Homeಕರ್ನಾಟಕನಮ್ಮ ಸಚಿವರಿವರು; ಮಂಕಾಳ ವೈದ್ಯ: ಹೊಟೇಲ್ ಮಾಣಿಯಿಂದ ಮಂತ್ರಿಯಾಗುವವರೆಗಿನ ಯಶೋಗಾಥೆ

ನಮ್ಮ ಸಚಿವರಿವರು; ಮಂಕಾಳ ವೈದ್ಯ: ಹೊಟೇಲ್ ಮಾಣಿಯಿಂದ ಮಂತ್ರಿಯಾಗುವವರೆಗಿನ ಯಶೋಗಾಥೆ

- Advertisement -
- Advertisement -

ಇದು ಪ್ರಜಾಪ್ರಭುತ್ವದ ಪವಾಡ! ಹೊಟ್ಟೆಪಾಡಿನ ಕೂಲಿ ಅರಸುತ್ತ ಬೆಂಗಳೂರು ಸೇರಿ ಹೊಟೇಲ್‌ವೊಂದರಲ್ಲಿ ತಾಟು, ತಟ್ಟೆ ತೊಳೆಯುತ್ತ ಕಸಮುಸುರೆ ತೆಗೆಯುತ್ತಿದ್ದ ಕಡಲತಡಿಯ ಭಟ್ಕಳದ ಹುಡುಗನೊಬ್ಬ ಇಂದು ಜನಾಕರ್ಷಕ ರಾಜಕಾರಣಿಯಾಗಿ ಅದೇ ಬೆಂಗಳೂರಿನ ಪ್ರತಿಷ್ಠಿತ ರಾಜಭವನದಲ್ಲಿ ನಿಂತು ಸಮಸ್ತ ಕರ್ನಾಟಕದ ಪರವಾಗಿ ಮಂತ್ರಿಯಾಗಿದ್ದಾರೆ! ಉತ್ತರ ಕನ್ನಡದ ಏಕತಾನದ ಜಡ ರಾಜಕೀಯ ರಂಗದ “ಕೌತುಕ” ಎಂಬಂತಾಗಿ ಕಳೆದೆರಡು ದಶಕದಿಂದ ಜಿಲ್ಲೆಯ ಕಣ್ಣು ಕೋರೈಸುತ್ತಿರುವ ಈ ಐವತ್ತರ ಹರೆಯುದ ತರುಣನ ಹೆಸರು ಮಂಕಾಳ ಸುಬ್ಬ ವೈದ್ಯ ಯಾನೆ ಮಂಕಾಳ್ ವೈದ್ಯ. ಮುರ್ಡೇಶ್ವರದಲ್ಲಿ ಮತ್ಸ್ಯಾಹಾರದ ಹೊಟೇಲ್ ನಡೆಸುತ್ತ ಅನಧಿಕೃತವಾಗಿ ಹೆಂಡದ ಸೇವೆಯೂ ಕೊಡುತ್ತಾರೆಂದು ಆರೋಪಿತರಾಗಿದ್ದ ಮಂಕಾಳ್ ವೈದ್ಯರ ವ್ಯವಹಾರದಲ್ಲಿನ ಋಣಾತ್ಮಕ ಅಂಶಗಳನ್ನೇ ಬಳಸಿಕೊಂಡು ಸ್ಥಳೀಯ ಮೇಲ್ವರ್ಗದ ರಾಜಕಾರಣಿಗಳು-ಅಧಿಕಾರಿಗಳು ಬೆಂಬಿಡದೆ ಕಾಡಿದ್ದು ಮತ್ತು ಇದರಿಂದ ರೋಸತ್ತ ಮಂಕಾಳ್ ಸಿಡಿದೆದ್ದು ರಾಜಕೀಯಕ್ಕೆ ಧುಮುಕಿ “ರಾಬಿನ್‌ಹುಡ್ ಶೈಲಿ”ಯ ಚಟುವಟಿಕೆಯಿಂದ ಜನಾನುರಾಗಿಯಾಗಿರುವ “ದಂತ ಕತೆ”ಯೊಂದು ಹೊನ್ನಾವರ-ಭಟ್ಕಳ ಭಾಗದಲ್ಲಿ ಚಾಲ್ತಿಯಲ್ಲಿದೆ.

ಉತ್ತರ ಕನ್ನಡದ ದಕ್ಷಿಣ ತುದಿಯಲ್ಲಿರುವ ಭಟ್ಕಳದಲ್ಲಿ ಗಣನೀಯವಾಗಿರುವ “ಮೊಗೇರ” ಎಂಬ ಮೀನುಗಾರ ಸಮುದಾಯದ ಮಂಕಾಳ್ ವೈದ್ಯರ ಬದುಕು, ಬಿಸ್ನೆಸ್ ಮತ್ತು ರಾಜಕಾರಣ ರೋಚಕವಾಗಿದೆ. ಭಾಗೀರಥಿ ಮತ್ತು ಸುಬ್ಬ ವೈದ್ಯರ ಐವರು ಮಕ್ಕಳಲ್ಲಿ ಕೊನೆಯ ಕುಡಿ ಮಂಕಾಳ್ ವೈದ್ಯ. ಮೀನುಗಾರ ಪಂಗಡದವರಾದರೂ ಸುಬ್ಬ ವೈದ್ಯರು ಕೃಷಿಯಿಂದ ಕುಟುಂಬ ಪೋಷಣೆ ಮಾಡಿಕೊಂಡಿದ್ದರು. ನಾಲ್ಕೆಕರೆ ಹೊಲ-ಗದ್ದೆಯಲ್ಲಿ ಕಬ್ಬು, ಭತ್ತ ಮತ್ತು ಶೇಂಗಾ ಬೆಳೆಯುತ್ತಿದ್ದ ಸುಬ್ಬ ವೈದ್ಯರ ಸಂಸಾರ ಉಂಡುಟ್ಟುಕೊಂಡಿತ್ತು. ಆಗಿನ್ನೂ ಮಂಕಾಳ್‌ಗೆ ಹದಿನಾಲ್ಕು ವರ್ಷ; ಇದ್ದಕ್ಕಿದ್ದಂತೆ ಸುಬ್ಬ ವೈದ್ಯರು ನಿಧನರಾಗುತ್ತಾರೆ. ಆ ತುಂಬು ಕುಟುಂಬ ದಿಕ್ಕೆಡುತ್ತದೆ. ಎಂಟನೇ ತರಗತಿ ಮುಗಿಸಿದ್ದ ಮಂಕಾಳು ಶಾಲೆಗೆ ಗುಡ್‌ಬೈ ಹೇಳಿ ಬೆಂಗಳೂರಿನ ಗಾರ್ಮೆಂಟ್ಸ್‌ನಲ್ಲಿ ಕೂಲಿಗೆ ಸೇರಿಕೊಳ್ಳುತ್ತಾರೆ.

ಮಾಯಾನಗರಿ ಬೆಂಗಳೂರಲ್ಲಿ ಗಾರ್ಮೆಂಟ್ಸ್ ಸಂಬಳದಿಂದ ಬದುಕುವುದು ಮಂಕಾಳ್‌ಗೆ ಕಷ್ಟವಾಗುತ್ತದೆ. ಊಟ-ವಸತಿ ಉಚಿತವಿರುವ ಹೊಟೇಲ್ ಕಾರ್ಮಿಕನಾಗಿ ಸೇರಿಕೊಳ್ಳುತ್ತಾರೆ. ಕ್ಲೀನರ್-ಸಪ್ಲೈಯರ್ ಕೆಲಸ ಮಾಡುತ್ತಲೇ ಹೊಟೇಲು ದಂಧೆಯ ಮರ್ಮ ತಿಳಿದುಕೊಳ್ಳುತ್ತಾರೆ. ಊರಿಗೆಹೋಗಿ ಸ್ವಂತ ಹೊಟೇಲ್ಲು ತೆರೆಯುವ ಪ್ಲಾನು ಹಾಕುತ್ತಾರೆ; ಮುರ್ಡೇಶ್ವರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ “ಕರಾವಳಿ ರೆಸ್ಟೋರೆಂಟ್” ಶುರುಮಾಡುತ್ತಾರೆ. ಅನಧಿಕೃತ ಬಾರ್‌ನಂತಿದ್ದ ಈ ಮೀನು ಭಕ್ಷ್ಯದ ಹೊಟೇಲ್ ಸ್ಥಳೀಯ ಸಕಲ ಪಕ್ಷಗಳ ಮರಿಪುಢಾರಿಗಳ ಪಾಲಿಗೆ “ರಾಜಕೀಯ ನಿಧಿ”ಯಾಗಿತ್ತೆಂದು ಕರಾವಳಿ ರೆಸ್ಟೋರೆಂಟ್‌ನ ಅಂದಿನ ವೈಭವ ಕಂಡವರು ಇಂದಿಗೂ ಹೇಳುತ್ತಾರೆ. ಕ್ರಮೇಣ ಕುಲಕಸುಬಿಗೆ ಕೈಹಾಕುವ ಮಂಕಾಳು ಮೀನುಗಾರಿಕಾ ಬೋಟುಗಳ ಸಾಹುಕಾರ್ ಆಗುತ್ತಾರೆ; ಮಂಜುಗಡ್ಡೆ ಫ್ಯಾಕ್ಟರಿ ಆರಂಭಿಸುತ್ತಾರೆ; ಪೆಟ್ರೋಲ್ ಬಂಕ್ ನಡೆಸುತ್ತಾರೆ. ಸಿಬಿಎಸ್‌ಸಿ ಸ್ಕೂಲು-ಕಾಲೇಜಿನ ಶಿಕ್ಷಣೋದ್ಯಮಿ ಆಗುತ್ತಾರೆ. ಮಂಕಾಳು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಮತ್ತೊಂದೆಡೆ ಪೆಟ್ರೋಲ್-ಡೀಸೆಲ್ ಟ್ಯಾಂಕರ್ ದರೋಡೆಕೋರರ ಸಂಪರ್ಕ ಮಂಕಾಳುಗಿದೆ ಎಂಬ ಕ್ರಿಮಿನಲ್ ಕೇಸೂ ಬೀಳುತ್ತದೆ. ಜಿ.ಪಂ ಉಪಾಧ್ಯಕ್ಷರಾಗಿದ್ದಾಗಲೇ ಮಂಕಾಳ್‌ರನ್ನು ಬಂಧಿಸಲಾಗಿತ್ತು.

ಮಂಕಾಳ್ ವೈದ್ಯ ರಾಜಕಾಣಿಯಾಗಿದ್ದೇ ಆಕಸ್ಮಿಕ! ಮಂಕಾಳು ಶಾಸಕ, ಸಚಿವ ಪದವಿ ಒತ್ತಟ್ಟಿಗಿರಲಿ, ಗ್ರಾಮ ಪಂಚಾಯ್ತಿ ಅಥವಾ ಜಿಲ್ಲಾ ಪಂಚಾಯ್ತಿ ಸದಸ್ಯತ್ವದ ಆಸೆಯನ್ನು ಕನಸಲ್ಲೂ ಕಂಡವರಲ್ಲ. 2000ದ ದಶಕದಾರಂಭದಲ್ಲಿ ಬೇರೆಬೇರೆ ವ್ಯವಹಾರದಿಂದ “ಭರ್ಜರಿ” ಸಂಪಾದಿಸುತ್ತಿದ್ದ ಮಂಕಾಳ್ ವೈದ್ಯ ಜಿ.ಪಂ ಮಟ್ಟದ ರಾಜಕೀಯ ಪುಢಾರಿಗಳಿಗೆ-ಖಾಕಿಗಳಿಗೆ ಹಫ್ತಾ ಕೊಟ್ಟುಕೊಟ್ಟೇ ಹೈರಾಣಾಗಿಹೋಗಿದ್ದರು ಎನ್ನಲಾಗುತ್ತದೆ. ಖಾಕಿ ಅಧಿಕಾರಿಗಳನ್ನು ಛೂಬಿಟ್ಟು ಸತಾಯಿಸುತ್ತಿದ್ದ ಈ ರಾಜಕಾರಣಿಗಳಿಗೆ ಪಾಠ ಕಲಿಸುವ ಹಠಕ್ಕೆ ಬಿದ್ದಿದ್ದರು ಮಂಕಾಳ್ ವೈದ್ಯ. 2005ರಲ್ಲಿ ಜಿಪಂ ಚುನಾವಣೆಗೆ ಮಾವಳ್ಳಿ (ಮುರ್ಡೇಶ್ವರ) ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಮಂಕಾಳು ಗೆಲುವೂ ಕಂಡರು! ಅಂದು ಮಂಕಾಳು ಕೈಲಿ ಸೋಲನುಭವಿಸಿದ ಸ್ಥಳೀಯ ಪ್ರಭಾವಿ ಜಿ.ಪಂ ಸದಸ್ಯ ಮತ್ತು ಆ ಸಂದರ್ಭದ ಬಲಾಢ್ಯ ಮಂತ್ರಿ ಆರ್.ವಿ.ದೇಶಪಾಂಡೆಯ ಜಾತಿಬಂಧುಗೆ ರಾಜಕೀಯ ಮರುಹುಟ್ಟು ಪಡೆಯಲು ಸಾಧ್ಯವೇ ಆಗಲಿಲ್ಲ ಎಂಬ ಮಾತು ಹೊನ್ನಾವರ-ಭಟ್ಕಳದ ಕಡಲಗುಂಟ ಇವತ್ತಿಗೂ ಕೇಳಿಬರುತ್ತದೆ.

ಇದನ್ನೂ ಓದಿ: ನಮ್ಮ ಸಚಿವರಿವರು; ಕರ್ನಾಟಕ ಕಾಂಗ್ರೆಸ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಏಕೈಕ ಶಾಸಕ ಹಿರಿಯ ಮುಖಂಡ ಕೆ.ಜೆ….

ಮೊದಲ ಜಿ.ಪಂ ಸದಸ್ಯತ್ವದ ಅವಧಿಯಲ್ಲೇ “ಪಕ್ಕಾ” ರಾಜಕಾರಣಿಯಾಗಿ ಪಳಗಿದ ಮಂಕಾಳ್‌ಗೆ ಮುಂದಿನ ಚುನಾವಣೆಯಲ್ಲಿ ಮೀಸಲಾತಿ ಬದಲಾವಣೆಯಿಂದಾಗಿ ಮುರ್ಡೇಶ್ವರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. “ಜಾಲಿ” ಕ್ಷೇತ್ರಕ್ಕೆ ವಲಸೆಹೋದ ಮಂಕಾಳ್ ಅಲ್ಲೂ ಪಕ್ಷೇತರನಾಗಿ ದಿಗ್ವಿಜಯ ಸಾಧಿಸಿ ಭಟ್ಕಳ-ಹೊನ್ನಾವರದಲ್ಲಿ “ಮನೆಮಾತು” ಆದರು! ಜಿ.ಪಂನಲ್ಲಿ ಕಾಂಗ್ರೆಸ್‌ಗೆ ಆ ಚುನಾವಣೆಯಲ್ಲಿ ಪೂರ್ತಿ ಬಹುಮತ ಸಿಕ್ಕಿರಲಿಲ್ಲ. ಮಂಕಾಳ್ ವೈದ್ಯರ ಬೆಂಬಲದಿಂದ ಕಾಂಗ್ರೆಸ್ ಜಿ.ಪಂ ಅಧಿಕಾರ ಹಿಡಿಯಿತು. ಮಂಕಾಳು ಒಂದು ಅವಧಿಗೆ ಜಿ.ಪಂ ಉಪಾಧ್ಯಕ್ಷರೂ ಆದರು. ತನ್ಮೂಲಕ ಜಿಲ್ಲೆಯಲ್ಲೂ ಮಂಕಾಳು “ಪರಿಚಿತ”ರಾದರು. 2013ರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಮಂಕಾಳ್ ಭಟ್ಕಳ ಕಾಂಗ್ರೆಸ್ ಟಿಕೆಟ್ ಕೇಳಿದರು. ಆದರೆ ಬಹುಸಂಖ್ಯಾತ ದೀವರು (ನಾಮಧಾರಿ) ಸಮುದಾಯ ಬಿಟ್ಟು ಬೇರೆ ಜಾತಿಯವರಿಗೆ ಅಭ್ಯರ್ಥಿ ಮಾಡುವ ಧೈರ್ಯ ಕಾಂಗ್ರೆಸ್ ಕ್ಯಾಪ್ಟನ್‌ಗಳಿಗೆ ಇರಲಿಲ್ಲ. “ದೀವರ ಮೀಸಲು ಕ್ಷೇತ್ರ”ದಂತಾಗಿದ್ದ ಭಟ್ಕಳದಲ್ಲಿ ಪ್ರಮುಖ ಪಕ್ಷಗಳು ದೀವರೇತರರಿಗೆ ಟಿಕೆಟ್ ಕೊಡದಿರುವುದು (ನವಾಯತ ಮುಸ್ಲಿಮ್ ಪಂಗಡದ ಮಾಜಿ ಮಂತ್ರಿ ಎಸ್.ಎಂ.ಯಾಹ್ಯಾರ ನಂತರ) ಸಂಪ್ರದಾಯ ಎಂಬಂತಾಗಿಬಿಟ್ಟಿದೆ.

ಮಂಕಾಳ್ ವೈದ್ಯರಿಗಿದು ಅನಿರೀಕ್ಷಿತವೇನಾಗಿರಲಿಲ್ಲ. ಹಾಗಾಗಿ ಮಂಕಾಳ್ ಪಕ್ಷೇತರನಾಗಿ ಅಖಾಡಕ್ಕಿಳಿವ ಪ್ಲಾನ್ ಬಿ ಸಿದ್ಧಪಡಿಸಿಕೊಂಡಿದ್ದರು. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ಪಕ್ಷಗಳು ದೀವರ ಧೀರರಿಗೆ ಟಿಕೆಟ್ ಕೊಟ್ಟವು; ಜೆಡಿಎಸ್ ಪ್ರಬಲ ನವಾಯತ ಕೋಮಿನ ಯುವಕನಿಗೆ ಕಣಕ್ಕಿಳಿಸಿತು. ನಾಮಧಾರಿಗಳ ಮತ ಹರಿದು ಹಂಚಿಹೋಯಿತು. ನವಾಯಿತರ ಮತ ಕಾಂಗ್ರೆಸ್‌ಗೆ ಖೋತಾ ಆಯಿತು. ಧನಾಧಾರಿ ರಾಜಕಾರಣದ ಪಟ್ಟು ಪ್ರಯೋಗದಲ್ಲಿ ನಿಸ್ಸೀಮನಾಗಿದ್ದ ಮಂಕಾಳು ದೀವರೇತರ ಸಣ್ಣ-ಪುಟ್ಟ ಜಾತಿ ಓಟು ಕ್ರೋಢೀಕರಿಸಿ ಪ್ರಥಮ ಪ್ರಯತ್ನದಲ್ಲೇ ಶಾಸಕನಾದರು. ಆ ಬಳಿಕ ಆಡಳಿತಾರೂಢ ಕಾಂಗ್ರೆಸ್‌ನ ಸಹಸದಸ್ಯನಾದ ಮಂಕಾಳು ಕೋಟಿಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ-ಕಾರ್ಯ ಮಾಡಿದ್ದರು. ಆದರೆ 2018ರಲ್ಲಿ ಪರೇಶ್ ಮೇಸ್ತ ಸಾವಿನ ಆಧಾರದ ಕೇಸರಿ ಧ್ರುವೀಕರಣದ “ವಶೀಕರಣ”ದಿಂದಾಗಿ ಸೋಲಾಯಿತು. ಜಿಲ್ಲೆಯಲ್ಲಿ ಹಿಂದಿನ ಕಾಂಗ್ರೆಸ್ ಕ್ಯಾಂಡಿಡೇಟ್‌ಗಳೆಲ್ಲಾ ಹಲವು ಹತ್ತು ಸಾವಿರಗಳ ಅಂತರದಲ್ಲಿ ಹಿಮ್ಮೆಟ್ಟಿದ್ದರೆ, ಮಂಕಾಳು ಮಾತ್ರ ಕೇವಲ ಐದು ಸಾವಿರದ ಸಣ್ಣ ಮತದಂತರದಲ್ಲಿ ಸೋತು ಗೆದ್ದಿದ್ದರು.

ಸೋತರೂ ಮಂಕಾಳು ಕ್ಷೇತ್ರಕ್ಕೆ ಬೆನ್ನುಹಾಕಿ ಕೂರಲಿಲ್ಲ. ಹಗಲು ರಾತ್ರಿಯೆನ್ನದೆ ಜನರ ನಡುವೆ ಓಡಾಡುತ್ತ ಕಷ್ಟ-ಸುಖಕ್ಕೆ ಸ್ಪಂದಿಸಿದರು. ಸಮಷ್ಟಿಯ ಹಿತದೊಂದಿಗೆ ಜನರ ವೈಯಕ್ತಿಕ ಸಮಸ್ಯೆ ಪರಿಹಾರಕ್ಕೂ ಮುಂದಾಗುವುದೇ ಮಂಕಾಳು ಅವರ ಯಶಸ್ಸಿನ “ಗುಟ್ಟು” ಎನ್ನಲಾಗುತ್ತಿದೆ. ಕಷ್ಟವೆಂದು ಬಂದವರಿಗೆ ಬೊಗಸೆಯಲ್ಲಿ ಮೊಗೆದು ಕಾಸು ಕೊಡುತ್ತಾರೆ. ಈ ದಾನ-ಧರ್ಮಕ್ಕೆಲ್ಲ ಎಲ್ಲಿಂದ ಹಣ ಬರುತ್ತದೆಂಬುದು ಯಕ್ಷ ಪ್ರಶ್ನೆಯಾದರೂ ಮಂಕಾಳು ಕ್ಷೇತ್ರದ ಎಲ್ಲ ಜಾತಿ-ಧರ್ಮ-ಪಂಗಡದವರನ್ನು ಎದೆಗೆ ಹಚ್ಚಿಕೊಂಡು ಮನುಷ್ಯ ಸಂಬಂಧ ಕಟ್ಟಿಕೊಂಡಿರುವ ಪರಿ ಮಾತ್ರ ಸೋಜಿಗ ಮೂಡಿಸುತ್ತದೆ. ಮೊನ್ನೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ಚುನಾಯಿತನಾಗಿ ಮಂಕಾಳು ಭಟ್ಕಳ ಪುರ ಪ್ರವೇಶಿಸಿದಾಗ ಸ್ವಾಗತಿಸಲು ಸೇರಿದ್ದ ಸಾವಿರಾರು ಜನರಲ್ಲಿ ಪಕ್ಷದ ಪತಾಕೆಗಿಂತ ಕೇಸರಿ ಹಾಗು ಹಸಿರು ಬಾವುಟಗಳೇ ಹೆಚ್ಚು ಕಾಣಿಸಿದ್ದವು. ಮಂಕಾಳು ಭಟ್ಕಳ-ಹೊನ್ನಾವರದ ಎಲ್ಲ ಪಂಥ-ಪಂಗಡದ ಸಹ್ಯ ಮುಂದಾಳು ಎಂಬುದಕ್ಕೆ ಇದು ಸಾಕ್ಷಿಯಂತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಜಿ.ಪಂ ಸದಸ್ಯನಾಗಿ ಆಯ್ಕೆಯಾದ ಹೊತ್ತಿಂದ ಮೊದಲ್ಗೊಂಡು ಈಗ ಸಚಿವನಾಗುವ ತನಕದ ಪ್ರತಿ ಹಂತದಲ್ಲೂ ಮಂಕಾಳುಗೆ ಪರಿಸ್ಥಿತಿ ಅನುಕೂಲಕರವಾಗಿ ಹದಗೊಂಡು ನೆರವಾಗಿದೆ. ಕರಾವಳಿಯಲ್ಲಿ ಮಂಕಾಳು ಬಿಟ್ಟರೆ ಮೀನುಗಾರ ಸಮುದಾಯದ ಬೇರ್‍ಯಾರೂ ಗೆದ್ದಿಲ್ಲ. ಗುರುಮಿಠಕಲ್‌ನಲ್ಲಿ ಸಣ್ಣ ಅಂತರದಲ್ಲಿ ಬೆಸ್ತ ಸಮುದಾಯದ ಹಳೆ ಹುಲಿ ಬಾಬುರಾವ್ ಚಿಂಚನಸೂರ್ ಸೋತುಹೋಗಿದ್ದಾರೆ. ದೇಶಪಾಂಡೆ ಪ್ರಭಾವ ತಗ್ಗಿದೆ. ಹೀಗಾಗಿ ಮೀನುಗಾರ ಸಮುದಾಯದ ಕೋಟಾದಲ್ಲಿ ಮಂತ್ರಿಗಿರಿ ಭಾಗ್ಯ ಮಂಕಾಳುಗೆ ಸಲೀಸಾಗಿ ಒಲಿದಿದೆ. ಕರಾವಳಿ ಮತ್ತು ಮೀನುಗಾರ ಮೂಲದವರಾದ್ದರಿಂದ ಸಹಜವಾಗೆ ಮೀನುಗಾರಿಕೆ ಮತ್ತು ಬಂದರು ಇಲಾಖೆ ಮಂಕಾಳು ವೈದ್ಯರ ಪಾಲಿಗೆ ಬಂದಿದೆ. ಸಿಕ್ಕಿರುವ ಖಾತೆ ಜವಾಬ್ದಾರಿ ಮತ್ತು ಜಿಲ್ಲಾ ಉಸ್ತುವಾರಿಕೆಯಲ್ಲಿ ಮಂಕಾಳು ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಮಂತ್ರಿಗಿರಿ ಸ್ವಕ್ಷೇತ್ರಕ್ಕಷ್ಟೇ ಸೀಮಿತ ಮಡಿಕೊಳ್ಳದೆ ಜಿಲ್ಲೆ, ರಾಜ್ಯದಲ್ಲಿ “ತನ್ನತನ”ವನ್ನು ಮಂಕಾಳು ತೋರಿಸಬೇಕಿದೆ. ದೇಶಪಾಂಡೆ ಆದಿಯಾಗಿ ಕಾಗೇರಿ, ಮೊನ್ನೆಮೊನ್ನೆ ಸಚಿವ ಪದವಿಯಿಂದ ನಿವೃತ್ತಿಯಾದ ಹೆಬ್ಬಾರ್‌ವರೆಗಿನ ಎಲ್ಲರೂ ಜಿಲ್ಲಾಮಟ್ಟದ ಮುಂದಾಳುಗಳಾಗಲೇ ಇಲ್ಲ; ಇವರಿಂದ ಜಿಲ್ಲೆಗೆ ಅನುಕೂಲವೂ ಆಗಲಿಲ್ಲ ಎಂಬ ಕೊರಗಿದೆ. ಈ “ಅಪವಾದ” ತಟ್ಟದಂತೆ ಎಚ್ಚರ ಮಂಕಾಳು ವಹಿಸಬೇಕಾಗಿದೆ ಎಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. .

ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಉಳಿಸಿಕೊಳ್ಳುವುದರೊಂದಿಗೆ ರಾಜ್ಯ-ಕೇಂದ್ರದಿಂದ ನ್ಯಾಯ ಕೊಡಿಸಬೇಕಾದ ಹೊಣೆಗಾರಿಕೆ ಮಂಕಾಳು ಅವರ ಮೇಲಿದೆ. ಮಂಗಳೂರಿಂದ ಕಾರವಾರದವರೆಗಿನ ಮೀನುಗರಿಕಾ ಬಂದರುಗಳಲ್ಲಿ ಹೂಳು ತುಂಬಿ ಬೋಟುಗಳು ಮುಳುಗಿ ಬೆಸ್ತರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕಾಗಿದೆ. ಕರಾವಳಿ ಗುಂಟ ಹಲವೆಡೆ ಮೀನುಗಾರಿಕಾ ಬಂದರುಗಳ ಅಗತ್ಯವಿದೆ. ಬೆಸ್ತರ ಬದುಕಿಗೆ ತೊಂದರೆ ಆಗುವ ವಾಣಿಜ್ಯ ಬಂದುರು ಯೋಜನೆಗಳ ಪುನರ್ ಪರಿಶೀಲನೆ ಆಗಬೇಕಿದೆ. ಅರಣ್ಯ ಅತಿಕ್ರಮಣದ ಜ್ಯಲಂತ ಸಮಸ್ಯೆಯನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕಾಗಿದೆ. ಆಚೀಚೆಯ ಜಿಲ್ಲೆಗೆ ಹೋಲಿಸಿದರೆ ತೀರಾ ಹಿಂದುಳಿದ ಉತ್ತರ ಕನ್ನಡದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯೊಂದನ್ನು ಮಂಕಾಳು ಹಾಕಿಕೊಳ್ಳಲೇಬೇಕಾದ ತುರ್ತಿದೆ.

ಉತ್ತರ ಕನ್ನಡಿಗರ ಬಹುದೊಡ್ಡ ಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ನೂತನ ಮಂತ್ರಿಗಳು ಬದ್ಧತೆ ತೋರಿಸಲಿ ಎಂಬ ಮಾತು ಜೋರಾಗುತ್ತಿದೆ. ಹಿಂದಿನ ಬಾರಿಯ ಮಂತ್ರಿ-ಶಾಸಕರೆಲ್ಲ ಸುಳ್ಳು ಹೇಳಿ ಕಾಲ ಕಳೆದುರೆಂಬ ಆಕ್ರೋಶ ಜಿಲ್ಲೆಯಲ್ಲಿದೆ. ಪರಿಶಿಷ್ಟ ಜಾತಿಯವರ ಮೀಸಲಾತಿ ಕಸಿಯುವುದು ಸರಿಯಲ್ಲ ಎಂದು ಧರಣಿ ನಿರತ ಸ್ವಜಾತಿ ಮೊಗೇರರಿಗೆ ತಿಳಿಹೇಳುವ ವಿವೇಕ ಮಂಕಾಳು ಪ್ರದರ್ಶಿಸಬೇಕಿದೆ. ಕಳೆದ ಬಾರಿ ಶಾಸಕನಾಗಿದ್ದಾಗ ಎದುರಾಗಿದ್ದ ಮರಳು ಮಾಫಿಯಾಕ್ಕೆ ನೆರವಾದ ಆರೋಪ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಇದನ್ನೆಲ್ಲ ಅರ್ಥಮಾಡಿಕೊಂಡು ಮಂತ್ರಿ ಮಂಕಾಳು ವೈದ್ಯ ಗಟ್ಟಿ ಹೆಜ್ಜೆಗಳನ್ನು ಇಡಲೆಂಬುದು “ನ್ಯಾಯಪಥ”ದ ಆಶಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...