Homeಕರ್ನಾಟಕಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಬಾಬ್ರಿ ಮಸೀದಿ ದ್ವಂಸ ಪ್ರಹಸನ’ ಪ್ರದರ್ಶನ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಬಾಬ್ರಿ ಮಸೀದಿ ದ್ವಂಸ ಪ್ರಹಸನ’ ಪ್ರದರ್ಶನ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ‘ಬಾಬ್ರಿ ಮಸೀದಿ ದ್ವಂಸ’ ಕುರಿತು ವಿದ್ಯಾರ್ಥಿಗಳು ಪ್ರಹಸನ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ.

2022-23ನೇ ಸಾಲಿನ ವಾರ್ಷಿಕೋತ್ಸದಲ್ಲಿ ವಿದ್ಯಾರ್ಥಿಗಳು ಸ್ಕಿಟ್ ಪ್ರದರ್ಶನ ಮಾಡಿರುವ ಸಂಬಂಧ ‘ಇನ್ಟಾಗ್ರಾಮ್‌’ನಲ್ಲಿ ಕ್ಲಿಪ್‌ ಹಂಚಿಕೊಳ್ಳಲಾಗಿದೆ. ಈ ವಿಡಿಯೊಕ್ಕೆ ಅನೇಕರು ‘ಜೈ ಶ್ರೀರಾಮ್’ ಎಂದು ಕಮೆಂಟ್ ಮಾಡಿದ್ದಾರೆ.

ಆರ್‌ಎಸ್‌ಎಸ್ ಚಡ್ಡಿ ಧರಿಸಿದ ವೇಶದಲ್ಲಿರುವ ವಿದ್ಯಾರ್ಥಿ ಪಾತ್ರಧಾರಿಗಳು, ಕೇಸರಿ ವಸ್ತ್ರ ಧರಿಸಿದ ಪಾತ್ರಧಾರಿಗಳು, ರಾಮಮಂದಿರ ಎಂದು ಹೆಸರಿಸಲಾದ ಕಲಾಕೃತಿ ಮತ್ತು ಮಸೀದಿಯನ್ನು ಹೋಲುವ ಕಲಾಕೃತಿಯನ್ನು ಈ ವಿಡಿಯೊ ಕ್ಲಿಪ್‌ನಲ್ಲಿ ಕಾಣಬಹುದು.

ಭಗವಾಧ್ವಜ ಹಿಡಿದ, ಆರ್‌ಎಸ್‌ಎಸ್ ಚಡ್ಡಿ ತೊಟ್ಟಿರುವ ವಿದ್ಯಾರ್ಥಿ ಪಾತ್ರಧಾರಿಗಳು ರಾಮಮಂದಿರ ರಕ್ಷಣೆಗಾಗಿ  ಹೋರಾಡಿದವರು ಎಂಬಂತೆ ತೋರಿಸಲಾಗಿದೆ. ಮುಸ್ಲಿಂ ಅರಸರು ಮಸೀದಿಯನ್ನು ಧ್ವಂಸಗೊಳಿಸಿದರು ಎಂಬಂತೆಯೂ, ಆರ್‌ಎಸ್‌ಎಸ್‌ ಕಾರ್ಯಕರ್ತರು ಮಂದಿರ ರಕ್ಷಣೆಗಾಗಿ ಪ್ರಾಣ ತೆತ್ತಿದ್ದಾರೆ ಎಂಬಂತೆಯೂ ವೇದಿಕೆ ಮೇಲೆ ಪ್ರದರ್ಶನ ಮಾಡಲಾಗಿದೆ. ಹೋಮ ಹವನ ಮಾಡುತ್ತಿರುವ ಪ್ರಧಾನಿ ಮೋದಿಯವರ ಪಾತ್ರವನ್ನೂ ತೋರಿಸಲಾಗಿದೆ. ಮಕ್ಕಳ ಮನಸ್ಸಿನಲ್ಲಿ ಕೋಮುದ್ವೇಷವನ್ನು ತುಂಬುವ ಇಂತಹ ಪ್ರವೃತ್ತಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿರುವ ಕುರಿತು ವರದಿಯಾಗಿಲ್ಲ.

ಇತ್ತೀಚೆಗೆ ಕಾಲೇಜು ವಾರ್ಷಿಕೋತ್ಸವ ನಡೆದಿರುವುದು ಸ್ಪಷ್ಟ. ಈ ಕುರಿತು ‘ಪುತ್ತೂರು ಸುದ್ದಿ ನ್ಯೂಸ್.ಕಾಂ’ ಸ್ಥಳೀಯ ಜಾಲತಾಣ ವರದಿ ಮಾಡಿದೆ.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಸೇರಿದ ಈ ವಿದ್ಯಾಸಂಸ್ಥೆಯಲ್ಲಿ ಇಂತಹದ್ದೇ ವಿದ್ಯಮಾನ ಈ ಹಿಂದೆಯೂ ನಡೆದಿತ್ತು. ಆ ಕುರಿತು ಪ್ರಕರಣ ಕೂಡ ದಾಖಲಾಗಿತ್ತು.

ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ಕ್ರೀಡಾ ವಾರ್ಷಿಕೋತ್ಸವದ ಅಂಗವಾಗಿ ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನ ನಡೆಸಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದರು.

ಕ್ರೀಡಾ ವಾರ್ಷಿಕೋತ್ಸವದ ಅಂಗವಾಗಿ ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನ ನಡೆದಿತ್ತು. ಉನ್ಮತ್ತ ರೀತಿಯಲ್ಲಿ ವಿದ್ಯಾರ್ಥಿಗಳು ಬಾಬ್ರಿ ಮಸೀದಿಯ ಪ್ರತಿಕೃತಿಯನ್ನು ಕೆಡಗಿ ಜೈ ಶ್ರೀರಾಮ್‌, ಜೈ ಭಾರತ್‌ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದರು. 1992 ರ ಬಾಬರಿ ಮಸೀದಿ ಉರುಳಿಸುವಿಕೆಯನ್ನು ಮರುರೂಪಿಸಿದ ವಿದ್ಯಾರ್ಥಿಗಳ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಪಿಎಫ್‌ಐ ಸಂಘಟನೆಯ ಅಬೂಬಕ್ಕರ್‌ ಸಿದ್ದಿಕ್‌ ಎಂಬುವವರು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ನಾಲ್ವರ ವಿರುದ್ಧ ಐಪಿಸಿಯ ಸೆಕ್ಷನ್ 295 ಎ ಮತ್ತು 298 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚೆಗೆ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿಯೂ ಈ ಘಟನೆ ಮರುಕಳಿಸಿದೆ.

ಇದನ್ನೂ ಓದಿರಿ: ಬಾಬರೀ ಮಸೀದಿ ಧ್ವಂಸದ ಅಣಕು ಪ್ರದರ್ಶನ: ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ ನಾಲ್ವರ ಮೇಲೆ ದೂರು ದಾಖಲು

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಶವಂತ ಡೊಂಗೆ ಮಾತನಾಡಿ, “ಪುಸ್ತುತ ಕಾಲಘಟ್ಟದಲ್ಲಿ ಹೊಸ ವಿನ್ಯಾಸ, ತಂತ್ರಜ್ಞಾನ ಹಾಗೂ ಕಲೆಗೆ ಭರಪೂರವಾದ ಅವಕಾಶಗಳು ಯುವ ಜನಾಂಗದ ಮುಂದಿದೆ. ಆದರೆ ವಿದ್ಯಾರ್ಥಿಗಳು ಇದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ರಾಷ್ಟ್ರೀಯ ಶಿಕ್ಷಣ ಪದ್ಧತಿಯಿಂದ ಇಂದು ವಿದ್ಯಾರ್ಥಿಗಳಿಗೆ ಅವಕಾಶಗಳು ವಿಸ್ತಾರವಾಗಿದೆ. ಮುಖ್ಯವಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಲ್ಲಿ ಯಶಸ್ಸು ಗಳಿಸಬಹುದು” ಎಂದಿರುವುದಾಗಿ ‘ಪುತ್ತೂರು ಸುದ್ದಿ ನ್ಯೂಸ್.ಕಾಂ’ ವರದಿ ತಿಳಿಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಸಹನೆ, ಸತತ ಪ್ರಯತ್ನವಿದ್ದರೆ ಯಶಸ್ಸು ಗಳಿಸಬಹುದು. ಅದರೊಂದಿಗೆ ಆತ್ಮವಿಶ್ವಾಸ ಹೊಂದಿದ್ದರೆ ನಮ್ಮ ಕಾರ್ಯದಲ್ಲಿ ಜಯ ಗಳಿಸಬಹುದು. ರಾಷ್ಟ್ರೀಯ ಶಿಕ್ಷಣ ನೀತಿ ಪದ್ಧತಿಯು ಈ ಮಣ್ಣಿನ ಚಿಂತನೆಯ ಶಿಕ್ಷಣವನ್ನು ವಿದ್ಯಾರ್ಥಿಗಳ ಮುಂದಿಡುತ್ತದೆ. ಹಾಗಾಗಿ ನಮ್ಮ ಚಿಂತನೆಗಳು ಬದಲಾಗಬೇಕು. ಅದು ಭಾರತಕ್ಕೆ ಹೊಂದಿಕೆಯಾಗುವಂತಿರಬೇಕು” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...