Homeಕರ್ನಾಟಕಮೈಸೂರು ಜಿಲ್ಲೆ: 11ರಲ್ಲಿ 8 ಸ್ಥಾನ ಕಾಂಗ್ರೆಸ್ ಗೆದ್ದಿದ್ದು ಹೇಗೆ? ಕಾರಣಗಳೇನು?

ಮೈಸೂರು ಜಿಲ್ಲೆ: 11ರಲ್ಲಿ 8 ಸ್ಥಾನ ಕಾಂಗ್ರೆಸ್ ಗೆದ್ದಿದ್ದು ಹೇಗೆ? ಕಾರಣಗಳೇನು?

- Advertisement -
- Advertisement -

ಮೈಸೂರು ಜಿಲ್ಲೆಗೆ ರಾಜಕೀಯವಾಗಿ ಅದರದ್ದೇ ಆದ ಸ್ಥಾನವಿದೆ. ಜನತಾ ಪರಿವಾರ ಮತ್ತು ಡಿ.ದೇವರಾಜ ಅರಸು ಅವರ ಕಾಲದಿಂದಲೂ ಮೈಸೂರು ಜಿಲ್ಲೆಯು ರಾಜ್ಯ ರಾಜಕಾರಣದ ಮೇಲೆ ಪ್ರಭಾವಿಸುತ್ತಾ ಬಂದಿದೆ. ಕಾಂಗ್ರೆಸ್- ಜೆಡಿಎಸ್‌ನ ಪೈಪೋಟಿಯ ನೆಲವಾದ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 8ರಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

2018ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ (ಕೃಷ್ಣರಾಜ, ಚಾಮರಾಜ, ನಂಜನಗೂಡು), ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ (ನರಸಿಂಹರಾಜ, ವರುಣಾ, ಎಚ್‌.ಡಿ.ಕೋಟೆ), ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ (ಚಾಮುಂಡೇಶ್ವರಿ, ಹುಣಸೂರು, ನರಸೀಪುರ, ಪಿರಿಯಾಪಟ್ಟಣ, ಕೆ.ಆರ್‌.ನಗರ) ಗೆದ್ದಿದ್ದವು. ಆಪರೇಷನ್‌ ಕಮಲದ ಬಳಿಕ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಹುಣಸೂರು ಮರಳಿತ್ತು. ಆದರೀಗ ಬಿಜೆಪಿ ಒಂದು ಕ್ಷೇತ್ರದಲ್ಲಿ (ಕೃಷ್ಣರಾಜ), ಎರಡರಲ್ಲಿ ಜೆಡಿಎಸ್‌ (ಹುಣಸೂರು, ಚಾಮುಂಡೇಶ್ವರಿ) ಹೊರತುಪಡಿಸಿ ಉಳಿದೆಲ್ಲ ಕಡೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಈ ನಮೂನೆಯ ಬದಲಾವಣೆಯಲ್ಲಿ ಕಾರಣವಾದ ಅಂಶಗಳೇನು?

ವರುಣಾ ಕ್ಷೇತ್ರ

2008ರಲ್ಲಿ ವರುಣಾ ಕ್ಷೇತ್ರ ರಚನೆಯಾದ ಬಳಿಕ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯನ್ನು ತೊರೆದು ವರುಣಾಕ್ಕೆ ಬಂದರು. 2008 ಮತ್ತು 2013ರಲ್ಲಿ ಗೆಲುವು ಪಡೆದು ಮುಖ್ಯಮಂತ್ರಿಯೂ ಆದರು. 2018ರಲ್ಲಿ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ನಿಂತರು. ಚಾಮುಂಡೇಶ್ವರಿಯಲ್ಲಿ ಸೋತರೂ, ಬಾದಾಮಿ ಜನತೆ ಸಿದ್ದರಾಮಯ್ಯನವರನ್ನು ಕೈಹಿಡಿದರು. ಸಿದ್ದರಾಮಯ್ಯನವರು ಮತ್ತೆ ವರುಣಾಕ್ಕೆ ಬಂದು, ತಮ್ಮ ಮಗನ ಬದಲು ತಾವೇ ಸ್ಪರ್ಧಿಸಿದಾಗ ಬಿಜೆಪಿ ಮಾಡಿದ ತಂತ್ರಗಾರಿಕೆಗಳು ವಿಫಲವಾಗಿವೆ.

ಸಿದ್ದರಾಮಯ್ಯನವರನ್ನು ಕಟ್ಟಿಹಾಕಬೇಕೆಂದು ಹಠಕ್ಕೆ ಬಿದ್ದ ಬಿಜೆಪಿ, ವರುಣಾ ಕ್ಷೇತ್ರಕ್ಕೆ ಪ್ರಭಾವಿ ಲಿಂಗಾಯತ ನಾಯಕ ವಿ.ಸೋಮಣ್ಣನವರನ್ನು ಕರೆತಂದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದಿದ್ದ ಸೋಮಣ್ಣನವರನ್ನು ವರುಣಾ ಮತ್ತು ಚಾಮರಾಜನಗರಕ್ಕೆ ದೂಡಿದ್ದು ಬಿಜೆಪಿ ಮಾಡಿದ ಬಹುದೊಡ್ಡ ಪ್ರಮಾದವಾಯಿತು. ಲಿಂಗಾಯತರು ಹೆಚ್ಚಿದ್ದಾರೆಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಹೈಕಮಾಂಡ್‌, ಈಗಾಗಲೇ ಪಕ್ಷದೊಂದಿಗೆ ಮುನಿಸು ತೋರಿದ್ದ ಸೋಮಣ್ಣನವರಿಗೆ ಫನಿಷ್‌ಮೆಂಟ್ ಎಂಬಂತೆ ಸ್ವಕ್ಷೇತ್ರವನ್ನು ತಪ್ಪಿಸಿತು. ಆದರೆ ವರುಣಾ ಜನತೆ ಭಾವಿಸಿದ್ದೇ ಬೇರೆ.

ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ನೀಡಿದ ಯೋಜನೆಗಳು, ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮತದಾರರು ಪರಿಗಣನೆಗೆ ತೆಗೆದುಕೊಂಡರು. ಲಿಂಗಾಯತರ ಮತಗಳೆಲ್ಲ ಸಾಲಿಡ್ ಆಗಿ ಬರುತ್ತವೆ, ಉಳಿದ ಸಮುದಾಯಗಳನ್ನು ಒಡೆದರೆ ಬಿಜೆಪಿ ಗೆಲುವು ಸುಲಭವೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತು. ಆದರೆ ಇದೆಲ್ಲ ತಲೆಕೆಳಗಾಯಿತು. ಸೋಮಣ್ಣನವರು ಈ ಕ್ಷೇತ್ರಕ್ಕೆ ಹೊಸಬರು, ಯಾರೆಂಬುದೇ ಇಲ್ಲಿನ ಅನೇಕ ಮತದಾರರಿಗೆ ತಿಳಿದಿರಲಿಲ್ಲ. ಸಿದ್ದರಾಮಯ್ಯನವರನ್ನು ಸೋಲಿಸಲೆಂದೇ ಇಲ್ಲಿಗೆ ಸೋಮಣ್ಣನವರನ್ನು ಕರೆತಂದಿದ್ದು, ಇದು ಒಳ್ಳೆಯ ರಾಜಕಾರಣವಲ್ಲ ಎಂದು ಮತದಾರರು ಭಾವಿಸಿದರು. ಅಂತಿಮವಾಗಿ ಸಿದ್ದರಾಮಯ್ಯ 46,163 ಮತದಂತರದಲ್ಲಿ ಗೆದ್ದಿದ್ದಾರೆ. 2008ರ ಚುನಾವಣೆಯಲ್ಲಿ 18,837 ಮತಗಳ ಅಂತರದಲ್ಲಿ, 2013ರಲ್ಲಿ 29,641 ಮತದಂತರದಲ್ಲಿ ಗೆದ್ದದ್ದ ಅವರು, ಈ ಚುನಾವಣೆಯಲ್ಲಿ ಬೃಹತ್ ದಿಗ್ವಿಜಯ ಸಾಧಿಸಿದ್ದಾರೆ.

ನಂಜನಗೂಡು ಎಸ್‌ಸಿ ಮೀಸಲು ಕ್ಷೇತ್ರ

ಮೈಸೂರು ಭಾಗದ ಹಿರಿಯ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಅನ್ಯಾಯವಾಗಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ 2018ರ ಚುನಾವಣೆಯಲ್ಲಿ ನಂಜನಗೂಡು ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು. ಪ್ರಸಾದ್ ಅವರ ಅಳಿಯ, ಬಿ.ಬಸವಲಿಂಗಪ್ಪ ಅವರ ಮೊಮ್ಮಗ ಬಿ.ಹರ್ಷವರ್ಧನ್ ಅವರು ಗೆದ್ದಿದ್ದರು. ಆದರೆ ಐದೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಯಿತು. ಹರ್ಷವರ್ಧನ್ ಅವರ ವಿರುದ್ಧ ಬಿಜೆಪಿಯೊಳಗೆ ವಿರೋಧಗಳು ವ್ಯಕ್ತವಾದವು. ಗೆಲುವಿಗಾಗಿ ಶ್ರಮಿಸಿದ ಮುಖಂಡರನ್ನು ಹರ್ಷವರ್ಧನ್‌ ಕಡೆಗಣಿಸುತ್ತಿದ್ದಾರೆಂಬ ಬೇಗುದಿ ಪಕ್ಷದೊಳಗಿತ್ತು. ಇದೆಲ್ಲದ ನಡುವೆ ಕಾಂಗ್ರೆಸ್ಸಿನ ಹಿರಿಯ ನಾಯಕ ಆರ್‌.ಧ್ರುವನಾರಾಯಣ್ ಅವರ ಹಠಾತ್ ನಿರ್ಗಮನ ಕ್ಷೇತ್ರದ ಮೇಲೆ ಪರಿಣಾಮ ಬೀರಿತು. ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಂದೇ ಹೇಳಲಾಗುತ್ತಿತ್ತು. ಅವರು ತೀರಿಕೊಂಡ ಬಳಿಕ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿತು. ಅದರಂತೆಯೇ ಕಾಂಗ್ರೆಸ್ ನಡೆದುಕೊಂಡಿತು. ಹರ್ಷವರ್ಧನ್‌ ಅವಧಿಯ ಭ್ರಷ್ಟಾಚಾರ, ಅವರ ಬೆಂಬಲಿಗರ ದಬ್ಬಾಳಿಕೆ ಮತ್ತು ತಂದೆ, ತಾಯಿ ಇಬ್ಬರನ್ನೂ ಒಂದು ತಿಂಗಳ ಅವಧಿಯೊಳಗೆ ಕಳೆದುಕೊಂಡ ದರ್ಶನ್ ಅವರ ಮೇಲಿನ ಅನುಕಂಪ- ಈ ಫಲಿತಾಂಶವನ್ನು ನಿರ್ಧರಿಸಿತು. ಹೀಗಾಗಿ ಬಿಜೆಪಿ ಅಭ್ಯರ್ಥಿ ಹರ್ಷ ವಿರುದ್ಧ 47,607 ಮತಗಳ ಬೃಹತ್ ಅಂತರದಲ್ಲಿ ದರ್ಶನ್ ಗೆದ್ದರು.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಂಜನಗೂಡು: ಅನುಕಂಪದ ಅಲೆಯಲ್ಲಿ ದರ್ಶನ್ ಧ್ರುವ; ಆಂತರಿಕ ಬಿಕ್ಕಟ್ಟಿನಲ್ಲಿ ಹರ್ಷವರ್ಧನ್

ಚಾಮರಾಜ ಕ್ಷೇತ್ರ

ಮೈಸೂರು ನಗರದಲ್ಲಿನ ಚಾಮರಾಜ ವಿಧಾನಸಭಾ ಕ್ಷೇತ್ರವು ಮೊದಲಿನಿಂದಲೂ ಬಿಜೆಪಿಯ ಭದ್ರನೆಲೆ. ಶಂಕರಲಿಂಗೇಗೌಡರು ಇಲ್ಲಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ಇದರ ನಡುವೆ ಕಾಂಗ್ರೆಸ್‌ನ ವಾಸು ಗೆದ್ದು, ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದರು. ಆದರೆ ಇವರ ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ವಾಸು ಅವರಿಗೆ ಟಿಕೆಟ್ ಕೈತಪ್ಪಿತು. ಅದರ ಅನುಕೂಲವಾಗಿದ್ದು ಕೆ.ಹರೀಶ್ ಗೌಡ ಅವರಿಗೆ.

ಈ ಕ್ಷೇತ್ರದಲ್ಲಿ ಗೆದ್ದು ಬಂದವರೆಲ್ಲ ಬಹುತೇಕ ಒಕ್ಕಲಿಗ ಸಮುದಾಯದವರು. 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಎಲ್.ನಾಗೇಂದ್ರ ಅವರು ಮೂಲತಃ ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಮತ್ತು ಪಾಲಿಕೆ ಸದಸ್ಯರಾಗಿದ್ದವರು. ಆದರೆ ಶಾಸಕರಾದ ಬಳಿಕವೂ ಪಾಲಿಕೆ ಸದಸ್ಯರಂತೆಯೇ ವರ್ತಿಸುತ್ತಿದ್ದರು. ಪ್ರತಿಯೊಂದಕ್ಕೂ ಕಮಿಷನ್ ಪಡೆಯುತ್ತಾರೆ, ಅಧಿಕಾರಿಗಳೊಂದಿಗೆ ಅನಾಗರಿಕರಂತೆ ವರ್ತಿಸುತ್ತಾರೆಂಬ ಟೀಕೆಗಳು ನಾಗೇಂದ್ರ ವಿರುದ್ಧ ಬಂದವು. ಇದರ ಜೊತೆಗೆ ಹರೀಶ್‌ಗೌಡ ಅವರು ತಮ್ಮದೇ ಕಾರ್ಯಕರ್ತರ ಪಡೆಯನ್ನು ಕ್ಷೇತ್ರದಲ್ಲಿ ಹೊಂದಿದ್ದರು. ಮೂಲತಃ ಜೆಡಿಎಸ್‌ ಮುಖಂಡರಾಗಿದ್ದ ಹರೀಶ್‌ಗೌಡ, 2013ರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ 2018ರಲ್ಲಿ ಕೊಡುವುದಾಗಿ ನಂಬಿಸಿ ಆಗಲೂ ಜೆಡಿಎಸ್ ಟಿಕೆಟ್ ಕೈತಪ್ಪಿಸಲಾಯಿತು. ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಟಿಕೆಟ್ ನೀಡಲಾಯಿತು. ಬೇಸತ್ತ ಹರೀಶ್‌, ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 21,000 ಮತಗಳನ್ನು ಪಡೆದಿದ್ದರು. ಇಂತಹ ಹರೀಶ್‌ಗೌಡರು ಕಾಂಗ್ರೆಸ್ ಸೇರಿ ಟಿಕೆಟ್ ಪಡೆದಿದ್ದರು. ಅಂತಿಮವಾಗಿ ಬಿಜೆಪಿಯ ಸಾಂಪ್ರದಾಯಿಕ ಕ್ಷೇತ್ರದಲ್ಲಿ 4,094 ಮತಗಳ ಅಂತರದಲ್ಲಿ ಎಲ್.ನಾಗೇಂದ್ರ ಅವರನ್ನು ಹರೀಶ್ ಸೋಲಿಸಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಚಾಮರಾಜ: ಪುತ್ರರಿಬ್ಬರು ಬಿಜೆಪಿ ಸೇರಿದ್ದರಿಂದ ಪೇಚಿಗೆ ಸಿಲುಕಿದರೆ ವಾಸು?

ಕೃಷ್ಣರಾಜ ಕ್ಷೇತ್ರ

ಬ್ರಾಹ್ಮಣರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ ಕಾಂಗ್ರೆಸ್‌ಗೆ ವರದಾನವಾಗುತ್ತದೆ ಎಂಬ ಲೆಕ್ಕಾಚಾರಗಳಿವೆ. ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಆದರೆ ಅಂತಿಮವಾಗಿ ಅವರು ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಎಸ್.ಎ.ರಾಮದಾಸ್ ಮತ್ತು ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌ ಇಲ್ಲಿ ಪರಸ್ಪರ ಎದುರಾಳಿಗಳಾಗುತ್ತಾ ಬಂದಿದ್ದರು. ಸೋಮಶೇಖರ್‌ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ ಬ್ರಾಹ್ಮಣರ ಮತಗಳು ಒಂದೆಡೆ ಬಿದ್ದಿದ್ದರಿಂದ ಟಿ.ಎಸ್.ಶ್ರೀವತ್ಸ ಅವರು 7,213 ಮತದಂತರದಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೃಷ್ಣರಾಜ: ಬ್ರಾಹ್ಮಣರ ತಿಕ್ಕಾಟದಲ್ಲಿ ರಾಮದಾಸ್‌ಗೆ ಟಿಕೆಟ್ ಕೈತಪ್ಪುವುದೇ?

ಚಾಮುಂಡೇಶ್ವರಿ ಕ್ಷೇತ್ರ

ಸಿದ್ದರಾಮಯ್ಯನವರನ್ನು 2018ರಲ್ಲಿ ಸೋಲಿಸಿದ್ದ ಜಿ.ಟಿ.ದೇವೇಗೌಡರು ಮೂರನೇ ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಒಕ್ಕಲಿಗರ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ಒಕ್ಕಲಿಗ ಅಭ್ಯರ್ಥಿಯನ್ನೇ ಹಾಕಿತ್ತು. ಮೂರು ವರ್ಷ ಜೆಡಿಎಸ್‌ನೊಂದಿಗೆ ಇರದ ಜಿಟಿಡಿಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಸಿಡಿದೆದ್ದ ಮಾವಿನಹಳ್ಳಿ ಸಿದ್ದೇಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆದರೆ ಸಿದ್ದೇಗೌಡರು ಮೊದಲಿನಿಂದಲೂ ಜಿಟಿಡಿಯವರ ಶಿಷ್ಯ. ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ, “ಈ ಚುನಾವಣೆಯಲ್ಲಿ ಸಿದ್ದೇಗೌಡರು ಜಿಟಿಡಿ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ” ಎಂದು ಹೇಳಿಕೆ ನೀಡಿದರು. ಆದರೆ ಇದನ್ನು ಸಿದ್ದೇಗೌಡ ಮತ್ತು ಜಿಟಿಡಿ ಇಬ್ಬರೂ ಅಲ್ಲಗಳೆದರು. ಕ್ಷೇತ್ರದ ಮೇಲೆ ಜಿಟಿಡಿಯವರಿಗೆ ತಮ್ಮದೇ ಆದ ಹಿಡಿತವಿದೆ. ಹೀಗಾಗಿ 25,500 ಮತಗಳಿಂದ ಜಿ.ಟಿ.ಡಿ. ಗೆದ್ದಿದ್ದಾರೆ.

ಇದನ್ನೂ ಓದಿರಿ: ಚಾಮುಂಡೇಶ್ವರಿಯಲ್ಲಿ ಸಿದ್ದೇಗೌಡರಿಗೆ ಕಾಂಗ್ರೆಸ್‌ ಟಿಕೆಟ್; ಒಕ್ಕಲಿಗರ ಮತ ವಿಭಜನೆಯಾದರೆ ಜಿಟಿಡಿ ಗೆಲುವು ಕಷ್ಟವೇ?

ಟಿ.ನರಸೀಪುರ ಕ್ಷೇತ್ರ

2018ರಲ್ಲಿ ಟಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ನ ಎಂ.ಅಶ್ವಿನ್‌ ಕುಮಾರ್‌ ಸುಮಾರು 28,000 ಮತಗಳ ಅಂತರದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ಗೆದ್ದಿದ್ದರು. ಹೀಗಾಗಿಯೇ ಮಹದೇವಪ್ಪ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಆದರೆ ಧ್ರುವ ನಾರಾಯಣ ಅವರ ನಿಧನದ ಬಳಿಕ ಪರಿಸ್ಥಿತಿ ಬದಲಾಯಿತು. ಅಂತಿಮವಾಗಿ ನರಸೀಪುರಕ್ಕೆ ಬರಬೇಕಾಯಿತು. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್‌ ಅವರ ಕೆಲವೊಂದು ತಪ್ಪುಗಳಿಂದ ಕ್ಷೇತ್ರ ಕೈತಪ್ಪಿ ಹೋಗಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಮಹದೇವಪ್ಪ ಚೆನ್ನಾಗಿ ಸುತ್ತಾಡಿದರು. ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟರು. ಕಳೆದ ಚುನಾವಣೆಯಲ್ಲಿ ದಲಿತ ಮತಗಳೇ ಕೈತಪ್ಪಿ ಹೋಗಿದ್ದವು. ಶ್ರೀನಿವಾಸ್‌ ಪ್ರಸಾದ್ ಅವರಿಗೆ ಅನ್ಯಾಯವಾಗಲು ಮಹದೇವಪ್ಪ ಕೂಡ ಕಾರಣವೆಂಬ ನೋವು ದಲಿತರಲ್ಲಿತ್ತು. ಆದರೆ ಒಮ್ಮೆ ಸೋಲಿಸಿ ಪಾಠ ಕಲಿಸಿದ್ದ ಮತದಾರರು ಈ ಬಾರಿ ಮಹದೇವಪ್ಪನವರನ್ನು ಕೈ ಹಿಡಿದಿದ್ದರಿಂದ 18,619 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಟಿ.ನರಸೀಪುರ: ಹಳೆ ಹುಲಿ ಮಹದೇವಪ್ಪ ಮತ್ತೆ ಪುಟಿದೇಳುವರೇ?

ಪಿರಿಯಾಪಟ್ಟಣ ಕ್ಷೇತ್ರ

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪೈಪೋಟಿಯ ನೆಲ ಪಿರಿಯಾಪಟ್ಟಣ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ವೆಂಕಟೇಶ್‌ ಮತ್ತು ಜೆಡಿಎಸ್‌ನ ಕೆ.ಮಹದೇವ್‌ ಕಣದಲ್ಲಿದ್ದರು. ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್‌ ಸ್ಪರ್ಧಿಸಿದ್ದರು. ಸತತವಾಗಿ ಗೆಲ್ಲುತ್ತಾ ಬಂದಿದ್ದ ಕೆ.ವೆಂಕಟೇಶ್ ಅವರಿಗೆ ಕಳೆದ ಚುನಾವಣೆಯಲ್ಲಿ ಮತದಾರರು ಕೈಕೊಟ್ಟಿದ್ದರು. ಕೆ.ವೆಂಕಟೇಶ್‌ ಅವರ ಒಂದು ಕಾಲದ ಶಿಷ್ಯ ಕೆ.ಮಹದೇವ್‌ ಸತತವಾಗಿ ಸೋತಿದ್ದರು. ಈ ಅನುಕಂಪದ ಕಾರಣ 2018ರಲ್ಲಿ ಜೆಡಿಎಸ್‌ ಗೆದ್ದಿತ್ತು. ಆದರೆ ಕ್ಷೇತ್ರದಲ್ಲಿ ಸ್ವಜನ ಪಕ್ಷಪಾತ ಮಿತಿಮೀರಿತು. ತಾರತಮ್ಯವನ್ನು ಶಾಸಕರು ಎಸಗುತ್ತಿದ್ದಾರೆಂಬ ಅಭಿಪ್ರಾಯ ಬಲವಾಯಿತು. ಭ್ರಷ್ಟಾಚಾರ ಕೊಳೆ ಅಂಟಿಕೊಂಡಿತು. ಕೆ.ವೆಂಕಟೇಶ್ ಅವರು ಕೆಲಸ ಮಾಡದಿದ್ದರೂ ಜನರಿಗೆ ತೊಂದರೆ ಕೊಡುವವರಲ್ಲ ಎಂಬ ಅಭಿಪ್ರಾಯ ಮತದಾರರಲ್ಲಿ ಇತ್ತು. ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಸಜ್ಜನಿಕೆಯನ್ನು ಗುರುತಿಸಿ 19,675 ಮತಗಳ ಅಂತರದಲ್ಲಿ ವೆಂಕಟೇಶ್ ಅವರನ್ನು ಮತದಾರರು ಗೆಲ್ಲಿಸಿದ್ದಾರೆ.

ಇದನ್ನೂ ಓದಿರಿ: ಪಿರಿಯಾಪಟ್ಟಣ ಕ್ಷೇತ್ರ ಸಮೀಕ್ಷೆ: ಗುರು-ಶಿಷ್ಯರ ಕಾಳಗದಲ್ಲಿ ಗದ್ದುಗೆ ಯಾರಿಗೆ?

ಕೃಷ್ಣರಾಜನಗರ ಕ್ಷೇತ್ರ

2018ರಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಡಿ.ರವಿಶಂಕರ್‌ ಅವರಿಗೆ ಸಾರಾ ಮಹೇಶ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಸತತವಾಗಿ ಗೆಲ್ಲುತ್ತಾ ಬಂದಿದ್ದ ಸಾರಾ ಅವರೆದುರು ಕಾಂಗ್ರೆಸ್ ನೆಲಕಚ್ಚಿತ್ತು. ಆದರೆ ಕ್ಷೇತ್ರದಲ್ಲಿ ನಿರಂತರ ಸುತ್ತಾಟ ನಡೆಸಿದ ಡಿ.ರವಿಶಂಕರ್‌ ಮತದಾರರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಸೋಲು ಕಂಡಿದ್ದ ರವಿಯವರ ಪರ ಅನುಕಂಪವು ಇಲ್ಲಿ ಕೆಲಸ ಮಾಡಿದೆ. ಹೀಗಾಗಿ ಸಾರಾ ವಿರುದ್ಧ 25,639 ಮತದಂತರದಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿರಿ: ಕೆ.ಆರ್.ನಗರ ಕ್ಷೇತ್ರ ಸಮೀಕ್ಷೆ: ಅನುಕಂಪದಲ್ಲಿ `ರವಿ’ ಮೂಡುವರೇ? ಪ್ರಭಾವದಲ್ಲಿ `ಸಾರಾ’ ಗೆಲ್ಲುವರೇ?

ಹುಣಸೂರು ಕ್ಷೇತ್ರ

ಸಾಮಾಜಿಕ ನ್ಯಾಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಡಿ.ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು. ಯಾವುದೇ ಜಾತಿ ಬಲವಿಲ್ಲದ ಅರಸು ಅವರು ಇಲ್ಲಿ ಗೆದ್ದು ಬಂದಂತೆ ವೈಷ್ಣವ ಶೆಟ್ಟಿ ಸಮುದಾಯದ ಎಚ್‌.ಪಿ.ಮಂಜುನಾಥ್ ಅವರು ತಮ್ಮ ಸ್ವಜಾತಿಯ ಸಂಖ್ಯಾಬಲವಿಲ್ಲದಿದ್ದರೂ ಗೆದ್ದು ಬರುತ್ತಿದ್ದರು. ಆದರೆ ಇಲ್ಲಿ ಒಕ್ಕಲಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಜಿ.ಟಿ.ದೇವೇಗೌಡರ ಪುತ್ರ, ಜಿ.ಡಿ.ಹರೀಶ್‌ಗೌಡರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ಒಕ್ಕಲಿಗ ಮತಗಳು ಸಾಲಿಡ್ ಆಗಿ ಜೆಡಿಎಸ್‌ಗೆ ಹೋದವು. ಕೆಲವೊಂದು ಲೂಸ್ ಟಾಕ್‌ನಿಂದ ಹೆಸರು ಕೆಡಿಸಿಕೊಂಡಿದ್ದ ಎಚ್‌.ಪಿ.ಮಂಜುನಾಥ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ಮತದಾರರು ಪರಿಗಣನೆಗೆ ತೆಗೆದುಕೊಂಡರು. ಅಲ್ಲದೆ ಜಿ.ಡಿ.ಹರೀಶ್‌ಗೌಡ ಅವರು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಇವರ ತಂದೆ ಜಿ.ಟಿ.ದೇವೇಗೌಡರು ಮೊದಲಿನಿಂದಲೂ ಹುಣಸೂರು ಕೇಂದ್ರಿತ ರಾಜಕಾರಣ ಮಾಡಿದವರು. ಆದರೆ ‌ಎಚ್.ಪಿ.ಮಂಜುನಾಥ್‌ ಸುಲಭವಾಗಿ ಇಲ್ಲಿ ಸೋಲು ಒಪ್ಪಿಕೊಂಡಿಲ್ಲ. ಪ್ರಬಲ ಪೈಪೋಟಿಯನ್ನು ನೀಡಿದ್ದರಿಂದ ಕೇವಲ 2,412 ಮತಗಳ ಅಂತರದಲ್ಲಿ ಹರೀಶ್‌ಗೌಡ ಗೆದ್ದಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಣಸೂರು: ಅರಸು ಕರ್ಮಭೂಮಿಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ

ನರಸಿಂಹರಾಜ ಕ್ಷೇತ್ರ

ದಿವಂಗತ ಅಜೀಜ್‌ ಸೇಠ್‌ ಮತ್ತು ಅವರ ಪುತ್ರ ತನ್ವೀರ್‌ ಸೇಠ್‌ ಅವರ ಹಿಡಿತದಲ್ಲಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರವು ಈ ಬಾರಿಯೂ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ತನ್ವೀರ್‌ ಸೇಠ್‌ ಸತತವಾಗಿ ಸೋಲಿಲ್ಲದ ಸರದಾರರಾಗಿ ಹೊಮ್ಮಿದ್ದಾರೆ. ಎಸ್‌ಡಿಪಿಐ ಇಲ್ಲಿ ಪೈಪೋಟಿ ನೀಡುತ್ತಾ ಬಂದಿದೆ. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ತನ್ವೀರ್‌ ಸೌಮ್ಯ ರಾಜಕಾರಣಿ. ಕಾಂಗ್ರೆಸ್‌ ಅಲೆಯಲ್ಲಿ ಸುಲಭವಾಗಿ ತನ್ವೀರ್‌ ಗೆದ್ದಿದ್ದಾರೆ. ಎಸ್‌ಡಿಪಿಐ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಬಿಜೆಪಿ ಸಂದೇಶ್‌ ಸ್ವಾಮಿಯ ವಿರುದ್ಧ 31,120 ಮತದಂತರದಲ್ಲಿ ತನ್ವೀರ್‌ ದಿಗ್ವಿಜಯ ಸಾಧಿಸಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನರಸಿಂಹರಾಜ: ಸೋಲಿಲ್ಲದ ಸರದಾರ ತನ್ವೀರ್‌ಗೆ ಎಸ್‌ಡಿಪಿಐ ಸವಾಲು

ಎಚ್‌.ಡಿ.ಕೋಟೆ ಎಸ್‌ಟಿ ಮೀಸಲು ಕ್ಷೇತ್ರ

‌ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಖಾತೆ ತೆರೆದಿಲ್ಲ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಯ ಕೆ.ಎಂ.ಕೃಷ್ಣನಾಯಕ ಪೈಪೋಟಿ ನೀಡಬಹುದೆಂದು ನಿರ್ಲಕ್ಷಿಸಲಾಗಿತ್ತು. ಮೂಲತಃ ಜೆಡಿಎಸ್‌ನಲ್ಲಿದ್ದ ಕೃಷ್ಣ ಅವರು ಟಿಕೆಟ್ ಕೈತಪ್ಪಿದ ಬಳಿಕ ಬಿಜೆಪಿ ಸೇರಿಕೊಂಡಿದ್ದರು. ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದರು. ಆದರೆ 2018ರಲ್ಲಿ ಗೆದ್ದು ಈ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅನಿಲ್ ಚಿಕ್ಕಮಾದು ಅವರು ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಧ್ರುವನಾರಾಯಣ ಅವರು ಬದುಕಿದ್ದ ಕಾಲದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಗೊಂಡಿತ್ತು. ಆಡಳಿತ ವಿರೋಧಿ ಅಲೆಯಲ್ಲಿ ಅನಿಲ್‌ 34,939 ಮತದಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿರಿ: ಎಚ್‌.ಡಿ.ಕೋಟೆ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಖಾತೆ ತೆರೆಯುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...