Homeಮುಖಪುಟ’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

- Advertisement -
- Advertisement -

’ಜನಹಿತ ಅಭಿಯಾನ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ನಿರ್ಧಾರವು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸ್ಫೂರ್ತಿಗೆ ವಿರುದ್ಧವಾಗಿದೆ. 103ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ನ್ಯಾಯಮೂರ್ತಿಗಳಾದ ಮಹೇಶ್ವರಿ, ತ್ರಿವೇದಿ ಮತ್ತು ಪರ್ದಿವಾಲ ಅವರನ್ನು ಒಳಗೊಂಡಿದ್ದ ಪೀಠದ ಬಹುಮತದ ತೀರ್ಮಾನವು ಜಾತಿ ಆಧರಿತ ಮೀಸಲಾತಿಯ ಸಿಂಧುತ್ವದ ಬಗ್ಗೆಯೇ ಕಂಗೇಡಿಸುವ ಮತ್ತು ಕಳವಳಕಾರಿ ಪ್ರಶ್ನೆಗಳನ್ನು ಕೇಳಿದೆ.

ಆರ್ಥಿಕವಾಗಿ ಹಿಂದುಳಿದ ವಿಭಾಗಗಳು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳ ಹಾಗೆಯೇ ತಾರತಮ್ಯ ಅನುಭವಿಸುತ್ತಿರುವ ಗುಂಪುಗಳು ಎಂದು ಈ ಬಹುಮತದ ನಿರ್ಧಾರವು ಹೇಳುತ್ತದೆ. ಇಡಬ್ಲ್ಯುಎಸ್ ಗುಂಪುಗಳು ಬಡತನದ ಕಾರಣದಿಂದ ತಾರತಮ್ಯ ಎದುರಿಸುವುದರಿಂದಾಗಿ ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಶೇಕಡಾ ಮೀಸಲಾತಿಗೆ ಅರ್ಹವಾಗಿವೆ ಎಂದು ತೀರ್ಪು ಹೇಳುತ್ತದೆ. ಸಾಂವಿಧಾನಿಕ ವಿಧಿ 15(4) ಮತ್ತು 16(4)ರ ಅನ್ವಯ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳು ಈಗಾಗಲೇ ಮೀಸಲಾತಿ ಪಡೆಯುತ್ತಿರುವುದರಿಂದ ಅವುಗಳನ್ನು ಈ ಇಡಬ್ಲ್ಯುಎಸ್ ವಿಭಾಗದಿಂದ ಹೊರತುಪಡಿಸಲಾಗಿದೆ.

ಮುಂದುವರಿದ ಜಾತಿಗಳು ಮತ್ತು ಇತರ ಮೀಸಲಾತಿಯಿಲ್ಲದ ಸಮುದಾಯಗಳಲ್ಲಿ ಕೂಡಾ ಬಡವರು ಇದ್ದಾರೆ ಎಂಬುದು ನಿಜ. ಬಡತನ ನಿರ್ಮೂಲನೆಗಾಗಿ ಸಂವಿಧಾನದ ಮಾರ್ಗದರ್ಶಕ ತತ್ವಗಳ ಅನುಸಾರ ಯಾವುದಾದರೂ ಶಾಸನಾತ್ಮಕ ಕ್ರಮ ಇರಬೇಕು. ಆದರೆ, ಅವರಿಗೆ ಮೀಸಲಾತಿ ನೀಡುವುದು ಸಾಂವಿಧಾನಿಕವಾಗಿ ಸೂಕ್ತವಲ್ಲದ ಪ್ರತಿಕ್ರಿಯೆಯಾಗಿದೆ. ಬಹುಮತದ ನಿರ್ಧಾರವು ಪರಿಹಾರಾತ್ಮಕ ತಾರತಮ್ಯದ ಸಾಂವಿಧಾನಿಕ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಗಳು ಐತಿಹಾಸಿಕವಾಗಿ ಅನುಭವಿಸಿದ ಅನ್ಯಾಯಕ್ಕೆ ಪರಿಹಾರವೆಂದು ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು, ಅದು ಯಾವುದೋ ಬಡತನ ನಿರ್ಮೂಲನಾ ಕ್ರಮ ಎಂಬಂತೆ ಪರಿಗಣಿಸಿದೆ.

ಭಾರತದ ಸಂವಿಧಾನವು ಸ್ಪಷ್ಟಪಡಿಸುವ ಬಹುಮುಖ್ಯ ತತ್ವ ಎಂದರೆ, ಭಾರತೀಯ ಸಮಾಜದಲ್ಲೇ ಆಳವಾಗಿ ಬೇರೂರಿರುವ ಹಿಂದಿನ ಜಾತಿ ಆಧರಿತ ದಮನ ಮತ್ತು ಶೋಷಣೆಗೆ ಮೀಸಲಾತಿಯು ಪರಿಹಾರ ಒದಗಿಸಲು ಬಯಸುತ್ತದೆ ಎಂಬುದು.

ಐತಿಹಾಸಿಕವಾಗಿ ಬೇರೂರಿರುವ ತಾರತಮ್ಯದ ರೂಪಗಳಿಗೆ ಪರಿಹಾರವಾಗಿ ನೀಡಲಾಗಿರುವ ಮೀಸಲಾತಿಯನ್ನು, ಬಡತನದ ಕುರಿತ ನಿಜ ಆತಂಕಗಳ ನಿವಾರಣೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ತೀರ್ಮಾನ ನೀಡಿದ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಸೇರಿದಂತೆ ಐವರು ನ್ಯಾಯಾಧೀಶರೂ ಆರ್ಥಿಕ ಆಧಾರದ ಮೀಸಲಾತಿಯು ಸಾಂವಿಧಾನಿಕ ಎಂದು ಹೇಳಿರುವುದು ನಿರಾಶಾಜನಕವಾಗಿದೆ. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಆರ್ಥಿಕ ಪರಿಸ್ಥಿತಿಯೇ ಏಕೈಕ ಮಾನದಂಡವಲ್ಲ ಎಂಬ ’ಇಂದಿರಾ ಸಾಹ್ನಿ ವರ್ಸಸ್ ಭಾರತ ಸರಕಾರ’ ಪ್ರಕರಣದ ಪೂರ್ವ ನಿದರ್ಶನವನ್ನು ಸದರಿ ನ್ಯಾಯಪೀಠ ಈ ತೀರ್ಪಿನಲ್ಲಿ ಬದಿಗೆ ಸರಿಸಿದೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಬಹುಮತದ ತೀರ್ಮಾನವು ಆರ್ಥಿಕವಾಗಿ ಹಿಂದುಳಿದಿರುವವರ ಕೋಟಾದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜಾತಿಗಳನ್ನು ಹೊರತುಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳು ತಾಳಮೇಳವಿಲ್ಲದಷ್ಟು ಅತಿ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಜನರ ಪ್ರಮಾಣವನ್ನು ಹೊಂದಿರುವುದರಿಂದ, ಈ ತಿದ್ದುಪಡಿಯು ಅವರನ್ನು ಮೀಸಲಾತಿಯಿಂದ ಹೊರತುಪಡಿಸಿರುವುದು ಅತಾರ್ಕಿಕವಾಗಿದೆ.

ವಾಸ್ತವದಲ್ಲಿ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವು ಪರಿಶಿಷ್ಟ ಬುಡಕಟ್ಟುಗಳ ಒಟ್ಟು ಜನಸಂಖ್ಯೆಯಲ್ಲಿ 48 ಶೇಕಡಾ ಮಂದಿ, ಪರಿಶಿಷ್ಟ ಜಾತಿಗಳ 38 ಶೇಕಡಾ ಮಂದಿ ಹಾಗೂ ಒಬಿಸಿ ಜನಸಂಖ್ಯೆಯ 33 ಶೇಕಡಾ ಜನಕ್ಕೆ ಕಡಿಮೆ ಇಲ್ಲದಷ್ಟು ಮಂದಿ ಕಡುಬಡವರು ಎಂಬ ಸತ್ಯವನ್ನು ಗಮನಿಸಿದೆ. ಬಡ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಇಡಬ್ಲ್ಯುಎಸ್ ಕೋಟದಿಂದ ಹೊರಗಿಡುವ ಕ್ರಮದ ಉದ್ದೇಶವೆಂದರೆ, ಅದನ್ನು ಕೇವಲ ಮೇಲ್ಜಾತಿಯವರಿಗೆ ನೀಡುವುದು. ’ಆರ್ಥಿಕ ಮಾನದಂಡದ ಮೀಸಲಾತಿಗೆ ಅರ್ಹರಾಗಿರುವ ಮತ್ತು ಒಟ್ಟಾಗಿ ದೇಶದ ಜನಸಂಖ್ಯೆಯಲ್ಲಿ 82 ಶೇಕಡಾ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಅದರಿಂದ ಹೊರತುಪಡಿಸುವ ಕ್ರಮ’ವನ್ನು ತೀರ್ಪಿನ ಅಲ್ಪಸಂಖ್ಯಾತ ಅಭಿಪ್ರಾಯವು ಕಟುವಾಗಿ ಟೀಕಿಸಿದ್ದು, ’ಈ ಕ್ರಮವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದೆಂದು ಸೂಚಿಸುವಂತದ್ದು ಏನೂ ಇಲ್ಲ ಎಂದು ಹೇಳಿದೆ.

ಬಹುಸಂಖ್ಯಾತ ಅಭಿಪ್ರಾಯವು ಇದನ್ನು ನಿರಾಕರಿಸಿದರೂ, 103ನೇ ಸಾಂವಿಧಾನಿಕ ತಿದ್ದುಪಡಿಯು ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಮುಂದುವರಿದ ವರ್ಗಗಳಿಗೆ ನೀಡಿದ ಮೀಸಲಾತಿ ಎಂದು ಸೂಕ್ತವಾಗಿಯೇ ಕರೆಯಬಹುದು. (ಈ ಆದಾಯ ಮಿತಿಯನ್ನು ಸರಕಾರಿ ಅಧಿಸೂಚನೆಯಲ್ಲಿ ನೀಡಲಾಗಿದೆ.) ಹಿಂದೆ 50 ಶೇಕಡಾದಷ್ಟಿದ್ದ ಮುಕ್ತ ಸ್ಥಾನಗಳು ಎಲ್ಲರಿಗೂ ಮುಕ್ತವಾಗಿದ್ದವು. ಅಂದರೆ, ಮೀಸಲಾತಿ ಇರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತಿದ್ದವು. ಪ್ರಸ್ತುತ ವ್ಯವಸ್ಥೆಯಲ್ಲಿ ಈ 10 ಶೇಕಡಾ ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳಿಗೆ ಸಿಗದಂತೆ ಮಾಡಲಾಗಿದೆ.

ಹೀಗಿದ್ದರೂ, ಅಲ್ಪಸಂಖ್ಯಾತ ತೀರ್ಮಾನವು ತಾರತಮ್ಯ ರಹಿತತೆ ಕುರಿತ ವಿಶ್ಲೇಷಣೆಯಲ್ಲಿ ಬಹುಸಂಖ್ಯಾತ ತರ್ಕವನ್ನು ಗೌರವಿಸುತ್ತಲೇ ಹಲವಾರು ದಲಿತರು, ಆದಿವಾಸಿಗಳು ಮತ್ತು ಮಾನವಹಕ್ಕು ಗುಂಪುಗಳು ಬಹುಸಂಖ್ಯಾತ ತೀರ್ಮಾನದ ಬಗ್ಗೆ ವ್ಯಕ್ತಪಡಿಸುತ್ತಿರುವ ಆತಂಕಗಳಿಗೆ ಧ್ವನಿ ನೀಡಿದೆ.

ಅಲ್ಪಸಂಖ್ಯಾತ ತೀರ್ಮಾನವು ಈ ತಿದ್ದುಪಡಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ: “ನಮ್ಮ ಸಂವಿಧಾನವು ’ಹೊರತುಪಡಿಸುವ’ ಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಈ ತಿದ್ದುಪಡಿಯು ’ಹೊರತುಪಡಿಸುವ’ ಭಾಷೆಯ ಮೂಲಕ ಸಾಮಾಜಿಕ ನ್ಯಾಯದ ಮೂಲಕಲ್ಪನೆಯನ್ನೇ ಮಾತ್ರವಲ್ಲ; ಆ ಮೂಲಕ- ಸಂವಿಧಾನದ ಮೂಲ ಸಂರಚನೆಯನ್ನೇ ಅವಗಣಿಸಿದೆ” ಎಂದಿದೆ. “ಮೊದಲ ಬಾರಿಗೆ ಸಾಮಾಜಿಕ ಅನ್ಯಾಯದ ಬಲಿಪಶುಗಳೂ, ಈ ದೇಶದಲ್ಲಿ ಅತ್ಯಂತ ಬಡವರೂ ಆಗಿರುವವರ ಹೊರತುಪಡಿಸುವಿಕೆಯನ್ನು ಕಾರ್ಯರೂಪಕ್ಕೆ ತರಲು ಸಾಂವಿಧಾನಿಕ ಅಧಿಕಾರವನ್ನು ಬಳಸಲಾಗಿದೆ” ಎಂದು ಅಲ್ಪಸಂಖ್ಯಾತ ತೀರ್ಮಾನವು ಕಟುವಾಗಿ ಹೇಳಿದೆ.

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವರ್ಗಗಳನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ಅಲ್ಪಸಂಖ್ಯಾತ ಅಭಿಪ್ರಾಯವು ಹೇಳುತ್ತದೆ. ಈ ಸಮಾನತೆಯ ತತ್ವವು, ಅಂದರೆ ವಿಧಿ 14, 15, 16 ಮತ್ತು 17 ಎಂಬುದು “ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಪ್ರಕಾರ ಸಮಾನ ರಕ್ಷಣೆ” ಕುರಿತ ತೆಳುವಾದ ಹೇಳಿಕೆಯಲ್ಲ; “ಜಾತಿಯಂತಹ ಸೂಚಿತ ವಿಷಯಗಳ ಆಧಾರದಲ್ಲಿ ತಾರತಮ್ಯ ಮಾಡದಂತೆ ಸರಕಾರವನ್ನು ಪ್ರತಿಬಂಧಿಸುತ್ತದೆ” ಎಂದು ಈ ತೀರ್ಮಾನ ಹೇಳುತ್ತದೆ. ಅದು ವಿಧಿ 17ನ್ನು ಅಸ್ಪೃಶ್ಯತೆಯ ವಿರುದ್ಧ ಒಂದು ಅತ್ಯಂತ ಸ್ಪಷ್ಟವಾದ ಪ್ರತಿಬಂಧಕಾಜ್ಞೆ ಎಂದು ಹೇಳಿದ್ದು, “ಪ್ರತ್ಯಕ್ಷವಾಗಿ ಅಥವಾ ವರ್ಗೀಕರಣದ ಮೂಲಕ ಜಾತಿ ತಾರತಮ್ಯವನ್ನು ತಡೆಯುವ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹೊರಿಸಿರುವುದು ಮಾತ್ರವಲ್ಲ; ಅದು ಸಮಾನತೆಯ ತತ್ವದ ಮತ್ತು ಖಂಡಿತವಾಗಿಯೂ ಇಡೀ ಸಂವಿಧಾನದ ಚೌಕಟ್ಟಿನ ಬಹುದೊಡ್ಡ ಭಾಗವಾಗಿದೆ.”

ಸರಕಾರವು 103ನೇ ತಿದ್ದುಪಡಿಯ ಮೂಲಕ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಿರುವ ಕ್ರಮದಿಂದ ಸರಕಾರವು ಸಂವಿಧಾನದ ಈ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದೆ ಎಂದು ಅಲ್ಪಸಂಖ್ಯಾತ ತೀರ್ಮಾನವು ಹೇಳುತ್ತದೆ.

ಹಾಗೆ ನೋಡಿದರೆ, ಈ ಹೊರತುಪಡಿಸುವಿಕೆಯು ಭಾರತೀಯ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ. ಭಾರತೀಯ ಸಾಂವಿಧಾನಿಕ ಕಾನೂನಿನ ಮೂಲ ಅಡಿಪಾಯವೇ “ಭಾರತೀಯ ಸಂವಿಧಾನದ ಅಸ್ಮಿತೆ, ವ್ಯಕ್ತಿತ್ವ, ಸ್ವಭಾವ ಮತ್ತು ಚಾರಿತ್ರ್ಯದ” ಒಳಗೇ ಅಡಕವಾಗಿರುವ ಆಯಾಮಗಳನ್ನು ಬದಲಿಸಲು ಸಂಸತ್ತಿಗೆ ಅಧಿಕಾರ ಇಲ್ಲವೆಂದು ಹೇಳುತ್ತದೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ ಈ ತಿದ್ದುಪಡಿಯು ಭಾರತೀಯ ಸಂವಿಧಾನದ ಮೂಲ ಸಂರಚನೆಯ ಉಲ್ಲಂಘನೆ ಆಗಿದೆ. ಅದು ಹೇಳುವಂತೆ, ಹೊರತುಪಡಿಸುವಿಕೆಯು ಅದರ ಎಲ್ಲಾ ಋಣಾತ್ಮಕ ಅರ್ಥಗಳ ಹೊರತಾಗಿಯೂ ಸಂವಿಧಾನದ ತತ್ವಗಳಲ್ಲಿ ಇಲ್ಲ. “ಮತ್ತದಕ್ಕೆ ನಮ್ಮ ಸಂವಿಧಾನದ ತತ್ವಗಳ ನಡುವೆ ಜಾಗವಿಲ್ಲ. ಹಿಂದುಳಿದಿರುವಿಕೆಯ ಆಧಾರದಲ್ಲಿ ಜನರನ್ನು ಹೊರತುಪಡಿಸುವುದು ಎಂದರೆ, ’ಸಂವಿಧಾನದ ಮೌಲ್ಯಗಳಾದ ಭ್ರಾತೃತ್ವ, ತಾರತಮ್ಯವೆಸಗದಿರುವ, ಹೊರತುಪಡಿಸುವಿಕೆಯನ್ನು ಇಲ್ಲವಾಗಿಸುವ” ಇತ್ಯಾದಿ ಸಾಂವಿಧಾನಿಕ ತತ್ವಗಳನ್ನು ನಾಶಪಡಿಸುವುದು ಎಂದರ್ಥ.

ಅಲ್ಪಸಂಖ್ಯಾತ ತೀರ್ಮಾನವು ಸಾಂವಿಧಾನಿಕ ತಿಳಿವಳಿಕೆಯ ಮೇಲೆ ಆಳವಾಗಿ ಬೇರುಬಿಟ್ಟಿದೆ. ಆದುದರಿಂದಲೇ ಸ್ವಾಗತಾರ್ಹವಾಗಿದೆ.

ಎಡಿಎಂ ಜಬ್ಬಲ್ಪುರ್ ನ್ಯಾಯಮೂರ್ತಿ ಖನ್ನಾ, ತುರ್ತುಪರಿಸ್ಥಿತಿಯ ಪ್ರಕರಣದಲ್ಲಿ ಹೇಳಿದ್ದು: “ಒಂದು ನ್ಯಾಯಾಲಯದಲ್ಲಿ ಭಿನ್ನಮತವು ಒಂದು ಕೊನೆಯ ಅವಕಾಶ.. ಅದು ಕಾನೂನಿನ ಸಹಜ ಸ್ಫೂರ್ತಿಗೆ, ಭವಿಷ್ಯದಲ್ಲಿ ಕಾಣಬಹುದಾದ ಬುದ್ಧಿವಂತಿಕೆಗೆ ಒಂದು ಮನವಿ… ಅದು ಬಹುಶಃ ನ್ಯಾಯವ್ಯವಸ್ಥೆಯೇ ದ್ರೋಹ ಬಗೆದಿರಬಹುದು ಎಂದು ತಾವು ನಂಬಿದ್ದ, ಹಿಂದಿನ ತೀರ್ಪಿನ ತಪ್ಪನ್ನು ಮುಂದಿನವರು ಸರಿಪಡಿಸಬಹುದು ಎಂಬ ವಿಶ್ವಾಸವೇ ಆ ಭಿನ್ನಮತದ ನ್ಯಾಯಾಧೀಶರದ್ದು.”

ಆ ದಿನಗಳು ಮುಂದೆ ಬೇಗನೇ ಬರಲಿ ಎಂದು ಆಶಿಸೋಣ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...