ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.
ಆಹಾರ ಕ್ರಮದ ಬಗ್ಗೆ ಚರ್ಚೆ ಹೊಸದೂ ಅಲ್ಲ, ಅಚ್ಚರಿ ಪಡುವಂಥದ್ದೂ ಅಲ್ಲ. ಇದರ ಹಿಂದೆ ಜನರನ್ನು ವಿಂಗಡಿಸುವ, ಶ್ರಮಿಕ ವರ್ಗವನ್ನು ಟೊಳ್ಳಾಗಿಸುವ ಸಂಕೀರ್ಣ ಐತಿಹಾಸಿಕ ಜಾಲ ಇರೋದ್ರಿಂದ ಇದು ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತೆ. ವೈದಿಕ ಆಹಾರ ಪರಂಪರೆ ಮತ್ತು ಶ್ರಮಿಕ ಆಹಾರ ಪರಂಪರೆಗಳ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಬಂದಿದೆ.
ವಚನಕಾರರ ಕಾಲಘಟ್ಟದಲ್ಲೂ ಎದುರಾದ ಈ ಆಹಾರ ಸಾಂಸ್ಕೃತಿಕ ಮುಖಾಮುಖಿಯ ಸ್ಪಷ್ಟ ದೃಷ್ಟಾಂತ, ಕಣ್ಣೋಟ ನಮಗೆ ಹರಿಹರ ರಗಳೆಯ ಉಳ್ಳಿ ಪರ್ವದಲ್ಲಿ ಕಾಣಸಿಗುತ್ತದೆ. ಒಮ್ಮೆ ಮಹಾಮನೆಯಲ್ಲಿ ದಾಸೋಹದ ತಯಾರಿ ನಡೆಯುತ್ತಿದ್ದಾಗ ತಳಸಮುದಾಯದ ಆಹಾರ ಪದಾರ್ಥಗಳಾದ ಈರುಳ್ಳಿ, ಬೆಳ್ಳುಳ್ಳಿ, ಹಸೀಶುಂಠಿ ಉಪಯೋಗಿಸಿ ಆಹಾರ ಸಿದ್ದಪಡಿಸಲಾಗುತ್ತಿರುತ್ತೆ. ಅದೇ ಮಾರ್ಗವಾಗಿ ಬರುವ ಬಸವಣ್ಣ ಆ ವಾಸನೆ ಅಹಿತವೆನಿಸಿ, ಮೂಗು ಮುಚ್ಚಿಕೊಳ್ಳುತ್ತಾರೆ. ಬಿಸಿಲಿನಲ್ಲಿ ದುಡಿಯುವ ಶ್ರಮಜೀವಿಗಳಿಗೆ ಪೌಷ್ಠಿಕತೆ ತಂದುಕೊಡುವ ತಮ್ಮ ಆಹಾರದ ಬಗ್ಗೆ ಬಸವಣ್ಣ ಕೀಳಾಗಿ ಕಂಡಿದ್ದಾರೆ ಎಂದು ಕೋಪಿಸಿಕೊಳ್ಳುವ ಅಡುಗೆ ಮಾಡುತ್ತಿದ್ದ ಶರಣ, ಮಹಾಮನೆಯಿಂದ ಹೊರಟುಹೋಗುತ್ತಾರೆ. ಕೊನೆಗೆ ತನ್ನ ತಪ್ಪಿನ ಅರಿವಾದ ಬಸವಣ್ಣ, ಈರುಳ್ಳಿ ಖಾದ್ಯಗಳು, ಈರುಳ್ಳಿಯಿಂದ ಅಲಂಕರಿಸಿದ ಎತ್ತಿನಬಂಡಿಯ ಸಹಿತ ಆ ಶರಣರ ಬಳಿಹೋಗಿ ಕ್ಷಮೆ ಬೇಡುತ್ತಾರೆ. ಇದು ಆಹಾರ ಕ್ರಮದ ಬಗ್ಗೆ ಮಹಾಮನೆಯಲ್ಲಿ ತಳೆದಿದ್ದ ನಿಲುವು.
ಮಹಾಮನೆ ಎನ್ನುವುದೇ ನಿರಂತರ ಜಿಜ್ಞಾಸೆ, ಚರ್ಚೆಗಳ ಕೂಟವಾಗಿತ್ತು. ತಂತ್ರಜ್ಞಾನವೇ ಇಲ್ಲದ ಆ ಕಾಲಘಟ್ಟದಲ್ಲೂ ಶರಣರು ವೈಜ್ಞಾನಿಕ, ಜನಪರ ನಿಲುವುಗಳನ್ನು ತಳೆಯಲು ಸಾಧ್ಯವಾದದ್ದು ಅಂತಹ ಮುಕ್ತ ಸಂವಾದಗಳಿಂದ. ಅಂತಹ ಸಂವಾದ ಆಹಾರ ಕ್ರಮದಲ್ಲೂ ಏರ್ಪಟ್ಟಿತ್ತು. ಮೇಲ್ಜಾತಿಗಳಿಂದ ಬಂದ ವಚನಕಾರರು ಸಸ್ಯಾಹಾರವನ್ನು ಪ್ರತಿಪಾದಿಸಿದರೆ, ಶ್ರಮಿಕ ವರ್ಗದ ವಚನಕಾರರು ತಮ್ಮ ಮಾಂಸಾಹಾರ ಪದ್ಧತಿಯನ್ನು ಪ್ರತಿಪಾದಿಸಿಕೊಂಡಿದ್ದರು. ಅಂತಹ ಸಂವಾದದ ಅಂತಿಮ ತೀರ್ಮಾನವನ್ನು ಮೇಲೆ ಉಲ್ಲೇಖಿಸಲಾದ ದೃಷ್ಟಾಂತದಿಂದ ಅರ್ಥ ಮಾಡಿಕೊಳ್ಳಬಹುದು. ವಚನಕಾರರು ಯಾವುದೇ ಬಗೆಯ ಆಹಾರ ಪದ್ಧತಿಯ ಹೇವರಿಕೆ ಅಥವಾ ಅವೈಜ್ಞಾನಿಕ ಅಭಿಪ್ರಾಯಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಿಮವಾಗಿ ಆಹಾರದ ಆಯ್ಕೆಯನ್ನು ಆಯಾ ಪ್ರದೇಶದ ಲಭ್ಯತೆ ಮತ್ತು ಅವಶ್ಯಕತೆಯ ಭಾಗವಾಗಿ ಅವರು ಗೌರವಿಸಿದ್ದರೇ ವಿನಾಃ ಅದನ್ನು ಮೇಲು-ಕೀಳರಿಮೆಯ ಮಾನದಂಡವಾಗಿ ಕಂಡಿರಲಿಲ್ಲ. ಬಸವಣ್ಣನವರ `ಎಡದ ಕೈಯಲ್ಲಿ……..’ ವಚನವೇ ಇದಕ್ಕೆ ಸಾಕ್ಷಿ.
ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚಿಂತನಾ ಪ್ರಧಾನವಾದ ಚರ್ಚೆಗಳು ಶ್ರಮಿಕ ಲೋಕದ ಬದುಕಿಗೆ ಹತ್ತಿರ ಅನಿಸುತ್ತಿದ್ದವು, ಯಾಕೆಂದರೆ ಅವು ವೈಜ್ಞಾನಿಕ ಚಿಂತನೆಗಳಾಗಿರುತ್ತಿದ್ದವು. ಮೌಢ್ಯದಿಂದ ಹೊರಬರುವುದೇ ವಚನಸಾಹಿತ್ಯದ ಆಶಯವಾಗಿರುವುದರಿಂದ ಅಲ್ಲಿ ಆಹಾರದ ಬಗೆಗಿನ ತಾರತಮ್ಯದ ನಿಲುವನ್ನು ಹುಡುಕ ಹೊರಡುವುದೇ ಅತಾರ್ಕಿಕವಾದುದು, ಅವಾಸ್ತವಿಕವಾದುದು. ಈ ಆಹಾರ ಸಂಸ್ಕøತಿಯ ಮುಖಾಮುಖಿಯ ಹಿಂದೆ ಮತೀಯ ಅಜೆಂಡಾವಿರುತ್ತೆ. ಆಹಾರದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವ, ಜನರಲ್ಲಿ ಕೀಳರಿಮೆ ಮೂಡಿಸಿ ಅವರೊಳಗೇ ತಿರಸ್ಕಾರ ಭಾವನೆ ಮೂಡಿಸುವ ವೈದಿಕಾ ಚಿಂತನಾ ಕ್ರಮ ಕೆಲಸ ಮಾಡಿರುತ್ತದೆ. ವೈದಿಕ ಹುನ್ನಾರಗಳನ್ನು ಖಂಡತುಂಡವಾಗಿ ಧಿಕ್ಕರಿಸುವ ಸಲುವಾಗಿ ಹುಟ್ಟಿಕೊಂಡ ವಚನಕ್ರಾಂತಿ, ಆಹಾರದ ಕುರಿತು ತಾರತಮ್ಯ ಹೊಂದಿತ್ತೆನ್ನುವುದೇ ಬಾಲಿಶವಾದುದು.
– ಕೆ.ನೀಲಾ, ಚಿಂತಕರು