೀಚಿಗೆ, ಮೊದಲು ಪ್ರಕಾಶ್ ಟಂಡನ್ ಹಾಗೂ ನಂತರ ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದೇನೆಂದರೆ ಈ ಭೀಕರ ಘಟನೆಯು ಸರಕಾರದ ತಪ್ಪಿನಿಂದ ಆಗಿದೆ ಎಂದು. ಅವರು ಪ್ರಧಾನಮಂತ್ರಿಗೆ ಘಟನೆಯ ದಿನದಂದೇ ಈ ಭೀಕರ ಘಟನೆಯ ನಮ್ಮ ತಪ್ಪಿನಿಂದ ಆಗಿದೆ ಹಾಗೂ ಅದನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದರು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನಂತರ ಅಜಿತ್ ದೋವಲ್ ಇಬ್ಬರೂ ಮಲಿಕ್‌ಗೆ ಈ ವಿಷಯದ ಬಗ್ಗೆ ಸುಮ್ಮನಿರಬೇಕೆಂದು ತಾಕೀತು ಮಾಡಿದರು.

ಈ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಹೇಳಿದ್ದೆಲ್ಲವೂ ಬ್ರಹ್ಮವಾಕ್ಯದಂತೆ ಸಂಪೂರ್ಣ ಸತ್ಯ ಎಂದು ಪರಿಗಣಿಸಬೇಕಿಲ್ಲ. ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಸತ್ಯಪಾಲ್ ಮಲಿಕ್ ಮತ್ತು ಪ್ರಧಾನಮಂತ್ರಿಯ ನಡುವೆ ಎಲ್ಲವೂ ಸರಿಯಿದ್ದಿಲ್ಲ ಎಂಬುದು ಗುಟ್ಟೇನಿಲ್ಲ. ಹಾಗೂ ಅವರು ಕಳೆದ ಸ್ವಲ್ಪ ಸಮಯದಿಂದ ಮುನಿಸಿಕೊಂಡಿದ್ದೂ ಕಂಡುಬಂದಿದೆ. ಇಂಥದರಲ್ಲಿ, ಅವರ ಆರೋಪಗಳ ಹಿಂದೆ ಯಾವುದೇ ದ್ವೇಷ ಅಥವಾ ಸೇಡು ಕೆಲಸ ಮಾಡುತ್ತ, ಅದರಲ್ಲಿ ಉತ್ಪ್ರೇಕ್ಷೆ ಅಥವಾ ಸುಳ್ಳು ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಸಂದರ್ಶನದ ನಂತರ ರಾಷ್ಟ್ರೀಯ ಮೀಡಿಯಾ ಸತ್ಯಪಾಲ್ ಮಲಿಕ್‌ಗೆ ಕಠಿಣವಾದ ಪಾಟೀಸವಾಲು ಮಾಡಿ, ಅವರ ಎಲ್ಲಾ ದಾವೆಗಳನ್ನು ಪುಷ್ಟೀಕರಿಸಿ, ಒಂದು ವೇಳೆ ಅವರು ಯಾವುದೇ ತಪ್ಪು ಹೇಳಿಕೆ ನೀಡಿದ್ದರೆ, ಆಗ ಅದನ್ನು ಖಂಡಿಸಿದ್ದರೆ, ಅದು ಖಂಡಿತವಾಗಿಯೂ ಸರಿಯಾದ ಕ್ರಮವಾಗುತ್ತಿತ್ತು. ಆದರೆ ಈ ವಿಷಯದ ಮೇಲೆ ಸಂಪೂರ್ಣ ಮೌನ ವಹಿಸಿರುವುದನ್ನು ನೋಡಿದಾಗ ಅನಿಸುವುದೇನೆಂದರೆ ’ಈ ಸುದ್ದಿಯ ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಮಾಧ್ಯಮಗಳಿಗೆ ಕರೆ ಮಾಡಿ ಹೇಳಿಲಾಗಿದೆ ಎಂದು. ಈ ಪ್ರಾಯೋಜಿತ ಮೌನವಂತೂ ಸಂದರ್ಶನವು ಬಹಿರಂಗಪಡಿಸಿದ ವಿಷಯಗಳ ತೂಕವನ್ನು ಇನ್ನಷ್ಟೂ ಹೆಚ್ಚಿಸುತ್ತಿದೆ.

ಆದರೆ ಕೇವಲ ಈ ಒಂದು ಆಧಾರದ ಮೇಲೆ ಇಷ್ಟು ಗಂಭೀರವಾದ ವಿಷಯದ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳಬಾರದು. ಫುಲ್ವಾಮಾ ದಾಳಿಯ ಹಿಂದೆ ಸರಕಾರದ ನಿರ್ಲಕ್ಷತೆ ಅಥವಾ ಅದಕ್ಕಿಂತ ಆಳವಾದ ಪಿತೂರಿ ಇತ್ತೋ ಇಲ್ಲವೋ ಎಂಬುದರ ಬಗ್ಗೆ ಯಾವುದಾದರೂ ಸ್ವತಂತ್ರ ಪ್ರಮಾಣಗಳು ಇವೆಯೇ ಎಂಬುದರ ತನಿಖೆ ಮಾಡಬೇಕು. ಅದೃಷ್ಟವಶಾತ್, ಪ್ರಮಾಣ ಹುಡುಕಲು ನಮಗೆ ಹೊಸದಾಗಿ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ. ಇಂಗ್ಲಿಷ್ ಪತ್ರಿಕೆ ಫ್ರಂಟ್‌ಲೈನ್‌ನ ಫೆಬ್ರುವರಿ 2021ರ ಸಂಚಿಕೆಯಲ್ಲಿ ಆನಂದೋ ಭಕ್ತೊ ಅವರು ಸರಕಾರದ ಗುಪ್ತಚರ ವಿಭಾಗದ ಸಂದೇಶಗಳನ್ನು ತಲಕಾಡಿ ಹುಡುಕಿ, ಬಹಿರಂಗಪಡಿಸಿದ್ದೇನೆಂದರೆ, ಈ ದಾಳಿಗೆ ಮುನ್ನ ಸರಕಾರಕ್ಕೆ ಒಂದಲ್ಲ ಎರಡಲ್ಲ, ಒಟ್ಟು 11 ಬಾರಿ ಗೂಢಚಾರಿ ಸೂಚನೆಗಳು ಬಂದು, ಇಂತಹದ್ದೇನೋ ಆಗುತ್ತೆ ಎಂಬ ರಹಸ್ಯ ಮಾಹಿತಿ ಸಿಕ್ಕಿತ್ತೆಂಬ ಅಂಶ ಎದ್ದುಕಾಣುತ್ತದೆ. ಇದರ ಎಲ್ಲಾ ದಾಖಲೆಗಳು ಫ್ರಂಟ್‌ಲೈನ್ ಪತ್ರಿಕೆಯ ಬಳಿ ಇವೆ. ಆನಂದೋ ಭಕ್ತೊ ಅವರ ಈ ತನಿಖಾ ವರದಿಯನ್ನು ಇಲ್ಲಿಯವರೆಗೆ ಸರಕಾರ ಖಂಡಿಸಿಲ್ಲ.

ಸತ್ಯಪಾಲ್ ಮಲಿಕ್‌ರ ದಾವೆಗಳಿಗೆ ಪುಷ್ಟಿ ನೀಡುವ ಈ ತಥ್ಯಗಳನ್ನು ಒಂದು ಬಾರಿ ನೋಡುವ. ಫ್ರಂಟ್‌ಲೈನ್‌ನ ಲೇಖನದ ಪ್ರಕಾರ ಜಮ್ಮು ಕಾಶ್ಮೀರದ ಪೊಲೀಸರಿಗೆ ಮೊದಲ ಎಚ್ಚರಿಕೆ ಫುಲ್ವಮಾ ದಾಳಿಗೆ ಒಂದೂವರೆ ತಿಂಗಳ ಮುನ್ನ 2 ಮತ್ತು 3ನೆಯ ಜನವರಿ 2019ರಂದು ಜಮ್ಮು ಕಾಶ್ಮೀರದ ಡಿಜಿಪಿ ಮತ್ತು ಕಾಶ್ಮೀರ ರೇಂಜಿನ ಐಜಿಪಿಯ ಹೆಸರಿಗೆ ಒಂದು ರಹಸ್ಯ ವರದಿಯಲ್ಲಿ ಸಿಕ್ಕಿತು. ಇದರಲ್ಲಿ ಹೇಳಿದ್ದೇನೆಂದರೆ, ದಕ್ಷಿಣ ಕಾಶ್ಮೀರದಲ್ಲಿ ಜೈಶೆ ಮೊಹಮ್ಮದ್ ’ಕಿಸಾಸ್ ಮಿಷನ್’ನ ಹೆಸರಿನಲ್ಲಿ ಪ್ರತೀಕಾರದ ತಯ್ಯಾರಿ ನಡೆಯುತ್ತಿದೆ. ಈ ಎಚ್ಚರಿಕೆಯ ಗಂಭೀರತೆಗೆ ಒತ್ತುನೀಡಿ ಈ ವರದಿಯು ನೆನಪಿಸಿದ್ದೇನೆಂದರೆ ಇದಕ್ಕೂ ಮುನ್ನ ಇಂತಹದ್ದೊಂದು ಎಚ್ಚರಿಕೆ ಬಂದ ನಂತರ ಫುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ಕ್ಯಾಂಪಿನ ಮೇಲೆ ದಾಳಿ ಆಗಿತ್ತು. ಅದೇ ವಾರ 7ನೆಯ ಜನೆವರಿಯಂದು ಮೂರು ಉಗ್ರವಾದಿಗಳು (ಅದರಲ್ಲಿ ವಿದೇಶಿಯರೂ ಒಳಗೊಂಡಿದ್ದರು) ಕಾಶ್ಮೀರದ ಶೊಪಿಯಾ ಪ್ರದೇಶದಲ್ಲಿ ಯುವಕರಿಗೆ ಐಇಡಿ ಸ್ಪೋಟಕದ ತರಬೇತಿ ನೀಡುತ್ತಿದ್ದಾರೆ ಎಂಬ ಮೂರನೆಯ ಎಚ್ಚರಿಕೆ ಸಿಕ್ಕಿತ್ತು, ಫುಲ್ವಾಮಾದ ಅವಂತಿಪೋರ್ ಪ್ರದೇಶದಲ್ಲಿ ವಿದೇಶಿ ಉಗ್ರವಾದಿಗಳ ಸಹಯೋಗದಿಂದ 20 ಸ್ಥಳೀಯ ಉಗ್ರವಾದಿಗಳು ದೊಡ್ಡದೊಂದು ಭಯೋತ್ಪಾದಕ ಕೆಲಸ ಮಾಡುವ ಯೋಜನೆ ಮಾಡುತ್ತಿದ್ದಾರೆ ಎಂಬ 18ನೆಯ ಜನವರಿಯಂದು ಸಿಕ್ಕ ರಹಸ್ಯ ವರದಿಯು ಇದಕ್ಕೆ ಪುಷ್ಟಿ ನೀಡಿತು. ಅಂದೇ ಮತ್ತು ಮತ್ತೆ 21ನೆಯ ಜನವರಿಯಂದು ಗೊತ್ತಾಗಿದ್ದೇನೆಂದರೆ ಕಿಸಾಸ್ ಮಿಷನ್ ಹೆಸರಿನಲ್ಲಿ, 2017ರಲ್ಲಿ ಜೈಶೆ ಮೊಹಮ್ಮದ್‌ನ ಮುಖ್ಯಸ್ಥನ ಸಹೋದರನ ಮಗ ತಲಹಾ ರಾಷೀದ್‌ನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಯೋಜನೆ ರಚಿಸಲಾಗುತ್ತಿದೆ ಎಂದು.

ಇದನ್ನೂ ಓದಿ: ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಆದರೆ ಅಲ್ಲಿಯತನಕ ಈ ದಾಳಿ ಎಲ್ಲಿ ಆಗುತ್ತದೆ, ಯಾರು ಮಾಡುತ್ತಾರೆ ಹಾಗೂ ಕಾರ್ಯಾಚರಣೆ ನಡೆದರೆ ಯಾರ ವಿರುದ್ಧ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. 24 ಮತ್ತು 25ನೆಯ ಜನವರಿಯಿಂದ ಸಿಕ್ಕ ಗುಪ್ತ ಮಾಹಿತಿಯು ಈ ಕೊಂಡಿಯನ್ನೂ ಜೋಡಿಸಿತು. ಆಗ ತಿಳಿದುಬಂದಿದ್ದೇನೆಂದರೆ, ಜೈಶೆ ಮೊಹಮ್ಮದ್‌ನ ಅವಂತಿಪೊರಾ ಗುಂಪು ಮುದಾಸ್ಸಿರ್ ಖಾನ್‌ನ ನೇತೃತ್ವದಲ್ಲಿ ದೊಡ್ಡ ಫಿದಾಯೀನ್ ದಾಳಿಯ ನಡೆಸುತ್ತಿದೆ ಎಂಬ ವರದಿ ಹಾಗೂ ಆ ಗುಂಪು ಫುಲ್ವಾಮಾದ ಶಾಹಿದ್ ಬಾಬಾನ ಸಂಪರ್ಕದಲ್ಲಿದೆ ಎಂದು. ಈಗ ಪೊಲೀಸರ ಬಳಿ ಕಾರ್ಯಾಚರಣೆ ನಡೆಸಲು ಅವಶ್ಯಕ ಮಾಹಿತಿ ಇತ್ತು. ಮುದಾಸ್ಸಿರ್ ಒಬ್ಬ ಸ್ಥಳೀಯ ಉಗ್ರವಾದಿಯಾಗಿದ್ದ ಹಾಗೂ ಅವನ ತನಕ ತಲುಪುವುದು ಅಸಾಧ್ಯವಾಗಿರಲಿಲ್ಲ. 25ನೆಯ ತಾರೀಕಿನಂದು ಮುದಾಸ್ಸಿರ್ ಖಾನ್ ಮಿಡೂರಾ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಎಂಬ ಗುಪ್ತಚರ ವರದಿ ಹೇಳಿತು. ಅವಂತಿಪೊರಾ ಅಥವಾ ಪಾಂಪೋರ್ ಬಳಿ ದಾಳಿಯ ತಯ್ಯಾರಿ ನಡೆಯುತ್ತವೆ ಎಂಬುದು ಆಗ ಸ್ಪಷ್ಟವಾಗಿತ್ತು. ಜೈಶೆ ಮೊಹಮ್ಮದ್ ಸಂಘಟನೆಯು ಪ್ರತೀಕಾರದ ಕಾರ್ಯಾಚರಣೆ ನಡೆಸಲಿದೆ ಎಂಬ ಸುದ್ದಿ 19ನೆಯ ಫೆಬ್ರುವರಿಯಂದು ಸಿಆರ್‌ಪಿಎಫ್ ಬಳಿಯೂ ಬಂದಿತ್ತು.

ದಾಳಿಯ ಎರಡು ದಿನಗಳ ಮುನ್ನ ದಾಳಿ ಹೇಗೆ ಆಗಲಿದೆ ಎಂಬುದು ಗೊತ್ತಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಬಳಸುವ ದಾರಿಯಲ್ಲಿ ಐಇಡಿ ಸ್ಫೋಟದ ತಯ್ಯಾರಿ ಜೈಶೆ ಮೊಹಮ್ಮದ್‌ನ ಪಾಕಿಸ್ತಾನ್ ಹ್ಯಾಂಡ್ಲರ್ ನಡೆಸುತ್ತಿದೆ ಎಂಬ ವರದಿ 12ನೆಯ ಫೆಬ್ರುವರಿಯಂದು ಕೇಂದ್ರ ಸರಕಾರದ ಗೂಢಚರ್ಯ ಸಂಸ್ಥೆ ಐಬಿಯ ಮಲ್ಟಿ ಎಜೆನ್ಸಿ ಸೆಂಟರ್‌ಗೆ ಬಂದು ತಲುಪಿತು. ಮತ್ತೇ ದಾಳಿಯ 24 ಗಂಟೆಗಳ ಮುನ್ನ ಕೊನೆಯ ಮತ್ತು ಹನ್ನೊಂದನೆಯ ಎಚ್ಚರಿಕೆ ಸಿಕ್ಕಿತು, ಅದರಲ್ಲಿ ಜೈಶೆ ಮೊಹಮ್ಮದ್ ಭದ್ರತಾ ಪಡೆಗಳ ದಾರಿಯಲ್ಲಿ ಐಇಡಿ ಸ್ಫೋಟ್ ಮಾಡಬಹುದು ಹಾಗೂ ಭದ್ರತಾ ಪಡೆಗಳಿಗೆ ತಕ್ಷಣ ಅಲರ್ಟ್ ಮಾಡಬೇಕು ಎಂದು ಹೇಳಲಾಗಿತ್ತು.

ಈ ಎಲ್ಲಾ ಎಚ್ಚರಿಕೆಗಳ ಹೊರತಾಗಿಯೂ ಮಾರನೆಯ ದಿನ ಅಂದರೆ 14ನೆಯ ಫೆಬ್ರುವರಿಯಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಸಿಆರ್‌ಪಿಎಫ್‌ನ ಜವಾನರನ್ನು ಯಾವ ದಾರಿಯಲ್ಲಿ ಸ್ಫೋಟವಾಗಬಹುದೆಂಬ ರಹಸ್ಯ ಮಾಹಿತಿ ಸಿಕ್ಕಿತ್ತೋ, ಅದೇ ದಾರಿಯಲ್ಲಿ ಕಳುಹಿಸಲಾಯಿತು. ರಸ್ತೆಯಲ್ಲಿ ಹೋಗುವ ಬದಲಿಗೆ ವಿಮಾನಗಳನ್ನು ಕಳುಹಿಸಬೇಕು ಎಂದು ಸಿಆರ್‌ಪಿಎಫ್ ಬೇಡಿಕೆಯಿಟ್ಟಿದ್ದರೂ ಅವುಗಳನ್ನು ನಿರಾಕರಿಸಲಾಯಿತು. ಅದಷ್ಟೇ ಅಲ್ಲ, ಸತ್ಯಪಾಲ್ ಮಲಿಕ್ ಪ್ರಕಾರ ಆ ರಸ್ತೆಯ ಎಲ್ಲಾ ನಾಕಾಗಳಲ್ಲಿ ಸಂಚಾರ ನಿರ್ಬಂಧಿಸಲಾಗಿರಲಿಲ್ಲ. ಆಗ ಯಾವುದರ ಆತಂಕವಿತ್ತೋ ಅದೇ ಆಯಿತು. ಯಾವುದರ ಮಾಹಿತಿ ಮುಂಚೆಯೇ ಸಿಕ್ಕಿತ್ತೊ, ಅದೇ ಜೈಶೆ ಮೊಹಮ್ಮದ್ ಮುಖಾಂತರ, ಅದೇ ಮುದಾಸ್ಸಿರ್ ಖಾನ್‌ನ ನೇತೃತ್ವದಲ್ಲಿ ಅದೇ ಫುಲ್ವಾಮಾ ಅವಂತಿಪೊರಾ ಪ್ರದೇಶದಲ್ಲಿ ಐಇಡಿ ಸ್ಫೋಟ ಆಯಿತು. ನಮ್ಮ ನಲವತ್ತು ಜವಾನರು ಹುತಾತ್ಮರಾದರು.

ಹಾಗಾಗಿಯೇ ಸತ್ಯಪಾಲ್ ಮಲಿಕ್‌ರ ಖುಲಾಸೆಯನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಈ ಎಲ್ಲಾ ಪ್ರಮಾಣಗಳು ಮತ್ತು ಪ್ರಧಾನಮಂತ್ರಿಯವರು ಅವರಿಗೆ ಸುಮ್ಮನಿರಲು ಹೇಳಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆ ಒಂದು ದೊಡ್ಡ ಪ್ರಶ್ನೆ ಎತ್ತುತ್ತದೆ. ಒಂದು ವೇಳೆ ಇಷ್ಟೆಲ್ಲಾ ಗುಪ್ತಚರ ಮಾಹಿತಿಯ ಹೊರತಾಗಿಯೂ ಭದ್ರತಾ ಪಡೆಗಳನ್ನು ಸಾವಿನ ದವಡೆಗೆ ನೂಕಿದರು ಎಂದರೆ ಇದು ಒಂದು ಅತ್ಯಂತ ಭೀಕರ ನಿರ್ಲಕ್ಷತೆಯ ವಿಷಯವಾಗಿದೆ. ಒಂದು ವೇಳೆ ಹೀಗೆಯೇ ಆಗಿದ್ದಲ್ಲಿ, ಈ ಕ್ರಿಮಿನಲ್ ನಿರ್ಲಕ್ಷತೆಯ ಹೊಣೆಗಾರಿಕೆ ಯಾರದ್ದು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಇಲ್ಲಿಯತನಕ ಯಾವುದೇ ಅಧಿಕಾರಿ ಅಥವಾ ಸಚಿವನ ವಿರುದ್ಧ ನಿರ್ಲಕ್ಷತೆಗಾಗಿ ಕ್ರಮ ಏಕೆ ಕೈಗೊಂಡಿಲ್ಲ? ಅಥವಾ ಇದು ಕೇವಲ ನಿರ್ಲಕ್ಷ್ಯದ ವಿಷಯವಾಗದೆ, ಒಂದು ಪಿತೂರಿಯಾಗಿತ್ತೇ? ಎಲ್ಲಾ ಗೊತ್ತಿದ್ದರೂ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ಭೀಕರ ಘಟನೆ ಘಟಿಸಲು ಉದ್ದೇಶಪೂರ್ವಕವಾಗಿ ಬಿಡಲಾಯಿತೇ? ಇದೇ ಸತ್ಯವಾಗಿದ್ದಲ್ಲಿ, ಇದು ದೇಶದ್ರೋಹದ ಪ್ರಕರಣವಾಗುತ್ತದೆ. ಈ ಪಿತೂರಿ ಯಾರ ಸೂಚನೆಯ ಮೇರೆಗೆ ನಡೆದಿತ್ತು ಎಂಬುದನ್ನು ತಿಳಿಯುವ ಹಕ್ಕು ದೇಶಕ್ಕಿದೆ. ಎಲ್ಲಿಯವರೆಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲವೋ, ಅಲ್ಲಿಯವರೆಗೆ ಸತ್ಯಪಾಲ್ ಮಲಿಕ್ ಖುಲಾಸೆಗೊಳಿಸಿದ ವಿಷಯಗಳು ಪ್ರತಿಧ್ವನಿಸುತ್ತಲೇ ಇರಲಿವೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...