Homeಕರ್ನಾಟಕ"ಜೋಗದ ಹುಲ್ಲಿನ ನಿತ್ಯೋತ್ಸವ"ಕ್ಕೆ ಬೀಜಬಿತ್ತಿದ ಪ್ರೊ. ಶ್ರೀರಂಗ ಯಾದವ್...

“ಜೋಗದ ಹುಲ್ಲಿನ ನಿತ್ಯೋತ್ಸವ”ಕ್ಕೆ ಬೀಜಬಿತ್ತಿದ ಪ್ರೊ. ಶ್ರೀರಂಗ ಯಾದವ್…

- Advertisement -
- Advertisement -

| ಅನುರಣನ |

ಡಾ.ಟಿ.ಎಸ್‌ ಚನ್ನೇಶ್

ನವೆಂಬರ್ ತಿಂಗಳಿನಲ್ಲಿ ರಾಜ್ಯದ ನೆಲದ ಪ್ರೀತಿಯು ಉಕ್ಕಿ ಸುದ್ದಿಯಾಗುತ್ತದೆ. ಡಿಸೆಂಬರಿನ ಚಳಿಯಲ್ಲಿ ತಣ್ಣಗಾಗುತ್ತದೆ. ಮತ್ತದೇ ಪ್ರಖರತೆಯು ಬರುವಂತಾಗಲು ಬೇಸಿಗೆಯ ಬಿಸಿಲನ್ನು ಹಾದು ಮುಂದಿನ ವರ್ಷಕ್ಕೇ ಕಾಯಬೇಕು. ಆದರೆ ನಿಸರ್ಗ ಮಾತ್ರ ನಿತ್ಯವೂ ಆಚರಣೆಯಲ್ಲಿರುತ್ತದೆ. ಅದಕ್ಕೆ ದೇಶ-ಕಾಲದ ಗಡಿಗಳ ಮಿತಿಯಿಲ್ಲ.

“ಜೋಗದ ಹಸಿರಿನ ಬೆಳಕು…” ನಿತ್ಯವೂ ಉತ್ಸವದಲ್ಲಿರಲು ಅಲ್ಲಿನ ಹುಲ್ಲಿನ ಸಂಕುಲವೊಂದು ಮರುಜೀವ ತಳೆದ ಬಗ್ಗೆ ಗಡಿನಾಡಿನ ಪ್ರೊಫೆಸರ್ ಎಸ್.ಆರ್ ಯಾದವ್ ಅವರು ಪತ್ತೆಹಚ್ಚಿ, ಮತ್ತದರ ನೆಲೆಯಲ್ಲೆಲ್ಲಾ ಬಿತ್ತಿದ್ದು ಹಳೆಯ ಸಂಗತಿ. ಆದರವರ ವಿಜ್ಞಾನದ ಪ್ರೀತಿಯು ಗಡಿಯ ಎಲ್ಲೆಗಳನ್ನು ಮೀರಿ ರಾಜ್ಯದ ನೆಲೆಯಲ್ಲರಸಿದ್ದನ್ನು ತಿಳಿಯಲು ರಾಜ್ಯೋತ್ಸವದ ನಂತರದ ತಿಂಗಳು ಸಕಾಲ. ರಾಜ್ಯೋತ್ಸವದ ಸುದ್ದಿಗಳು ನಮ್ಮ ನೆಲವನ್ನಷ್ಟೇ ಅಲ್ಲದೆ ಗಡಿಗಳಲ್ಲಿ ಹತ್ತು ಹಲವು ಚಾರಿತ್ರಿಕವಾದ ಆತಂಕ, ಅನುಮಾನಗಳ ಅನುರಣನಗಳು ಹೊಸ ರೂಪ ಪಡೆದು ಮಾತುಗಳಾಗುತ್ತವೆ. ಆದರೆ ಇದು ಹೇಳಿ-ಕೇಳಿ “ತೃಣ”ಮಾತ್ರದ ಸಂಗತಿ! ಅದರಲ್ಲೂ ಅದು ವಿಜ್ಞಾನಿಯೊಬ್ಬರ ಪರಿಶ್ರಮ ಮತ್ತು ಬದ್ಧತೆಯ ಪ್ರೀತಿಯ ಸಂಗತಿ. ಹಾಗಾಗಿ ಸಾಮಾನ್ಯರ ಮಾತಿಗಿರಲಿ, ಶೈಕ್ಷಣಿಕವಾಗಿ ವಿಶ್ವವಿದ್ಯಾಲಯಗಳಲ್ಲೂ ಚರ್ಚೆಯಾಗಿರುವುದು ಅಪರೂಪ.

ಇದೆಲ್ಲಾ ತುಂಬಾ ಒಗಟಿನಂತೆ ಅನ್ನಿಸಿದರೆ ಕ್ಷಮಿಸಿ, ಹಾಗೇನಿಲ್ಲ. ವಿಜ್ಞಾನವು ಸದಾ ತೆರೆದುಕೊಳ್ಳುವ ಹಂಬಲದ್ದು. ಸಂಪೂರ್ಣ ಅರಿವಿನ ಭಾಗವಾಗಲು ಎಲ್ಲಾ ಪ್ರಜಾತಾಂತ್ರಿಕ ನಡೆಗಳನ್ನೂ ತನ್ನೊಳಗಾಗಿಸಿಕೊಂಡೇ ಇದೆ. ನಮ್ಮ ನೆರೆಯ ನಾಡು ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನದ ಪ್ರೊಫೆಸರ್ ಜೋಗದಲ್ಲಿದ್ದ, ಸಂಪೂರ್ಣ ನಶಿಸಿಯೇ ಹೋಗಿದೆ ಎಂಬ ಸಂಕುಲದ ಪ್ರಭೇದವನ್ನು ಮತ್ತದೇ ಜೋಗದ ಜಲಪಾತದ ಪಾಚಿ ಕಲ್ಲಿನ ಪರಿಸರದಲ್ಲಿ ಮರುಜೀವ ತಳೆದ ಸಂಗತಿಯನ್ನು ಹುಡುಕಿಕೊಟ್ಟಿದ್ದಾರೆ.

ಹುಲ್ಲಿನ ಜಾತಿಯದೇ ಆದ ಅದನ್ನು ಜೋಗದ ಪರಿಸರದಲ್ಲಿ ಮೊಟ್ಟ ಮೊದಲಬಾರಿಗೆ 1919ರಷ್ಟು ಹಿಂದೆಯೇ ಪತ್ತೆ ಹಚ್ಚಲಾಗಿತ್ತು. ಅದನ್ನು ನಂತರದ 1951ರ ಕಾಲದಲ್ಲಿ ವಿವರಿಸಿದ ಬ್ರಿಟಿಷ್ ಸಸ್ಯವಿಜ್ಞಾನಿ ಬೋರ್ ತಮ್ಮ ಗೆಳೆಯ ಚಾಲ್ರ್ಸ್ ಹಬ್ಬರ್ಡ್ ಎಂಬುವರ ಜ್ಞಾಪಕಾರ್ಥ ಆ ಹುಲ್ಲಿಗೆ “ಹಬ್ಬರ್ಡ್ ಹುಲ್ಲು” ಎಂದು ನಾಮಕರಣ ಮಾಡಿ ಅದರ ಸಂಕುಲಕ್ಕೆ ಹಬ್ಬರ್ಡಿಯಾ ಎಂದು ಕರೆದಿದ್ದರು. ಈ ಹಬ್ಬರ್ಡಿಯಾ ಹೆಪ್ಟಾನ್ಯೂರಾನ್ (Hubbardia heptaneuron) ಹುಲ್ಲು ಸಂಕುಲದ ಏಕಮಾತ್ರ ಪ್ರಭೇದ. ಅಲ್ಲದೆ ಅದಕ್ಕೆ ಜೋಗದ ಶರಾವತಿ ಕೊಳ್ಳದ ವಾತಾವರಣ ಮಾತ್ರವೇ ಒಗ್ಗಿತ್ತು.

ಶರಾವತಿ ವಿದ್ಯುತ್ ಯೋಜನೆಗಾಗಿ ಅಡ್ಡಗಟ್ಟೆ ಕಟ್ಟಲು ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಾಣವಾದಾಗ ಅದು ನಿರ್ನಾಮವಾಗಿತ್ತು. ಅಪಾರ ಜಲರಾಶಿಯು ಸೃಷ್ಟಿಯಾಗಿ ಮತ್ತು ನದಿ ಹರಹಿನ ವ್ಯತ್ಯಯಗಳಿಂದ ಆ ಹುಲ್ಲು ಶಾಶ್ವತವಾಗಿ ಕೊನೆಯನ್ನು ಕಂಡಿದೆ ಎಂದೇ ಜೀವಿವೈವಿಧ್ಯದ ಪ್ರಿಯರು ಆತಂಕಗೊಂಡಿದ್ದರು. ಆದರೆ ನಿಸರ್ಗದ ನಿತ್ಯೋತ್ಸವಕ್ಕೆ ಕೊನೆಯು ಇರಲಾರದೇನೋ? ಅಥವಾ ಹೊಸತೊಂದು ಬಗೆಯ ನಿತ್ಯೋತ್ಸವವು ಅಣಿಯಾಗಿಸಿಕೊಳ್ಳುವುದೂ ನಿಸರ್ಗಕ್ಕೆ ಕಷ್ಟವಾಗಲಾರದೇನೋ? ಇವೆಲ್ಲವನ್ನೂ ವಿಜ್ಞಾನದ ಪಾಠಗಳಾಗಿಸಿ, -ನಮ್ಮ ಮನೆಯ ಬೆಳಕು, ಅದರ ಸಂಕಟ ಮತ್ತು ಅದರ ಪ್ರೀತಿಯ ಮರುಹುಟ್ಟು – ಎಲ್ಲವನ್ನೂ ನಮಗೇ ಹೇಳಲು ಗಡಿಯ ಪರಿಧಿಯನ್ನು ದಾಟಿದ ವಿಜ್ಞಾನದ ಪ್ರೀತಿಯು ಇಲ್ಲಿದೆ.

ಗಡಿಗಳ ಪರಿಧಿಯನ್ನು ದಾಟುವ ವಿಜ್ಞಾನದ ಪ್ರೀತಿ

ಲೇಖನದ ಆರಂಭದಲ್ಲೇ ಪ್ರಸ್ತಾಪಿಸಿದ ಹಾಗೆ ಹಬ್ಬರ್ಡಿಯಾ ಹುಲ್ಲನ್ನು ಮೊದಲು ಪತ್ತೆ ಹಚ್ಚಿ ವಿವರಿಸಿ ನಾಮಕರಣ ಮಾಡಿ ಸಸ್ಯಸಂಕುಲಗಳ ಪಟ್ಟಿಯಲ್ಲಿ ಪ್ರತಿಷ್ಠಾಪಿಸಿದವರೂ ನಮ್ಮ ನೆಲೆಯವರೇನಲ್ಲದ ದೂರದ ಪಶ್ಚಿಮದ ವಿಜ್ಞಾನಿಗಳು. ಬ್ರಿಟಿಷರ ಅಲೆಮಾರಿ ಹುಡುಕಾಟಗಳಲ್ಲಿ ಇಂತಹ ಸಾವಿರಾರು ಸಂಗತಿಗಳಿವೆ. ಭಾರತೀಯ ಸಸ್ಯಸಂಕುಲಗಳ ವ್ಯವಸ್ಥಿತ ವಿವರಣೆಗಳಲ್ಲಿ ಅವರ ದಾಖಲೆಗಳು ಅಳಿಸಲಾದಷ್ಟು ಉಳಿದಿವೆ.

ಕಳೆದ ಶತಮಾನದ ಆದಿಯಲ್ಲಿ ಶರಾವತಿಯ ಕೊಳ್ಳದ ದುರ್ಗಮ ಪ್ರದೇಶದ ಅಲೆದಾಟವನ್ನು ನಡೆಸಿ ಹೊಸತೊಂದು ಜೀವವನ್ನು “ತೃಣ”ಮಾತ್ರದಲ್ಲಿ ಕಂಡು ಹೆಸರಿಸಿದ್ದು ಗಡಿಯ ಮಿತಿಯನ್ನು ಮೀರಿದ ವಿಜ್ಞಾನದ ಪ್ರೀತಿಯೇ! ನಂತರದ ನಮ್ಮದೇ ಅಭಿವೃದ್ಧಿಯ ಬೆಳವಣಿಗೆಗಳಲ್ಲಿ ದೇಶಾದ್ಯಂತ ಅಣೆಕಟ್ಟುಗಳ ಕಟ್ಟುತ್ತಾ ಶರಾವತಿಯಂತಹ ದುರ್ಗಮ ಕೊಳ್ಳವನ್ನೂ ಬಾಚಿಕೊಂಡಿದ್ದು ಇತಿಹಾಸ. ಆಗ ಲಿಂಗನಮಕ್ಕಿ ಜಲಾಶಯದಿಂದ ಆವೃತವಾದ ಅಪಾರ ಜಲರಾಶಿ ಹಲವಾರು ಜೀವಿಗಳನ್ನು ನಿರ್ಣಾಮ ಮಾಡಿದ್ದು ನಿಜ. ಅದರಲ್ಲೊಂದು “ಹಬ್ಬರ್ಡ್ ಹುಲ್ಲು”! ಹೆಚ್ಚೂ ಕಡಿಮೆ ಶಾಶ್ವತವಾಗಿಯೇ ಕೊನೆಯಾಗಿತ್ತು! ಇದನ್ನು ಅಂತಹದೇ ಪರಿಸರವೊಂದರಲ್ಲಿ ಪತ್ತೆ ಹಚ್ಚಿ, ಮತ್ತೆ ಅಂತಹ ಹಲವು ಪರಿಸರಗಳಿಗೆ ಪರಿಚಯಿಸಿ, ಮರುಹುಟ್ಟಿಗೆ ಕಾರಣರಾದವರು ಮಹಾರಾಷ್ಟ್ರದ ಗಡಿನಾಡಿನ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀರಂಗಯಾದವ್.

ಎಸ್.ಆರ್ ಯಾದವ್ ಎಂದೇ ಭಾರತೀಯ ಸಸ್ಯಲೋಕದಲ್ಲಿ ಪರಿಚಿತರಾದ ಶ್ರೀರಂಗರು, ನಮ್ಮ ಜೋಗದ ಹುಲ್ಲಿನ ನಿತ್ಯೋತ್ಸವ ಮರುಹುಟ್ಟಿಗೆ ವರ್ಷಾನುಗಟ್ಟಲೆ ಸಂಶೋಧನೆ ಕೈಗೊಂಡು ಆಗಾಗ್ಗೆ ಗಡಿ ದಾಟಿ, ವಿದ್ಯಾರ್ಥಿಗಳೊಂದಿಗೆ ನಮ್ಮ ನೆಲದ ದುರ್ಗಮ ಕಾಡುಗಳಲ್ಲಿ ಅಲೆದಾಡಿ ಕಾರಣರಾಗಿದ್ದಾರೆ. ಹಸಿರ ಹುಲ್ಲಿನ ನಿತ್ಯೋತ್ಸವಕ್ಕೆ ಹೊಸತೊಂದು ಮೆರುಗನ್ನು ಕಟ್ಟಿಕೊಟ್ಟಿದ್ದಾರೆ.

ಹಬ್ಬರ್ಡಿಯಾ ಹುಲ್ಲು ನಾಮಕರಣಗೊಂಡು, ವಿವರಣೆಯಾದ ನಂತರದ ದಿನಗಳಲ್ಲಿ ಜಲಾಶಯದಿಂದಾಗಿ ಸುಮಾರು ಆರೆಂಟು ದಶಕಗಳ ಕಾಲ ಶರಾವತಿ ಕೊಳ್ಳದಿಂದ ಕಾಣೆಯಾಗಿತ್ತು. ಅಲ್ಲಿಗೆ ಮಾತ್ರವೇ ಸೀಮಿತವಾಗಿದ್ದ ಹುಲ್ಲು ಮತ್ತೆಲ್ಲಿಯೂ, ಅಂದರೆ ಅಂತಹದೇ ಪಾಚಿಕಲ್ಲಿನ ವಾತಾವರಣವನ್ನುಳ್ಳ ಪಶ್ಚಿಮಘಟ್ಟಗಳ ನೆಲದಲ್ಲಿ ಎಲ್ಲೂ ಪತ್ತೆಯಾಗಿರಲಿಲ್ಲ. ಅದರ ನಿರಂತರ ಹುಡುಕಾಟದಲ್ಲಿ ಮಂಚೂಣಿಯಲ್ಲಿದ್ದ ಆಸಕ್ತರಲ್ಲಿ ಪ್ರೊ. ಶ್ರೀರಂಗರು ಅಗ್ರಗಣ್ಯರು. ಶಿವಾಜಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗವನ್ನು ಬೆಳೆಸಿದವರಲ್ಲಿ ಶ್ರೀರಂಗರದು ದೊಡ್ಡ ಹೆಸರು. ಸಸ್ಯವಿಜ್ಞಾನದಲ್ಲಿ ಸಸ್ಯವರ್ಗೀಕರಣವಿಜ್ಞಾನ (Taxonomy- ತಮಾಷೆಗೆ ಮತ್ತು ಕಷ್ಟವನ್ನು ಸೇರಿಸಿ ಹೇಳುವ Tax-On-Me) ತೀರಾ ಕಷ್ಟವಾದ ಮತ್ತು ಕಡಿಮೆ ಆಸಕ್ತರನ್ನು ಆಕರ್ಷಿಸುವ ವಿಭಾಗ. ಅಂತಹದರಲ್ಲಿ ಆಸಕ್ತರಾದವರು ಪ್ರೊ.ಶ್ರೀರಂಗ ಯಾದವ್.

ಪ್ರೊ. S.R. ಯಾದವ್, 2006ರಲ್ಲಿ ಭಾರತ ಸರ್ಕಾರದ ನೆರವಿನೊಂದಿಗೆ ಇಂತಹ ಅಳಿವಾದ, ಆದರೂ ಇರಬಹುದಾದ ಸಸ್ಯಪ್ರಭೇದಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದರು. ಆಗ ಆಕಸ್ಮಿಕವಾಗಿ ಕೊಲ್ಹಾಪುರದ ಸಮೀಪದ “ತಿಲ್ಲರಿ ಘಟ್ಟ” ಪ್ರದೇಶದಲ್ಲಿ ಹಬ್ಬಡ್ರ್ಹುಲ್ಲು ಪತ್ತೆಯಾಗಿತ್ತು. ಅದೂ ಒಂದು ತಂಪಾದ ನೆರಳನ್ನಾಶ್ರಯಿಸಿದ ಕೇವಲ ಒಂದು ಚದುರಮೀಟರ್ ವಿಸ್ತೀರ್ಣದ ಕಲ್ಲುಹಾಸಿನ ಪ್ರದೇಶವಾಗಿತ್ತು. ಸುತ್ತ-ಮುತ್ತಲಿನ ಅಂತಹದೇ ಪ್ರದೇಶದ ಎಲ್ಲಿಯೂ ಅದರ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಮೊದಲ ನೋಟಕ್ಕೆ ಇದು ಅದೇ ಎಂಬಂತೆ ಕಂಡರೂ ವಿಜ್ಞಾನ ಜಗತ್ತು ಅಳಿದೇ ಹೋಗಿದೆ ಎಂದು ಶಾಶ್ವತವಾಗಿ ನಂಬಿಕೊಂಡ ಸತ್ಯವನ್ನು ಬಿಡಿಸಿ ಹೇಳುವ ಕಷ್ಟ ಪ್ರೊ. ಯಾದವ್ ಅವರಿಗಿತ್ತು. ಅದಕ್ಕಾಗಿ ಅವರು ಸರಿಸುಮಾರು ಒಂದೂವರೆ ವರ್ಷ ಕಾಲ ಆ ಹುಲ್ಲಿನ ಪುಟ್ಟ-ಪುಟ್ಟ ವಿವರಣೆಗಳನ್ನೆಲ್ಲಾ ಒರೆಹಚ್ಚಿ ನೋಡಿದ್ದರು. ಅದರ ಆವಾಸ ಮತ್ತಿತರ ಸಸ್ಯವಿವರಣೆಯ ಎಲ್ಲ ಸಂಗತಿಗಳನ್ನೂ ಮೊರೆ ಹೋದರು.

ಬೀಜಗಳ ಮೊಳಕೆಯ ವಿಧಾನ, ಕುಡಿಯೊಡೆವ ಬಗೆ ಹೀಗೆ! ಅಂತಿಮವಾಗಿ ಅದು ಅಳಿದುಹೋದದ್ದೆಂದು ನಂಬಿದ ಹುಲ್ಲು ಎಂದು ಪತ್ತೆಯಾದ ಮೇಲೆ ಅದರ ಬೀಜಗಳನ್ನು ಜೋಪಾನವಾಗಿ ಸಂಗ್ರಹಿಸಿ ಹೆಚ್ಚಿಸಿ ಶಿವಮೊಗ್ಗಾ ಜಿಲ್ಲೆಯ ಸಹ್ಯಾದ್ರಿಯ ಬೆಟ್ಟಗುಡ್ಡಗಳಿಂದ ಆರಂಭಿಸಿ ಕೊಲ್ಹಾಪುರ ದಾಟಿ, ಪುಣೆ ಹಾಯ್ದು ಮುಂಬಯಿಯವರೆಗೂ 108 ಸ್ಥಳಗಳಲ್ಲಿ ಹಬ್ಬರ್ಡ್ ಹುಲ್ಲಿನ ಬೀಜವನ್ನು ಬಿತ್ತಿದ್ದರು. ಜೋಗದಿಂದ ಮುಂಬಯಿಯ ಕಡೆಗೆ ಪಶ್ಚಿಮಘಟ್ಟಗಳಲ್ಲಿ ಸುಮಾರು 677ಕಿ.ಮೀ ಉದ್ದಕ್ಕೂ ಒಂದು ನೂರಾ ಎಂಟು ಕಡೆ ಬಿತ್ತಿ ಸುಮಾರು 5000 ಹುಲ್ಲಿನ ಗಿಡಗಳನ್ನು ನೆಲೆಗೊಳಿಸಿದ್ದರು.

ಹೀಗೆ ಹೊಸದಾಗಿ ನೆಲೆಗೊಂಡ ಹುಲ್ಲಿನ ಮರುಎಣಿಕೆ, ಅವುಗಳ ಪ್ರತಿಷ್ಠಾಪನೆಯ ಕಷ್ಟ-ನಷ್ಟಗಳ ಪುನರ್ ಪರಿಶೀಲನೆಯ ಶೋಧದ ಅಲೆದಾಟದಲ್ಲಿ ಜೋಗ ಜಲಪಾತದ ಪ್ರಪಾತದ ಆಸುಪಾಸಿನಲ್ಲಿ ಮತ್ತೊಂದು ಅಚ್ಚರಿಯು ಕಾಯ್ದಿತ್ತು. ಅವರ ತಂಡವು ಬೀಜಗಳನ್ನು ಬಿತ್ತಿದ ಸ್ಥಳಗಳಲ್ಲಿ ಹೊರತಾದ ಪ್ರದೇಶದಲ್ಲಿ ಸೊಂಪಾಗಿ ಬೆಳೆದ ಹಬ್ಬಡ್ರ್ಹುಲ್ಲು ಮತ್ತೆ ಸಿಕ್ಕಿತ್ತು. ಈ ಹುಲ್ಲು ನಿಜಕ್ಕೂ ಕಳೆದ ಒಂಭತ್ತು ದಶಕಗಳಿಂದ ಮರೆಯಾಗಿದ್ದ ಸಸ್ಯವಾಗಿತ್ತು.

ಕೊಲ್ಹಾಪುರ ಜಿಲ್ಲೆಯ ತಿಲ್ಲರಿಯಲ್ಲಿ ಮರು ಪತ್ತೆಯಾಗಿ ನೂರೆಂಟು ಸ್ಥಳಗಳಿಗೆ ಶ್ರೀರಂಗರಿಂದಾಗಿಯೇ ನೆಲೆಕಂಡ ಸಸ್ಯಕ್ಕೂ ಈಗ ಹೊಸತಾಗಿ ಸಿಕ್ಕ “ಹಳೆಯ ಸಸ್ಯ”ಕ್ಕೂ ಕೆಲವು ವ್ಯತ್ಯಾಸಗಳಿದ್ದವು. ಕೊಲ್ಹಾಪುರದ ಬಳಿಯ ಹಬ್ಬಡ್ರ್ಹುಲ್ಲು ರೋಮಗಳನ್ನೊಳಗೊಂಡ ಸಸ್ಯವಾಗಿತ್ತು. ಮತ್ತೆ ಸಿಕ್ಕ ಮೂಲ ಹಬ್ಬಡ್ರ್ ಸಸ್ಯವು ರೋಮರಹಿತವಾಗಿತ್ತು. ಇವಿಷ್ಟನ್ನು ಹೊರತುಪಡಿಸಿದರೆ ಉಳಿದಂತೆ ಒಂದೆ ಬಗೆಯ ಸಸ್ಯಗಳಾಗಿದ್ದವು. ಹೀಗೆ ಶತಮಾನದ ಹಿಂದಿನ ಸಸ್ಯದ ಹುಡುಕುತ್ತಾ, ಬಹುಷಃ ಅದರ ವಿಕಾಸದ ಫಲವೊಂದನ್ನು ಪತ್ತೆ ಹಚ್ಚಿ ಮತ್ತದೇ ಸಸ್ಯವನ್ನೂ ಮರುಪತ್ತೆ ಮಾಡಿದ್ದು ಪ್ರೊ. ಶ್ರೀರಂಗ ಯಾದವ್ ಅವರ ಗಡಿಯ ಪರಿಧಿಯನ್ನೂ ದಾಟಿದ ಸಸ್ಯವಿಜ್ಞಾನದ ಪ್ರೀತಿ.

ಪ್ರೊ. ಎಸ್.ಆರ್ ಯಾದವ್ ಅವರು ಇನ್ಸಾ (The National Academy of Sciences Fellow) ಫೆಲೊ ಮತ್ತು ಭಾರತ ಸರ್ಕಾರ ಪರಿಸರ ವಿಜ್ಞಾನ ಮತ್ತು ಅರಣ್ಯ ಇಲಾಖೆಯಿಂದ ಜಾನಕಿ ಅಮ್ಮಾಳ್ ಪ್ರಶಸ್ತಿಯನ್ನೂ ಅಲ್ಲದೆ ಇತರೇ ಹತ್ತಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುಮಾರು 60ಕ್ಕೂ ಹೆಚ್ಚು ಸಸ್ಯಪ್ರಭೇದಗಳನ್ನು ಗುರುತಿಸಿ ಹೆಸರಿಸಿದ್ದಾರೆ. ಅವರ ಶಿಷ್ಯರು ಆರು ಸಸ್ಯಪ್ರಭೇದಗಳಿಗೆ ಅವರ ಹೆಸರಿಂದ ಕರೆದು ಗೌರವಿಸಿದ್ದಾರೆ. ಪ್ರೊ. ಯಾದವ್ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ಇಂದಿಗೂ ಜಗದೀಶ್ ದಳವಿ ಎಂಬವರ ವಿದ್ಯಾರ್ಥಿಯು ಬಾಗಿಲಕೋಟೆಯ ಜಿಲ್ಲೆಯ ಸಸ್ಯವೈವಿಧ್ಯತೆಯ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹೀಗೆ ಕನ್ನಡದ ನೆಲದ ಪ್ರೀತಿಯಿಂದ ಸಸ್ಯಸಂಕುಲಗಳನ್ನು ಅರಸುತ್ತಾ ಗಡಿನಾಡಿನಲ್ಲಿ ಜೀವಪ್ರೀತಿಯ ಸೇತುವಾಗಿದ್ದಾರೆ.

(ಡಾ. ಟಿ.ಎಸ್.ಚನ್ನೇಶ್‌ರವರು ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ ಬೆಂಗಳೂರಿನಲ್ಲಿ ಕಾರ್ಯನಿರತರು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...