Homeಕರ್ನಾಟಕಐದು ಕೋಟಿಯ ಕೇಸರಿ ಟಿಕೆಟ್ ಡೀಲ್! ಹಿಂದುತ್ವದ ದ್ವೇಷ ಭಾಷಣಗಾರ್ತಿ ಚೈತ್ರ ಕುಂದಾಪುರ ಗ್ಯಾಂಗಿನ ಗಂಡಾಗುಂಡಿ...

ಐದು ಕೋಟಿಯ ಕೇಸರಿ ಟಿಕೆಟ್ ಡೀಲ್! ಹಿಂದುತ್ವದ ದ್ವೇಷ ಭಾಷಣಗಾರ್ತಿ ಚೈತ್ರ ಕುಂದಾಪುರ ಗ್ಯಾಂಗಿನ ಗಂಡಾಗುಂಡಿ ಪುರಾಣ!

- Advertisement -
- Advertisement -

ಹಿಂದುತ್ವವೆಂದರೆ ಪಕ್ಕಾ ಲಾಭಕೋರ ವ್ಯಾಪಾರಿ ಸಿದ್ಧಾಂತವೆಂಬ ಸತ್ಯ ಮತ್ತೊಮ್ಮೆ ಸಾಬೀತಾಗಿದೆ; ಸಂಘ ಪರಿವಾರದ ಸೋಕಾಲ್ಡ್ ಸುಬಗರ ಅಸಲಿ ಅವತಾರ ಅನಾವರಣವಾಗಿದೆ. ಕೇಸರಿ ಮುಖವಾಡ ಕಳಚಿಬಿದ್ದ ರಭಸಕ್ಕೆ ಕರಾವಳಿಯಷ್ಟೇ ಅಲ್ಲ, ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ಇತ್ತೀಚಿನ ವರ್ಷದಲ್ಲಿ ಸಂಘ ಪರಿವಾರ ಪ್ರಣೀತ ಹಿಂಸೋನ್ಮಾದದ ಹಿಂದುತ್ವದ ಪ್ರಖರ-ಪ್ರಚೋದಕ ಭಾಷಣಕಾರಳಾಗಿ ಅವತರಿಸಿರುವ ಉಡುಪಿ ಜಿಲ್ಲೆಯ ಕುಂದಾಪುರದ ಚೈತ್ರ ಎಂಬ ಅನಾಹುತಕಾರಿ ಹುಡುಗಿ ಮತ್ತಾಕೆಯ ಕೇಸರಿ ಠೋಳಿಯ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಕೋಟ್ಯಾಂತರ ರೂಪಾಯಿಗಳ ಮೆಗಾ ಡೀಲ್ ವಂಚನೆಯ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಜೈಲಿಗೆ ಕಳಿಸಿದ್ದಾರೆ. ಅಲ್ಲಿಗೆ ಧರ್ಮ-ದೇವರು-ನೈತಿಕತೆಗಳನ್ನು ವ್ಯಾಖ್ಯಾನಿಸುತ್ತಾ, ಮುಸಲ್ಮಾನರನ್ನು ಮೂದಲಿಸುತ್ತ “ಧರ್ಮಯುದ್ಧ”ಕ್ಕೆ ಶೂದ್ರಾದಿಗಳನ್ನು ಛೂ ಬಿಡುವ ಶೈಲಿಯ ಉದ್ದುದ್ದ ಭಾಷಣ ಬಿತ್ತರಿಸುತ್ತ ಗಂಟುಕಟ್ಟಿಕೊಳ್ಳುತ್ತಿದ್ದ ಚೈತ್ರಾ ಕುಂದಾಪುರಳದಷ್ಟೇ ಅಲ್ಲ, ಆಕೆಯನ್ನು ಸಾರ್ವಜನಿಕವಾಗಿ ತಾರೀಫು ಮಾಡುತ್ತ ಧರ್ಮಕಾರಣದ ಮೈಲೇಜಿಗೆ ಹಾತೊರೆಯುತ್ತಿದ್ದ ಆರೆಸ್ಸೆಸ್‌ನ ಕರಾವಳಿ ಸೂತ್ರಧಾರ ಕಲ್ಲಡ್ಕ ಪ್ರಭಾಕರ ಭಟ್ಟ, ಹಿಂದುತ್ವ ಪಂಡಿತ ಸೂಲಿಬೆಲೆ ಚಕ್ರವರ್ತಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಮಂತ್ರಿಣಿ ಶೋಭಾ ಕರಂದ್ಲಾಜೆಯೇ ಮುಂತಾದ ಬಿಜೆಪಿಯ ಹಿರಿ-ಮರಿ ಶಾಸಕ, ಸಂಸದ, ಸಚಿವರ ಬಂಡವಾಳವೂ ಬಯಲಾಗಿಹೋಗಿದೆ ಎಂಬ ಮಾತೀಗ ಸಾಮಾನ್ಯವಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಬೈಂದೂರು ಮೂಲದ ಕೋಟ್ಯಾಧಿಪತಿ ಹೊಟೇಲ್-ಕ್ಯಾಟರಿಂಗ್ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಮತ್ತವಳ ಗೆಳೆಯರ ಗ್ಯಾಂಗ್ ಬರೋಬ್ಬರಿ ಐದು ಕೋಟಿ ರೂ ಪಡೆದುಕೊಂಡಿತ್ತು ಎಂಬುದು ಈಗಿನ ಗುರುತರ ಆರೋಪ. ಗೋವಿಂದ ಪೂಜಾರಿಯ ಧನಬಲ ಮತ್ತು ಕ್ಷೇತ್ರದಲ್ಲಿರುವ ಸ್ವಜಾತಿ (ಬಿಲ್ಲವ) ಮತ ಬಾಹುಳ್ಯದಿಂದಾಗಿ ಬಿಜೆಪಿ ಅಭ್ಯರ್ಥಿಯಾಗುತ್ತಾರೆಂಬ ಲೆಕ್ಕಾಚಾರ ಈ ಗ್ಯಾಂಗಿನದಾಗಿತ್ತು. ಹಾಗೆ ಯಾವ್ಯಾವುದೋ ಲೆಕ್ಕಾಚಾರದಲ್ಲಿ ಪೂಜಾರಿಗೆ ಟಿಕೆಟ್ ಸಿಕ್ಕರೆ ತಾವೇ ಕೊಡಿಸಿದ್ದೆಂದು ತೋರಿಸಿಕೊಂಡು ಕಾಸು ಸ್ವಾಹ ಮಾಡುವ ಯೋಚನೆ ಚೈತ್ರಾ ಸಂಗಡಿಗರದಾಗಿತ್ತು ಎನ್ನಲಾಗಿದೆ. ಆದರೆ ಪೂಜಾರಿಗೆ ಟಿಕೆಟ್ ದಕ್ಕುವ ಸಾಧ್ಯತೆ ಕಾಣಿಸದಿದ್ದಾಗ ಚೈತ್ರ ತಂಡ ಟಿಕೆಟ್ ಕೊಡಿಸುವುದಾಗಿ ಹಣ ತೆಗೆದುಕೊಂಡು ಹೋಗಿದ್ದ ಉತ್ತರ ಭಾರತದ ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್‌ಜೀ ಉಸಿರಾಟದ ತೊಂದರೆಯಿಂದ ಕಾಶ್ಮೀರದಲ್ಲಿ ನಿಧನರಾದರೆಂದು ಸಬೂಬು ಹೇಳಿ ಕೈಯೆತ್ತಿತ್ತು.

ಗೋವಿಂದ ಪೂಜಾರಿಗೆ ತಾನು ಯಾಮಾರಿರುವುದು ಖಾತ್ರಿಯಾಗಿತ್ತು; ಬಿಜೆಪಿ ಟಿಕೆಟ್ ಆರೆಸ್ಸೆಸ್‌ನ ಕಟ್ಟರ್ ಗುರುರಾಜ್ ಶೆಟ್ಟಿ ಗಂಟಿಹೊಳೆ ಪಾಲಾಗಿತ್ತು. ಚುನಾವಣೆಗೆ ಮೊದಲೇ ಹಣ ಹಿಂತಿರುಗಿಸುವಂತೆ ಚೈತ್ರಳಿಗೆ ಗೋವಿಂದ ಪೂಜಾರಿ ಕೇಳಲಾರಂಭಿಸಿದ್ದರು. ಆದರೆ ಚುನಾವಣೆ ಹೊತ್ತಲ್ಲಿ ವಿವಾದವಾಗಿ ಬಿಜೆಪಿ ಹಿರಿಯರು ಸಿಟ್ಟಾಗಿ ತನ್ನ ದಂಧೆಗೆ ತೊಂದರೆಯಾಗಬಹುದೆಂಬ ಅಂಜಿಕೆಯಿಂದ ಪ್ರಕರಣ ಬಹಿರಂಗಪಡಿಸುವ ಗೋಜಿಗೆ ಹೋಗಲಿಲ್ಲ. ಚುನಾವಣೆ ಬಳಿಕ ಹಣ ವಾಪಸ್ ಪಡೆಯುವ ಗೋವಿಂದ ಪೂಜಾರಿಯ ಪ್ರಯತ್ನ ಜೋರಾಯಿತು. ಶುರುವಿನಲ್ಲಿ ಹಣ ಹಿಂತಿರುಗಿಸುವುದಾಗಿ ಹೇಳುತ್ತಿದ್ದ ಚೈತ್ರ ಕುಂದಾಪುರ ಮತ್ತಾಕೆಯ ವಂಚನೆಯ ಸಂಚಿನಲ್ಲಿ ವಿವಿಧ ಪಾತ್ರವಾಡಿದ್ದ ಚಿಕ್ಕಮಗಳೂರು ಜಿಲ್ಲೆ ಬಿಜೆಪಿಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್ ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹೊಸಪೇಟೆ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮಿ ಆನಂತರ ಫೋನ್ ಸಂಪರ್ಕಕ್ಕೂ ಸಿಗದೆ ತಲೆತಪ್ಪಿಸಿಕೊಳ್ಳತೊಡಗಿದರು. ಸುಮಾರು ಒಂದೂವರೆ ತಿಂಗಳ ಹಿಂದೆ ಈ ಮೋಸಗಾರರ ಖಾವಿ ಟ್ರೇಡ್‌ಮಾರ್ಕ್ ತಂಡ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿಯ ಬೈಂದೂರು ಅಸೆಂಬ್ಲಿ ಟಿಕೆಟ್ ಕೊಡಿಸುವುದಾಗಿ ಏಳು ಕೋಟಿ ರೂ ವಂಚಿಸಿರುವ ಸಂಕಥನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದು ಗೋವಿಂದಬಾಬು ಪುಜಾರಿ ಆರೆಸ್ಸೆಸ್‌ಗೆ ಬರೆದ ದೂರು ಪತ್ರವೆನ್ನಲಾಗಿತ್ತು. ಆದರೆ ಆಗ ಗೋವಿಂದಬಾಬು ಪೂಜಾರಿ ಯಾವುದಕ್ಕೂ ಪ್ರತಿಕ್ರಿಯಿಸದೆ ಮೌನವಾಗಿದ್ದರು. ಈಗ ಸಾಧಕ-ಬಾಧಕ ಅಳೆದು-ತೂಗಿ ಅಂತೂ ತನ್ನ ವಾಸಸ್ಥಾನ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಂಟು ಗಂಟುಕಳ್ಳರ ಮೇಲೆ ವಂಚನೆ ದೂರು ದಾಖಲಿಸಿದ್ದಾರೆ.

ಚೈತ್ರ ಚರಿತ್ರೆ!

ಚುನಾವಣೆ ಸಂದರ್ಭದಲ್ಲಿ ಕೇಸರಿ ಪಾರ್ಟಿಯ ಟಿಕೆಟ್ ಹರಾಜಾಗುತ್ತವೆಂಬ ಗುಲ್ಲು-ಗುಟ್ಟು ಹೊಸದೇನೂ ಅಲ್ಲ. ಆದರೆ ಬೈಂದೂರಿನ ಬಿಜೆಪಿ ಟಿಕೆಟ್ ಬಿಕರಿ ಬೃಹನ್ನಾಟಕದ ಅಂಕಗಳು ಅರ್ಥವಾಗಬೇಕಾದರೆ, ಮೊದಲು ಹಣವೇ ಶಾಸಕನಾಗಲು ಬೇಕಾದ ಏಕೈಕ ಅರ್ಹತೆ ಎಂದು ಭಾವಿಸಿದ್ದ ಕೋಟ್ಯಾಧಿಪತಿ ಗೋವಿಂದಬಾಬು ಪೂಜಾರಿ ಮತ್ತು ಹಿಂದುತ್ವವೇ ಐಶಾರಾಮಿ ಜೀವನಕ್ಕೆ ಮೂಲವೆಂಬ ಸಿದ್ಧಾಂತದ ಚೈತ್ರ ಕುಂದಾಪುರಳ ಪಾತ್ರ ಪರಿಚಯ ಆಗಬೇಕು! ಕುಂದಾಪುರದ ಹೊರ ವಲಯದ ಚಿಕನ್ ಸಾಲ್‌ನ ಕೋಟೆ ಕ್ಷತ್ರಿಯ (ಸೇರುಗಾರ) ಸಮುದಾಯದ ಬಡಕುಟುಂಬದ ಹುಡುಗಿ ಚೈತ್ರ; ಸಂಘಪರಿವಾರದ ಅಸಹನೆ, ಅಸಹಿಷ್ಣುತೆ, ಮತಾಂಧತೆಯ ಕುಲುಮೆಯಾಗಿರುವ ಎಬಿವಿಪಿ ಎಂಬ ವಿದ್ಯಾರ್ಥಿ ಸಂಘಟನೆಯ ಬೈಪ್ರಾಕ್ಟ್. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಚೈತ್ರ ಉಡುಪಿಯಲ್ಲಿನ ಒಂದೆರಡು ಟಿವಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು; ಮಣಿಪಾಲದ ಪೈಗಳ ಉದಯವಾಣಿಯಲ್ಲಿ ದುಡಿದಿದ್ದರು. ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ್ದವರು. ಈ ವೃತ್ತಿಗಳಿಗಿಂತ ಹಿಂದುತ್ವವೇ ಲಾಭದಾಯಕ ಉದ್ಯಮವೆಂದು ನಾಲಿಗೆಯನ್ನೇ ಬಂಡವಾಳ ಮಾಡಿಕೊಂಡು ಕಾವಿ ವೇಷ-ಭೂಷಣದೊಂದಿಗೆ ಹಿಂದುತ್ವ ಸಮಾರಂಭಗಳಲ್ಲಿ ಮತ್ತು ಬಿಜೆಪಿಯ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ಆರಂಭಿಸಿದರು. ಕಲ್ಲಡ್ಕ ಪ್ರಭಾಕರ ಭಟ್ಟ, ಸೂಲಿಬೆಲೆ ಚಕ್ರವರ್ತಿಗಳಂಥವರ ಲವ್ ಜಿಹಾದ್, ಹಿಂದು ಧರ್ಮ ರಕ್ಷಣೆ, ಗೋಪ್ರಾಣ, ಹಿಂದು ಹೆಣ್ಣಿನ ಮಾನ, ಇಸ್ಲಾಮೋಫೋಬಿಯಾದ ಆಶುಭಾಷಣ ಕಲೆ ಕರಗತ ಮಾಡಿಕೊಂಡ ಚೈತ್ರಗೆ ದಕ್ಷಿಣ ಭಾರತದ ಹಿಂದುತ್ವದ ಪ್ರಯೋಗಶಾಲೆ ಎನ್ನಲಾಗುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ “ಪ್ರಸಿದ್ಧಿ” ಪಡೆಯುವುದಕ್ಕೇನು ಹೆಚ್ಚು ಹೊತ್ತು ಹಿಡಿಯಲಿಲ್ಲ. ಹಿಂದುತ್ವದ ಸಂಘಟನೆಗಳು ಆಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡವು. ಹತ್ತಾರು ಕೇಸುಗಳನ್ನು ಮೈಮೇಲೆಳೆದುಕೊಂಡ ಚೈತ್ರ ಬಿಜೆಪಿ ಮತ್ತು ಸಂಘಿ ಸಭೆಗಳಲ್ಲಿ “ಸಂಪನ್ಮೂಲ ತಜ್ಞೆ”ಯಾಗಿ ಕಾಣಿಸಿಕೊಳ್ಳುವುದು ಮಾಮೂಲಾಗಿಹೊಯ್ತು! ಇದೇ ಬದುಕಿನ ಉಪಕಸುಬೂ ಆಯಿತು.

ಚೈತ್ರ ಅದೆಷ್ಟೇ ಚೀತ್ಕರಿಸಿದರೂ ಕರಾವಳಿಯಾಚೆ ಆಕೆಯ ಹಿಂದುತ್ವದ ಪುಂಡಾಟಕ್ಕೆ ಮಾರ್ಕೆಟ್ ಕುದುರಿರಲಿಲ್ಲ. ಯಾವಾಗ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಅಭ್ಯರ್ಥಿಯಾಗಿ ಜನಪ್ರಿಯನಾಗಿದ್ದ ಕೀರ್ತಿ ಎಂಬುವವರ ತಂಟೆಗೆ ಹೋದರೋ ಆಗಾಕೆಯ ಹೆಸರು ಇತರೆಡೆಯ ಹಿಂದುತ್ವ ವಲಯದಲ್ಲೂ ಚಲಾವಣೆಗೆ ಬಂತು! ಗಂಗಾವತಿಯ ಮಾಜಿ ಮಂತ್ರಿ ಇಕ್ಬಾಲ್ ಅನ್ಸಾರಿ ವಿರುದ್ದ ಅಸಹ್ಯವಾಗಿ ಬಡಬಡಿಸಿದಾಗ ಮಾಧ್ಯಮಗಳು ಹೆಚ್ಚಾಗಿ ಬಿಂಬಿಸಿದವು. ಗಂಗಾವತಿಯಲ್ಲಿ ತನ್ನ ಮೇಲಾಗಿದ್ದ ಕ್ರಿಮಿನಲ್ ಕೇಸ್‌ಅನ್ನು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ತೆಗೆಸಿಲ್ಲವೆಂದು ಚೈತ್ರ ವಾಚಾಮಗೋಚರವಾಗಿ ಬೈದ ಆಡಿಯೋ ಹರಿದಾಡಿದಾಗ ಉತ್ತರ ಕರ್ನಾಟಕದಲ್ಲಿ ಆಕೆ “ಮನೆ ಮಾತು” ಆದರು. ಆ ನಂತರ ಬಯಲುಸೀಮೆಯಲ್ಲಿ “ಚೈತ್ರ ಕಾಲ” ಶುರುವಾಯಿತು. ಚೈತ್ರ ಹುಚ್ಚಾಟ ಹೆತ್ತವರಿಗೂ ಮುಜುಗರ ಮೂಡಿಸಿತ್ತಾದರೂ 2018ರ ಸುಮಾರಿಗೆ ಆಕೆಯ ಹಿಂದುತ್ವದ ಹಾವಳಿಯ “ಹೆಚ್ಚುಗಾರಿಕೆ” ಒಂದೇಸಮನೆ ಏರತೊಡಗಿತು. ಕಾಂಗ್ರೆಸ್ಸಿಗರು ಉಡುಪಿ ಬಂದ್‌ಗೆ ಕರೆಕೊಟ್ಟಾಗ ಆ ಪ್ರತಿಭಟನೆಯಲ್ಲಿ ನುಗ್ಗಿ “ಮೋದಿಮೋದಿ” ಎಂದು ಕಿರುಚಾಡಿ ಸದ್ದು ಮಾಡಿದ್ದರು. ಇದನ್ನು ಕಂಡ ಅಂದಿನ ಕೇಂದ್ರ ರಕ್ಷಣಾ ಮಂತ್ರಿಣಿ ನಿರ್ಮಲಾ ಸೀತಾರಾಮನ್ “ಧೈರ್ಯಶಾಲಿ ಹುಡುಗಿ” ಎಂದು ಕೊಂಡಾಡಿ ಟ್ವೀಟಾಯಿಸಿದಾಗಂತೂ ಚೈತ್ರಳ ಮಹಿಮೆ ವಿಪರೀತವಾಯಿತು. ಆಮೇಲೆ ಮುಸ್ಲಿಮರನ್ನು ಬೈದು ಭಾಷಣ ಮಾಡವುದೇ ಆಕೆಯ ನಿತ್ಯಕರ್ಮವಾಗಿ ಹೋಯಿತು. ಹಿಂದುತ್ವದವರಿಗೆ ಚೈತ್ರ “ದುರ್ಗೆ”, “ಕಾಳಿ”ಯಾದರೆ ಬಂಧುತ್ವ ಬಯಸುವವರಿಗೆ “ಕೂಗುಮಾರಿ”ಯಂತೆ ಕಾಣಿಸತೊಡಗಿದರು.

ಕುಕ್ಕೆ ಸುಬ್ರಹ್ಮಣ್ಯದ ಸರಕಾರಿ ದೇವಸ್ಥಾನದ ಆಡಳಿತ ಟ್ರಸ್ಟ್ ಮತ್ತು ದೇಗುಲದ ಮಗ್ಗುಲಲ್ಲೇ ಇರುವ ಮಾಧ್ವ ಪರಂಪರೆಯ ಮಠದ ವಿದ್ಯಾಪ್ರಸನ್ನ ಸ್ವಾಮಿ ನಡುವಿನ ಸರ್ಪಸಂಸ್ಕಾರ ವ್ಯವಹಾರ ವಿವಾದದಲ್ಲಿ ಮೂಗು ತೂರಿಸಿದ್ದ ಚೈತ್ರ ರಕ್ತಪಾತಕ್ಕೂ ಕಾರಣಳಾಗಿದ್ದಳು! ಸರ್ಪ ಸಂಸ್ಕಾರ ಕರ್ಮ ಮಾಡಿಸುವ ಹಕ್ಕು ಮಠದೆಂಬ ವಾದ ವಿದ್ಯಾ ಪ್ರಸನ್ನರದು. ಕೋಟ್ಯಂತರ ರೂ ಆದಾಯದ ಈ ಕ್ರಿಯಾ-ಕರ್ಮ ನಿರ್ವಹಣೆ ಮಠಕ್ಕೆ ವಹಿಸಿದರೆ ದೇಗುಲದ ಮಹತ್ವ ಕಡಿಮೆಯಾಗುತ್ತದೆ; ದೇವಾಲಯದ ವಠಾರದಲ್ಲಿ ಸಣ್ಣ-ಪುಟ್ಟ ಅಂಗಡಿ ಹಾಕಿಕೊಂಡವರು ಬೀದಿಗೆ ಬರುತ್ತಾರೆಂಬ ತರ್ಕ ಸ್ಥಳೀಯ ವಿಶ್ವ ಹಿಂದು ಪರಿಷತ್‌ನ ಮುಂದಾಳು ಗುರುಪ್ರಸಾದ್ ಪಂಜನದಾಗಿತ್ತು. ಸ್ವಾಮಿ ಪರ ವಹಿಸಿದ್ದ ಚೈತ್ರ ತನ್ನ ಪುಂಡ ಪಟಾಲಂ ಜತೆಗೆ ಕುಕ್ಕೆಗೆ ಹೋಗಿ ಪಂಜನ ಪಡೆಯ ಮೇಲಿರುವಂತೆ ಮಾಡಿದ್ದರು. ಪಂಜನ ತಲೆ ಒಡೆದು ರಕ್ತದೋಕುಳಿಯಾಗಿತ್ತು. ಚೈತ್ರ ಮತ್ತು ಪಂಜನ ತಂಡದ ಹುಡುಗರ ನಡುವಿನ ನಾಯಿ, ಬೇವರ್ಸಿ ಮುಂತಾದ ಬೈಗುಳ ವಿನಿಮಯ ಮತ್ತು ಆ ಮಾರಾಮಾರಿಯಲ್ಲಿ ಚೈನ್ ಕಳಕೊಂಡ ಚೈತ್ರ “ಚೈನ್ ಕೊಡೊ ಬೇವರ್ಸಿ” ಎಂದು ಬೊಬ್ಬೆಹೊಡೆದ ಆಡಿಯೋ ಅಂದು ವೈರಲ್ ಆಗಿತ್ತು. ಆಗ ಕೂಡ ಚೈತ್ರ ಜೈಲು ಪಾಲಾಗಿದ್ದರು; ಹಿಂದುತ್ವದ ಮತ್ತೊಂದು ಬಣವನ್ನು ಎದುರುಹಾಕಿಕೊಂಡಿದ್ದರು. ಇಂಥ ಹಿಂದುತ್ವದ ವಿವಾದಗಳೇ ಚೈತ್ರಳ ಬಡತನದ ಬದುಕಲ್ಲಿ ಭಾಗ್ಯದ ಬಾಗಿಲು ತೆರೆದಿದೆ; ಓಡಾಡಲು ದುಬಾರಿ ಕಾರು ಬಂದಿದೆ; ಐಶಾರಾಮಿ ಜೀವನ ನಿರ್ವಹಣೆ ಸಾಧ್ಯವಾಗಿದೆ ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ.

ಗೋವಿಂದಬಾಬು ಪೂಜಾರಿ ಪುರಾಣ

ಬೈಂದೂರು ತಾಲೂಕಿನ ಬೀಜೂರು ಗ್ರಾಮದ ಒಂದೊತ್ತಿನ ಗಂಜಿಗೂ ಕಷ್ಟಪಡಬೇಕಿದ್ದ ಬಿಲ್ಲವ ಕುಟುಂಬದ ಗೋವಿಂದ ಪೂಜಾರಿ ಇವತ್ತು ನೂರಾರು ಕೋಟಿ ರೂಗಳ ಕಾರ್ಪೊರೆಟ್ ಉದ್ಯಮಿ ಮತ್ತು ಕೇಸರಿ ರಾಜಕಾರಣಿ! ಗೋವಿಂದ ಪೂಜಾರಿ ಹೊಟೇಲ್ ಮತ್ತು ಕ್ಯಾಟರಿಂಗ್ ವಹಿವಾಟು ನಡೆಸುವ, ಕೋಟಿಗಳ ಲೆಕ್ಕದಲ್ಲೇ ದಾನ-ಸಭೆ-ಸಮಾರಂಭ ನಡೆಸುವ ಮತ್ತು ಹತ್ತಾರು ಕೋಟಿಕೊಟ್ಟೇ ಕೇಸರಿ ಪಕ್ಷದ ಎಮ್ಮೆಲ್ಲೆ ಟಿಕೆಟ್ ಕೊಳ್ಳಬಲ್ಲ ತ್ರಾಣಿಕನಾಗಿರುವ ಕತೆ ರೋಚಕವಾಗಿದೆ! 7ನೇ ತರಗತಿಗೇ ಶಾಲೆಗೆ ಬೈಬೈ ಹೇಳಿ ಹೊಟ್ಟೆಪಾಡಿನ ಉದ್ಯೋಗ ಅರಸುತ್ತ ಮುಂಬೈ ಸೇರಿದ್ದ ಗೋವಿಂದಪೂಜಾರಿಗೆ ಸಿಕ್ಕಿದ್ದು ಹೊಟೇಲಿನಲ್ಲಿ ಕ್ಲೀನರ್ ಸಪ್ಲೈಯರ್ ಚಾಕರಿ. 1997ರಲ್ಲಿ ಊರುಬಿಟ್ಟಿದ್ದ ಗೋವಿಂದ ಪೂಜಾರಿ ಕೆಲವು ವರ್ಷ ಹೊಟೇಲಿನಲ್ಲಿ ದುಡಿದ ನಂತರ ಸ್ವಂತದ್ದೇನಾದರು ಮಾಡಬೇಕೆಂದು ಕಿರಾಣಿ ಅಂಗಡಿ ಇಟ್ಟರಾದರೂ ಭರ್ಕತ್ತಾಗಲಿಲ್ಲ. ಮತ್ತೆ ಹೊಟೇಲ್ ಕೆಲಸದತ್ತ ಹೊರಳಿದ ಗೋವಿಂದ ಪೂಜಾರಿ ಈ ಬಾರಿ ಫೈವ್‌ಸ್ಟಾರ್ ಹೊಟೆಲ್ಲೊಂದರ ಅಡಿಗೆ ಮನೆ ಸೇರಿಕೊಂಡಿದ್ದರು. ಬಾಣಸಿಗರಿಗೆ ಸಹಾಯಕನಾಗಿದ್ದ ಗೋವಿಂದ ಕ್ರಮೇಣ ಅಡಿಗೆ ಕಲೆ ಕಲಿತುಕೊಂಡರು; ಸ್ವಲ್ಪ ಸಮಯದಲ್ಲೇ ಹೆಸರಾಂತ ಶೆಫ್ ಅನಿಸಿಕೊಂಡರು.

ಗೋವಿಂದಬಾಬು ಪೂಜಾರಿ

2007ರಲ್ಲಿ ಶೆಫ್ ಕೆಲಸಬಿಟ್ಟು ತನ್ನದೇ ಒಡೆತನದ “ಶೆಫ್ ಟಾಕ್ ಕೆಟರಿಂಗ್ ಸರ್ವಿಸೆಸ್” ಕಂಪನಿಯನ್ನು ಗೋವಿಂದ ಪೂಜಾರಿ ಆರಂಭಿಸುತ್ತಾರೆ. ಏಳು ಉದ್ಯೋಗಿಗಳೊಂದಿಗೆ ಶುರುವಾದ ಆ ಆಹಾರ ಪೂರೈಕೆ ಕಂಪನಿ ಕ್ರಮೇಣ “ಶೆಫ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸೆಸ್ ಪ್ರೈವೇಟ್ ಲಿ” ಎಂದಾಗುತ್ತದೆ. ಈಗಿಲ್ಲಿ ಐದು ಸಾವಿರಕ್ಕಿಂತ ಹೆಚ್ಚು ನೌಕರರಿದ್ದಾರೆ! ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರ, ಜಾರ್ಖಂಡ್ ರಾಜ್ಯದಲ್ಲಿ ಗೋವಿಂದ ಪೂಜಾರಿಯ ಕೆಟರಿಂಗ್ ಜಾಲ ಹಬ್ಬಿದೆ. ಈ ಸಂಸ್ಥೆಯ ಅತ್ಯಾಧುನಿಕ ಕಿಚನ್‌ಗಳು ಐಟಿ-ಬಿಟಿಯೇ ಮುಂತಾದ ಕಾರ್ಪೊರೆಟ್ ಕಂಪನಿಗಳಿಗೆ ಆಹಾರ ಪೂರೈಸುತ್ತವೆ. ಗೋವಿಂದ ಪೂಜಾರಿ ಮೀನಿನಿಂದ ಚಿಪ್ಸ್ ತಯಾರಿಸುವ ಕಂಪನಿ ಮತ್ತು ರೆಸಾರ್ಟ್‌ಗಳನ್ನು ಸಹ ನಡೆಸುತ್ತಿದ್ದಾರೆ. ವಾಣಿಜ್ಯ ಸಾಮ್ರಾಜ್ಯ ವಿಸ್ತರಣೆ ಆಗುತ್ತಿದ್ದಂತೆಯೇ ಗೋವಿಂದ ಪೂಜಾರಿ ಹೆಸರಿನಲ್ಲೂ ಬದಲಾವಣೆಯಾಯಿತು. ಗೋವಿಂದ ಜತೆ “ಬಾಬು” ಸೇರಿಕೊಂಡಿತು. ಕಾರ್ಪೊರೆಟ್ ವಲಯದಲ್ಲಿ “ಗೋವಿಂದಬಾಬು ಪೂಜಾರಿ”ಯೆಂದು ಗುರುತಿಸಲ್ಪಡುವ ಬೈಂದೂರಿನ ಗೋವಿಂದ ಈಗ ಸೂಟು-ಬೂಟು ಮೇಲೊಂದು ಕೇಸರಿ ಶಾಲಿನ ಠಾಕು-ಠೀಕು ರಾಜಕಾರಣಿಯೂ ಆಗಿದ್ದಾರೆ.

ತವರು ಕ್ಷೇತ್ರ ಬೈಂದೂರಿನ ಧನಾಧಾರಿತ ರಾಜಕಾರಣದ ಮಹಿಮೆಯ ಅರಿವಿದ್ದ ಗೋವಿಂದಬಾಬು ಪೂಜಾರಿ 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕನಾಗುವ ಕನಸು ಕಾಣತೊಡಗಿದ್ದರು. ರಸಗೊಬ್ಬರ, ಕ್ರಿಮಿನಾಶಕದ ತಯಾರಕ-ಮಾರಾಟಗಾರನಾಗಿದ್ದ ಕೋಟ್ಯಾಧಿಪತಿ ಐ.ಎಂ.ಜಯರಾಮ ಶೆಟ್ಟಿ ಕಾಲದಿಂದ ಸಂಘ ಶ್ರೇಷ್ಠರು ಕೊಪ್ಪರಿಗೆ ಹಣವಿದ್ದವರಿಗೇ ಬೈಂದೂರಲ್ಲಿ ಮಣೆ ಹಾಕುತ್ತ್ತಾ ಬಂದಿದ್ದರು. ಜತೆಗೆ ಬಿಜೆಪಿ ಶಾಸಕರಾಗಿದ್ದ ಸುಕುಮಾರ ಶೆಟ್ಟಿಗೆ ಮತ್ತೆ ಅವಕಾಶ ಸಿಗುವುದಿಲ್ಲವೆಂಬ ಅಭಿಪ್ರಾಯ ಮೂಡಿತ್ತು. ಇದೆಲ್ಲ ತನಗೆ ಕೇಸರಿ ಟಿಕೆಟ್ ಪಡೆಯಲು ಪೂರಕ ಎಂದು ಭಾವಿಸಿದ್ದ ಗೋವಿಂದಬಾಬು ಪೂಜಾರಿ ಹಣಹರಿಸಿ ಬೈಂದೂರು ಪಿಚ್ ಹದಗೊಳಿಸಿಕೊಳ್ಳತೊಡಗಿದರು; “ವರಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್” ಕಟ್ಟಿಕೊಂಡು ಆ ಬ್ಯಾನರಿನಡಿ ಅದ್ದೂರಿ ಕಾರ್ಯಕ್ರಮಗಳನ್ನು ಮಾಡುತ್ತ ಜನರನ್ನು ಮರಳುಮಾಡುವ “ಆಟ” ಶುರುಹಚ್ಚಿಕೊಂಡರು. ಮದವೆ-ಮುಂಜಿ, ಕಾಯಿಲೆ-ಕಷ್ಟ, ಸಾಂಸ್ಕೃತಿಕ-ಕ್ರೀಡಾ-ರಾಜಕೀಯ ಫಂಕ್ಷನ್ ಎಂದು ಬಂದವರಿಗೆ ಬೊಗಸೆಯಲ್ಲಿ ಮೊಗೆಮೊಗೆದು ಕಾಸು ಕೊಡಲಾರಂಭಿಸಿದರು; ಬಡವರಿಗೆ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ 9 ಮನೆಗಳನ್ನು ಕಟ್ಟಿಸಿಕೊಟ್ಟರು. ಕರಾವಳಿ ಸಂಘ ಪರಿವಾರದ ಸರ್ವೋಚ್ಚ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಮತೀಯ ಮಸಲತ್ತಿನ ಮಾತುಗಾರ್ತಿ ಚೈತ್ರ ಕುಂದಾಪುರಳಂಥ ಪೇಯ್ಡ್ ಗೆಸ್ಟ್‌ಗಳನ್ನು ಕರೆಸಿ ಧರ್ಮಕಾರಣದ ಸಭೆ-ಸಮಾರಂಭ ಏರ್ಪಡಿಸಿ ಭಾವಿ ಶಾಸಕನ ಪೋಸು ಕೊಡತೊಡಗಿದರು.

ಈ ರಾಜಕೀಯ ಮಹತ್ವಾಕಾಂಕ್ಷೆಯ ಯೋಚನೆ-ಯೋಜನೆಗಳ ಗೊಂದಲದ ಸಂದರ್ಭದಲ್ಲಿ ಗೋವಿಂದಬಾಬು ಪೂಜಾರಿಗೆ ಬೆಂಕಿ ಹುಡುಗಿ ಚೈತ್ರ ಕುಂದಾಪುರ ಸಂಪರ್ಕಕ್ಕೆ ಬರುತ್ತಾರೆ. ಬೈಂದೂರಿನ ಅನೈತಿಕ ಪೊಲೀಸ್‌ಗಿರಿಯ ಮುಂಚೂಣಿಯಲ್ಲಿದ್ದ ಪ್ರಸಾದ್ ಮೂಲಕ ಚೈತ್ರಳ ಪರಿಚಯ-ಒಡನಾಟ ಆರಂಭವಾಗುತ್ತದೆ. ಎಮ್ಮೆಲ್ಲೆಯಾಗುವ ಲಾಲಸೆಯಲ್ಲಿ ಚಂಚಲರಾಗಿದ್ದ ಗೋವಿಂದಬಾಬು ಪೂಜಾರಿಯ ದೌರ್ಬಲ್ಯ ಅರ್ಥಮಾಡಿಕೊಂಡಿದ್ದ ಚೈತ್ರ ಕುಂದಾಪುರ, ತನಗೆ ಆರೆಸ್ಸೆಸ್-ಬಿಜೆಪಿಯ ಪ್ರಭಾವಿಗಳ ಪರಿಚಯವಿದೆ; ಪ್ರಧಾನಿ ಮೋದಿ ಕಚೇರಿಯಲ್ಲಿ ಬೇಕಿದ್ದರೂ ಕೈಯ್ಯಿದೆ. ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರು ಗೊತ್ತು. ನಿಮಗೆ ಬಿಜೆಪಿ ಟಿಕೆಟ್ ಕೊಡಿಸುವುದು ಕಷ್ಟವೇನಲ್ಲ. ಆದರೆ ಸ್ವಲ್ಪ ಕಾಸು ಬಿಚ್ಚಬೇಕಾಗುತ್ತದೆ ಎಂದು ರೀಲು ಬಿಟ್ಟಿದ್ದರು. ರಾಜಕೀಯ ತಿಳಿವಳಿಕೆಯಿಲ್ಲದ ಗೋವಿಂದ ಪೂಜಾರಿ ತಾರಕ ಸ್ವರದ ಕಟ್ಟರ್ ಹಿಂದುತ್ವದ ಭಾಷಣಗಳ ಮೂಲಕ ಸುದ್ದಿ-ಸದ್ದು ಮಾಡುತ್ತಿದ್ದ ಚೈತ್ರಳನ್ನು ದೊಡ್ಡ ನಾಯಕಿಯೆಂದೇ ಭ್ರಮಿಸಿದ್ದರು; ಆಕೆಯ ಗಿಲೀಟಿನ ಮಾತು ನಂಬಿ ಹಳ್ಳಕ್ಕೆಬಿದ್ದರು.

ಮೊದಲ ಕಂತು 50 ಲಕ್ಷ!

ಶಾಸಕನಾಗುವ ಆತುರ-ಕಾತುರದಲ್ಲಿದ್ದ ಗೋವಿಂದಬಾಬು ಪೂಜಾರಿಯಿಂದ ಕೋಟಿ-ಕೋಟಿ ಸುರಿಯಲು ಸಂಘಪರಿವಾರದ “ದುರ್ಗೆ” ಚೈತ್ರ ಮತ್ತಾಕೆಯ ಸಂಗಡಿಗರು ಹೆಣೆದಿರುವ ಚಿತ್ರಕತೆ ರೋಚಕವಾಗಿದೆ. ಚೈತ್ರ ಮತ್ತವಳ ಚಿತ್ರ ತಂಡದ ಇತರ ಆರೆಂಟು ನಟರು ಈ ಮೆಗಾ ಧಗಾ ಧಾರಾವಾಹಿಯಲ್ಲಿ ಒಂದೊಂದು ಪಾತ್ರವನ್ನೂ ಅದ್ಭುತವಾಗಿ ನಿರ್ವಹಿಸಿದ್ದಾರೆ. ಉತ್ತರ ಭಾರತದಲ್ಲಿ ಆರೆಸ್ಸೆಸ್ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್‌ಜೀಗೆ ಆಪ್ತರಾದ ಚಿಕ್ಕಮಗಳೂರು ಬಿಜೆಪಿಯ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್ ಮೂಲಕ ಬಿಜೆಪಿ ಟಿಕೆಟ್ ಕೊಡಿಸುವ ಆಸೆ-ಭರವಸೆ ಗೋವಿಂದಬಾಬುಗೆ 2022ರ ಮೇ-ಜೂನ್ ತಿಂಗಳಲ್ಲೇ ಚೈತ್ರ ಮೂಡಿಸಿದ್ದಾರೆನ್ನಲಾಗಿದೆ. ಆಗೆಲ್ಲ ಜೋರು ಚುನಾವಣೆ ಸಿದ್ಧತೆಯಲ್ಲಿದ್ದ ಗೋವಿಂದಬಾಬುರ ಕಾರ್ಯಕ್ರಮಗಳಲ್ಲಿ ಚೈತ್ರ ಮುಖ್ಯ ಸ್ಟಾರ್ ಭಾಷಣಕಾರಳಾಗಿ ಭಾಗವಹಿಸುತ್ತಿದ್ದರು. ವಿಶ್ವನಾಥ್‌ಜೀ ಬರುವರಿದ್ದಾರೆ; ನೀವೊಮ್ಮೆ ಗಗನ್ ಕಡೂರ್‌ನನ್ನು ಚಿಕ್ಕಮಗಳೂರಲ್ಲಿ ಭೇಟಿ ಮಾಡಬೇಕು ಎಂದು ಚೈತ್ರ ಜೂನ್ 2022ರ ಕೊನೆಯಲ್ಲಿ ಗೋವಿಂದಬಾಬುರಿಗೆ ಹೇಳಿದ್ದಾರೆ. 4 ಜುಲೈ 2022ರಂದು ಗೋವಿಂದಬಾಬು ಚಿಕ್ಕಮಗಳೂರು ಸರಕಾರಿ ಅತಿಥಿಗೃಹದಲ್ಲಿ ಗಗನ್‌ನನ್ನು ಸಂಧಿಸುತ್ತಾರೆ. “ನನಗೆ ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆಫೀಸಿನ ಅಧಿಕಾರಿಗಳ ಜತೆ ನಿಕಟ ನಂಟಿದೆ; 30 ವರ್ಷದಿಂದ ಆರೆಸ್ಸೆಸ್‌ನಲ್ಲಿ ಪ್ರಚಾರಕರಾಗಿರುವ ವಿಶ್ವನಾಥ್‌ಜೀಯ ಅಚ್ಚುಮೆಚ್ಚಿನ ಶಿಷ್ಯ ನಾನು. ಅವರಿಗೆ ನಿಮ್ಮನ್ನು ಪರಿಚಯಿಸುತ್ತೇನೆ” ಎಂದು ಗಗನ್ ಹೇಳುತ್ತಾರೆ. ಅಲ್ಲದೆ ವಿಶ್ವನಾಥ್‌ಜೀ ಎಂದು ಒಬ್ಬರನ್ನು ಭೇಟಿಯೂ ಮಾಡಿಸುತ್ತಾರೆ.

ಅಭಿನವ ಹಾಲಶ್ರೀ ಸ್ವಾಮಿ

ಈ ವಿಶ್ವನಾಥ್‌ಜೀ ತಾನು ಬಿಜೆಪಿ-ಆರೆಸ್ಸೆಸ್ ನಡುವಿನ ಸಮನ್ವಯಕಾರ. ತನ್ನ ಮಾತು ಬಿಜೆಪಿಯಲ್ಲಿ ಯಾರೂ ತೆಗೆದುಹಾಕುವುದಿಲ್ಲ. ಹಾಗಾಗಿ ಗೋವಿಂದಬಾಬುಗೆ ಟಿಕೆಟ್ ಕೊಡಿಸುವುದೇನೂ ಕಷ್ಟವಲ್ಲ ಎಂದು ಭರವಸೆ ಮೂಡುವಂತೆ ನಾಜೂಕಾಗಿ ಮಾತಾಡುತ್ತಾರೆ. ಅಷ್ಟೇಅಲ್ಲ, ಸದ್ಯಕ್ಕೆ 50 ಲಕ್ಷ ಆರಂಭಿಕ ಖರ್ಚಿಗೆ ಬೇಕು; ಟಿಕೆಟ್ ಪ್ರಕ್ರಿಯೆ ಆರಂಭವಾದಾಗ ನಿಕ್ಕಿ ಮೂರು ಕೋಟಿ ಕೊಡಬೇಕು; ಹಾಗೊಮ್ಮೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಹಣ ವಾಪಸ್ ಕೊಡುವುದಾಗಿ ಕೇಸರಿ ಬಿಸಿನೆಸ್ ದಾಳ ಉರುಳಿಸುತ್ತಾರೆ. ಎಮ್ಮೆಲ್ಲೆ ಟಿಕೆಟ್ ಹಪಾಹಪಿಯಲ್ಲಿದ್ದ ಗೋವಿಂದ ಪೂಜಾರಿ ಗಗನ್-ವಿಶ್ವನಾಥ್‌ಜೀ ಹೇಳಿದ್ದನ್ನೆಲ್ಲ ಕಣ್ಣುಮುಚ್ಚಿ ನಂಬುತ್ತ ಹೋದರು. ತನ್ನನ್ನು ಎಮ್ಮೆಲ್ಲೆ ಮಾಡುವ ಪೂಜ್ಯರೆಂಬ ಭಯ-ಭಕ್ತಿಯಿಂದ ಟಿಕೆಟ್ ಒಡಂಬಡಿಕೆ ಮಾಡಿಕೊಂಡು ಬಂದರು; ಮಾತುಕತೆ ಪ್ರಕಾರ 22.7.2022ರಂದು ಚೈತ್ರ ಗ್ಯಾಂಗಿನ ಬೈಂದೂರಿನ ಹುಡುಗ ಪ್ರಸಾದ್ ಜತೆ ಶಿವಮೊಗ್ಗೆಗೆ ಹೋಗಿ ಆರೆಸ್ಸೆಸ್ ಕಚೇರಿ ಎದುರು 50 ಲಕ್ಷ ಗಗನ್ ಕೈಗಿಡುತ್ತಾರೆ!

ಚೈತ್ರಳಿಗೆ ಮೂರು ಕೋಟಿ; ಹಾಲಶ್ರೀಗೆ 1.5 ಕೋಟಿ!

ಚೈತ್ರ ಕುಂದಾಪುರ್ ನಿರ್ದೇಶನದ “ಟೋಪಿ” ಧಾರಾವಾಹಿಯ ಎರಡನೇ ಎಪಿಸೋಡ್ ಅಧಿಕಾರ ರಾಜಕಾರಣದ ಆಯಕಟ್ಟಿನ ಸ್ಥಳವಾದ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಚಿತ್ರೀಕರಿಸಲಾಗಿದೆ. ಚೈತ್ರ ಮತ್ತು ಗಗನ್ ಈ ಸರಕಾರಿ ಗೆಸ್ಟ್ ಹೌಸ್‌ನಲ್ಲಿ ಒಬ್ಬರನ್ನು ಗೋವಿಂದ ಪೂಜಾರಿಗೆ ಭೇಟಿಮಾಡಿಸಿ, “ಇವರು ಬಿಜೆಪಿಯ ಕೇಂದ್ರ ಚುನಾವಣಾ ಕಮಿಟಿಯ ಹಿರಿಯ ಸದಸ್ಯರು. ನಿಮಗೆ ಟಿಕೆಟ್ ಕೊಡಿಸುವಂತೆ ಹೇಳಿದ್ದೇವೆ,ನೀವು ಮಾತಾಡಿ” ಎಂದು ಹೇಳುತ್ತಾರೆ. ಹಿಂದಿಯಲ್ಲಿ ಮಾತಾಡುವ ಆತ “ಚೈತ್ರ ಮತ್ತು ಗಗನ್ ಹೇಳಿದ ಮೇಲೆ ನಿಮಗೆ ಟಿಕೆಟ್ ಕೊಡಿಸದೇ ಇರಲಾದೀತೆ? ಟಿಕೆಟ್ ಪಕ್ಕಾ; ಆದರೆ ಅವರಿಬ್ಬರು ಹೇಳಿದಂತೆ ಮೂರು ಕೋಟಿ ಮಾತ್ರ ತಪ್ಪದೆ ಒಪ್ಪಿಸಬೇಕು” ಎಂದು ಹಣಕಾಸಿನ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಾನೆ. ಇದಾದ ಕೆಲವು ದಿನದಲ್ಲಿ ಚೈತ್ರ-ಗಗನ್-ವಿಶ್ವನಾಥ್‌ಜೀ ಕಾನ್ಫರೆನ್ಸ್ ಕಾಲ್ ಮಾಡಿ “ನಿಮಗೆ ಬೈಂದೂರಿನ ಟಿಕೆಟ್ ಕೊಡುವ ಒಂದು ಹಂತದ ಯಶಸ್ವೀ ಮಾತುಕತೆ ದಿಲ್ಲಿಯಲ್ಲಾಗಿದೆ. 3 ಕೋಟಿ ಕೂಡಲೆ ಮುಟ್ಟಿಸಿ” ಎಂದು ಗೋವಿಂದ ಪೂಜಾರಿಗೆ ಹೇಳುತ್ತಾರೆ. ಕೇಸರಿ ಟಿಕೆಟ್ ದಕ್ಕುವ ಭರವಸೆಯಿಂದ ಗೋವಿಂದ ಪೂಜಾರಿ 29.10.2022ರಂದು ಮಂಗಳೂರಿನಲ್ಲಿ ಚೈತ್ರ-ಗಗನ್‌ಗೆ ಮೂರು ಕೋಟಿ ಮುಟ್ಟಿಸುತ್ತಾರೆ.

ಇದನ್ನೂ ಓದಿ: ಚೈತ್ರಾ ವಂಚನೆ ಪ್ರಕರಣದಲ್ಲಿ ಕುಂದಾಪುರಕ್ಕೆ ಅವಮಾನ: ಊರಿನ ಹೆಸರು ಬಳಸದಂತೆ ನಿರ್ಬಂಧಿಸಲು ಕೋರ್ಟ್‌ಗೆ ಮನವಿ

ಇಷ್ಟಕ್ಕೇ ತೃಪ್ತಿಯಾಗದ ಚೈತ್ರ ಮತ್ತೊಂದಿಷ್ಟು ಕಾಸು ಲೂಟಿ ಮಾಡುವ ಐಡಿಯಾ ಹಾಕಿದ್ದಾರೆ! 2022ರ ಸೆಪ್ಟೆಂಬರ್‌ನಲ್ಲಿ ಗೋವಿಂದಬಾಬುಗೆ ಫೋನಾಯಿಸುವ ಚೈತ್ರ, “ನಿಮಗೆ ಟಿಕೆಟ್ ಕೊಡುವ ನಿರ್ಧಾರವನ್ನು ಬಿಜೆಪಿಯ ಅತ್ಯುನ್ನತ ಕೇಂದ್ರ ಚುನಾವಣಾ ಕಮಿಟಿಯ ನಾಯಕರು ಕೈಗೊಂಡಿದ್ದಾರೆ ಎಂದು ವಿಶ್ವನಾಥ್‌ಜಿ ಮತ್ತು ಗಗನ್ ಹೇಳಿದ್ದಾರೆ. ಆದರೆ ಇದಕ್ಕೆ ಕೊನೆಯದಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ಸಂಸ್ಥಾನ ಮಠದ ಹಾಲಶ್ರೀ ಸ್ವಾಮಿಯ ಶಿಫಾರಸ್ಸೊಂದು ಬೇಕಾಗಿದೆ. ನೀವು ಅವರಲ್ಲಿಗೆ ಹೋಗಿ ಕಾಣಿಕೆ ಕೊಟ್ಟು ಬನ್ನಿರಿ” ಎನ್ನುತ್ತಾರೆ. ಈ ಹಾಲಶ್ರೀ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗಳ ಬೇಡಿಕೆ ಇಡುತ್ತಾರೆ. ಗೋವಿಂದಬಾಬು 16 ಜನವರಿ 2023ರಂದು ಬೆಂಗಳೂರಿನ ಹಾಲಶ್ರೀ ಸನ್ನಿಧಿಗೆ 1.5 ಕೋಟಿ ರೂ ಅರ್ಪಿಸಿ ಬರುತ್ತಾರೆ!

ವಿಶ್ವನಾಥ್‌ಜೀ ಸಾವು!!

ಕೇಸರಿ ಟಿಕೆಟ್ ಖರೀದಿಗೆ ಐದು ಕೋಟಿಯಷ್ಟು ದೊಡ್ಡ ಮೊತ್ತದ “ದೇಣಿಗೆ-ಕಾಣಿಕೆ” ಕೊಟ್ಟಿದ್ದ ಗೋವಿಂದಬಾಬು ಪೂಜಾರಿ ಬೈಂದೂರಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ವಿಶ್ವಾಸದಲ್ಲಿದ್ದರು. ತಮ್ಮ ಆಪ್ತ ವಲಯದಲ್ಲಿ ಬಿಜೆಪಿ ಟಿಕೆಟ್ ಪಕ್ಕಾ ಎಂದು ಹೇಳಿಕೊಂಡು ಚುನಾವಣಾ ತಯಾರಿಗೂ ಇಳಿದಿದ್ದರು.ಆದರೆ 2023ರ ಮಾರ್ಚ್ ಮೊದಲ ವಾರ ಗಗನ್ ಕಡೂರ್ ಅವರಿಂದ ಬಂದ ಒಂದು ಫೋನ್ ಕಾಲ್‌ನಿಂದ ಚೈತ್ರ ಏನೋ ಗೋಲ್ಮಾಲ್ ನಡೆಸಿದ್ದಾರೆಂಬ ಸಂಶಯ ಹುಟ್ಟುಹಾಕುತ್ತದೆ. ತನಗೆ ವ್ಯವಸ್ಥಿತವಾಗಿ ಮೋಸ ಮಾಡಲಾಗುತ್ತಿದೆ; ಟಿಕೆಟ್ಟೂ ಇಲ್ಲ-ಕೋಟ್ಯಂತರ ರುಪಾಯಿ ಕಾಸೂ ಇಲ್ಲದಂಥ ಪರಿಸ್ಥಿತಿ ಎದುರಾಗುತ್ತಿದೆ ಎನಿಸುತ್ತದೆ. 8.3.2023ರಂದು ಫೋನು ಮಾಡುವ ಗಗನ್, “ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದ, ದುಡ್ಡು ಪಡೆದಿದ್ದ ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್‌ಜೀ ಕಾಶ್ಮೀರದಲ್ಲಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿಸಲ್ಪಟ್ಟಿದ್ದಾರೆ” ಎಂದಿದ್ದಾರೆ; ಇದಾದ ಎರಡೇ ದಿನಕ್ಕೆ ಮತ್ತೆ ದೂರವಾಣಿ ಕರೆಮಾಡಿದ ಗಗನ್, “ವಿಶ್ವನಾಥ್‌ಜೀ ವಿಧಿವಶರಾದರು!” ಎಂದು ಉದ್ಗರಿಸಿದ್ದಾರೆ.

ಗಗನ್ ಕಡೂರ್

ಇಲ್ಲಿಂದಾಚೆ ಚೈತ್ರಾ ಠೋಳಿಯ ಭಾನಗಡಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ! ಗೋವಿಂದ ಪೂಜಾರಿ ಕಾಶ್ಮೀರದಲ್ಲಿರುವ ಪರಿಚಿತ ನಿವೃತ್ತ ಸೇನಾಧಿಕಾರಿ ಯೋಗೀಶ್ ಎಂಬವರನ್ನು ಸಂಪರ್ಕಿಸಿ ವಿಶ್ವನಾಥ್‌ಜೀ ಬಗ್ಗೆ ವಿಚಾರಿಸುತ್ತಾರೆ; ಆರೆಸ್ಸೆಸ್ ವಲಯದ ನಂಟಿರುವ ಯೋಗೀಶ್ ವಿಶ್ವನಾಥ್‌ಜೀಯನ್ನು ಹುಡುಕಾಡುತ್ತಾರೆ. ಆದರೆ ವಿಶ್ವನಾಥ್‌ಜೀ ಹೆಸರಿನ ಕರ್ನಾಟಕ ಮೂಲದ ಆರೆಸ್ಸೆಸ್ ಪ್ರಚಾರಕರ್‍ಯಾರೂ ಕಾಶ್ಮೀರದಲ್ಲಿಲ್ಲ ಎಂದು ತಿಳಿದುಬರುತ್ತದೆ. ಇತ್ತ ಗೋವಿಂದ ಪೂಜಾರಿಯ ಹಿಂಬಾಲಕರಾದ ಒಂದಿಷ್ಟು ಹಿಂದು ಸಂಘಟನೆಯ ಹುಡುಗರು ಗಗನ್ ಕಡೂರ್‌ನ ಪೂರ್ವಾಪರದ ಶೋಧನೆಗಿಳಿಯುತ್ತಾರೆ. ಆ ಸಂದರ್ಭದಲ್ಲಿ ಕಡೂರು ಕಡೆ ಹಿಂದುತ್ವ ಚಟುವಟಿಕೆಯಲ್ಲಿರುವ ಮಂಜು ಎಂಬಾತ ಗಗನ್ ಜತೆಗಾರರಾದ ಇಬ್ಬರು ಕಡೂರಿನ ಸಲೂನ್ ಒಂದಕ್ಕೆ ಬಂದು, ಒಬ್ಬ ಆರೆಸೆಸ್ ಪ್ರಚಾರಕನ ಲುಕ್, ಮತ್ತೊಬ್ಬ ಉತ್ತರ ಭಾರತದ ಕಡೆಯ ಹಿರಿಯ ಬಿಜೆಪಿ ರಾಜಕಾರಣಿಯ ಗೆಟಪ್ ಬರುವಂತೆ ಕೂದಲು ಕತ್ತರಿಸಿ ಮೇಕಪ್ ಮಾಡಿಕೊಂಡು ಹೋಗಿರುವ ಸಂಗತಿ ಹೇಳುತ್ತಾರೆ.

ನಟರಿಗೆಷ್ಟು ಸಂಭಾವನೆ?

ಅಸೆಂಬ್ಲಿ ಚುನಾವಣೆಯ ಕರಾವಳಿ ಭಾಗದ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ 11 ಏಪ್ರಿಲ್ 2023ರಂದು ಬಿಡುಗಡೆ ಮಾಡುತ್ತದೆ. ಅದರಲ್ಲಿ ಬೈಂದೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಗೋವಿಂದಬಾಬು ಪೂಜಾರಿಯ ಹೆಸರಿರುವುದಿಲ್ಲ. ಆಗ ಹಿಂದುತ್ವದ ಬಾಯಿಬಡುಕಿ ಚೈತ್ರ ಕುಂದಾಪುರ್, ಬಿಜೆಪಿ ಯುವ ಮೋರ್ಚಾದ ಗಗನ್ ಕಡೂರ್, ಚೈತ್ರಳ ವ್ಯವಹಾರ ನೋಡಿಕೊಳ್ಳುವ ಆಕೆಯ ಪರಮಾಪ್ತ ಉಡುಪಿಯ ಶ್ರೀಕಾಂತ್ ನಾಯಕ್ ಮತ್ತು ಪ್ರಸಾದ್ ಬೈಂದೂರ್ ಸೇರಿ ತನ್ನ ಹಣ ಕೊಳ್ಳೆ ಹೊಡೆಯುವ ಪ್ಲಾನು ಹಾಕಿಯೇ ಕೇಸರಿ ಟಿಕೆಟ್ ಕೊಡಿಸುವ ನಾಟಕವಾಡಿದರೆಂಬುದು ಖಾತ್ರಿ ಆಗುತ್ತದೆ. ಚೈತ್ರ ಹಾಗು ಗಗನ್‌ರನ್ನು 24.4.2023ರಂದು ಗೋವಿಂದ ಪೂಜಾರಿ ಬೆಂಗಳೂರಿನ ಬೊಮ್ಮನಳ್ಳಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಳ್ಳುತ್ತಾರೆ. ಗರಂ ಆಗಿಯೇ ಹಣ ವಾಪಸ್ ಕೇಳುತ್ತಾರೆ. ವಿಶ್ವನಾಥ್‌ಜೀ ಕೈಲಿ ಹಣ ಕೊಟ್ಟಿದ್ದೆವು; ಅವರ ನಿಧನದಿಂದ ನಾವು ಇಕ್ಕಟ್ಟಿಗೆ ಸಿಲುದ್ದೇವೆ ಎಂದು ಚೈತ್ರ-ಗಗನ್ ಮುಗ್ಧರಂತೆ ಅಲವತ್ತುಕೊಳ್ಳುತ್ತಾರೆ. ಆಗ ಗೋವಿಂದ ಪೂಜಾರಿ ಸಿಟ್ಟಿಗೆದ್ದು “ನಿಮ್ಮ ನಾಟಕ ನನಗೆ ಗೊತ್ತಾಗಿದೆ; ಹಣ ಮರಳಿಸದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ” ಎಂದು ಗದರಿದ್ದಾರೆ. ಆಗ ಗಗನ್ ಬಾಟಲಿಯೊಂದರಿಂದ ವಿಷ ಕುಡಿದಂತೆ ಸೀನ್ ಕ್ರಿಯೇಟ್ ಮಾಡಿದ್ದಾರೆ.

ಮಂಗಳೂರು, ಉಡುಪಿ ಸಿಸಿಬಿ ಪೊಲೀಸರು ವಂಚನೆಗೊಳಗಾದ ಗೋವಿಂದ ಪೂಜಾರಿಯಿಂದ ಪಡೆದ ಮಾಹಿತಿಯ ಜಾಡುಹಿಡಿದು ತನಿಖೆ ಕೈಗೊಂಡಾಗ ಸಂಘ ಪರಿವಾರದ “ಸಂಘಿ ಸಾದ್ವಿ” ಚೈತ್ರಳ ಮೋಸದ ವಿಸ್ತೃತ ಜಾಲವೇ ಕಾಣಿಸುತ್ತದೆ. ವಾಸ್ತವಿಕವಾಗಿ ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್‌ಜೀ ಆಗಲಿ, ಬಿಜೆಪಿಯ ಕೇಂದ್ರ ಟಿಕೆಟ್ ಸಮಿತಿಯ ಸದಸ್ಯನಾಗಲಿ ಇರುವುದೇ ಇಲ್ಲ. ಚೈತ್ರ-ಗಗನ್ ತಮ್ಮ ಗ್ಯಾಂಗಿನವರಿಗೆ ಆ ಪಾತ್ರಗಳನ್ನು ವಹಿಸಿ ನಟನೆ ಕಲಿಸಿ, ಡೈಲಾಗ್ ಹೇಳಿಕೊಟ್ಟಿದ್ದರು!! ಆರೆಸ್ಸೆಸ್ ಪ್ರಚಾರಕ ವಿಶ್ವನಾಥ್‌ಜೀ ವೇಷಹಾಕಿ ಗೋವಿಂದ ಪೂಜಾರಿಯೊಂದಿಗೆ ಡೀಲ್ ಕುದುರಿಸಿದಾತ ಗಗನ್ ಕಡೂರ್‌ನ ಆಪ್ತ ಮಿತ್ರ-ಚಿಕ್ಕಮಗಳೂರು ಯುವ ಬಿಜೆಪಿಯಲ್ಲಿ ಓಡಾಡಿಕೊಂಡಿದ್ದ ರಮೇಶ್; ರಮೇಶನ ನಟನೆಗೆ ಚೈತ್ರ-ಗಗನ್ 1.20 ಲಕ್ಷ ಮತ್ತು ಆತನ ಜತೆ ತಿರುಗಾಡಲು ನೇಮಿಸಿದ್ದ ಚಿಕ್ಕಮಗಳೂರಿನವನೇ ಆಗಿರುವ ಧನರಾಜ್‌ಗೂ 1.20 ಲಕ್ಷ “ಸಂಭಾವನೆ” ಕೊಟ್ಟಿದ್ದರು. ಒಮ್ಮೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ, ನಾಲ್ಕೈದು ಭಾಷೆ ನಿರರ್ಗಳವಾಗಿ ಮಾತಾಡುವ ಕಡೂರು ಮೂಲದ ಬೆಂಗಳೂರು ನಿವಾಸಿ ಚೆನ್ನಾ ನಾಯ್ಕ್‌ಗೆ, (ಬಿಜೆಪಿಯ ಟಿಕೆಟ್ ಕಮಿಟಿಯ ಪ್ರಭಾವಿ ಪುಢಾರಿಯ ಪಾತ್ರ ನಿರ್ವಹಿಸಲು) 1 ಲಕ್ಷ ಕೊಡುವುದಾಗಿ ಹೇಳಿದ್ದ ಗಗನ್-ಚೈತ್ರ 93 ಸಾವಿರದಷ್ಟು ಆತನ ಬ್ಯಾಂಕ್ ಖಾತೆಗೆ ಹಾಕಿದ್ದರು.

ಪೊಲೀಸರು ಚೈತ್ರ ಪ್ರಕರಣವನ್ನು ಬಗೆದಂತೆ ಬಿಚ್ಚಿಕೊಳ್ಳತ್ತಿದೆ. ಚೈತ್ರಳ ಕೋಟಿಗಳ ವ್ಯವಹಾರ ಬೆಚ್ಚಿಬೀಳಿಸುತ್ತಿದೆ. ಸರಿಯಾದ ಉದ್ಯೋಗಲ್ಲದ, ಆರ್ಥಿಕ ಮೂಲವಿಲ್ಲದ ಚೈತ್ರ ಕೋಟಿಗಳ ಲೆಕ್ಕದಲ್ಲಿ ಆಸ್ತಿ, ಭೂಮಿ ಮಾಡಿಕೊಂಡಿದ್ದಾರೆ. 28 ಲಕ್ಷದ ಕಿಯಾ ಕಾರು ಕೊಂಡುಕೊಂಡಿದ್ದಾರೆ. ಗೆಳೆಯ ಶ್ರೀಕಾಂತ್ ನಾಯಕನ ಹೆಸರಲ್ಲಿ ಉಡುಪಿಯ ಹಿರಿಯಡ್ಕದಲ್ಲಿ ಜಾಗ ಖರೀದಿಸಿ ಕೋಟಿ ಅಂದಾಜಿನ ಮನೆ ಕಟ್ಟಿಸುತ್ತಿದ್ದಾರೆ. ಉಪ್ಪೂರು ಸಹಕಾರಿ ಬ್ಯಾಂಕಿನಲ್ಲಿ ಚೈತ್ರ-ಶ್ರೀಕಾಂತ್ ಕೋಟಿಗಟ್ಟಲೆ ಹಣದ ಠೇವಣಿ, ಅಪಾರ ಒಡವೆ, ಉಳಿತಾಯ ಖಾತೆಯಲ್ಲಿ ಲಕ್ಷಾಂತರ ರೂ ಇಟ್ಟಿದ್ದಾರೆ. ಅನೈತಿಕ ಪೊಲೀಸ್‌ಗಿರಿಯಲ್ಲಿ ಸದಾ ಸಕ್ರಿಯನಾಗಿರುವ ಶ್ರೀಕಾಂತ್ ಕೂಡ ಶ್ರೀಮಂತನಾಗಿದ್ದಾನೆಂಬ ಮಾತು ಕೇಳಿಬರುತ್ತಿದೆ. ವೈಭವದ ಬದುಕು ನಡೆಸುತ್ತಿದ್ದ ಚೈತ್ರ ಗಂಗಾವತಿ ಕಡೆಯಲ್ಲೂ ಆಸ್ತಿ ಮಾಡಿರುವ ಅನುಮಾನವಿದೆ. ಹಿಂದುತ್ವದ ಲೇವಾದೇವಿಯಿಂದ ಚೈತ್ರಳಿಗೆ ಭರ್ಜರಿ ಭಾಗ್ಯ ಬಂದಿದೆ ಎಂಬ ಚರ್ಚೆಗಳೀಗ ಜೋರಾಗಿದೆ. ಚೈತ್ರಳ ಕೇಸರಿ ದಂಧೆಯ ಹಿಂದೆ ಪ್ರಚಂಡ ಸನಾತನ ಕನ್ನಡ ವಾಗ್ಮಿಯಿರುವ ಅನುಮಾನ ಮೂಡಿದೆ. ಹಿಂದುತ್ವದ “ಪ್ರವಚನಕಾರ” ಸೂಲಿಬೆಲೆ ಚಕ್ರವರ್ತಿ ಸದ್ರಿ ದೋಖಾ ಪ್ರಕರಣದ ಪ್ರಮುಖ ಆರೋಪಿ ಹಾಲಶ್ರೀ ಜತೆಗಿರುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ! ತಲೆ ಮರೆಸಿಕೊಂಡಿರುವ ಹಾಲಶ್ರೀ ಸಿಕ್ಕಿಬಿದ್ದರೆ ದೊಡ್ಡ-ದೊಡ್ಡವರ ಹೆಸರು ಹೊರಬರಲಿದೆ ಎಂದು ಖುದ್ದು ಚೈತ್ರಳೇ ಹೇಳಿದ್ದಾರೆ.

ಪ್ರಸಾದ್ ಬೈಂದೂರ್

ವಿಕಟ ವ್ಯಂಗ್ಯವೆಂದರೆ ದುರ್ಗೆ-ಕಾಳಿ ಎಂದೆಲ್ಲ ತಾರೀಫು ಮಾಡಿ ಹಿಂಸೋನ್ಮಾದದ ಹಿಂದುತ್ವ ಪ್ರಸಾರ ಮತ್ತು ಬಿಜೆಪಿ ಪ್ರಚಾರಕ್ಕೆ ಚೈತ್ರಳನ್ನು ಬೇಕಾಬಿಟ್ಟಿಯಗಿ ಬಳಸಿಕೊಳ್ಳುತ್ತಿದ್ದವರೆಲ್ಲ ನಡುನೀರಲ್ಲಿ ಕೈಬಿಟ್ಟಿದ್ದಾರೆ; ಚೈತ್ರಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಕಾರ್ಕಳದ ಮಾಜಿ ಮಂತ್ರಿ ಸುನಿಲ್ ಕುಮಾರ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆವರೆಗಿನ ಹಲವು ಹಿಂದುತ್ವ ರಾಜಕಾರಣದ ಮುಂದಾಳುಗಳೆಲ್ಲ ಚೈತ್ರಳನ್ನು ಪೀಡೆಯೆಂಬಂತೆ ದೂರಮಾಡುತ್ತಿದ್ದಾರೆ. ಒಂದಂತೂ ಖರೆ. ಚೈತ್ರ ಅಂಡ್ ಗ್ಯಾಂಗಿನ ಮೆಗಾ ಧೋಖಾ ಪ್ರಕರಣದಿಂದ ಹಿಂದುತ್ವ ವಲಯದಲ್ಲಿ ಚೈತ್ರಳಂಥ ಶೂದ್ರರ ಆರ್ಭಟ ಜೋರಾದಾಗ ಸ್ವಯಂಕೃತ ಅಪರಾಧದ ಖೆಡ್ಡಾಕ್ಕೆ ಬಿದ್ದು ಡಿಮಾರಲೈಸ್ ಆಗುವಂತೆ ಮಾಡುವ ಹುನ್ನಾರ ಬ್ರಾಹ್ಮಣ ನಿಯಂತ್ರಣದ ಸಂಘ ಪರಿವಾರದಲ್ಲಿ ಸದಾ ಚಾಲೂ ಇರುತ್ತದೆ ಎಂಬುದು ಸಾಬೀತಾಗಿದೆ. ಜೇಡ ತಾನೇ ಹೆಣೆದ ಬಲೆಯಲ್ಲಿ ಸಿಕ್ಕಿಬಿದ್ದು ಸಾಯುವಂತೆ ಪರಿಸ್ಥಿತಿಗೆ ಚೈತ್ರ ಕುಂದಾಪುರಳಿಗೆ ದೂಡಲಾಯಿತೆ?!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...