Homeನ್ಯಾಯ ಪಥಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ...

ಅತ್ಯಾಚಾರಗಳು ಹೆಚ್ಚಾಗಲು ಈ ಸಿನಿಮಾಗಳ ಪಾಲೆಷ್ಟು? ಅತ್ಯಾಚಾರ ಮತ್ತು ಸಿನಿಮಾ ನೈತಿಕತೆ…

- Advertisement -
- Advertisement -

ಹೈದರಾಬಾದ್ ಅತ್ಯಾಚಾರ ಪ್ರಕರಣ ಕಂಡು ಇಡೀ ದೇಶವೇ ಮರುಕಪಟ್ಟಿತು. ಫಿಲ್ಮ್ ಇಂಡಸ್ಟ್ರಿಯೂ ಕಂಬನಿ ಮಿಡಿದು, ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿತು. ಇದೇ ಮೊದಲಲ್ಲ 2012ರ ನಿರ್ಭಯಾ ಪ್ರಕರಣದಲ್ಲಿರಲಿ, ಅಥವಾ ಇಂತಹುದೇ ಮಹಿಳಾ ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದಾಗ ಸಿನಿಮಂದಿ ಆಕ್ರೋಶದಿಂದ ಮಾತನಾಡೋದು ಸಿನಿಮಾ ಡೈಲಾಗ್‍ಗಳಷ್ಟೇ ಸಹಜವಾಗಿದೆ. ಆದರೆ, ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಲಾಭದ ಬೆನ್ನು ಹತ್ತಿರುವ ಸಿನಿಮೋದ್ಯಮಕ್ಕೆ, ಅದರ ಪಾಲುದಾರರಿಗೆ ನಿಜಕ್ಕೂ ಹೀಗೆಲ್ಲ ಆಕ್ರೋಶ ಹೊರಹಾಕುವ ನೈತಿಕತೆ ಉಳಿದಿದೆಯಾ ಅನ್ನೋದು ಚರ್ಚೆಯಾಗಬೇಕಿರುವ ಸಂಗತಿ.

ಕೆಲವು ವರ್ಷಗಳ ಹಿಂದೆ ಅತ್ಯಾಚಾರಿಯೊಬ್ಬ ತಾನು ಅತ್ಯಾಚಾರವೆಸಗಲು `ದಂಡುಪಾಳ್ಯ’ ಸಿನಿಮಾದ ವಿಕೃತ ಪ್ರಚೋದನೆಯೇ ಕಾರಣ ಅನ್ನೋದನ್ನು ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದ. ಇದು ಒಂದು ಸಿನಿಮಾಗೆ ಸೀಮಿತವಾದುದಲ್ಲ ಅಥವಾ ಒಬ್ಬ ಕಾಮಾಂಧನ ಪ್ರೇರಣೆಗೂ ಸೀಮಿತವಾದುದಲ್ಲ. ಕಮರ್ಷಿಯಲ್ ಸಕ್ಸಸ್‍ನ ಜಾಡುಹಿಡಿದು ಹೊರಟಿರುವ ಬಹುತೇಕ ಸಿನಿಮಾಗಳ ನಿರ್ಮಾತೃಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಇಂಥಾ ಶೋಷಣೆಗಳನ್ನು ವಿಜೃಂಭಿಸುತ್ತಾ ಬಂದಿರೋದು ಇವತ್ತಿನ ವಾಸ್ತವ.

ಸಿನಿಮಾರಂಗ ಬೆಳೆದಂತೆ, 21ನೇ ಶತಮಾನದ ಮೊದಲ ದಶಕದ ಕೊನೆಯ ವರ್ಷದವರೆಗಿನ ಬಹುತೇಕ ಸಿನಿಮಾಗಳ ಕತೆಗಳಲ್ಲಿ ಅತ್ಯಾಚಾರವೆಂಬುದು ಸಾಮಾನ್ಯ ವಸ್ತುವಾಗಿ ಕಾಣಿಸಿಕೊಳ್ಳುತ್ತವೆ. ಪ್ರೀತಿ-ಪ್ರೇಮ-ಕಾಮ, ಆಸೆ, ಆಕರ್ಷಣೆ, ಸೇಡು, ದ್ವೇಷ ಇದೆಲ್ಲದಕ್ಕೂ ಕೇಂದ್ರವಾಗಿ ಅತ್ಯಾಚಾರದ ದೃಶ್ಯಗಳು ರಾರಾಜಿಸುತ್ತಿವೆ. ಅದಲ್ಲದೆ ಅನೈತಿಕ ಸಂಬಂಧದ ಕತೆ-ದೃಶ್ಯಗಳು ನೋಡುಗರಿಗೆ ಪ್ರಚೋದನೆಯ ಹೊಸ ಹುಮ್ಮಸ್ಸನ್ನು ತಂದೊಡ್ಡುವುದರ ಜೊತೆಗೆ ಸಿನಿಮಾದಲ್ಲಿ ನಟನೊಬ್ಬ ಎಸಗುವ ಅತ್ಯಾಚಾರ ಕೃತ್ಯವು ಆ ಪಾತ್ರದ ಗಂಡಸ್ತನದ ಅಹಮ್ಮಿಕೆಯನ್ನಾಗಿಯೋ, ಸ್ತ್ರೀ ಪಾತ್ರವನ್ನು ಅವಮಾನಿಸುವ ಸಾಧನವಾಗಿಯೋ ಬಳಕೆಯಾಗುತ್ತಲೇ ಇದೆ.

ಸಿನಿಮಾ ಎಂಬುದು ಸಮಾಜದ ಕನ್ನಡಿಯಿದ್ದಂತೆ, ಸಮಾಜದಲ್ಲಿ ನಡೆಯೋದನ್ನೇ ಸಿನಿಮಾದಲ್ಲಿ ತೋರಿಸಬೇಕಾಗುತ್ತೆ ಎಂಬ ವಾದವನ್ನು ಕೆಲವರು ಮುಂದಿಡಬಹುದು. ಆದರೆ ಅಂತವರು, ನೈಜತೆಯ ನೆಪದಲ್ಲಿ ಇಂತಹ ವಿಕೃತಿಗಳನ್ನು ಹಸಿಹಸಿಯಾಗಿ ಬಿತ್ತರಿಸುವ ಅದೇ ಸಿನಿಮಾ ಸಮಾಜವನ್ನು ತಿದ್ದಿ ತೀಡುವ ಇನ್ನುಳಿದ ಹೊಣೆಗಾರಿಕೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ತಾನು ಪ್ರೀತಿಸಿದವಳು ತನಗೆ ಸಿಗಲಿಲ್ಲವೆಂದರೆ, ಆಕೆ ಬೇರಾರಿಗೂ ಸಿಗಬಾರದೆಂದು ಆಕೆಯನ್ನು ಅತ್ಯಾಚಾರಗೈಯುವ ಅಥವಾ ಕುಡಿದ ಮತ್ತಿನಲ್ಲಿ ಹೀರೋ ಎಸಗುವ ಅತ್ಯಾಚಾರವು ಆಕೆಯನ್ನು ಮದುವೆ ಆಗಿಬಿಟ್ಟರೆ ಎಲ್ಲವೂ ಸರಿಹೋಗಿಬಿಡುತ್ತದೆಂಬ ದೃಶ್ಯದೊಂದಿಗೆ ಕೊನೆಗಾಣುತ್ತದೆ. ಇವೆಲ್ಲವೂ ಅತ್ಯಾಚಾರಿಗಳಿಗೆ ಎಷ್ಟೊಂದು ಸುಲಭವೆಂಬಂತೆ ಪ್ರಭಾವಿಸುತ್ತವೆ.

ಸಿನಿಮಾದಲ್ಲಿ ಅತ್ಯಾಚಾರಗೈದವನು ಇವತ್ತು ಅವಳ ಸೊಕ್ಕು ಇಳಿಸಿದ್ದೇನೆಂದು ಗರ್ವದಿಂದ ಹೇಳಿಕೊಳ್ಳುವಂತಹ ಹಾಗೂ ನಿಷ್ಕರ್ಷ ಸಿನಿಮಾದಲ್ಲಿ ಖಳನಟನೊಬ್ಬ `ಇವಳಿಗೆ ಯೌವನ ತುಂಬಿ ತುಳುಕ್ತಾಯಿದೆ ಸ್ವಲ್ಪ ಖಾಲಿ ಮಾಡು’ ಎನ್ನುವ ಮತ್ತು ಆತ ಅತ್ಯಾಚಾರಗೈಯುವ ದೃಶ್ಯಗಳು ಹೆಣ್ಣಿನ ಬಾಯಿ ಮುಚ್ಚಿಸಲು ಅಥವಾ ಆಕೆಯನ್ನು ತನ್ನ ಅಡಿಯಾಳಾಗಿಸಿಕೊಳ್ಳಲು ಅತ್ಯಾಚಾರವೊಂದು ಸಾಧನ ಎಂಬುದನ್ನು ಸುಪ್ತವಾಗಿ ಸಮಾಜಕ್ಕೆ ದಾಟಿಸಿಬಿಡುತ್ತವೆ. ಜಾತಿ, ವರ್ಗ ಮತ್ತು ಕಾಮದ ಅಮಲನ್ನು ನೆತ್ತಿಗೇರಿಸಿಕೊಂಡವನಿಗೆ ಮತ್ತಷ್ಟು ಪ್ರಚೋದನೆಯನ್ನು ನೀಡುತ್ತವೆ. ಇಂತಹ ಸಿನಿಮಾಗಳು ಅತ್ಯಾಚಾರವಷ್ಟೇ ಅಲ್ಲದೆ ಆಸಿಡ್ ದಾಳಿ, ಹಿಂಸೆ, ಕಿರುಕುಳಗಳೂ ಮಹಿಳಾ ದೌರ್ಜನ್ಯದ ಪ್ರವೃತ್ತಿಯನ್ನು ಹೆಚ್ಚಿಸುತ್ತವೆ ಮತ್ತು ಪ್ರಚೋದಿಸುತ್ತವೆ.

ಅಲ್ಲದೆ, ಸಿನಿಮಾಗಳಲ್ಲಿ ಅವಕಾಶಬೇಕೆಂದರೆ ಸ್ವಲ್ಪ ಅಡ್ಜಸ್ಟ್ ಮಾಡ್ಕೋಬೇಕು ಎಂದು ಹೇಳುವ ನಿರ್ದೇಶಕರೂ, ನಿರ್ಮಾಪಕರೂ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಮತ್ತೊಂದು ದುರಂತ. ಇತ್ತೀಚೆಗೆ ಸದ್ದು ಮಾಡಿದ ಮೀಟೂ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹೀರೋ, ನಿರ್ದೇಶಕ, ನಿರ್ಮಾಪಕರ ಪರವಾಗಿ ನಿಲ್ಲುವ `ಫೇವರಿಸಂ’ ಮನಸ್ಥಿತಿ ಸಿನಿಮಾ ರಂಗದ ಯಾವ ನೈತಿಕತೆಯನ್ನು ಪ್ರತಿನಿಧಿಸುತ್ತದೆ. ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೇಳಿಕೊಂಡ ನಟಿಯರ ಸಿನಿ ಭವಿಷ್ಯಕ್ಕೆ ತಣ್ಣೀರೆರಚುವ ಇಂಡಸ್ರ್ಟಿಯು ಅತ್ಯಾಚಾರದ ವಿರುದ್ಧ ಮಾತನಾಡುತ್ತಿರುವುದು ನೈತಿಕತೆಯ ಪ್ರಶ್ನೆಯನ್ನು ಮತ್ತೆಮತ್ತೆ ಮುನ್ನೆಲೆಗೆ ತರುತ್ತಿದೆ.

ಇಂದು ಸಿನಿಮಾಗಳಿಂದ ಪ್ರೇರೇಪಿಸಲ್ಪಡುವ ಯುವಸಮುದಾಯ ಬೆಳೆಯುತ್ತಿದೆ. ಇಂತಹ ಯುವಜನಾಂಗಕ್ಕೆ ಆದರ್ಶವಾಗಬೇಕಿರುವ ಸಿನಿಮಾಗಳು ಮಹಿಳೆಯರನ್ನು ಗೌರವಿಸುವ, ಮಾನವ ಪ್ರೀತಿಯನ್ನು ಹಂಚುವ, ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸುವಂತಹ ಹಾಗೂ ಆರೋಗ್ಯಕರ ಮನರಂಜನೆಯ ವಾಹಿನಿಯಾಗಿರಬೇಕೇ ಹೊರತು ಹಾದಿ ತಪ್ಪಿಸಿ, ಸಮಾಜದಲ್ಲಿ ಕೊಳಕನ್ನು ಬಿತ್ತುವ ಮಾಧ್ಯಮವಾಗಬಾರದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...