’ಆನೆಗೆ ಅಂಕುಶ ಇರುವಂತೆ ಆಡಳಿತಗಾರರನ್ನು ಎಚ್ಚರಿಸಲು ಹೋರಾಟ ಎನ್ನುವ ಅಂಕುಶ ಬೇಕೇ ಬೇಕು’ ಎಂದು ಬೆಲೆ ಏರಿಕೆ ವಿರುದ್ಧ ಮಾರ್ಚ್ 6ರಂದು ರಾಯಚೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ್‍ಯಾಲಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರಿನ ಸ್ಪಂದನ ಭವನದಲ್ಲಿ ಭಾನುವಾರ (ಫೆ.28) ಬೆಳಿಗ್ಗೆ ವಿವಿಧ ವಿಭಾಗಗಳ ಜನರು ಈ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದರು. ಮಾರ್ಚ್ 6ರಂದು ಬೆಳಿಗ್ಗೆ 11ಕ್ಕೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.
SUCI(C) ಪಕ್ಷದ ರಾಯಚೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾಕ್ಟರ್ ಚಂದ್ರಗಿರೀಶ್ ಮಾತನಾಡಿ, ’ಅಚ್ಛೇ ದಿನ ತರುತ್ತೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜನಗಳ ಜೇಬಿಗೆ ಕೈಹಾಕಿ ಲೂಟಿ ಮಾಡುತ್ತಿದೆ. ಎಲ್ಲಾ ಅಗತ್ಯ ವಸ್ತುಗಳ ಮೇಲೆ ಅತೀ ಹೆಚ್ಚು ತೆರಿಗೆ ಹಾಕಿ, ಬೆಲೆ ಏರಿಕೆ ಮಾಡಿದೆ. ಜನರು ಒಂದೊತ್ತಿನ ಊಟಕ್ಕೆ ಪರದಾಡುವಂತಾಗಿದೆ’ ಎಂದರು.
ಮುಂದುವರಿದು, ’ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಅಂತಹ ಕಾರ್ಫೊರೇಟರ್‌ಗಳ ಸಂಪತ್ತಿನ ಹೆಚ್ಚಳವಾಗುತ್ತಿದೆ. ಜನರು ದರಿದ್ರರಾಗುತ್ತಿದ್ದಾರೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಬಂಡವಾಳಗಾರರ ಸೇವೆಗೆ ನಿಂತಿವೆ. ಇದರ ವಿರುದ್ಧ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲವಾಗಿದೆ. ಸಣ್ಣಪುಟ್ಟ ಹೋರಾಟಗಳಿಗೆ ಇವರು ಮಣಿಯುವುದಿಲ್ಲ. ಹಾಗಾಗಿ ಜನರು ಬೃಹತ್ ಹೋರಾಟಕ್ಕೆ ತಯಾರಾಗಬೇಕಾದ ಅವಶ್ಯಕತೆ ಇದೆ. ಈಗ ಅಂತಹ ಸಮಯ ಬಂದಿದೆ. ಪ್ರತಿಯೊಬ್ಬರು ಆ ದಿಕ್ಕಿನಲ್ಲಿ ಕೆಲಸ ಮಾಡಲು ತಯಾರಾಗಬೇಕು’ ಎಂದರು.
ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ ಕುರಿತು ಎಬಿಪಿ-ಸಿ- ಓಟರ್ ಸಮೀಕ್ಷೆ ಹೇಳಿದ್ದೇನು…ಇಲ್ಲಿದೆ ವಿವರ
ಸಭೆಯ ಅಧ್ಯಕ್ಷತೆ ವಹಿಸಿದ್ದ AIUTUC ಜಿಲ್ಲಾಧ್ಯಕ್ಷ ವೀರೇಶ್ ಎನ್.ಎಸ್ ಮಾತನಾಡಿ, ’ನಿರುದ್ಯೋಗ, ಬಡತನ, ಬೆಲೆಯೇರಿಕೆ ಜನಗಳ ದಿನನಿತ್ಯ ಸಮಸ್ಯೆಗಳಾಗಿವೆ. ಕೊರೊನಾ ಕಾಲದಲ್ಲಿ ಜನಗಳಲ್ಲಿ ನೆರವಿಗೆ ಬರಬೇಕಾದ ಸರಕಾರ ಬಂಡವಾಳಗಾರರ ಸೇವೆಗೆ ನಿಂತಿದೆ. ಈ ಸಮಯದಲ್ಲಿ ರೈತ- ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಇಂತಹ ಜನವಿರೋಧಿ ನೀತಿಗಳ ವಿರುದ್ಧ ಜನಗಳು ಒಂದುಗೂಡಿ ಹೋರಾಟಕ್ಕೆ ಮುಂದಾಗಬೇಕು’ ಎಂದರು.
’ಜನಕಲ್ಯಾಣ ಯೋಜನೆಗಳಿಗೆ ಬೊಕ್ಕಸದಲ್ಲಿ ಹಣವಿಲ್ಲವೆಂದು ಹೇಳುವ ಸರ್ಕಾರಗಳು ಮಂತ್ರಿಗಳು ಐಷಾರಾಮಿ ಕಾರುಗಳನ್ನು ಖರೀದಿಸಲು ಹಣ ಹೆಚ್ಚಳ ಮಾಡಿದೆ. ತಿರುಪತಿಯಲ್ಲಿ ಬೃಹತ್ ವಸತಿ ಗೃಹ ಕಟ್ಟಿಸಲು 200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಆದ್ದರಿಂದ ಈ ಬೆಲೆ ಏರಿಕೆ ವಿರುದ್ಧ ಜನರ ನಡುವೆ ವ್ಯಾಪಕ ಪ್ರಚಾರ ಮಾಡಿ ಮಾರ್ಚ್ 6ರಂದು ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಡೆಮಾಕ್ರಟಿಕ್ ಯೂತ್ ಆರ್ಗನೈಸೆಷನ್ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು.
ಹಿರಿಯ ನಾಗರಿಕರಾದ ಖಂಡೇರಾವ್, ದಯಾನಂದ, ಅಣ್ಣಪ್ಪ, ಫ್ರಾಂಕ್ಲಿನ್ ರಾಜು, ನಿಸಾರ್, ನೂರ್, ಜಮಾಲುದ್ದಿನ್, ರಾಮಣ್ಣ ಎಂ, ಜಾವೇದ್, ಭೀಮಣ್ಣ, ಪ್ರಮೋದ್ ಕುಮಾರ್, ರವೂಫ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಇತ್ತ ಸಿಂಧನೂರಿನಲ್ಲಿಯೂ ಇಂಧನ ಬೆಲೆ ಗಗನಕ್ಕೆ ಏರಿಸಿದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸೋಮವಾರ (ಮಾರ್ಚ್ 1)ಕ್ಕೆ ಸಿಂಧನೂರಿನ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಹಾತ್ಮ ಗಾಂಧಿ ಸರ್ಕಲ್ ವರೆಗೆ ಟ್ರಾಕ್ಟರ್ ಎಳೆದು ಪ್ರತಿಭಟನಾ ಮೆರವಣಿಗೆ ನಡೆಸಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಇದನ್ನೂ ಓದಿ: ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್ ವೇದಿಕೆಯಲ್ಲಿ ABP ಚಾನೆಲ್ ವರದಿಗಾರನ ರಾಜೀನಾಮೆ!
