Homeಮುಖಪುಟಭಾರತ-ಚೀನಾ ಸಂಘರ್ಷ: ’ಧೀರ ಸೇನೆ ಹಾಗೂ ಮೌನರಾಜ’ನ ಕಥೆ-ವ್ಯಥೆ

ಭಾರತ-ಚೀನಾ ಸಂಘರ್ಷ: ’ಧೀರ ಸೇನೆ ಹಾಗೂ ಮೌನರಾಜ’ನ ಕಥೆ-ವ್ಯಥೆ

- Advertisement -
- Advertisement -

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಚೀನಾ ಗಡಿಯಲ್ಲಿ ನಮ್ಮ ಸೈನಿಕರಿಗೂ ಚೀನೀ ಸೈನಿಕರಿಗೂ ನಡುವೆ ನಡೆದ ಘರ್ಷಣೆ ಕಳೆದ ಒಂದು ವಾರದಿಂದ ಭಾರೀ ಗದ್ದಲವೆಬ್ಬಿಸಿ, ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಗಡಿ ಭಾಗದಲ್ಲಿ ನಡೆದ ಸಂಘರ್ಷದ ಬಗ್ಗೆ ನಾಗರಿಕರಿಗೆ ಸರಿಯಾದ ಮಾಹಿತಿಯೂ ಸಿಗದೆ ಒಂದಷ್ಟು ಗೊಂದಲಕ್ಕೂ ಕಾರಣವಾಗಿದೆ.

ಹಲವು ಮೂಲಗಳ ಪ್ರಕಾರ ಅಂದು ನಡೆದದ್ದಿಷ್ಟು. ಡಿಸೆಂಬರ್ 9ರ ಬೆಳ್ಳಂಬೆಳಿಗ್ಗೆ ಭಾರತದ ನಿಯಂತ್ರಣದಲ್ಲಿರುವ ತವಾಂಗ್ ವಿಭಾಗದ ಯಾಂಗ್ಷೆ ಬೆಟ್ಟ ಪ್ರದೇಶದಲ್ಲಿ ಅತಿಕ್ರಮಣ ಮಾಡಲು ಯತ್ನಿಸಿದ ಚೀನೀ ಸೈನಿಕರಿಗೆ ಭಾರತದ ಸೈನಿಕರು ತೀವ್ರ ಪ್ರತಿರೋಧ ಒಡ್ಡಿದರು. ತೀವ್ರ ಬಡಿದಾಟದ ನಂತರ ಚೀನೀ ಸೈನಿಕರನ್ನು ಹಿಂದೆ ಸರಿಯುವಂತೆ ಮಾಡುವಲ್ಲಿ ನಮ್ಮ ಧೀರ ಯೋಧರು ಯಶಸ್ವಿಯಾದರು. ಈ ಬಡಿದಾಟದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾದವು. ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಈ ಘಟನೆಯ ಸುದ್ದಿ ಹರಿದಾಡಿ ಸ್ಥಳೀಯ ಪತ್ರಕರ್ತರೊಬ್ಬರ ಕಿವಿಗೆ ಬಿತ್ತು. ಅಲ್ಲಿಂದಾಚೆಗೆ ಪ್ರಮುಖ ಸುದ್ದಿ ಮಾಧ್ಯಮಗಳಿಗೂ ಈ ಸುದ್ದಿ ತಲುಪಿತು. ಆಂಗ್ಲ ದೈನಿಕಗಳಾದ ಚಂಡೀಗಢ ಮೂಲದ ’ದಿ ಟ್ರಿಬ್ಯೂನ್’ ಮತ್ತು ಚೆನ್ನೈ ಮೂಲದ ’ದಿ ಹಿಂದೂ’ ಪತ್ರಿಕೆಗಳು ಈ ಸುದ್ದಿಯನ್ನು ಡಿಸೆಂಬರ್ 12ರಂದು ಪ್ರಕಟಿಸಿದ್ದರಿಂದ ದೇಶದ ಪ್ರಜೆಗಳಿಗೆ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬ ಸ್ವಲ್ಪವಾದರೂ ಮಾಹಿತಿ ಸಿಕ್ಕಂತಾಯ್ತು.

ಇದಾದ ನಂತರ ಟಿಆರ್‌ಪಿ ರೇಸಿನಲ್ಲಿರುವ ಎಲ್ಲಾ ಸುದ್ದಿ ಮಾಧ್ಯಮಗಳು, ಈ ಸುದ್ದಿಗೆ ತಂತಮ್ಮ ಅಭಿರುಚಿಗೆ ತಕ್ಕಂತೆ ಮಸಾಲೆ ಬೆರೆಸಿ ಪ್ರಚುರಪಡಿಸಿದವು. ಇದೇ ಸಂದರ್ಭದಲ್ಲಿ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ ವಿಡಿಯೋ ಎಂದು ಹಳೆಯ ವಿಡಿಯೋ ಒಂದು ವೈರಲ್ ಆಯ್ತು. ಅದನ್ನೇ ಹಿಡಿದ ಟಿವಿ ಮಾಧ್ಯಮಗಳು ದಿನವಿಡೀ ಪ್ರಸಾರ ಮಾಡಿ ಬಾಯಿಗೆ ಬಂದದ್ದನ್ನೆಲ್ಲ ಒದರಿದ್ದೂ ನಡೆಯಿತು. ಇಷ್ಟೆಲ್ಲಾ ನಡೆದರೂ ಮೋದಿ ನಾಯಕತ್ವದ ಭಾರತದ ಘನ ಕೇಂದ್ರ ಸರ್ಕಾರ ಮಾತ್ರ ಏನೂ ನಡೆದೇ ಇಲ್ಲವೇನೋ ಎಂಬಂತೆ ಮೌನ ವಹಿಸಿತ್ತು. ಸರ್ಕಾರದ ಕಡೆಯಿಂದ ಕನಿಷ್ಟ ಒಂದು ಹೇಳಿಕೆಯೂ ಹೊರಬೀಳಲಿಲ್ಲ.

ಸರ್ಕಾರದ ಈ ನಿರ್ಲಜ್ಜ ನಡೆ ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಟೀಕಾಪ್ರವಾಹವೇ ಹರಿಯಲು ಶುರುವಾಯ್ತು. ಇದೇ ವೇಳೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದುದರಿಂದ ವಿರೋಧ ಪಕ್ಷಗಳು ಸರ್ಕಾರದ ಈ ಮೌನವನ್ನು ತೀವ್ರವಾಗಿ ಒಕ್ಕೊರಲಿನಿಂದ ಖಂಡಿಸಿದವು. ಚೀನಾದ ಗಡಿ ಪ್ರದೇಶದ ಸ್ಥಿತಿಗತಿಯ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರಿಸಬೇಕೆಂದು ಪಟ್ಟುಹಿಡಿದವು. ರಾಹುಲ್ ಗಾಂಧಿ ಜೈಪುರದಲ್ಲಿ ಭಾರತ್ ಜೋಡೋ ಯಾತ್ರೆಯ ಕಾರ್ಯಕ್ರಮದ ವೇದಿಕೆಯಿಂದ ಮಾತನಾಡಿ, “ಭಾರತದ ವಿರುದ್ಧ ಚೀನಾ ಯುದ್ಧದ ತಯಾರಿ ನಡೆಸುತ್ತಿದೆ, ನಮ್ಮ ಗಡಿಯೊಳಗೆ ನುಗ್ಗಿ ನಮ್ಮ ಸೈನಿಕರ ಮೇಲೆ ಕೈಮಾಡುತ್ತಿದೆ. ಆದರೆ ಮೋದಿ ಸರ್ಕಾರ ಏನೂ ಆಗಿಲ್ಲವೆಂಬಂತೆ ನಿದ್ದೆ ಮಾಡುತ್ತಿದೆ.” ಎಂದು ಟೀಕಿಸಿದರು.

ಹೀಗೆ ಎಲ್ಲ ಕಡೆಯಿಂದ ಬಂದ ಟೀಕೆಗಳಿಂದ ಮುಜುಗರಕ್ಕೆ ಒಳಗಾದ ಒಕ್ಕೂಟ ಸರ್ಕಾರ ಕೊನೆಗೂ ಸಂಸತ್ತಿನಲ್ಲಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್ “ಡಿಸೆಂಬರ್ 9ರಂದು ಪಿಎಲ್‌ಎ ಪಡೆಗಳು ಯಾಂಗ್ಷೆ ಪ್ರದೇಶವನ್ನು ಅತಿಕ್ರಮಣ ಮಾಡಲು ಯತ್ನಿಸಿದರು, ಏಕಪಕ್ಷೀಯವಾಗಿ ವಾಸ್ತವ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಿದರು. ನಮ್ಮ ಧೀರ ಯೋಧರು ಈ ಪ್ರಯತ್ನವನ್ನು ವಿಫಲಗೊಳಿಸಿದರು. ಈ ಘಟನೆಯಲ್ಲಿ ಭಾರತದ ಸೇನೆಯ ಕಡೆ ಯಾವುದೇ ಸಾವು ಸಂಭವಿಸಿಲ್ಲ ಅಥವಾ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಭಾರತದ ಸೇನಾಧಿಕಾರಿಗಳು ಡಿಸೆಂಬರ್ 11ರಂದು ಚೀನಾದ ಅಧಿಕಾರಿಗಳೊಂದಿಗೆ ಫ್ಲಾಗ್ ಮೀಟಿಂಗ್ ನಡೆಸಿ ಈ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ನಮ್ಮ ಪಡೆಗಳು ಎಂಥದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿವೆ ಎಂದು ಈ ಸದನಕ್ಕೆ ಆಶ್ವಾಸನೆ ಕೊಡಲು ಬಯಸುತ್ತೇನೆ. ನಮ್ಮ ಸೈನ್ಯದ ಬದ್ಧತೆ, ಪರಾಕ್ರಮ, ಶೌರ್ಯಗಳನ್ನು ಈ ಸದನ ಶ್ಲಾಘಿಸಬೇಕಾಗಿದೆ” ಎಂಬ ಹೇಳಿಕೆ ಕೊಟ್ಟರು.

ಆದರೆ ಈ ವಿಷಯವನ್ನು ಪ್ರಜೆಗಳ ಮುಂದಿಡಲು ಇಷ್ಟು ತಡ ಮಾಡಿದ್ದೇಕೆ ಎಂಬ ಪ್ರಶ್ನೆಗಾಗಲಿ, ಪ್ರಧಾನಿ ಮೋದಿ ಖುದ್ದಾಗಿ ಬಂದು ಸದನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಗಾಗಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪರಿಣಾಮವಾಗಿ ಕೂಗಾಟ, ಗದ್ದಲ ನಡೆದು ಸದನ ಗೊಂದಲದ ಗೂಡಾಯ್ತು. ಈ ಗೊಂದಲ ಇನ್ನೂ ಹಾಗೇ ಮುಂದುವರಿದಿದೆ.

ಇದನ್ನೂ ಓದಿ: ಚೀನಾ- ಭಾರತ ಗಡಿ ಸಮಸ್ಯೆ ಚರ್ಚೆಗೆ ಸಂಸತ್‌ನಲ್ಲಿ ಅವಕಾಶ ನೀಡದ ಮೋದಿ ಸರ್ಕಾರ: ಸೋನಿಯಾ ಗಾಂಧಿ ವಾಗ್ದಾಳಿ

ಮತ್ತೊಂದು ಕಡೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿ “ಚೀನಾ ಮತ್ತು ಭಾರತದ ಗಡಿಗಳ ಪರಿಸ್ಥಿತಿ ಒಟ್ಟಾರೆಯಾಗಿ ನೋಡಿದರೆ ಸ್ಥಿರವಾಗಿದೆ; ಗಡಿ ಸಮಸ್ಯೆ ಬಗ್ಗೆ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸೇನಾಧಿಕಾರಿಗಳ ನಡುವೆ ಅನಿರ್ಬಂಧಿತ ಮಾತುಕತೆ ಚಾಲ್ತಿಯಲ್ಲಿದೆ” ಎಂದಿದೆ. ಆದರೆ ಘಟನೆಯ ಬಗ್ಗೆ ಯಾವುದೇ ವಿವರಗಳನ್ನು ನೀಡುವ ಗೋಜಿಗೆ ಹೋಗಿಲ್ಲ.

ಚೀನಾದ ಗಡಿಯಲ್ಲಿ ನಡೆಯುತ್ತಿರುವುದೇನು?

ಚೀನಾ ಮತ್ತು ಭಾರತದ ನಡುವೆ ಸುಮಾರು 3440 ಕಿಲೋಮೀಟರ್ ಉದ್ದದ ಗಡಿಯಿದೆ. ಆದರೆ ಬಾರತ-ಚೀನಾ ನಡುವಿನ ಬಹುದೊಡ್ಡ ಚಾರಿತ್ರಿಕ ಸಮಸ್ಯೆಯೆಂದರೆ ಇಲ್ಲಿ ನಿಶ್ಚಿತವಾದ ಗಡಿರೇಖೆ ನಿಗದಿಯಾಗಿಲ್ಲ. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ 1914ರಲ್ಲಿ ಅಂದಿನ ಟಿಬೆಟ್ ಆಡಳಿತದ ಜೊತೆಗೆ ಬ್ರಿಟಿಷ್ ವಸಾಹತುಶಾಹಿಗಳು ಒಪ್ಪಂದದ ಮೂಲಕ ರೂಪಿಸಿದ ಮೆಕ್‌ಮಹೊನ್ ರೇಖೆಯೆಂದು ಕರೆಯಲಾಗುವ ಒಂದು ಕಾಲ್ಪನಿಕ ರೇಖೆಯೇ ಇಂದಿಗೂ ಭಾರತ ಮತ್ತು ಚೀನಾಗಳನ್ನು ವಿಂಗಡಿಸುವ ಗಡಿಯೆನಿಸಿಕೊಂಡಿದೆ. ಭಾರತದಲ್ಲಿ 1947ಕ್ಕೆ ಅಸ್ತಿತ್ವಕ್ಕೆ ಬಂದ ಸ್ವತಂತ್ರ ಭಾರತ ಸರ್ಕಾರವಾಗಲಿ ಅಥವ ಚೀನಾದಲ್ಲಿ 1949ರಲ್ಲಿ ಅಸ್ತಿತ್ವಕ್ಕೆ ಬಂದ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಆಗಲಿ ಈ ಒಪ್ಪಂದಗಳಿಗೆ ಭಾಗೀದಾರರಾಗಿರಲಿಲ್ಲ. ಈಗ ಟಿಬೆಟ್ ಕೂಡ ಚೀನಾದ ಭಾಗವಾಗಿ ಹೋಗಿರುವುದರಿಂದ ಈ ಮೆಕ್‌ಮಹೊನ್ ರೇಖೆ ಚೀನಾಕ್ಕೂ ಅನ್ವಯಿಸುತ್ತದೆ. ಆದರೆ ಇಲ್ಲಿ ಉದ್ಭವಿಸಿರುವ ಮತ್ತೊಂದು ಸಮಸ್ಯೆಯೆಂದರೆ ಈ ರೇಖೆಯನ್ನು ಮಾತುಕತೆಯ ಟೇಬಲ್ ಮೇಲೆ ಮ್ಯಾಪ್‌ನಲ್ಲಿ ಗುರುತಿಸಲಾಗಿದ್ದು ವಾಸ್ತವದ ಭೂಮಿಯ ಮೇಲೆ ಗಡಿಯನ್ನು ನಿಖರವಾಗಿ ಗುರುತಿಸಲಾಗಿಲ್ಲ. ಹೀಗಾಗಿ ನಿರಂತರ ಸಂಘರ್ಷಕ್ಕೆ ಇದು ಕಾರಣವಾಗಿದೆ.

ಇದೂ ಅಲ್ಲದೆ ಆಕ್ರಮಣಕಾರಿ ಧೋರಣೆ ಹೊಂದಿರುವ ಚೀನಾದ್ದು ಇಡೀ ಅರುಣಾಚಲ ಪ್ರದೇಶವೇ ತನಗೆ ಸೇರಿದ್ದೆಂಬ ವಾದ. 1962ರ ಭಾರತ ಚೀನಾ ಯುದ್ಧದ ನಂತರ ಭಾರತವು ಲಡಾಕ್ ಪ್ರಾಂತ್ಯದ ಅಕ್ಸಿನ್‌ಚಿನ್ ಪ್ರದೇಶವನ್ನು ಚೀನಾದ ವಶಕ್ಕೆ ಬಿಟ್ಟುಕೊಟ್ಟು ಅರುಣಾಚಲ ಪ್ರದೇಶವನ್ನು ಉಳಿಸಿಕೊಳ್ಳುವ ಒಪ್ಪಂದ ಮಾಡಿಕೊಂಡಿತು. ಆ ಶಾಂತಿ ಒಪ್ಪಂದದ ಪ್ರಕಾರ Line of Actual Control-ವಾಸ್ತವ ನಿಯಂತ್ರಣ ರೇಖೆ ಎಂಬ ನೂತನ ಪರಿಕಲ್ಪನೆ ಜಾರಿಗೆ ಬಂದಿದೆ. ಎರಡೂ ದೇಶದ ಸೈನ್ಯಗಳ ನಡುವೆ ಸಂಘರ್ಷವನ್ನು ತಪ್ಪಿಸಲು ಮೆಕ್‌ಮಹೊನ್ ಗಡಿ ರೇಖೆಯ ಉದ್ದಕ್ಕೂ ನೋ ಮ್ಯಾನ್ ಜೋನ್ ಅನ್ನು ನಿರ್ವಹಿಸುವ ಕರಾರಿಗೆ ಬರಲಾಗಿದೆ. ಈ ಗಡಿ ಭಾಗದಲ್ಲಿ ಗಸ್ತು ತಿರುಗುವ ಉಭಯ ದೇಶದ ಸೈನಿಕರು ಯಾವುದೇ ಮದ್ದುಗುಂಡುಗಳನ್ನು ಬಳಸುವ ಆಯುಧಗಳನ್ನು ಹೊಂದಿರಬಾರದು ಎಂಬುದು ಮತ್ತೊಂದು ಪ್ರಮುಖ ಷರತ್ತು. ಅದೃಷ್ಟವಶಾತ್ ಎರಡೂ ಭಾಗದ ಸೇನೆ ಇದುವರೆಗೂ ಈ ಪ್ರದೇಶದಲ್ಲಿ ಫೈರ್ ಆರ್ಮ್ಸ್ ಬಳಕೆ ಮಾಡಿಲ್ಲ ಎಂಬುದು ಒಂದು ಸಕಾರಾತ್ಮಕ ಅಂಶ. ಒಂದುವೇಳೆ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದೇ ಆಗಿದ್ದಲ್ಲಿ ಭಾರತ ಚೀನಾದ ಗಡಿಪ್ರದೇಶ ಸದಾ ಯುದ್ಧಭೂಮಿಯಾಗಿರುತ್ತಿತ್ತು.

ರಾಜನಾಥ ಸಿಂಗ್

ಆದರೆ ನದಿಗಳು, ಸರೋವರಗಳು, ಹಿಮದ ಬೆಟ್ಟಗಳು, ಕಣಿವೆಗಳಿಂದ ಕೂಡಿರುವ ಈ ಗಡಿ ಪ್ರದೇಶದಲ್ಲಿ ಗಸ್ತು ತಿರುಗುವ ಎರಡೂ ಸೈನಿಕರ ತಂಡಗಳು ಹಲವು ಬಾರಿ ಮುಖಾಮುಖಿಯಾಗಿ ಸಣ್ಣಪುಟ್ಟ ಸಂಘರ್ಷಗಳಾಗುವುದು ಮಾಮೂಲಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆಕ್ರಮಣಕಾರಿ ಪ್ರವೃತ್ತಿಯ ಚೀನಾದ ಸೇನೆ ಪದೇಪದೇ ಯಥಾಸ್ಥಿತಿಯನ್ನು ಉಲ್ಲಂಘನೆ ಮಾಡಿ ಭಾರತದ ಕಡೆ ಪ್ರವೇಶಿಸುವುದು ಹೆಚ್ಚಾಗಿದೆ.

2020ರ ಜೂನ್‌ನಲ್ಲಿ ಲಡಾಕ್ ಪ್ರದೇಶದ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಭೀಕರ ಕಾಳಗದಲ್ಲಿ 20 ಮಂದಿ ಭಾರತೀಯ ಸೈನಿಕರು ಮತ್ತು 4 ಮಂದಿ ಚೀನಾದ ಸೈನಿಕರು ಹತರಾಗಿದ್ದನ್ನು ಕೂಡ ಹಲವು ವರದಿಗಳು ಉಲ್ಲೇಖಿಸಿವೆ. ಈ ದುರ್ಘಟನೆ ಚೀನಾ-ಭಾರತ ಗಡಿಯಲ್ಲಿ 40 ವರ್ಷಗಳ ಸುದೀರ್ಘ ಅವಧಿಯ ನಂತರ ನಡೆದ ಮೊಟ್ಟಮೊದಲ ದುರಂತ. ಕಬ್ಬಿಣದ ಮೊಳೆಗಳನ್ನು ಅಳವಡಿಸಿದ ಬಡಿಗೆಗಳಿಂದ ನಮ್ಮ ಸೈನಿಕರ ಮೇಲೆ ಏಕಾಏಕಿ ದಾಳಿ ಮಾಡಿದ ಚೀನಿ ಪಡೆಗಳು ನಮ್ಮ 20 ಸೈನಿಕರನ್ನು ಕೊಂದುಹಾಕಿದ್ದರು. ಹತ್ತಾರು ಸೈನಿಕರು ಗಾಯಗೊಂಡಿದ್ದರು. ಈ ಘಟನೆಯ ಭೀಕರ ವಿಡಿಯೋಗಳು ದೇಶಾದ್ಯಂತ ಹರಿದಾಡಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಆದರೆ ಈ ಘಟನೆಯನ್ನು ಭಾರತ ಸರ್ಕಾರ ನಿರ್ವಹಿಸಿದ ರೀತಿ ಮಾತ್ರ ನಾವು ನಾಚಿಕೆಯಿಂದ ತಲೆತಗ್ಗಿಸುವಂತಿತ್ತು. ಮಂತ್ರಿ ಮಹೋದಯರು ಗೊತ್ತುಗುರಿಯಿಲ್ಲದ ತರಹೇವಾರಿ ಹೇಳಿಕೆ ಕೊಟ್ಟರು. ಅದರಲ್ಲೂ ಭಾರತದ ಪ್ರಧಾನಿ ಮೋದಿ ನೀಡಿದ ಹೇಳಿಕೆ ಮಾತ್ರ ಅಕ್ಷಮ್ಯ. “ಭಾರತದ ಗಡಿಯೊಳಗೆ ಯಾರೂ ನುಸುಳಿ ಬಂದಿರಲಿಲ್ಲ. ಈಗಲೂ ನುಸುಳಿ ಬಂದಿಲ್ಲ, ಬರುವುದೂ ಇಲ್ಲ” ಎಂಬ ನಿರ್ಲಜ್ಜ ಹೇಳಿಕೆ ಕೊಟ್ಟಿದ್ದರು. ಆದರೆ ಅದೇ ಸಂದರ್ಭದಲ್ಲಿ ಚೀನೀ ಸೈನಿಕರನ್ನು ನುಸುಳದಂತೆ ತಡೆಯಲು ವೀರಾವೇಶದ ಪ್ರತಿರೋಧ ಒಡ್ಡಿದ ನಮ್ಮ 20 ಯೋಧರು ಪ್ರಾಣ ಕಳೆದುಕೊಂಡಿದ್ದರು.

ಇದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರಿಗೆ ಮಾಡಿದ ಅಪಮಾನ ಮಾತ್ರವಲ್ಲ, ನಮ್ಮ ಸೈನಿಕರ ಮನೋಬಲವನ್ನು ಕುಂದಿಸುವ ಬೇಜವಾಬ್ದಾರಿಯ ಮಾತಾಗಿತ್ತು. ಇದು ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ.

ಆ ನಂತರ 2020ರ ಸೆಪ್ಟೆಂಬರ್ 10ರಂದು ಮಾಸ್ಕೊದಲ್ಲಿ ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯಿ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಹಲವು ಪ್ರಮುಖ ನಿರ್ಣಯಗಳಿಗೆ ಬರಲಾಯಿತು.

1) ಭಿನ್ನಾಭಿಪ್ರಾಯಗಳನ್ನು ವಿವಾದಗಳನ್ನಾಗಿ ಬೆಳೆಸದಂತೆ ಎರಡೂ ಪಕ್ಷದವರು ಎಚ್ಚರಿಕೆ ವಹಿಸುವುದು.

2) ಗಡಿಯಲ್ಲಿನ ಪ್ರಸ್ತುತ ಪರಿಸ್ತಿತಿಯು ಉಭಯ ದೇಶಗಳ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಎರಡೂ ಪಡೆಗಳ ನಡುವೆ ನಿರಂತರ ಮಾತುಕತೆಗಳನ್ನು ಚಾಲ್ತಿಯಲ್ಲಿಡುವುದು. ಹಾಗೂ ಪಡೆಗಳ ನಡುವೆ ಸಂಘರ್ಷ ತಪ್ಪಿಸಲು ಸಾಕಷ್ಟು ಅಂತರ ಕಾಯ್ದುಕೊಳ್ಳುವುದು.

3) ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ಮುಂದುವರಿಸುವುದು.. ಇತ್ಯಾದಿ.

ಈ ಅಂಶಗಳನ್ನೊಳಗೊಂಡ ಜಂಟಿ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದಷ್ಟೇ ಲಾಭ. ವಾಸ್ತವದಲ್ಲಿ ಈ ನಿರ್ಣಯಗಳನ್ನು ಜಾರಿ ಮಾಡುವ ಕೆಲಸ ಆಗಲೇ ಇಲ್ಲ.

2020ರ ಜನವರಿಯಲ್ಲಿ ಸಿಕ್ಕಿಂ ಬಳಿ ನಡೆದ ಮುಖಾಮುಖಿಯಲ್ಲಿ ಎರಡೂ ಕಡೆಯ ಹಲವು ಸೈನಿಕರು ಗಾಯಗೊಂಡಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಎರಡೂ ಕಡೆಗಳಿಂದ ಗುಂಡು ಹಾರಿಸಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಇದಾದ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶದ ಭೂಭಾಗದಲ್ಲಿ ಚೀನಾ ಸೇನೆ ಸುಸಜ್ಜಿತ ಹಳ್ಳಿಗಳನ್ನು ನಿರ್ಮಾಣ ಮಾಡುತ್ತಿರುವ ಉಪಗ್ರಹ ಚಿತ್ರಗಳು ಎಲ್ಲೆಡೆ ಸುದ್ದಿ ಮಾಡಿತು. ಹೀಗೆ ಸರಣಿಯಂತೆ ಚೀನಾ ಅತಿಕ್ರಮಣದ ಸುದ್ದಿಗಳು ಮೂಡುತ್ತಲೇ ಇವೆ. ಇದೀಗ ಚೀನಾದ ಕಡೆಯಿಂದ ಡ್ರೋನ್‌ಗಳ ಹಾರಾಟದ ವರದಿ ಬಂದಿದೆ. ಪ್ರತಿಯಾಗಿ ಭಾರತದ ಜೆಟ್ ವಿಮಾನಗಳು ಕೂಡ ತವಾಂಗ್ ಪ್ರದೇಶದ ಸುತ್ತಲೂ ಹಾರಾಟ ನಡೆಸಿವೆ.

ಈ ಮಾತುಕತೆಗಳ ಪರ್ವ ಒಂದುಕಡೆಯಾದರೆ, ಮತ್ತೊಂದು ಕಡೆ ಸೈನಿಕ ತಯಾರಿಗಳು ನಡೆಯುತ್ತಲೇ ಇವೆ. ಚೀನಾ ತನ್ನ ಗಡಿಯುದ್ದಕ್ಕೂ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿಕೊಳ್ಳುತ್ತಿದೆ. ಪ್ರತಿಯಾಗಿ ಭಾರತವೂ ಕಳೆದ 15 ವರ್ಷಗಳಿಂದಲೂ ಅರುಣಾಚಲ ಪ್ರದೇಶದ ಭಾಗದಲ್ಲಿ ಸುಮಾರು 1200 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸುತ್ತಿದೆ. ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಸೇನೆಯ ತ್ವರಿತ ರವಾನೆಗೂ ಅನುಕೂಲವಾಗಲಿ ಎಂಬ ಉದ್ದೇಶವೂ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿಕೊಳ್ಳುವ, ಇನ್ನಷ್ಟು ಆಧುನಿಕ ಯುದ್ಧ ವಿಮಾನಗಳನ್ನು ಖರೀದಿಸಬೇಕೆಂಬ ಮಾತುಗಳೂ ಕೇಳಿ ಬರುತ್ತಿವೆ. ಆಳುವ ಪಕ್ಷದ ವಕ್ತಾರರು ಯುದ್ಧೋನ್ಮಾದಿಗಳಂತೆ ಹೇಳಿಕೆ ಕೊಡುವ ಪೈಪೋಟಿಯಲ್ಲಿದ್ದಾರೆ.

ಇಂದಿನ ಗಂಭೀರ ಸಂಘರ್ಷಕ್ಕೆ ಹಲವು ಕಾರಣಗಳಿವೆ

ಈಗಿನ ಚೀನಾದ ಸೇನೆಯ ಸಂಘರ್ಷ ಹಿಂದಿನಂತೆ ಮಾಮೂಲಿ ಸಂಘರ್ಷವಲ್ಲ, ಇದರ ಹಿಂದೆ ಚೀನಾದ ದೂರಗಾಮಿ ಸ್ಟ್ರಾಟೆಜಿಗಳಿವೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಹೀಗಾಗಿಯೇ ತವಾಂಗ್‌ನ ಯಾಗ್ಷಿ ಪ್ರದೇಶವನ್ನು ವಶಪಡಿಸಿಕೊಳ್ಳಲು ದೊಡ್ಡ ತುಕಡಿಯೊಂದಿಗೆ ಪಿಎಲ್‌ಎ ಅತಿಕ್ರಮಣ ಮಾಡಿತ್ತು. ಮಾಮೂಲು ಗಸ್ತು ತಿರುಗಲು 20-30 ಸೈನಿಕರ ತಂಡ ಬರುತ್ತಿದ್ದ ಬದಲಿಗೆ ಪಿಎಲ್‌ಎ ಸುಮಾರು 300 ಮಂದಿ ಸೈನಿಕರನ್ನು ಜಮಾವಣೆ ಮಾಡಿತ್ತು. ಸುಮಾರು 17000 ಅಡಿ ಎತ್ತದಲ್ಲಿರುವ ಯಾಂಗ್ಷಿ ಪರ್ವತ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಚೀನಾದ ಸೇನೆಗೆ ಬಹಳ ನಿರ್ಣಾಯಕವಾದುದು, ಯಾಕೆಂದರೆ ತವಾಂಗ್ ಪ್ರದೇಶದ ಮೇಲೆ ಸಂಪೂರ್ಣ ನಿಗಾವಣೆ ಮಾಡಲು ಇಲ್ಲಿ ಪೋಸ್ಟ್ ಸ್ಥಾಪಿಸುವ ಉದ್ದೇಶ ಹೊಂದಿದೆ. ಇದಲ್ಲದೆ ಇತ್ತೀಚಿನ ಕೆಲವು ಬೆಳವಣಿಗೆಗಳು ಕೂಡ ಇಂದಿನ ಸಂಘರ್ಷಕ್ಕೆ ಕಾರಣವಾಗಿವೆ ಎನ್ನಲಾಗುತ್ತಿದೆ.

1) ಭಾರತವು ಅಮೆರಿಕ ದೇಶದೊಂದಿಗೆ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಂಡಿದ್ದು ಅದರ ಭಾಗವಾಗಿ ಕಳೆದ ತಿಂಗಳು ಚೀನಾದ ಗಡಿ ಪ್ರದೇಶದಲ್ಲೇ ಎರಡೂ ಸೇನೆಗಳು ಜಂಟಿ ಕವಾಯತು, ತರಬೇತಿ ನಡೆಸಿದ್ದವು. ಈ ಬಗ್ಗೆ ಚೀನಾ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಚೀನಾ ಮತ್ತಷ್ಟು ಆಕ್ರಮಣಕಾರಿಯಾಗಲು ಇದು ಪ್ರಮುಖ ಕಾರಣ ಎಂದು ಕೆಲವು ವಿಶ್ಲೇಷಕರ ಅಭಿಪ್ರಾಯ.

ಇದನ್ನೂ ಓದಿ: ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ, ಆದರೆ ನಮ್ಮ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ: ರಾಹುಲ್ ಗಾಂಧಿ

2) ಆಂತರಿಕವಾಗಿ ಚೀನಾದಲ್ಲಿ ಪ್ರಕ್ಷೋಭೆಯ ಸ್ಥಿತಿ ಉಂಟಾಗಿದೆ. ಕೋವಿಡ್ ನಿರ್ವಹಣೆ ಮತ್ತಿತರೆ ವೈಫಲ್ಯಗಳನ್ನು ವಿರೋಧಿಸಿ ಚೀನೀ ಪ್ರಜೆಗಳು ಕ್ಸಿ ಜಿಂಗ್‌ಪಿಂಗ್ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಂತಾಂತ್ರಿಕ ಹಕ್ಕುಗಳನ್ನು ದಮನಿಸುತ್ತಾ ಬಂದಿದ್ದ ಚೀನಾ ಕಟ್ಟೆಯೊಡೆದಿರುವ ಜನರ ಆಕ್ರೋಶವನ್ನು ನಿಭಾಯಿಸಲು ಹೆಣಗಾಡುತ್ತಿದೆ. ಹೀಗಾಗಿ ತನ್ನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂಥಾ ಒಂದು ಇಶ್ಯೂ ಅಲ್ಲಿನ ಪ್ರಭುತ್ವಕ್ಕೆ ಅಗತ್ಯವಿದೆ. ಹೀಗಾಗಿ ಅಕಾರಣವಾಗಿ ಭಾರತದ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಈ ಕಾರಣಗಳು ಏನೇ ಇರಲಿ. ಆದರೆ ಯುದ್ಧದ ವಾತಾವರಣವನ್ನು ಆಹ್ವಾನಿಸುವುದು ಭಾರತದ ಪ್ರಜೆಗಳಿಗಾಗಲಿ, ಚೀನಾದ ಪ್ರಜೆಗಳಿಗಾಗಲಿ ಒಳಿತನ್ನು ಮಾಡುವುದಿಲ್ಲ ಎಂಬುದು ನಿಚ್ಚಳ.

ಮೋದಿ ಸರ್ಕಾರ ಚೀನಾದ ಜೊತೆ ಹೇಗೆ ವ್ಯವಹರಿಸುತ್ತಿದೆ?

ಈ ಪರಿಸ್ಥಿತಿಯನ್ನು ನಿಭಾಯಿಸಲು, ಚೀನಾದ ಅತಿಕ್ರಮಣವನ್ನು ನಿರ್ಬಂಧಿಸಲು ಮೋದಿ ಸರ್ಕಾರದ ಸ್ಟ್ರಾಟೆಜಿ ಏನಿರಬಹುದು?

ಇದುವರೆಗಿನ ಮೋದಿ ಸರ್ಕಾರದ ನಡವಳಿಕೆಯನ್ನು ಆಧರಿಸಿ ಹೇಳುವುದಾದರೆ ಅಂಥಾ ಯಾವ ಮಹತ್ವದ ಸ್ಟ್ರಾಟೆಜಿಯೂ ಕಂಡುಬರುತ್ತಿಲ್ಲ. ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡೋಲ್ಲ ಅಂತ ಗೋದಿ ಮೀಡಿಯಾಗಳ ಮೂಲಕ ಬಡಾಯಿ ಕೊಚ್ಚುವುದು; ಪ್ರತಿಕೂಲ ಪರಿಸ್ಥಿತಿಗಳಲ್ಲೂ ಗಡಿ ಕಾಯ್ದು, ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ವೀರ ಯೋಧರ ಬಲಿದಾನಗಳ ಹಿಂದೆ ಅವಿತುಕೊಳ್ಳುವುದು; ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದವರನ್ನು ಚೀನೀ ಏಜೆಂಟ್‌ಗಳೆಂದು ಬ್ರಾಂಡ್ ಮಾಡುವುದು ಅಥವಾ ದೇಶದ್ರೋಹಿಗಳು ಎಂದು ಜರಿಯುವುದು ಮುಂತಾದ ಮಾಮೂಲು ತಂತ್ರಗಳನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ.

ಇಂಥ ನಕಾರಾತ್ಮಕ ತಂತ್ರಗಳ ಪೊಳ್ಳು ಘೋಷಣೆಗಳ ಮೂಲಕ ಜನರನ್ನು ಯಾಮಾರಿಸಿ ಓಟು ಪಡೆಯಬಹುದು, ಆದರೆ ಚೀನಾದಂಥ ದೈತ್ಯ ಶಕ್ತಿಯನ್ನು ಗಡಿಯಿಂದಾಚೆ ದೂಡಲು ಸಾಧ್ಯವಾದೀತೆ?

ದೆಹಲಿ ಮೂಲದ ಡಿಫೆನ್ಸ್ ಅನಲಿಸ್ಟ್ ರಾಹುಲ್ ಬೇಡಿ ಹೇಳುವ ಪ್ರಕಾರ “ಭಾರತದ ಬಳಿ ರಾಜತಾಂತ್ರಿಕವಾಗಿ ಆಗಲಿ, ರಾಜಕೀಯವಾಗಿ ಆಗಲಿ, ಆರ್ಥಿಕವಾಗಿ ಆಗಲಿ ಅಥವ ಸೇನಾಬಲದ ದೃಷ್ಟಿಯಿಂದಾಗಲಿ ಲೆವರೇಜ್ ಇಲ್ಲದಾಗಿದೆ”.

“ಕಳೆದ ಮುವತ್ತು ತಿಂಗಳಲ್ಲಿ ಸೇನಾ ಕಮಾಂಡರ್‌ಗಳ ನಡುವೆ 16 ಸುತ್ತಿನ ಮಾತುಕತೆಗಳು ನಡೆದಿವೆ. ಚೀನಾ ಸೇನೆ ತಮ್ಮ ವಾದಗಳಿಗೆ ಕಟ್ಟುಬಿದ್ದಿದ್ದಾರೆ. ತಮಗೆ ಬೇಕಾದ ಸ್ಥಳದಲ್ಲಿ, ಬೇಕಾದ ಸಮಯದಲ್ಲಿ ತಮ್ಮ ಇಚ್ಛಾನುಸಾರ ವರ್ತಿಸುತ್ತಿದ್ದಾರೆ. ನಿರ್ಣಯಗಳಿಗೆ ಬದ್ಧವಾಗಿರುವಂತೆ ಚೀನಾದ ಮೇಲೆ ಒತ್ತಡ ಹೇರುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮಾತುಕತೆಯಲ್ಲಿ ಭಾರತ ಹೆಚ್ಚಿನದನ್ನು ಸಾಧಿಸಲಾಗಿಲ್ಲ.

ಚೀನಾದ ಪ್ರಾಬಲ್ಯ ಕೇವಲ ಮಿಲಿಟರಿ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕ ಕ್ಷೇತ್ರದಲ್ಲಿ ಚೀನಾದಿಂದ ಆಮದು ಸುಮಾರು ನೂರು ಕೋಟಿ ಬಿಲಿಯನ್ ದಾಟಿದೆ. ಆಮದಿಗೆ ಹೋಲಿಸಿದರೆ ನಮ್ಮ ರಫ್ತು ತೀರಾ ಅತ್ಯಲ್ಪ. ಮೋದಿ ಆಡಳಿತದ ಈ ಎಂಟು ವರ್ಷಗಳಲ್ಲಿ ಚೀನಾದ ಮೇಲಿನ ಈ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡುವ ಬದಲು ದುಪ್ಪಟ್ಟಾಗಿಸಿದೆ. ನೆರೆಯ ದೈತ್ಯ ಶಕ್ತಿ ಚೀನಾದೊಂದಿಗೆ ಗಡಿ ಸಮಸ್ಯೆ ತೀವ್ರವಾಗಿರುವುದನ್ನೂ ಕಂಡೂಕಂಡೂ ಆರ್ಥಿಕವಾಗಿ ಅದೇ ಶಕ್ತಿಯ ಅಧೀನಕ್ಕೆ ಒಳಪಡುವ ನೀತಿಯನ್ನು ಏನೆಂದು ಕರೆಯಬಹುದು?

ಪ್ರಧಾನಿ ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗಿನಿಂದಲೂ ಚೀನಾದ ಜೊತೆಗೆ, ಅದರಲ್ಲೂ ಕ್ಸಿ ಜಿನ್‌ಪಿಂಗ್ ಜೊತೆಗೆ ವಿಶೇಷವಾದ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಅವರೇ ಖುದ್ದಾಗಿ ಹೇಳಿಕೊಂಡಿರುವ ವಿಡಿಯೋಗಳ ಸಾಕ್ಷಿ ಯೂಟ್ಯೂಬ್ ತುಂಬಾ ಇದೆ. ಚೀನಾದ ಜೊತೆಗೆ ಅತಿ ಹೆಚ್ಚಾಗಿ ವ್ಯವಹಾರಿಕ ಸಂಬಂಧ ಹೊಂದಿರುವವರು ಗುಜರಾತಿ ಬ್ಯುಸಿನೆಸ್‌ಮನ್‌ಗಳು. ಅದರಲ್ಲಿ ಅದಾನಿ ಪೋರ್ಟ್‌ಗಳಲ್ಲಿ ಚೀನಾದ ಬಂಡವಾಳ ಹೂಡಿಕೆಯೂ ಇದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಬಾಂಧವ್ಯವನ್ನು ಹೊಂದಿರುವ ಮೋದಿಯವರು ಗಡಿ ಘರ್ಷಣೆಯ ವಿಚಾರದಲ್ಲಿ ಒಮ್ಮೆಯಾದರೂ ಚೀನಾದ ಹೆಸರನ್ನು ಎತ್ತಿಲ್ಲ. ಇದರ ಹಿಂದಿನ ಕಾರಣಗಳೇನಿರಬಹುದು?

ಇದು ಯಾವ ರೀತಿಯ ರಾಜತಾಂತ್ರಿಕ ನಡವಳಿಕೆ ಇರಬಹುದು?

ಇಷ್ಟೆಲ್ಲಾ ಸಂಘರ್ಷದ ವಾತಾವರಣ ಇರುವಾಗ ಅಮೆರಿಕದ ಜೊತೆಗೂಡಿ ಇದೇ ಗಡಿಭಾಗದಲ್ಲಿ ಜಂಟಿ ಕವಾಯತು ಮಾಡುವ ತುರ್ತಾದರೂ ಏನಿತ್ತು? ಈ ಅಮೆರಿಕ ಭಾರತದ ದೃಷ್ಟಿಯಿಂದ ನಂಬಲರ್ಹ ಮಿತ್ರನೇ? ಹೋಗಲಿ, ಅಮೆರಿಕದ ಅಂತಾರಾಷ್ಟ್ರೀಯ ಸಂಬಂಧಗಳು, ಮತ್ತದರ ಇತಿಹಾಸ ಹೇಳುತ್ತಿರುವುದರೂ ಏನು? ಪ್ರಪಂಚಾದ್ಯಂತ ನೆರೆಹೊರೆಯ ರಾಷ್ಟ್ರಗಳ ನಡುವೆ ಸ್ಥಳೀಯ ಯುದ್ಧಗಳನ್ನು ಸೃಷ್ಟಿಸಿ ಲಾಭ ಮಾಡಿಕೊಳ್ಳುವ ದುಷ್ಟ ಇತಿಹಾಸ ಹೊಂದಿರುವ ಅಮೆರಿಕವನ್ನು ಮಿತ್ರನಂತೆ ಭಾವಿಸುವುದು ಮೂರ್ಖತನವಲ್ಲವೆ?

ಇಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಮಾತನ್ನು ಉಲ್ಲೇಖಿಸುವುದು ಸೂಕ್ತ. ಚೀನಾದ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸುತ್ತಾ ವಾಜಪೇಯಿ ಹೀಗೆ ಉತ್ತರಿಸಿದ್ದರು: “ಸ್ನೇಹಿತರನ್ನು ಬೇಕೆಂದಾಗ ಬದಲಿಸಬಹುದು, ಆದರೆ ನಿಮ್ಮ ನೆರೆಹೊರೆಯವರನ್ನು ಬದಲಿಸಲಿಕ್ಕಾಗೋದಿಲ್ಲ.”

ಈ ಸರಳ ಸತ್ಯವನ್ನು ಇಂದಿನ ಆಡಳಿತಗಾರರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟು ದೇಶಕ್ಕೆ ಒಳ್ಳೆಯದು.

ಇದನ್ನೂ ಓದಿ: ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ: ಇದುವರೆಗೂ ನಡೆದಿದ್ದೇನು?

ಇನ್ನು ಭಾರತದ ಪ್ರಜೆಗಳಾದ ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಗುರುತರವಾದ ಪಾಠವೊಂದಿದೆ. ಕಳೆದವಾರ ಸಂಸತ್ತಿನಲ್ಲಿ ಮಿಂಚಿನ ಭಾಷಣ ಮಾಡಿ ಮೋದಿ ಸರ್ಕಾರದ ದಿಕ್ಕೆಟ್ಟ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರ ಅವರ ಮಾತುಗಳು ಇಲ್ಲಿ ಉಲ್ಲೇಖಾರ್ಹ: “ಮನೆಗೆ ಬೆಂಕಿ ಹಚ್ಚಿದ ಹುಚ್ಚ ಯಾರು ಅನ್ನೋದು ಇಂದಿನ ಪ್ರಶ್ನೆಯಲ್ಲ, ಈ ಹುಚ್ಚನ ಕೈಗೆ ಬೆಂಕಿ ಪೊಟ್ಟಣ ಕೊಟ್ಟೋರು ಯಾರು? ಅನ್ನೋ ಪ್ರಶ್ನೆ ಇವತ್ತು ಬಹಳ ಮುಖ್ಯವಾದುದು”.

ಈ ದೇಶದ ಪ್ರಜೆಗಳು ಈ ತಥ್ಯವನ್ನು ಅರ್ಥ ಮಾಡಿಕೊಳ್ಳುವುದು ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...