ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಭೂಮಿ ಮತ್ತು ವಸತಿ ನೀಡುವಂತೆ ಒತ್ತಾಯಿಸಿ ಕೈಗೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 14ನೇ ದಿನಕ್ಕೆ ಕಾಲಿಡುತ್ತಿದ್ದರೂ ಜಿಲ್ಲಾಧಿಕಾರಿಯೊಬ್ಬರನ್ನು ಹೊರತುಪಡಿಸಿ ಬೇರೆ ಯಾವ ಅಧಿಕಾರಿಗಳೂ ಸಮಸ್ಯೆ ಆಲಿಸಿಲ್ಲ. ಇದಕ್ಕೆ ಧರಣಿನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಬೇಡಿಕೆಗಳು ಈಡೇರುವವರೆಗೂ ಧರಣಿ ಸ್ಥಳದಿಂದ ಕದಲುವುದಿಲ್ಲ. ಹಲವು ಬಾರಿ ಮನವಿಗಳನ್ನು ಅಧಿಕಾರಿಗಳಿಗೆ ಕೊಟ್ಟು ಬೇಸತ್ತಹೋಗಿದ್ದೇವೆ. ನೆಪಮಾತ್ರಕ್ಕೆ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಹೋಗುವ ಅಧಿಕಾರಿಗಳು ನಮ್ಮ ಮನವಿಗೆ ಬೆಲೆಯೇ ಕೊಡುತ್ತಿಲ್ಲ. ಆ ಮನವಿಯನ್ನು ಮೂಲೆಗೆಸೆದು ಕುಳಿತುಕೊಳ್ಳುತ್ತಾರೆ. ಮೇಲ್ನೋಟಕ್ಕೆ ಬೇಡಿಕೆ ಈಡೇರಿಸುವ ಭರವಸೆ ಕೊಡುತ್ತಾರೆಯೇ ಹೊರತು. ಈ ಜನರ ನೋವಿಗೆ ಮಿಡಿಯುತ್ತಿಲ್ಲ ಎಂದು ಹೋರಾಟ ಸಮಿತಿ ಸಂಚಾಲಕ ನಾಗಭೂಷಣ್ ಆಪಾದಿಸಿದ್ದಾರೆ.
ಡಿಸೆಂಬರ್ 19ರಂದು ಜಿಲ್ಲಾಧಿಕಾರಿಗಳು ಧರಣಿನಿರತರಿಗೆ ವಸತಿಗಳನ್ನು ನೀಡಲು 4.5 ಎಕರೆ ಭೂಮಿಯನ್ನು ನೀಡಿದ್ದೇವೆ ಎಂದು ಹೇಳಿಕೆ ನೀಡಿರುವುದು ವರದಿಯಾಗಿದೆ. ಜಿಲ್ಲಾಧಿಕಾರಿಗಳು ಭೂಮಿಯನ್ನು ಇದುವರೆಗೂ ನೀಡಿಲ್ಲ. ಇನ್ನೂ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತಿದ್ದಾರೆ. ಅವರು ಗುರುತಿಸಿರುವ ಜಾಗದಲ್ಲಿ ಹೈಟೆಕ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದು, ತುಂಬಾ ತಗ್ಗಾದ ಪ್ರದೇಶವಾಗಿದೆ. ಜನರ ವಾಸಕ್ಕೆ ಯೋಗ್ಯವಾಗಿಲ್ಲ. ಈ ಜಾಗ ಸಮತಟ್ಟಿನಿಂದ ಕೂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಅಷ್ಟೇ ಅಲ್ಲ ಆ ಪ್ರದೇಶ ಬೆಟ್ಟದ ಬುಡದಲ್ಲಿದ್ದು ಚಿರತೆ, ಕರಡಿಗಳ ಕಾಟವಿದೆ. ಈಗ ಭೂಮಿ ಗುರುತಿಸಿರುವ ಜಾಗ ಸರ್ವೇ ನಂಬರ್ 27 ಮತ್ತು 28 ಎಂದು ಹೇಳಲಾಗಿದೆ. ಇದು ಬ್ಯಾಲ್ಯದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ವಾಸಿಸಲು ಯೋಗ್ಯವಾಗಿಲ್ಲ. ಇದರ ಪಕ್ಕದಲ್ಲೇ 124ನೇ ಸರ್ವೇ ನಂಬರ್ ಭೂಮಿ ಇದ್ದು ಅದರಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಇದು ಕೂಡ ಸಮಸ್ಯೆ. ಜೊತೆಗೆ ಮಕ್ಕಳಿಗೆ ಶಾಲೆ, ಆಸ್ಪತ್ರೆಗೆ ಹೋಗಲು ಅಲ್ಲಿಂದ ಕಷ್ಟವಾಗುತ್ತದೆ. ದಿನಸಿಗಳನ್ನು ತರಲು ಕೂಡ ಬ್ಯಾಲ್ಯಕ್ಕೆ ಹೋಗಬೇಕಾಗಿದೆ. ಬ್ಯಾಲ್ಯದ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕಣಪ್ರದೇಶ ವಾಸಯೋಗ್ಯ ಜಾಗವಾಗಿದೆ. ಅದನ್ನು ಕೊಡಿ ಎಂದು ಕೇಳುತ್ತಿದ್ದೇವೆ ಆದರೆ ಕೊಡುತ್ತಿಲ್ಲ ಎಂದ ನಾಗಭೂಷಣ್ ಹೇಳಿದ್ದಾರೆ.
ಈಗ ಗುರುತಿಸಿರುವ ಸ್ಥಳಕ್ಕೆ ಬಡಜನರು ಹೋಗಲು ಒಪ್ಪುತ್ತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರಜೆಗಳ ತೀರ್ಮಾನವೇ ಅಂತಿಮ ತೀರ್ಮಾನವಾಗಿದ್ದು, ಜಿಲ್ಲಾಡಳಿತ ಜನರ ಅಭಿಪ್ರಾಯದಂತೆ ಕೆಲಸ ಮಾಡಲಿ. ಜಿಲ್ಲಾಧಿಕಾರಿಯವರ ಈ ಪ್ರಕಟಣೆಗೆ ನಾವು ಒಪ್ಪುವುದಿಲ್ಲ, ಜಗ್ಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾರೆ.
ಈಗಾಗಲೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರನ್ನು ಭೇಟಿ ಮಾಡಿರುವ ಧರಣಿನಿತರು ಅವರ ಮಾರ್ಗದರ್ಶನದಂತೆ ಹೋರಾಟ ಮುಂದುವರಿಸಿದ್ದಾರೆ. ಬೇಜವಾಬ್ದಾರಿಯುತ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಯು ನೋಡುತ್ತಿಲ್ಲ. ಬಡವರ ಹಕ್ಕುಗಳಿಗೆ ಬೆಲೆ ಇಲ್ಲವೇ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಸತಿ ವಂಚಿತರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರವನ್ನು ಕಲ್ಪಿಸಬೇಕಾಗಿದೆ.