Homeಮುಖಪುಟರಶ್ಮಿಕಾ ಮಂದಣ್ಣ ಬ್ಯಾನ್ ಎಂಬುದು ಸುಳ್ಳು, ಅವರು ಕೇಳಿದಷ್ಟು ಸಂಭಾವನೆ ಕೊಡಲಾಗುತ್ತಿಲ್ಲವಷ್ಟೆ: ಕನ್ನಡ ನಿರ್ದೇಶಕರು ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಬ್ಯಾನ್ ಎಂಬುದು ಸುಳ್ಳು, ಅವರು ಕೇಳಿದಷ್ಟು ಸಂಭಾವನೆ ಕೊಡಲಾಗುತ್ತಿಲ್ಲವಷ್ಟೆ: ಕನ್ನಡ ನಿರ್ದೇಶಕರು ಹೇಳಿದ್ದೇನು?

ನಮ್ಮಲ್ಲಿ ಯಾರನ್ನು ಬ್ಯಾನ್ ಮಾಡುವ ಮಾತನ್ನಾಡಬಾರದು. ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಎಂಬ ಪದ ಹೋಗಬೇಕೆಂದು ಪುನೀತ್‌ ರಾಜ್‌ಕುಮಾರ್‌ ಹೇಳಿದ್ದರು.

- Advertisement -
- Advertisement -

ಕನ್ನಡ ಸಿನಿಮಾರಂಗದಿಂದ ನಟಿ ರಶ್ಮಿಕಾ ಮಂದಣ್ಣನವರನ್ನು ಬ್ಯಾನ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿರುವುದು ಸುಳ್ಳು. ನಿಜ ಏನೆಂದರೆ ರಶ್ಮಿಕಾ ಮಂದಣ್ಣನವರು ಕೇಳುವಷ್ಟು ಸಂಭಾವನೆ ಕೊಡಲು ಕನ್ನಡ ನಿರ್ಮಾಪಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ ಅಷ್ಟೆ ಎನ್ನುತ್ತಾರೆ ಕನ್ನಡ ನಿರ್ದೇಶಕ ಬಿ.ಎಂ ಗಿರಿರಾಜ್‌ರವರು.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಬ್ಯಾನ್ ಎಂದು ಗಾಳಿ ಸುದ್ದಿ ಹರಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗು ಮತ್ತು ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಹೆಚ್ಚು ಸಂಭಾವನೆ ಸಿಗುತ್ತಿರುವ ಕಾರಣಕ್ಕೆ ಅಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಅಷ್ಟು ಸಂಭಾವನೆ ಕೊಟ್ಟು ಕನ್ನಡಕ್ಕೆ ಕರೆತಂದರೆ ತಮಗೆ ಗಿಟ್ಟುವುದಿಲ್ಲ ಎಂಬುದು ನಿರ್ಮಾಪಕರ ಅಭಿಪ್ರಾಯ. ಒಂದು ವೇಳೆ ಅವರು ಕಡಿಮೆ ಸಂಭಾವನೆಗೆ ಕನ್ನಡ ಚಿತ್ರಗಳಲ್ಲಿ ನಟಿಸಬೇಕು ಎಂದರೆ ಪಾತ್ರ ದೊಡ್ಡದಿರಬೇಕು ಅಥವಾ ಅವರಿಗೆ ಇಷ್ಟವಾದ ಪಾತ್ರವಿರಬೇಕು. ಅದು ಸಾಧ್ಯವಾಗದ ಕಾರಣ ಅವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಇಷ್ಟೆ ವಿಷಯ” ಎಂದರು.

ನಿರ್ದೇಶಕ ಬಿ.ಎಂ.ಗಿರಿರಾಜ್‌

ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಎಂಬ ಪದ ಹೋಗಬೇಕೆಂದು ಪುನೀತ್‌ ರಾಜ್‌ಕುಮಾರ್‌ರವರು ಹೇಳಿದ್ದರು. “ನಮ್ಮಲ್ಲಿ ಯಾರನ್ನು ಬ್ಯಾನ್ ಮಾಡುವ ಮಾತನ್ನಾಡಬಾರದು. ಸಂವಿಧಾನದ ಪ್ರಕಾರ ಅತಿ ದೊಡ್ಡ ಅಪರಾಧವೆನಿಸದ ಹೊರತು ಯಾರನ್ನು ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ” ಎಂದು ಅಪ್ಪುರವರು ಹೇಳಿದ್ದರು. ಆದರೂ ಕೆಲವು ಟ್ರೋಲ್‌ ಮಾಡುವವರು ಬ್ಯಾನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ಅದನ್ನು ಅಧಿಕೃತ ಎಂದು ಪ್ರಸಾರ ಮಾಡುವುದು ಮಾಧ್ಯಮಗಳ ಬೇಜವಬ್ದಾರಿತನವಾಗಿದೆ. ಯಾವುದಕ್ಕೆ ಮಹತ್ವ ಕೊಡಬೇಕು, ಯಾವುದಕ್ಕೆ ಕೊಡಬಾರದು ಎನ್ನುವ ಕನಿಷ್ಟ ತಿಳಿವಳಿಕೆ ಮಾಧ್ಯಮಗಳಿಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾನ್‌ ಅನ್ನುವ ಪದಕ್ಕೆ ಚಿತ್ರರಂಗದಲ್ಲಿ ಅವಕಾಶವೇ ಇಲ್ಲ- ಮಂಸೋರೆ

“ಬ್ಯಾನ್‌ ಅನ್ನುವ ಪದಕ್ಕೆ ಚಿತ್ರರಂಗದಲ್ಲಿ ಅವಕಾಶವೇ ಇಲ್ಲ. ರಶ್ಮಿಕಾ ಅವರು ವಾಣಿಜ್ಯ ಮಂಡಳಿಗೆ ಸಂಬಂಧಪಟ್ಟವರೂ ಅಲ್ಲ, ಕಲಾವಿದರ ಸಂಘದ ಸದಸ್ಯರೂ ಅಲ್ಲ. ವಾಣಿಜ್ಯ ಮಂಡಳಿಗೆ ಬ್ಯಾನ್ ಮಾಡಲು ಅಧಿಕಾರವಿಲ್ಲ. ಯಾವುದೇ ಹೆಣ್ಣುಮಗಳ ವೈಯಕ್ತಿಕ ವಿಚಾರಗಳನ್ನು ಮುಂದೆ ತಂದು ಅವಹೇಳನ ಮಾಡುವುದು ತಪ್ಪು” ಎನ್ನುತ್ತಾರೆ ಕನ್ನಡ ನಿರ್ದೇಶಕ ಮಂಸೋರೆಯವರು.

“ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದಲ್ಲಿ ಕೊಡುತ್ತಿರುವಷ್ಟು ಸಂಭಾವನೆಯನ್ನು ನಮ್ಮಲ್ಲಿ ನಟಿಯರಿಗೆ ಕೊಡುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ರಮ್ಯಾ ಅವರಷ್ಟು ಸಂಭಾವನೆ ಪಡೆದ ಮತ್ತೊಬ್ಬ ನಟಿ  ಸಿಗುವುದಿಲ್ಲ. ರಶ್ಮಿಕಾ ಅವರು ಈಗ ಬೇರೆ ಬೇರೆ ಚಿತ್ರರಂಗದಲ್ಲಿ ಒಂದು ಕೋಟಿ, ಎರಡು ಕೋಟಿಯಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇಷ್ಟು ಹಣವನ್ನು ಕೊಡಲು ಕನ್ನಡ ಚಿತ್ರರಂಗದವರು ಸಿದ್ಧವಿಲ್ಲ. ಇದು ವಾಸ್ತವ. ಎರಡು ವರ್ಷ ಬ್ಯುಸಿಯಾಗುವಷ್ಟು ಸಿನಿಮಾಗಳಿಗೆ ರಶ್ಮಿಕಾ ಈಗಾಗಲೇ ಸಹಿ ಹಾಕಿದ್ದಾರೆ” ಎಂದರು.

ನಿರ್ದೇಶಕ ಮಂಸೋರೆ

“ಬ್ಯಾನ್‌ ವಿಚಾರ ಮುನ್ನೆಲೆಗೆ ಬಂದಿರುವುದರಿಂದ ಕನ್ನಡ ಚಿತ್ರರಂಗ ರಶ್ಮಿಕಾ ಅವರನ್ನು ದೂರವಿಟ್ಟಿದೆ ಎಂಬ ಚರ್ಚೆಗಳೆಲ್ಲ ನಡೆಯುತ್ತಿರುವುದನ್ನು ನೋಡಿದೆ. ಅದ್ಯಾವುದಕ್ಕೂ ಆಧಾರವಿಲ್ಲ. ರಶ್ಮಿಕಾ ಅವರು ಕೇಳುವಷ್ಟು ಸಂಭಾವನೆಯನ್ನು ನೀಡಲು ಕನ್ನಡ ಚಿತ್ರರಂಗದವರು ಸಿದ್ಧವಿಲ್ಲ ಎಂಬುದಷ್ಟೆ ಸತ್ಯ” ಎಂದರು.

ಇತ್ತೀಚಿಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದ ರಶ್ಮಿಕಾ ತಾವು ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದುದರ ಬಗೆಗೆ ಮಾತನಾಡಿದ್ದರು. ಕಾಲೇಜು ಓದುತ್ತಿದ್ದಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದುದು, ತನ್ನ ಫೋಟೊ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟವಾಗಿದ್ದು, ಸಿನಿಮಾದಲ್ಲಿ ನಟನೆಗೆ ಆಫರ್ ಬಂದಿದ್ದನ್ನು ನಂಬಲಾಗಲಿಲ್ಲ ಎಂದೆಲ್ಲಾ ಮಾತನಾಡಿದ್ದ ಅವರು ಆ ಸಂದರ್ಭದಲ್ಲಿ ತನ್ನ ಮೊದಲ ಚಿತ್ರದ ಹೆಸರು ಹೇಳುವ ಬದಲಿಗೆ ಎರಡೂ ಕೈಗಳಿಂದ ಕೋಟ್‌ ರೀತಿಯ ಸನ್ನೆ ಮಾಡಿದ್ದರು.

ಅಷ್ಟಕ್ಕೆ ಹಲವರು ರಶ್ಮಿಕಾ ವಿರುದ್ಧ ಮುಗಿಬಿದ್ದಿದ್ದಾರೆ. ತನ್ನ ಮೊದಲ ಚಿತ್ರ ಕಿರಿಕ್ ಪಾರ್ಟಿ ಎಂದೂ ಅದರ ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ ಎಂದು ಪ್ರೊಡಕ್ಷನ್ ಹೌಸ್‌ ಅನ್ನು ರಶ್ಮಿಕಾ ಉಲ್ಲೇಖಿಸದೆ ಸನ್ನೆ ಮಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂಬುದು ಟ್ರೋಲಿಗರ ಆರೋಪವಾಗಿದೆ. ಅದಕ್ಕಾಗಿ ಕನ್ನಡ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣನವರನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯಿಸಿ ಪೋಸ್ಟರ್ ಮಾಡಿ ಹಂಚುತ್ತಿದ್ದಾರೆ. ಅದನ್ನೆ ಕನ್ನಡ ಮಾಧ್ಯಮಗಳು ಸಹ ಬ್ಯಾನ್ ಎಂದು ಸುದ್ದಿ ಮಾಡುತ್ತಿವೆ.

ಆದರೆ ರಶ್ಮಿಕಾ ಮಂದಣ್ಣ ಕೈ ಸನ್ನೆ ಮಾಡಿದ್ದಕ್ಕೆ ಮಾತ್ರವೇ ಅವರೆ ಮೇಲೆ ಟ್ರೋಲ್ ಗಳಾಗುತ್ತಿವೆ ಎಂಬುದು ಸುಳ್ಳು. ಬದಲಿಗೆ ಅವರು ಮಹಿಳೆ ಎಂಬ ಕಾರಣಕ್ಕೆ, ಅದರಲ್ಲಿಯೂ ಯಶಸ್ವಿ ನಟಿ ಎಂಬ ಕಾರಣಕ್ಕೆ ಅವರ ಮೇಲೆ ನಿರಂತರ ದಾಳಿ ನಡೆಯುತ್ತಿವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ; ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್ ಏಕೆ?: ಪ್ರಜ್ಞಾವಂತರ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...