ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಎಚ್‌.ವಿಶ್ವನಾಥ್ ಮತ್ತು ಸಾ.ರಾ ಮಹೇಶ್ ಯಾವುದೇ ಆಣೆ ಮಾಡದೇ ಪರಸ್ಪರ ಒಬ್ಬರನ್ನೊಬ್ಬರು ಬೈಯ್ದುಕೊಳ್ಳುವುದರೊಂದಿಗೆ ತೆರೆಕಂಡಿದೆ.

ಕಳೆದ ಕೆಲವು ದಿನಗಳಿಂದ ಇಬ್ಬರೂ ರಾಜಕೀಯ ಮುಖಂಡರು ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿದ್ದು ಅವರ ಅಕ್ರಮಗಳನ್ನು ಇವರು, ಇವರ ಅಕ್ರಮಗಳನ್ನು ಅವರು ತೆರೆದಿಡುತ್ತಿದ್ದರು. ತಮ್ಮ ಮೇಲಿನ ಆರೋಪಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತಾ ಇಬ್ಬರೂ ಕೂಡ ಬೇಕಾದರೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದ್ದರು.

ಅದರಂತೆ ಎಚ್.ವಿಶ್ವನಾಥ್ ಗುರುವಾರ ಚಾಮುಂಡಿ ಬೆಟ್ಟಕ್ಕೆ ಧೈರ್‍ಯವಿದ್ದರೆ ಬರುತ್ತೀರಾ ಎಂದು ಸಾ.ರಾ ಮಹೇಶ್ ಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ್ದ ಸಾ.ರಾ ಮಹೇಶ್ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು.

ಇಂದು ಚಾಮುಂಡಿ ಬೆಟ್ಟದಲ್ಲಿ  ಮಾಧ್ಯಮದೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್ “ಹೇಡಿ, ಪಲಾಯನವಾದಿ, ಒಳಗೆ ಏಕೆ ಹೋಗಿ ಕೂತಿದ್ದೀಯಾ, ನಾನು ಹಣಕ್ಕಾಗಿ ರಾಜಿನಾಮೆ ಕೊಟ್ಟಿದ್ದೇನೆಂದು ಸುಳ್ಳು ಹೇಳಿದ ಪಲಾಯನವಾದಿ ಸಾ.ರಾ ಮಹೇಶ್‌ಗೆ ಧಿಕ್ಕಾರ” ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಮುಂದುವರಿದು, ದೇವರು ಕೆಂಗಯ್ಯ ಹನುಮಂತಯ್ಯನವರು ಕಟ್ಟಿದ ನಾಡಗುಡಿ ವಿಧಾನಸಭೆಯಲ್ಲಿ ಕುಳಿತು “ತನ್ನ ಸ್ವಂತ ತಾಯಿ ಮತ್ತು ತನ್ನ ಮಕ್ಕಳ ಮೇಲೆ ಆಣೆಯಿಟ್ಟು ವಿಶ್ವನಾಥ್ 25 ಕೋಟಿಗೆ ಮಾರಿಕೊಂಡಿದ್ದಾರೆಂದು ಹೇಳಿದವರು ಈಗ ಯಾಕೆ ಇಲ್ಲಿಗೆ ಬಂದಿಲ್ಲ, ಬಂದೂ ಯಾಕೆ ನನ್ನ ಎದುರು ಬರುತ್ತಿಲ್ಲ, ಬಾ ಈಚೆಗೆ, ಇದೇನು ವೈಶಂಪಾಯನ ಸರೋವರನಾ ಇದು ಬಾ ಈಚೆಗೆ, ನಾನು ಕೋರ್ಟಿಗೆ ಹೋಗುತ್ತೇನೆ..ನನ್ನಂಥ ಸತ್ಯವಂತನ, ಪ್ರಾಮಾಣಿಕನ ಮುಖ ನೋಡಲಿಕ್ಕೆ ನಿನಗೆ ಧೈರ್‍ಯಯಿಲ್ಲ ಎಂದು ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಇಬ್ಬರೂ ಗಾಜಿನ ಮನೆಯಲ್ಲಿದ್ದೇವೆ; ಕಲ್ಲು ಹೊಡೆಯುವುದು ಬೇಡ ಎಂದರೇಕೆ ಎಚ್. ವಿಶ್ವನಾಥ್?

ಇದಕ್ಕೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಶಾಸಕ ಸಾ.ರ ಮಹೇಶ್ ” ನಾನು ಪೂಜೆ ಮುಗಿಸಿ ಕಾರಿಡಾರ್‌ನಲ್ಲಿ ಆಣೆ ಮಾಡಲು ಕಾಯುತ್ತಿದ್ದೇನೆ, ಅವರೇ ಬಂದಿಲ್ಲ. ನಾನು ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಬಂದಿದ್ದೇನೆ, ಆತನ ಮುಖ ನೋಡಿ ನೋಡಿ ಅನುಭವಿಸಿದ್ದೇನೆ, ಈಗ ರಾಜ್ಯದ ಜನತೆಗೆ ಗೊತ್ತಾಗಿದೆ. ನನ್ನ ರಾಜಕಾರಣದ ಜೀವನದಲ್ಲಿ ಯಾರನ್ನು ವಯಕ್ತಿಕವಾಗಿ ಮಾತಾಡಿಲ್ಲ. ಅವರು ಬಾಂಬೆಗೆ ಹೋದ ನಂತರ ಸರ್ಕಾರದ ಅಳಿವು ಉಳಿವಿಗೆ ಅವರೇ ಕಾರಣವೆಂದು ನನ್ನ ಫಾರ್ಮ್‌ ಹೌಸ್‌ನಲ್ಲಿ ಮಾತಾಡಿದ್ದನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಅದಕ್ಕೆ ಅವರು ನನ್ನ ಬಗ್ಗೆ ವಯಕ್ತಿಕವಾಗಿ ಅಶ್ಲೀಲವಾಗಿ ಅವರು ನನ್ನ ಬಗ್ಗೆ ಮಾತಾಡಿದ್ದಾರೆ.

ಅವರು ನನ್ನಿಂದ ಜೆಡಿಎಸ್‌ಗೆ ಈ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ನಾನು ಹೇಳುತ್ತೇನೆ ನಿಮ್ಮ ಕುಟುಂಬದ ವಯಕ್ತಿಯ ಸ್ವಾರ್ಥಕ್ಕಾಗಿ, ವರ್ಗಾವಣೆಯ ದಂಧೆಗಾಗಿ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ನನ್ನ ಮೇಲಿನ ಟೀಕೆಗೆ ಅವರು ಬಂದು ಸಾಕ್ಷಿ ನೀಡಲಿ.. ಅವರು ಸಂವಿಧಾನದ ಮೇಲೆ ಆಣೆ ಮಾಡಿದ್ದೇನೆ ಎಂದಿದ್ದಾರೆ. ನಾವು ಕೂಡ ಕರ್ತವ್ಯ ಪಾಲನೆ ಮಾಡುತ್ತೇವೆ, ನಂಬಿಕೆಯಿಂದ ನಡೆದುಕೊಳ್ಳುತ್ತೇನೆ ಎಂದು ಸಂವಿಧಾನದ ಮೇಲೆ ಆಣೆ ಮಾಡಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದೇವೆ. ಆದರೆ ಅವರು ಹುಣಸೂರಿನ ಜನರ ನಂಬಿಕೆಗೆ ಅನುಗುಣವಾಗಿ ನಡೆದುಕೊಂಡಿದ್ದಾರಾ? ಎಂದು ಸಾ.ರಾ ಮಹೇಶ್ ಪ್ರಶ್ನಿಸಿದ್ದಾರೆ.

ಮೊದಲು ಪ್ರಮಾಣಕ್ಕೆ ಕರೆದವರು ಅವರೆ, ಆದ್ದರಿಂದ ಮೊದಲು ಪ್ರಮಾಣ ಮಾಡಬೇಕಾದವರೂ ಅವರೆ. ಸದನದಲ್ಲಿ ನಾನು ಮಾಡಿದ ಆರೋಪಕ್ಕೆ ನಾನು ಬದ್ಧನಾಗಿದ್ದೇನೆ. ಅವರು ನನ್ನ ನಡವಳಿಕೆಯ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಲಿ.. ಆಗ ಬೇಕಾದರೆ ಸ್ವೀಕರ್‌ಗೆ ಕೊಟ್ಟಿರುವ ರಾಜಿನಾಮೆ ವಾಪಸ್ ತೆಗೆಯೋಣ.. ಇಲ್ಲ ಅವರು ನಾನು 25 ಕೋಟಿಗೆ ಮಾರಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಲಿ. ನಾನು ನಮ್ಮ ಪಕ್ಷದ ಹಿರಿಯರ ಜೊತೆ ಮಾತಾಡಿದ್ದೇನೆ. ನಾನು ಇನ್ನು ಮುಂದೆ ಅವರ ಮುಖ ಕೂಡ ನೋಡುವುದಿಲ್ಲ, ಅವರ ಚರ್ಚೆ ಕೂಡ ಮಾಡುವುದಿಲ್ಲ.. ಉಳಿದಿದ್ದು ರಾಜ್ಯದ ಜನ ನೋಡಿಕೊಳ್ಳಲ್ಲಿ, ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾರೆ ಎಂದು ಹೇಳಿ ಅಲ್ಲಿಂದ ತೆರಳಿದರು.

ಸಾ.ರಾ ಮಹೇಶ್ ಬೆಂಬಲಿಗರು ವಿಶ್ವನಾಥ್‌ ವಿರುದ್ಧ ಘೋಷಣೆಗಳನ್ನು ಕೂಗಿದರೆ, ವಿಶ್ವನಾಥ್ ಬೆಂಬಲಿಗರು ಸಾ.ರಾ ಮಹೇಶ್ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜಿಸಲ್ಪಟ್ಟಿದ್ದರು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

LEAVE A REPLY

Please enter your comment!
Please enter your name here